ಗುರುರಾಜ
ಶಾಸ್ತ್ರಿ
ಕೈಲಾಸ ಪರ್ವತಕ್ಕೆ ಹೊಸ ರಸ್ತೆ
24-07-2021
ಇತ್ತೀಚೆಗೆ ಕೈಲಾಸ ಪರ್ವತಕ್ಕೆ ಕಡಿಮೆ ದಿನಗಳಲ್ಲೇ ಹೋಗಿ ಬರುವಂತಹ ಹೊಸ ರಸ್ತೆಯೊಂದು ನಮ್ಮ ರಕ್ಷಣಾ ಸಚಿವರು ಉದ್ಘಾಟನೆ ಆಗಿದ್ದು ನಿಮಗೆಲ್ಲಾ ತಿಳಿದಿರಬೇಕು. ಈ ವಿಷಯ ಕೇಳಿದಾಗ, 2010ರಲ್ಲಿ ನಾನು ಈ ರಸ್ತೆಯ ನಿರ್ಮಾಣದ ಆರಂಭಿಕ ದಿನಗಳನ್ನು ನೋಡಿದ್ದು ನೆನಪಿಗೆ ಬಂತು. ನಾವು ಲಿಪುಲೇಕ್‌ ಪಾಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಮುಗಿಸಿ ಗುಂಜಿ ಎಂಬ ಭಾರತದ ಗಡಿ ಹಳ್ಳಿಯೊಂದಕ್ಕೆ ಬಂದು ಸೇರಿದೆವು. ಆಲ್ಲಿಂದ ವಾಪಸ್‌ ಬರುವ ನಮ್ಮ ರಸ್ತೆ ಪೂರ್ತಿ ಮಳೆಯ ಅಬ್ಬರದಿಂದ ಕುಸಿದಿದ್ದು, ಹೆಲಿಕಾಪ್ಟರ್‌ನಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತಾರೆಂಬ ವಿಷಯ ಗೊತ್ತಾಯಿತು. ಆದರೆ ಸರ್ಕಾರ ಆ ಹೆಲಿಕಾಪ್ಟರ್‌ ಯಾವಾಗ ಕಳಿಸುತ್ತಾರೆಂಬುದು ಯಾರಿಗೂ ಗೊತ್ತಿರಲಿಲ್ಲ. ಪೂರ್ತಿ ಮೋಡ ಕವಿದಿದ್ದು ಆಗಾಗ ಧಾರಾಕಾರ ಮಳೆ ಬರುತ್ತಿತ್ತು. ನಾವು ಒಟ್ಟು 38 ಯಾತ್ರಿಗಳಿದ್ದು, ಅದರಲ್ಲಿ ಒಬ್ಬರು ಗುಜರಾತಿನ ಮಂತ್ರಿಯೊಬ್ಬರ ತಂದೆ, ಮತ್ತೊಬ್ಬರು ರಾಯ್‌ಪುರದ ಮೇಯರ್‌ ಇದ್ದರು. ಅವರುಗಳು ತಮಗೆ ತಿಳಿದವರಿಗೆಲ್ಲಾ ಫೋನ್‌ ಮಾಡಿದ ಮೇಲೆ ನಮಗೆ ತಿಳಿದದ್ದು ಹೆಲಿಕಾಪ್ಟರ್‌ ಬರಬೇಕಾದರೆ, ವಾತವರಣ ತಿಳಿಯಾಗಬೇಕು ಎಂಬುದು. ಭಾರತೀಯ ಸೇನೇ ಅಚ್ಚುಕಟ್ಟಾಗಿ ಕಟ್ಟಿದ್ದ ಬಿಡಾರದಲ್ಲಿ ನಮಗೆ ವಾಸಿಸಲು ತೊಂದರೆ ಏನೂ ಆಗಲಿಲ್ಲ. ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಸೂಪ್‌ , ಕಾಫಿ, ಟೀ ಎಲ್ಲಾ ಬರುತ್ತಿತ್ತು. ರಾತ್ರಿ ಮಲಗಿದ್ದಾಗ, ಯಾರದರೂ ಟಾಯ್ಲೆಟ್‌ಗೆ ಹೊರಗೆ ಹೋಗಿ ಬಂದರೆ, ಬೇರೆಯವರು ಅವರಿಗೆ ಪ್ರಶ್ನೆ ಕೇಳುತ್ತಿದ್ದದ್ದು ಆಕಾಶದಲ್ಲಿ ನಕ್ಷತ್ರ ಕಾಣಿಸುತ್ತಿದೆಯೇ, ವಾತವರಣ ತಿಳಿಯಾಯಿತೇ ಎಂದು. ಸುಮಾರು ೮ ಡಿಗ್ರಿ ಉಷ್ಣಾಂಶದ ವಾತಾವರಣ ಹೊರಗಡೆ ಇದ್ದದ್ದರಿಂದ, ನಾವೆಲ್ಲರೂ ಬೆಚ್ಚಗೆ ಬಿಡಾರದ ಒಳಗೇ ಉಳಿದುಕೊಳ್ಳಲು ಇಷ್ಟಪಡುತ್ತಿದ್ದೆವು. ಮಾತು ಎಲ್ಲಿಗೋ ಹೋಯಿತು ನೋಡಿ, ನಾನು ಹೇಳಬೇಕಾಗಿದ್ದದ್ದು ಆ ರಸ್ತೆ ನಿರ್ಮಾಣದ ಬಗ್ಗೆ ಅಲ್ಲವೇ. ಒಂದು ದಿನ‌ ಬೆಳಗಿನ ಹೊತ್ತಿನಲ್ಲಿ ಭಾರತೀಯ ಸೇನೆಯ ಗಡಿ ರಸ್ತೆ ನಿರ್ಮಾಣ (Border Road Organisation) ಯೋಧರು ವಾಲಿಬಾಲ್‌ ಆಡುತ್ತಿದ್ದರು. ನಾನು ಮತ್ತು ನನ್ನ ಬೆಂಗಳೂರಿನ ಗೆಳೆಯ ಚಂದ್ರಮೋಹನ್‌ ಕನ್ನಡದಲ್ಲಿ ಮಾತನಾಡುತ್ತಾ ವಾಲಿಬಾಲ್‌ ವೀಕ್ಷಿಸುತ್ತಿದ್ದೆವು. ಆಗ ಅಲ್ಲಿ ವಾಲಿಬಾಲ್‌ ಆಡುತ್ತಿದ್ದ ಒಬ್ಬರು ಬಂದು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸಿದ್ದು ನಮಗೆ ಆಶ್ಚರ್ಯವಾಯಿತು. ಅವರು ಆ ಸಮಯದಲ್ಲಿ ರಸ್ತೆ ನಿರ್ಮಾಣ ಕಾರ್ಯದ ಉನ್ನತ ಅಧಿಕಾರಿಯಾಗಿದ್ದರು. ಸಧ್ಯಕ್ಕೆ ಅವರ ಹೆಸರು ವೀರಯ್ಯ ಎಂದು ಅಂದುಕೊಳ್ಳೋಣ. (ನಿಜವಾದ ಹೆಸರು ಹೇಳುವುದು ಬೇಡವೆನಿಸುತ್ತಿದೆ) ಅವರು ನಮ್ಮ ಯಾತ್ರೆಯ ಬಗ್ಗೆ ಮತ್ತು ನಾವು ಅಲ್ಲಿ ೩ ದಿನಗಳಿಂದ ಉಳಿದುಕೊಂಡಿರುವ ಕಾರಣವನ್ನು ಕೇಳಿದರು. ನಂತರ ಅವರು ನಮಗೆ ನೀವು ಭಾರತದ ಸ್ವಿಟ್ಸರ್ಲ್ಯಾಂಡ್‌ ನೋಡಿದ್ದೀರಾ, ಬನ್ನಿ ಇಂದು ನಾನು ನಿಮಗೆ ತೋರಿಸುತ್ತೇನೆ ಎಂದು ಹೇಳಿ ಬೆಳಿಗ್ಗೆ ೧೧ ಗಂಟೆಗೆ ನಮಗೆ ತಯಾರಿರಲು ಹೇಳಿದರು. ನಾನು ಚಂದ್ರಮೋಹನ್‌ ೧೧ ಗಂಟೆಗೆ ಸೇನೆ ಬಳಸುವ ದೊಡ್ಡ ಟೆಟ್ರಾ ಲಾರಿಯನ್ನು ಹತ್ತಿದೆವು. ನಮ್ಮೊಂದಿಗೆ ಇನ್ನೂ ೮ ಮಂದಿ ಯೋಧರು ಇದ್ದರು. ವೀರಯ್ಯ ಅವರೇ ಲಾರಿ ಓಡಿಸಿದರು. ನಾವು ಗುಂಜಿಯಿಂದ ೫ ಕಿಲೋಮೀಟರ್‌ ದೂರದ ರಾಂಗ್‌ಕಾಂಗ್‌ ಎಂಬ ಹಳ್ಳಿಗೆ ಬಂದೆವು. ಅಲ್ಲಿ ಹಳ್ಲಿಯವರ ಜೊತೆ ನಮಗೆಲ್ಲ ಸುಮಾರು ೨ ಗಂಟೆಗಳ ಕಾಲ ಮೀಟಿಂಗ್‌ ಇದೆ, ನೀವು ಹಳ್ಳಿ ಸುತ್ತಮುತ್ತಲೂ ನೋಡಿ ಬನ್ನಿ ಎಂದರು. 10 ನಿಮಿಷ ಹಳ್ಳಿಯಿಂದ ಆಚೆ ನಡೆದರೆ ಒಂದು ಸುಂದರವಾದ ಹಿಮಾಲಯದ ಹಸಿರು ಬೆಟ್ಟ. ನಾನು ಸ್ವಿಟ್ಸರ್ಲ್ಯಾಂಡ್‌ ನೋಡಿರಲಿಲ್ಲ, ಆದರೆ ಆ ಜಾಗ ಇದುವರೆವಿಗೂ ಹಿಮಾಲಯದಲ್ಲಿ ನೋಡಿರುವ ರಮಣೀಯ ಸ್ಥಳಗಳಲ್ಲಿ ಮೊದಲ ಸ್ಥಾನ ಪಡೆಯುತ್ತದೆ. ಅಲ್ಲೆಲ್ಲಾ ಸುಮಾರು ಹೊತ್ತು ತಿರುಗಾಡಿ, ನಾನು, ಚಂದ್ರಮೋಹನ್‌ ಹಳ್ಳಿಗೆ ವಾಪಸ್‌ ಬಂದೆವು. ಅಲ್ಲಿ ಮೀಟಿಂಗ್‌ನಲ್ಲಿ ದೊಡ್ಡ ಗಲಾಟೆಯಾಗುತ್ತಿತ್ತು. ಅವರ ಮಾತುಗಳಿಂದ ನಮಗೆ ತಿಳಿದದ್ದು ಏನೆಂದರೆ, ಹಳ್ಳಿಯವರು ರಸ್ತೆ ತಮ್ಮ ಹಳ್ಳಿಯ ಮೂಲಕ ಹೋಗಬೇಕು ಅಂತ, ಆದರೆ ವೀರಯ್ಯ ರಸ್ತೆ ಬೆಟ್ಟದ ಮೇಲಿಂದಲೇ ಹೋಗುತ್ತದೆ ಎಂದು ವಾದ. ಹಿಮಾಲಯದಲ್ಲಿ ಬೆಟ್ಟಗಳ ಮೇಲೆ ರಸ್ತೆ ಮಾಡುವುದು ಸುಲಭ ಹಾಗೂ ಖರ್ಚು ಕೂಡಾ ಕಡಿಮೆಯಾಗುತ್ತದೆ ಎಂಬುದು ನಮಗೆ ಅರ್ಥವಾಯಿತು. ರಸ್ತೆ ಹಳ್ಳಿ ಮೂಲಕ ಹೋದರೆ ಹಳ್ಳಿಯವರು ಸಂಚಾರಿಗಳ ಜೊತೆ ವ್ಯಾಪಾರ ವ್ಯವಹಾರ ಮಾಡಬಹುದೆಂಬುದು ಹಳ್ಳಿಯವರ ವಾದ. ಗಲಾಟೆ ದೊಡ್ಡದಾಗಿ, ನೀವು ಏನಾದರೂ ಮಾಡಿಕೊಳ್ಳಿ ನಾವು ಬೆಟ್ಟದ ಮೇಲೆ ರಸ್ತೆ ಮಾಡುವುದು ಎಂದು ಜಗಳವಾಡುತ್ತಾ ವೀರಯ್ಯ ಲಾರಿ ಹತ್ತಿ ಹೊರಟೇ ಬಿಟ್ಟರು. ಅವರ ಜೊತೆ ಬಂದಿದ್ದವರು ಲಾರಿ ಹತ್ತಿದರು. ತಕ್ಷಣ ಅವರಲ್ಲೊಬ್ಬ ನಮ್ಮಿಬ್ಬರನ್ನು ನೋಡಿ ತಕ್ಷಣ ತಾನು ಇಳಿದು ನಮ್ಮನು ಲಾರಿಯೊಳಕ್ಕೆ ಎತ್ತೆಸೆದ, ಮತ್ತೊಬ್ಬ ನಮ್ಮನ್ನು ಹಿಡಿದುಕೊಂಡ. ಲಾರಿ ವೇಗವಾಗಿ ಚಲಿಸಿ ಗುಂಜಿ ತಲುಪಿತು. ನಾವು ಹಿಂಬದಿಯಲ್ಲಿ ಲಾರಿಯಿಂದ ಇಳಿದಾಗ ವೀರಯ್ಯ ನಮ್ಮನ್ನು ನೋಡಿ, ಓ ನೀವು ನಮ್ಮ ಜೊತೆ ಬಂದಿದ್ದಿರಿ ಎಂಬುದು ನನಗೇ ಮರೆತೇ ಹೋಗಿತ್ತು ಎಂದರು. ಸದ್ಯ ಹಳ್ಳಿಯಲ್ಲೇ ಉಳಿದುಕೊಳ್ಳಲಿಲ್ಲವಲ್ಲ ಎಂದು ಸಂತೋಷಪಟ್ಟರು. ರಸ್ತೆ ನಿರ್ಮಾಣ ಕಾರ್ಯ ಮಾರನೇ ದಿನ ಪ್ರಾರಂಭವಾಯಿತು, ರಾಂಗ್‌ಕಾಂಗ್‌ ಹಳ್ಳಿಗರ ಗಲಾಟೆಯೂ ಜೋರಾಯಿತು. ಅವರೆಲ್ಲ ನಮ್ಮ ಬಿಡಾರದ ಹತ್ತಿ ಬಂದು ವೀರಯ್ಯನಿಗಾಗಿ ಹುಡುಕುತ್ತಿದ್ದರು. ವೀರಯ್ಯ ಅಲ್ಲೇ ಇದ್ದ ಒಂದು ಪೋಲೀಸ್‌ ಚೌಕಿಯಲ್ಲಿ ಅಡಗಿ ಕುಳಿತರು. ಹಳ್ಳಿಯವರು ಪೋಲೀಸ್‌ ಚೌಕಿ ಸುತ್ತುವರಿದು ಚೌಕಿಯನ್ನೇ ವೀರಯ್ಯನ ಸಮೇತ ಸುಟ್ಟುಹಾಕುವುದಾಗಿ ಹೆದರಿಸುತ್ತಿದ್ದರು. ಸೇನೆಯಿಂದ ಕಂಡಲ್ಲಿ ಗುಂಡು ಆಜ್ಞೆಯಾಯಿತು. ಎಲ್ಲಾ ಯಾತ್ರಿಗಳಿಗೂ ಬಿಡಾರದಿಂದ ಹೊರಗೆ ಬರಬಾರದೆಂದು ಆಜ್ಞೆಯಾಯಿತು. ಅದರಲ್ಲೂ ನನಗೆ ಮತ್ತು ಚಂದ್ರಮೋಹನ್‌ಗೆ ಹೆಚ್ಚೆನ ಮುನ್ನೆಚ್ಚರಿಕೆ ನೀಡಿದರು. ಕಾರಣ ವೀರಯ್ಯನ ಜೊತೆಯಲ್ಲಿ ನಾವು ಇದ್ದದ್ದನ್ನು ಹಳ್ಳಿಗರು ನೋಡಿದ್ದರು. ಎರಡು ದಿನ ಯಾರೂ ಅಲುಗಾಡಲಿಲ್ಲ. ಒಂದು ಕಡೆ ಚೌಕಿ ಸುತ್ತ ಸೀಮೆ ಎಣ್ಣೆ, ಪೆಟ್ರೋಲ್‌ ಕ್ಯಾನ ಜೊತೆ ಹಳ್ಳಿಗರೂ, ಇನ್ನೊಂದು ಕಡೆ ತುಪಾಕಿಗಳ ಜೊತೆ ಯೋಧರು, ದೂರದಲ್ಲಿ ನಾವು ಯಾತ್ರಿಗಳು. ಈ ಸಮಸ್ಯೆ ಬಗೆಹರಿಯುವವರೆಗೆ ನಾವು ಹೆಲಿಕಾಪ್ಟರ್‌ ಆಗಮನದ ಆಸೆ ಮರೆತೇಬಿಟ್ಟೆವು. ಎಲ್ಲಿಂದಲೋ ಇನ್ನೊಂದು ಸುಮಾರು ೬೦೦ ಜನರ ಸೇನಾ ತುಕಡಿ ಬಂತು. ಹಳ್ಳಿಯವರಿಗೆ ಬಯ ಪ್ರಾರಂಭವಾಯಿತು, ಒಬ್ಬೊಬ್ಬರಾಗಿ ಕಳಚಿಕೊಂಡರು. ನಂತರ ಅಲ್ಲಿ ಬಂದಿದ್ದ ಸುದ್ದಿವಾಹಿನಿಯವರಿಂದ ನಮಗೆ ತಿಳಿದದ್ದು, ಈ ಹಳ್ಳಿಗರಿಗೆ ಚೀನಾ ಸರ್ಕಾರ ಹಣ ನೀಡಿ, ರಸ್ತೆ ನಿರ್ಮಾಣಕ್ಕೆ ತಡೆಯೊಡ್ಡಲು ಪ್ರೇರೇಪಿಸುತ್ತಿದೆ ಎಂಬುದು. ವೀರಯ್ಯನನ್ನು ತಕ್ಷಣ ದೂರದ ಬೇರೆ ಸೇನಾ ತುಕಡಿಗೆ ವರ್ಗಾಯಿಸಿದರು. ಆದರೆ ಇಂಜಿನಿಯರ್‌ ಆಗಿದ್ದ ವೀರಯ್ಯನ ಸಾಧನೆ ಸರ್ಕಾರಕ್ಕೆ ಗೊತ್ತಿತ್ತು. ಇವರ ರಸ್ತೆ ನಿರ್ಮಾಣ ವೇಗ ಹಿಂದಿನ ಇಂಜಿನಿಯರ್‌ಗಳಿಗೆ ಹೋಲಿಸಿದರೆ, ೭ ಪಟ್ಟು ಹೆಚ್ಚಿತ್ತಂತೆ. ಛಳಿಗಾಲ ಹೆಚ್ಚಾಗುತ್ತಿದ್ದಂತೆ ಎಲ್ಲಾ ಹಳ್ಳಿಗರು ಹಳ್ಳಿ ಹಳ್ಳಿಯೇ ಖಾಲಿಮಾಡಿಕೊಂಡು ಅಲ್ಮೋರಾ ನಗರಕ್ಕೆ ಹೋಗುತ್ತಾರೆ. ಆ ಸಮಯದಲ್ಲಿ ವೀರಯ್ಯನನ್ನು ಮತ್ತೆ ಕರೆತಂದು ರಸ್ತೆ ನಿರ್ಮಾಣ ಮತ್ತೆ ಆರಂಭಗೊಂಡು, ಅವರು ಹಿಂದಿರುಗಿ ಬರುವಷ್ಟರಲ್ಲಿ ಆ ಜಾಗದ ರಸ್ತೆ ನಿರಮಾಣ ಮುಗಿದಿತ್ತು ಎಂದು ನಮಗೆ‌ ಒಂದು ವರ್ಷದ ನಂತರ ತಿಳಿಯಿತು. ಈ ರಸ್ತೆ ಯಾತ್ರಿಗಳಿಗಾಗಿ ಎಂದು ಸರ್ಕಾರ ಹೇಳುತ್ತಿದ್ದರೂ, ಚೀನಾ ಗಡಿಗೆ ಅತಿ ವೇಗದಲ್ಲಿ ಸೇನೆ ಹೋಗಲು ಅನುಕೂಲ ಮಾಡುವುದು ಇದರ ಮೂಲ ಉದ್ದೇಶ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದಾದ ಎರಡು ದಿನದ ನಂತರ ನಮ್ಮ ಹೆಲಿಕಾಪ್ಟರ್‌ ಬಂತು. ವಾತಾವರಣ ಏನೂ ತಿಳಿಯಾಗಿರಲಿಲ್ಲ. ನಾನು ಪೈಲಟ್‌ನ ಮಾತನಾಡಿಸುತ್ತಾ ಮೋಡದಿಂದ ಕವಿದ ವಾತಾವರಣ ಇರುವಾಗ ಹೆಲಿಕಾಪ್ಟರ್‌ ಓಡಿಸಬಹುದೇ ಎಂದೇ. ಅದಕ್ಕೆ ಅವನು ನಕ್ಕ. ಇದು ಸೇನೇ ಹೆಲಿಕಾಪ್ಟರ್. ಹಾಗೆಲ್ಲಾ ಹವಾಮಾನದ ಮೇಲೆ ಇದರ ಛಾಲನೆ ಅವಲಂಬಿತವಾಗಿಲ್ಲ, ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದಾಗ ನಾವೆಲ್ಲಾ ಯಾತ್ರಿಗಳು ಮಂಕಾದೆವು. ೧೦ ಜನರು ಪ್ರಯಾಣಿಸಬಲ್ಲ ಆ ಹೆಲಿಕಾಪ್ಟರ್‌ ಆಲ್ಮೋರಕ್ಕೆ ನಾಲ್ಕು ಟ್ರಿಪ್‌ ಮಾಡಿತು. ಹಿರಿಯರನ್ನು ಮೊದಲ ಟ್ರಿಪ್‌ಗಳಲ್ಲಿ ಕಳಿಸದ ಮೇಲ, ನಾನು ಕೊನೆಯ ಟ್ರಿಪ್ಪಿನಲ್ಲಿದ್ದೆ. ಹೆಲಿಕಾಪ್ಟರ್‌ ಕಿಟಕಿ ತೆಗೆದು ಹಿಮಾಲಯ ಬೆಟ್ಟಗುಟ್ಟಗಳ ಮಧ್ಯೆ ಕಾಡುಗಳಲ್ಲಿ ಘಾಟ್‌ ಸೆಕ್ಷಣ್‌ಗಳಲ್ಲಿ ಚಲಿಸುವ ಕಾರು ಚಲಿಸುವಂತೆ ನಡೆದ ಆ ಅರ್ಧ ಗಂಟೆ ಪ್ರಯಾಣದ ರಮಣೀಯ ನೋಟ ನನ್ನ ಜೀವನದಲ್ಲಿ ಮರೆಯಲಾಗದ ದೃಶ್ಯವಾಗಿ ಉಳಿದುಬಿಟ್ಟಿದೆ. ಭಾರತದಲ್ಲೇ ಇರುವ ಆದಿ ಕೈಲಾಸ ಪರ್ತಕ್ಕೆ ಹೋಗುವ ಹಾದಿಯಲ್ಲಿ ಈ ರಾಂಗ್‌ ಕಾಂಗ್‌ ಸಿಗುತ್ತದೆ. ಈವರ್ಷ ಆದಿಕೈಲಾಸಕ್ಕೆ ಹೋಗುವ ಯೋಜನೆ ಇತ್ತು ಅಆದರೆ ಕೊರೋನಾದಿಂದಾಗಿ ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಸಾಧ್ಯವಾದರೆ ಹೋಗಬೇಕೆಂದಿದ್ದೇನೆ. ಸುಮಾರ 210 ಕಿಲೋಮೀಟರ್‌ ಚಾರಣ ಮಾಡಬೇಕಿದೆ ಈ ಆದಿ ಕೈಲಾಸ ನೋಡುವುದಕ್ಕೆ. ಹಾ, ಹೇಳುವುದನ್ನು ಮರೆತಿದ್ದೆ, 2014ರಲ್ಲಿ ನಾನು ಸ್ವಿಟ್ಸರ್‌ಲ್ಯಾಂಡ್‌ಗೆ ಹೋಗಿದ್ದೆ. ರಾಂಗ್‌ ಕಾಂಗ್‌ ಮತ್ತು ಸ್ವಿಟ್ಸರ್ಲ್ಯಾಂಡ್‌ ಹೋಲಿಸಲು ಸಾಧ್ಯವೇ ಇಲ್ಲ. ರಮಣೀಯತೆಯಲ್ಲಿ ರಾಂಗ್‌ ಕಾಂಗ್‌ ಹಳ್ಳಿ ಮುಂದೇ ಸ್ವಿಟ್ಸರ್ಲ್ಯಾಂಡ್‌ ಏನೇನೂ ಇಲ್ಲ.
ಅನಿಸಿಕೆಗಳು




ಮಂಗಲಾ ಜಯಂತ
18-11-2021
ಪ್ರತ್ಯಕ್ಷ ಅನುಭವ ದ ಅನುಭವ
Nagendra Rao M
22-11-2021
ಅದ್ಭುತ ಅನುಭವ ಅಣ್ಣ ನೀವು ಬರೆದಿರುವ ಅನುಭವ ಓದುತ್ತಿದ್ದ ರೆ ನಾವೇ ಅಲ್ಲಿ ಇರುವ ಹಾಗೆ ಅನುಭವ ವಾಗುತದೆ