ಗುರುರಾಜ
ಶಾಸ್ತ್ರಿ
ಹಿಮದ ಗೋಪಾಲಸ್ವಾಮಿ ಬೆಟ್ಟ ಹಾಗೂ ಬಂಡಿಪುರ
24-07-2021
ಸಾಮಾನ್ಯವಾಗಿ ನಾನು ಮಾಡುವ ಪ್ರವಾಸಗಳಲ್ಲಿ ಏಕ ದಿನ ಪ್ರವಾಸಗಳು ಬಹಳ ಕಡಿಮೆ. ಆದರೆ ಎಲ್ಲರೂ ಹೆಚ್ಚಾಗಿ ಹೊಗಳುತ್ತಿದ್ದ ಹಾಗೂ ಕರ್ನಾಟಕದಲ್ಲಿ ಇದ್ದು ಗೋಪಾಲಸ್ವಾಮಿ ಬೆಟ್ಟ ನೋಡಿಲ್ಲವೇ ಎಂದು ಹಂಗಿಸುತ್ತಿದ್ದ ಗೆಳೆಯರ ಮಾತನ್ನು ಕೇಳುತ್ತಾ ಹೇಗಾದರು ಒಂದು ಭಾರಿಯಾದರು ಬೆಟ್ಟವನ್ನು ನೋಡೇಬಿಡಬೇಕೆಂದು ನಿರ್ಧರಿಸಿದೆ. 6ನೇ ನವೆಂಬರ್‌ 2019 ಗೋಪಾಲಸ್ವಾಮಿ ಬೆಟ್ಟಕ್ಕೆ ಗೆಳೆಯರು ಹೋಗುತ್ತಿದ್ದು ನನಗೂ ಆಹ್ವಾನ ಬಂತು. ಸ್ವಲ್ಪ ಜ್ವರ ಇದ್ದದ್ದರಿಂದ ಹೋಗುವುದೋ ಬೇಡವೋ ಎಂದು ಯೋಚಿಸುತ್ತಿದ್ದೆ. ಆದರೆ ನಾನು ಎಂದೂ ನೋಡದ ಯಾವುದೆ ಸ್ಥಳಕ್ಕೆ ಪ್ರವಾಸ ಹಾಕಿದರೆ ನಾನು ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಜ್ವರಕ್ಕೆ ಮಾತ್ರೆ ತೆಗೆದುಕೊಂಡು ಪ್ರವಾಸಕ್ಕೆ ಹೋಗಲು ತಯಾರಾದೆ. ಬೆಳಗ್ಗೆ 4.30ಕ್ಕೆ ಬೆಂಗಳೂರಿನಿಂದ ಕಾರಿನಲ್ಲಿ ಹೊರೆಟೆವು. 6.30ಕ್ಕೆ ಮೈಸೂರು ತಲುಪಿ ಅಲ್ಲೇ ತಿಂಡಿ ತಿಂದು ಪ್ರವಾಸ ಮುಂದುವರೆಸಿದೆವು. ನಂಜಿನಗೂಡಿನ ಮೂಲಕ, ಗುಂಡ್ಲುಪಾಳ್ಯಕ್ಕೆ ಹೋಗಿ ಅಲ್ಲಿಂದ ಹತ್ತು ಕಿಲೋಮೀಟರ ದೂರವಿರುವ ಬೆಟ್ಟದ ತಪ್ಪಲು ತಲುಪಿದೆವು. ಹಿಂದೆ ಬೆಟ್ಟವನ್ನು ಹತ್ತಿ ದೇವಸ್ಥಾನ ವೀಕ್ಷಿಸಲು ಪ್ರವಾಸಿಗರು ತಮ್ಮ ವಾಹನಗಳನ್ನೇ ತೆಗೆದುಕೊಂಡು ಹೋಗಬಹುದಿತ್ತು. ಆದರೆ ಪ್ರವಾಸಿಗರು ಮಾರ್ಗ ಮಧ್ಯದಲ್ಲಿ ಇಳಿದು ಊಟ ಮಾಡಿ ಕಾಡನ್ನೆಲ್ಲಾ ಹಾಳು ಮಾಡುತ್ತಿದ್ದರು, ಅಲ್ಲದೇ ಪ್ಲಾಸ್ಟಿಕ್‌ ಬಾಟಲಿಗಳನ್ನು ಎಸೆದು ಪರಿಸರ ಮಾಲಿನ್ಯ ಮಾಡುತ್ತಿದ್ದರು. ಹಾಗಾಗಿ, ಈಗ ಸರ್ಕಾರ ಸರ್ಕಾರಿ ಬಸ್ಗಳನ್ನು ಬೆಟ್ಟ ಏರಲು ವ್ಯವಸ್ಥೆ ಮಾಡಿದ್ದಾರೆ. ಅರ್ಧ ಗಂಟೆಗೆ ಒಮ್ಮೆ ಈ ಬಸ್ಗಳು ಹೊರಡುತ್ತದೆ. ಒಂದು ಮಾರ್ಗ 6 ಕಿಲೋಮೀಟರ್‌ ಇದ್ದು ದೇವಸ್ಥಾನಕ್ಕೆ ಹೋಗಿ ಬರಲು ಐವತ್ತು ರೂಪಾಯಿ ಮಾತ್ರ. ಬೆಳಗ್ಗೆ 8.30ರಿಂದ ಸಂಜೆ 4 ಗಂಟೆ ವರೆಗೆ ಈ ವ್ಯವಸ್ಥೆ ಇರುತ್ತದೆ, ಬೇರೆ ಸಮಯದಲ್ಲಿ ಯಾರಿಗೂ ಬೆಟ್ಟ ಹತ್ತಲು ಅನುಮತಿಯಿಲ್ಲ. ವರ್ಷದ 365 ದಿನಗಳೂ ಈ ಬೆಟ್ಟದ ಸುತ್ತಲೂ ಹಿಮವನ್ನು ಕಾಣಬಹುದು. ಹಾಗಾಗಿಯೇ ಇದನ್ನು ಹಿಮದ ಅಥವಾ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಎಂದು ಕರೆಯುತ್ತಾರೆ. ಬೆಟ್ಟದ ಮೇಲಿರುವ ದೇವರು ಹಿಮದ ವೇಣುಗೋಪಾಲಸ್ವಾಮಿ. ಬಹು ಅಚ್ಚುಕಟ್ಟಾಗಿ ಕೆತ್ತನೆ ಮಾಡಿರುವ ಸುಂದರ ಮೂರ್ತಿಯ ಎತ್ತರ ಮೂರು ಅಡಿ ಇರಬಹುದು ಅಷ್ಟೆ. 1315ನೇ ಇಸವಿಯಲ್ಲಿ ಚೋಳರ ರಾಜನಾದ ಬಲ್ಲಾಳನು ಈ ದೇವಸ್ಥಾನವನ್ನು ಕಟ್ಟಿದನೆಂದು ಇತಿಹಾಸ ಹೇಳುತ್ತದೆ. ಅಗಸ್ತ್ಯ ಮುನಿಗಳು ಇಲ್ಲಿ ತಪಸ್ಸು ಮಾಡಿದರೆಂದು ಹಾಗೂ ವಿಷ್ಣುವು ಇಲ್ಲೇ ನೆಲೆಸುವೆನೆಂದು ತಿಳಿಸಿದನೆಂಬುದು ಇನ್ನೊಂದು ನಂಬಿಕೆ. ಕೃಷ್ಣನು ನೃತ್ಯ ಮಾಡುತ್ತಿರುವಂತೆ ವಿಗ್ರಹವನ್ನು ಕೆತ್ತಲಾಗಿದೆ. ಜೊತೆಗೆ ರುಕ್ಮಿಣಿ, ಸತ್ಯಭಾಮರ ಹಾಗೂ ಮಕರಂದರ ವಿಗ್ರಹಗಳು ಸಣ್ಣದಾಗಿ ಸೇರಿಕೊಂಡಿದೆ. ನಾನು ಇತ್ತೀಚೆಗೆ ಕಲಿತಿದ್ದ ನಾರಾಯನ ಉಪನಿಷತ್‌ ಈ ಗೋಪಾಲಸ್ವಾಮಿಯ ಮುಂದೆ ಹೇಳುವ ಅವಕಾಶ ನನಗೆ ಸಿಕ್ಕಿತು. ನೋಡಿದಷ್ಟು ಇನ್ನೂ ಹೆಚ್ಚು ನೋಡಬೇಕೆನ್ನುವಂತಿದೆ ಆ ಭಗವಂತನ ಮೂರ್ತಿ. ದೇವಸ್ಥಾನದಿಂದ ಸುತ್ತಲೂ ಕಣ್ಣು ಹಾಯಿಸಿದಷ್ಟೂ ದೂರವೂ ದಟ್ಟ ಕಾಡೇ. ಅದ್ಭುತವಾದ ಬೆಟ್ಟ ಹಾಗೂ ಕಣಿವೆಗಳು ಕಣ್ಣುಗಳನ್ನು ತಂಪು ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಬೆಳಗ್ಗೆ 11.30ಕ್ಕೆ ಮುಜರಾಯಿ ಇಲಾಖೆಯಿಂದ ಇಲ್ಲಿ ಊಟದ ವ್ಯವಸ್ಥೆ ಇದೆ. ದೇವಸ್ಥಾನದ ಪುರೋಹಿತರ ಉಸ್ತುವಾರಿಯಲ್ಲಿ ಊಟ ತಯಾರಾಗುತ್ತದೆ. ಬಿಸಿ ಬಿಸಿ ಅನ್ನ, ಹೆಚ್ಚಾಗಿ ತರಕಾರಿ ಕಾಣುವ ಹುಳಿ, ಅಕ್ಕಿ ಕಡ್ಲೇಬೇಳೆ ಪಾಯಸ ಮತ್ತು ಪುಳಿಯೋಗರೆ, ಇಲ್ಲಿ ದಿನಾ ತಯಾರಾಗುತ್ತದೆ. ಹಸಿವಿದ್ದಷ್ಟೂ ತಿನ್ನುವ ಅವಕಾಶವಿದೆ. ನಾವು ದೇವಸ್ಥಾನದಲ್ಲೇ ಊಟ ಮುಗಿಸಿ ನಂತರ ಬಂಡಿಪುರದ ಕಾಡಿನ ಕಡೆಗೆ ಹೊರೆಟೆವು. ಬಂಡಿಪುರದ ಅರಣ್ಯ ಇಲಾಖೆ ಮಧ್ಯಾಹ್ನ 2.30ಕ್ಕೆ ಒಂದು ಬ್ಯಾಚ್‌, ಹಾಗೂ ಸಂಜೆ 4.30ಕ್ಕೆ ಒಂದು ಬ್ಯಾಚ್‌ ಕಾಡಿನೊಳಗೆ ಸಫಾರಿ ಕರೆದುಕೊಂಡುಹೋಗುತ್ತಾರೆ. ಇದಕ್ಕಾಗಿ ಸುಮಾರು 8 ಮಾರುತಿ ಜಿಪ್ಸಿ ಗಾಡಿ ಅವರ ಬಳಿ ಇದೆ. ಒಂದು ಜಿಪ್ಸಿಗೆ 3000 ರೂಪಾಯಿ ಹಾಗೂ ಅದರಲ್ಲಿ ಆರು ಜನರು ಹೋಗಬಹುದು. ಇದಲ್ಲದೆ ಕಾಡಿನೊಳಗೆ ಹೋಗಲು ಒಬ್ಬರಿಗೆ 250 ರೂಪಾಯಿಯಂತೆ ಪಾವತಿಸಬೇಕು. ಎರಡು ಗಂಟೆಗಳ ಕಾಡಿನ ಸಫಾರಿ ಸಾಹಸಮಯ ಹಾಗೂ ರೋಮಾಂಚನವಾಗಿರುತ್ತದೆ. ಜಿಪ್ಸಿಗೆ ನಾವು ಮೊದಲೇ ಆನಲೈನ್ ಮೂಲಕ ಕಾಯ್ದಿರಿಸದ್ದರೆ ಒಳ್ಳೆಯದು. ಒಮ್ಮೊಮ್ಮೆ ಪ್ರವಾಸಿಗರು ಹೆಚ್ಚಾಗಿ ಜಿಪ್ಸಿ ಸಿಗುವ ಸಾಧ್ಯತೆಯು ಇಲ್ಲದಾಗಿರುವ ಉದಾಹರಣೆಗಳಿವೆ. ಅಷ್ಟೇ ಅಲ್ಲದೆ ಅರಣ್ಯ ಇಲಾಖೆಯವರು ಸಫಾರಿಗಾಗಿ ಬಸ್‌ ವ್ಯವಸ್ಥೆ ಕೂಡಾ ಮಾಡಿದ್ದಾರೆ. ಒಂದು ಬಸ್‌ ಜನ ತುಂಬುತ್ತಲೇ ಆ ಬಸ್‌ ಹೊರಡಲು ಸಿದ್ದವಾಗುತ್ತದೆ. ಕೇವಲ ಒಬ್ಬರಿಗೆ 300 ರೂಪಾಯಿ ಆಗುವುದರಿಂದ ಬಹಳಷ್ಟು ಪ್ರವಾಸಿಗರು ಬಸ್‌ ಸೌಲಭ್ಯ ಬಳಸಿಕೊಳ್ಳುತ್ತಾರೆ. ಆದರೆ ಬಸ್‌ ಸಫಾರಿ ಕೇವಲ ಒಂದು ಗಂಟೆಗಳ ಕಾಲ ಮಾತ್ರ ಇರುತ್ತದೆ. ಸಫಾರಿಯಲ್ಲಿ ಪ್ರಾಣಿ ಪಕ್ಷಿಗಳನ್ನು ಕಾಣುವುದು ನಮ್ಮ ಅದೃಷ್ಟವಿದ್ದಂತೆ. ನಮ್ಮ ಅನುಭವದಲ್ಲಿ ಸಂಜೆ 4 ಗಂಟೆಯ ನಂತರ ಸಫಾರಿಗೆ ಹೋದರೆ ಹುಲಿ, ಚಿರತೆ, ಆನೆಗಳನ್ನು ನೋಡಲು ಹೆಚ್ಚು ಸಾಧ್ಯತೆ ಇರುತ್ತದೆ. ನಮಗೆ ಸುಮಾರು 200 ಮೀಟರ್‌ ದೂರದಲ್ಲಿ ಕೆರೆಯ ಬಳಿ ಒಂದು ಜಿಂಕೆಯನ್ನು ಕೊಂದು ತಿಂದು, ತಿಂದದ್ದನ್ನು ಅರಗಿಸಿಕೊಳ್ಳಲು ನೆಲದ ಮೇಲೆ ಹೊರಳಾಡುತ್ತಾ ಆಟವಾಡುತ್ತಿದ್ದ ಹೆಣ್ಣು ಹುಲಿ ಕಂಡಿತು. ಅದರ ಹೆಸರು ಸುಂದರಿ ಎಂದು ನಮ್ಮ ವಾಹನ ಚಾಲಕ ಹಾಗೂ ಗೈಡ್‌ ತಿಳಿಸಿದರು. ಈಗ ನಾನು ಒಂದು ವಿಚಿತ್ರ ವಿಷಯ ನಿಮಗೆ ತಿಳಿಸಬಯಸುತ್ತೇನೆ. ಸಾಮಾನ್ಯವಾಗಿ ಹುಲಿ ಒಮ್ಮೆ ಬೇಟೆಯಾಡಿದರೆ ಸುಮಾರು ಒಂದು ವಾರ ಆ ಬೇಟೆಯನ್ನು ಇಟ್ಟುಕೊಂಡು ದಿನಾ ಸ್ವಲ್ಪ ಸ್ವಲ್ಪವೇ ತಿಂದು ಮುಗಿಸುತ್ತದೆ. ಈ ಒಂದು ವಾರದಲ್ಲಿ ಅದರ ಸುತ್ತಾ ಕೋತಿಗಳು, ಜಿಂಕೆಗಳು, ಆನೆಗಳು, ಕಾಡೆಮ್ಮೆಗಳು ದೈರ್ಯವಾಗಿ ಒಡಾಡುತ್ತಿರುತ್ತದೆ. ಹುಲಿಯ ಮಖ ನೋಡಿದೊಡನೆ ಆ ಪ್ರಾಣಿಗಳಿಗೆ ಹುಲಿಯೂ ಬೇಟೆಯಾಡುವುದೋ ಇಲ್ಲವೋ ಎಂದು ತಿಳಿಯುತ್ತದೆ. ಒಮ್ಮೊಮ್ಮೆ ಹುಲಿ ಜಿಂಕೆ ಒಂದೇ ಕೆರೆಯಲ್ಲಿ ನೀರು ಕುಡಿಯುವುದನ್ನು ಕಾಣಬಹುದು. ಸಫಾರಿ ಮುಗಿಸಿಕೊಂಡು ಹಿಂದಿರುಗುವಾಗ ನಾವು ಆನೆ ಕಂಡೆವು. ಕತ್ತಲಾಗಿದ್ದರಿಂದ ನಮ್ಮ ಕ್ಯಾಮರಾಗಳಿಗೆ ಆನೆ ಮಂಕಾಗಿ ಸೆರೆ ಸಿಕ್ಕಿತು. ಸಾಮಾನ್ಯವಾಗಿ ಇಲ್ಲಿ ಸಫಾರಿಗೆ ಬರುವವರ ಗುರಿಯೂ ಆನೆ ಮತ್ತು ಹುಲಿಯನ್ನು ನೋಡುವುದಾಗಿರುತ್ತದೆ. ಆದರೆ, ನಾವು ಮುಖ್ಯವಾಗಿ ಇಲ್ಲಿರುವ ಪಕ್ಷಿಗಳನ್ನು ನೋಡಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಬಯಸುತ್ತೇವೆ. ಅದರ ಜೊತೆಗೆ ಹುಲಿ ಆನೆ ಸಿಕ್ಕರೆ ನಮಗೆ ಹೆಚ್ಚು ಸಂತೋಷವಷ್ಟೆ. ಸುಮಾರು 7 ಗಂಟೆಗೆ ಬಂಡಿಪುರದ ಅರಣ್ಯ ಇಲಾಖೆಯ ಆಫೀಸಿನಿಂದ ಹೊರಟು ರಾತ್ರಿ 11ಕ್ಕೆ ಬೆಂಗಳೂರು ತಲುಪಿದೆವು.
ಅನಿಸಿಕೆಗಳು