ನಿಮಗೆ ಕಾಡಿನ ಪರಿಸರದಲ್ಲಿ ಒಂದೆರೆಡು ದಿನ ಉಳಿದುಕೊಳ್ಳುವ ಬಯಕೆಯೇ, ನಗರದ ವಾಣಿಜ್ಯ ಜೀವನ ಶೈಲಿಯಿಂದ ಹೊರಗುಳಿಯುವ ಆಸೆಯೇ, ಶುದ್ದ ಸಸ್ಯಾಹಾರಿ ಹವ್ಯಕರ ರುಚಿಯಾದ ಊಟ ಸೇವಿಸಬೇಕೇ, ಹಾಗಾದರೆ ಪ್ರಗತಿ ಹೋಮ್‌ಸ್ಟೇ ನೀವು ಭೇಟಿನೀಡಲೇಬೇಕಾದ ಸ್ಥಳ. ಬೆಂಗಳೂರಿನಿಂದ ಶಿರಸಿ ಮಾರ್ಗದಲ್ಲಿ ಸುಮಾರು 435 ಕಿಲೋಮೀಟರ್ ದೂರದಲ್ಲಿದೆ ಈ ಪ್ರಗತಿ ಹೋಮ್‌ಸ್ಟೇ. ಬೇಗ ತಲುಪಬೇಕೆಂಬುವ ಆಸೆ ಇರುವವರು ಬೆಂಗಳೂರು-ತುಮಕೂರು-ದಾವಣಗೆರೆ-ರಾಣೆಬೆನ್ನೂರು ಮಾರ್ಗವಾಗಿ ಪಯಣಿಸುತ್ತಾರೆ. ಪ್ರಕೃತಿಯ ಸೌಂದರ್ಯವನ್ನು ಅನುಭವಿಸುತ್ತಾ ಪ್ರಯಾಣ ಮಾಡ ಬಯಸುವವರು ಶಿವಮೊಗ್ಗ-ಸಾಗರದ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ.
ಸೆಪ್ಟೆಂಬರ್ 2021 ಮೊದಲನೇ ವಾರದಲ್ಲಿ ನನ್ನ ಅಕ್ಕನ ಮನೆಯಲ್ಲಿ ಈ ಪ್ರವಾಸದ ಬಗ್ಗೆ ಪೂರ್ವತಯಾರಿ ಶುರುವಾಯಿತು. ಸುಮಾರು ಒಂದೂವರೆ ವರ್ಷದಿಂದ ಕೊರೋನಾದಿಂದಾಗಿ ಮನೆಯ ಒಳಗೇ ಉಳಿದಿದ್ದ ನಾವು ಎಲ್ಲಾದರೂ ಒಂದೆರೆಡು ದಿನ ಹೋಮ್‌ಸ್ಟೇಗೆ ಹೋಗೋಣ ಎಂದು ನಿರ್ಧಾರ ಮಾಡಿದೆವು. ಸೆಪ್ಟೆಂಬರ್ 16,17,18 ಎಂದು ದಿನಾಂಕ ನಿಗದಿಯಾಯಿತು. ನಾನು, ನನ್ನ ಅಣ್ಣನ ಮಗ ಪ್ರಣವ್, ನನ್ನ ಅಕ್ಕನ ಮಗ ವೈಭವ್, ನನ್ನ ಭಾವ ಪ್ರಸಾದ್ ಹಾಗೂ ನನ್ನ ಅಕ್ಕನ ಅಳಿಯ ಅಮಿತ್ ಐದು ಜನ ನಮ್ಮ ಭಾವನ ಕಾರಿನಲ್ಲಿ ಹೋಗುವುದಾಗಿ ನಿರ್ಧರಿಸಿದೆವು.
ಮದುವೆಯ ದಿನಾಂಕ ನಿಗದಿಯಾದ ಮೇಲೆ ಛತ್ರ ಹುಡುಕುವ ಹಾಗೆ, ಪ್ರವಾಸದ ದಿನಾಂಕ ನಿಗದಿಯಾದ ಮೇಲೆ ನಾವು ಪ್ರವಾಸ ಮಾಡಬೇಕಾದ ಸ್ಥಳವನ್ನು ಹುಡುಕಲು ಪ್ರಾರಂಭಿಸಿದೆವು. ಕರ್ನಾಟಕದಲ್ಲಿ ಹೋಮ್‌ಸ್ಟೇಗಳಿಗೇನು ಕಡಿಮೆ ಇಲ್ಲ. ಆದರೆ ನಮಗೆ ಶುದ್ದ ಸಸ್ಯಾಹಾರಿ ಅಡುಗೆ ಮಾತ್ರ ಮಾಡುವ, ಧೂಮಪಾನ, ಮಧ್ಯಪಾನ ನಿಷೇಧವಿರುವ ಹೋಮ್‌ಸ್ಟೇ ಬೇಕಿತ್ತು. ಅಂತರ್ಜಾಲದಲ್ಲಿ ಹುಡುಕಿದೆವು. ನಾವು ನಿರ್ಧರಿಸಿದ್ದ ದಿನಕ್ಕೆ ಕೆಲವು ಹೋಮ್‌ಸ್ಟೇಗಳು ಭರ್ತಿಯಾಗಿತ್ತು. ಹೀಗಿರುವಾಗ ನನ್ನ ಅಣ್ಣನ ಸಂಸಾರ ಏಳು ವರ್ಷಕ್ಕೆ ಹಿಂದೆ ಹೋಗಿದ್ದ ಪ್ರಗತಿ ಹೋಮ್‌ಸ್ಟೇ ಬಗ್ಗೆ ಅಣ್ಣನ ಮಗ ತಿಳಿಸಿದ. ಅಲ್ಲಿಗೆ ಫೋನ್‌ಮಾಡಿ ಎರಡು ದಿನಕ್ಕೆ ಹೋಮ್‌ಸ್ಟೇ ಕಾಯ್ದಿರಿಸಿ ಮುಂಗಡ ಹಣವನ್ನು ಪಾವತಿಸಿದ ಮೇಲೆ ನಮಗೆ ವಿಷಯ ತಿಳಿಸಿದರು ಅಮಿತ್.
ಎರಡು ದಿನ ಹೋಮ್‌ಸ್ಟೇಯಲ್ಲೇ ಉಳಿಯುವುದೆ ಅಥವಾ ಸುತ್ತಲೂ ಇರುವ ವೀಕ್ಷಣಾ ಸ್ಥಳಗಳನ್ನು ನೋಡಲು ತಿರುಗಬೇಕೆ ಎಂಬುದು ಮುಂದಿನ ಪ್ರಶ್ನೆ. ಊರು ಸುತ್ತುವುದೇ ಗುರಿಯಾಗಿದ್ದರೆ ಕಡಿಮೆ ದರದಲ್ಲಿ ಹೋಟಲ್ ರೂಮ್ ಬುಕ್ ಮಾಡಬಹುದಿತ್ತು, ಹೋಮ್ ಸ್ಟೇ ಯಾಕೆಬೇಕಿತ್ತು ಎಂಬುದು ನನ್ನ ವಾದ. ಮುಖ್ಯವಾಗಿ, ಪಯಣಿಸಬೇಕಿದ್ದ ಎಲ್ಲರಿಗೂ ಹೋಮ್ ಸ್ಟೇಯಲ್ಲೇ ಉಳಿಯುವ ಆಸೆಯಿತ್ತು. ಪ್ರವಾಸದ ದಿನ ಹತ್ತಿರಬರುತ್ತಿದ್ದಂತೆ ನನ್ನ ಭಾವನಿಗೆ ಅನಾರೋಗ್ಯವಾಗಿ, ಮಿಕ್ಕ ನಾಲ್ಕು ಜನರು ಮಾತ್ರ ಪ್ರಯಾಣ ಮುಂದುವರೆಸುವುದು ಎಂದು ನಿರ್ಧರಿಸಿದೆವು.
ಸೆಪ್ಟೆಂಬರ್ 16 ಬೆಳಗ್ಗೆ 5.30ಕ್ಕೆ ಬೆಂಗಳೂರಿನಿಂದ ಹೊರಟು ಸುಮಾರು ಮದ್ಯಾಹ್ನ ಎರಡು ಗಂಟೆಗೆ ಪ್ರಗತಿ ಹೋಮ್‌ಸ್ಟೇ ತಲುಪಿದೆವು. ಹೋಮ್‌ಸ್ಟೇ ವಾಸ ನನಗಂತು ಇದು ಮೊದಲನೆಯದು. ಎರಡು ಕೊಠಡಿಗಳನ್ನು ನಮಗೆ ನೀಡಿದರು. ಕೊಠಡಿಯ ಒಳಗೆ ಹೋಗಿ ನೋಡಿದರೆ ಕೊಠಡಿ ಹಾಗೂ ಶೌಚಾಲಯಗಳ ಶುಭ್ರತೆ ನಮ್ಮನ್ನು ಮನಸೂರೆಗೊಂಡಿತ್ತು. ಪ್ರತಿಯೊಂದು ಕೊಠಡಿಯ ಹಿಂದೆ ಒಂದು ಚಿಕ್ಕ ಸಿಟ್ ಔಟ್, ಅಲ್ಲಿ ಕುರ್ಚಿಯ ಮೇಲೆ ಕುಳಿತು ನೋಡಿದರೆ, ಸುಮಾರು ನೂರು ಮೀಟರ್ ಆಳದಲ್ಲಿ ಭತ್ತದ ಗದ್ದೆ, ಪಕ್ಕದಲ್ಲಿ ಜೋರಾಗಿ ಹರಿಯುತ್ತಿರುವ ಅಘನಾಶಿನಿ ನದಿ ಹಾಗೂ ನದಿಯ ಹಿಂದೆ ಕಣ್ಣಿನ ನೋಟದ ಅಳತೆ ಮೀರಿ ಹಸುರಿನ ದಟ್ಟ ಕಾಡು ಹಾಗೂ ಬೆಟ್ಟ ಗುಡ್ಡಗಳು. ಹೋಮ್ ಸ್ಟೇಯ ನಮ್ಮ ಆಯ್ಕೆ ಸರಿಯಾಗಿದೆ ಎಂಬುದು ನಮಗೆ ಖಾತ್ರಿಯಾಗಿತ್ತು.
ಮುಖ ತೊಳೆದು ಸ್ವಲ್ಪ ಫ್ರೆಶ್ ಆದ ತಕ್ಷಣ, ಹೋಮ್‌ಸ್ಟೇ ಮುಖ್ಯಸ್ಥರಾದ ಶ್ರೀ ಚಂದ್ರಶೇಖರ ಭಟ್ ಅವರು ನಮ್ಮನ್ನು ಊಟಕ್ಕೆ ಆಹ್ವಾನಿಸಿದರು. ಕೊಠಡಿಗಳ ಮುಂದೆಯೇ ಪ್ರಕೃತಿಯನ್ನು ವೀಕ್ಷಿಸುತ್ತಾ ಭೋಜನ. ಶುದ್ದ ಹವ್ಯಕ ಸಂಪ್ರದಾಯದ ಸಸ್ಯಾಹಾರಿ ಭೋಜನದ ರುಚಿಗೆ ನಾವೆಲ್ಲಾ ಶರಣಾದೆವು. ಊಟದ ರುಚಿಯ ಜೊತೆಗೆ ಹತ್ತಿರದ ಬಂಧುಗಳನ್ನು ವಿಚಾರಿಸಿಕೊಳ್ಳುವಂತೆ ನಮ್ಮನ್ನು ವಿಚಾರಿಸಿಕೊಳ್ಳುತ್ತಾ ಊಟ ಬಡಿಸಿದ ಭಟ್ ಅವರ ಪ್ರೀತಿಯ ಆತಿಥ್ಯ. ಚಪಾತಿ, ಜೋನಿಬೆಲ್ಲ-ತುಪ್ಪ, ಚಟ್ನಿ, ಉಪ್ಪಿನಕಾಯಿ ಇಲ್ಲಿಂದ ಆರಂಭವಾದ ಊಟ, ಅನ್ನ ತಂಬುಳಿ, ಸಾಂಬಾರ್, ಹಪ್ಪಳ, ಸೀ ಕಡುಬು ಹೀಗೆ ಮುಂದುವರಿದು, ಚಾಕುವಿನಿಂದ ಕಡಿಯಬೇಕೇನೋ ಎಂಬಂತಿದ್ದ ಗಟ್ಟಿಯಾದ ಮೊಸರು ಹಾಗೂ ಅದಕ್ಕೆ ಅನ್ನ ಕಲಿಸಿಕೊಂಡು ತಿಂದಾಗ ಊಟ ಮುಗಿದಿತ್ತು. ನಮ್ಮ ಕಾರ್ ಪ್ರಯಾಣದಲ್ಲಿ ನಾವು ಬೆಳಗ್ಗೆ ತಿಂದಿದ್ದ 4 ಇಡ್ಲಿ ಯಾವಗಲೋ ಮಾಯವಾಗಿ ಹಸಿವು ಇನ್ನೇನು ಪ್ರಾರಂಭವಾಗುತ್ತದೆ ಎಂಬ ಸಮಯದಲ್ಲಿ ದೊರೆತ ಈ ಹವ್ಯಕ ಊಟ ಮೃಷ್ಟಾನ್ನ ಭೋಜನವೇ ಸರಿ.
ನಂತರ ಒಂದು ಗಂಟೆ ಬ್ಯಾಡ್ಮಿಂಟನ್ ಹಾಗೂ ಕ್ರಿಕೇಟ್ ಆಟ, "ಕಾಫೀ ಟೀ ಏನು ಕುಡಿಯುತ್ತೀರಿ?" ಎಂಬುದು ಭಟ್ ಅವರ ಪ್ರಶ್ನೆ. ಬೇಂಗಳೂರಿನವರಿಗೆ ಯಾವುದೇ ಬೇರೆ ಊರಿನಲ್ಲಿ ಕಾಫಿ, ಟೀ ರುಚಿಸುವುದಿಲ್ಲ ಎಂಬುದು ನಮ್ಮ ಹಿಂದಿನ ಪ್ರವಾಸಗಳಿಂದ ನಮಗೆ ಖಾತ್ರಿಯಾಗಿತ್ತು. ಹಾಗಾಗಿ ಮಲ್‌ನಾಡ್ ಕಷಾಯ ಬೇಕೆಂದು ತಿಳಿಸಿದೆವು. ಬಾಳೆಕಾಯಿ ಚಿಪ್ಸ್ ಜೊತೆ ಕಷಾಯ ಕುಡಿದು ಅಲ್ಲೇ ಹೋಮ್ ಸ್ಟೇಯಿಂದ ಆಚೆ ರಸ್ತೆಯಲ್ಲಿ ಒಂದು ಕಿಲೋಮೀಟರ್ ನಡೆದೆವು. ನಮ್ಮ ಕ್ಯಾಮೆರಾಗಳಿಗೆ ಕೆಲವು ಪಕ್ಷಿಗಳು ಸಿಕ್ಕವು. ರಸ್ತೆಯ ಒಂದು ಬದಿಯಲ್ಲಿ ಬೆಟ್ಟ ಮತ್ತೊಂದು ಬದಿಯಲ್ಲಿ ಅಡಿಕೆ ಹಾಗೂ ಬಾಳೆಯ ತೋಟ. ಸುಮಾರು ಒಂದು ಗಂಟೆ ನಡೆದು ವಾಪಸ್ ಹೋಮ್‌ಸ್ಟೇಗೆ ಬಂದು ಹರಟೆ ಹೊಡೆಯುತ್ತಾ ಕುಳಿತೆವು. ಹೋಮ್ ಸ್ಟೇಯಲ್ಲಿ ಭಟ್ ಅವರ ಸಂಸಾರ ಬಿಟ್ಟರೆ ನಾವು ನಾಲ್ಕು ಜನ ಮಾತ್ರ ಇದ್ದದ್ದು. ರಾತ್ರಿ ಮತ್ತೆ ರುಚಿಕರವಾದ ಊಟ. ನಂತರ ಕಪ್ಪೆಗಳ ಛಾಯಗ್ರಹಣಕ್ಕೆ ಹೋಮ್ ಸ್ಟೇ ಗೇಟಿನವರೆಗೆ ಒಂದು ಚಿಕ್ಕ ನಡಿಗೆ. ಆದರೆ ಕತ್ತಲಿನಿಂದಾಗಿ ಯಾವ ಕಪ್ಪಯೂ ಕಣ್ಣಿಗೆ ಬೀಳಲಿಲ್ಲ. ಕೊಠಡಿಗೆ ಬಂದು ಒಂದೆರೆಡು ಗಂಟೆಗಳ ಕಾಲ ಇಸ್ಪೀಟ್ ರಮ್ಮಿ ಆಟ. ಕೇವಲ ಮನರಂಜನೆಗಾಗಿ ಅಷ್ಟೇ, ಯಾರಿಗೂ ಜೂಜಿನಂತೆ ಇಸ್ಪೀಟ್ ಆಡುವ ಅಭ್ಯಾಸವಿರಲಿಲ್ಲ. ರಾತ್ರಿಯೆಲ್ಲಾ ವಟಗುಟ್ಟುತ್ತಿದ್ದ ಕಪ್ಪೆಗಳು, ಹರಿಯುತ್ತಿದ ನದಿ ಹಾಗೂ ಒಂದೇ ಸಮನೆ ಕೀ ಎಂದು ಕಿರುಚಿತ್ತಿದ್ದ ಕ್ರಿಕೆಟ್ ಹುಳುಗಳ ಶಬ್ದದ ನಡುವೆ ನಮ್ಮ ಸುಖನಿದ್ರೆ.
ಮಾರನೇ ದಿನ ಬೆಳಗ್ಗೆ 6 ಗಂಟೆಗೆ ಎದ್ದು ಕಷಾಯ ಕುಡಿದು ಮತ್ತೆ ಹಿಂದಿನ ದಿನ ನಡೆದಿದ್ದ ಅದೇ ದಾರಿಯಲ್ಲಿ ಇನ್ನಷ್ಟು ಮುಂದೆ ಹೋಗಿ ಪಕ್ಷಿಗಳನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಬಹುದಾದ ಸೂಕ್ತ ಸ್ಥಳದಲ್ಲಿ ನಿಂತು ಪಕ್ಷಿಗಳಿಗಾಗಿ ಕಾದೆವು. ನಮ್ಮ ಅದೃಷ್ಟಕ್ಕೆ ಬಣ್ಣ ಬಣ್ಣದ ಒಂದೆರಡು ಪಕ್ಷಿಗಳನ್ನು ನೋಡಿದೆವು. ಸುಮಾರು 9 ಗಂಟೆಗೆ ನಾವು ಹೋಮ್‌ಸ್ಟೇಗೆ ಬರುವ ಹೊತ್ತಿಗೆ ಬೆಳಗಿನ ಉಪಹಾರಕ್ಕೆ ಭಟ್ ಹಾಗೂ ಅವರ ಪತ್ನಿ ಅಣಿಮಾಡಿಕೊಳ್ಳುತ್ತಿದ್ದರು. ನಮ್ಮ ಊಟದ ಮೇಜಿನ ಪಕ್ಕಕ್ಕೆ ಗ್ಯಾಸ್ ಸ್ಟೌವ್ ಹಾಗೂ ಸಿಲಿಂಡರ್ ಬಂದು ತೆಳ್ಳಗಿನ ದೋಸೆಯನ್ನು ಭಟ್ ಹಾಗೂ ಅವರ ಪತ್ನಿ ಮಾಡಿದರು. ಚಟ್ನಿ, ಜೋನಿಬೆಲ್ಲ-ತುಪ್ಪ ಹಾಗೂ ತರಕಾರಿ ಸಾಗುವಿನ ಜೊತೆ ಎಷ್ಟು ಬಿಸಿ ಬಿಸಿ ದೋಸೆ ನಮ್ಮ ಹೊಟ್ಟೇ ಸೇರಿತೋ ಲೆಕ್ಕವಿಡಲು ಸಾಧ್ಯವೇ ಆಗಲಿಲ್ಲ. ಇಷ್ಟೆಲ್ಲಾ ತಿಂದ ಮೇಲೆ ನಿದ್ದೆಯ ಕಡೆ ಮನಸ್ಸು ವಾಲುತ್ತಿದ್ದರೂ ಭಟ್ ಅವರು "ನಿಮಗೆಲ್ಲಾ ಸಾಧ್ಯವಾಗುವುದಾದರೆ ಹೋಮ್‌ಸ್ಟೇ ಹಿಂದಿರುವ ಕರ್ಪೂಣಿಕ ತಲೆ ಬೆಟ್ಟಕ್ಕೆ ಚಿಕ್ಕ ಚಾರಣ ಹೋಗಿ ಬರೋಣವೆ" ಎಂದು ಕೇಳಿದರು. 4 ಜನರಲ್ಲಿ ನನಗೊಬ್ಬನಿಗೆ ಚಾರಣದ ಅನುಭವವಿದ್ದದ್ದು, ಮಿಕ್ಕ ಮೂವರಿಗೆ ಮೊದಲನೇ ಚಾರಣ ಮಾಡುವ ಉತ್ಸಾಹ. ಹೊಟ್ಟೆ ಭಾರವಿದ್ದರೂ ಚಾರಣಕ್ಕೆ ಒಪ್ಪಿದೆವು.
ನೋಡುವುದಕ್ಕೆ ಒಂದು ಚಿಕ್ಕ ಬೆಟ್ಟ, ಬೆಟ್ಟದ ತುದಿ ತಲುಪುವಷ್ಟು ಹೊತ್ತಿಗೆ ನಾವು ತಿಂದ ಅರ್ಧ ತಿಂಡಿ ಹೊಟ್ಟೆಯಲ್ಲಿ ಖಾಲಿಯಾಗಿತ್ತು. ಬೆಟ್ಟದ ತುದಿಯಿಂದ ಸ್ವಲ್ಪ ಸಮತಟ್ಟಾದ ಜಾಗದಲ್ಲಿ ರಸ್ತೆಯೇ ಕಾಣದ ಗಿಡಗಳ ಮಧ್ಯೆ ನಮ್ಮ ನಡಿಗೆ, ಮತ್ತೆ ಇನ್ನೊಂದು ಬೆಟ್ಟ ಹತ್ತಿದೆವು. ಈ ಬೆಟ್ಟದ ತುದಿಯಿಂದ ಎತ್ತ ಕಡೆ ನೋಡಿದರೂ ಹಸಿರು ಕಾಡು. ಅಲ್ಲೇ ಸಾಕಷ್ಟು ಹೊತ್ತು ಉಳಿದುಕೊಳ್ಳೋಣ ಎಂಬ ಆಸೆ. ಆದರೆ ತಿಂದ ದೋಸೆಯಲ್ಲಾ ಹೊಟ್ಟೆಯಲ್ಲಿ ಖಾಲಿಯಾಗಿತ್ತು. ಮದ್ಯಾಹ್ನ ಊಟಕ್ಕೆ ಹೊಟ್ಟೆ ತಯಾರಿ ನಡೆಸುತ್ತಿತ್ತು. ಬೇರೊಂದು ರಸ್ತೆಯಲ್ಲಿ ನಾವು ಕೆಳಗಿಳಿದು ಬಂದು ಹೋಮ್‌ಸ್ಟೇಯ ಮತ್ತೊಂದುಕಡೆಗೆ ಸೇರಿಕೊಂಡೆವು. ಚಾರಣದ ಪೂರ್ತಿಯೂ ಉಂಬಳಗಳು (ಜಿಗಣೆಗಳು) ನಮ್ಮೊಡನೆ ಯುದ್ದ ಮಾಡುತ್ತಿತ್ತು. ನನಗೆ ಈ ಉಂಬಳವೇನೂ ಹೊಸದಲ್ಲ, ಹಾಗಾಗಿ ಹೋಮ್‌ಸ್ಟೇಗೆ ಹೋಗಿ ಒಮ್ಮೆ ಪೂರ್ತಿ ದೇಹವೆಲ್ಲಾ ಉಂಬಳಕ್ಕಾಗಿ ಶೋಧನೆ ನಡೆಸಿದರಾಯಿತು ಅಂದುಕೊಂಡೆ. ಮಿಕ್ಕ ಮೂವರು ಭಟ್ ಅವರು ಚಿಕ್ಕ ಬಟ್ಟೆಯಲ್ಲಿ ಸುತ್ತಿಕೊಟ್ಟಿದ್ದ ಉಪ್ಪಿನ ಗಂಟಿನಿಂದ ಆಗಾಗ ಅವರ ಮೇಲೆ ಹತ್ತುತ್ತಿದ್ದ ಉಂಬಳಗಳನ್ನು ತೆಗೆದೆಸೆಯುತ್ತಿದ್ದರು. ಹೋಮ್ ಸ್ಟೇ ತಲುಪಿದ ಮೇಲೆ ನನ್ನ ಕಾಲು ಹಾಗೂ ಕೈಗಳ ಮೇಲೆ 4 ಉಂಬಳಗಳು ಕುಳಿತು ಚೆನ್ನಾಗಿಯೇ ರಕ್ತ ಹೀರಿದ್ದವು. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಈ ಉಂಬಳಗಳ ಕಡಿತ ತೊಂದರೆಯೇನೂ ಮಾಡುವುದಿಲ್ಲ ಎಂಬ ನಂಬಿಕೆ ನನಗಿತ್ತು. ಚಾರಣ ನಾವು ಊಹಿಸಿದ್ದಕ್ಕಿಂತ ಸ್ವಲ್ಪ ಕಠಿಣವಾಗಿದ್ದರೂ ಏನೋ ಸಾಧನೆ ಮಾಡಿದೆವೆಂಬ ಸಂತೋಷ ಮನದಲ್ಲಿ ತುಂಬಿತ್ತು.
ಮದ್ಯಾಹ್ನ ಒಂದು ಗಂಟೆಯಾದರೂ ನಾವು ಸ್ನಾನ ಮಾಡಿರಲಿಲ್ಲ. ಪ್ರಣವನಿಗೆ ನದಿಗೆ ಹೋಗುವ ಆಸೆ, ಆದರೆ ನದಿಯ ರಭಸ ನೋಡಿದರೆ ನನಗಂತೂ ನದಿಗೆ ಇಳಿಯುವ ಅಥವಾ ಅವರುಗಳನ್ನು ಇಳಿಸುವ ಧೈರ್ಯವಿರಲಿಲ್ಲ. ಆದರೆ ಭಟ್ ಅವರು ನದಿಯಲ್ಲಿ ಸ್ನಾನ ಮಾಡಲು ನಮಗೆ ಒಂದು ಸುರಕ್ಷಿತವಾದ ಸ್ಥಳವನ್ನು ತೋರಿಸಿದರು. ಆ ಜಾಗದಲ್ಲಿ ನದಿಯ ತಳ ಗಟ್ಟಿಗಿದ್ದು ನಾವು ಅದರ ಮೇಲೆ ಕುಳಿತುಕೊಂಡರೆ ನದಿಯ ನೀರು ನಮ್ಮ ಕುತ್ತಿಗೆ ಮಟ್ಟಕ್ಕೆ ಹರಿಯುತ್ತಿತ್ತು. ಹೆಚ್ಚು ಮುಂದೆ ಹೋಗುವುದು ಬೇಡವೆಂದು ತಿಳಿಸಿದ ಭಟ್ ಅವರ ಆದೇಶವನ್ನು ನಾವು ಪಾಲಿಸಿದೆವು.
ಚಾರಣ ಹಾಗೂ ನದಿಯ ಸ್ನಾನದಿಂದಾಗಿ ಹೊಟ್ಟೆಯಲ್ಲಿ ಏನೂ ಉಳಿದಿರಲಿಲ್ಲ. ಮದ್ಯಾಹ್ನದ ಭರ್ಜರಿ ಸಸ್ಯಾಹಾರಿ ಹವ್ಯಕ ಊಟ. ಊಟಕ್ಕೆ ಸಿಹಿತಿಂಡಿಯಾಗಿ ಬಾಳೆ ಶಾವಿಗೆ ಮತ್ತು ತುಪ್ಪ. ತಂಬುಳಿ, ಸಾಂಬಾರ್, ಮೊಸರನ್ನದ ಜೊತೆಗೆ ಉಪ್ಪಿನಕಾಯಿ ಮತ್ತು ಎಂದಿನಂತೆ ಚಪಾತಿ-ಚಟ್ನಿ-ಪಲ್ಯ , ಭಟ್ ಅವರ ಆತಿಥ್ಯ ಎಲ್ಲವೂ ಸೇರಿ ಹೊಟ್ಟೆ ಭರ್ತಿ ಊಟ ಮಾಡಿ ಹತ್ತಿರದಲ್ಲೇ ಇದ್ದ ಉಂಚಳ್ಳಿ ಜಲಪಾತದ ನಮ್ಮ ಪ್ರಯಾಣ ರದ್ದುಮಾಡಿದೆವು. ಸಂಜೆಗೆ ರಸ್ತೆಯಲ್ಲಿ ಮತ್ತೊಂದು ನಡಿಗೆ, ಪಕ್ಷಿ ಛಾಯಾಗ್ರಹಣ, ರಾತ್ರಿ ಊಟ, ಒಂದು ಸ್ವಲ್ಪಹೊತ್ತು ರಮ್ಮಿ ಆಟ ಹಾಗೂ ಸುಖನಿದ್ರೆ ಮಾಡುವಲ್ಲಿ ನಮ್ಮ ಎರಡನೇ ದಿನ ಮುಗಿದಿತ್ತು.
ಕಡೆಯ ದಿನ ಮುಂಜಾನೆಯೇ ಮತ್ತೊಂದು ರಸ್ತೆನಡಿಗೆ ಮುಗಿಸಿ, ಬಿಸಿಬಿಸಿ ನೀರಿನಲ್ಲಿ ಸ್ನಾನ ಮಾಡಿ ಕಡಬು (ಇಡ್ಲಿಯ ರುಚಿ) ಸಾಂಬಾರ್ ಹಾಗೂ ಚಟ್ನಿ ತಿಂದು ಹೋಮ್‌ಸ್ಟೇಯಿಂದ ನಿರ್ಗಮಿಸಿ ಬೆಂಗಳೂರಿನ ಕಡೆಗೆ ಪಯಣ. ಮಧ್ಯದಲ್ಲಿ ಶೀರಾ ಹತ್ತಿರ ಇರುವ ಪುರೋಹಿತ್ ರಾಜಸ್ಥಾನಿ ಹೋಟಲ್ಲಿನಲ್ಲಿ ನಾರ್ತ್ ಇಂಡಿಯನ್ ಊಟ ಮಾಡಿ ಬೆಂಗಳೂರು ತಲುಪಿದಾಗ ಸುಮಾರು ೫ ಗಂಟೆ.
ಪ್ರಗತಿ ಹೋಮ್‌ಸ್ಟೇ ವಸತಿ, ಊಟ, ಪರಿಸರ, ಶುದ್ದತೆ, ಶುಭ್ರತೆ ಹಾಗೂ ಆತಿಥ್ಯದಲ್ಲಿ ನನ್ನ ಲೆಕ್ಕಚಾರದಲ್ಲಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿತು. ಒಮ್ಮೆಗೆ 6 ಕೊಠಡಿಗಳಲ್ಲಿ ಸುಮಾರು 12 ಮಂದಿ ಉಳಿಯಬಹುದಾದರೆ, ಟೆಂಟ್ ಸೌಲಭ್ಯ ಉಪಯೋಗಿಸಿಕೊಳ್ಳುವುದಾದರೆ ಸುಮಾರು 50 ಜನ ಉಳಿದುಕೊಳ್ಳಬಹುದಾದ ಹೋಮ್‌ಸ್ಟೇ ಇದಾಗಿದೆ. ಬಿಎಸ್‌ಎನ್‌ಎಲ್ ಬಿಟ್ಟು ಬೇರೆ ಯಾವ ನೆಟ್‌ವರ್ಕ್ ಹೋಮ್ ಸ್ಟೇ ಒಳಗೆ ತಲುಪುವುದಿಲ್ಲ, ಆದರೆ ನಿಮಗೆ ವೈಫೈ ಸೌಲಭ್ಯ ನೀಡುತ್ತಾರೆ.
ಯಾವುದೇ ಸ್ಥಳಕ್ಕೆ ಒಮ್ಮೆ ಹೋದರೆ ಮತ್ತೆ ಅದೇ ಸ್ಥಳಕ್ಕೆ ನಾನು ಭೇಟಿ ನೀಡುವುದಿಲ್ಲ, ಆದರೆ ಪ್ರಗತಿ ಹೋಮ್ ಸ್ಟೇ ನನ್ನ ಅಂತಹ ನಿರ್ಧಾರ ತಪ್ಪು ಎಂದು ತೋರಿಸಿದೆ. ಇನ್ನು ಮುಂದೆ ಪ್ರತಿವರ್ಷವೂ ಪ್ರಗತಿ ಹೋಮ್‌ಸ್ಟೇಗೆ ಭೇಟಿ ನೀಡಿ ಒಂದೆರೆಡು ದಿನ ಉಳಿಯಬೇಕೆಂಬೆ ಆಸೆ ಮನದಲ್ಲಿ ಮೂಡಲು ಪ್ರಾರಂಭಿಸಿದೆ.
ನಾನು ಕಥೆಗಳನ್ನು ಲೇಖನಗಳನ್ನು ಬರೆಯುತ್ತೇನೆ ಎಂದು ಭಟ್ ಅವರಿಗೆ ತಿಳಿಸಿದಾಗ ನನ್ನ ಗೆಳೆಯ ಗುರುಪ್ರಸಾದ್ ಕುರ್ತಕೋಟಿ ಅವರ ಹತ್ತಿರದ ಬಂಧು ಎಂದು ತಿಳಿಯಿತು. ಗುರುಪ್ರಸಾದ್ ಅವರ ಒಂದು ಪುಸ್ತಕವೂ ನನಗೆ ಕೊಡುಗೆಯಾಗಿ ಭಟ್ ಅವರು ನೀಡಿದರು.
ನೀವೂ ಒಮ್ಮೆ ಪ್ರಗತಿ ಹೋಮ್‌ಸ್ಟೇಗೆ ಭೇಟಿ ನೀಡಿ ನಿಮ್ಮ ಅನುಭವ ಹಂಚಿಕೊಳ್ಳಿ. ಒಬ್ಬರಿಗೆ ಒಂದು ದಿನಕ್ಕೆ 1400 ರೂಪಾಯಿಗಳು ನೀಡಬೇಕು.
ಹೆಚ್ಚಿನ ವಿವರಗಳಿಗೆ ಪ್ರಗತಿ ಹೋಮ್ ಸ್ಟೇ ನಡೆಸುತ್ತಿರುವ ಶ್ರೀ ಭಟ್ ಅವರ ಮೊಬೈಲ್ ಸಂಖ್ಯೆ 9842551872 ಸಂಪರ್ಕಿಸಿ.