ಗುರುರಾಜ
ಶಾಸ್ತ್ರಿ
ಚೋಪ್ಟಾ ಹಾಗೂ ಸಾತ್‌ತಾಲ್‌ ಪ್ರವಾಸ
02-06-2022
ಭಾಗ 1 ನಾನು ಶಿವ ಭಕ್ತ ಎಂದೊಡನೆ ನೀವು ಕೈಲಾಸ ಪರ್ವತಕ್ಕೆ ಹೋಗಿದ್ದೀರಾ, ಇಲ್ಲವಾದರೆ ಹೋಗಿ ಬನ್ನಿ ಎನ್ನುವುದು ಸಹಜ. ಹಾಗೆಯೇ ನಾನು ಪಕ್ಷಿ ಛಾಯಾಗ್ರಾಹಕ ಎಂದೊಡನೆ, ನೀವು ಚೋಪ್ಟಾ ಮತ್ತು ಸಾತ್‌ತಾಲ್‌ಗೆ ಹೋಗಿದ್ದೀರಾ ಇಲ್ಲವಾದರೆ ಹೋಗಿ ಬನ್ನಿ ಎನ್ನುವುದೂ ಸಹಜ. ಅದು ನವೆಂಬರ್‌ 2019, ನಮ್ಮ ಪಕ್ಷಿ ವೀಕ್ಷಣಾ ಗುಂಪಿನ ಸದಸ್ಯರು ಸಭೆ ಸೇರಿ ಉತ್ತರಾಖಾಂಡ್‌ ರಾಜ್ಯದಲ್ಲಿರುವ ಚೋಪ್ಟಾ ಮತ್ತು ಸಾತ್‌ತಾಲ್‌ ಪ್ರವಾಸ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದೆವು. ಆದರೆ ಈ ಜಾಗಗಳಲ್ಲಿ ಹೆಚ್ಚು ಪಕ್ಷಿಗಳು ವೀಕ್ಷಣೆಗೆ ಸಿಗುವುದು ಪ್ರತಿ ವರ್ಷ ಫೆಬ್ರವರಿಯಿಂದ ಏಪ್ರಿಲ್‌ ಎರಡನೇ ವಾರದ ವರೆಗೆ. ಹಾಗಾಗಿ ಏಪ್ರಿಲ್‌ 2020ಕ್ಕೆ ಪ್ರವಾಸ ಮಾಡುವುದಾಗಿ ನಿರ್ಧರಿಸಿದೆವು. ಯಾವುದೇ ಊರಿನಲ್ಲಿ ಪಕ್ಷಿ ವೀಕ್ಷಣೆ ಮಾಡುವುದಾದರೆ ಅಲ್ಲಿನ ಸ್ಥಳೀಯ ಗೈಡ್‌ ಸಹಾಯ ಪಡೆಯದಿದ್ದರೆ ಪ್ರವಾಸ ವ್ಯರ್ಥವಾಗುತ್ತದೆ. ಕೆಲವಂ ಬಲ್ಲವರಿಂದ ಮತ್ತೆ ಕೆಲವನ್ನು ಅಂತರ್ಜಾಲದಲ್ಲಿ ಹುಡುಕಾಡಿ ಕಡೆಗೆ ಸಾಕಷ್ಟು ಹೊಗಳಿಕೆಯನ್ನು ಪಡೆದುಕೊಂಡಿದ್ದ ರಾಹುಲ್‌ ಎಂಬ ಗೈಡನ್ನು ಬುಕ್‌ ಮಾಡಿ ಮತ್ತು ಅವರಿಗೆ ಬಿಡುವಿರುವ ದಿನಾಂಕಗಳನ್ನು ತಿಳಿದುಕೊಂಡು ನಮ್ಮ ವಿಮಾನ ‌ಹಾಗೂ ರೈಲು ಟಿಕೇಟ್ ಕಾಯ್ದಿರಿಸಿದೆವು. ಈ ಪ್ರಯಾಣದ ಮಾರ್ಗ ಹೀಗಿತ್ತು. ಮೊದಲು ಬೆಂಗಳೂರಿನಿಂದ ದೆಹಲಿಗೆ ವಿಮಾನ ಪ್ರಯಾಣ, ದೆಹಲಿಯಿಂದ ರೈಲಿನಲ್ಲಿ ಕಾತ್‌ಗೊದಾಮ್‌ಗೆ ಹೋಗಬೇಕು. ಕಾತ್‌ಗೋದಾಮ್‌ನಿಂದ ಸಾತ್‌ತಾಲ್‌ 25 ಕಿಲೋಮೀಟರ್ ದೂರದಲ್ಲಿದ್ದು ಸುಮಾರು 1 ಗಂಟೆಗಳ ಪ್ರಯಾಣ. ಸಾತ್‌ತಾಲ್‌ನಲ್ಲಿ ಮೂರು ದಿನ ತಂಗುವುದು, ಅಲ್ಲಿಂದ 6 ಗಂಟೆ ಪ್ರಯಾಣ ಮಾಡಿ ಚೋಪ್ಟಾ ತಲುಪುವುದು. ಮೂರು ದಿನ ಚೋಪ್ಟಾದಲ್ಲಿ ಇದ್ದು ಪಕ್ಷಿ ವೀಕ್ಷಣೆಯ ಜೊತೆಗೆ ತುಂಗನಾಥ ಮಂಜಿನ ಪರ್ವತ ಶಿಖರ ಚಾರಣ ಮಾಡುವುದು ನಂತರ ಅಲ್ಲಿಂದ ಮಂಡಲ್‌ ಎಂಬ ಊರಿಗೆ ಹೋಗಿ ಎರಡು ದಿನ ಪಕ್ಷಿ ವೀಕ್ಷಣೆ ಮಾಡುವುದು ಆಮೇಲೆ ಒಂದು ದಿನ ಮನೇಲಾಗೆ ಹೋಗಿ ಪಕ್ಷಿ ವೀಕ್ಷಣೆ ಮಾಡಿ ಅಲ್ಲೇ ತಂಗುವುದು ಮತ್ತು ನಂತರ ಕಾತ್‌ಗೋದಾಮ್‌ ರೈಲು ನಿಲ್ದಾಣಕ್ಕೆ ವಾಪಸ್‌ ಬಂದು, ರೈಲಿನಲ್ಲಿ ದೆಹಲಿ ತಲುಪಿ ಅಲ್ಲಿಂದ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್. ಮೊದಲ ದಿನ ಕಾತ್‌ಗೋದಾಮ್‌ ರೈಲು ನಿಲ್ದಾಣದಲ್ಲಿ ಗೈಡ್‌ ನಮ್ಮನ್ನು ಸೇರಿಕೊಂಡು ನಮ್ಮ ಪ್ರವಾಸ ಆರಂಭಿಸಿದರೆ ಮತ್ತೆ ನಾವು ಕಾತ್‌ಗೋದಾಮ್‌ಗೆ ಬರುವವರೆಗೆ ಒಂಬತ್ತು ದಿನದ ನಮ್ಮ ಸಂಪೂರ್ಣ ಜವಾಬ್ದಾರಿ ಅಂದರೆ ವಾಹನ, ಊಟ, ತಿಂಡಿ, ಹೋಟಲ್‌ ಎಲ್ಲಾ ವ್ಯವಸ್ಥೆಯೂ ಗೈಡ್‌ನದೇ. ಗೈಡ್‌ ಕಾತ್‌ಗೋದಾಮ್‌ನಿಂದ ಕಾತ್‌ಗೋದಾಮ್‌ವರೆಗೆ 9 ದಿನಕ್ಕೆ ಒಬ್ಬರಿಗೆ 34 ಸಾವಿರ ರೂಪಾಯಿ ತಿಳಿಸಿದರು. ಈ ಮೊತ್ತಕ್ಕೆ ಒಪ್ಪಿ ನಾವು ಆರು ಜನ ಸೇರಿ 20 ಸಾವಿರ ರೂಪಾಯಿ ಮುಂಗಡ ಹಣವನ್ನು ಪಾವತಿಸಿದೆವು. ಆದರೆ ಮಾರ್ಚ್‌ 2020ಕ್ಕೆ ಪ್ರಪಂಚಕ್ಕೆ ಮೆಟ್ಟಿಕೊಂಡ ಕೋವಿಡ್‌ ಸಮಸ್ಯೆ ನಮ್ಮ ಪ್ರವಾಸದ ಮೇಲೂ ಪ್ರಭಾವ ಬೀರಿತು. ಪುಣ್ಯಕ್ಕೆ ನಮ್ಮ ವಿಮಾನ ಮತ್ತು ರೈಲು ಟಿಕೇಟ್‌ ಮೊತ್ತ ಸರ್ಕಾರದ ಆದೇಶದ ಮೇರೆಗೆ ಪೂರ್ತಿಯಾಗಿ ಹಿಂದಿರುಗಿಸಿದರು. ಗೈಡ್‌ಗೆ ನಾವು ಕೊಟ್ಟಿದ್ದ ಮುಂಗಡ ಹಣ 20 ಸಾವಿರ ಅವರಲ್ಲಿಯೇ ಉಳಿಸಿಕೊಳ್ಳಲು ತಿಳಿಸಿ, ಕೋವಿಡ್‌ ಸಮಸ್ಯೆ ತಣ್ಣಗಾದಮೇಲೆ ಮತ್ತೆ ಪ್ರವಾಸಕ್ಕೆ ಬರುವುದಾಗಿ ತಿಳಿಸಿದೆವು. ಕಡೆಗೂ ಮಾರ್ಚ್‌ 9 2022ರಂದು ನಮ್ಮ ಪ್ರವಾಸ ಆರಂಭವಾಯಿತು. ಪ್ರವಾಸದ ಮಾರ್ಗದಲ್ಲಿ ಚಿಕ್ಕ ಬದಲಾವಣೆ ಮಾಡಿಕೊಂಡಿದ್ದೆವು. ಬೆಂಗಳೂರಿನಿಂದ ನೇರ ಡೆಹ್ರಾಡುನ್‌ಗೆ ಹೋಗಿ ಅಲ್ಲಿಂದ ಪ್ರಯಾಣ ಆರಂಭಿಸಿ ಕಾತ್‌ಗೋದಾಮ್‌ನಲ್ಲಿ ಪ್ರಯಾಣ ಅಂತ್ಯಗೊಳಿಸುವುದು. 9ನೇ ಮಾರ್ಚ್‌ ಮಧ್ಯಾಹ್ನ 12.30ರ ವಿಮಾನದಲ್ಲಿ ಹೊರಟು ಡೆಹ್ರಾಡುನ್‌ ತಲುಪಿದಾಗ ಸಮಯ ಮೂರು ಗಂಟೆ. ವಿಮಾನದಲ್ಲೇ ಮಧ್ಯಾಹ್ನದ ಊಟ ಮುಗಿದಿತ್ತು. ಡೆಹ್ರಾಡುನ್‌ ವಿಮಾನ ನಿಲ್ದಾಣಕ್ಕೆ ಗೈಡ್‌ 6 ಸೀಟಿನ ಎರಡು ತವೇರಾ ಗಾಡಿಗಳ ಜೊತೆ ಬಂದಿದ್ದರು. ಈ ಪಕ್ಷಿ ಛಾಯಾಗ್ರಹಣವೇ ಹೀಗೆ. ಒಂದು ಗಾಡಿಯಲ್ಲಿ ಮೂರು ಪ್ರವಾಸಿಗರು ಮಾತ್ರ. ಪ್ರಯಾಣದ ವೇಳೆಯಲ್ಲೂ ಆಗಾಗ ಕಾಣಿಸುವ ಪಕ್ಷಿಗಳ ಫೋಟೋ ಕ್ಲಿಕ್ಕಿಸಬೇಕಾದ ಕಾರಣ ಈ ವ್ಯವಸ್ಥೆ. ಛಾಯಾಗ್ರಾಹಕರೆಲ್ಲರೂ ಕಿಟಕಿಯ ಪಕ್ಕದಲ್ಲೇ ಕೂರಬೇಕಲ್ಲವೇ. ವಿಮಾನ ನಿಲ್ದಾಣದಿಂದ ಸುಮಾರು 5 ಕಿಲೋಮೀಟರ್‌ ದೂರದಲ್ಲಿದ್ದ ನಂದಿನಿ ಹೋಮ್‌ಸ್ಟೇಯಲ್ಲಿ ಅಂದು ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು. ಬಹಳ ಸ್ವಚ್ಛವಾಗಿದ್ದ 3 ರೂಮುಗಳಲ್ಲಿ ನಾವು 6 ಜನ ತಂಗಿದೆವು. ಹೋಮ್‌ಸ್ಟೇ ಅಕ್ಕಪಕ್ಕದಲ್ಲಿ ತೋಟವಿದ್ದು, ಗೂಬೆ ಹಾಗೂ ಗುಬ್ಬಚ್ಚಿ ವೀಕ್ಷಣೆಯೊಂದಿಗೆ ನಮ್ಮ ಪಕ್ಷಿ ಛಾಯಾಗ್ರಹಣ ಅಲ್ಲಿಂದಲೇ ಶುರು. ಸಂಜೆ ಅಲ್ಲಿಂದ 25 ಕಿಲೋಮೀಟರ್‌ ದೂರದಲ್ಲಿದ್ದ ಋಷಿಕೇಶಕ್ಕೆ ಒಂದೇ ಗಾಡಿಯಲ್ಲಿ ಎಲ್ಲರೂ ಹೋಗಿ ಗಂಗಾ ಮಾತೆಯ ದರ್ಶನ ಪಡೆದು ಅಲ್ಲಿಯ ಮಾರ್ಕಟ್‌ಗಳಲ್ಲಿ ಸ್ವಲ್ಪ ಹೊತ್ತು ಅಡ್ಡಾಡಿ ವಾಪಸ್‌ ಬಂದೆವು. ಅಂದಿನ ರಾತ್ರಿಯ ಊಟ ಹೋಮ್‌ ಸ್ಟೇಯಲ್ಲೇ ಆಯಿತು. ಊಟದ ನಂತರ ನಾವೆಲ್ಲಾ ಒಂದೆಡೆ ಸೇರಿ ಇಂದು ವೀಕ್ಷಿಸಿದ ಪಕ್ಷಿಗಳ ಹೆಸರುಗಳನ್ನು ಚರ್ಚಿಸಿದೆವು. ಆ ಹೆಸರುಗಳನ್ನು ಈ-ಬರ್ಡ್‌ ಎಂಬ ಮೊಬೈಲಿನ ತಂತ್ರಾಂಶದಲ್ಲಿ ದಾಖಲಿಸಿ ನಮ್ಮೆಲ್ಲರ ಈ-ಬರ್ಡ್‌ ಖಾತೆಗೆ ಹಂಚಿಕೊಳ್ಳುವ ಕೆಲಸವನ್ನು ಗೆಳೆಯ ಗೌರಿಶಂಕರ ವಹಿಸಿಕೊಂಡ. ಈ ರಾತ್ರಿಯ ಸಭೆ ಹಾಗೂ ಈ-ಬರ್ಡ್‌ಗೆ ಹೆಸರು ಸೇರಿಸುವುದು ಮುಂದಿನ ಒಂಬತ್ತು ದಿನಗಳೂ ನಡೆಯಿತು. ನಾನು ಬೆಳ್ಳುಳ್ಳಿ ತಿನ್ನುವುದಿಲ್ಲ ಹಾಗಾಗಿ ಪ್ರತಿ ದಿನ ದಾಲ್‌ ಒಂದಕ್ಕೆ ಮಾತ್ರ ಬೆಳ್ಳುಳ್ಳಿ ಹಾಕದಂತ ವ್ಯವಸ್ಥೆ ಮಾಡಲು ನಾನು ಗೈಡ್‌ಗೆ ತಿಳಿಸಿದ್ದೆ, ಆದರೆ ಗೈಡ್‌ ಮಾತ್ರ ನಮಗಾಗಿ ಮಾಡುವ ಯಾವುದೇ ಅಡುಗೆಯಲ್ಲೂ ಬೆಳ್ಳುಳ್ಳಿಯೇ ಬಳಸಬಾರದೆಂದು ನಾವು ತಂಗುವ ಎಲ್ಲಾ ಹೋಟಲ್‌ ಅಡುಗೆಯವರಿಗೂ ಆದೇಶ ನೀಡಿದ್ದರು. ಇದು ಸರಿಯಲ್ಲವೆಂದು ಕೇವಲ ದಾಲ್‌ ಮಾತ್ರ ನನಗೆ ಬೇಕಷ್ಟೆ ಎಂದು ಹೇಳಿದೆ. ಮಾರನೇ ದಿನ ಬೆಳಿಗ್ಗೆ 5 ಗಂಟೆಗೆ ನಮ್ಮ ಪ್ರಯಾಣ ಆರಂಭ. ಹೋಮ್‌ಸ್ಟೇಯಲ್ಲಿ ಬಿಸಿ ನೀರು ಸಿಕ್ಕಿದ್ದರಿಂದ ಅಂದು ಸ್ನಾನ ಮಾಡಲು ಅವಕಾಶವಾಯಿತು. ಸುಮಾರು 10 ಗಂಟೆಗಳ ಪ್ರಯಾಣದ ನಂತರ ಚೋಪ್ಟಾ ಎಂಬ ಊರು ತಲುಪಿದೆವು. ಮಾರ್ಗ ಮಧ್ಯದಲ್ಲಿ ಚಹ, ಊಟ, ಪಕ್ಷಿಛಾಯಾಗ್ರಹಣ ಎಲ್ಲವೂ ನಡೆಯಿತು. ಛೋಪ್ಟಾ ಊರಿಗೆ ಇನ್ನೂ 15 ಕಿಲೋಮೀಟರ್‌ ದೂರವಿರುವಾಗಲೇ ಸಿಗುವ ಪೋಥಿಬಸಾ ಎಂಬ ಚಿಕ್ಕ ಜಾಗದಲ್ಲಿ ನಮ್ಮ ಹೋಟಲ್‌ ರೂಮ್‌ ಕಾಯ್ದಿರಿಸಲಾಗಿತ್ತು. ಊರು ಸೇರುತ್ತಿದ್ದಂತ ನಮ್ಮ ಸ್ವೆಟರ್‌, ಕೋಟ್‌, ಗ್ಲೌಸ್‌ಗಳು ಬ್ಯಾಗುಗಳಿಂದ ಹೊರಗೆ ಬಂದವು. ತಾಪಮಾನ ಸುಮಾರು 5ರಿಂದ 7 ಡಿಗ್ರಿ ಇತ್ತು. *ಚೋಪ್ಟಾ ಬಗ್ಗೆ ಒಂದೆರೆಡು ಮಾತು* ಚೋಪ್ಟಾ ಒಂದು ಚಿಕ್ಕ ಹಳ್ಳಿ. ತುಂಗನಾಥ್‌ ಹಾಗೂ ಚಂದ್ರಶಿಲಾ ಪರ್ವತಗಳಿಗೆ ಚಾರಣ ಮಾಡುವ ಚಾರಣಿಗರಿಗೆ ಹಾಗೂ ತೀರ್ಥಯಾತ್ರಿಗಳಿಗೆ ಇದು ಒಂದು ಮುಖ್ಯವಾದ ಕೇಂದ್ರ. ಚೋಪ್ಟಾದಿಂದ ಸುಮಾರು ನಾಲ್ಕು ಕಿಲೋಮೀಟರ್‌ ಚಾರಣ ಮಾಡಿದರೆ ತುಂಗನಾಥ್‌ ಮತ್ತು ಅಲ್ಲಿಂದ ಚಾರಣ ಮುಂದುವರೆಸಿದರೆ ಒಂದು ಕಿಲೋಮೀಟರ್‌ ದೂರದಲ್ಲಿ ಚಂದ್ರಶಿಲಾ ಪರ್ವತದ ತುದಿ ತಲುಪಬಹುದು. ಪೂರ್ತಿಯಾಗಿ ಮಂಜಿನಲ್ಲಿ ಚಾರಣ ಮಾಡಬಯಸುವವರು ಫೆಬ್ರವರಿಯಿಂದ ಮಾರ್ಚಿ ಅಂತ್ಯದೊಳಗೆ ಚಾರಣ ಮಾಡಬೇಕು. ಈ ಸಮಯದಲ್ಲಿ ಚಾರಣಿಗರು ಕಮ್ಮಿ ಹಾಗೂ ಚಾರಣವು ಕಷ್ಟವೂ ಕೂಡ. ಹೆಚ್ಚು ಚಾರಣಿಗರು ಮೇ ಜೂನ್‌ ತಿಂಗಳಲ್ಲಿ ಇಲ್ಲಿಗೆ ಬರುತ್ತಾರೆ. ಆ ಸಮಯದಲ್ಲಿ ಈ ಚೋಪ್ಟಾ ಹಳ್ಳಿಯು ಬೆಂಗಳೂರಿನ ಸಿಟಿ ಮಾರ್ಕೆಟ್‌ ರೀತಿ ಇರುತ್ತದೆ. ಪರ್ವತ ಹತ್ತಲು ಮೆಟ್ಟಲುಗಳು ಇರುತ್ತದೆ. ಈ ಚೋಪ್ಟಾ ಹಳ್ಳಿಯ ಒಂದು ವಿಶೇಷವೇನೆಂದರೆ ಇಲ್ಲಿಗೆ ವಿದ್ಯುಚ್ಛಕ್ತಿ ಸರಬರಾಜು ಇಲ್ಲ. ಸೋಲಾರ್‌ನಿಂದ ಚಾರ್ಜ್‌ ಮಾಡಿ ಬ್ಯಾಟರೀಗಳನ್ನು ಹೋಟಲ್‌ಗಳು ಬಳಸುತ್ತಾರೆ. ಈ ಅವ್ಯವಸ್ಥೆಯ ಬಗ್ಗೆ ಹೋಟಲ್‌ ಮಾಲೀಕರೊಂದಿಗೆ ಮಾತನಾಡಿದಾಗ " ಖಂಡಿತವಾಗಿಯೂ ಚೋಪ್ಟಾಗೆ ವಿದ್ಯುಚ್ಛಕ್ತಿ ಬೇಡ ಸಾರ್‌, ಅದು ಬಂದರೆ ಶಿಮ್ಲಾ, ಮನಾಲಿಯ ಹಾಗೆ ಚೋಪ್ಟಾ ಕೂಡಾ ಹಾಳಾಗುತ್ತದೆ" ಎಂದು ಹೇಳುತ್ತಾರೆ. "ಈ ಅವ್ಯವಸ್ಥಯ ನಡುವೆಯೇ ಈಗಾಗಲೇ ಸಾಕಷ್ಟು ಹೋಟಲ್‌ ಉದ್ಯಮಗಳು ಬಂದಿದ್ದು ಹಾಗೂ ಪರಿಸರ ಸಂರಕ್ಷಣೆಯ ಅರಿವೇ ಇಲ್ಲದಿರುವ ಹೊಸ ಪೀಳಿಗೆಯವರು "ಚಿಲ್‌ ಪಾರ್ಟಿ" ಎಂಬ ಹೆಸರಿನಲ್ಲಿ ಇಲ್ಲಿನ ವಾತಾವರಣ ಕಲುಶಿತ ಪಡಿಸಲು ಆರಂಭಿಸಿದ್ದಾರೆ" ಎಂದು ತಮ್ಮ ಮನದಾಳದ ದುಃಖವನ್ನು ನಮ್ಮೊಂದಿಗೆ ಹಂಚಿಕೊಂಡರು. ಭಾಗ 2 ನಾವೆಲ್ಲಾ ಹೋಟಲ್‌ನ ಡೈನಿಂಗ್‌ ಹಾಲ್‌ನಲ್ಲಿ ಜೋರಾಗಿ ಕನ್ನಡದಲ್ಲಿ ಮಾತನಾಡುತ್ತಿದ್ದಾಗ, ಅಲ್ಲೇ ತಂಗಿದ್ದ ಇನ್ನಿಬ್ಬರು ಕನ್ನಡಿಗರು ತಮ್ಮ ಪರಿಚಯ ಮಾಡಿಕೊಂಡರು. ಅವರಿಬ್ಬರು ಅಣ್ಣ ತಮ್ಮಂದಿರು ಮತ್ತು ದೆಹಲಿಯ ಬಹಳ ಪ್ರಸಿದ್ಧವಾದ ಗೈಡ್‌ ಜೊತೆಮಾಡಿಕೊಂಡು ಅವರು ಕಾಶ್ಮೀರದಲ್ಲಿ ಒಂದು ವಾರ ಪಕ್ಷಿ ವೀಕ್ಷಣೆ ಮುಗಿಸಿ ಇನ್ನೊಂದು ವಾರ ಪಕ್ಷಿವೀಕ್ಷಣೆಗಾಗಿ ಚೋಪ್ಟಾಗೆ ಬಂದಿದ್ದರು. ಅವರಿಬ್ಬರ ಬಳಿ ಸುಮಾರು ರೂಪಾಯಿ 4ರಿಂದ 5 ಲಕ್ಷದ ಕ್ಯಾಮೆರಾಗಳಿದ್ದವು. ಅವರು ಕ್ಲಿಕ್ಕಿಸಿದ ಫೋಟೋಗಳನ್ನು ಕೂಡಲೇ ತಮ್ಮ ಲ್ಯಾಪ್‌ಟಾಪ್‌ಗೆ ವರ್ಗಾಯಿಸುತ್ತಿದ್ದರು. ಅಂತಹ ಕೆಲವು ಫೋಟೋಗಳನ್ನು ನಮಗೆ ತೋರಿಸಿದರು. ನಮ್ಮ ಆರು ಜನರಲ್ಲಿ ಇಬ್ಬರದು ಮಾತ್ರ ಅತ್ಯುತ್ತಮ ಗುಣಮಟ್ಟದ ಹೆಚ್ಚು ದುಬಾರಿಯ ಕ್ಯಾಮೆರಾಗಳಿತ್ತು. ನನ್ನನ್ನು ಸೇರಿ ಮಿಕ್ಕವರದು ಮಧ್ಯಮ ಗುಣಮಟ್ಟದ ಕ್ಯಾಮೆರಾಗಳು. ನಾನಂತು ನನ್ನ ಲೇಖನಕ್ಕಾಗಿ ಹಾಗೂ ಗೆಳೆಯರೊಂದಿಗೆ ಹಂಚಿಕೊಳ್ಳಲು ಪ್ರತಿ ಪಕ್ಷಿಯ ಫೋಟೋವನ್ನು ನಾಲ್ಕೈದು ಕ್ಲಿಕ್ಕಿಸಿ ನಂತರ ನನ್ನ ಹತ್ತಿರ ಇದ್ದ ಬೈನಾಕ್ಯುಲರ್‌ನಲ್ಲಿ ಪಕ್ಷಿಗಳನ್ನು ನೋಡುತ್ತಾ ಆನಂದಿಸುತ್ತಿದ್ದೆ. ಬೈನಾಕ್ಯುಲರ್‌ನಲ್ಲಿ ಪಕ್ಷಿಗಳನ್ನು ನೋಡುವ ಆನಂದ ಯಾವುದೇ ದುಬಾರಿ ಕ್ಯಾಮೆರಾದಲ್ಲಿ ಸಿಗುವುದಿಲ್ಲ. ಒಂದು ವಿಷಯ ಹೇಳೋದು ಮರೆತಿದ್ದೆ, ಹಿಮಾಲಯದ ಪ್ರವಾಸ ನಾನು ಹೋಗುವುದು ತೀರ್ಥಯಾತ್ರೆಗಾಗಿ ಅಥವಾ ಪಕ್ಷಿವೀಕ್ಷಣೆ ಛಾಯಾಗ್ರಹಣಕ್ಕಾಗಿ ಎಂಬುದು ಒಂದು ನೆಪ ಮಾತ್ರ. ಆ ಹಿಮಾಲಯದ ಪರಿಸರದಲ್ಲಿ ಒಮ್ಮೆ ನಾನು ಒಳಹೊಕ್ಕೆನೆಂದರೆ ದೇವಸ್ಥಾನಗಳು, ಪಕ್ಷಿಗಳು ಎಲ್ಲವನ್ನೂ ಮರೆತು ಕೇವಲ ಆ ಪರ್ವತ ಶ್ರೇಣಿಗಳು ಹಾಗೂ ಕಾಡು ನದಿಗಳನ್ನು ನೋಡುತ್ತಾ ನಾನು ಸ್ಥಬ್ಧನಾಗಿಬಿಡುತ್ತೇನೆ. ಭರತಭೂಮಿಯ ಸೌಂದರ್ಯವನ್ನು ವೀಕ್ಷಿಸುತ್ತಾ ಸದಾ ಆಕೆಯನ್ನು ಹೊಗಳುತ್ತಾ ಒಂದೆಡೆ ಕುಳಿತುಕೊಂಡುಬಿಡುತ್ತೇನೆ. ಕೆಲವೊಮ್ಮೆ ಪಕ್ಕದಲ್ಲಿರುವ ಗೆಳೆಯರ ಕಡೆಯೂ ನನ್ನ ಗಮನ ಹೋಗುವುದಿಲ್ಲ. ಹಸಿರು ಸೀರೆಯುಟ್ಟ ಭೂತಾಯಿ, ತನ್ನ ಕೈ ಕಾಲುಗಳು ಹಾಗೂ ದೇಹದ ಮೇಲೆ ಬೆಟ್ಟಗಳನ್ನು ಅಂಟಿಸಿಕೊಂಡು ನಾಟ್ಯ ಮಾಡುತ್ತಿದ್ದಾಳೇನೋ ಎಂಬಂತಿದ್ದ ಪರ್ವತ ಶ್ರೇಣಿಗಳು, ಗಂಗೆಯೇ ಶಿವನ ಜಡೆಯಿಂದ ದುಮ್ಮಿಕ್ಕಿ ಜಿಗಿಯುತ್ತಿದ್ದಾಳೇನೋ ಎಂಬಂತಿದ್ದ ತೆಳ್ಳಗಿನ ಎತ್ತರದ ಜಲಪಾತಗಳು, ಕೆಂಪನೆಯ ರೊಢೆಂಡರಾನ್‌ ಹೂವುಗಳ ಹಾಗೂ ಹಸಿರೆಲೆಗಳ ಮಧ್ಯೆ ನಾವು ಅವಿತುಕೊಂಡಿದ್ದೇವೆ, ನಿಮಗೆ ಸಾಧ್ಯವಾದರೆ ನಮ್ಮನ್ನು ಹುಡುಕಿ ನೋಡೋಣ ಎಂದು ಸವಾಲೊಡ್ಡುತ್ತಿರುವ ಪಕ್ಷಿಗಳ ಚಿಲಿಪಿಲಿ ಇದು ಹಿಮಾಲಯದ ತೆಪ್ಪಲಲ್ಲಿರುವ ಹಳ್ಳಿಗಳ ವಿವರಣೆ. ನಾವು ಈ ಪ್ರವಾಸದಲ್ಲಿ ನೋಡಿದ ಶೇಕಡ 90ರಷ್ಟು ಜಾಗಗಳ ವಿವರಣೆಯೂ ಇದೇ ಆಗಿತ್ತು. ಸರಿ, ಈ ವಿಹಂಗಮ ನೋಟದಿಂದ ಒಂದು ಬ್ರೇಕ್‌ ತೆಗೆದುಕೊಂಡು ಪಕ್ಷಿ ವೀಕ್ಷಣೆಯ ಬಗ್ಗೆ ಮತ್ತೊಂದೆರೆಡು ಚಿಕ್ಕ ವಿವರಣೆ: ಸಾಮಾನ್ಯವಾಗಿ ಈ ರೀತಿಯ ಪ್ರವಾಸಗಳು ಬಹಳ ಹಿಂದೆಯೇ ನಿಶ್ಚಯವಾಗುತ್ತದೆ. ಹಾಗಾಗಿ ನಮಗೆ ತಯಾರಾಗಲು ಸಾಕಷ್ಟು ಸಮಯ ಸಿಗುತ್ತದೆ. ಈ ತಯಾರಿಯಲ್ಲಿ ಎರಡು ರೀತಿಯದು. ಒಂದು ಬಟ್ಟೆ, ತಿಂಡಿ ತಿನಿಸು, ಕ್ಯಾಮೆರಾ, ಲೆನ್ಸ್‌ ಇತರೆ ತೆಗೆದುಕೊಂಡು ಹೋಗುವ ಬಗ್ಗೆಯಾದರೆ ಮತ್ತೊಂದು ನಾವು ಅಲ್ಲಿ ಮಾಡಬೇಕಾಗಿರುವ ಪಕ್ಷಿ ವೀಕ್ಷಣೆಯ ತಯಾರಿ. ಮೊದಲನೆಯದು ನಿಮಗೆಲ್ಲಾ ಗೊತ್ತೇ ಇರುತ್ತದೆ, ಎರಡನೆಯದು ಮಾತ್ರ ನಾನು ನಿಮಗೆ ತಿಳಿಸಬಯಸುತ್ತೇನೆ. ಈ-ಬರ್ಡ್‌ ಎಂಬ ತಂತ್ರಾಂಶದ ಬಗ್ಗೆ ಈಗಾಗಲೇ ಭಾಗ-1 ರಲ್ಲಿ ನಾನು ತಿಳಿಸಿದ್ದೇನೆ. ಈ ತಂತ್ರಾಂಶದಲ್ಲಿ ನಾವು ನೋಡಿದ ಪಕ್ಷಿಗಳನ್ನು ದಾಖಲಿಸುವುದು ಒಂದು ಭಾಗವಾದರೆ. ಒಂದು ಪ್ರತ್ಯೇಕ ಜಾಗದಲ್ಲಿ ನಾವು ಪ್ರವಾಸ ಮಾಡುವ ತಿಂಗಳಿನಲ್ಲಿ ನಾವು ಯಾವ ಯಾವ ಪಕ್ಷಿಗಳನ್ನು ನೋಡಲು ಸಾಧ್ಯ ಮತ್ತು ಆ ಪಕ್ಷಿಗಳ ಫೋಟೋ, ಈ ಎಲ್ಲಾ ವಿವರಣೆಗಳು ಈ ಬರ್ಡ್‌ ತಂತ್ರಾಂಶದ ಇನ್ನೊಂದು ಭಾಗ. ಇದನ್ನು ವಿವರವಾಗಿ ಓದಿ, ನಮ್ಮ ಪ್ರವಾಸದಲ್ಲಿ ಸಿಗಬಹುದಾದ ಪಕ್ಷಿಗಳ ಪರಿಚಯವನ್ನು ತಂತ್ರಾಂಶದಿಂದ ಮಾಡಿಕೊಳ್ಳುತ್ತೇವೆ. ಸಾಮಾನ್ಯವಾಗಿ ಸಾಕಷ್ಟು ಪಕ್ಷಿಗಳು ನಮಗೆ ಕೇವಲ ೧೦ರಿಂದ ೧೫ ಸೆಕೆಂಡ್‌ಗಳು ಮಾತ್ರ ನೋಡಲು ಸಿಗುವುದು. ಅದರಲ್ಲೂ ಕೆಲವೊಮ್ಮೆ ಎರಡು ಮೂರು ರೀತಿಯ ಪಕ್ಷಿಗಳು ಒಮ್ಮೆಲೇ ಸಿಗುತ್ತದೆ. ಹಾಗಿದ್ದಾಗ ಅವುಗಳನ್ನು ಗುರುತು ಹಿಡಿಯುವುದು ಒಂದು ಸಾಹಸವೇ ಸರಿ. ಅದಕ್ಕಾಗಿ ನಾವು ಮಾಡುವ ಪೂರ್ವಪ್ರವಾಸ ತಯಾರಿ ಸಹಾಯ ಮಾಡುತ್ತದೆ. ಅಂದು ಮಧ್ಯಾಹ್ನ 3 ಗಂಟೆಗೆ ಛೋಪ್ಟಾ ಹೋಟಲ್‌ ತಲುಪಿ ಒಂದು ಗಂಟೆ ವಿಶ್ರಾಮ ಮಾಡಿ 4 ಗಂಟೆಗೆ ಹೋಟೆಲ್‌ನಿಂದ ಸುಮಾರು 10 ಕಿಲೋಮೀಟರ್‌ ದೂರದಲ್ಲಿರುವ ಮುಕ್ಕುಮಠ ಎಂಬ ಹಳ್ಳಿಗೆ ಹೋದೆವು. ಮುಕ್ಕುಮಠ ಹೆದ್ದಾರಿಯ ಪಕ್ಕದಲ್ಲಿ ಇರುವ ಒಂದು ಚಿಕ್ಕ ಹಳ್ಳಿ. ಮುಕ್ಕುಮಠ ಹಳ್ಳಿಯಲ್ಲಿ ಪಕ್ಷಿ ವೀಕ್ಷಣೆ ಮಾಡಿದ ರೀತಿ ಒಂದು ತರಹ ಚೆನ್ನಾಗಿತ್ತು. ಹಳ್ಳಿಗೆ ತಲುಪುವ ಮುನ್ನವೇ ರಸ್ತೆ ಬದಿಯಲ್ಲಿ ಒಂದು ದೊಡ್ಡ ಮರ, ಆ ಮರದಲ್ಲಿ ಸುಮಾರು 10 ತಳಿ ಪಕ್ಷಿಗಳು. "ಅಗೋ ನೋಡಿ ಆ ಪಕ್ಷಿ" ಎಂದು ಗೈಡ್‌ ಹೇಳಿದ ಮೇಲೆ, ನಾವು ನಮ್ಮ ಕ್ಯಾಮೆರಾ ಆ ಬದಿಗೆ ತಿರುಗಿಸಿ ಫೋಟೋ ಕ್ಲಿಕ್ಕಿಸುವ ಹೊತ್ತಿಗೆ ಪಕ್ಷಿ ಮತ್ತೆಲ್ಲೋ ಹಾರಿಹೋಗಿರುತ್ತದೆ. ಒಂದೆರೆಡು ಗಂಟೆ ಈ ರೀತಿ ಕಣ್ಣಾ ಮುಚ್ಚಾಲೆಯಾಟವಾದ ಮೇಲೆ ಯಾವ ವೇಗದಲ್ಲಿ ನಾವು ಈ ಹಿಮಾಲಯದಲ್ಲಿ ಪಕ್ಷಿ ವೀಕ್ಷಣೆ ಮಾಡಬೇಕೆಂಬ ಒಂದು ಅಂದಾಜು ಬಂದು, ಪಕ್ಷಿಗಳನ್ನು ಕ್ಯಾಮೆರಾದಿಂದ ಕ್ಲಿಕ್ಕಿಸಲು ಅಥವಾ ದುರ್ಬಿನ್ನಿನಿಂದ ಸೆರೆ ಹಿಡಿಯಲು ಆರಂಭಿಸುತ್ತೇವೆ. ಸುಮಾರು ೨೪ ತಳಿಯ ಪಕ್ಷಿಗಳನ್ನು ನಾವು ಇಲ್ಲಿ ವೀಕ್ಷಿಸಿದೆವು. ಒಮ್ಮೆ ಸೂರ್ಯ ಹಳ್ಳಿಯ ಪಕ್ಕದಲ್ಲಿರುವ ಪರ್ವತವನ್ನು ದಾಟಿದನೆಂದರೆ ಸೂರ್ಯಾಸ್ತವಾದಂತೆಯೇ. ಸುಮಾರು 5.30ರ ನಂತರ ಕತ್ತಲಾಗಿಬಿಡುತ್ತದೆ. ಹಾಗಾಗಿ ಸಂಜೆ 6.30ಕ್ಕೆ ನಮ್ಮ ಹೋಟಲ್‌ ತಲುಪಿ ಅಲ್ಲಿ ನಮಗಾಗಿ ಇಟ್ಟಿದ್ದ ಟೀ ಮತ್ತು ಪಕೋಡಾ ತಿಂದು ಎಲ್ಲಾ ಒಂದೆಡೆ ಕುಳಿತು ಹರಟುತ್ತಾ ಕುಳಿತೆವು. ಬೇರೆ ಪ್ರವಾಸಿಗರು ನಮ್ಮೊಂದಿಗೆ ಸೇರಿಕೊಂಡು ಅವರವರ ಅನುಭವಗಳನ್ನು ಹಂಚಿಕೊಂಡರು. ಛಳಿ ಬಹಳ ಇದ್ದದ್ದರಿಂದ ಫ್ರಿಡ್ಜಿನಲ್ಲಿ ಇಟ್ಟಿದ್ದ ವಿಸ್ಕಿ ರಮ್‌ ಬಾಟಲಿಗಳು ಹೊರಬಂದು ಕೆಲವು ಪ್ರವಾಸಿಗರು ತೀರ್ಥಸೇವೆಯನ್ನು ಆರಂಭಿಸಿದರು. ಅಚ್ಚ ಕನ್ನಡದಲ್ಲಿ ಮಾತನಾಡುತ್ತಿದ್ದ ಕೆಲವರು ತಟ್ಟನೆ ಆಂಗ್ಲ ಭಾಷೆಯಲ್ಲಿ ಮಾತನಾಡಲು ಆರಂಭಿಸಿದಾಗ ಅವರ ತೀರ್ಥಮಟ್ಟ ತಿಳಿಯುತ್ತಿತ್ತು. ಮೊದಮೊದಲು ಈ ರೀತಿಯ ಪ್ರವಾಸಿಗರನ್ನು ನೋಡಿದಾಗ ಬೇಜಾರಾಗುತ್ತಿತ್ತು ಆದರೆ ಈಚೀಚೆಗೆ ಅವರ ಜೀವನ ಅವರ ಸಂತೋಷ ಅವರದು ನಮಗೇಕೆ ಆ ಉಸಾಬರಿ ಎಂದು ನನ್ನದೆ ಧ್ಯಾನ ಲೋಕದಲ್ಲಿ ನಾನು ಮುಳುಗಿಬಿಡುತ್ತೇನೆ. ರಾತ್ರಿಯ ಊಟ ಮುಗಿದಮೇಲೆ ಮಲಗೋಣ ಅಂದುಕೊಂಡರೆ, ಆ ಹೋಟಲ್‌ ಮಾಲೀಕ "ಸಾರ್‌ ಯಾರು ಈಗಲೇ ಮಲಗಬೇಡಿ, ರಾತ್ರಿ ಇಲ್ಲೇ ರಸ್ತೆಯ ಇನ್ನೊಂದು ಬದಿಗೆ ಸಿವೆಟ್‌ ಬೆಕ್ಕು ಬರುತ್ತದೆ" ಎಂದು ತಿಳಿಸಿದರು. ಈ ಸಿವೆಟ್‌ ಬೆಕ್ಕು ಜನರ ಕಣ್ಣಿಗೆ ಕಾಣಿಸುವುದು ಅಪರೂಪ. ಈ ಸಿವೆಟ್‌ ಬೆಕ್ಕಿನ ಒಂದು ಕುತೂಹಲಕಾರಿ ವಿಷಯ ನಿಮಗೆ ತಿಳಿಸಲೇಬೇಕು. ವಿಯೆಟ್ನಾಮ್‌ ಮತ್ತು ಸುತ್ತಮುತ್ತಲಿನ ದೇಶಗಳಲ್ಲಿ ಸಿಗುವ ಕಾಫಿ ಎಸ್ಟೇಟ್ಗಳ ಬಳಿ ಈ ಸಿವೆಟ್‌ ಬೆಕ್ಕಿನ ಒಂದು ತಳಿ ವಾಸಿಸುತ್ತದೆ. ಈ ಸಿವೆಟ್‌ ಬೆಕ್ಕುಗಳು ಕಾಫಿಬೀಜವನ್ನು ತಿಂದು ಅದರೆ ಹೊಟ್ಟೆಯಲ್ಲಿ ಅವನ್ನು ಅರ್ಧಂಬರ್ಧ ಅರಗಿಸಿ ಮಲದ ಮೂಲಕ ಆ ಬೀಜಗಳನ್ನು ಹೊರಹಾಕುತ್ತದೆ. ಈ ಹೊರಬಂದ ಕಾಫಿ ಬೀಜಗಳನ್ನು ಬೇರ್ಪಡಿಸಿ ಅದರಿಂದ ಕಾಫಿಪುಡಿ ಮಾಡುತ್ತಾರೆ. ಈ ಕಾಫಿಪುಡಿಯ ಬೆಲೆ ಎಷ್ಟೆಂದು ನೀವು ಊಹಿಸಬಲ್ಲಿರೇ. ಹೆಚ್ಚೇನಿಲ್ಲ, ಒಂದು ಕೆಜಿಗೆ ಕೇವಲ ೧೨೦೦ ಡಾಲರ್‌ ಅಂದರೆ ೧ ಲಕ್ಷ ರೂಪಾಯಿ ಅಷ್ಟೆ. ಈ ಸಿವೆಟ್‌ ಕಾಫಿ ಒಂದು ಲೋಟಕ್ಕೆ ಸುಮಾರು 7 ಸಾವಿರ ರೂಪಾಯಿ. ಆದರೆ ಪುಣ್ಯಕ್ಕೆ ನಮ್ಮ ಹಿಮಾಲಯದಲ್ಲಿ ಸಿಗುವ ಸಿವೆಟ್‌ ಬೆಕ್ಕುಗಳನ್ನು ಹೀಗೆ ಬಳಸಿಕೊಳ್ಳುತ್ತಿಲ್ಲ. ಅಂದು ರಾತ್ರಿ ಹೋಟಲ್‌ನಲ್ಲಿ ಮಿಕ್ಕಿದ್ದ ಮಾಂಸಾಹಾರದ ಊಟವನ್ನೆಲ್ಲಾ ಅಲ್ಲೇ ಎದುರುಗಿದ್ದ ಒಂದು ಕಟ್ಟೆಯ ಮೇಲೆ ಚೆಲ್ಲಿದರು. ಅದನ್ನು ತಿನ್ನಲು ಈ ಸಿವೆಟ್‌ ಬೆಕ್ಕು ಬರುತ್ತದೆ ಎಂದು ತಿಳಿಸಿದರು. ಹೋಟಲ್‌ ಮಾಲೀಕನೇ ಒಂದು ದೊಡ್ಡ ಟಾರ್ಚ್‌ ಲೈಟ್‌ ಇಟ್ಟುಕೊಂಡಿದ್ದ. ಬೆಕ್ಕಿನ ಶಬ್ಧವಾದ ತಕ್ಷಣ ಅವನು ಟಾರ್ಚ್‌ ಆನ್‌ ಮಾಡುತ್ತಾನೆ, ನಾವೆಲ್ಲ ಕ್ಯಮೆರಾದಲ್ಲಿ ಫೋಟೋ ಕ್ಲಿಕ್ಕಿಸುವುದು ಎಂದು ನಮಗೆ ತಿಳೀದಿತ್ತು. ಆದರೆ ಎಷ್ಟು ಕಾದರೂ ಅಂದು ಸಿವೆಟ್‌ ಬೆಕ್ಕು ಬರಲಿಲ್ಲ. ನಮ್ಮ ಅದೃಷ್ಟ ಸರಿ ಇಲ್ಲವೆಂದು ರೂಮುಗಳಿಗೆ ಹೋಗಿ ದಪ್ಪನೆಯ ಹೊದ್ದಿಗೆಯನ್ನು ಮೈತುಂಬಾ ಹೊದ್ದಿಕೊಂಡು ಮಲಗಿದೆವು. ಮಾರನೆಯ ದಿನ ಬೆಳಿಗ್ಗೆ ಹಿಮಾಲಯದ ರಾಣಿ ಎಂದು ಕರೆಸಿಕೊಳ್ಳುವ ಮೊನಾಲ್‌ ಪಕ್ಷಿಯನ್ನು ವೀಕ್ಷಿಸುವುದಿತ್ತು. ಪೂರ್ತಿ ದಿನದ ಪ್ರಯಾಣ ಮತ್ತು ಚಾರಣದಿಂದ ಸುಸ್ತಾಗಿದ್ದ ನಮಗೆ ಎಚ್ಚರವಾಗಿದ್ದು ಬೆಳಿಗ್ಗೆ ೫ ಗಂಟೆಗೆ ಮೊಬೈಲಿನಲ್ಲಿ ಅಲಾರಾಂ ಹೊಡೆದಾಗ. ಬಿಸಿ ಬಿಸಿ ಟೀ ಹಾಗೂ ಒಂದು ಬಕೆಟ್‌ ಬಿಸಿನೀರು ನಮ್ಮ ರೂಮಿಗೆ ಬಂತು. ಟೀ ಕುಡಿದು ಮೊನಾಲ್‌ ಪಕ್ಷಿವೀಕ್ಷಣೆಗೆ ಹೊರಟೆವು. ಭಾಗ 3 ಛೊಪ್ಟಾದಲ್ಲಿ ಎರಡನೇ ದಿನ ನಾವೆಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಮೊನಾಲ್‌ ನೋಡುವ ದಿನ. ಈ ಪಕ್ಷಿಯನ್ನು ನಮ್ಮ ಗುಂಪಿನಲ್ಲಿ ಯಾರೂ ಈ ವರೆಗೆ ನೇರವಾಗಿ ನೋಡಿರಲಿಲ್ಲ. ಬೆಳಿಗ್ಗೆ ಘಮ್‌ ಎಂದು ಉರಿದುಹೋದ ಸೌದೆಯ ವಾಸನೆ ಬರುತ್ತಿದ್ದ, ಬಿಸಿಬಿಸಿ ನೀರಿನಲ್ಲಿ ಮುಖ ತೊಳೆದು ಹಾಗೇ ಟೀ ಕುಡಿದು ಹೊರಟೇಬಿಟ್ಟೆವು ಮೊನಾಲ್‌ನ ಹುಡುಕಲು. "ನಿಮಗೆ ಮೊನಾಲ್ ತೋರಿಸಿಯೇ ತೋರಿಸುತ್ತೇನೆ" ಎಂದು ನಮ್ಮ ಗೈಡ್‌ ಹೇಳುತ್ತಿದ್ದರೂ, ನಮಗೆ ನಮ್ಮ ಅದೃಷ್ಟದ ಮೇಲೆ ವಿಶ್ವಾಸ ಇರಲಿಲ್ಲ. ನಾವು ಉಳಿದುಕೊಂಡಿದ್ದ ಪೋತೀಬಸ ಎಂಬ ಜಾಗದಿಂದ 15 ಕಿಲೋಮೀಟರ್‌ ದೂರದಲ್ಲಿದ್ದ ಛೋಪ್ಟಾಗೆ ಹೋಗುವ ದಾರಿಯಲ್ಲಿ ಸಿಗುವ ಒಂದು ದೊಡ್ಡ ಬೆಟ್ಟವೇ ಮೊನಾಲ್‌ ಪಾಯಿಂಟ್. ಇನ್ನೂ ಐದಾರು ಕಿಲೋಮೀಟರ್‌ ನಾವು ಕ್ರಮಿಸಿಲ್ಲ, ಆಗಲೇ ರಸ್ತೆ ಬದಿಗಳಲ್ಲಿ ಅಲ್ಲಲ್ಲಿ ಉಪ್ಪು ಸುರಿದಿರುವಂತೆ ಹಿಮದ ರಾಶಿಯನ್ನು ನೋಡಿದೆವು. ಫೋಟೋ ತೆಗೆಯೋಣ ಎಂದುಕೊಂಡೆ. ಗೈಡ್‌ ನನ್ನ ನೋಡಿ ನಕ್ಕಿದ್ದನ್ನು ಗಮನಿಸಿ ಮೊಬೈಲ್‌ ಒಳಗಿಟ್ಟುಕೊಂಡೆ. ಇನ್ನೊಂದೆರೆಡು ಕಿಲೋಮೀಟರ್‌ ಮುಂದೆ ಹೋದಮೇಲೆ ಪೂರ್ತಿ ಹಿಮದ ಬೆಟ್ಟಗಳೇ ಕಾಣಿಸಿತು. ಈ ಹಿಮದ ರಾಶಿಯ ಮಧ್ಯೆ ರಸ್ತೆ ಕಾಣಲಾರಂಭಿಸಿತು. ಆಗ ಈ ಮುಂಚೆ ಗೈಡ್‌ ನನ್ನನ್ನು ನೋಡಿ ನಕ್ಕಿದ್ದು ಯಾಕೆಂದು ಅರ್ಥವಾಯಿತು. ಮೊನಾಲ್‌ ಪಾಯಿಂಟ್‌ ನಾವು ತಲುಪಿದಾಗ ಸುಮಾರು ಬೆಳಿಗ್ಗೆ 6.30. ಸರಿ, ಹಾಗಾದರೆ ಮೊನಾಲ್‌ ಬಗ್ಗೆ ಹೇಳದೇ ಈ ಲೇಖನವನ್ನು ಮುಂದುವರೆಸುವುದಾದರೂ ಹೇಗೆ. ಮೊನಾಲ್‌ ಬಗ್ಗೆ ವಿವರ ಕೊಟ್ಟೇ ಬಿಡುತ್ತೇನೆ. ಈ ಮೊನಾಲ್‌ ಒಂದು ಕೋಳಿಯ ಜಾತಿಯ ಪಕ್ಷಿ. ದೂರದಿಂದ ನೋಡಿದವರಿಗೆ ಇದು ನವಿಲು ಎಂದು ಅನಿಸಿದರೆ ಆಶ್ಚರ್ವೇನಿಲ್ಲ. ನವಿಲು ಒಂದು ಕೋಳಿಯ ಜಾತಿಯ ಪಕ್ಷಿಯೇ ಅಲ್ಲವೇ. ಇವು ಹೆಚ್ಚು ದೂರಕ್ಕೆ ಹಾರಲು ಸಾಧ್ಯವೇ ಇಲ್ಲ. ಹಾಗಾಗಿ ಐದಾರು ಗುಡ್ಡಗಳಿಷ್ಟಿರಬಹದು ಇದರ ಸಾಮ್ರಾಜ್ಯ. ಗುಡ್ಡದ ಮೇಲಿಂದ ಹಾರುತ್ತಾ ಕೆಳಗೆ ಬಂದು ಮತ್ತೇ ಗುಡ್ಡದ ಮೇಲಕ್ಕೆ ನಡೆದುಕೊಂಡು ಹೋಗುವುದೇ ಇದರ ವೈಶಿಷ್ಟ್ಯ. ಕುತ್ತಿಗೆಯ ಭಾಗದಲ್ಲೇ ಏಳೆಂಟು ಬಣ್ಣಗಳನ್ನು ಹೊಂದಿರುವ ಈ ಪಕ್ಷಿಯ ಪೂರ್ತಿ ದೇಹದಲ್ಲಿ ಎಷ್ಟು ಬಣ್ಣ ಇಟ್ಟಿದ್ದಾನೋ ಆ ದೇವರು. ನಾವು ಮೊನಾಲ್‌ ಪಾಯಿಂಟ್‌ಗೆ ಹೋದ ತಕ್ಷಣವೇ ನಮಗೆ ಸುಮಾರು 200 ಅಡಿ ದೂರದಲ್ಲಿ ಮೊನಾಲ್‌ ಕಾಣಿಸಿತು. ಎಷ್ಟು ಚೆಂದದ ಪಕ್ಷಿ, ಇದರ ಫೋಟೋ ಕ್ಲಿಕ್ಕಿಸಲು ಇನ್ನೂ ಬೆಳಕಿದ್ದರೆ ಚೆನ್ನಾಗಿತ್ತು ಎಂದು ನಾನೆಂದುಕೊಂಡರೆ, ನನ್ನ ಗೆಳೆಯರು "ಸ್ವಲ್ಪ ಬೆಳಕು ಹೆಚ್ಚಾದರೂ ಈ ಮೊನಾಲ್‌ನ ಮೇಲಿನ ಎಲ್ಲಾ ಬಣ್ಣಗಳು ಕಪ್ಪು ಬಣ್ಣದಂತೆ ಕಾಣುತ್ತದೆ, ಆದ್ದರಿಂದ ಬೆಳಗಿನ ಮಂದ ಬಿಸಿಲೇ ಇದರ ಫೋಟೋ ತೆಗೆಯಲು ಸರಿಯಾದ ಸಮಯ" ಎಂದು ಹೇಳಿದರು. ಆ ತಕ್ಷಣಕ್ಕೆ ನಾವು ಎರಡು ಮೊನಾಲ್‌ ನೋಡಿದೆವು ಹಾಗೂ ನಾನು ಅವುಗಳ ಒಂದೆರೆಡು ಫೋಟೋ ತೆಗೆದು ನಂತರ ನನ್ನ ಬೈನಾಕ್ಯುಲರ್‌ನಲ್ಲಿ ಅದರ ಬಣ್ಣ ಮತ್ತು ವಿವರಗಳನ್ನು ನೋಡುತ್ತಾ ಆನಂದಿಸಿದೆ. ತಕ್ಷಣ ನಮ್ಮ ಗೈಡ್‌ "ಅಲ್ಲಿ ನೋಡಿ ಹೆಣ್ಣು ಮೊನಾಲ್ ಬಂತು" ಎಂದು ಮತ್ತೊಂದು ಕಡೆಗೆ ನಮ್ಮ ಗಮನ ಸೆಳೆದ. ಗಂಡು ಮೊನಾಲ್‌ನಲ್ಲಿ 30ಕ್ಕೂ ಹೆಚ್ಚು ಬಣ್ಣಗಳಿದ್ದರೆ, ಹೆಣ್ಣು ಮೊನಾಲ್‌ನಲ್ಲಿ ಮೂರ್ನಾಲ್ಕು ಬಣ್ಣ ಅಷ್ಟೆ. ಈ ಪಕ್ಷಿ ಪ್ರಪಂಚವೇ ಹಾಗೆ. ಬಣ್ಣ ಮತ್ತು ರೂಪದಲ್ಲಿ ಇಲ್ಲಿ ಗಂಡಿನದೇ ಸಾಮ್ರಾಜ್ಯ. ಆದರೆ ತನ್ನ ಬಣ್ಣದ ಮತ್ತು ರೂಪದ ಅರಿವೇ ಇಲ್ಲದೆ ಈ ಗಂಡು ಪಕ್ಷಿಗಳು ಜೀವನವೆಲ್ಲಾ ನೀರಸ ಬಣ್ಣದ ತನ್ನ ಜಾತಿಯ ಹೆಣ್ಣು ಪಕ್ಷಿಯನ್ನು ಒಲಿಸಿಕೊಳ್ಳಲು ಕಷ್ಟಪಡುತ್ತಿರುತ್ತವೆ. ಒಟ್ಟಾರೆ ನಾವು 8 ಮೊನಾಲ್‌ಗಳನ್ನು ನೋಡಿದೆವು. ಈ ಮೊನಾಲ್‌ ವೀಕ್ಷಣೆಯಿಂದ ಪಕ್ಷಿ ಛಾಯಾಗ್ರಾಹಕರ ಗುಂಪಿನಲ್ಲಿ ನಾವು ಸ್ವಲ್ಪ ಬಡ್ತಿ ಪಡೆದಂತಾಯಿತು. ಮೊನಾಲ್‌ ಪಾಯಿಂಟ್‌ ನಿಂದ ಐದಾರು ಕಿಲೋಮೀಟರ್‌ ಮುಂದೆ ಹೋಗಿ ನಾವು ಖೋಕ್ಲಾಸ್‌ ಪೆಸೆಂಟ್‌ ಎಂಬ ಮತ್ತೊಂದು ಪಕ್ಷಿಯನ್ನು ವೀಕ್ಷಿಸಿದೆವು. ಈ ಪಕ್ಷಿ ನಮ್ಮ ಎದುರಿಗೇ ಕುಳಿತಿದ್ದರೂ ಗೈಡ್‌ ಸಹಾಯವಿಲ್ಲದೆ ನಾವು ನೋಡಲು ಸಾಧ್ಯವಿಲ್ಲ. ತನ್ನ ಮೈಬಣ್ಣಕ್ಕೆ ಹೊಂದುವಂತಿರುವ ಯಾವುದಾದರೂ ಬಂಡೆಯ ಮೇಲೋ ಒಣಗಿದ ಗಿಡದ ಮುಂದೆಯೋ ಇದು ಕುಳಿತುಕೊಂಡುಬಿಡುತ್ತದೆ. ಬಂಡೆ ಯಾವುದು, ಪಕ್ಷಿ ಯಾವುದು ಎಂದು ಗುರುತಿಸಲೇ ಆಗುವುದಿಲ್ಲ. ಆದರೆ ತುಂಬಾ ಸುಂದರವಾದ ಪಕ್ಷಿ. ನೆರಳಿನಲ್ಲಿದ್ದ ಪಕ್ಷಿ ನಮ್ಮ ಕ್ಯಾಮೆರಾ ಕಣ್ಣಿಗೆ ಅಷ್ಟೇನೂ ಚೆನ್ನಾಗಿ ಸಿಗಲಿಲ್ಲ. ಆ ದಿನ ಸಂಜೆ ಮತ್ತೆ ಮುಕ್ಕಾ ಹಳ್ಳಿಯಲ್ಲಿ ಪಕ್ಷಿವೀಕ್ಷಣೆ ಮಾಡಿದೆವು. ಮಾರನೆಯ ದಿನದ ಹಿಮದ ಮೇಲಿನ ಚಾರಣಕ್ಕೆ ಎಲ್ಲಾ ಮನಸ್ಸಿನಲ್ಲಿ ತಯಾರಿ ನಡೆಸಿ ನಿದ್ದೆಗೆ ಶರಣಾದೆವು. ಛೋಪ್ಟಾದಲ್ಲಿನ ಮೂರನೆಯ ದಿನ ಬೆಳಿಗ್ಗೆ 6 ಗಂಟೆಗೆ ಹೊರಟು ನಾವೂ ಛೋಪ್ಟಾ ಹಳ್ಳಿ ಸೇರಿದಾಗ ಸುಮಾರು 6.30. ಅಲ್ಲಿಂದಲೇ ತುಂಗನಾಥ್‌ ಚಾರಣ ಆರಂಭ. ಸುಮಾರು 4ರಿಂದ 5 ಅಡಿ ಹಿಮ ಬಿದ್ದಿತ್ತು. ಆದರೆ ಬಹಳ ಜನ ಉಪಯೋಗಿಸುವ ಕಾಲುದಾರಿಯಲ್ಲಿ ಹಿಮವು ಉಪ್ಪಿನಂತೆ ಪುಡಿಪುಡಿಯಾಗಿದ್ದರಿಂದ ಚಾರಣಕ್ಕೆ ಅಷ್ಟೇನೂ ಕಷ್ಟವಾಗಲಿಲ್ಲ. ಸುಮಾರು ೪ ಕಿಲೋಮೀಟರ್‌ ಪ‌ರ್ವತಾರೋಹಣ ಮಾಡಿದರೆ ಸಿಗುವುದೇ ನಮಗೆ ತುಂಗನಾಥ ದೇವಸ್ಥಾನ. ಈ ಹಳ್ಳಿಗೆ ಛೋಪ್ಟಾ ಎಂದು ಹೆಸರು ಬರಲು ಈ ತುಂಗನಾಥನೇ ಕಾರಣ ಎಂದು ಕೆಲವರು ಹೇಳಿದರು. ಛೋಪ್ಟಾ ಎಂದರೆ ಒಂದು ನೇಗಿಲಿನ ತರಹದ ಆಯುಧ, ಅದನ್ನು ಈ ಊರಿನಲ್ಲಿ ತುಂಗನಾಥನು ಕಳೆದುಕೊಂಡಿದ್ದರಿಂದ ಈ ಊರಿಗೆ ಈ ಹೆಸರು ಬಂತು ಎಂದು ಕೆಲವರು ತಿಳಿಸಿದರು. ನಿಖರವಾಗಿ ಈ ವಿಷಯ ತಿಳಿಯಲಾಗಲಿಲ್ಲ. ಪಂಚ ಕೇದಾರ ಕ್ಷೇತ್ರಗಳಲ್ಲಿ ಈ ತುಂಗನಾಥ ದೇವಸ್ಥಾನವೂ ಒಂದು. ಚಾರಣ ಮಾಡುವಾಗ ಆಕಾಶದ ನೀಲಿ ಬಣ್ಣ ಮತ್ತು ಕೆಲವೊಂದು ಕಡೆ ಮುಚ್ಚಿ ಹೋಗಿದ್ದ ಮರಗಳ ತುದಿಯ ಹಸುರಿನ ಬಣ್ಣ ಬಿಟ್ಟರೆ ಶೇಕಡ 95ರಷ್ಟು ನಮಗೆ ಕಾಣಿಸುವುದು ಮಂಜಿನ ಶುದ್ದ ಬಿಳಿಯ ಬಣ್ಣವಷ್ಟೆ. ಅತಿಯಾದ ಜಾರಿಕೆಯಿದ್ದು ಅಲ್ಲಿ ಕೆಲವರು ಜಾರಿ ಬೀಳುತ್ತಿದ್ದದ್ದು ನೋಡಿ ನಾವು ಜಾರಿಬಿದ್ದದ್ದುಂಟು. ದೇವರ ದಯೆ ಯಾರಿಗೂ ಹೆಚ್ಚು ಪೆಟ್ಟಾಗಲಿಲ್ಲ. ಪಕ್ಷಿವೀಕ್ಷಣೆಗೆ ಎಂದು ಪ್ರವಾಸ ಮಾಡುವವರು ಈ ರೀತಿ ಚಾರಣ ಮಾಡುವ ಅವಶ್ಯಕತೆ ಏನಿತ್ತು ಎಂದು ನಿಮಗನಿಸಿರಬಹುದು. ಅದರಲ್ಲೂ ತೂಕದಲ್ಲಿ ಭಾರಿಯಾದ ಹಾಗೂ ಮೌಲ್ಯದಲ್ಲಿ ದುಬಾರಿಯಾದ ಕ್ಯಾಮೆರಾಗಳನ್ನು ಹೊತ್ತಿಕೊಂಡು. ಅದೇ ಈ ದಿನದ ಚಾರಣದ ವಿಶೇಷ. ಹೀಗೆ 4 ಕಿಲೋಮೀಟರ್‌ ಚಾರಣ ಮಾಡಿದ ಮೇಲೆ, ಮತ್ತೊಂದು ಕಿಲೋಮೀಟರ್‌ ಚಾರಣ ಮಾಡಿದರೆ ಚಂದ್ರಶಿಲೆ ಪರ್ವತ ಶಿಖರ ಸಿಗುತ್ತದೆ. ಈ ತುಂಗನಾಥ್‌ ಹಾಗೂ ಚಂದ್ರಶಿಲೆಯ ಮಧ್ಯದಲ್ಲಿರುವ ಕಣಿವೆಯಲ್ಲಿ "ಸ್ನೋ ಪ್ಯಾಟ್ರಿಡ್ಜ್" ಎಂಬ ಪಕ್ಷಿಯನ್ನು ನಾವು ವೀಕ್ಷಿಸಬಹುದು. ಇದನ್ನು ವೀಕ್ಷಿಸಲು ಈ ಪರ್ವತ ಹತ್ತುವವರಲ್ಲಿ ನಾವೇ ಮೊದಲಿಗರಾಗಿರಬೇಕು. ತುಂಬಾ ನಾಚಿಕೆಯ ಸ್ವಭಾವದ ಈ ಪಕ್ಷಿ ಮನುಷ್ಯರನ್ನು ನೋಡಿದ ತಕ್ಷಣ ತನ್ನ ಗೂಡಿನಲ್ಲಿ ಅಥವಾ ಯಾವುದಾದರೂ ಮರದ ಒಳಗೆ ಅವಿತುಕೊಂಡುಬಿಡುತ್ತದೆ. ಈ ದಿನದ ತುಂಗನಾಥ್‌ ಯಾತ್ರೆ ಚಾರಣವಾಗಿ ಮಾತ್ರ ನಮಗೆ ಸಂತೋಷ ತಂದಿತ್ತು. ಸ್ನೋ ಪ್ಯಾಟ್ರಿಡ್ಜ್‌ ನೋಡಲಾಗಲೇ ಇಲ್ಲ. ಕಾರಣ ನಮಗಿಂತ ಮುಂಚೆ ಕೆಲವರು ಚಾರಣಕ್ಕೆ ಹೋಗಿ ಆ ಪಕ್ಷಿ ಇದ್ದ ಕಣಿವೆಯ ಹತ್ತಿರ ಹೋಗಿದ್ದರಿಂದ ಆ ಪಕ್ಷಿಗಳು ಎಲ್ಲೋ ಬೇರೆ ಕಡೆಗೆ ಹಾರಿಹೋಗಿತ್ತು. ಆದರೂ ಈ ವಯಸ್ಸಿನಲ್ಲೂ 4 ಅಡಿ ಮಂಜು ಇರುವ ಪರ್ವತವನ್ನು ನಾವು ಹತ್ತಲು ಸಾಧ್ಯವಾಯಿತೆಲ್ಲಾ ಎಂಬುದು ಸಾಕಷ್ಟು ಮುದ ನೀಡಿತು. ಛೋಪ್ಟಾ ಪ್ರವಾಸ ಇಲ್ಲಿಗೆ ಮುಗಿದಿತ್ತು, ಮಾರನೆಯ ದಿನ ಅಲ್ಲಿಂದ ನಾವು ಮಂಡಲ್‌ ಎಂಬ ಹಳ್ಳಿಗೆ ಹೊರಟೆವು. ಮಂಡಲ್‌ ಹಳ್ಳಿಯು ಪರ್ವತಗಳ ಕಣಿವೆಯಲ್ಲಿದೆ. ಒಂದು ಪರ್ವತದಿಂದ ಸ್ವಲ್ಪ ದೂರದಲ್ಲಿ ರಸ್ತೆ, ಆ ರಸ್ತೆಯ ಅಕ್ಕ ಪಕ್ಕದಲ್ಲಿ ಅಂಗಡಿಗಳು, ಹೋಟಲ್‌ಗಳು ಹಾಗೂ ಹಳ್ಳಿಯ ಮನೆಗಳು. ಈ ಮನೆಗಳ ಹಿಂದೆ ಅಂದರೆ ಸುಮಾರು 2 ಕಿಲೋಮೀಟರ್‌ ದೂರ ತೋಟ ಮತ್ತೆ ಆ ಕಡೆಯಲ್ಲಿ ಮತ್ತೊಂದು ಪರ್ವತ. ಊರಿನ ಮಧ್ಯದಲ್ಲಿ ಒಂದು ಅಹಲ್ಯಾದೇವಿಯ ದೇವಸ್ಥಾನ ಹಾಗೂ ದೇವಸ್ಥಾನದ ಪಕ್ಕದಲ್ಲಿ ರಭಸವಾಗಿ ಹಿಮಪರ್ವತದಿಂದ ಮಂಜು ಕರಗಿ ಹರಿದುಬರುತ್ತಿರುವ ನದಿ. ಮನಸ್ಸಿನಲ್ಲಿ ಈ ಎಲ್ಲಾ ದೃಶ್ಯಗಳನ್ನು ನೆನಸಿಕೊಂಡರೆ ಸಾಕು ನಾವು ಧ್ಯಾನಕ್ಕೆ ಹೋಗಬಹುದು, ಇನ್ನು ನೇರ ಈ ದೃಶ್ಯ ನೋಡಿದ ನಮ್ಮ ಮನಃಸ್ಥಿತಿ ಹೇಗಿತ್ತೆಂದು ನಿಮಗೆ ಊಹಿಸಲು ಕಷ್ಟವಾಗುವುದಿಲ್ಲ. "ಸ್ಕಾರ್ಲೆಟ್‌ ಫಿಂಚ್‌" ಎಂಬ ಟೊಮೇಟೋ ಹಣ್ಣಿನಂತೆ ಕೆಂಪಗಿರುವ ಪಕ್ಷಿಯನ್ನು ಹುಡುಕಿ ಫೋಟೋ ಕ್ಲಿಕ್ಕಿಸಿದ್ದು ಒಂದು ಸಾಹಸವೇ ಸರಿ. ಈ ಊರಿನಲ್ಲೂ ಒಳ್ಳಯ ಪಕ್ಷಿ ಛಾಯಾಗ್ರಹಣ ನಮಗೆ ಆಯಿತು ,ಆದರೆ ನಾನು ಸುಮಾರು 50 ಮನೆಗಳಿರುವ ಹಾಗೂ 500 ಜನರಿರುವ ಈ ಚಿಕ್ಕ ಊರಿನಲ್ಲಿ ಕಂಡ ಕೆಲವು ವಿಶೇಷತೆಗಳ ಬಗ್ಗೆ ನಿಮಗೆ ತಿಳಿಸಲಿಚ್ಛಿಸುತ್ತೇನೆ. ಈ ಚಿಕ್ಕ ಊರಿನಲ್ಲಿ ಇರುವ ಎಲ್ಲರೂ ಸಸ್ಯಾಹಾರಿಗಳೇ. ಇಲ್ಲಿನ ಪೂ‌ರ್ವಜರು ಯಾವುದೋ ಗ್ರಾಮದೇವತೆಗೆ ಮಾಂಸಾಹಾರ ತಿನ್ನುವುದಿಲ್ಲ ಎಂದು ಪ್ರಮಾಣ ಮಾಡಿದರಂತೆ. ಇದು ನಾವು ತಂಗಿದ್ದ ಹೋಟೆಲ್‌ ಮಾಲೀಕ ಹೇಳಿದ್ದು, ಆದರೆ ಇದಕ್ಕೆ ಯಾವುದೇ ಪುರಾವೆ ಇಲ್ಲ. ಹಾಗೆಯೇ ಊರಿನ ಹೆಸರು ಮಂಡಲ್‌ ಎಂದು ಯಾಕಿದೆ ಎಂದು ಬಹಳಷ್ಟು ಜನರನ್ನು ವಿಚಾರಿಸಿದೆವು, ಅಲ್ಲಿನವರಿಗೆ ಯಾರಿಗೂ ಗೊತ್ತಿಲ್ಲ ಅನಿಸಿತು ನನಗೆ. ಇನ್ನೊಂದು ವಿಶೇಷತೆ ಎಂದರೆ, ಬೆಳಿಗ್ಗೆ 6 ಗಂಟೆಗೆ ಊರಿನ ಸುಮಾರು 4 ವರ್ಷದಿಂದ 12 ವರ್ಷದ ಮಕ್ಕಳೆಲ್ಲಾ ನದಿಯ ತೀರದಲ್ಲಿರುವ 3 ಕಿಲೋಮೀಟರ್‌ ದೂರವಿರುವ ದೇವಸ್ಥಾನಕ್ಕೆ ಹೋಗುತ್ತಾರೆ. ಹೋಗುವೆ ದಾರಿಯಲ್ಲಿ ಸಿಗುವ ಹೂಗಿಡಗಳಿಂದ ಹೂವನ್ನು ಕಿತ್ತು ಆ ಹೂಗಳಿಂದ ದೇವರಿಗೆ ಪೂಜೆ ಮಾಡಿ ಮತ್ತೆ ವಾಪಸ್‌ ಬರುವಾಗ ಅದೇ ಹೂಗಳನ್ನು ಬುಟ್ಟಿಯಲ್ಲಿ ತಂದು ತಮ್ಮದೇ ಯಾವುದೋ ಪುಟ್ಟ ಮಂತ್ರ ಹೇಳಿ ಪ್ರತಿಯೊಂದು ಮನೆಯ ಮುಂದೆ ಹಾಗೂ ಅಂಗಡಿಗಳ ಮುಂದೆ ಹೂವನ್ನು ಎರಚುತ್ತಾರೆ. ಇದು ಹೋಲಿ ಹಬ್ಬದ ತಿಂಗಳಿನಲ್ಲಿ ಮಾತ್ರ ಹೀಗೆ ಮಾಡುತ್ತಾರೋ ಅಥವಾ ವರ್ಷಪೂರ್ತಿಯು ಹೀಗೆಯೋ ತಿಳಿಯಲಾಗಲಿಲ್ಲ. ವೀಡಿಯೋ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ಊರಿನಲ್ಲಿ ಎರಡು ರಾತ್ರಿ ತಂಗಿದ್ದೆವು. ಬೆಳಗಿನ ಹೊತ್ತೆಲ್ಲಾ ಸುಖನಿದ್ರೆಯಲ್ಲಿ ನಿದ್ರಿಸುವ ಊರಿನ ನಾಯಿಗಳು ಜಿಂಕೆಗಳು ಬಂದು ಹೊಲದ ಪಸಲು ಹಾಳುಮಾಡಬಾರದೆಂದು ರಾತ್ರಿಯೆಲ್ಲಾ ಬೊಗಳುತ್ತಲೇ ಇರುತ್ತದೆ. ಇದು ಅನಿವಾರ್ಯ. ಊರಿನವರು ಇದಕ್ಕೆ ಒಗ್ಗೆ ಹೋಗಿದ್ದಾರೆ, ಆದರೆ ಪ್ರವಾಸಿಗರಂತೆ ಹೋಗುವ ನಮಗೆ ಈ ನಾಯಿಗಳು ಬೊಗಳುವುದನ್ನು ಕೇಳುತ್ತಾ ನಿದ್ರಿಸುವುದು ತುಂಬಾ ಕಷ್ಟ. ಮಂಡಲ್‌ನಿಂದ ನಮ್ಮ ನೇರ ಪ್ರಯಾಣ ಮನೇಲಾ ಎಂಬ ಊರಿಗೆ. ಸಂಸ್ಕೃತಿಯಲ್ಲಿ ಮಂಡಲ್‌ ಹಾಗೂ ಮನೇಲಾ ಪೂರ್ತಿ ತದ್ವಿರುದ್ಧ. ಮನೇಲಾ ಬಗ್ಗೆ ಮುಂದಿನ ಸಂಚಿಕೆಯಲ್ಲಿ. ಭಾಗ 4 ಮಂಡಲ್‌ನಿಂದ ನಾವು ಹೊರಟಿದ್ದು ನೇರ ಮನೇಲಾ ಎಂಬ ಹಳ್ಳಿಗೆ. ಸುಮಾರು 8 ಗಂಟೆಗಳ ಪ್ರಯಾಣ. ಕೆಲವೊಂದು ರಸ್ತೆಗಳು ಪರ್ವತಗಳನ್ನು ಏರಿಳಿಸಿದರೆ, ಮತ್ತೆ ಕೆಲವು ರಸ್ತೆಗಳು ಕಣಿವೆಗಳಲ್ಲಿ. ಮನೇಲಾ ಹತ್ತಿರ ಬರುತ್ತಿರುವಂತೆ, ಹಿಮಾಲಯದಿಂದ ಬಹು ದೂರ ಬಂದಿರುವ ಅರಿವಾಗುತ್ತಿತ್ತು. ಮನೇಲಾ, ಬೆಟ್ಟದ ಮೇಲಿರುವ ಒಂದು ಪುಟ್ಟ ಗ್ರಾಮ. ಪ್ರವಾಸೋದ್ಯಮ ಹಾಗೂ ವ್ಯವಸಾಯ ಬಿಟ್ಟು ಬೇರೇನೂ ಇಲ್ಲಿ ನನಗೆ ಕಾಣಸಿಗಲಿಲ್ಲ. ಜನಸಂಖ್ಯೆಯಲ್ಲಿ (ಸುಮಾರು 500 ಜನ) ಮತ್ತು ಹಳ್ಳಿಯ ವಿಸ್ತೀರ್ಣದಲ್ಲಿ (ಒಟ್ಟಾರೆ ಎರಡು ರಸ್ತೆಗಳು) ಮನೇಲಾ ಹಾಗೂ ಮಂಡಲ್‌ನಲ್ಲಿ ಸಾಕಷ್ಟು ಸಾಮ್ಯತೆ ಇದ್ದರೂ, ಬೇರೆ ಎಲ್ಲಾ ರೀತಿಯಲ್ಲೂ ತದ್ವಿರುದ್ದವಾದ ಹಳ್ಳಿಗಳು. ಅದು ಹೇಗೆಂದರೆ ಮಂಡಲ್‌ ಕಣಿವೆಯಲ್ಲಿದ್ದರೆ ಮನೇಲಾ ಬೆಟ್ಟದ ಮೇಲಿದೆ ಮಂಡಲ್‌ನಲ್ಲಿ ಎಲ್ಲರೂ ಸಸ್ಯಹಾರಿಗಳೇ, ಮನೇಲಾದಲ್ಲಿ ಎಲ್ಲೂ ಸಸ್ಯಹಾರಿ ಹೋಟಲ್‌ ಇಲ್ಲವೇ ಇಲ್ಲ. ಮಂಡಲ್‌ನಲ್ಲಿ ನಿಮಗೆ ನಿಶ್ಯಬ್ದ ವಾತಾವರಣ, ಮನೇಲದಲ್ಲಿ ಬರೇ ಜನ ಜಾತ್ರೆ ಮಂಡಲ್‌ನಲ್ಲಿ ದೇವಸ್ಥಾನ, ಸಂಸ್ಕೃತಿಗೆ ಹೆಚ್ಚೆನ ಆದ್ಯತೆ, ಮನೇಲಾದಲ್ಲಿ ವ್ಯಾಪಾರ, ಹೆಂಡದಂಗಡಿ, ಮಾಂಸದಂಗಡಿಗಳದೇ ದರ್ಬಾರು ಹೇಳುತ್ತಾ ಹೋದರೆ ಇನ್ನೂ ಹೆಚ್ಚು ಹೇಳಬಹುದು, ಆದರೆ ಸದ್ಯಕ್ಕೆ ಇಷ್ಟು ಸಾಕು. ಮನೇಲಾದಲ್ಲಿ ನಾವು ಉಳಿದುಕೊಂಡಿದ್ದ ಹೋಟಲ್‌ ರೂಮ್‌ ತುಂಬಾ ಚೆನ್ನಾಗಿತ್ತು. ಗೀಸರ್‌, ಟಿವಿ, ಕರ್ಲಾನ್‌ ಹಾಸಿಗೆ ಎಲ್ಲವೂ ಮೆಚ್ಚುಗೆಯಾಯಿತು. ಹಿಮಾಲಯದಿಂದ ದೂರ ಬರುತ್ತಿದ್ದಂತೆ ಮನಃಶಾಂತಿ ಕಡಿಮೆಯಾಗುತ್ತಾ ಸೌಕರ್ಯಗಳು ಹೆಚ್ಚು ಸಿಗುತ್ತದೆ ಅಲ್ಲವೇ. ಮನೇಲಾದಲ್ಲಿ ನನಗೆ ದೊಡ್ಡ ಸಮಸ್ಯೆಯಾಗಿದ್ದೆಂದರೆ, ನಾವು ಉಳಿದುಕೊಂಡಿದ್ದ ರೂಮಿನ ಕೆಳಗೇ ಹೋಟಲ್ಲಿನ ಅಡುಗೆ ಮನೆ ಹಾಗೂ ರಾತ್ರಿ 9 ಗಂಟೆ ವರೆಗೂ ಮಾಂಸಾಹಾರ ಖಾದ್ಯದ ತಯಾರಿ. ನನಗೆ ಆ ವಾಸನೆ ಆಗದಿದ್ದರಿಂದ ತೊಂದರೆಯಾಯಿತು. ಮನೇಲಾದಲ್ಲಿ ನಮ್ಮದು ಒಂದು ದಿನದ ವಾಸವಷ್ಟೇ ಆಗಿದ್ದರಿಂದ ಹೆಚ್ಚೇನೂ ಚಿಂತೆ ಮಾಡಲಿಲ್ಲ.. ಈ ಮನೇಲಾ ಹಳ್ಳಿಯಲ್ಲಿ ನಾವು ನೋಡಬೇಕಿದ್ದ ಪಕ್ಷಿ ಚೀರ್‌ ಫೆಸೆಂಟ್‌ ಎಂಬ ಒಂದು ಕೋಳಿ ಜಾತಿಯ ಪಕ್ಷಿ. ಪ್ರಪಂಚದ ಮೂಲೆಮೂಲೆಗಳಿಂದ ಈ ಪಕ್ಷಿಯನ್ನು ನೋಡಲು ಪಕ್ಷಿ ಪ್ರಿಯರು ಮನೇಲಾಗೆ ಬರುತ್ತಾರೆ. ಪ್ರಪಂಚದ ಕೆಲವೇ ಕೆಲವು ಭಾಗಗಳಲ್ಲಿ ಮಾತ್ರ ಈ ಪಕ್ಷಿ ಕಾಣಸಿಗುತ್ತದೆ. ಮನೇಲಾ ನಾವು ಪ್ರವೇಶಿಸುತ್ತಿದ್ದಂತೆಯೇ ನಮಗೆ ಸುಮಾರು ಮುನ್ನೂರು ಅಡಿ ದೂರದಲ್ಲಿ ಈ ಪಕ್ಷಿ ಕಾಣಿಸಿತು. ತನ್ನ ಪಾಡಿಗೆ ತಾನು ಕೂಗುತ್ತಾ ಕುಳಿತಿದ್ದ ಪಕ್ಷಿಯನ್ನು ಒಂದು ನಾಯಿ ಅಟ್ಟಿಸಿಕೊಂಡು ಹೋಗಿದ್ದರಿಂದ ಅದು ಹಾರಿ ಹೋಗಿ ಮತ್ತೆ ನಮಗೆ ಇದರ ದರ್ಶನವಾಗಲೇ ಇಲ್ಲ. ರಸ್ತೆ ಬದಿಯಲ್ಲಿದ್ದ ಹನುಮನ ಚಿಕ್ಕ ಗುಡಿಯ ಹತ್ತಿರ ಸುಮಾರು 3 ಗಂಟೆಗಳ ಕಾಲ ಈ ಪಕ್ಷಿಗಾಗಿ ಕಾದೆವು, ಅದರ ಧ್ವನಿ ಎಲ್ಲೋ ಪಾತಾಳದಲ್ಲಿ ಕೇಳಿಸುತ್ತಿತ್ತಷ್ಟೆ. ಈ ಜಾಗದಲ್ಲಿ ಕೆಲವರು ನಾಯಿ ಸಾಕಿ ಅದನ್ನು ಉಪಯೋಗಿಸಿಕೊಂಡು ಈ ಚೀರ್‌ ಫೆಸೆಂಟ್‌ ಪಕ್ಷಿಯನ್ನು ಹಿಡಿದು ಆಹಾರವಾಗಿ ಬಳಸಿಕೊಳ್ಳುತ್ತಾರೆ ಎಂದು ನಮಗೆ ಸ್ಥಳೀಯರು ತಿಳಿಸಿದರು. ಇದು ಕಾನೂನಿಗೆ ವಿರುದ್ದವೇ, ಗೊತ್ತಿಲ್ಲ, ಆದರೆ ಪಕ್ಷಿ ಪ್ರಿಯರಿಗಂತೂ ಅರಗಿಸಿಕೊಳ್ಳಲಾಗದ ಕಟು ಸತ್ಯ. ಚೀರ್‌ ಫೆಸೆಂಟ್‌ ಪಕ್ಷಿ ಬಹಳ ದೂರವಿದ್ದಿದ್ದರಿಂದ ನಾನು ಕ್ಲಿಕ್ಕಿಸಿದ ಈ ಪಕ್ಷಿಯ ಫೋಟೋ ಅಷ್ಟೇನೂ ಚೆನ್ನಾಗಿ ಬಂದಿಲ್ಲ, ಹಾಗಾಗಿ ನನ್ನ ಗೆಳೆಯ ಸಂತೋಷ್ ಕ್ಲಿಕ್ಕಿಸಿದ ಈ ಪಕ್ಷಿಯ ಫೋಟೋ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ವಾಣಿಜ್ಯದ ಕಂಪನಗಳೇ ಹೆಚ್ಚಿದ್ದ ಈ ಮನೇಲಾದಲ್ಲಿ ನಮಗೂ ಹೆಚ್ಚು ಸಮಯ ಕಳೆಯಬೇಕೆಂದೆನಿಸಲಿಲ್ಲ, ಹಾಗಾಗಿ ನೇರ ಸಾತ್‌ತಾಲ್‌ ಎಂಬ ಊರಿಗೆ ಪ್ರಯಾಣ ಬೆಳೆಸಿದೆವು. ನೈನಿತಾಲ್‌ ನಿಂದ ಸುಮಾರು 50 ಕಿಲೋಮೀಟರ್‌ ದೂರದಲ್ಲಿರುವ ಹಾಗೂ ಕಾತ್‌ಗೋದಾಮ್‌ ರೈಲ್ವೇ ನಿಲ್ದಾಣದಿಂದ ಸುಮಾರು 30 ಕಿಲೋಮೀಟರ್‌ ದೂರವಿರುವ ಊರು ಸಾತ್‌ತಾಲ್. ಹೆಸರೇ ಸೂಚಿಸುವ ಹಾಗೆ ಸಾತ್‌ತಾಲ್‌ 7 ಕೆರೆಗಳು ಇರುವ ಜಾಗ. ಸಾತ್‌ ತಾಲ್‌ ಪ್ರವೇಶಿಸುತ್ತಿದ್ದಂತೆ ನಮಗೆ ನಳದಮಯಂತಿ ಹಾಗೂ ಗರುಡ ಕೆರೆಗಳು ಸಿಗುತ್ತದೆ. ಸ್ವಲ್ಪ ಹಾಗೇ ಮುಂದೆ ಹೋದರೆ ರಾಮ, ಲಕ್ಷ್ಮಣ ಮತ್ತು ಸೀತೆಯ ಹೆಸರಿನಲ್ಲಿರುವ ಕೆರೆಗಳು ಸಿಗುತ್ತದೆ. ಆಮೇಲೆ ಪೂರ್ಣ ಮತ್ತು ಶುಕ ಎಂಬ ಎರಡು ಕೆರೆಗಳು ಸಿಗುತ್ತದೆ. ಪಕ್ಷಿಪ್ರಿಯರಿಗೆ ಇದು ಸ್ವರ್ಗವೇ ಸರಿ. ಇಲ್ಲಿಗೆ ಪ್ರವಾಸ ಬರುಲು ಪ್ರತಿವರ್ಷ ಅಕ್ಟೋಬರ್‌ನಿಂದ ಜೂನ್‌ವರೆಗೆ ಸೂಕ್ತವಾದ ಸಮಯ. ಪಕ್ಷಿ ವೀಕ್ಷಕರು ನವೆಂಬರ್‌ನಿಂದ ಮಾರ್ಚ್‌ವರೆಗೆ ಮಾತ್ರ ಬರುತ್ತಾರೆ. ಇಲ್ಲಿನ ಸಾಕಷ್ಟು ಗೈಡ್‌ಗಳು ತಮ್ಮದೇ ಹೋಟಲ್‌ ಕಟ್ಟಿಸಿ ಅದರೊಳಗೆ ಸ್ಟೂಡಿಯೋ ಅಥವಾ ಹೈಡ್‌ ನಿರ್ಮಿಸಿರುತ್ತಾರೆ. ಈ ಹೈಡ್‌ನಲ್ಲಿ ಪಕ್ಷಿಗಳಿಗೆ ಸ್ನಾನ ಮಾಡಲು, ನಂತರ ಮರದ ಕೊಂಬೆಯ ಮೇಲೆ ಕುಳಿತು ರೆಕ್ಕೆ ಪುಕ್ಕಗಳನ್ನು ಬಿಸಿಲಿನಲ್ಲಿ ಒಣಗಿಸಿಕೊಳ್ಳಲು ಸೂಕ್ತವಾದ ವಾತಾವರಣವನ್ನು ನಿರ್ಮಿಸುತ್ತಾರೆ. ಚಿಕ್ಕದಾದ ನೀರಿನ ಹೊಂಡ ಮತ್ತು ಅದರ ಪಕ್ಕದಲ್ಲೇ ಮುರಿದು ಹೋದ ಮರದ ಕೊಂಬೆಗಳನ್ನು ಸಿಕ್ಕಿಸಿರುತ್ತಾರೆ. ಇಷ್ಟೇ ಇದ್ದರೆ ಪಕ್ಷಿ ಬರಲು ಸಾಧ್ಯವೇ? ದಿನವೂ ನಿಗದಿತ ಸಮಯಕ್ಕೆ ಪಕ್ಷಿಗಳು ಬರಬೇಕಾದ ಜಾಗಕ್ಕೆ ಹಣ್ಣು, ಕಾಳು ಹಾಗೂ ಕಾಳುಗಳ ಪುಡಿಗಳನ್ನು ಹಾಕುತ್ತಾರೆ. ಈ ಆಹಾರ ನೀಡುವ ಕೆಲಸ ಒಂದು ದಿನವೂ ಬಿಡುವ ಹಾಗಿಲ್ಲ. ಹೋಟೆಲ್‌ನಲ್ಲಿ ಅತಿಥಿಗಳು ಇರಲಿ ಇಲ್ಲದೇ ಇರಲಿ, ಪಕ್ಷಿಗಳಿಗೆ ಪ್ರತಿದಿನ ಆಹಾರವಂತೂ ಹಾಕಲೇ ಬೇಕು, ಇಲ್ಲವಾದರೆ ಅವು ಈ ಜಾಗಕ್ಕೆ ಭೇಟಿ ನೀಡುವುದನ್ನು ನಿಲ್ಲಿಸಿಬಿಡುತ್ತದೆ. ಪರಂಗಿ ಹಣ್ಣು ಮತ್ತು ಬಾಳೆಹಣ್ನು ಪಕ್ಷಿಗಳಿಗೆ ತುಂಬಾ ಪ್ರಿಯವಾದದ್ದು.. ಪಕ್ಷಿಗಳು ಬರುವ ಜಾಗದಿಂದ ಸುಮಾರು 15 ಅಡಿ ದೂರದಲ್ಲಿ ಒಂದು ಹಸುರಿನ ಪರದೆ ಹಾಕಿರುತ್ತಾರೆ, ಅದರ ಹಿಂದೆ ಒಂದು ಶೆಡ್‌ ರೀತಿ ಜಾಗ ಇರುತ್ತದೆ. ಅದರೊಳಗೆ ನಾವು ಕುಳಿತು, ಆ ಹಸುರಿನ ಪರದೆಯಲ್ಲಿರುವ ಕಿಂಡಿಗಳಲ್ಲಿ ನಮ್ಮ ಕ್ಯಾಮೆರಾ ಲೆನ್ಸ್‌ ತೂರಿಸಿ ಪಕ್ಷಿಗಳ ಫೋಟೋಗಳನ್ನು ತೆಗೆಯುವುದು. ಕ್ಯಾಮೆರಾ ಟ್ರೈಪಾಡ್‌ ಮೇಲೆ ಕುಳಿತಿರುವುದರಿಂದ‌, ಪಕ್ಷಿಗಳ ಹಿಂಬದಿಯಲ್ಲಿ ಹಸುರಿನ ಗಿಡಮರಗಳಿರುವುದರಿಂದ ಹಾಗೂ ಪಕ್ಷಿಗಳು ಬಹಳ ಹತ್ತಿರವಿರುವುದರಿಂದ ಫೋಟೋಗಳ ಗುಣಮಟ್ಟವೂ ಅತ್ಯುತ್ತಮವಾಗಿರುತ್ತದೆ. ಸಾತ್‌ತಾಲ್‌ನಲ್ಲಿ ನಾವು ಉಳಿದುಕೊಂಡಿದ್ದು ಬರ್ಡರ್ಸ್‌ ಡೆನ್‌ ಎಂಬುವ ರೆಸಾರ್ಟ್‌ನಲ್ಲಿ. ಇದು ಚಿಕ್ಕ ಬೆಟ್ಟದ ಮೇಲಿದ್ದ ಒಂದು ರೆಸಾರ್ಟ್. ಇಲ್ಲಿನ ರೂಮ್‌ಗಳು ಹಾಗೂ ಸೌಕರ್ಯಗಳೂ ಪಂಚತಾರ ಹೋಟೆಲ್‌ನಂತೆ ಇತ್ತು. ರೂಮಿನ ಬಾಲ್ಕನಿಯಿಂದ ನೋಡಿದರೆ ಸಾಲು ಸಾಲಾಗಿ ಬೆಟ್ಟ ಗುಡ್ಡಗಳು. ಈ ಹೋಟೆಲ್‌ನಲ್ಲಿ ನಮಗಿಂತ ಮುಂಚೆಯೇ ಬೆಂಗಳೂರಿನಿಂದ ಬಂದಿದ್ದ 8 ಜನ ಶ್ರೀಮಂತ ವಯೋವೃದ್ದರ ಗುಂಪೊಂದು ಇತ್ತು. ಒಬ್ಬೊಬ್ಬರ ಬಳಿಯೂ ಕನಿಷ್ಟ 8ರಿಂದ 10 ಲಕ್ಷ ರೂಪಾಯಿ ಮೌಲ್ಯದ ಕ್ಯಾಮೆರಾಗಳಿದ್ದವು. ಇವರುಗಳೆಲ್ಲ ನುರಿತ ಪಕ್ಷಿ ಛಾಯಾಗ್ರಾಹಕರಾಗಿದ್ದು ವರ್ಷಕ್ಕೊಮ್ಮೆ ಈ ಜಾಗಕ್ಕೆ 3ರಿಂದ 5 ದಿನ ಪ್ರವಾಸ ಮಾಡುತ್ತಾರಂತೆ. ಹೋಟೆಲ್‌ನಲ್ಲಿ ಎಲ್ಲೆಲ್ಲೂ ಕನ್ನಡ ಭಾಷೆಯೇ ಕೇಳುತ್ತಿತ್ತು. ಎಷ್ಟೇ ಭಾಷಾಭಿಮಾನವಿದ್ದರೂ, ಪಕ್ಷಿ ಛಾಯಾಗ್ರಹಣವೇ ಪ್ರಮುಖವಾದ್ದರಿಂದ ಆತ್ಮೀಯತೆ ಬೆಳೆಸಿಕೊಳ್ಳುವುದಾಗಲಿ ಅಥವಾ ಪರಿಚಯಗಳನ್ನು ಮಾಡಿಕೊಳ್ಳುವುದಾಗಲಿ ಈ ವಲಯದಲ್ಲಿ ಹೆಚ್ಚು ಇರುವುದಿಲ್ಲ. ಹಾಗೇನಾದರು ಮಾತನಾಡುವುದಾದರೂ ಅದು ಆ ದಿನದಲ್ಲಿ ಅವರು ನೋಡಿದ ಪಕ್ಷಿಗಳು ಹಾಗೂ ನಾವು ನೋಡಿದ ಪಕ್ಷಿಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವುದಷ್ಟೆ. ನಮ್ಮ ಪೂರ್ಣ ಪ್ರವಾಸದ ಶೇಕಡ 70ರಷ್ಟು ಪಕ್ಷಿವೀಕ್ಷಣೆ ಸಾತ್‌ತಾಲ್‌ನಲ್ಲೇ ಅದದ್ದು. ಹೈಡ್‌ ಅಥವಾ ಸ್ಟೂಡಿಯೋ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಕೆಲವು ಪ್ರದೇಶಗಳಿಗೂ ಹೋಗಿದ್ದೆವು. ಛಾಫೀ ಅಲ್ಲೇ ಹತ್ತಿರದಲ್ಲಿ ಹರಿಯುವ ಒಂದು ನದಿ. ಕಲ್ಲು ಬಂಡೆಗಳ ಮೇಲೆ ಕುಳಿತು, ನದಿಯ ತಣ್ಣನೆಯ ನೀರಿನಲ್ಲಿ ಕಾಲು ಚಾಚಿ ಆ ಸುತ್ತಲಿನ ಪ್ರಕೃತಿ ಸೌಂದರ್ಯ ನೋಡುತ್ತಿದ್ದರೆ, ಪಕ್ಷಿ ವೀಕ್ಷಣೆ ಮಾಡುವುದೂ ಮರೆತುಹೋಗುತ್ತಿತ್ತು. ಈ ಸೌಂದರ್ಯವನ್ನು ಅನುಭವಿಸುವುದು ಬಿಟ್ಟು ಕಣ್ಮುಚ್ಚಿ ಧ್ಯಾನ ಮಾಡಲು ಇದು ಯೋಗ್ಯವಾದ ಸ್ಥಳ ಎಂದು ಯಾರದರೂ ಹೇಳಿದರೆ ಅವರಿಗಿಂತ ಮೂರ್ಖರು ಈ ಪ್ರಪಂಚದಲ್ಲಿಲ್ಲ ಎಂದರ್ಥ. ಹೆಚ್ಚಿನ ಉಡುಪುಗಳು ತೆಗೆದುಕೊಂಡು ಹೋಗದ ಕಾರಣ ನದಿಯಲ್ಲಿ ಸ್ನಾನ ಮಾಡಲಾಗಲಿಲ್ಲ. ಸಾತ್‌ತಾಲ್‌ನ ಮತ್ತೊಂದು ಪಕ್ಷಿವೀಕ್ಷಣಾ ಸ್ಥಳವೆಂದರೆ ಅಲ್ಲೇ ಒಂದು ಕೆರೆಯ ಪಕ್ಕದಲ್ಲಿ ಇದ್ದ ಹಳೆಯ ಸ್ಮಶಾನ. ಈಗ ಸದ್ಯ ಅದನ್ನು ಉಪಯೋಗಿಸುತ್ತಿಲ್ಲದಿದ್ದರೂ ಒಂದೆರೆಡು ಸಮಾಧಿಗಳನ್ನಂತೂ ನೋಡಿದೆವು. ಗ್ರೀನ್‌ ಮ್ಯಾಗ್‌ಪೈ ಎಂಬ ಒಂದು ಪಕ್ಷಿಗಾಗಿ ಇಲ್ಲೇ ಸ್ಮಶಾನದಲ್ಲಿ ಸುಮಾರು ಒಂದು ಗಂಟೆ ಕಾದು ಕುಳಿತೆವು. ಎಷ್ಟೋ ವರ್ಷಗಳ ಹಿಂದೆ ಅರ್ಧಂಬರ್ಧ ಉರಿದು ಹೋಗಿದ್ದ ಕಟ್ಟಿಗೆಯೇ ನಮ್ಮ ಸಿಂಹಾಸನ. ಅಷ್ಟು ಕಾದಿದ್ದಕ್ಕೂ ಆ ಪಕ್ಷಿ ನಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕದ್ದು ನಮ್ಮ ಅದೃಷ್ಟ. ಒಟ್ಟಿನಲ್ಲಿ ಸಾತ್‌ತಾಲ್‌ ನಮ್ಮೆಲ್ಲರ ಪಕ್ಷಿವೀಕ್ಷಣೆಯ ಹಸಿವನ್ನು ಸಾಕಷ್ಟು ಮಟ್ಟಿಗೆ ನೀಗಿಸಿತ್ತು. ನಾವು ಉಳಿದುಕೊಂಡಿದ್ದ ಹೋಟಲ್‌ನಲ್ಲಿ ಊಟ ವಸತಿ ಎಲ್ಲವೂ ಸೇರಿ ಒಂದು ದಿನಕ್ಕೆ ಒಬ್ಬರಿಗೆ 3500 ರೂಪಾಯಿಗಳು. ವರ್ಷಕ್ಕೊಮ್ಮೆಯೋ ಅಥವಾ ಎರಡು ವರ್ಷಕ್ಕೊಮ್ಮೆ ಒಂದೆರೆಡು ದಿನ ಹೋಗಿಬರಲು ಒಳ್ಳೆಯ ಪ್ರವಾಸಿ ತಾಣ. ಬೆಂಗಳೂರಿನಿಂದ ವಿಮಾನದಲ್ಲಿ ದೆಹಲಿ ತಲುಪಿ ಅಲ್ಲಿಂದ ಕಾತ್‌ಗೋದಾಮ್‌ಗೆ ರೈಲಿನಲ್ಲಿ ಹೋದರೆ, ರೈಲ್ವೇ ನಿಲ್ಲದಾಣದಿಂದ ನಿಮ್ಮನ್ನು ಸಾತ್‌ತಾಲ್‌ಗೆ ಕರೆತರಲು, ಮುಂಗಡವಾಗಿ ತಿಳಿಸಿ ಹಣನೀಡಿದರೆ ಹೋಟಲ್‌ನವರೆ ಗಾಡಿ ಒದಗಿಸುತ್ತಾರೆ, ಕಡೆಯ ದಿನ ಗೆಳೆಯರೆಲ್ಲಾ ಕುಳಿತು ಮುಂದಿನ ಪಕ್ಷಿವೀಕ್ಷಣಾ ಪ್ರವಾಸ ರಾಜಸ್ಥಾನದ ಭರತಪುರ್‌ ಎಂದು ನಿರ್ಧರಿಸಿ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು. ಊಟದ ವಿಷಯದಲ್ಲಿ ನನ್ನ ಕಠಿಣವಾದ ಆಯ್ಕೆಗಳಿಗೆ ಒಪ್ಪಿಕೊಂಡು ಹಾಗೂ ಪ್ರವಾಸದುದ್ದಕ್ಕೂ ನನ್ನ ಎಡಬಿಡದ ಮಾತುಗಳನ್ನು ಕೇಳಿ ಸಹಿಸಿಕೊಂಡ ನನ್ನ ಪ್ರವಾಸಿ ಮಿತ್ರರಾದ ಸಂತೋಷ್‌, ಗೌರಿಶಂಕರ, ರಾಮ್‌, ಅಭಿಜಿತ್‌ ಮತ್ತು ಮುರಳಿಯವರಿಗೆ ನನ್ನ ಧನ್ಯವಾದಗಳನ್ನು ತಿಳಿಸಲೇಬೇಕು. ಸಮನ್ವಯ ಸಮಿತಿ ಕನ್ನಡವೇ ಸತ್ಯ ಸದಸ್ಯರ ನಿರಂತರ ಪ್ರೇರಣೆ ಹಾಗೂ ನನ್ನ ಲೇಖನಗಳಿಗೆ ಸದಾ ಹೊಗಳಿಕೆಯ ಮಾತುಗಳನ್ನು ನೀಡುತ್ತಿರುವ ನನ್ನ ಹಲವು ಗೆಳೆಯರೇ ಈ ಪ್ರವಾಸಗಳನ್ನು ಮಾಡುವುದಕ್ಕೂ ಹಾಗೂ ಅದನ್ನು ಪ್ರವಾಸ ಕಥನದ ಮೂಲಕ ದಾಖಲಿಸುವುದಕ್ಕು ಕಾರಣರಾಗಿದ್ದಾರೆ. ಎಲ್ಲರಿಗೂ ನನ್ನ ಹೃದಯಾಂತರಾಳದಿಂದ ಧನ್ಯವಾದಗಳು. ಮನೇಲಾ, ಸಾತ್‌ತಾಲ್‌ ಹಾಗೂ ಇನ್ನಿತರ ಜಾಗಗಳಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ನಾಲ್ಕು ಭಾಗಗಳಲ್ಲಿ ಬಂದ ನನ್ನ ಈ ಛೋಪ್ಟಾ ಹಾಗೂ ಸಾತ್‌ತಾಲ್‌ ಪ್ರವಾಸ ಲೇಖನವನ್ನು ಕೊನೆ‌ ಮಾಡುತ್ತಿದ್ದೇನೆ. ******************
ಅನಿಸಿಕೆಗಳು