ಗುರುರಾಜ
ಶಾಸ್ತ್ರಿ
ಶ್ರೀಖಂಡ ಮಹಾದೇವ ಚಾರಣ ತೀರ್ಥಯಾತ್ರೆ -ವಿಶ್ವವಾಣಿ ಪತ್ರಿಕೆ
26-08-2024
ಲೇಖನ : ಗುರುರಾಜ ಶಾಸ್ತ್ರಿ ಹಿಮಾಲಯದಲ್ಲಿರುವ ಶಿವ ಅಷ್ಟು ಸುಲಭವಾಗಿ ಸಿಗುವವನಲ್ಲ, ಅವನನ್ನು ಕಷ್ಟಪಟ್ಟೇ ದರ್ಶನ ಮಾಡಬೇಕು. ಬಹುಷಃ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿರುವ ಶಿವಭಕ್ತರಿಗಂತೂ ಇದು ಚೆನ್ನಾಗಿ ಮನದಟ್ಟಾಗಿರುತ್ತದೆ. ನಾನು 2010ರಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದೆ, ಅದೂ ಸುಮಾರು 28 ದಿನದ 100ಕ್ಕೂ ಹೆಚ್ಚು ಕಿಲೋಮೀಟರ್‌ ಚಾರಣದ ತೀರ್ಥಯಾತ್ರೆ. ಅಲ್ಲಿ ನಮ್ಮ ಗುಂಪಿನಲ್ಲಿದ್ದ ಗುಜರಾತ್‌ ಮತ್ತು ಉತ್ತರ ಭಾರತದ ಹಲವು ಮಂದಿ ಪಂಚ ಕೈಲಾಸಗಳ ಬಗ್ಗೆ ತಿಳಿಸಿದ್ದರು. ಅದೇಕೋ ಈ ಮಾನಸ ಸರೋವರ ಯಾತ್ರೆಯೇ ಸಾಕೆಂದು ಸುಮ್ಮನಾಗಿಬಿಟ್ಟಿದ್ದೆ. ನನ್ನ ಗೆಳೆಯ ಚೇತನ್‌ ಶ್ರೀಖಂಡ ಮಹದೇವ ಯಾತ್ರೆಗೆ ಅವನ ಪತ್ನಿ ಮತ್ತು ಅವರ ಬಳಗದ ಜನ ಹೊರಟ್ಟಿದ್ದಾರೆಂದು ತಿಳಿಸಿ ನನ್ನನ್ನೂ ಆಹ್ವಾನಿಸಿದ. ಏನೂ ಯೋಚಿಸದೆ ನಾನೂ ಬರುವುದಾಗಿ ತಿಳಿಸಿದೆ. ಅದಕ್ಕೊಂಡು ವಾಟ್ಸಾಪ್‌ ಗುಂಪು ಮಾಡಿ, ಪ್ರತಿಯೊಬ್ಬರು ಅವರಿಗೆ ದೊರಕಿದ ಯೂಟ್ಯೂಬ್‌ ವೀಡಿಯೋಗಳ ಕೊಂಡಿಯನ್ನು ಆ ಗುಂಪಿನಲ್ಲಿ ಹಾಕತೊಡಗಿದರು. ಒಂದೊಂದು ವೀಡಿಯೋವೂ ಭಯಾನಕ ವಿಷಯಗಳನ್ನೇ ತಿಳಿಸುತ್ತಿತ್ತು. ಈ ಚಾರಣದಲ್ಲಿರುವ ಕಠಿಣತೆ, ಅದರಲ್ಲೂ ಮುಖ್ಯವಾಗಿ ಆಮ್ಲಜನಕದ ಕೊರತೆಯ ಬಗ್ಗೆಯೇ ಹೆಚ್ಚು ವಿವರವಿತ್ತು. ಆದರೆ 65 ವರ್ಷ 70 ವರ್ಷದ ವೃದ್ಧರೂ ಈ ಯಾತ್ರೆಯನ್ನು ಮಾಡಿರುವ ವೀಡಿಯೋ ನೋಡಿದಾಗ, ನಮ್ಮಿಂದಲೂ ಇದು ಸಾಧ್ಯವೆಂದು ಮಾನಸಿಕವಾಗಿ ತಯಾರಾಗಿಬಿಟ್ಟೆವು. ಇನ್ನು ದೈಹಿಕವಾಗಿ ತಯಾರಾಗಲು ನಮಗೆ ಇದ್ದದ್ದು 30ರಿಂದ 45ದಿನ ಮಾತ್ರ. ಅದರಲ್ಲೂ ಮಳೆಯ ದಿನ, ಹಬ್ಬಗಳು ಎಂದು ತೆಗೆದುಬಿಟ್ಟರೆ, ಸುಮಾರು 25ದಿನ ನಾವುಗಳು ಬೆಂಗಳೂರಿನ ಸಮತಟ್ಟಾದ ರಸ್ತೆಗಳಲ್ಲಿ ನಡೆದು ತಯಾರಿ ನಡೆಸಿದೆವು. ಶ್ರೀಖಂಡ ಮಹದೇವ ಇರುವುದು ಹಿಮಾಚಲ ಪ್ರದೇಶದ ನಿರ್ಮಾಂಡ್‌ ಪ್ರಾಂತ್ಯದಲ್ಲಿ. ಶ್ರೀಖಂಡ ಮಹದೇವ ಟ್ರಸ್ಟಿನವರು ಪ್ರತಿ ವರ್ಷ ಜುಲೈ ತಿಂಗಳಿನಲ್ಲಿ 15 ದಿನ ಇಲ್ಲಿ ಯಾತ್ರೆಗೆ ಅಣುವುಮಾಡಿಕೊಡುತ್ತಾರೆ. ಈ ಸಮಯದಲ್ಲಿ ಯಾತ್ರೆ ಮಾಡಿದರೆ ಮಾತ್ರ ನಮಗೆ ಕೆಲವೊಂದು ಕಡೆ ಉಳಿದುಕೊಳ್ಳಲು ಟೆಂಟ್‌ ಸೌಲಭ್ಯ, ಊಟದ ವ್ಯವಸ್ಥೆ, ಆರೋಗ್ಯ ಸಮಸ್ಯೆಗೆ ವೈದ್ಯರ ಸೌಲಭ್ಯ ಎಲ್ಲವೂ ಇರುತ್ತದೆ. ಬೇರೆ ಸಮಯದಲ್ಲಿ ಈ ಯಾತ್ರೆ ಖಾಸಗಿಯವರು ನಡೆಸುತ್ತಾರೆ. ಆದರೆ ಆಗ ಊಟ, ಟೆಂಟ್‌ ಎಲ್ಲವೂ ನಾವೇ ತೆಗೆದುಕೊಂಡು ಹೋಗಬೇಕಾಗುತ್ತದೆ. ಒಟ್ಟು 35 ಕಿಲೋಮೀಟರ್‌ ಚಾರಣವಿರುವ ಈ ಯಾತ್ರೆ ಮಾಡಲು ಎಷ್ಟುದಿನ ಬೇಕು ಎಂಬುದು ನಮ್ಮ ಸಾಮರ್ಥ್ಯದಂತೆ. ಸ್ಥಳೀಯರು ಮತ್ತು ಪರದೇಶದ ಪರಿಣಿತ ಚಾರಣಿಗರು ಈ ಯಾತ್ರೆಯನ್ನು 3 ಅಥವಾ 4 ದಿನದಲ್ಲಿ ಮುಗಿಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಕನಿಷ್ಟ ಏಳು ದಿನದಲ್ಲಿ ಮಾಡಬೇಕೆಂದು ತನ್ನ ಜಾಲತಾಣದಲ್ಲಿ ತಿಳಿಸಿದೆ. ಚಂಡೀಗಡದಿಂದ ಶಿಮ್ಲಾ ಮೂಲಕ ಕಾರ್‌ ಅಥವಾ ಬಸ್ಸಿನಲ್ಲಿ 10 ಗಂಟೆಗಳ ಪ್ರಯಾಣ ಮಾಡಿ ಜಾವನ್‌ ಎಂಬ ಹಳ್ಳಿಯನ್ನು ತಲುಪಬೇಕು. ಶ್ರೀಖಂಡ ಯಾತ್ರೆಯ ಚಾರಣ ಆರಂಭವಾಗುವುದು ಈ ಜಾವನ್‌ ಎಂಬ ಹಳ್ಳಿಯಿಂದಲೇ. ಈ ಹಳ್ಳಿಯು ಸಮುದ್ರ ಮಟ್ಟದಿಂದ 6,600ಅಡಿ ಎತ್ತರದಲ್ಲಿದೆ. ಇಲ್ಲಿಂದ ನಾವು 17,150ಅಡಿಯ ವರೆಗೆ ಚಾರಣ ಮಾಡಿ ಅಲ್ಲಿರುವ ಮಹಾದೇವನನ್ನು ನೋಡಿ ಮತ್ತೆ ಇಲ್ಲಿಗೆ ವಾಪಸ್‌ ಬಂದರೆ ಚಾರಣ ಯಾತ್ರೆ ಸಂಪೂರ್ಣವಾದಂತೆ. ಜಾವನ್‌ನಿಂದ 3 ಕಿಲೋಮೀಟರ್‌ ಚಾರಣ ಮಾಡಿದರೆ ಸಿಂಗಡ್‌ ಎಂಬ ಹಳ್ಳಿಯು ಸಿಗುತ್ತದೆ. ಈ ಯಾತ್ರೆಯಲ್ಲಿ ಇದೇ ನಾವು ನೋಡುವ ಕೊನೆಯ ಹಳ್ಳಿ. ಇಲ್ಲಿ ಕೆಲವು ಒಳ್ಳೆಯ ಹೋಮ್ ಸ್ಟೇಗಳಿವೆ ಹಾಗಾಗಿ ಜಾವನ್‌ಗಿಂತ ಇಲ್ಲೇ ಉಳಿದುಕೊಳ್ಳುವುದು ಸೂಕ್ತ. ನಮ್ಮ ರಿಜಿಸ್ಟ್ರೇಶನ್‌ ಮತ್ತು ಮೆಡಿಕಲ್‌ ಸರ್ಟಿಫಿಕೇಟ್‌ ಇಲ್ಲೇ ಪರಿಶೀಲಿಸುವರು. ಕೆಲವರು ಇಲ್ಲೇ ಬಂದು ರಿಜಿಸ್ಟ್ರೇಶನ್‌ ಮಾಡುತ್ತಾರೆ ಮತ್ತು ಇಲ್ಲೇ ಆರೋಗ್ಯ ತಪಾಸಣೆ ಮಾಡಿಸಿ ಪ್ರಮಾಣ ಪತ್ರವನ್ನು ಪಡೆಯುವ ಸೌಲಭ್ಯವೂ ಇದೆ. ಹಿಮಾಲಯ ವಿಷಯ ಬಂದಾಗ ದೂರವನ್ನು ಕಿಲೋಮೀಟರ್‌ ಅಳತೆಯಲ್ಲಿ ಅಳಿಯುವುದಕ್ಕಿಂತ ಸಮಯದ ಅಳತೆಯಲ್ಲಿ ಅಳೆಯುವುದು ಸೂಕ್ತ. ಉದಾಹರಣೆಯೆಂದರೆ ಯಾತ್ರೆಯ ಮಧ್ಯದಲ್ಲಿ ಸಿಗುವ ಕಾಳಿ ಟಾಪ್‌ ಒಂದು ದೊಡ್ಡ ಪರ್ವತದ ತುದಿಯಲ್ಲಿದೆ. ಪರ್ವತ ಹತ್ತಲು ಇಳಿಯಲು ಸುಮಾರು 4 ಗಂಟೆಗಳು ಬೇಕು, ಆದರೆ ದೂರ ಎಷ್ಟು ಎಂದು ನೋಡಿದರೆ ಒಂದರಿಂದ ಒಂದೂವರೆ ಕಿಲೋಮೀಟರ್‌ ಅಷ್ಟೇ. ಮೊದಲ ದಿನ ಜಾವನ್‌ನಿಂದ ಸಿಂಗಡ್‌ಗೆ ಹೋಗಿ ಅಲ್ಲಿಂದ 11,318 ಅಡಿ ಎತ್ತರದಲ್ಲಿರುವ ತಚರು ಎಂಬ ಪ್ರದೇಶಕ್ಕೆ ಹೋಗಬೇಕು. ಇದು ಸುಮಾರು 10 ಗಂಟೆಗಳ ಚಾರಣ ಹಾಗೂ ಮೊದಲ ಎರಡು ಗಂಟೆಗಳಲ್ಲಿ ಕನಿಷ್ಠವೆಂದರೂ 4ರಿಂದ 5 ಪರ್ವತಗಳನ್ನು ಹತ್ತಿ ಇಳಿದಿರುತ್ತೇವೆ ಮತ್ತು ನಂತರದ 8 ಗಂಟೆಗಳು ಕೇವಲ ಹತ್ತುತ್ತಲೇ ಇರುತ್ತೇವೆ. ತಚರುವಿನಲ್ಲಿ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿದ್ದು ಊಟ ವಸತಿ ಸೌಲಭ್ಯವಿರುತ್ತದೆ. ಇಲ್ಲಿ ಎಲ್ಲದರ ಬೆಲೆಯೂ ಸರ್ಕಾರವೇ ನಿರ್ಧರಿಸಿರುತ್ತದೆ. ಹಾಗಾಗಿ ಟೆಂಟ್‌ಗಳು ಮತ್ತು ಊಟದ ಸೌಲಭ್ಯ ಖಾಸಗಿಯವರದಾದರೂ ಅವರು ಮನಸ್ಸಿಗೆ ಬಂದಂತೆ ಹಣ ಕೇಳುವ ಹಾಗಿಲ್ಲ. ಒಬ್ಬರಿಗೆ ಒಂದು ರಾತ್ರಿ ಉಳಿದುಕೊಳ್ಳಲು ಮತ್ತು ಆ ರಾತ್ರಿಯ ಊಟ ಸೇರಿ 400 ರೂಪಾಯಿಗಳು. ನಾಲ್ಕೈದು ಟೆಂಟುಗಳಿಗೆ ಸೇರಿ ಒಂದು ಶೌಚಾಲಯವಿರುತ್ತದೆ. ಸ್ನಾನಕ್ಕೆ ಅವಕಾಶವಿಲ್ಲ. ಇಲ್ಲಿ ಲಂಗಾರ್‌ ಅಥವಾ ಭಂಡಾರವೆಂದು ಕರೆಯುವ ಉಚಿತ ಊಟದ ವ್ಯವಸ್ಥೆಯೂ ಇದೆ. ನಮಗೆ ಅದೃಷ್ಟವಿದ್ದರೆ, ಮೋಡವಿಲ್ಲದಿದ್ದರೆ ದೂರದಲ್ಲಿ ನಿಂತಿರುವ ಶ್ರೀಖಂಡ ಮಹಾದೇವನನ್ನು ಒಂದು ರೂಪಾಯಿ ನಾಣ್ಯದಷ್ಟು ಗಾತ್ರದಲ್ಲಿ ನೋಡಬಹುದು. ಮೊದಲ ದಿನ ತಚರುವಿನಲ್ಲಿ ಒಂದು ರಾತ್ರಿ ಕಳೆದು ಎರಡನೇ ದಿನ 12,200 ಅಡಿ ಎತ್ತರದಲ್ಲಿರುವ ಭೀಮ್‌ತಲಾಯ್‌ ಎಂಬ ಜಾಗಕ್ಕೆ ನಮ್ಮ ಚಾರಣ. ಸುಮಾರು 12 ಗಂಟೆಗಳ ಚಾರಣದ ಮಧ್ಯೆ ಕಾಳಿ ಟಾಪ್‌ ಎಂಬ ಜಾಗಕ್ಕೆ ಹೋಗುತ್ತೇವೆ. ಒಂದು ಪರ್ವತದ ಮೇಲೆ ಕಾಳಿ ದೇವಸ್ಥಾನವಿದ್ದು (ದೇವಸ್ಥಾನವೆಂದರೆ ನಮ್ಮ ಅರಳಿಕಟ್ಟೆಯ ಹಾಗೆ, ಗೋಡೆಗಳೇನಿಲ್ಲ) ಮುಂದಿನ ಚಾರಣಕ್ಕೆ ಈ ಮಾತೆಯ ಆಶೀರ್ವಾದ ಅತಿ ಮುಖ್ಯ ಎಂಬುದು ಎಲ್ಲರ ನಂಬಿಕೆ. ಇಲ್ಲಿ ಉಳಿದುಕೊಳ್ಳಲು ಟೆಂಟ್‌ ಸೌಲಭ್ಯವಿದ್ದರೂ ರಾತ್ರಿಯ ಹೊತ್ತು ಹೆಚ್ಚು ಚಳಿಯಾಗುವುದರಿಂದ ಉಳಿದುಕೊಳ್ಳುವುದು ಬೇಡವೆಂದು ಪರಿಣಿತ ಚಾರಣಿಗರು ಸಲಹೆ ನೀಡುತ್ತಾರೆ. ಕಾಳಿ ಟಾಪ್‌ನಿಂದ ಸುಮಾರು ಎರಡು ಗಂಟೆಗಳ ಚಾರಣ ಮಾಡಿದರೆ ನಮಗೆ ಭೀಮ್‌ತಲಾಯ್‌ ಪ್ರದೇಶ ಸಿಗುತ್ತದೆ. ತಚರುವಿನ ಹಾಗೇ ಇಲ್ಲಿಯೂ ಎಲ್ಲಾ ವ್ಯವಸ್ಥೆ ಇದೆ. ಮೂರನೇ ದಿನ ಭೀಮ್‌ ತಲಾಯ್‌ನಿಂದ 13000 ಅಡಿ ಎತ್ತರವಿರುವ ಭೀಮ್ ದ್ವಾರ್‌ಗೆ ಸುಮಾರು ಎಂಟು ಗಂಟೆಗಳ ಚಾರಣ. ಇಲ್ಲಿಯವರೆವಿಗೂ ನಾವು ಕಲ್ಲುಬಂಡೆಗಳ ಮೇಲೆ, ಪರ್ವತಗಳ ಮಧ್ಯದಲ್ಲಿ ಕಡಿದು ಮಾಡಿದ್ದ 1ರಿಂದ 2 ಅಡಿ ಅಗಲದ ಪಾದಚಾರಿ ಮಾರ್ಗದಲ್ಲಿ, ಆಕಾಶವನ್ನೇ ಮುಟ್ಟುತ್ತಿದೆಯೇನೋ ಎಂಬಂತೆ ನಿಂತ ಮರಗಳ ನಡುವೆ ಚಾರಣ ಮಾಡಿರುತ್ತೇವೆ. ಆದರೆ ಈ ದಿನ ಹಿಮನದಿ ಅಂದರೆ ಗ್ಲೇಶಿಯರ್‌ ಮೇಲೆ ನಡೆಯುವ ಹೊಸ ಅನುಭವ ಸಿಗುತ್ತದೆ. ಭೀಮ್‌ದ್ವಾರ್‌ ಐದು ಫುಟ್‌ಬಾಲ್‌ ಕ್ರೀಡಾಂಗಣದಷ್ಟು ಗಾತ್ರವಿರುವ ಸಮತಟ್ಟಾದ ಪ್ರದೇಶ. ಇದರ ಸುತ್ತ 10ರಿಂದ 12 ಪರ್ವತಗಳಿದ್ದು, ಈ ಎಲ್ಲಾ ಪರ್ವತಗಳಿಂದಲೂ ಒಂದೊಂದು ಜಲಪಾತ ಬೀಳುತ್ತಿರುವುದು ನಾವು ಕಾಣಬಹುದು. ಈ ಜಲಪಾತಗಳ ನೀರು ಭೀಮದ್ವಾರ್ ಕಣಿವೆಯಲ್ಲಿ ಹರಿಯುವ ಭ್ಯಾಸ್‌ ನದಿಗೆ ಸೇರಿಕೊಳ್ಳುತ್ತದೆ. ಬಣ್ಣಬಣ್ಣದ ಹೂಗಳು, ದುಮ್ಮಿಕ್ಕೆ ಹರಿಯುವ ಜಲಪಾತಗಳು, ಕೊರೆಯುತ್ತಿರುವ ಸಿಹಿ ನೀರಿನ ನದಿ, ಕ್ಷಣಕ್ಕೊಮ್ಮೆ ಪರ್ವತಗಳನ್ನೇ ಮಾಯವಾಗಿಸಿ ಹಾರಿಹೋಗುವ ಮೋಡಗಳು, ಆಹಾ! ಛಾಯಾಗ್ರಹಕರಿಗೆ ಹಾಗೂ ಪ್ರಕೃತಿ ಪ್ರಿಯರಿಗೆ ಇದೊಂದು ಸ್ವರ್ಗವೇ ಸರಿ. ಶಿವಭಕ್ತರಿಗಂತೂ ಇಲ್ಲಿನ ಒಂದೊಂದು ಖಣಖಣದಲ್ಲೂ ಶ್ರೀಖಂಡ ಮಹಾದೇವನೇ. ಪೂರ್ಣ ಚಾರಣ ಯಾತ್ರೆಯಲ್ಲಿ ಈ ಭೀಮ್‌ದ್ವಾರ್‌ ಮುಖ್ಯವಾದ ಘಟ್ಟ. ಈ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಟೆಂಟುಗಳಿರುತ್ತವೆ. ನಾಲ್ಕನೇ ದಿನದ ಚಾರಣ ಈ 13,000 ಅಡಿ ಎತ್ತರದಲ್ಲಿರುವ ಭೀಮ್‌ ದ್ವಾರದಿಂದ 17,150 ಅಡಿ ಎತ್ತರದಲ್ಲಿರುವ ಶ್ರೀಖಂಡ ಮಹದೇವನನ್ನು ದರ್ಶನ ಮಾಡಿ ಮತ್ತೇ ಭೀಮ್ ದ್ವಾರ್‌ಗೆ ಹಿಂದಿರುಗಬೇಕು. ಈ ದಿನದ ಚಾರಣ ಕೇವಲ ಬಂಡೆಕಲ್ಲುಗಳ ಮೇಲೆ ಹಾಗೂ ಹಿಮನದಿಗಳ ಮೇಲೆ ನಡೆಯುವುದಿದ್ದು ಸುಮಾರು 18ರಿಂದ 21 ಗಂಟೆಗಳ ಚಾರಣವಾಗುತ್ತದೆ. ಹಾಗಾಗಿಯೇ, ಭೀಮ್‌ದ್ವಾರ್‌ಗೆ ಸಂಜೆ ಬಂದು ತಲುಪುತ್ತಿದ್ದಂತೆ ನಮಗೆ ನಿದ್ರಿಸಲು ಇತರ ಚಾರಣಿಗರು ಸಲಹೆ ನೀಡುತ್ತಾರೆ. ಭೀಮದ್ವಾರ್‌ನಿಂದ ಕಲ್ಲು ಬಂಡೆಗಳ ಮೇಲೆ ಸುಮಾರು 4 ಗಂಟೆಗಳು ಚಾರಣ ಮಾಡಿದರೆ ಪಾರ್ವತೀ ಭಾಗ್‌ ಸಿಗುತ್ತದೆ, ಇಲ್ಲಿಂದಲೇ ಹಲವರು ದೂರದಲ್ಲಿ ಒಂದು ಅಡಿ ಎತ್ತರದಷ್ಟು ಕಾಣುವ ಮಹಾದೇವನನ್ನು ದರ್ಶನ ಮಾಡಿ ಹಿಂದಿರುಗುತ್ತಾರೆಂದು ಹೇಳಿದ್ದನ್ನು ನಾವು ಕೇಳಿದ್ದೇವೆ. ರಾತ್ರಿ 12ರಿಂದ 2 ಗಂಟೆಯ ಮಧ್ಯದಲ್ಲಿ ಚಾರಣ ಆರಂಭಿಸಬೇಕು. ಭಾರವಾದ ವಸ್ತುಗಳನ್ನೆಲ್ಲಾ ಟೆಂಟಿನಲ್ಲಿಯೇ ಬಿಟ್ಟು, ಎರಡು ನೀರಿನ ಬಾಟಲಿಗಳನ್ನು ಮತ್ತು ತಿನ್ನಲು ಭಾರವಲ್ಲದ ತಿನಿಸುಗಳನ್ನು ಹೊತ್ತುಕೊಂಡು ಹೋಗುವುದು ಸೂಕ್ತ. ಈ ಎತ್ತರದಲ್ಲಿ ನಮ್ಮ ಕರವಸ್ತ್ರವೂ ಭಾರವೆನಿಸುವುದರಲ್ಲಿ ಅನುಮಾನವಿಲ್ಲ. 10ರಿಂದ 11 ಗಂಟೆ ಚಾರಣ ಮಾಡಿದಮೇಲೆ ಶ್ರೀಖಂಡ ಮಹದೇವನ ದರ್ಶನವಾಗುತ್ತದೆ. ಅಲ್ಲಿಂದ ಮತ್ತೆ 9ರಿಂದ 10 ಗಂಟೆಗಳ ಚಾರಣ ಆ ದಿನವೇ ಮಾಡಬೇಕು. ಹಾಗಾಗಿ ಇದಕ್ಕಾಗಿಯೇ ನೇಮಿಸಿರುವ ಸರ್ಕಾರದ ಒಂದು ತಂಡ ಮಧ್ಯಾಹ್ನ 1 ಗಂಟೆಯ ನಂತರ ಮಹಾದೇವನ ಸನ್ನಿಧಿಯಲ್ಲಿರುವ ಎಲ್ಲರೂ ಹೊರನಡೆಯುವುದನ್ನು ಖಾತ್ರಿಪಡಿಸಿಕೊಳ್ಳುತ್ತದೆ ಮತ್ತು ಈ ವಿಶೇಷ ತಂಡದ ಸದಸ್ಯರೂ ಅವರೊಡನೆ ಹಿಂದಿರುಗುತ್ತಾರೆ. ಈ ನಾಲ್ಕನೇ ದಿನದ ಚಾರಣ ನಮ್ಮ ಭಕ್ತಿ ಮತ್ತು ಶಕ್ತಿಗೆ ಒಂದು ಪರೀಕ್ಷೆಯೇ ಸರಿ. ಇನ್ನು ಇಲ್ಲಿರುವ ಶ್ರೀಖಂಡ ಮಹದೇವ 80 ಅಡಿ ಎತ್ತರದೊಂದು ಕಲ್ಲು. ಕಲ್ಲೆಂದರೆ ತಪ್ಪಾಗುತ್ತದೆ ನಾನು ಶ್ರೀಖಂಡನೆಂದೇ ಹೇಳುತ್ತೇನೆ. ಈ ಶ್ರೀಖಂಡ, ಪರ್ವತದ ತುದಿಯಲ್ಲಿ ಪ್ರತ್ಯೇಕವಾಗಿ ನಿಂತಿದ್ದು ಆ ಪರ್ವತದ ಯಾವುದೇ ವಿಸ್ತರಣೆಯ ಭಾಗವಾಗಿ ಕಾಣಿಸುತ್ತಿಲ್ಲ. ಈ ಎತ್ತರದ ಶ್ರೀಖಂಡ 5 ಕಲ್ಲುಗಳನ್ನು ಜೋಡಿಸಿದ್ದಂತೆ ಮಧ್ಯದಲ್ಲಿ ಬಿರುಕುಗಳು ಕಾಣಿಸುತ್ತಿದ್ದು, ಇವು ಪಂಚ ರುದ್ರರಿರುವ ಒಂದು ಶಿಲೆ ಎಂಬುದು ಭಕ್ತರ ನಂಬಿಕೆ. ವರ್ಷವಿಡೀ ಇದರ ಸುತ್ತಲಿನ ಪರ್ವತಗಳಲ್ಲಿ ಹಿಮ ಬಿದ್ದರೂ, ಈ ಶ್ರೀಖಂಡದ ಮೇಲೆ ಒಂದು ಹನಿಯೂ ಹಿಮ ಬೀಳುವುದಿಲ್ಲ. ಇದರ ಮುಂದೆ ಸುಮಾರು ನೂರು ಜನ ಕುಳಿತುಕೊಳ್ಳಬಹುದಾದ ಸಮತಟ್ಟಾದ ಜಾಗವಿದ್ದು, ಭಕ್ತರು ತಮ್ಮ ಮೈಮೇಲೆ ಜ್ಞಾನವೇ ಇಲ್ಲವೇನೋ ಎಂಬಂತೆ ಭಕ್ತಿಪರವಶವಾಗಿ ಮಂತ್ರಗಳನ್ನು ಪಠಿಸುತ್ತಾ ನಮಸ್ಕರಿಸುತ್ತಿರುತ್ತಾರೆ. ಮಹಾದೇವನ ದರ್ಶನವಾದ ನಂತರ ಅವನನ್ನು ಬಿಟ್ಟು ಬರುವ ನೋವು ಅಷ್ಟಿಷ್ಟಲ್ಲ. “ನನ್ನಿಂದ ಮತ್ತೆ ಇಷ್ಟೆಲ್ಲಾ ಚಾರಣ ಮಾಡಲೂ ಸಾಧ್ಯವೇ ಅಥವಾ ಶ್ರೀಖಂಡ ಮಹಾದೇವ, ಈಗ ನಿನ್ನ ನೋಡಿದ್ದಷ್ಟೇ ನನ್ನ ಅದೃಷ್ಟವೇ” ಎಂದು ಮಹಾದೇವನನ್ನು ಮನದಲ್ಲೇ ಮಾತನಾಡಿಸುತ್ತಿರುತ್ತೇವೆ. ಹೋದ ದಾರಿಯಲ್ಲೇ ಮತ್ತೇ ಹಿಂದಿರುಗಬೇಕು. 5ನೇ ದಿನ ಭೀಮ್‌ದ್ವಾರದಿಂದ ಭೀಮ್‌ ತಲಾಯ್‌ 6ನೇ ದಿನ ಭೀಮ್‌ತಲಾಯ್‌ನಿಂದ ತಚರು ಮತ್ತು 7ನೇ ದಿನ ತಚರುವಿನಿಂದ ಸಿಂಗಡ್‌ ಅಥವಾ ಜಾವನ್‌ ಹಳ್ಳಿಗೆ ವಾಪಸ್. ಅಲ್ಲಿಗೆ ಯಾತ್ರೆ ಸಂಪೂರ್ಣವಾದಂತೆ. ಈ ವರ್ಷ ಅಂದರೆ 2024ರಲ್ಲಿ ಜುಲೈ 14ರಿಂದ 29ರ ವರೆಗೆ ಈ ಯಾತ್ರೆ ನಡೆಯುವುದೆಂದು ಗೆಳೆಯ ಚೇತನ್‌ ತಿಳಿಸಿದ. ಜೂನ್‌ ಮೊದಲ ವಾರದಲ್ಲಿ ಇದಕ್ಕಾಗಿ ಆನ್ ಲೈನ್‌ ನೊಂದಾಯಿಸಿ, ಜುಲೈ 20ರಿಂದ ನಾವು 8 ಜನರ ಗುಂಪು ಯಾತ್ರೆ ಆರಂಭಿಸುವುದಾಗಿ ಆಯ್ಕೆ ಮಾಡಿಕೊಂಡೆವು. ಈ ಯಾತ್ರೆಯ ಆರಂಭದಲ್ಲಿ ಆ ಶಿವನು ಮಾಡಿದ ಪರೀಕ್ಷೆ ಅಷ್ಟಿಷ್ಟಲ್ಲ. ಯಾತ್ರೆಗೆ ಒಂದು ವಾರ ಮುಂಚೆ ನನಗೆ ಪೂರ್ತಿ ಕೆಮ್ಮು, ಕಫ, ಜ್ವರ. ಯಾತ್ರೆಯ ಹಿಂದಿನ ದಿನ ಮನೆಯ ಮೇಲೆ ಹರಿವಿದ್ದ ಬಟ್ಟೆಗಳನ್ನು ತರಲು ಎರಡು ಮಹಡಿ ಹತ್ತಿ ಹೋಗಲೂ ಶಕ್ತಿ ಇರಲಿಲ್ಲ. ಮನೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುವಾಗ ನಮ್ಮ ಕಾರ್‌ ಅಪಘಾತಕ್ಕೆ ಈಡಾಗಿದ್ದು, ಯಾರಿಗೂ ಹೆಚ್ಚೇನೂ ಗಾಯಗಳಾಗದೇ ಪಾರಾಗಿ ಮತ್ತೊಂದು ಕಾರಿನಲ್ಲಿ ವಿಮಾನ ನಿಲ್ದಾಣ ತಲುಪಿದೆವು. ಯಾತ್ರೆಯಲ್ಲಿ ಒಂದೆರೆಡು ಸಲ ನನ್ನ ಗುಂಪಿನವರಿಗೆ ನಾನು ”ನನ್ನಿಂದ ಮುಂದುವರೆಯಲು ಸಾಧ್ಯವಿಲ್ಲ, ನೀವು ಮುಂದೆ ಹೋಗಿ” ಎಂದು ಖಡಾಖಂಡಿತವಾಗಿ ಹೇಳಿದರೂ, ಗುಂಪಿನವರ ಪ್ರೇರಣೆಯ ಮಾತಿನಿಂದ ಹಾಗೂ ಅಘೋಚರ ಶಕ್ತಿಯ ಆಶೀರ್ವಾದದಿಂದ ಚಾರಣ ಮುಂದುವರೆಸಿದೆ. ಜುಲೈ 19ರಂದು ಬೆಂಗಳೂರಿನಿಂದ ಚಂಡೀಗಡಕ್ಕೆ ವಿಮಾನದಲ್ಲಿ ಹೋಗಿ ಅಲ್ಲಿಂದ ಟೆಂಪೋ ಟ್ರಾವಲರ್‌ನಲ್ಲಿ ಜಾವನ್ ಹಳ್ಳಿಗೆ ಪ್ರಯಾಣಿಸಿ ಶ್ರೀಖಂಡ ಮಹಾದೇವ ಯಾತ್ರೆ ಮುಗಿಸಿಬಂದೆವು. ಯಾತ್ರೆಯಲ್ಲಿ ನಮಗಾದ ಅನುಭವಗಳು ವಾಕ್ಯಗಳಲ್ಲಿ ಬರೆಯಲು ಸಾಧ್ಯವೇ ಎಂಬುದು ನನ್ನ ಅನುಮಾನ. ಆದರೂ ಪ್ರಯತ್ನಿಸುತ್ತೇನೆ. • ಚಾರಣ ಆರಂಭಿಸಿದ ತಕ್ಷಣವೇ ಮನಸ್ಸು ನಮಗೆ ಅರಿವಿಲ್ಲದಂತೆಯೇ ನಿರ್ಮಲವಾಗುತ್ತದೆ ಮತ್ತು ಶಾಂತವಾಗುತ್ತದೆ. • ಮುಂದಿನ 7 ದಿನ ಸ್ನಾನಮಾಡಿ ದೇಹ ಶುದ್ದೀಪಡಿಸಿಕೊಳ್ಳುವುದಕ್ಕೆ ಅವಕಾಶವಿಲ್ಲದಿದ್ದರೂ, ಚಾರಣದಲ್ಲಿ “ಓಂ ನಮಃ ಶಿವಾಯ”, “ಹರ ಹರ ಮಹಾದೇವ” ಏಂಬ ಘೋಷಣೆಗಳನ್ನು ಕೂಗುತ್ತಾ ಹೋಗುವ ಪ್ರತಿಯೊಬ್ಬರೂ ಶಿವಭಕ್ತರಾದ್ದರಿಂದ ಮನಸ್ಸು ಶುದ್ದವಾಗುತ್ತದೆ ಶುಭ್ರವಾಗುತ್ತದೆ ಶಿವಮಯವಾಗುತ್ತದೆ. • ಹಿಮಾಲಯದ ಒಂದೊಂದು ಸುಂದರವಾದ ಗಿಡ, ಮರ, ಹೂವು, ಕಲ್ಲು ಬಂಡೆಗಳು, ಜಲಪಾತಗಳು ಶಿವನಾಮವನ್ನು ಜಪಿಸುತ್ತಾ ಇವೆಯೇನೋ ಎಂದನಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. • ಚಾರಣ ಕಷ್ಟವೆನಿಸುವ ಜಾಗದಲ್ಲಿ, ಯಾರೋ ಒಬ್ಬ ಅಪರಿಚಿತರು ಬಂದು ಸಹಾಯ ಹಸ್ತ ನೀಡುತ್ತಾರೆ, ಆದರೆ ಮತ್ತೇ ಅವರನ್ನು ನಾವು ಕಾಣುವುದೇ ಇಲ್ಲ. ಇದು ವಿಜ್ಞಾನದ ತರ್ಕಕ್ಕೆ ಮೀರಿದ್ದು. • ಶ್ರೀಖಂಡ ಮಹಾದೇವನ ಸನ್ನಿದಿಗೆ ಹೋಗುತ್ತಿದ್ದಂತೆ ಮನಸ್ಸು ಶೂನ್ಯವಾದದ್ದಂತೂ ನಿಜ. ಗೆಳೆಯನೊಡನೆ ನಾನು ಕೂಡಿ ರುದ್ರ ಮಂತ್ರ ಪಠಿಸಿದರೆ, ಮಿಕ್ಕ 6 ಜನ ಯಾವುದೋ ಶಿವಮಯವಾದ ಭ್ರಮೆಯ ಲೋಕದಲ್ಲಿ ಮುಳುಗಿದ್ದರು, ಇನ್ನೇನು ವಾಪಸ್‌ ಹೊರಡಬೇಕು ಎಂದಾಗಲೇ ನಮ್ಮ ಅರಿವಿಗೆ ಬಂದಿದ್ದು, ನಾವು ಯಾರೂ ಆ ಮಹಾದೇವನ ಜೊತೆ ಫೋಟೋ ತೆಗೆಸಿಕೊಂಡಿಲ್ಲವೆಂದು. ಆಗ ಒಬ್ಬೊಬ್ಬರನ್ನೇ ಮಹಾದೇವನ ಮುಂದೆ ನಿಲ್ಲಿಸಿ ಫೋಟೋಗಳನ್ನು ಕ್ಲಿಕ್ಕಿಸಿದೆ. • ಜಲಪಾತದ ಹತ್ತಿರ ಮತ್ತು ನದಿಯ ತೀರಗಳಲ್ಲಿ ಧ್ಯಾನಿಸುವುದು ಚಾರಣದ ಒಂದು ಭಾಗವೇ ಸರಿ. ಆ ಹಿಮಾಲಯದ ಮನೋಹರವಾದ ಸೌಂದರ್ಯ, ಧ್ಯಾನಕ್ಕೆ ಕಣ್ಮುಚ್ಚಲು ಬಿಡುವುದೇ ಇಲ್ಲ, ಆದರೂ ಕಷ್ಟ ಪಟ್ಟು ಕಣ್ಮುಚ್ಚಿದರೆ ಆ ಹರಿಯುವ ನದಿಯ ಹಾಗೂ ಎತ್ತರದಿಂದ ಬೀಳುತ್ತಿರುವ ಜಲಪಾತಗಳ ಶಬ್ದದಲ್ಲಿ ಕೇವಲ ಓಂಕಾರವು ಕೇಳುತ್ತಿತ್ತು. ತನುಮನವೆಲ್ಲಾ ಓಂಕಾರವಾಗಿತ್ತು. • ಬೆಂಗಳೂರಿಗೆ ಹಿಂದಿರುಗಿ ಬಂದಮೇಲೂ ಆ ದೃಶ್ಯಗಳೂ ಕಾಣುತ್ತಲೇ ಇವೇ “ಮತ್ತೇ ನನ್ನಲಿಗೆ ಬಾ ಬಾ” ಎಂದು ಕಾಡುತ್ತಲೇ ಇವೆ. ಚಾರಣಕ್ಕೆ ಬಳಸಿದ್ದ ಶೂ ತೊಳೆಯಲು ಹೋದರೆ ಅದರ ಅಡಿಗೆ ಅಂಟಿಕೊಂಡಿದ್ದ ಮಣ್ಣಿನಲ್ಲೂ ನನಗೆ ಆ ಶ್ರೀಖಂಡನು ಕಾಣುತ್ತಿದ್ದದ್ದು ಮಳೆ ನಿಂತ ಮೇಲೂ ಮರದ ಹನಿ ಎಂಬಂತೆ ಚಾರಣ ಮುಗಿದಮೇಲೂ ಒಳ ಮನಸ್ಸಿನ ಯಾತ್ರೇ ಇನ್ನೂ ನಡೆಯುತ್ತಲೇ ಇದೆ ಎಂಬುದು ಖಾತ್ರಿಯಾಯಿತು. ಗೆಳೆಯ ಚೇತನ್‌, ಅವನ ಪತ್ನಿ ಸಂಧ್ಯಾ ಹಾಗೂ ಅವರ ಬಳಗದವರಾದ ಅಮರ್‌ನಾಥ್‌, ಪ್ರವೀಣ್‌, ಶ್ರೀವಿದ್ಯಾ, ನಾಗೇಂದ್ರ ಹಾಗೂ ಗುರುಪ್ರಸಾದರೇ ನನ್ನ ಈ ಯಾತ್ರೆಗೆ ಹಾಗೂ ತನ್ಮೂಲಕ ಆ ಶ್ರೀಖಂಡ ಮಹಾದೇವನ ದರ್ಶನಕ್ಕೆ ಕಾರಣೆರೆಂಬುದನ್ನು ನಾನು ನೆನಪಿಸಿಕೊಳ್ಳಲೇಬೇಕು.
ಅನಿಸಿಕೆಗಳು