ಗುರುರಾಜ
ಶಾಸ್ತ್ರಿ
ಮರೆಯಲಾರದ ಸೂರ್ಯಗ್ರಹಣ
24-07-2021
ಇಸವಿ 2009. ಆಗ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದೆ. 22ನೇ ಜುಲೈ 2009ರಂದು ಸೂರ್ಯಗ್ರಹಣ ಇತ್ತು ಹಾಗೂ ಭಾರತದ ಕೆಲವು ನಗರಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಬಹುದಾಗಿತ್ತು. ಚೆನ್ನೈಗೆ ಹತ್ತರವಿದ್ದ ಅಂತಹ ನಗರವೆಂದರೆ ಭೂಪಾಲ್. 15ನೇ ಜುಲಯ 2009 ಸಹೋದ್ಯೋಗಿ ಸ್ವಾಮಿನಾಥನ್‌ ಭೂಪಾಲ್‌ಗೆ ಸೂರ್ಯಗ್ರಹಣ ವೀಕ್ಷಿಸಲು ಹೋಗೋಣವೇ ಎಂದು ಕೇಳಿದರು. ಏನೂ ಯೋಚಿಸದೇ ಒಪ್ಪಿಗೆ ಸೂಚಿಸಿದೆ. ಆಗ ಚೆನ್ನೈನಿಂದ ಭೂಪಾಲ್‌ಗೆ ನೇರ ವಿಮಾನ ಇರಲಿಲ್ಲ. ನಾವು ಹೈದಿರಬಾದ್‌ಗೆ ವಿಮಾನದ ಟಿಕೇಟ್‌ ಬುಕ್‌ ಮಾಡಿ ಅಲ್ಲಿಂದ ಭೂಪಾಲ್‌ಗೆ ರೈಲು ಟಿಕೇಟ್‌ ಬುಕ್‌ ಮಾಡಿದವು. ಚೆನ್ನೈನ ನಮ್ಮ ಕಛೇರಿಯಲ್ಲಿದ್ದ ಎಲ್ಲರಿಗೂ ಇದೆಂತ ಹುಚ್ಚು, 15 ಸಾವಿರ ರೂಪಾಯಿ ಒಬ್ಬೊಬ್ಬರಿಗೆ ಖರ್ಚು ಮಾಡಿಕೊಂಡು ಸೂರ್ಯಗ್ರಹಣ ನೋಡಲು ಭೂಪಾಲ್‌ಗೆ ಹೋಗುವ ಅವಶ್ಯಕತೆ ಏನಿದೆ, ಟೀವಿಯಲ್ಲೇ ನೋಡಬಹುದಿತ್ತಲ್ಲ ಎಂದರು. ಆದರೆ ನಮ್ಮ ಇಡೀ ಜೀವನದಲ್ಲಿ ಎಂದೋ ಕೆಲವು ದಿನಗಳಲ್ಲಿ ಸಿಗುವ ಈ ಪ್ರಕೃತಿಯ ವಿಸ್ಮಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗುವುದರಲ್ಲಿ ಇರುವ ಸಂತೋಷ ದುಡ್ಡಿನಲ್ಲಿ ಅಳಿಯಲು ಸಾಧ್ಯವೇ. ಗ್ರಹಣ ವೀಕ್ಷಿಸಲು ಬೇಕಾದ ಗಾಜು ಒಂದಕ್ಕೆ 500 ರೂಪಾಯಿಯಂತೆ ಎರಡು ಕೊಂಡುಕೊಂಡೆವು. ಈ ಗಾಜು ಜರ್ಮನಿಯಲ್ಲಿ ತಯಾರಾಗಿತ್ತು. ಒಂದು ದಿನ ಮುಂಚೆಯೇ ಹೊರಡಬೇಕಿದ್ದರಿಂದ ಭೂಪಾಲ್‌ನಲ್ಲಿದ್ದ ನಮ್ಮ ಬ್ಯಾಂಕಿನ ಅತಿಥಿಗೃಹ ಕಾಯ್ದಿರಿಸಬೇಕೆಂದು ಚೆನ್ನೈನ ನಿಗದಿತ ಅಧಿಕಾರಿಗೆ ಅರ್ಜಿ ಕೊಟ್ಟೆವು. ಅವರು ನಮ್ಮ ಅರ್ಜಿಯನ್ನು ನೋಡಿ ನಕ್ಕು, ಮೊದಲನೆಯದಾಗಿ ಗ್ರಹಣ ನೋಡಲು ಇಷ್ಟು ಖರ್ಚುಮಾಡಿಕೊಂಡು ಹೋಗುತ್ತಿರುವ ನಿಮಗೆ ಬುದ್ದಿ ಇಲ್ಲ ಮತ್ತು ಎರಡನೆಯದಾಗಿ ಭೂಪಾಲ್‌ ಅತಿಥಿಗೃಹ ಸಿಗಬೇಕಾದರೆ ನೀವು ೨ ತಿಂಗಳು ಮುಂಚೆ ಅರ್ಜಿ ಕೊಡಬೇಕು ಎಂದು ಹೇಳಿ ನಮ್ಮ ಅರ್ಜಿಫಾರಂ ವಾಪಸ್ ಕೊಟ್ಟರು. ನಾನು ಹಿಂದೆ ಬೆಂಗಳೂರಿನಲ್ಲಿ ಹೆಚ್. ಆರ್. ವಿಭಾಗದಲ್ಲಿ ಕೆಲಸಮಾಡಿದ್ದರಿಂದ ಬೆಂಗಳೂರಿನ ಅಧಿಕಾರಿ ಎಂ.ಎನ್.ಕೃಷ್ಣಮೂರ್ತಿ ನಮಗೆ ಪರಿಚಯವಿದ್ದರು. ಅವರಿಗೆ ಫೋನ್‌ ಮಾಡಿ ವಿಷಯ ತಿಳಿಸಿದೆ. ಅವರು ನನ್ನ ಕಛೇರಿಯ ಫ್ಯಾಕ್ಸ ನಂಬರ್‌ ತೆಗೆದುಕೊಂಡರು. 20 ನಿಮಷದಲ್ಲಿ ಭೂಪಾಲ್‌ ಅತಿಥಿಗೃಹ ಕಾಯ್ದಿರಿಸಿರುವ ಪತ್ರ ನಮಗೆ ಪ್ಯಾಕ್ಸ ಮೂಲಕ ಬಂತು. ತಕ್ಷಣ ಎಂ.ಎನ್.ಕೆ ಅವರಿಗೆ ಫೋನ್‌ ಮಾಡಿ ಧನ್ಯವಾದಗಳನ್ನು ತಿಳಿಸಿದೆ. 21ನೇ ಜುಲೈ ಬೆಳಗ್ಗೆ ಹೈದಿರಾಬಾದ್‌ಗೆ ವಿಮಾನದಲ್ಲಿ ಹೊರೆಟೆವು. ಅಲ್ಲಿಂದ ಹೈದಿರಾಬಾದಿನಲ್ಲಿ ಊಟಮಾಡಿ ಭೂಪಾಲ್‌ಗೆ 2 ಗಂಟೆಗೆ ರೈಲು ಹತ್ತಿದೆವು. ಇದು 14 ಗಂಟೆಗಳ ರೈಲು ಪ್ರಯಾಣ. ಹವಾ ನಿಯಂತ್ರಿತ ೨ನೇ ದರ್ಜಿ ಸೀಟ್‌ ಬುಕ್‌ ಮಾಡಿದ್ದರಿಂದ ಅಷ್ಟೋಂದು ಗದ್ದಲವೇನು ಇರಲಿಲ್ಲ. ಬೆಳಗ್ಗೆ ವಿಮಾನಕ್ಕಾಗಿ 3 ಗಂಟೆಗೆ ಎದ್ದಿದ್ದರಿಂದ ತೊಟ್ಟಲಿನ ಹಾಗೆ ತೂಗುತ್ತಿದ್ದ ರೈಲಿನಲ್ಲಿ ಇಬ್ಬರೂ ಮಲಗಿಬಿಟ್ಟೆವು. ರಾತ್ರಿ ಊಟಕ್ಕೆ ೮ ಗಂಟೆಗೆ ಎದ್ದು ಚೆನ್ನೈನಿಂದ ತಂದಿದ್ದ ಚಪಾತಿ ಮುಗಿಸಿದೆವು. ಮತ್ತೆ ನಿದ್ದೆ. ಸುಮಾರು ಬೆಳಗಿನ ಜಾವ 3 ಗಂಟೆಗೆ ರೈಲಿನಲ್ಲಿ ಜನರ ಜೋರಾದ ಹಿಂದಿ ಮಾತುಗಳು ಕೇಳಲು ಪ್ರಾರಂಭವಾಗಿ ನಾವು ಎದ್ದು ಕುಳಿತೆವು. ನಮ್ಮ ಸುತ್ತಲೂ ಹಿಂದಿ ಮಾತನಾಡುತ್ತಿದ್ದ ಒಂದು ಸಂಸಾರ ಪ್ರಯಾಣ ಮಾಡುತ್ತಿರುವುದು ತಿಳಿಯಿತು. ನಾವು ಅವರನ್ನು ಮಾತನಾಡಿಸಿದಾಗ ಅವರು ಭೂಪಾಲ್‌ ಊರಿನವರೇ ಎಂದು ತಿಳಿಯಿತು ಮತ್ತು ನಾವು ಹೋಗಬೇಕಿದ್ದ ಅತಿಥಿಗೃಹಕ್ಕೆ ಹೇಗೆ ಹೋಗಬೇಕೆಂದು ತಿಳಿದುಕೊಂಡೆವು. ಅವರಲ್ಲಿದ್ದ ಒಬ್ಬರು ಹಿರಿಯರು ಹೇಳಿದ ಮಾತುಗಳು ಹೀಗಿವೆ : "ಬೇಗ ನಿಮ್ಮ ಅತಿಥಿಗೃಹಕ್ಕೆ ಸೇರಿಕೊಂಡುಬಿಡಿ. ಆಮೇಲೆ ಹೊರಗೆ ಬರಬೇಡಿ, ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ, ನಾಳೆ ಸೂರ್ಯಗ್ರಹಣ ಇದೆ, ಭೂಪಾಲ್‌ನಲ್ಲಂತೂ ಪೂರ್ಣ ಸೂರ್ಯಗ್ರಹಣವಾಗಲಿದ್ದು ಅದು ಬಹಳ ಅಪಾಯಕಾರಿ" ಅವರ ನಂಬಿಕೆಗೆ ನಾವೇಕೆ ವಾದಿಸಬೇಕು ಎಂದು ನಾವು ನಕ್ಕು ಸುಮ್ಮನಾದೆವು. ಆಮೇಲೆ ಅವರೇ ಯಾರನ್ನು ಭೇಟಿಮಾಡಲು ನಾವು ಭೂಪಾಲ್‌ಗೆ ಹೋಗುತ್ತಿರುವುದೆಂದು ವಿಚಾರಿಸಿದರು. ವಿಧಿಯಿಲ್ಲದೆ ವಿಷಯ ತಿಳಿಸಬೇಕಾಯಿತು. ಅವರಿಗೋ ಆಶ್ಚರ್ಯ. ಈ ರೀತಿಯೂ ಜನರು ಇರಲು ಸಾಧ್ಯವೇ ಎಂದುಕೊಂಡರು. ನಾವು ನಮ್ಮ ತಯಾರಿ ಹಾಗೂ ಆ ಸೂರ್ಯಗ್ರಹಣವನ್ನು ವೀಕ್ಷಿಸಲು ಭಾರತದ ಹಲವು ಊರುಗಳಿಂದ ಜನರು ಭೂಪಾಲ್‌ಗೆ ಬರುತ್ತಿರುವ ವಿಷಯ ತಿಳಿಸಿದೆವು. ಅವರಿಗೆ ನಮ್ಮ ಮಾತು ಸಮಾಧಾನ ತರಲಿಲ್ಲ. ಅಷ್ಟರಲ್ಲಿ ಬೆಳಗ್ಗೆ 4 ಗಂಟೆ, ಭೂಪಾಲ್‌ ರೈಲು ನಿಲ್ದಾಣ ಬಂದಿತ್ತು. ಆ ದೇವರೇ ನಿಮ್ಮನ್ನು ಕಾಪಾಡಬೇಕು ಎಂದು ಹರಿಸುತ್ತಾ ಅವರು ಹೊರಟರು. ಸಂಪೂರ್ಣ ಸೂರ್ಯಗ್ರಹಣ ಇದ್ದದ್ದು ಬೆಳಗ್ಗೆ 6.22ಕ್ಕೆ, ಮತ್ತು ಅದು 3 ನಿಮಿಷಗಳ ಕಾಲ ಇರುತ್ತದೆ. ನಮಗೆ ಹೆಚ್ಚು ಸಮಯವಿರಲಿಲ್ಲ. ಬ್ಯಾಂಕಿನ ಅತಿಥಿಗೃಹಕ್ಕೆ ಧಾವಿಸಿದೆವು.. ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಮತ್ತದೇ ಪ್ರಶ್ನೆ. ನಿಮ್ಮ ಭೇಟಿಯ ಉದ್ದೇಶ, ನಮ್ಮದು ಅದೇ ಉತ್ತರ, ಸೂರ್ಯಗ್ರಹಣ. ಅವನು ಮನಸ್ಸಿನಲ್ಲೇ ನಕ್ಕು ಮೌನವಾಗಿ ನಮ್ಮ ರೂಮ್‌ ತೋರಿಸಿದ. ನಾವು ಸ್ನಾನ ಮಾಡಿ ತಯಾರಾಗುತ್ತಿದ್ದಂತೆ ಯಾರೋ ರೂಮ್‌ ಬಾಗಿಲು ಬಡಿದರು. ಸರಿ ನಾನು ಹೋಗಿ ಬಾಗಿಲು ತೆಗೆದೆ. ನಮ್ಮ ಬ್ಯಾಂಕಿನ ೩ ಅಧಿಕಾರಿಗಳಂತೆ ಮುಂಬೈನಿಂದ ಗ್ರಹಣ ವೀಕ್ಷಿಸಲು ಬಂದಿದ್ದರು. ಅವರು ಅತಿಥಿಗೃಹದ ಉಸ್ತುವಾರಿ ವ್ಯಕ್ತಿಗೆ ಮಾತನಾಡಿಸಿದಾಗ ಅವನ್ನು ನಿಮ್ಮ ರೀತಿಯೇ ಇನ್ನೂ ಇಬ್ಬರು ಹುಚ್ಚರು ಚೆನೈನಿಂದ ಬಂದಿದ್ದಾರೆ ಎಂದನಂತೆ. ಹಾಗಾಗಿ ನಮ್ಮ ಗುಂಪು ಈಗ ಐದು ಜನರದ್ದಾಯಿತು. ಭೂಪಾಲ್‌ನಲ್ಲಿ ಮೂಡನಂಬಿಕೆಗಳ ಬಿದಿಗಿಟ್ಟು ವೈಜ್ಞಾನಿಕ ಮನೋಭಾವವಿರುವ ಒಂದು ಗುಂಪು ಊರಿನ ಒಳಗೇ ಇದ್ದ ಒಂದು ಗುಡ್ಡದ ಮೇಲೆ ಸೂರ್ಯಗ್ರಹಣ ವೀಕ್ಷಿಸಲು ವ್ಯವಸ್ಥೆ ಮಾಡಿದ್ದರು. ಈ ವಿಷಯ ಮುಂಬೈನ ಅಧಿಕಾರಿಗಳಿಂದ ತಿಳಿಯಿತು. ನಾವು ಐದೂ ಜನ ಮೂರು ಜನರು ಕೂರಬಲ್ಲ ಒಂದು ಆಟೋದಲ್ಲಿ ಕುಳಿತು ಗುಡ್ಡ ತಲುಪಿದಾಗ ಸಮಯ ಬೆಳಗ್ಗೆ 5.30. ಅಲ್ಲಿ ನಮ್ಮಂತೆ ಗ್ರಹಣ ವೀಕ್ಷಿಸಲು ನರೆದಿದ್ದ ನೂರಾರು ಜನರನ್ನು ಕಂಡೆವು. ನೀಲಿ ಭಾನು ಊಹಿಸಕೊಂಡಿದ್ದ ಜನರಿಗೆ ದಟ್ಟನೆಯ ಕಪ್ಪು ಮೋಡಗಳು ಸ್ವಾಗತ ಮಾಡಿತ್ತು. ಎಲ್ಲರ ಮುಖದಲ್ಲೂ ದುಃಖ ಆವರಿಸಿತ್ತು. ನಮಗೂ ಸೇರಿ. 5 ಗಂಟೆಗೇ ಸೂರ್ಯ ಹುಟ್ಟಿ ಆಗಿತ್ತು, ಹಾಗಾಗಿ ಬೆಳಕು ಚೆನ್ನಾಗಿಯೇ ಇತ್ತು. 5.48ಕ್ಕೆ ಗ್ರಹಣ ಪ್ರಾರಂಭವಾಯಿತು. ಬೆಳಕು ಕಡಿಮೆಯಾಗಲು ಪ್ರಾರಂಭವಾಯಿತು. ಆಗ ತಾನೆ ತಮ್ಮ ಗೂಡುಗಳಿಂದ ಆಚೆ ಬಂದು ಒಂದಷ್ಟು ದೂರ ಹಾರಿದ್ದ ಪಕ್ಷಿಗಳ ಮನಸ್ಸಿನಲ್ಲಿ ಈ ಗ್ರಹಣ ಗೊಂದಲ ಮಾಡಿತ್ತು. ಅವು ಏನಾಗುತ್ತಿದೆ ಎಂದು ತಿಳಿಯದೇ ದಿಕ್ಕು ತಪ್ಪಿರುವಂತೆ ಎಲ್ಲಂದರಲ್ಲಿ ಹಾರ ತೊಡಗಿದವು. ಆ ಗುಡ್ಡದ ಪೂರ್ತಿ ಬರೇ ಪಕ್ಷಿಗಳ ಕೂಗು ಆವರಿಸಿಕೊಂಡಿತು. ಆ ಮೋಡಗಳ ಮಧ್ಯೆಯೇ ಆಗಾಗ ಗ್ರಹಣ ಆವರಿಸಿಕೊಳ್ಳುತ್ತಿದ್ದ ಸೂರ್ಯನ ದರ್ಶನವಾಗುತ್ತಿತ್ತು. ಗ್ರಹಣ ಪ್ರಾರಂಭವಾಗುತ್ತಿದ್ದಂತೆ ಆಯೋಜಕರು ನಮಗೆ ಚಕ್ಕುಲಿ, ಕೋಡುಬಳೆ, ಚುರ್‌ ಮುರಿ, ಸಹಿ ತಿಂಡಿಗಳು ಎಲ್ಲವನ್ನೂ ಕೊಡಲು ಪ್ರಾರಂಭಿಸಿದರು. ಅಲ್ಲಿ ನೆರೆದಿದ್ದ ಮಕ್ಕಳಿಗೆ ಇದೊಂದು ಪ್ರಕೃತಿಯ ವಿಸ್ಮಯ, ಇದನ್ನು ನೋಡಿ ಆನಂದಿಸಿ, ಮೂಡನಂಬಿಕೆಗಳಿಂದ ಹೆದರಿ ಮನೆಯಲ್ಲೇ ಕೂರಬೇಡಿ ಎಂಬುವುದಕ್ಕೆ ಸಂದೇಶವಾಗಿತ್ತು. 6.22ಕ್ಕೆ ಸಂಪೂರ್ಣ ಸೂರ್ಯಗ್ರಹಣ, ಸೂರ್ಯನೂ ಕಾಣುತ್ತಿರಲಿಲ್ಲ ಮತ್ತು ನಮ್ಮ ಪಕ್ಕದವರೇ ನಮಗೆ ಕಾಣುತ್ತಿರಲಿಲ್ಲ. ಅಲ್ಲಿ ನೆರೆದಿದ್ದ ಸುಮಾರು 150ಜನ ಒಮ್ಮೆಗೇ ಓ ಎಂದು ಕಿರುಚಲು ಪ್ರಾರಂಭಿಸಿದೆವು. ಇದು ಮುಂದಿನ ಮೂರು ನಿಮಿಷಗಳ ಕಾಲ ಮುಂದುವರೆಯಿತು. ಬಹುಷಃ ಈ ಕೂಗು, ಗ್ರಹಣಕ್ಕೆ ಹೆದರಿ ಮನೆಯಲ್ಲೇ ಮಲಗಿದ್ದ ಭೂಪಾಲಿನ ಸಾಕಷ್ಟು ಜನರನ್ನು ಬೆಳಗ್ಗೆ ನಿದ್ದೆಯಿಂದ ಎಚ್ಚರಿಸಿರಬೇಕು. ನಂತರ 7.25ಕ್ಕೆ ಗ್ರಹಣ ಮುಗಿದಿತ್ತು. ನನ್ನ ಜೀವನದಲ್ಲಿ ಮರೆಯಲಾಗದ ಒಂದು ಸಮಯ ಈ ೨ ಗಂಟೆಗಳ ಕಾಲದ್ದಾಗಿತ್ತು. ಗೆಳೆಯ ಸ್ವಾಮಿನಾಥನ್‌ ಅವರ ಮೊಬೈಲಿನಲ್ಲಿ ಸುಮಾರು 20 ನಿಮಿಷಗಳ ಸೂರ್ಯಗ್ರಹಣ ಅವಧಿಯಲ್ಲಿ ಆಕಾಶ ಹಾಗೂ ಅಲ್ಲಿ ನೆರೆದಿದ್ದ ಜನರ ಅರಚಾಟ ಕಿರುಚಾಟವನ್ನು ರೆಕಾರ್ಡ್‌ ಮಾಡಿಕೊಂಡರು. ನಾನು ಆ ಪ್ರಕೃತಿಯ ವಿಸ್ಮಯದಲ್ಲಿ ಮುಳುಗಿಹೋಗಿದ್ದೆ ಮತ್ತು ಕಳೆದುಹೋಗಿದ್ದೆ. ಹಾಗಾಗಿ ನನ್ನ ಮೊಬೈಲ್‌ ಆಚೆ ತೆಗೆಯಲೇ ಇಲ್ಲ. ನಾನು ಯಾವುದೇ ಫೋಟೋ ವೀಡಿಯೋ ತೆಗೆಯಲಿಲ್ಲ ಎಂದು ಗೆಳೆಯರಿಗೆ ಹೇಳಿದಾಗ ಅವರು ನಂಬಲೇ ಇಲ್ಲ. ಈಗಲೂ ಸೂರ್ಯಗ್ರಹಣವೆಂದರೆ ನನಗೆ ಭೂಪಾಲ್‌ ನೆನಪಾಗುತ್ತದೆ. ಗೆಳೆಯ ಸ್ವಾಮಿನಾಥನ್ ಮತ್ತು ನಾನು ಹೀಗೆ ಸಾಕಷ್ಟು ಅವಿಷ್ಕಾರಗಳನ್ನು ಅಥವಾ ಇನ್ನೊಂದು ರೀತಿ ಹೇಳುವುದಾದರೆ ಜನರ ಮೂಡ ನಂಬಿಕೆಗಳಿಗೆ ಹೊರತಾಗಿ ಕೆಲಸಗಳನ್ನು ಮಾಡಿದ್ದೇವೆ. ನಮ್ಮ ಈ ರೀತಿಯ ಚಟುವಟಿಕೆಗಳ ಟೀಕೆ ಮಾಡಿರುವವರು ಹಲವಾರು ಆದರೆ ನಮಗೆ ಈ ರೀತಿ ಜೀವನ ನಡೆಸಿರುವುದು ತೃಪ್ತಿ ತಂದಿದೆ. ಜಗತ್ತನ್ನು ಹಾಗೂ ಅದರ ವಿಸ್ಮಯಗಳನ್ನೂ ಎಲ್ಲರೂ ಅವರದೇ ರೀತಿಯಲ್ಲಿ ಅನುಭವಿಸಿ ಸಂತೋಷಪಡುತ್ತಿದ್ದಾರೆ. ಪರರ ನಂಬಿಕೆಗಳ ಪ್ರಶ್ನಿಸಲು ನಾವು ಹೋಗುವುದಿಲ್ಲ ಆದರೆ ಅವರು ನಮ್ಮ ನಂಬಿಕೆಗಳಿಗೆ ಅಡ್ಡಗಾಲು ಹಾಕಲು ಬಂದರೆ ಅವರಿಗೆ ಪಾಠ ಮಾಡುವುದಕ್ಕೆ ನಾವು ಹಿಂಜರಿಯುವುದಿಲ್ಲ. ಇಂದು 21 ಜೂನ್‌ 2020 ಸುರ್ಯಗ್ರಹಣವಾಯಿತು. ಆದರೆ ಭಾರತದಲ್ಲಿ ಎಲ್ಲೂ ಸಂಪೂರ್ಣ ಸೂರ್ಯಗ್ರಹಣ ಇಲ್ಲ. ಹಾಗಾಗಿ ಭೂಪಾಲ್‌ ನೆನಪಾಗಿ ಈ ಲೇಖನ ಬರೆದೆ. ಮುಂದೆ ಎಂದಾದರೂ ಭಾರತದ ಯಾವುದೇ ಮೂಲೆಯಲ್ಲಿ ಸಂಪೂರ್ಣ ಸೂರ್ಯಗ್ರಹಣವಾಗುವುದಿದ್ದರೆ ನಾನು ಮತ್ತು ಸ್ವಾಮಿನಾಥನ್‌ ಅಲ್ಲಿಗೆ ಹೋಗುವುದು ಖಂಡಿತಾ, ನಿಮ್ಮಲ್ಲಿ ಯಾರು ಬರಲು ತಯಾರಿದ್ದೀರಾ?
ಅನಿಸಿಕೆಗಳು




ಮಂಗಲಾ ಜಯಂತ
18-11-2021
ಕಳೆದು ಕೊಂಡ ಪುಟ ದರ್ಶನ ಇಲ್ಲಿ ಆಯಿತು. 🙏