ಜುಲೈ 2022, ನನ್ನ ಅಣ್ಣ ಒಂದು ಗೂಗಲ್ ಕೊಂಡಿ ವಾಟ್ಸಾಪ್ ಮೂಲಕ ಕಳಿಸಿದ. ಅದ್ವೈತ ಆಶ್ರಮದಲ್ಲಿ "ಅದ್ವೈತಾಮೃತಮ್" ಎಂಬ ೬ ದಿನದ ತರಗತಿಗಳು ಇದ್ದು, ಸೆಪ್ಟೆಂಬರ್ ಹಾಗೂ ನವೆಂಬರ್‌ನಲ್ಲಿ ಆಂಗ್ಲಭಾಷೆಯಲ್ಲಿ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಹಿಂದಿ ಭಾಷೆಯ ತರಗತಿಗಳು ಎಂದು ತಿಳಿಸಿದ. ಅಧ್ಯಯನಕ್ಕೆ ಆಯ್ದುಕೊಂಡಿದ್ದ ವಿಷಯ ಶ್ರೀ ಶಂಕರಾಚಾರ್ಯ ವಿರಚಿತ "ವಿವೇಕ ಚೂಡಾಮಣಿ". ಅದ್ವೈತ ಆಶ್ರಮ ಹಿಮಾಲಯದ ನಡುವೆ ಇದೆ ಎಂದು ತಿಳಿದೊಡನೆ ಬೇರೆ ಏನೂ ಯೋಚಿಸದೆ ಹಣಪಾವತಿ ಮಾಡಿ ಸೆಪ್ಟೆಂಬರ್ ತಿಂಗಳ ತರಗತಿಗೆ ನನ್ನ ಹಾಜರಿ ಕಾಯ್ದಿರಿಸಿದೆ. ಇದಾದ ನಂತರವೇ ನನಗೆ ತಿಳಿದದ್ದು ಅಣ್ಣ ಮತ್ತು ಅವನ ಸ್ನೇಹಿತರು ನವೆಂಬರ್ ತರಗತಿಗೆ ಬುಕ್ ಮಾಡಿದ್ದಾರೆಂದು. ಬೆಂಗಳೂರಿನಿಂದ ದೆಹಲಿಗೆ ವಿಮಾನ, ದೆಹಲಿಯಿಂದ ಹಲ್ದವಾನಿಗೆ ರೈಲು ಹಾಗೂ ಹಲ್ದವಾನಿಯಿಂದ ಅದ್ವೈತಾಶ್ರಮಕ್ಕೆ ಕಾರು ಎಂದು ನಿಶ್ಚಯವಾಯಿತು. ಒಬ್ಬನೇ ಹೋಗುತ್ತಿದ್ದರಿಂದ ಮನದ ಮೂಲೆಯಲ್ಲಿ ಸ್ವಲ್ಪ ಅಂಜಿಕೆಯೂ ಇತ್ತು.
ಒಂದು ದಿನ ನನ್ನ ಕಾಲೇಜು ಗೆಳೆಯ ಚೇತನ್ ಮನೆಗೆ ಬಂದಿದ್ದಾಗ ಈ ತರಗತಿಯ ವಿಷಯ ತಿಳಿಸಿದೆ. ವೇದಾಧ್ಯಯನ ಮಾಡುತ್ತಿರುವ ಅವನೂ ಈ ತರಗತಿಗೆ ಸೇರಲು ಆಸಕ್ತಿ ತೋರಿದ. ಕೂಡಲೇ ಅವನಿಗೂ ತರಗತಿಗೆ ಬುಕ್ ಮಾಡಿ ನಮ್ಮ ಬೇರೆ ಎಲ್ಲಾ ಪ್ರಯಾಣ ವ್ಯವಸ್ಥೆಗಳನ್ನು ಮಾಡಿಕೊಂಡೆವು. ಚೇತನ್ ನನ್ನ ಜೊತೆ ಬರುತ್ತಿದ್ದಾನೆ ಎಂಬುದು ಖಾತ್ರಿಯಾದ ಮೇಲೆ ಮನಸ್ಸಿನಲ್ಲಿದ್ದ ಅಂಜಿಕೆ ಮಾಯವಾಯಿತು.
ಅದ್ವೈತ ಆಶ್ರಮದ ಬಗ್ಗೆ
1899ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ವಿದೇಶಿ ಶಿಷ್ಯರಾದ ಸೆವಿಯರ್ ದಂಪತಿಗಳಲ್ಲಿ ಹಿಮಾಲಯದ ನಡುವಿನಲ್ಲಿ ಅದ್ವೈತ ಸಾಧಕರಿಗೇ ಮೀಸಲಾದ ಒಂದು ಆಶ್ರಮ ನಿರ್ಮಿಸಬೇಕೆಂಬ ಬಯಕೆಯನ್ನು ತೋಡಿಕೊಂಡರಂತೆ. ಈ ಬಯಕೆಯನ್ನು ನೆರವೇರಿಸಲು ಹೊರಟ ಸೆವಿಯರ್ ದಂಪತಿಗಳಿಗೆ ಚಂಪಾವತ್ ಊರಿನ ಮಾಯಾಪತ್ ಎಂಬಲ್ಲಿ ಒಂದು ಟೀ ಎಸ್ಟೇಟ್ ವ್ಯಾಪಾರಕ್ಕಿರುವುದು ತಿಳಿದು ಅದನ್ನು ಕೊಂಡು ಆಶ್ರಮವನ್ನು ನಿರ್ಮಿಸಿದರು. ಈ ಮಾಯಾಪತ್ ಜಾಗವೇ ಈಗ ಮಾಯಾವತಿ ಎಂದು ಕರೆಯಲ್ಪಟ್ಟಿದೆ.
ಮೇಲ್ನೋಟಕ್ಕೆ ಇದು ರಾಮಕೃಷ್ಣ ಆಶ್ರಮದ ಒಂದು ಅಂಗವಾಗಿದ್ದರೂ, ಕಾರ್ಯವೈಖರಿಯಲ್ಲಿ ಇದು ಸಂಪೂರ್ಣ ಅದ್ವೈತ ಸಿದ್ದಾಂತಕ್ಕೆ ಮೀಸಲಾಗಿದೆ. ಯಾವುದೇ ಮೂರ್ತಿ ಪೂಜೆ ಇಲ್ಲದೆ ಕೇವಲ ಓಂಕಾರ, ಜೀವಾತ್ಮ, ಪರಮಾತ್ಮ, ಮಾಯೆಗಳೆಂಬ ಆಧ್ಯಾತ್ಮಿಕ ವಿಚಾರಗಳ ಚರ್ಚೆ ಮತ್ತು ಉಪನ್ಯಾಸಗಳೇ ಇಲ್ಲಿನ ಮುಖ್ಯ ವಿಷಯಗಳು. ಈ ಉದ್ದೇಶಗಳಿಂದ ನಿರ್ಮಿಸಿದ ಈ ಆಶ್ರಮದಲ್ಲಿ ಒಮ್ಮೆ ಆಶ್ರಮದ ಸಂನ್ಯಾಸಿಗಳೊಬ್ಬರು ರಾಮಕೃಷ್ಣರ ಫೋಟೋ ಇಟ್ಟು ಪೂಜೆ ಮಾಡಲಾರಂಭಿಸಿದರು. ಇದನ್ನು ಗಮನಿಸಿದ ವಿವೇಕಾನಂದರು ಕೋಪಗೊಂಡು, ಆ ಫೋಟೋವನ್ನು ಕೂಡಲೇ ತೆಗೆಯಬೇಕೆಂದು ಆಜ್ಞೆ ಮಾಡಿದರು. ಆ ಸಂತರು ಬೇಸರಗೊಂಡು ಮಾತೆ ಶಾರದ ದೇವಿಗೆ ಇದರ ಬಗ್ಗೆ ಪತ್ರ ಬರೆದರು. ವಿವೇಕಾನಂದರು ಹೇಳುತ್ತಿರುವುದು ಸರಿಯಾಗಿಯೇ ಇದೆ, ಅಲ್ಲಿ ಯಾರ ಪೂಜೆಯೂ ಬೇಡ ಮತ್ತು ಈ ಅದ್ವೈತ ಸಿದ್ದಾಂತದಲ್ಲಿ ರಾಮಕೃಷ್ಣರು ಸಂಪೂರ್ಣವಾಗಿ ನಂಬಿಕೆ ಇಟ್ಟು ಆಚರಿಸುತ್ತಿದ್ದರಿಂದ ಅವರ ಅನುಯಾಯಿಗಳೂ ಇದನ್ನೇ ಆಚರಿಸಬೇಕು ಎಂದು ಪತ್ರಕ್ಕೆ ಉತ್ತರ ಕೊಟ್ಟರು.
ಆಶ್ರಮದ ಸುತ್ತ ಮುತ್ತ
ಲೋಹಾಘಾಟ್ ಎಂಬುವ ಹಳ್ಳಿಯಿಂದ, ಸುಮಾರು 7 ಕಿಲೋಮೀಟರ್ ದಟ್ಟ ಕಾಡಿನಲ್ಲಿ ಪ್ರಯಾಣಿಸಿದರೆ ಸಿಗುವುದೇ ಅದ್ವೈತ ಆಶ್ರಮ. ಡಾಂಬರು ರಸ್ತೆ ಆಶ್ರಮದ ವರೆಗೂ ಇದೆ. ಆಶ್ರಮದ ಮುಖ್ಯ ಕಟ್ಟಡದಲ್ಲಿ ಛಾಯಾಗ್ರಹಣ ನಿಷೇಧ. ಸುಮಾರು ನೂರಿಪ್ಪತ್ತು ವರ್ಷಕ್ಕೂ ಹಳೆಯದಾದ ಕಟ್ಟಡವನ್ನು ಟಾಟಾ ಹಾಗೂ ಇನಫೋಸಿಸ್ ಫೌಂಡೇಶನ್ ಸಹಾಯದಿಂದ ರಿಪೇರಿ ಮಾಡಲಾಗಿದೆ. 1901ರಲ್ಲಿ ಸ್ವಾಮಿ ವಿವೇಕಾನಂದರು ಈ ಆಶ್ರಮದಲ್ಲಿ 15 ದಿನ ಉಳಿದುಕೊಂಡಿದ್ದು ಅವರು ವಾಸಿಸಿದ್ದ ಕೊಠಡಿಗಳನ್ನು ಈಗ ಧ್ಯಾನ ಮಂದಿರವಾಗಿ ಪರಿವರ್ತಿಸಲಾಗಿದೆ.
ಆಶ್ರಮದ ಯಾವ ಕಡೆ ನೋಡಿದರೂ ಕಿಲೋಮೀಟರ್ಗಳಷ್ಟು ದೂರ ನಮಗೆ ಹಿಮಾಲಯದ ಶಿಖರಗಳು ಕಾಣಿಸುತ್ತವೆ. ಆಶ್ರಮದ ಪಕ್ಕದ ಬೆಟ್ಟ ಹತ್ತುತ್ತಾ ಸುಮಾರು 3 ಕಿಲೋಮೀಟರ್ ಕಾಡಿನ ರಸ್ತೆಯಲ್ಲಿ ನಡೆದರೆ ನಮಗೆ ವಿವೇಕಾನಂದರು ಧ್ಯಾನ ಮಾಡಿದ ಧರ್ಮಘಡ್ ಎಂಬ ಜಾಗವು ಸಿಗುತ್ತದೆ. ಮಳೆ ಇರುವ ಸಮಯದಲ್ಲಿ ಇಲ್ಲಿಗೆ ಹೋಗಲು ಸಾಧ್ಯವಿಲ್ಲ. ಜಾರಿಕೆ ಹಾಗೂ ಜಿಗಣೆಗಳ ಕಾಟ ಹೆಚ್ಚು.
ಆಶ್ರಮದ ಮತ್ತೊಂದು ಬದಿಯಲ್ಲಿರುವ ಬೆಟ್ಟ ಹತ್ತಿದರೆ ನಮಗೆ ವಿವೇಕ ಸರೋವರ ಸಿಗುತ್ತದೆ. ಇದು ಮಳೆನೀರಿನಿಂದ ಆಗಿರುವ ಒಂದು ಪುಟ್ಟ ಕೆರೆ ಎನ್ನಬಹುದು. ಇದರ ಅಕ್ಕಪಕ್ಕದಲ್ಲಿ ಆಶ್ರಮಕ್ಕೆ ಬೇಕಾದ ತರಕಾರಿ, ಜೋಳ, ಗೋದಿ ಎಲ್ಲವನ್ನೂ ಬೆಳೆಯುತ್ತಾರೆ. ಸುಮಾರು 30 ಜನ ಸ್ಥಳೀಯರಿಗೆ ಆಶ್ರಮ ಈ ಕೆಲಸಕ್ಕಾಗಿ ಉದ್ಯೋಗ ನೀಡಿದೆ.
ಆಶ್ರಮದ ಮತ್ತೊಂದು ಬದಿಯಲ್ಲಿ ಆಸ್ಪತ್ರೆ ಇದೆ. ಇದು ಕೂಡ ಆಶ್ರಮದವರೇ ನಡೆಸುತ್ತಿದ್ದು ಸುತ್ತಮುತ್ತಲಿನ ಸುಮಾರು 20 ಹಳ್ಳಿಗಳ ಜನ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಆಶ್ರಮದ ಬಸ್ ಹಳ್ಳಿಗಳಿಗೆ ಹೋಗಿ ಅನಾರೋಗ್ಯದಿಂದ ಬಳಲುತ್ತಿರುವವರನ್ನು ಕರೆದುಕೊಂಡು ಬಂದು ಅವರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿ ಸೂಕ್ತವಾದ ಔಷಧವನ್ನು ನೀಡಿ ಮಧ್ಯಾಹ್ನದ ಊಟವನ್ನು ಕೊಟ್ಟು ಮತ್ತೇ ಅದೇ ಬಸ್ಸಿನಲ್ಲಿ ಅವರನ್ನು ಹಳ್ಳಿಗಳಿಗೆ ಬಿಡಲಾಗುತ್ತದೆ. ಆಸ್ಪತ್ರೆಯಲ್ಲಿ ಸೇವೆ ಸಂಪೂರ್ಣ ಉಚಿತ.
ಆಶ್ರಮದಲ್ಲಿ ಅತಿಥಿಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ
ಮೂರು ಬೆಡ್‌ಗಳಿರುವ ಸುಮಾರು 50ಕ್ಕೂ ಹೆಚ್ಚು ಕೊಠಡಿಗಳು ಆಶ್ರಮದಿಂದ ಸುಮಾರು 500 ಮೀಟರ್ ದೂರದಲ್ಲಿದೆ. ಅತಿಥಿಗಳು 3 ರಾತ್ರಿಗಳು ಮಾತ್ರ ತಂಗಲು ಇಲ್ಲಿ ಅವಕಾಶವಿದೆ. ಮುಂಗಡವಾಗಿ ಈಮೈಲ್ ಕಳಿಸಿ ಕೊಠಡಿ ಕಾಯ್ದಿರಿಸಬೇಕಾಗುತ್ತದೆ. ಊಟ ತಿಂಡಿಗೆ ಆಶ್ರಮಕ್ಕೇ ಬರಬೇಕು, ಬೇರೆ ಎಲ್ಲೂ ಹೋಗಲು ಸಾಧ್ಯವಿಲ್ಲ. ಊಟ ತಿಂಡಿಗೆ ಉಪಯೋಗಿಸುವ ಸಾಕಷ್ಟು ಪದಾರ್ಥಗಳು ಅಂದರೆ ತರಕಾರಿ, ಗೋದಿ, ಜೋಳ ಎಲ್ಲವೂ ಆಶ್ರಮದವರೇ ಬೆಳೆದದ್ದು. ಭಾಗಶಃ ಎಲ್ಲಾ ಆಹಾರದಲ್ಲು ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೇ ಮತ್ತು ಹೂಕೋಸು ಇವೆಲ್ಲವೂ ಇದ್ದೇ ಇರುತ್ತದೆ. ಉಳಿದುಕೊಳ್ಳುವುದು, ಊಟ ಇವೆಲ್ಲವೂ ಉಚಿತ.
ಆಧ್ಯಾತ್ಮ ವಿಷಯದಲ್ಲಿ ಗಂಭೀರವಾದ ಚಿಂತನೆ ಮಾಡುವವರಿದ್ದರೆ ಮಾತ್ರ ಈ ಪರಿಸರವನ್ನು ಅನುಭವಿಸಲು ಸಾಧ್ಯ. ಕೇವಲ ಪ್ರವಾಸಕ್ಕೆಂದು ಹೋದರೆ ಏನೂ ಪ್ರಯೋಜನವಿಲ್ಲ, ಒಂದೇ ದಿನಕ್ಕೆ ಸಾಕೆನಿಸಿಬಿಡಬಹುದು.
ವರ್ಷದಲ್ಲಿ ೬ ತಿಂಗಳು ಮಾತ್ರ ಆಶ್ರಮವು ಅತಿಥಿಗಳಿಗೆ ಲಭ್ಯವಿರುತ್ತದೆ. ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಮತ್ತು ಏಪ್ರಿಲ್‌ನಿಂದ ಜೂನ್‌ವರೆಗೆ
ಆಶ್ರಮ ತಲುಪುವುದು ಹೇಗೆ
1. ಬೆಂಗಳೂರಿನಿಂದ ದೆಹಲಿಗೆ ವಿಮಾನ ಅಥವಾ ರೈಲು, ಅಲ್ಲಿಂದ ಹಲ್ದವಾನಿಗೆ 8 ಗಂಟೆಗಳ ರೈಲು ಪ್ರಯಾಣ ಮತ್ತೇ ಅಲ್ಲಿಂದ ೫ ಗಂಟೆಗಳು ಕಾರು ಪ್ರಯಾಣ.
2. ಬೆಂಗಳೂರಿನಿಂದ ಬರೇಲಿಗೆ ವಿಮಾನ ಮತ್ತು ಅಲ್ಲಿಂದ 8 ಗಂಟೆಗಳ ಕಾರು ಪ್ರಯಾಣ
3. ಬೆಂಗಳೂರಿನಿಂದ ದೆಹಲಿಗೆ ವಿಮಾನ ಅಥವಾ ರೈಲು, ದೆಹಲಿಯಿಂದ ಬಸ್ಸಿನಲ್ಲಿ ಲೋಹಾಘಾಟ್‌ಗೆ ಸುಮಾರು 16 ಗಂಟೆಗಳ ಪ್ರಯಾಣ, ಲೋಹಾಘಾಟಿನಿಂದ 15 ನಿಮಿಷ ಆಟೋ ಅಥವಾ ಕಾರು ಪ್ರಯಾಣ.
ಶ್ರವಣ, ಮನನ ಮತ್ತು ನಿದಿಧ್ಯಾಸನವನ್ನೆಲ್ಲಾ ಕೂಡಿಸಿ ನಮಗೆ ಶ್ರೀ ಶುದ್ಧಿದಾನಂದ ಸ್ವಾಮಿಗಳು ಹೇಳಿಕೊಟ್ಟ ವಿವೇಕ ಚೂಡಾಮಣಿ ಪಾಠ ಜೀವನಕ್ಕೆ ಹೊಸ ಆಯಾಮವನ್ನೇ ಸೂಚಿಸಿತು. ಮಧ್ಯೆ ಮಧ್ಯೆ ಸಮಯ ಸಿಕ್ಕಾಗ ಕಾಡಿನಲ್ಲಿ ನಡೆದಾಡಿದ್ದಂತೂ ಎಂದೂ ಮರೆಯಲಾಗದ ಅನುಭವ.
ಇದು ಪ್ರವಾಸ ಕಥನವಾದ್ದರಿಂದ, ಪಾಠದ ಬಗ್ಗೆ ಹೆಚ್ಚು ಹಂಚಿಕೊಳ್ಳಲು ನಾನು ಇಷ್ಟಪಡುವುದಿಲ್ಲ.
ಸಾಮಾನ್ಯವಾಗಿ ಆಶ್ರಮದ ಸಾಧುಗಳಿಂದ ಮಂತ್ರದೀಕ್ಷೆ ಪಡೆದುಕೊಂಡಿದ್ದವರಿಗೇ ಮೀಸಲಾಗಿದ್ದ ಈ “ಅದ್ವೈತಾಮೃತಮ್” ಇದೇ ಮೊದಲ ಬಾರಿಗೆ ಹೊರಗಿನವರಿಗೂ ಅವಕಾಶ ನೀಡಿದ್ದು ಮತ್ತು ಅದರ ಮೊದಲ ಆವೃತ್ತಿಯಲ್ಲಿ ನಾನು ಒಬ್ಬನಾಗಿದ್ದು ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯವೇ ಸರಿ ಎಂದು ಭಾವಿಸುತ್ತೇನೆ.
ಹೆಚ್ಚಿನ ವಿಷಯಗಳಿಗೆ www.advaithaashrama.orgಗೆ ಭೇಟಿ ಕೊಡಿ