*ಪ್ರವಾಸ ಕಥನ – ಕೆಮ್ಮಣ್ಣುಗುಂಡಿ*
ನಾನು ಕೆಮ್ಮಣ್ಣುಗುಂಡಿಗೆ ಹೋಗುತ್ತಿದ್ದೇನೆ ಎಂದು ತಿಳಿದವರಲ್ಲಿ ಹೇಳಿದ ತಕ್ಷಣ ವಿಧವಿಧವಾದ ಪ್ರಶ್ನೆಗಳು.
ನೀನು ಅಲ್ಲಿಗೆ ಹೋಗಿ ಏನು ಮಾಡುತ್ತೀಯಾ?
ಜೊತೆಗೆ ಯಾರನ್ನ ಕರೆದುಕೊಂಡು ಹೋಗುತ್ತಿದ್ದೀಯಾ?
ಪರವಾಗಿಲ್ಲ, ಕಡೆಗೂ ದಾರಿಗೆ ಬಂದೆ!!!
ಅಬ್ಬಬ್ಬಾ, ಯಾಕೆ ಹೀಗೆ ಹೇಳುತ್ತಿದ್ದಾರೆ ಎಂದು ನನಗೆ ಅರ್ಥವಾಗಿದ್ದು ನಮ್ಮ ಛಾಯಾಗ್ರಾಹಕ ಗೆಳೆಯರನ್ನು ವಿಚಾರಿಸಿದಾಗಲೇ. ಹಿಂದೆ ಕೆಮ್ಮಣ್ಣುಗುಂಡಿ ಎಂದರೆ ಅದು ನವದಂಪತಿಗಳಷ್ಟೇ ಮಧುಚಂದ್ರಕ್ಕೆ ಹೋಗುವ ತಾಣ ಎಂಬುದಿತ್ತು, ಆದರೆ ಈಗ ಪೂರ್ವ ವಿವಾಹ ಮದುವೆ ಛಾಯಾಗ್ರಹಣ (ಪ್ರೀ ವೆಡ್ಡಿಂಗ್ ಶೂಟಿಂಗ್), ಪಕ್ಷಿ ಛಾಯಾಗ್ರಹಣ ಹಾಗೂ ಹಾಗೇ ಸುಮ್ಮನೆ ಒಂದೆರೆಡು ದಿನ ಕಾಲ ಕಳೆಯಲು ಮನೆಯವರೆಲ್ಲಾ ಹೋಗಿಬರಬಹುದಾದ ತಾಣವಾಗಿದೆ.
ಅದೇನೇ ಇರಲಿ ಬಿಡಿ, ಪಕ್ಷಿ ಛಾಯಾಗ್ರಹಣಕ್ಕೆ ಈ ಸಲ ಕೆಮ್ಮಣ್ಣುಗುಂಡಿಗೆ ಹೋದ ನಾವು ನಾಲ್ಕೂ ಮಂದಿ ಬ್ರಹ್ಮಚಾರಿಗಳೇ. ಇತ್ತೀಚೆಗೆ ಯಾರೋ ಅಲ್ಲಿಗೆ ಹೋಗಿದ್ದಾಗ ಅಂತರ್ಜಾಲದಲ್ಲಿ ಹಾಕಿದ್ದ ಪಕ್ಷಿಗಳ ವಿವರ ನೋಡಿ ನಾವೂ ಒಮ್ಮೆ ಹೋಗಿ ಬರೋಣ ಎಂದು ಅಂದುಕೊಂಡಿದ್ದಷ್ಟೇ, ಒಂದೇ ವಾರದಲ್ಲಿ ಪ್ರವಾಸ ಮಾಡಿ ಮುಗಿಸಿದ್ದೆವು. ನೀವೇನೆಂದುಕೊಂಡಿರಿ ಗೊತ್ತು, "ಬ್ರಹ್ಮಚಾರಿಗಳಲ್ಲವೇ, ನಿಮಗೇನು ಹೇಳೋರಿಲ್ಲ, ಕೇಳೋರಿಲ್ಲ, ಯಾವಾಗ ಎಲ್ಲಿ ಬೇಕಾದರು ಹೋಗಬಹುದು ಅಂತಲ್ಲವೇ", ನಿಮ್ಮ ಅನಿಸಿಕೆ ಸ್ವಲ್ಪಮಟ್ಟಿಗೆ ಸರಿಯಾಗಿಯೇ ಇದೆ.
ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಒಂದು ಗಿರಿಧಾಮ. ಸಮುದ್ರ ಮಟ್ಟದಿಂದ 1434 ಮೀ ಎತ್ತರದಲ್ಲಿರುವ ಈ ಊರು, ಬೆಂಗಳೂರಿನಿಂದ ಸುಮಾರು 250 ಕಿ.ಮೀ ದೂರದಲ್ಲಿದೆ.. ಇದು ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಬೇಸಿಗೆ ತಾಣವಾಗಿದ್ದರಿಂದ ಇದನ್ನು "ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ" ಎಂದೂ ಕರೆಯುತ್ತಾರೆ. ಇಲ್ಲಿನ ಸುಂದರ ಉದ್ಯಾನಗಳು, ಹಸಿರು ಪ್ರಕೃತಿ, ನೀರಿನ ಅಬ್ಬಿಗಳು ಮತ್ತು ಪಶ್ಚಿಮ ಘಟ್ಟಗಳ ಮನೋಹರವಾದ ಪರ್ವತಗಳು ಈ ಸ್ಥಳವನ್ನು ಆಕರ್ಷಣೀಯವಾಗಿ ಮಾಡಿವೆ. ಪರ್ವತಾರೋಹಣ ಮೊದಲಾದ ಚಟುವಟಿಕೆಗಳಿಗೆ ಕೆಮ್ಮಣ್ಣುಗುಂಡಿಯ ಸುತ್ತಮುತ್ತಲಿನ ಗಿರಿಬೆಟ್ಟಗಳಲ್ಲಿ ಅವಕಾಶವಿದೆ.
ಬೆಂಗಳೂರಿನಿಂದ ಬೆಳಿಗ್ಗೆ 6 ಗಂಟೆಗೆ ಹೊರಟು ಕೆಮ್ಮಣ್ಣುಗುಂಡಿ ತಲುಪುವಷ್ಟರಲ್ಲಿ ಸುಮಾರು ಮಧ್ಯಾಹ್ನ 12 ಗಂಟೆ. ಬೆಂಗಳೂರಿನಿಂದ ಹೊಸದುರ್ಗದ ವರೆಗೆ ದಾರಿ ಚೆನ್ನಾಗಿತ್ತು, ಆಮೇಲೆ ಸುಮಾರು 20 ಕಿಲೋಮೀಟರ್ ರಸ್ತೆ ಬೆಂಗಳೂರಿನ ರಸ್ತೆ ಗುಂಡಿಗಳನ್ನು ನಾಚಿಸುವಂತಿತ್ತು.. ಶೇಕಡ 10ರಷ್ಟು ಮಾತ್ರ ರಸ್ತೆ ಕಂಡದ್ದು, ಮಿಕ್ಕೆಲ್ಲವೂ ಗುಂಡಿಗಳೇ.
ಕೆಮ್ಮಣ್ಣುಗುಂಡಿಯಲ್ಲಿ ಹಿಂದೆ ತೋಟಗಾರಿಕೆ ಇಲಾಖೆಯವರು ನೋಡಿಕೊಳ್ಳುತ್ತಿದ್ದ ಅತಿಥಿಗೃಹ ಈಗ ಜಂಗಲ್ ಲಾಡ್ಜಸ್ ಸಂಸ್ಥೆಯ ಪಾಲಾಗಿದೆ. ನವೀಕರಣಗೊಂಡ ಕೋಣೆಗಳು ಹಾಗೂ ಇಲ್ಲಿನ ಅದ್ಬುತವಾಗಿ ಮಾರ್ಪಟ್ಟಿರುವ ಒಳಾಂಗಣ ಭೂದೃಷ್ಯ (landscape), ಹಿಂದೆ ಕೆಮ್ಮಣ್ಣುಗುಂಡಿಗೆ ಬಂದಿದ್ದವರಿಗೆ "ಇದು ನಾವು ನೋಡಿದ ಕೆಮ್ಮಣ್ಣುಗುಂಡಿಯೇ" ಎಂದು ಬೆರಗಾಗಿಸಿದರೆ ಆಶ್ಚರ್ಯವೇನಿಲ್ಲ. ನಾವು ಕಛೇರಿಯ ಒಳಗೆ ಹೋದ ತಕ್ಷಣ ನಮಗೆ ಅಲ್ಲಿದ್ದ ಸಿಬ್ಬಂದಿ ಹೇಳಿದ್ದು "ಇಲ್ಲಿ ಹೆಚ್ಚು ಯಾರೂ ಪಕ್ಷಿ ಛಾಯಾಗ್ರಹಣಕ್ಕೆ ಬರುವುದಿಲ್ಲ, ಕಾರಣ ಇಲ್ಲೇನು ಅಷ್ಟು ಪಕ್ಷಿಗಳು ಸಿಗುವುದಿಲ್ಲ" ಎಂದು. ತೊಂದರೆ ಇಲ್ಲ ಸಿಕ್ಕಷ್ಟೇ ಲಾಭ ಎಂದುಕೊಂಡೆವು. ಮುಂಚೆಯೇ ಆನಲೈನ್ ಮೂಲಕ್ ಕೋಣೆ ಕಾಯ್ದಿರಿಸಿದ್ದರಿಂದ ತುಂಗಭದ್ರಾ ಎಂಬುವ ಕಟ್ಟಡದಲ್ಲಿ ಎರಡು ಕೋಣೆ ನಮಗೆ ಸಿಕ್ಕಿತು. ಒಂದು ದಿನಕ್ಕೆ ಒಂದು ಕೋಣೆಗೆ 2000 ರೂಪಾಯಿಗಳು. ಮಧ್ಯಾಹ್ನ ಒಂದು ಗಂಟೆಗೆ ಬಂದು ಮಾರನೆ ದಿನ ಬೆಳಿಗ್ಗೆ 10.30ಕ್ಕೆ ಕೋಣೆ ಖಾಲಿಮಾಡಬೇಕಾಗುತ್ತದೆ.
ಕರ್ನಾಟಕದ ಬೇರೆಲ್ಲಾ ಜಂಗಲ್ ಲಾಡ್ಜಸ್‌ನಲ್ಲಿ ನಾವು ಒಂದು ದಿನಕ್ಕೆ ನೀಡಿದ ಕೋಣೆಯ ಕಿರಾಯದಲ್ಲೇ ಊಟದ ಖರ್ಚು ಸೇರಿರುತ್ತದೆ, ಆದರೆ ಇಲ್ಲಿ ಊಟ ನಾವೇ ಪ್ರತ್ಯೇಕವಾಗಿ ಕೊಂಡುಕೊಳ್ಳಬೇಕು. ಸುಸಜ್ಜಿತ ಹೋಟಲ್ ಅತಿಥಿಗೃಹದ ಆವರಣದಲ್ಲೇ ಇದ್ದು ಬೆಳಗಿನ ಹೊತ್ತು ಕೇವಲ ಸಸ್ಯಾಹಾರಿ ಹಾಗೂ ರಾತ್ರಿ ಊಟಕ್ಕೆ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ಸಿಗುತ್ತದೆ. ಮೊದಲು ಕೋಣೆಗೆ ಹೋಗಿ ನಮ್ಮೆಲ್ಲಾ ಬ್ಯಾಗುಗಳನ್ನು ಅಲ್ಲಿಟ್ಟು ಹೋಟಲ್ಗೆ ಹೋಗಿ ದಕ್ಷಿಣ ಭಾರತದ ತಟ್ಟೆ ಊಟ (plate meals) ತೆಗೆದುಕೊಂಡೆವು. ಹೋಟಲ್ಲಿನಲ್ಲಿ ಊಟವಷ್ಟೇ ಸಿಗುವುದು. ಊಟದ ನಂತರ ಸ್ವಲ್ಪ ಸಮಯ ಕೋಣೆಯಲ್ಲಿ ವಿಶ್ರಾಂತಿ ಪಡೆದು ಸಂಜೆ 4ಕ್ಕೆ ಹೆಬ್ಬೆ ಜಲಪಾತ ನೋಡಲು ಹೊರಟೆವು.
ಇಲ್ಲಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿ ಹೆಬ್ಬೆ ಜಲಪಾತ. ಇದಕ್ಕೆ ಇಲ್ಲಿ ಜೀಪ್ ಸಿಗುತ್ತದೆ. ಜೀಪಿನಲ್ಲಿ ಹೋಗಿಬರಲು ಒಬ್ಬರಿಗೆ 590 ರೂಪಾಯಿಗಳು ಆಗುತ್ತದೆ ಮತ್ತು ಒಂದು ಜೀಪಿನಲ್ಲಿ 10 ಜನರನ್ನು ತುಂಬಲಾಗುತ್ತದೆ. ಕನಿಷ್ಠ 8 ಜನ ಇದ್ದರೆ ಮಾತ್ರ ಜೀಪ್ ವ್ಯವಸ್ಥೆ, ಇಲ್ಲವಾದರೆ ಅಲ್ಲಿಂದ ಸುಮಾರು 1 ಕಿಲೋಮೀಟರ್ ರೆಸಾರ್ಟಿನಿಂದ ಹೊರಗೆ ನಡೆದುಬಂದರೆ ಖಾಸಗಿಯವರ ಜೀಪ್ ಸಿಗುತ್ತದೆ, ಅಲ್ಲೂ ಅದೇ ಬೆಲೆ, ಆದರೆ ಜೀಪುಗಳ ಕೂರಲು ಜಂಗಲ್ ಲಾಡ್ಜಸ್‌ನವರ ಜೀಪಿನಷ್ಟು ಆರಾಮವಾಗಿರುವುದಿಲ್ಲ. 8 ಜನ ಕೂರಬಲ್ಲ ಈ ಜೀಪಿನಲ್ಲಿ ಸುಮಾರು 13ರಿಂದ 14 ಜನರನ್ನು ತುಂಬುತ್ತಾರೆ. ಇನ್ನು ಅಲ್ಲಿಗೆ ಹೋಗುವ ರಸ್ತೆ ನಡೆದು ಹೋಗಲು ಕೂಡ ಸಾಧ್ಯವಾಗದ ಕೆಟ್ಟ ಅವಸ್ಥೆಯಲ್ಲಿದೆ. ನಾವು ನಾಲ್ಕೇ ಜನ ಇದ್ದದ್ದರಿಂದ 4500 ರೂಪಾಯಿಗಳನ್ನು ನೀಡಿ ಪೂರ್ತಿ ಜೀಪ್ ನಮಗೇ ಕಾಯ್ದಿರಿಸಿದೆವು. ಹೀಗೆ ಮಾಡುವುದರಿಂದ ದಾರಿ ಮಧ್ಯದಲ್ಲಿ ಪಕ್ಷಿ ಛಾಯಾಗ್ರಹಣ ಮಾಡಿಕೊಳ್ಳಲೂ ಅವಕಾಶವಿರುತ್ತದೆ.
ದಾರಿ ಮಧ್ಯದಲ್ಲಿ ಪಕ್ಷಿ ಛಾಯಾಗ್ರಹಣ ಸ್ವಲ್ಪ ಕಡಿಮೆಯಾದರೂ, ಸುತ್ತ ಮುತ್ತಲಿನ ಪರಿಸರ, ಗಿರಿ ಕಣಿವೆಗಳ ಸಾಲು ಸಾಲು, ಪ್ರಕೃತಿ ಛಾಯಗ್ರಹಣಕ್ಕೆ ಹೇಳಿಮಾಡಿಸಿದಂತಿತ್ತು. ಹೆಬ್ಬೆ ಜಲಪಾತಕ್ಕೆ ಸುಮಾರು 1 ಕಿಲೋಮೀಟರ್ ದೂರದಲ್ಲೇ ಜೀಪ್ ನಿಲ್ಲುತ್ತದೆ, ಅಲ್ಲಿಂದ ಕಾಲು ನಡಿಗೆಯಲ್ಲಿ ಹೋಗಬೇಕು. ನಡೆಯುವ ಕಾಲುದಾರಿ ಸಮತಟ್ಟಾಗಿದ್ದು ಚೆನ್ನಾಗಿತ್ತು. ಹತ್ತಿ ಇಳಿಯುವುದೇನು ಇರಲಿಲ್ಲ. ಹೆಬ್ಬೆ ಜಲಪಾತ ನೋಡಿದ ತಕ್ಷಣ ನಮ್ಮ ಬೆಳಗಿನಿಂದ ಪ್ರಯಾಣ ಮಾಡಿದ ಸುಸ್ತು ಎಲ್ಲವೂ ಮಾಯವಾಗಿತ್ತು. ಇಲ್ಲಿ ನೀರು 168 ಮೀ ಎತ್ತರದಿಂದ ಎರಡು ಹಂತಗಳಲ್ಲಿ (ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ) ಬೀಳುತ್ತದೆ.
ಜಲಪಾತದಿಂದ ಸುಮಾರು 30 ಅಡಿ ದೂರದಲ್ಲಿ ನಾವು ನಿಂತರೂ ಸಾಕು ಅದರ ರಭಸಕ್ಕೆ ಹಾರುವ ನೀರಿನ ಹನಿಗಳು ನಮ್ಮನ್ನು ತೊಪ್ಪೆಮಾಡುತ್ತದೆ. ಕ್ಯಾಮೆರಾ ಮೇಲೆ ನೀರು ಬೀಳಬಾರದು ಹಾಗಾಗಿ ಇಲ್ಲಿ ಎಲ್ಲಾ ಫೋಟೋಗಳು ಕೇವಲ ಮೊಬೈಲಿನಿಂದ ಮಾತ್ರ ಕ್ಲಿಕ್ಕಿಸಿದೆವು. ನೀರು ಹಿಮದಂತೆ ತಣ್ಣಗಿದ್ದಿದ್ದರಿಂದ ನೀರಿಗಿಳಿಯುವ ಸಾಹಸ ನಾವು ಯಾರೂ ಮಾಡಲಿಲ್ಲ.
ಅಲ್ಲಿಂದ ವಾಪಸ್ ಆಗಿ, ರಾತ್ರಿ ಊಟ ಮುಗಿಸಿ ಮಲಗಿದರೆ ಎಚ್ಚರವಾಗಿದ್ದು ಬೆಳಿಗ್ಗೆ ಅಲ್ಲಿನ ಸಿಬ್ಬಂದಿ ಬಾಗಿಲು ಬಡಿದಾಗ. ಇಲ್ಲಿ ತಂಗುವವರಿಗೆ ದಿನಾ ಬೆಳಿಗ್ಗೆ ಉಚಿತವಾಗಿ ಜೆಡ್ ಪಾಯಿಂಟ್ ಎಂಬ ಜಾಗಕ್ಕೆ ಚಾರಣಕ್ಕೆ ಕರೆದುಕೊಂಡು ಹೋಗುತ್ತಾರೆ. ಜೆಡ್ ಪಾಯಿಂಟ್‌ಗೆ ಹೋಗಲು ತಯಾರಾಗಿದ್ದ ಜನರು ಸುಮಾರು 35ರಿಂದ 40. ಆದರೆ ಮಾರ್ಗ ಮಧ್ಯದಲ್ಲೇ ಸಾಕಪ್ಪ ಸಾಕು ಈ ಚಾರಣ ಎಂದು ವಾಪಸ್ ಹೋದವರು ಸುಮಾರು 30 ಮಂದಿ. ಶಿಖರದ ತುದಿಗೆ ತಲುಪಿದವರು ಸುಮಾರು 10 ಜನ ಮಾತ್ರ. ಮಾರ್ಗ ಮಧ್ಯದಲ್ಲಿ ಸಿಕ್ಕ ಶಾಂತಿ ಜಲಪಾತ ಪ್ರಕೃತಿಯ ಮಡಿಲಲ್ಲಿ ಕುಳಿತು ಧ್ಯಾನಿಸಲು ಸೂಕ್ತವಾದ ಜಾಗ. ಇಲ್ಲಿ 10 ನಿಮಿಷ ಕುಳಿತು ನಂತರ ಜೆಡ್ ಪಾಯಿಂಟ್ ತಲುಪಿದೆವು. ಜೆಡ್ ಪಾಯಿಂಟ್ನಿಂದ ಸುತ್ತಲೂ ಕಿಲೋಮೀಟರ್‌ಗಳಷ್ಟು ದೂರದವರೆಗೆ ನಾವು ಗಿರಿಕಣಿವೆಗಳನ್ನು ನೋಡಲು ಸಾಧ್ಯ. ಆದರೆ ನಮ್ಮ ಅದೃಷ್ಟ ಕೈಕೊಟ್ಟಿತ್ತು. ಅಂದು ಜೆಡ್ ಪಾಯಿಂಟ್ ನಲ್ಲಿ ಪೂರ್ತಿ ಮೋಡ ಬಂದಿದ್ದು, ನಮ್ಮಿಂದ 10 ಅಡಿ ದೂರದಲ್ಲಿದ್ದ ನಮ್ಮ ಗೆಳೆಯರೇ ನಮಗೆ ಕಾಣುತ್ತಿರಲಿಲ್ಲ. ಆದರೂ ಬೆಟ್ಟ ಗುಡ್ಡ ಕಣಿವೆಗಳಲ್ಲಿ ಹತ್ತಿಳಿದು ಮಾಡಿದ 1 ಗಂಟೆಯ ಚಾರಣ ಅವಿಸ್ಮರಣೀಯ.
9 ಗಂಟೆಗೆ ವಾಪಸ್ ಬಂದು, ನೇರ ಹೋಟಲ್‌ಗೆ ಹೋಗಿ ತಿಂಡಿ ತಿಂದು ಕೋಣೆಗೆ ಬಂದು ಸ್ನಾನಾದಿಗಳನ್ನು ಮುಗಿಸಿ 11 ಗಂಟೆಗೆ ಕೋಣೆ ಖಾಲಿಮಾಡಿದೆವು. ಮತ್ತೇ ನಾವೇ ಶಾಂತಿಜಲಪಾತದವರೆಗೂ ನಡೆದುಹೋಗಿ ಸುಮಾರು 1 ಗಂಟೆಗಳ ಪಕ್ಷಿವೀಕ್ಷಣೆ ಹಾಗೂ ಛಾಯಾಗ್ರಹಣ ಮಾಡಿದೆವು. ಈ 1 ಗಂಟೆಯಲ್ಲಿ ನಾವು ನೋಡಿದ್ದು ಸುಮಾರು 30 ಜಾತಿಯ ಪಕ್ಷಿಗಳು. ವಾಪಸ್ ಬಂದು ರೆಸಾರ್ಟಿನ ಕಛೇರಿ ಸಿಬ್ಬಂದಿಗೆ ನಾವು ಕ್ಲಿಕ್ಕಿಸಿದ ಫೋಟೋಗಳನ್ನು ತೋರಿಸಿದಾಗ ಅವರಿಗೇ ಆಶ್ಚರ್ಯ, ಇಷ್ಟೋಂದು ಪಕ್ಷಿಗಳು ಇಲ್ಲಿ ಇರುವುದು ನಮಗೆ ಗೊತ್ತೇ ಇರಲಿಲ್ಲ, ದಯವಿಟ್ಟು ಎಲ್ಲರೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡು ಈ ರೆಸಾರ್ಟಿಗೆ ಇನ್ನೂ ಹೆಚ್ಚು ಜನ ಬರುವಂತ ಮಾಡಿ ಎಂದು ಅವರು ಹೇಳಿದರು.
ಕೆಮ್ಮಣ್ಣುಗುಂಡಿಯಲ್ಲಿ ನಾವು ನೋಡಲು ಸಾದ್ಯವಾಗದ ಪ್ರೇಕ್ಷಣೀಯ ಸ್ಥಳಗಳವೆಂದರೆ "ರಾಜ ಭವನ". ರಾಜ ಭವನ ಕೆಮ್ಮಣ್ಣುಗುಂಡಿಯಲ್ಲಿರುವ ಒಂದು ಅತಿಥಿ ಗೃಹ. ಸುತ್ತಲ ಪರ್ವತಗಳ ಮತ್ತು ಸೂರ್ಯಾಸ್ತದ ದೃಶ್ಯಗಳು ಇಲ್ಲಿಂದ ಬಹಳ ಚೆನ್ನಾಗಿ ಕಾಣುತ್ತವೆ. ಇಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಬೆಳೆಸಿದ ಹೂವಿನ ಉದ್ಯಾನಗಳೂ ಇವೆ.
ಕೆಮ್ಮಣ್ಣುಗುಂಡಿಯಿಂದ ಮಧ್ಯಾಹ್ನ 12 ಗಂಟೆಗೆ ಹೊರಟು ಸುಮಾರು 140 ಕಿಲೋಮೀಟರ್ ದೂರದಲ್ಲಿರುವ ಭದ್ರಾ ಅರಣ್ಯಕ್ಕೆ ಬಂದು ಸಂಜೆಯ ಕಾಡಿನ ಸಫಾರಿ ಮುಗಿಸಿ ಬೆಂಗಳೂರು ತಲುಪಿದಾಗ ರಾತ್ರಿ 1 ಗಂಟೆ.
ಪಕ್ಷಿ ಛಾಯಾಗ್ರಹಣವಷ್ಟೇ ಅಲ್ಲ, ಪ್ರಕೃತಿ ಪ್ರಿಯರಿಗೂ ಇಷ್ಟವಾಗುವ ಈ ಕೆಮಣ್ಣುಗುಂಡಿಗೆ ನೀವೂ ಹೋಗಲು ಈ ನನ್ನ ಲೇಖನ ಪ್ರೇರಣೆ ನೀಡುತ್ತದೆ ಎಂಬ ಭರವಸೆಯೊಂದಿಗೆ ಲೇಖನ ಮುಗಿಸುತ್ತಿದ್ದೇನೆ.