ಗುಜರಾತಿನ ಪ್ಯಾಸೇಜ್ ಮೈಗ್ರೆಂಟ್ಸ್
ಪ್ರತಿ ವರ್ಷ ಮಧ್ಯ ಏಷಿಯಾ, ಉತ್ತರ ಏಷಿಯಾ ಹಾಗೂ ಯೂರೋಪಿನಿಂದ ಆಫ್ರಿಕಾ ದೇಶಕ್ಕೆ ಲಕ್ಷಾಂತರ ಪಕ್ಷಿಗಳು ವಲಸೆ ಹೋಗುತ್ತವೆ. ಈ ಮಾರ್ಗ ಎಷ್ಟೋ ಸಾವಿರ ಕಿಲೋಮೀಟರ್ ಆಗಿರುತ್ತದೆ. ನೆಲಕ್ಕಿಳಿಯದೆಯೇ ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಒಮ್ಮೆಗೇ ಹಾರುವ ಈ ಪಕ್ಷಿಗಳಲ್ಲಿ ಕೆಲವು ನಮ್ಮ ಭಾರತದ ಮೂಲಕ ಹಾರುವುದು ನಮ್ಮ ಅದೃಷ್ಟವೇ ಸರಿ. ಹೀಗೆ ಹಾರುವಾಗ ಮಾರ್ಗಮಧ್ಯೆ ಅವುಗಳಿಗೂ ಒಂದು ಬ್ರೇಕ್ ಬೇಕಂತೆ. ಹಾಗಾಗಿ ಅವು ಭಾರತದಲ್ಲಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು, ತಾತ್ಕಾಲಿಕ ವಿಶ್ರಾಂತಿ ಪಡೆಯಲು ಹಾಗೂ ಮುಂದಿನ ಪಯಣಕ್ಕೆ ಶಕ್ತಿ ಪಡೆದುಕೊಳ್ಳಲು ಒಂದು ತಿಂಗಳ ಬ್ರೇಕ್ ತೆಗೆದುಕೊಳ್ಳಲು ಹುಡುಕಿಕೊಂಡಿರುವ ಜಾಗವೇ ಗುಜರಾತಿನ ಕಚ್ ಪ್ರದೇಶ. ಪಕ್ಷಿಪ್ರಿಯರಿಗಂತೂ ಪ್ರತಿ ವರ್ಷದ ಸೆಪ್ಟೆಂಬರ್ ತಿಂಗಳು ಗುಜರಾತಿನ ಈ ಕಚ್ ಪ್ರದೇಶ ಅದರಲ್ಲೂ ಮುಖ್ಯವಾಗಿ ಭುಜ್ ಪ್ರದೇಶ ಸ್ವರ್ಗವಿದ್ದಂತೆ.
ಆಫ್ರಿಕಾಗೆ ಹೋಗುವಾಗ ಮಾತ್ರ ಈ ಭಾರತದ ಮಾರ್ಗವನ್ನು ತೆಗೆದುಕೊಂಡು ವಾಪಸ್ ಉತ್ತರ ಏಷಿಯಾಗೆ ಹಿಂದಿರುಗಬೇಕಾದರೆ ಈ ಪಕ್ಷಿಗಳು ಬೇರೆ ಮಾರ್ಗವನ್ನೇ ಆರಿಸಿಕೊಳ್ಳುತ್ತದೆ. ಆದ್ದರಿಂದ ಸೆಪ್ಟೆಂಬರ್ ಒಂದೇ ತಿಂಗಳು ಇವುಗಳನ್ನು ಭಾರತದಲ್ಲಿ ನೋಡಲು ಸಿಗುವ ಅವಕಾಶ.
ಸುಲಭವಾಗಿ ಕಚ್ ಪ್ರದೇಶವನ್ನು ವರ್ಣಿಸುವುದಾದರೆ ಮರಳಿಲ್ಲದ ಮರುಭೂಮಿಯೂ ಹಾಗೂ ಮರಗಳಿಲ್ಲದ ದಟ್ಟಕಾಡು ಎಂದು ಇದನ್ನು ಹೇಳಬಹುದು. ಅಲ್ಲಲ್ಲಿ ಮುಳ್ಳಿನ ಜಾಲಿಮರದ ಪೊದೆಗಳನ್ನು ಹೊಂದಿರುವ, ಕಿಲೋಮೀಟರ್ ಗಟ್ಟಲೆ ದೂರ ವೀಕ್ಷಿಸಬಹುದಾದ ಸಮತಟ್ಟಾದ ಭೂಮಿ ಇದಾಗಿದೆ. ಜೀಪಿನಲ್ಲಿ ಹೋಗುವಾಗ ಶೇಕಡ ಹತ್ತರಷ್ಟು ಕಚ್ ಪ್ರದೇಶದಲ್ಲಿ ಮಾತ್ರ ನಾವು ಪಯಣಿಸಬಹುದು. ಮಿಕ್ಕೆಲ್ಲಾ ಭೂಮಿಯಲ್ಲಿ ತೇವಾಂಶ ಹೆಚ್ಚಿದ್ದು ವಾಹನಗಳ ಟೈರ್ ಭೂಮಿಯೊಳಗೆ ಕುಸಿದುಹೋಗುತ್ತದೆ. ಇದರಿಂದಾಗಿ ಕಚ್ ಪ್ರವಾಸವೆಂದರೆ ಈ ಶೇಕಡ 10ರಷ್ಟು ಜಾಗ ಮಾತ್ರ. ನೀರಿನ ತೊರೆಗಳಂತೂ ಹಲವು ಹಾಗೂ ಒಂದು ಕಡೆ ಸಮುದ್ರ ತೀರ.
ಸಾವಿರಾರು ಎಕರೆ ಭೂಮಿಯ ಈ ಕಚ್ ಪ್ರದೇಶದಲ್ಲಿ ನಾವು ನೋಡ ಹೊರಟಿದ್ದು ಮುಖ್ಯವಾಗಿ ಎಂಟು ತಳಿಯ ಪಕ್ಷಿಗಳನ್ನು. ಪಕ್ಷಿಪ್ರಿಯರ ಭಾಷೆಯಲ್ಲಿ ಹೇಳುವುದಾದರೆ ಈ ಎಂಟು ಪಕ್ಷಿಗಳನ್ನು “ಪ್ಯಾಸೇಜ್ ಮೈಗ್ರೆಂಟ್ಸ್” ಎಂದು ಕರೆಯುತ್ತಾರೆ. ಅವು ಯಾವುವೆಂದರೆ ಯೂರೋಪಿಯನ್ ರೋಲರ್ (ನೀಲಕಂಠದ ಜಾತಿ), ರೆಡ್ ಬ್ಯಾಕ್ಡ್ ಶ್ರೈಕ್ (ಕೆಂಪು ಬೆನ್ನಿನ ಕಳಿಂದ) ಮತ್ತು ರೆಡ್ ಟೈಲ್ಡ್ ಶ್ರೈಕ್ (ಕೆಂಪು ಬಾಲದ ಕಳಿಂದ), ಸ್ಪಾಟೆಡ್ ಫ್ಲೈ ಕ್ಯಾಚರ್ (ಚುಕ್ಕಿಯ ನೊಣಹಿಡುಕ), ರೂಫಸ್ ಟೈಲ್ಡ್ ಸ್ಕ್ರಬ್ ರಾಬಿನ್(ಚಿಟ್ಟು ಮಡಿವಾಳದ ಜಾತಿ), ಗ್ರೇಟರ್ ವೈಟ್‌ತ್ರೋಟ್ (ಶ್ವೇತಕಂಠ), ಕಾಮನ್ ಕುಕ್ಕೂ ಮತ್ತು ಬ್ಲೂ ಚೀಕಡ್ ಬೀ ಈಟರ್(ನೀಲಿ ಕೆನ್ನೆಯ ಕಳ್ಳಿಪೀರ). ಪಕ್ಷಿಪ್ರಿಯರ ಮಾತುಗಳಲ್ಲಿ ಹೆಚ್ಚು ಆಂಗ್ಲ ಹೆಸರುಗಳೇ ಚಾಲ್ತಿಯಲ್ಲಿರುವದರಿಂದ ಅದನ್ನೇ ಮುಖ್ಯವಾಗಿ ನೀಡಿದ್ದೇನೆ.
ಈ ಎಂಟು ಪಕ್ಷಿಗಳು ಅತ್ಯಂತ ಸುಂದರವಾದದ್ದು ಎನ್ನುವುದಕ್ಕಿಂತ ಅಪರೂಪವಾದದ್ದು ಎಂದು ಹೇಳುವುದು ಹೆಚ್ಚು ಅರ್ಥವನ್ನು ನೀಡುತ್ತದೆ. ಕೇವಲ ಸೆಪ್ಟೆಂಬರ್ ತಿಂಗಳಿನಲ್ಲಿ, ನಾವು ನಮ್ಮ ದೇಶದಲ್ಲೇ ಪ್ರವಾಸ ಮಾಡಿ ಕಡಿಮೆ ಖರ್ಚಿನಲ್ಲಿ ಈ ಎಂಟು ಪಕ್ಷಿಗಳನ್ನು ನೋಡುವುದು ಬುದ್ದಿವಂತಿಕೆಯೇ ಅಲ್ಲವೇ.
ಭಾರತದ ಹಿಮಾಲಯ ಪ್ರದೇಶದಲ್ಲಿ ಸಿಗುವ ಪಕ್ಷಿಗಳ ಸೌಂದರ್ಯ ಹಾಗೂ ಬಣ್ಣಗಳನ್ನು ನೋಡಿದರೆ ಈ ಎಂಟು ತಳಿಯ ಪಕ್ಷಿಗಳು ಅಷ್ಟೇನು ಮುಖ್ಯವಾದದ್ದೇನಲ್ಲಾ ಎನ್ನಿಸಬಹುದು. ಆದರೆ ಪಕ್ಷಿಪ್ರಿಯರಿಗೆ ತಾವು ತಮ್ಮ ಜೀವಿತಾವಧಿಯಲ್ಲಿ ಎಷ್ಟು ತಳಿಯ ಪಕ್ಷಿಗಳನ್ನು ತಾವು ನೋಡಿದ್ದೇವೆ ಎಂದು ಹೇಳಿಕೊಳ್ಳುವುದರಲ್ಲೇ ಒಂದು ಹೆಮ್ಮೆ ಇದೆ. ಹಾಗಾಗಿ ಈ ಎಂಟು ಪಕ್ಷಿಗಳು ಅವರು ಈವರೆಗೆ ನೋಡಿರುವ ಎಲ್ಲಾ ಪಕ್ಷಿಗಳ ಸಂಖ್ಯೆಯಲ್ಲಿ ಕೂಡಿಕೊಳ್ಳಲು ಮಹತ್ವವನ್ನು ಪಡೆದಿದೆ.
ಹಾಗಾದರೆ ಈ ಎಂಟು ಪಕ್ಷಿಗಳನ್ನು ನೋಡಿದರೆ ಸಾಕೆ, ಪ್ರವಾಸ ಮುಗಿದಂತೆಯೇ? ಎಂದು ನೀವು ಪ್ರಶ್ನಿಸಬಹುದು. ಅದು ಹಾಗಲ್ಲ, ಈ ಎಂಟು ಪಕ್ಷಿಗಳನ್ನು ವೀಕ್ಷಿಸುವುದು ಮೊದಲ ಆದ್ಯತೆ. ಈ ಪಕ್ಷಿಗಳ ಜೊತೆ ನಾವು ಸುಮಾರು 110 ಜಾತಿಯ ಬೇರೆ ಪಕ್ಷಿಗಳನ್ನೂ ವೀಕ್ಷಿಸಿದೆವು. ಅದರಲ್ಲೂ ಮುಖ್ಯವಾಗಿ ಯೂರೇಶಿಯನ್ ನೈಟ್ ಜಾರ್, ಯೂರೇಶಿಯನ್ ಸ್ಕೈ ಲಾರ್ಕ್, ರೈನ್ ಕ್ವೈಲ್ ಎಂಬ ಪಕ್ಷಿಗಳನ್ನು ವೀಕ್ಷಿಸಿದ್ದು ನಮ್ಮ ಅದೃಷ್ಟವೇ ಸರಿ. ವರ್ಷದಿಂದ ವರ್ಷಕ್ಕೆ ಅಪರೂಪದ ಇನ್ನೂ ಹಲವು ತಳಿಯ ಪಕ್ಷಿಗಳು ಇಲ್ಲಿ ಬಂದು ನೆಲೆಸಿರುವುದಕ್ಕೆ ದಾಖಲೆ ಇದೆ, ಆದರೆ ಅವುಗಳ ವೀಕ್ಷಣೆ ನಮ್ಮ ಅದೃಷ್ಟವಿದ್ದಂತೆ.
ಈ ಎಂಟು ಪಕ್ಷಿಗಳನ್ನು ವೀಕ್ಷಿಸುವುದು ಅಷ್ಟು ಸುಲಭದ ಕೆಲಸವೇನಲ್ಲ. ಸ್ಥಳೀಯ ಪಕ್ಷಿವೀಕ್ಷಣೆ ಗೈಡ್‌ನ (ಮಾರ್ಗದರ್ಶಿ) ಸಹಾಯದಿಂದ ಮಾತ್ರ ಇದು ಸಾಧ್ಯ. ಈ ಪಕ್ಷಿಗಳ ಬಗ್ಗೆ ಪರಿಣತಿ ಹೊಂದಿರುವ ಗೈಡುಗಳು ಬಹಳ ಕಡಿಮೆ. ಹಾಗಾಗಿ ವರ್ಷಕ್ಕೆ ಮುನ್ನವೇ ಇಲ್ಲಿರುವ ಗೈಡುಗಳನ್ನು ನಾವು ಮುಂಗಡ ಹಣ ಪಾವತಿಸಿ ಕಾಯ್ದಿರಿಸಕೊಳ್ಳಬೇಕಾಗುತ್ತದೆ. ನಾವು ಈ ಪ್ರವಾಸದಲ್ಲಿ ನೋಡಲೇಬೇಕೆಂದುಕೊಂಡ ಪಕ್ಷಿಗಳು ನಮ್ಮ ಕಣ್ಣಿಗೆ ಬಿದ್ದರೆ ಆ ಪ್ರವಾಸ ಯಶಸ್ವಿಯಾದಂತೆ.
ಗೈಡ್‌ಗಳು ಈ ವಲಸೆ ಪಕ್ಷಿಗಳು ಆಗಮಿಸುವುದನ್ನೇ ಕಾಯುತ್ತಿರುತ್ತಾರೆ. ಅವು ನೆಲದಿಂದ ಮೇಲೆ ಹಾರಾಡುತ್ತಿರುವಾಗ ಅವುಗಳನ್ನು ಹಿಂಬಾಲಿಸಿ ಅವು ಯಾವ ಜಾಗದಲ್ಲಿ ನೆಲೆಸಿದೆಯೆಂದು ನೋಡಿಕೊಳ್ಳುತ್ತಾರೆ. ವಲಸೆ ಬರುವ ಈ ಪಕ್ಷಿಗಳು ಒಮ್ಮೆ ಈ ಕಚ್ ನೆಲಕ್ಕೆ ಇಳಿದರೆ ಅವು ಇಳಿದ ಜಾಗದ ಸುತ್ತಲಿನ ಒಂದೆರೆಡು ಎಕರೆಗಳಷ್ಟು ಜಾಗದಲ್ಲೇ ಉಳಿದುಕೊಳ್ಳುತ್ತವೆ. ಹೀಗಾಗಿ ಗೈಡ್‌ಗಳಿಗೆ ಯಾವ ಜಾಗದಲ್ಲಿ ಯಾವ ಪಕ್ಷಿ ಹುಡುಕಬೇಕೆಂಬ ಮಾಹಿತಿ ಇರುತ್ತದೆ. ಆದರೂ ಪೊದೆಗಳ ಮಧ್ಯದಲ್ಲಿ ಕುಳಿತು ಕ್ಷಣಾರ್ಧದಲ್ಲಿ ಹಾರಿಬಿಡುವ ಈ ಪಕ್ಷಿಗಳನ್ನು ನಮಗೆ ತೋರಿಸುವ ಈ ಗೈಡ್‌ಗಳ ಕೌಶಲ್ಯಕ್ಕೆ ಒಂದು ದೊಡ್ಡ ನಮಸ್ಕಾರ ಹೇಳಲೇಬೇಕು. ಅದರಲ್ಲೂ ಮುಖ್ಯವಾಗಿ ತಮಗೆ ಒಂದು ಒಳ್ಳೇ ಸಂಭಾವನೆಯ ಉದ್ಯೋಗಕ್ಕೆ ಕಾರಣವಾಗಿರುವ ಈ ಪಕ್ಷಿಗಳಿಗೆ, ಪ್ರವಾಸಿಗರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ಧಾರಿ ಈ ಗೈಡ್‌ಗಳದ್ದು. ಆ ಜವಾಬ್ದಾರಿಯನ್ನು ಅವರು ಉತ್ತಮವಾಗಿ ನಿಭಾಯಿಸುತ್ತಿದ್ದಾರೆ.
ನಾವು ಪ್ರವಾಸ ಮಾಡಿದ್ದು ಕಚ್‌ನ ಭುಜ್ ಪ್ರದೇಶಕ್ಕೆ ಮತ್ತು ನಳಸರೋವರ ಎಂಬ ಊರಿಗೆ. ಇದು ಒಟ್ಟು ಐದು ದಿನದ ಪ್ರವಾಸವಾಗಿತ್ತು. ಭುಜ್‌ನಲ್ಲಿ ಎಪಿ ಸೆಂಟರ್ ಎಂಬ ಹೋಮ್ ಸ್ಟೇಯಲ್ಲಿ ಉಳಿದುಕೊಂಡಿದ್ದು ಆ ಹೋಮ್ ಸ್ಟೇ ಮಾಲೀಕರಾದ ಭರತ್ ಅವರೇ ನಮ್ಮ ಗೈಡ್ ಆಗಿದ್ದರು. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಜೀಪಿನಲ್ಲಿ ನಮ್ಮ ಅಂದಿನ ಪಕ್ಷಿವೀಕ್ಷಣೆ ಆರಂಭವಾಗುತ್ತಿತ್ತು. ಮಾರ್ಗಮಧ್ಯದಲ್ಲೇ ಬೆಳಿಗ್ಗೆ ಎಂಟು ಗಂಟೆಗೆ ನಮಗೆ ಉಪಹಾರ. ಹನ್ನೊಂದು ಗಂಟೆಗೆ ಹೋಮ್‌ಸ್ಟೇಗೆ ವಾಪಸ್. 11 ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೂ ಆಚೆ ಹೋಗಲಾಗುವುದಿಲ್ಲ. ಕಾರಣ ಇಲ್ಲಿನ ಬಿಸಿಲು ತುಂಬಾ ತೀಕ್ಷ್ಣ ಹಾಗೂ ಪ್ರಭಲವಾಗಿದ್ದು ಸ್ಥಳೀಯರು ಕೂಡಾ ಯಾರೂ ಈ ಸಮಯದಲ್ಲಿ ಹೊರಗೆ ಓಡಾಡಲು ಇಷ್ಟಪಡುವುದಿಲ್ಲ. ಸಂಜೆ ನಾಲ್ಕರ ನಂತರ ಮತ್ತೆ ಏಳು ಗಂಟೆಯವರೆಗೆ ಪಕ್ಷಿ ವೀಕ್ಷಣೆ.
ನಳಸರೋವರದಲ್ಲಿ ನಾವು ಫ್ಲೆಮಿಂಗೋ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದೆವು. ಇಲ್ಲಿನ ನಮ್ಮ ಗಡ್ ಹೆಸರು ಲತೀಫ್. ಮಿಕ್ಕೆಲ್ಲಾ ಪಕ್ಷಿವೀಕ್ಷಣೆಯ ವಿಷಯವು ಮೇಲೆ ಭುಜ್‌ನಲ್ಲಿ ವಿವರಿಸಿದ ಹಾಗೆಯೇ.
ಹೊಸ ಜಾಗಗಳಿಗೆ ಹೋಗಲು, ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನನಗೆ ಸಹಾಯ ಮಾಡುತ್ತಿರುವ ನನ್ನ ಗೆಳೆಯರಾದ ಇಬ್ಬರು ಸಂತೋಷ್‌ಗಳು ಮತ್ತು ಗೌರಿ ಶಂಕರ ಇವರಿಗೆ ನಾನು ಎಷ್ಟು ಧನ್ಯವಾದಗಳನ್ನು ಹೇಳಿದರು ಸಾಲದು.