ಸಾಮಾನ್ಯವಾಗಿ ಆಗುಂಬೆಗೆ ನಾವು ಸೂರ್ಯಾಸ್ತ ಮತ್ತು ಅಲ್ಲಿನ ಪರಿಸರ ಬೆಟ್ಟಗುಡ್ಡಗಳನ್ನು ನೋಡಲು ಹೋಗುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ಆಗುಂಬೆಯಲ್ಲಿ macro photography ಅಂದರೆ ಸೂಕ್ಷ್ಮ ಛಾಯಾಗ್ರಹಣ ಹೆಚ್ಚು ಜನಪ್ರಿಯವಾಗುತ್ತಿದೆ. ಸೊಳ್ಳೆ ಗಿಂತ ಚಿಕ್ಕದಾದ ಕ್ರಿಮಿಕೀಟಗಳಿಂದ ಹಿಡಿದು ದೊಡ್ಡ ದೊಡ್ಡ ಹಾವುಗಳ ವರೆಗೆ ಛಾಯಾಗ್ರಹಣ ಮಾಡುವುದೇ ಸೂಕ್ಷ್ಮ ಛಾಯಾಗ್ರಹಣ. ಸೂಕ್ಷ್ಮ ಛಾಯಾಗ್ರಹಣಕ್ಕೆ ಹೆಸರುವಾಸಿಯಾದ ಸ್ಥಳ ಆಗುಂಬೆಯ ಹಿಂಗಾರ ಪ್ರಕೃತಿ ದಾಮ.
ಇದೆ ಸಪ್ಟೆಂಬರ್ ತಿಂಗಳಲ್ಲಿ ನಾವು ಛಾಯಾಗ್ರಹಣ ಮಾಡಲು ಹಿಂಗಾರ ಧಾಮಕ್ಕೆ ಹೊರಟೆವು. ಹಿಂಗಾರದಲ್ಲಿ 350 ವರ್ಷಗಳ ಹಳೆಯದಾದ ಒಂದು ಮನೆ ಇದ್ದು ಹಿಂಗಾರದ ಮಾಲೀಕರು ಹಾಗೂ ಅವರ ಸಂಸಾರ ಅಲ್ಲಿದ್ದಾರೆ. ಮನೆಯ ಮುಂದಿನ ಭಾಗದಲ್ಲಿ, ಅತಿಥಿಗಳಿಗೆ ಕೋಣೆಗಳನ್ನು ಕಟ್ಟಿದ್ದಾರೆ
ಬೆಳಗ್ಗೆ ಸುಮಾರು 3.30ಕ್ಕೆ ಬೆಂಗಳೂರಿನಿಂದ ಹೊರಟು 11 ಗಂಟೆಯ ಹೊತ್ತಿಗೆ ನಾವು ಹಿಂಗಾರ ತಲುಪಿದೆವು. ಊಟವಾದ ನಂತರ ನಾವು ಅಲ್ಲಿಂದ ಸುಮಾರು ಎಂಟು ಕಿಲೋಮೀಟರ್ ದೂರವಿದ್ದ ಕಟ್ಟಿನ ಮಡಕೆ ಎಂಬುವ ಸ್ಥಳಕ್ಕೆ ಹೋದೆವು.
ಈ ಸ್ಥಳದಲ್ಲಿ ನಮಗೆ ಛಾಯಾಗ್ರಹಣಕ್ಕೆ ಹೆಚ್ಚು ಕ್ರಿಮಿಕೀಟಗಳು ಸಿಗುತ್ತದೆ ಎಂದು ನಮ್ಮೊಂದಿಗೆ ಹಿಂಗಾರದ ವತಿಯಿಂದ ಬಂದಿದ್ದ ಶಿವು ವಿನ ಅಭಿಪ್ರಾಯವಾಗಿತ್ತು. ಆದರೆ ಭೋರ್ಗರೆಯುವ ಮಳೆಯಲ್ಲಿ ನಾವು ಕಾರಿಂದ ಇಳಿಯುವುದೇ ಕಷ್ಟವಾಯಿತು. ಹಾಗಿದ್ದರೂ ಸ್ವಲ್ಪ ದೂರ ಕಾಡಿನಲ್ಲಿ ನಡೆದು ಹೋಗಿ ಕಪ್ಪೆಗಳು ಸಿಗುವ ಜಾಗಕ್ಕೆ ಹೋದೆವು. ಆದರೆ ಮಳೆಯು ಹೆಚ್ಚು ಜೋರಾಗಿದ್ದರಿಂದ ನಾವು ವಾಪಸ್ ಬಂದೆವು. ನಮ್ಮ ಕ್ಯಾಮೆರಾಗಳನ್ನು ಆಚೆ ತೆಗೆಯಲು ಆಗಲಿಲ್ಲ
ಕಾಲಿನ ಮಂಡಿಯವರೆಗೆ ಹಾಕಿ ಕೊಳ್ಳುವಂತಹ ಗಮ್ ಬೂಟುಗಳನ್ನು ನಾವು ಹಾಕಿಕೊಂಡಿದ್ದರು ಜಿಗಣೆಗಳು ನಮ್ಮನ್ನು ಕಚ್ಚಿ ಹಬ್ಬವನ್ನು ಆಚರಿಸಿತ್ತು. . ಹಿಂಗಾರಕ್ಕೆ ಹಿಂದಿರುಗಿದ ನಂತರ ನಮ್ಮ ಮೈಕೈ ಗಳನ್ನೆಲ್ಲಾ ಜಿಗಣೆ ರಹಿತ ಮಾಡಿಕೊಳ್ಳಲು ಸಾಕಷ್ಟು ಶ್ರಮ ಪಟ್ಟೆವು. ಸಂಜೆಯ ಹೊತ್ತಿಗೆ ಹಿಂಗಾರದ ನ್ಯಾಚುರಲಿಸ್ಟ್ ಗಿರೀಶ್ ಗೌಡ ರವರು ನಮ್ಮನ್ನು ಭೇಟಿ ಮಾಡಿದರು.
ಆರು ಗಂಟೆಗೆ ಕತ್ತಲಾಗಿತ್ತು. ಅಲ್ಲಿಂದ ಸುಮಾರು ಮೂರು ಕಿಲೋಮೀಟರ್ ದೂರವಿರುವ ಸತೀಶ್ ರವರ ತೋಟಕ್ಕೆ ತಲುಪಿದೆವು. ಈ ತೋಟವು ಸುಮಾರು ಅರ್ಧ ಎಕರೆ ಜಾಗದಲ್ಲಿ ಇದ್ದು ಒಂದು ವಿಚಿತ್ರ ಪ್ರಪಂಚವನ್ನೇ ನಮಗೆ ತೋರಿಸಿತು. ಬೆಳಗಿನ ಹೊತ್ತು ಕೇವಲ ಕಂದು ಬಣ್ಣದಿಂದ ಕಾಣುವಂತಹ ಕಪ್ಪೆಗಳು ರಾತ್ರಿಯ ಹೊತ್ತು ತಮ್ಮ ಬಣ್ಣವನ್ನೇ ಬದಲಾಯಿಸಿಕೊಳ್ಳುತ್ತದೆ. ಚಿತ್ರವಿಚಿತ್ರವಾದ ಹಾವುಗಳು ಹಲ್ಲಿಗಳು ವೈವಿಧ್ಯಮಯ ಕ್ರಿಮಿಕೀಟಗಳು ಛಾಯಾಗ್ರಹಣಕ್ಕೆ ಕಾಯುತ್ತಿರುವಂತೆ ಎಲ್ಲೆಂದರಲ್ಲಿ ಗಿಡಗಳ ಮೇಲೆ ನೆಲದಮೇಲೆ ಕಾಯುತ್ತಿತ್ತು. ಸೂಕ್ಷ್ಮ ಛಾಯಾಗ್ರಹಣಕ್ಕೆ ಆಗತಾನೆ ಪಾದಾರ್ಪಣೆ ಮಾಡಿದ್ದ ನನಗೆ ಸಂಜೆಯ ಎರಡು ಗಂಟೆಗಳ ಕಾಲ ಒಂದು ಹಬ್ಬವಾಗಿತ್ತು.
ಸೂಕ್ಷ್ಮ ಛಾಯಾಗ್ರಹಣವೇ ಒಂದು ಸವಾಲಾದರೆ ಅದರಲ್ಲೂ ರಾತ್ರಿಯ ಹೊತ್ತಿನಲ್ಲಿ ಸೂಕ್ಷ್ಮ ಛಾಯಾಗ್ರಹಣ ಮಾಡುವುದು ಇನ್ನೂ ದೊಡ್ಡ ಸವಾಲು. ಬೆಳಕನ್ನು ಹೊರಸೂಸುತ್ತಿದ್ದ ಅಣಬೆಗಳು, ಎಲೆಯ ಆಕಾರವನ್ನೇ ಹೊಂದಿದ್ದ ಎಲೆಹುಳು, ವಟವಟ ಎಂದು ಶಬ್ದ ಮಾಡುತ್ತಿದ್ದ ಪೂದೆ ಕಪ್ಪೆ, ಎಳೆಯ ಹುರುಳಿಕಾಯನ್ನು ಹೋಲುವ ಹಸಿರು ಹಾವು, ಬೆಕ್ಕಿನ ಕಣ್ಣಿನಂತೆ ಕಣ್ಣು ಇದ್ದಂತಹ ಬೆಕ್ಕಿನ ಹಾವು, ಸಣ್ಣ ಗಿಡದ ಮೇಲೆ ಕುಳಿತು ಆಹಾರಕ್ಕಾಗಿ ಕಾಯುತ್ತಿದ್ದ ಹಸಿರು ಕಪ್ಪೆ ಹೀಗೆ ಹಲವಾರು ಬೆಂಗಳೂರಿನಲ್ಲಿ ಕಾಣದ ವಿಸ್ಮಯಲೋಕ ಕೇವಲ ಅರ್ಧ ಎಕರೆ ಜಾಗದಲ್ಲಿ ನಮ್ಮ ಮುಂದಿತ್ತು.
ಸುಮಾರು ಮೂರು ಗಂಟೆಗಳ ಕಾಲ ಛಾಯಾಗ್ರಹಣ ಮಾಡಿದ್ದು ನಮಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಮಳೆಯೂ ಸ್ವಲ್ಪ ಇದ್ದದ್ದರಿಂದ ರೈನ್ ಕೋಟ್ ಹಾಕಿಕೊಂಡೆ ಛಾಯಾಗ್ರಹಣ ಮಾಡಿದೆವು. ನಂತರ ಬಂದು ಊಟ ಮಾಡಿ ಮತ್ತೆ ಅದೇ ಜಾಗಕ್ಕೆ ಹೋಗುವ ಕಾರ್ಯಕ್ರಮವಿತ್ತು . ಆದರೆ ಮಳೆಯು ಹೆಚ್ಚಾಗಿದ್ದರಿಂದ ಎಲ್ಲೂ ಹೋಗದೆ ಮಲಗಿಕೊಂಡೆವು.
ಈ ಸೂಕ್ಷ್ಮ ಛಾಯಾಗ್ರಹಣದ ಒಂದು ವಿಶೇಷವೇನೆಂದರೆ ಮಳೆಯ ಬಂದು ನಿಂತಾಗ ಕಪ್ಪೆ ಹಾವುಗಳು ಬರುತ್ತವೆ; ಹಾಗಾಗಿ ಮಳೆಯು ಛಾಯಾಗ್ರಹಣದ ಒಂದು ಭಾಗವೇ ಸರಿ.
ಮಾರನೆಯ ದಿನ ಬೆಳಗ್ಗೆ ನಾವೆಲ್ಲ ತಿಂಡಿ ತಿಂದು 11ಗಂಟೆಗೆ ಮೂರು ಕಿಲೋಮೀಟರ್ ದೂರದಲ್ಲಿದ್ದ ಕಾಡಿನೊಳಗೆ ಹೋದೆವು ಅಲ್ಲಿ ಮತ್ತೆ ಹಸಿರು ಹಾವು ಬಣ್ಣಬಣ್ಣದ ಕ್ರಿಮಿಕೀಟಗಳು ಅಣಬೆಗಳು ಚಿತ್ರ ವಿಚಿತ್ರ ಜೇಡಗಳು ಎಲ್ಲದರ ಛಾಯಾಗ್ರಹಣ ಮಾಡಿದೆವು .
ಮತ್ತೆ ವಾಪಸ್ ಹಿಂಗಾರಕ್ಕೆ ಬಂದು ಊಟ ಮಾಡಿ ಸುಮಾರು 14 ಕಿಲೋಮೀಟರ್ ದೂರವಿದ್ದ ಕಾಡಿಗೆ ಹೊರಟೆವು. ಒಂದು ಮನೆಯ ಕಾಂಪೌಂಡಿನಿಂದ ಕಾಡಿನ ಒಳಗೆ ನಡೆಯಲು ಪ್ರಾರಂಭಿಸಿ ಸುಮಾರು ನಾಲ್ಕು ಕಿಲೋಮೀಟರ್ ನೀರಿನ ತೊರೆಯಲ್ಲಿ ನಡೆಯುತ್ತಾ ಹೋದೆವು
ಮಾಮೂಲಿನಂತೆ ಜಿಗಣೆಗಳು ನಮ್ಮನ್ನು ಆವರಿಸಿಕೊಂಡು ವಿಜಯೋತ್ಸವ ಆಚರಿಸಿತು. ಕೈ ಕಾಲು ಕೆನ್ನೆ ಕುತ್ತಿಗೆ ಎಲ್ಲಾ ಕಡೆ ಎರಡು ನಿಮಿಷಕ್ಕೊಮ್ಮೆ ನಮ್ಮನ್ನೆಲ್ಲಾ ನಾವು ಪರೀಕ್ಷಿಸಿ ಕೊಳ್ಳುತ್ತಾ ಎಚ್ಚರದಿಂದ ಮುನ್ನಡೆದೆವು . ಸುಮಾರು ನಾಲ್ಕು ಕಿಲೋಮೀಟರ್ ಹೋದಮೇಲೆ ಅಲ್ಲೊಂದು ಚಿಕ್ಕ ಕೊಳ ಇತ್ತು
ಆಗ ಸಮಯ ಸುಮಾರು 5 ಗಂಟೆ. ಇನ್ನೂ ಬೆಳಕು ಇತ್ತು . ಆ ಕೊಳದಲ್ಲಿ ಕೆಲವು ವಿಚಿತ್ರವಾದ ಕಪ್ಪೆಗಳು ಇದ್ದವು. ಅವುಗಳ ವೈಶಿಷ್ಟ್ಯವೇನೆಂದರೆ ಕತ್ತಲಾಗುತ್ತಿದ್ದಂತೆ ಹೆಣ್ಣು ಕಪ್ಪೆಗಳನ್ನು ಆಕರ್ಷಿಸಲು ಗಂಡು ಕಪ್ಪೆಗಳು ಎಡಗಾಲನ್ನು ವೃತ್ತಾಕಾರವಾಗಿ ಮೇಲೆ ಎತ್ತಿ ನಂತರ ಬಲಗಾಲನ್ನು ಮೇಲೆತ್ತಿ ನೃತ್ಯ ಮಾಡುತ್ತೇವೆ. ಹಾಗಾಗಿ ಇದಕ್ಕೆ ನೃತ್ಯ ಮಾಡುವ ಕಪ್ಪೆ ಎಂದು ಹೆಸರಿಟ್ಟಿದ್ದಾರೆ.
ಬೆಳಕಿನಲ್ಲಿ ನಮಗೆಲ್ಲ ಒಂದೊಂದು ಕಪ್ಪೆಯನ್ನು ಹುಡುಕಿ ಅದರ ಮುಂದೆ ಕುಳಿತುಕೊಳ್ಳಲು ಹೇಳಿದರು. ನಮ್ಮ ಕ್ಯಾಮೆರಾವನ್ನು ತಯಾರಿಯಲ್ಲಿ ಇಟ್ಟಿದ್ದೆವು. ಸುಮಾರು 20 ರಿಂದ 25 ನಿಮಿಷ ಕಾದ ನಂತರ ಕತ್ತಲೆಯಾಗುತ್ತಿದ್ದಂತೆ ಈ ಕಪ್ಪೆಗಳು ನೃತ್ಯ ಮಾಡುತ್ತವೆ. ಆದರೆ ಅದಕ್ಕೆ ಒಂದು ಅಗತ್ಯತೆ ಏನೆಂದರೆ ಮಳೆಯು ನಿಲ್ಲಬೇಕು. ನಮ್ಮ ಅದೃಷ್ಟ ಕೈಕೊಟ್ಟಿತ್ತು. ಮಳೆ ನಿಲ್ಲಲೇ ಇಲ್ಲ. ಸುಮಾರು ಅರ್ಧ ಗಂಟೆ ಕಾದರೂ ಈ ಕಪ್ಪೆಗಳ ನೃತ್ಯ ನೋಡಲು ಆಗಲೇ ಇಲ್ಲ. ಎಷ್ಟು ದೊರಕಿತೋ ಅಷ್ಟೇ ನಮ್ಮ ಅದೃಷ್ಟ ಎಂದುಕೊಂಡು ವಾಪಸ್ ನಡೆದೆವು. ಅಮಾವಾಸ್ಯೆಯ ಹಿಂದಿನ ದಿನ ಕೇವಲ ನಮ್ಮ ಟಾರ್ಚ್ ಲೈಟ್ ಗಳನ್ನು ಇಟ್ಟುಕೊಂಡು ಕಾಡಿನಲ್ಲಿ ನೀರಿನಲ್ಲಿ ನಡೆದು ಕೆಲವೊಮ್ಮೆ ಪಕ್ಕದಲ್ಲಿ ಹಸಿರು ಹಾವು ನೋಡಿದರು ಸ್ವಲ್ಪ ಭಯವಾದರೂ ಮುನ್ನಡೆಯುತ್ತಿದ್ದೆವು. ನೀರಿನ ಅಕ್ಕಪಕ್ಕದಲ್ಲಿ ನಮಗೆ ಬಣ್ಣ ಬಣ್ಣದ ಕಪ್ಪೆಗಳು ಛಾಯಾಗ್ರಹಣಕ್ಕೆ ಸಿಕ್ಕವು. ಸುಮಾರು 9 ಗಂಟೆಗೆ ಹಿಂಗಾರಕ್ಕೆ ಹಿಂದಿರುಗಿದೆವು.
ಊಟ ಮಾಡಿದ ನಂತರ ಮತ್ತೆ ಹಿಂಗರದ ಸುತ್ತಮುತ್ತ ನೋಡಲು ಹೊರಟೆವು. ಗಿರೀಶ್ ರವರು ನಮ್ಮನ್ನು ನಡೆಸಿಕೊಂಡೇ ಹೋದರು. ಕಾಡಿಗೆ ಹೋದ ನಂತರ ನಮ್ಮ ಎಲ್ಲರ ಟಾರ್ಚ್ ಲೈಟ್ ಗಳನ್ನು ಆಫ್ ಮಾಡಲು ಹೇಳಿದರು. ಏಳು ಜನರಿದ್ದ ನಮ್ಮ ಗುಂಪು ಹತ್ತಿರದಲ್ಲಿ ಪಕ್ಕದಲ್ಲಿದ್ದವರು ನಮಗೆ ಕಾಣಿಸುತ್ತಿರಲಿಲ್ಲ , ಕೇವಲ ನಮ್ಮ ಮಾತುಗಳಷ್ಟೇ ಕೇಳುತ್ತಿತ್ತು.
ಅಲ್ಲಿಯೇ ಇದ್ದ ಒಂದು ಮರವನ್ನು ನಮಗೆ ತೋರಿಸಿ ಗಿರೀಶ್ ರವರು ಒಂದು ಹತ್ತು ನಿಮಿಷ ಆ ಮರದ ತೊಗಟೆಯನ್ನು ನೋಡಲು ಹೇಳಿದರು ವಿಸ್ಮಯವೆಂಬಂತೆ ಮರದ ತೊಗಟೆ ಬೆಳಕನ್ನು ಹೊರಸೂಸುತ್ತಿತ್ತು. ಕ್ಯಾಮೆರಾಗಳ ವಿಶೇಷ ತಾಂತ್ರಿಕತೆಯನ್ನು ಉಪಯೋಗಿಸಿಕೊಂಡು ಹಾಗೂ ಟ್ರೈಪಾಡ್ ಗಳನ್ನು ಬಳಸಿ ಬೆಳಕನ್ನು ನೀಡುವ ಮರಗಳ ತೊಗಟೆ ಗಳ ಛಾಯಾಗ್ರಹಣವನ್ನು ಮಾಡಿದೆವು. ಆ ದಿನ ನಮ್ಮೆಲ್ಲರ ಟಾರ್ಚ್ ಗಳನ್ನು ಆಫ್ ಮಾಡಿ ನಾವು ಛಾಯಾಗ್ರಹಣ ಮಾಡಿದ್ದು ನಮ್ಮ ಜೀವನದಲ್ಲಿ ಮರೆಯಲಾಗದ ಅನುಭವ
ಹಿಂಗಾರದ ಬಗ್ಗೆ ಕೆಲವು ವಿಷಯಗಳು
ಶಶಾಂಕ್ ಹೆಗಡೆಯವರು ವಂಶಪಾರಂಪರ್ಯವಾಗಿ ಬಂದಿರುವಂತಹ ಈ ಮನೆಯಲ್ಲಿ ಉಳಿದುಕೊಂಡು ವಿಸ್ಮಯ ಲೋಕದ ಛಾಯಾಗ್ರಹಣ ಮಾಡುವ ಅತಿಥಿಗಳಿಗೆ ಒಂದು ಅವಕಾಶ ಮಾಡಿಕೊಡುತ್ತಿದ್ದಾರೆ
ಕಾಡಿನಲ್ಲಿ ಅಲ್ಲಿನ ಪರಿಸರ ಹಾಗೂ ಕಷ್ಟಕಾರ್ಪಣ್ಯಗಳನ್ನು ಯಥೇಚ್ಛವಾಗಿ ಅನುಭವಿಸುವುದಕ್ಕಾಗಿ ಹೆಚ್ಚು ಅನುಕೂಲಗಳನ್ನು ಇಲ್ಲೇನು ಮಾಡಿಕೊಟ್ಟಿಲ್ಲ. ಮಾಂಸಹಾರಿಗಳಿಗೆ ಒಳ್ಳೆಯ ಭೋಜನ ದೊರೆತರೂ. ಸಸ್ಯಾಹಾರಿಗಳಿಗೆ ಅದರಲ್ಲೂ ಈರುಳ್ಳಿ-ಬೆಳ್ಳುಳ್ಳಿ ತಿನ್ನದ ನನ್ನಂಥವರಿಗೆ ಊಟವು ಒಂದು ದೊಡ್ಡ ಸವಾಲೇ.
ಸಾಮಾನ್ಯವಾಗಿ ಇಂತಹ ಪ್ರವಾಸಗಳಿಗೆ ನಾನು ಮನೆಯಿಂದಲೇ ಗೊಜ್ಜು ಚಟ್ನಿಪುಡಿ ತೆಗೆದುಕೊಂಡು ಹೋಗಿರುತ್ತೇನೆ. ಹಾಗಾಗಿ ಅಲ್ಲಿ ನೀಡುವ ಚಪಾತಿ ಅನ್ನ ಅಷ್ಟೇ ನಾನು ಬಳಸುವುದು.
ಊಟ ಮಾಡಲು ಒಂದೇ ಟೇಬಲ್ ಇದ್ದು ನನ್ನ ಎದುರುಗಡೆ ಗೆಳೆಯರು ಮಾಂಸಹಾರ ಸೇವಿಸುತ್ತಿದ್ದರೆ ಸ್ವಲ್ಪ ತೊಂದರೆಯಾಗಿದ್ದು ಖಂಡಿತ ನಿಜ. ಈ ಬಗ್ಗೆ ಹಿಂಗಾರದ ಮಾಲೀಕರಾದ ಶಶಾಂಕ್ ಹೆಗಡೆಯವರಿಗೆ ಮಾಹಿತಿ ನೀಡಿದ್ದೇನೆ ಬರುವ ದಿನಗಳಲ್ಲಿ ಬಹುಶಹ ಸಸ್ಯಹಾರಿಗಳಿಗೆ ಬೇರೆಯ ಅನುಕೂಲ ಮಾಡಿಕೊಡಬಹುದು ಎಂಬುದು ನನ್ನ ಅಭಿಪ್ರಾಯ
ನಮಗೆ ತಿಳಿಯದೆ ನಮ್ಮೊಂದಿಗೆ ಜೀವಿಸುತ್ತಿರುವ ಈ ಚಿತ್ರ ವಿಚಿತ್ರ ಬಣ್ಣಬಣ್ಣದ ಕ್ರಿಮಿಕೀಟಗಳನ್ನು ನೋಡಲಾದರೂ ಒಮ್ಮೆ ಹಿಂಗಾರಕ್ಕೆ ಭೇಟಿ ನೀಡಿ. ಹಿಂಗಾರದ ನ್ಯಾಚುರಲಿಸ್ಟ್ ಗಿರೀಶ್ ಗೌಡ ರವರ ಕ್ರಿಮಿಕೀಟಗಳ ಬಗ್ಗೆ ಹಾಗೂ ಛಾಯಾಗ್ರಹಣದಲ್ಲಿ ಜ್ಞಾನ ಮತ್ತು ಅವರಲ್ಲಿ ಸಹಜೀವಿಗಳಿಗೆ ಇರುವಂತಹ ಪ್ರೀತಿ ವಿಶ್ವಾಸ ಮತ್ಯಾರಲ್ಲೂ ದೊರೆಯುವುದಿಲ್ಲ ಎಂಬುದು ನನ್ನ ಅಭಿಪ್ರಾಯ.
ಹಿಂಗಾರಕ್ಕೆ ನೀವು ಭೇಟಿ ಮಾಡುವುದಾದರೆ ನೀವು ಶಶಾಂಕ್ ಹೆಗಡೆಯವರ ಈ ನಂಬರ್ ಗೆ ಕರೆ ಮಾಡಿ 9900602529.