2018ರ ನವೆಂಬರ್ ಕೊನೆಯ ವಾರದಲ್ಲಿ, ನಮ್ಮ ಯೋಗಶ್ರೀಯ ಗಾಯತ್ರಿ ವೇದ ಬಳಗದ ವೇದ ತರಗತಿಯಲ್ಲಿ ಗುರುಗಳಾದ ಮುರಳಿ ಶರ್ಮರವರು ಹೀಗೆ ತಿಳಿಸಿದರು. ಈ ವರ್ಷದ ಮಾಘ ಭಾನುವಾರ ಸ್ನಾನಕ್ಕೆ ಗಿರಿನಗರದ ಶಂಕರ ಸೇವಾ ಸಮಿತಿಯಿಂದ ಕಾಲಟಿ (ಕಾಲಡಿ) ಕ್ಷೇತ್ರಕ್ಕೆ ಹೋಗಲು ನಿರ್ದರಿಸಲಾಗಿದೆ. ಈ ಪ್ರವಾಸವು ಫೆಬ್ರವರಿ 17, 2019ರಂದು ಪ್ರಾರಂಭವಾಗುತ್ತದೆ. ಬರಲು ಇಚ್ಛಿಸುವವರು, ತಮ್ಮ ಹೆಸರುಗಳನ್ನು ಶೀಘ್ರವಾಗಿ ನೊಂದಾಯಿಸಬೇಕು, ಎಂದರು. ಕೂಡಲೇ ತರಗತಿಯ 10 ಜನ ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತ ಪಡಿಸಿದರು. ದಿನೇ ದಿನೇ ಬೇರೇ ತರಗತಿಗಳಲ್ಲೂ ಈ ವಿಷಯ ತಿಳಿಸಿದಾಗ, ಒಟ್ಟಾರೆ 55 ಜನ ಪ್ರವಾಸಕ್ಕೆ ತಯಾರಾದರು.
ನಾನು, ಗುರುಗಳು ಅಂತರ್ಜಾಲದಲ್ಲಿ ಗುಂಪು ರೈಲು ಟಿಕೆಟ್ ಕಾಯ್ದಿರಿಸುವ ಬಗ್ಗೆ ಅನ್ವೇಷಣೆ ಮಾಡಿದೆವು. ನಂತರ ನಾನು ಹಾಗೂ ಮತ್ತೊಬ್ಬ ಪ್ರವಾಸಿ ಶ್ರೀನಿವಾಸ್ ಬೆಂಗಳೂರಿನ ರೈಲ್ವೇ ನಿಲ್ದಾಣಕ್ಕೆ ಹೋಗಿ, ಹೇಗೆ ಕೋರಿಕೆಯನ್ನು ಕೊಡಬೇಕು ಎಂಬುದನ್ನು ತಿಳಿದುಕೊಂಡು ಬಂದೆವು. ಆದರೆ ಫೆಬ್ರವರಿ 17ಕ್ಕೆ ಕಾಲಡಿ ಹತ್ತಿರವಿರುವ ತ್ರಿಸ್ಸೂರಿಗೆ ಹೋಗುವ ಯಾವುದೇ ರೈಲುಗಳಲ್ಲಿ ಸೀಟುಗಳಿರಲಿಲ್ಲ. ಆಗ ಗುರುಗಳು ಪ್ರವಾಸವನ್ನು ಫೆಬ್ರವರಿ 8ಕ್ಕೆ ಬದಲಾಯಿಸಿದರು, ಹಾಗೂ ಅವರೇ ಗುಂಪು ಟಿಕೆಟ್ ಬುಕಿಂಗ್ ಮಾಡಿದರು.
ಪ್ರವಾಸದ ದಿನ ಹತ್ತಿರವಾಗುತ್ತಿದ್ದಂತೆ, 5 ಜನ ತಾವು ಬರಲಾಗುವುದಿಲ್ಲ ಎಂದು ತಿಳಿಸಿದರು. ಅವರ ಟಿಕೇಟ್‍ಗಳನ್ನು ಕ್ಯಾನ್ಸಲ್ ಮಾಡುವ ಅವಧಿ ಮುಗಿದು ಹೋಗಿತ್ತು. ಫೆಬ್ರವರಿ 8ರಂದು ಸಂಜೆ 5.15ಕ್ಕೆ ನಮ್ಮ ಕೊಚ್ಚುವೆಲ್ಲಿ ಎಕ್ಸಪ್ರೆಸ್ ಗಾಡಿ ಇದ್ದದ್ದು. ಆದರೆ ಗುರುಗಳು ಎಲ್ಲರಿಗೂ 4.30ಕ್ಕೆ ರೈಲ್ವೇ ನಿಲ್ದಾಣಕ್ಕೆ ಬರಬೇಕೆಂದು ಸೂಚಿಸಿದರು. ಶ್ರೀಧರ್ ಎಂಬ ಒಬ್ಬ ಪ್ರವಾಸಿ ಬಿಟ್ಟು ಮಿಕ್ಕ ಎಲ್ಲರೂ 4.45ರ ಒಳಗೆ ರೈಲ್ವೇ ನಿಲ್ದಾಣ ಸೇರಿಕೊಂಡೆವು. ಆಶ್ಚರ್ಯವಂಬಂತೆ ರೈಲು 4.50ಕ್ಕೆ ಹೊರಟುಬಿಟ್ಟಿತು. ಕಳೆದ ಒಂದು ತಿಂಗಳಲ್ಲಿ ರೈಲಿನ ಸಮಯ ಬದಲಾಗಿರುವುದು ನಮಗೆ ತಿಳಿದಿರಲಿಲ್ಲ. ಗೆಳೆಯ ಶ್ರೀಧರ್ ರೈಲು ಮಿಸ್ ಮಾಡಿಕೊಂಡರು. ಒಟ್ಟಾರೆ 49 ಜನ ಕಾಲಡಿಯೆಡೆಗೆ ಸಾಗಿದೆವು. ಕೃಷ್ಣರಾಜಪುರಂನಲ್ಲಿ ನಮ್ಮ ಬೋಗಿಗೆ ಸುಮಾರು 200 ಜನ ಹತ್ತಿದ್ದು ನೋಡಿ ಭಯವಾಯಿತು. ನಾವುಗಳೆಲ್ಲ ನಮ್ಮ ನಮ್ಮ ಬ್ಯಾಗ್ಗಳ ಕಡೆ ಹೆಚ್ಚು ಗಮನ ಹರಿಸಿದೆವು. ಆದರೆ ಆ 200 ಜನ ಬಂಗಾರಪೇಟೆಯಲ್ಲಿ ಇಳಿದರು. ಶಂಕರ ಸೇವಾ ಸಮಿತಿಯ ರಂಗನಾಥರವರು ಎಲ್ಲರಿಗೂ ಚಪಾತಿ ಹಾಗೂ ಸಾಗೂ ತಂದಿದ್ದರು. ಎಲ್ಲರೂ ತಿಂದೆವು. ಚಪಾತಿ ಹೆಚ್ಚಾಗಿಯೇ ಉಳಿಯಿತು. ನಂತರ ರೈಲಿನಲ್ಲಿ ಎಲ್ಲರೂ ಒಂದೆರೆಡು ತಾಸು ಚಿನ್ನಾಗಿ ನಿದ್ದೆ ಮಾಡಿದೆವು. (ಕೆಲವರು ಎದ್ದೇ ಇರಬಹುದು, ನನಗೆ ಗೊತ್ತಿಲ್ಲ)
ಮಧ್ಯಾರಾತ್ರಿ ಸುಮಾರು 3 ಗಂಟೆಗೆ ರೈಲು ತ್ರಿಸ್ಸೂರ್ ತಲುಪಿತು. ಕೇವಲ ಮೂರು ನಿಮಿಷಗಳ ಕಾಲ ಮಾತ್ರ ರೈಲು ನಿಲ್ಲುವುದು ಎಂಬುದು ನಮಗೆ ಗೊತ್ತಿತ್ತು. ಆದ್ದರಿಂದ ಎಲ್ಲರೂ ವೇಗವಾಗಿ ಇಳಿದೆವು. ಆದರೆ ರೈಲು ಹತ್ತು ನಿಮಿಷ ಅಲ್ಲೇ ನಿಂತಿತ್ತು. ಗುರುಗಳು ಬಸ್ ಸಾರಥಿಗೆ ಕರೆ ಮಾಡಿದರು. ಅವನು, ಬಸ್ ರೈಲ್ವೇ ನಿಲ್ದಾಣಕ್ಕೆ ಬಂದಾಗಿದೆ ಎಂದು ತಿಳಿಸಿದನು. ನಾವೆಲ್ಲಾ ಗುರುಗಳು ತೋರಿಸಿದ ಬಸ್‍ಗೆ ಹತ್ತಿದೆವು. ನಮ್ಮ ಬ್ಯಾಗುಗಳನ್ನು ಸಾರಥಿಯ ಸಹಾಯಕ ಕುಮಾರ್ ಬಸ್‍ನ ಹಿಂಬದಿಯ ಡಿಕ್ಕಿಯಲ್ಲಿ ಜೋಡಿಸಿದನು. ಬಸ್‍ನ ಸಾರಥಿಗೆ ಮಲೆಯಾಳಂ ಭಾಷೆ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಆದರೆ ನಮ್ಮ ಅದೃಷ್ಟಕ್ಕೆ ಸಹಾಯಕನಿಗೆ ಹಿಂದಿ ಭಾಷೆ ಗೊತ್ತಿತ್ತು. ತ್ರಿಸ್ಸೂರಿನಿಂದ ಕಾಲಡಿ 53 ಕಿಲೋಮೀಟರ್ , ಸುಮಾರು 2ಗಂಟೆಗಳ ಪ್ರಯಾಣ. ಆದರೆ ರಾತ್ರಿ ಸಮಯವಾದ್ದರಿಂದ ಕೇವಲ ಒಂದು ವರೆ ಗಂಟೆಯಲ್ಲಿ ನಾವು ಕಾಲಡಿ ತಲುಪಿದೆವು.
ನಾವು ಬಸ್ಸಿನಿಂದ ಇಳಿದ ತಕ್ಷಣ, ಅಲ್ಲಿದ್ದ ಶೃಂಗೇರಿ ಶಾರದಾ ಟ್ರಸ್ಟಿನ ಮ್ಯಾನೇಜರ್ ಮೂರು ಕೊಠಡಿಗಳ ಹಾಗೂ ಒಂದು ದೊಡ್ಡ ಅತಿಥಿ ಗೃಹದ ಕೀ ಯನ್ನು ಗುರುಗಳಿಗೆ ಕೊಟ್ಟರು. ವಯಸ್ಸಿನಲ್ಲಿ ಹಿರಿಯರಾದ ಶಂಕರ ಸೇವಾ ಟ್ರಸ್ಟಿನ ಪಧಾಧಿಕಾರಿಗಳಿಗೆ ಮತ್ತು ನಮ್ಮಲ್ಲಿ ಕೆಲವು ಹಿರಿಯ ನಾಗರೀಕರಿಗೆ ಕೊಠಡಿಗಳನ್ನು ಕೊಟ್ಟು ಮಿಕ್ಕವರು ಅತಿಥಿ ಗೃಹದಲ್ಲಿ ತಂಗಿದೆವು. ಅತಿಥಿ ಗೃಹದಲ್ಲಿ ತಂಗಿದ್ದ ನಮ್ಮ ಸ್ತ್ರೀ ಪ್ರವಾಸಿಗರು ತಮಗೂ ಒಂದು ಪ್ರತ್ಯೇಕ ಕೊಠಡಿ ಕೊಟ್ಟಿದ್ದರೆ ಚೆನ್ನಾಗಿತ್ತು ಎಂದು ಹೇಳುತ್ತಿದ್ದದ್ದು ನಮ್ಮ ಕಿವಿಗೆ ಬೀಳುತ್ತಿತ್ತು. ಅತಿಥಿಗೃಹದ ಎದುರಿಗೆ ಪಾವತಿಸಿ-ಉಪಯೋಗಿಸಿ ಶೌಚಾಲಯವು ಇತ್ತು. ಈ ಶೌಚಾಲಯದಲ್ಲಿ ಹತ್ತು ರುಪಾಯಿ ನೀಡಿದರೆ ಪ್ರಾತಃ ಕರ್ಮಗಳ ಜೊತೆಗೆ ಸ್ನಾನ ಮಾಡುವ ಅವಕಾಶವಿತ್ತು ಹಾಗೂ ಸ್ವಚ್ಛವಾಗಿತ್ತು ಕೂಡಾ. ನಾವೆಲ್ಲಾ ಈ ವ್ಯವಸ್ಥೆಯನ್ನು ಉಪಯೋಗಿಸಿ ಸುಮಾರು 7 ಗಂಟೆಗೆ ತಯಾರಾದೆವು. ಬೆಳಗಿನ ಕಾಫಿ ನಾವು ತಂಗಿದ್ದ ಸ್ಥಳಕ್ಕೆ ಬಂದಿತ್ತು. 50 ಲೋಟ ಹಾಲಿಗೆ ತಪ್ಪಾಗಿ ಒಂದು ಚಮಚ ಕಾಫೀ ಡಿಕಾಕ್ಷನ್ ಹಾಕಿದ್ದಾರೇನೋ ಎಂಬುವಷ್ಟು ಗಟ್ಟಿಯಾಗಿತ್ತು ಹಾಲು. ತಿಂಡಿ ಸುಮಾರು 8 ಗಂಟೆಗೆ ತಯಾರಾಗುವುದು ಎಂದು ತಿಳಿಯಿತು. ಆ ಸಮಯದಲ್ಲಿ ನಾವು ಅಲ್ಲಿದ್ದ ದೇವಸ್ಥಾನಕ್ಕೆ ತೆರಳಿದೆವು.
ಕಾಲಡಿ, ಆದಿಗುರು ಶಂಕರಾಚಾರ್ಯರ ಜನ್ಮ ಸ್ಥಳ. ಇದು ಪೂರ್ಣಾ ನದಿಯ ತೀರದಲ್ಲಿದೆ. ಸುತ್ತಲೂ ಕಾಡಿನಂತಿರುವ ಇಲ್ಲಿನ ವಾತಾವರಣ ತೀರ್ಥ ಕ್ಷೇತ್ರಕ್ಕೆ ಒಂದು ಮಾದರಿ ಎನ್ನಬಹುದು. ಆದರೆ ಇತರ ಧರ್ಮಗಳ ಹಾವಳಿ ಹೆಚ್ಚಿರುವ ಕೇರಳದಲ್ಲಿ ಈ ಕ್ಷೇತ್ರ ಸಾತ್ವಿಕವಾಗಿಯೇ ಉಳಿದುಕೊಂಡಿರುವುದು ಒಂದು ವಿಸ್ಮಯವೇ ಸರಿ. ಈ ಕ್ಷೇತ್ರದಲ್ಲಿ ಏಳು ದೇವಿಯರ ದೇವಸ್ಥಾನ, ಶಂಕರಾಚಾರ್ಯರ ದೇವಸ್ಥಾನ ಹಾಗೂ ಕೃಷ್ಣನ ದೇವಸ್ಥಾನವಿದೆ. ಇಲ್ಲಿ ಶಂಕರರ ತಾಯಿಯ ದೇಹವನ್ನು ದಹನ ಮಾಡಿದ ಜಾಗವನ್ನು ಕ್ಷೇತ್ರದಲ್ಲಿಯೇ ಅತಿ ಪವಿತ್ರವಾದ ಸ್ಥಳ ಎಂದು ಕರೆಯುತ್ತಾರೆ.
ಈ ದೇವಸ್ಥಾನಗಳನ್ನು ನೋಡಿ ನಾವು ಅಲ್ಲಿದ್ದ ಪಾಠಶಾಲೆಯೆಡೆಗೆ ನಮ್ಮ ಹೆಜ್ಜೆ ಹಾಕಿದೆವು. ಪಾಠಶಾಲೆಯಲ್ಲಿ ನಮ್ಮ ತಿಂಡಿಯ ವ್ಯವಸ್ಥೆ ಆಗಿತ್ತು. ಬೆಳಗ್ಗೆ ತಿಂಡಿಗೆ ಹಸಿ ಕೊಬ್ಬರಿ ಮತ್ತು ಒಗ್ಗರಣೆ ಬೆರೆಸಿದ್ದ ತೆಳು ಅವಲಕ್ಕಿ ತಯಾರಿತ್ತು. ಹಾಗೂ ಅದರ ಜೊತೆಗೆ ಉಪ್ಪಿನಕಾಯಿ ಹಾಗೂ ಮೊಸರು ಬಂದಿತ್ತು. ಅಡುಗೆ ಮಾಡುವವರು ಧರ್ಮಸ್ಥಳದವರಾಗಿದ್ದ ಒಬ್ಬರು ಹೆಂಗಸು. ನಾನು ಮತ್ತು ಇನ್ನಿಬ್ಬರು ಗೆಳೆಯರು ಎಲ್ಲರಿಗೂ ಎಲೆ ಹಾಕಿ ತಿಂಡಿಯನ್ನು ಬಡಿಸಿದೆವು. ನೆಲದ ಮೇಲೆ ಕೂರಲಾಗದ ಕೆಲವರಿಗೆ ಮೇಜಿನ ವ್ಯವಸ್ಥೆಯೂ ಇತ್ತು. ನಂತರ ನಾವುಗಳು ತಿಂಡಿ ತಿಂದೆವು.
ಅಂದಿನ ನಿಗದಿತ ಕಾರ್ಯಕ್ರಮದಂತೆ 9 ಗಂಟೆಗೆ ಗುರುವಾಯೂರ್ ಕಡೆಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು. ಮುಂಜಾನಯೇ ಎದ್ದಿದ್ದರಿಂದ, ಬಸ್ಸಿನಲ್ಲಿ ಎಲ್ಲರೂ ಚೆನ್ನಾಗಿ ನಿದ್ದೆ ಮಾಡಿದರು. ತ್ರಿಸ್ಸೂರ್ ಮೂಲಕ ಕಾಲಡಿಯಿಂದ ಗುರುವಾಯೂರ್‍ಗೆ 72 ಕಿಲೋಮೇಟರ್. ಆದರೆ ವಾಹನಗಳ ಒತ್ತಡ ಜಾಸ್ತಿ ಇದ್ದದ್ದರಿಂದ ನಮಗೆ ಗುರುವಾಯೂರ್ ತಲುಪುವೆ ಹೊತ್ತಿಗೆ ಸುಮಾರು ಹನ್ನೆರಡು ಗಂಟೆಯಾಗಿತ್ತು. ನೇರವಾಗಿ ಸುಮಾರು ಅರ್ಧ ಕಿಲೋಮೀಟರ್ ಉದ್ದವಿದ್ದ ದರ್ಶನದ ಸಾಲಿನಲ್ಲಿ ನಾವು ನಿಂತೆವು. ಸಹಪ್ರವಾಸಿಯೊಬ್ಬರು ಅಲ್ಲೇ ಖರೀದಿಸಿದ ಬಾಳೇಹಣ್ಣು ನಮ್ಮ ಹಸಿವನ್ನು ಸ್ವಲ್ಪ ಮುಂದೂಡಿತು.
ಗುರುವಾಯೂರ್ ನಾಲ್ಕು ಕೈಗಳಿರುವ ಗುರುವಾಯೂರಪ್ಪನ ದೇವಸ್ಥಾನವಿರುವ ಊರು. ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗಧೆ ಹಾಗೂ ಕಮಲದ ಹೂವನ್ನು ಹಿಡಿದಿರುವ ಕೃಷ್ಣನ ಅವತಾರ ಇದು. ಇಲ್ಲಿ ಶಂಕರರು ಹೇಳಿದ ರೀತಿಯಲ್ಲಿ ಪೂಜೆ ನಡೆದು ಬಂದಿದೆ. ಜನ್ಮ ಸಮಯದಲ್ಲಿ ಕೃಷ್ಣನು ತನ್ನ ತಂದೆ ತಾಯಿಯರಾದ ದೇವಕಿ ಹಾಗೂ ವಸುದೇವರಿಗೆ ತೋರಿಸಿದ ದರ್ಶನವಿದು. ಆದ್ದರಿಂದ ಇಲ್ಲಿ ಕೃಷ್ಣನು ಮಗುವಿನ ರೀತಿಯಲ್ಲಿ ಕಾಣಿಸುತ್ತಾನೆ. ಇಲ್ಲಿನ ಪುರೋಹಿತರು ಬೆಳಗ್ಗೆ ನಿರಾಹಾರವಾಗಿ ಬಂದರೆ, ಮದ್ಯಾಹ್ನ 12.30ಕ್ಕೆ ಪೂಜೆ ಮುಗಿದ ಮೇಲೇ ಎನನ್ನಾದರು ಸೇವಿಸುವುದು. ಅಲ್ಲಿಯವರೆಗೂ ಒಂದು ತೊಟ್ಟು ನೀರು ಕೂಡ ಸೇವಿಸುವುದಿಲ್ಲ. ದೊರಕಿರುವ ದಾಖಲೆಗಳ ಪ್ರಕಾರ ಈ ದೇವಸ್ಥಾನದ ವಿಷಯವು 17ನೇ ಶತಮಾನದಲ್ಲಿ ತಮಿಳು ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಆದರೆ ಇದು 5000 ವರ್ಷಗಳಿಗಿಂತ ಹಳೆಯದೆಂದು ಒಂದು ವಾದ. ಈ ದೇವಸ್ಥಾನವು ಹೈದರ್‍ಅಲಿ ಹಾಗೂ ಟಿಪ್ಪುವಿನ ಆಕ್ರಮಣಕ್ಕೆ ಒಳಗಾಗಿದ್ದು, ಸಾಕಷ್ಟು ಮೂರ್ತಿಗಳನ್ನು ಟಿಪ್ಪು ನಾಶಮಾಡಿದ್ದಲ್ಲದೆ ಅಲ್ಲಿ ಪೂಜೆ ಮಾಡುತ್ತಿದ್ದ ಬ್ರಾಹಣ ಕುಟುಂಬಗಳನ್ನು ಓಡಿಸಿದ್ದು ಈಗ ಇತಿಹಾಸ. ಟಿಪ್ಪುವಿನ ಆಕ್ರಮಣವನ್ನು ತಪ್ಪಿಸಲು ಮೂಲ ಮೂರ್ತಿಯನ್ನು ನೆಲದಲ್ಲಿ ಅಡಗಿಸಿಟ್ಟದ್ದು ನಂತರ ಅದನ್ನು ಹೊರಗೆ ತೆಗೆದು ಪುನಃ ಸ್ಥಾಪಿಸಿದ್ದು ಈ ದೇವಾಲಯ ಕಂಡ ದುರಂತ ಕಥೆಗಳಲ್ಲೊಂದು. ಭಾರತದ ಸ್ವಾತಂತ್ರ್ಯ ನಂತರ, ಈ ದೇವಸ್ಥಾನದ ಬಹಳಷ್ಟು ಭಾಗವು ಅಗ್ನಿಗೆ ಆಹುತಿಯಾಗಿದ್ದು, ಮೂಲ ಗುಡಿಗೆ ಏನೂ ಆಗದೇ ಊಳಿದದ್ದು ವಿಸ್ಮಯವೇ ಸರಿ. ಈ ದೇವಸ್ಥಾನದ ಬಾಗಿಲುಗಳನ್ನು ತೆಗೆಯುವಾಗ, ಹಾಗೂ ಮುಚ್ಚುವಾಗ ಪ್ರಸಿದ್ದ ಗಾಯಕ ಜೇಸುದಾಸರ ಹಾಡುಗಳನ್ನು ಹಾಕುತ್ತಾರೆ. ಗುರುವಾಯೂರ್ ಕೃಷ್ಣನ ಪರಮ ಭಕ್ತರಾದ ಜೇಸುದಾಸರು ಕ್ರಿಶ್ಚಿಯನ್ ಧರ್ಮಕ್ಕೆ ಸಾರಿದವರಾಗಿದ್ದರಿಂದ ಈ ದೇವಸ್ಥಾನಕ್ಕೆ ಪ್ರವೇಶ ಸಿಕ್ಕಿರಲಿಲ್ಲ. ಆದರೆ ಅವರು ಹಾಡಿದ ಹಾಡುಗಳು ದೇವಸ್ಥಾನದಲ್ಲಿ ಮಂತ್ರಗಳಿಗೆ ಪ್ರತಿಸ್ಪರ್ಧಿಯೇನೋ ಎಂಬಂತೆ ಮೊಳಗುತ್ತಿರುತ್ತಿತ್ತು. ತನ್ನ ತಪ್ಪನ್ನು ಅರಿತ ದೇವಸ್ಥಾನದ ಸಮಿತಿ, ಕಳೆದ ವರ್ಷ ಜೇಸುದಾಸರಿಗೆ ಗುರುವಾಯುರ್ ಕೃಷ್ಣನನ್ನು ನೋಡುವ ಅವಕಾಶ ಮಾಡಿಕೊಟ್ಟಿತು.
ಎರಡು ಗಂಟೆಗಳು ನಿಂತ ನಂತರ ನಮಗೆ ಕೃಷ್ಣನ ದರ್ಶನವಾಯಿತು. ದೇವಸ್ಥಾನದಲ್ಲಿ ನಡೆಯುವ ಅನ್ನ ದಾಸೋಹ, 1.30ಕ್ಕೆ ಮುಗಿದಿತ್ತು. ಗುರುಗಳು ವಾಪಸ್ ಕಾಲಡಿಗೆ ಹೋಗಿ ಮಿಕ್ಕಿರುವ ಚಪಾತಿಯನ್ನು ಹಂಚಿಕೊಂಡು ತಿನ್ನೋಣ ಎಂದು ಹೇಳಿದರು. ಆದರೆ ನಮ್ಮ ಗುಂಪಿನಲ್ಲಿದ್ದ 6 ಚಿಕ್ಕ ಮಕ್ಕಳು ಹಾಗೂ ಮೂವತ್ತು ಹಿರಿಯ ನಾಗರೀಕರಿಗೆ ಹಸಿವು ತಡೆದುಕೊಳ್ಳಲಾಗುವುದಿಲ್ಲ ಎಂದು ಗುರುಗಳಿಗೆ ತಿಳಿಸಿದೆವು. ಗುರುಗಳ ಜೊತೆಗೆ ಎಲ್ಲರೂ ಊಟಕ್ಕೆ ಹತ್ತಿರದಲ್ಲಿದ್ದ ರಾಮಕೃಷ್ಣ ಹೋಟಲ್ಲಿಗೆ ಹೋದೆವು. ಈ ಹೋಟಲ್ಲಿನಲ್ಲಿ ಗೆಳೆಯ ಗಿರೀಶ್ ಹಿಂದೊಮ್ಮೆ ಊಟ ಮಾಡಿದ್ದರಂತೆ. ಒಳ್ಳಯ ಭರ್ಜರಿ ಊಟ ಮಾಡಿದೆವು. ಊಟದ ನಂತರ ಸುಮಾರು ಒಂದು ಗಂಟೆಗಳ ಕಾಲ ವಸ್ತ್ರಗಳ ಖರೀದಿ ಹಾಗೂ ಬಾಳೇಕಾಯಿ ಚಿಪ್ಸ್ ಖರೀದಿ ಜೋರಾಗಿಯೇ ಆಯಿತು.
ನಂತರ ಅಲ್ಲೇ ಆನೆಗಳನ್ನು ಪಳಗಿಸುವ ಕಾರ್ಯಗಾರಕ್ಕೆ ಹೋದೆವು. ಸುಮಾರು 30 ಆನೆಗಳು ನಮ್ಮ ಕಣ್ಣಗೆ ಬಿದ್ದವು. ನಾಲ್ಕು ಜನ ಸೇರಿ ಆನೆಗೆ ಸ್ನಾನ ಮಾಡಿಸುತ್ತಿದ್ದದ್ದು ಹಾಗು ಒಂದು ಆನೇ ತಾನೆ ಸ್ನಾನ ಮಾಡಿಕೊಳ್ಳುತ್ತಿದ್ದ ದೃಶ್ಯ ಮನೋಹರವಾಗಿತ್ತು. ಅಲ್ಲೇ ಸಹಪ್ರವಾಸಿಗರು ಮಜ್ಜಿಗೆ ಖರೀದಿಸಿದರು. ಮಜ್ಜಿಗೆ ಬಹಳ ಮಸಾಲೆಯಿಂದ ಕೂಡಿದ್ದು ಖಾರವಾಗಿದ್ದರಿಂದ ಎಲ್ಲರಿಗೂ ಕೊಡದೆ ಕೆಲವರು ಮಾತ್ರ ಕುಡಿದೆವು.
ಪ್ರವಾಸಿಗರಲ್ಲೊಬ್ಬರು ಒಂದು ಕೊಳಲನ್ನು ಖರೀದಿಸಿದ್ದು ಅದರಿಂದ ಸ್ವರ ಹೊರಬರಿಸಲು ಸಾಹಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಅಣ್ಣನ ಜೊತೆ ಕೊಳಲು ಊದುವುದನ್ನು ಸ್ವಲ್ಪ ಮಟ್ಟಿಗೆ ಅಡ್ಡಾದಿಡ್ಡಿಯಾಗಿ ಕಲಿತಿದ್ದ ನಾನು ರಾರ ವೇಣು, ಪದುಮನಾಭ, ವರವೀಣೆ ಹಾಡುಗಳನ್ನು ಕೊಳಲಲ್ಲಿ ಊದಿದೆನು. ಹಾಗೇ ಗುರುಗಳ ಮಗಳಾದ ಮಾನ್ಯ ಮತ್ತು ಕೃಷ್ಣಕುಮಾರರ ಪುತ್ರಿ ಮೇಧಿನಿ ಜೊತೆ ಸಂಗೀತ ಅಭ್ಯಾಸವನ್ನು ಮಾಡಿದೆ. ಸಂಗೀತ ಕಲಿತು ಬಿಟ್ಟು ಸುಮಾರು 7 ವರ್ಷಗಳು ಆಗಿದ್ದರೂ ಸ್ವರಗಳೂ ಸಲೀಸಾಗಿ ಬಂದದ್ದು ನನಗೇ ಆಶ್ಚರ್ಯವಾಯಿತು. ಮೇಧಿನಿಯನ್ನು ನನ್ನ ಬೆಸ್ಟ ಫ್ರಂಡ್ ಎಂದು ಹೇಳಿದ್ದಕ್ಕೆ ಅವಳ ಅಣ್ಣ ನಿಶ್ಚಲ್ ಕೋಪಗೋಂಡಿದ್ದ. ಅವನನ್ನು ಸಮಾಧಾನ ಪಡಿಸಲು ಆಗಲೇ ಇಲ್ಲ.
ನಂತರ ತ್ರಿಸ್ಸೂರಿನ ವಡಕ್ಕುನಾಥನ ದೇವಸ್ಥಾನಕ್ಕೆ ನಮ್ಮ ಪ್ರಯಾಣ ಸಾಗಿತು. ಈ ಶಿವನ ದೇವಸ್ಥಾನದÀಲ್ಲಿಯೇ ಶಂಕರರ ತಂದೆ ತಾಯಿ ಆರ‍್ಯಾಂಭ ಹಾಗೂ ಶಿವಗುರು ಮಗುವಿಗಾಗಿ ಪ್ರಾರ್ಥಿಸಿದ್ದು. ಶಿವನ ಅವತಾರವಾಗಿಯೇ ಶಂಕರರು ಅವರಿಗೆ ಜನಿಸಿದ್ದು. ನಾವು ಸುಮಾರು 7 ಗಂಟೆಗೆ ದೇವಸ್ಥಾನ ತಲುಪಿದೆವು. ಆದರೆ ದೇವಸ್ಥಾನ ಮುಚ್ಚಿತ್ತು ಹಾಗೂ 7.45ಕ್ಕೆ ಕೇವಲ 30 ನಿಮಿಷಗಳ ಕಾಲ ತೆಗೆಯುತ್ತೇವೆ ಎಂದು ಪೂಜಾರಿಗಳು ತಿಳಿಸಿದರು. ಈ ದರ್ಶನಕ್ಕೆ ಆಗಲೆ ದೊಡ್ಡ ಭಕ್ತಾದಿಗಳ ಸಾಲು ಕಾದು ಕುಳಿತಿತ್ತು. ಇನ್ನೂ 45 ನಿಮಿಷ ಕಾಯುವ ಸಂಯಮ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಎಲ್ಲರೂ ಬಸ್ ಹತ್ತಿ ಕಾಲಡಿ ಕಡೆಗೆ ಹೊರಟೆವು.
ಕಾಲಡಿಯಲ್ಲಿ ನಾವು ಬಸ್ಸಿನಿಂದ ಇಳಿಯುತ್ತಿದ್ದಂತೆ ನೇರವಾಗಿ ಎಲ್ಲರೂ ಊಟಕ್ಕೆ ತೆರಳಿದೆವು. ಅಲ್ಲಿನ ಮ್ಯಾನೇಜರ್ ಹೊಸದಾಗಿ ಕಟ್ಟಿದ್ದ ಭವನದಲ್ಲಿನ ಇನ್ನೆರಡು ಕೊಠಡಿಗಳ ಕೀಲಿಯನ್ನು ನೀಡಿದರು. ಈ ಎರಡು ಕೊಠಡಿಗಳು ಸಂಸಾರ ಸಮೇತರಾಗಿ ಬಂದಿದ್ದ ಗುರುಗಳು ಹಾಗೂ ಗಿರೀಶರಿಗೆ ನೀಡಲಾಯಿತು. ಹೊಸದಾಗಿ ಕಟ್ಟಿದ್ದ ಈ ಕಟ್ಟಡದ ಮಧ್ಯದಲ್ಲಿ ದೊಡ್ಡದಾದ ಒಂದು ಮುಕ್ತ ಕೋಣೆಯಿತ್ತು. ಇದು ಶುಭ್ರವಾಗಿತ್ತಲ್ಲದೆ ಫ್ಯಾನ್ ವ್ಯವಸ್ಥೆ ಇದ್ದದ್ದರಿಂದ ನಮ್ಮ ಯೋಗಶ್ರೀಯ ಮೂವರು ಅಕ್ಕಂದಿರಿಗೆ ನಾವು ಅಲ್ಲೇ ಮಲಗುವ ಎಂದು ತಿಳಿಸಿದೆ. ಅವರಿಗೂ ಆ ಮುಕ್ತ ಕೊಠಡಿಯ ಶುಭ್ರತೆ ನೋಡಿ ಸಂತೋಷವಾಯಿತು. ಆ ಮುಕ್ತ ಕೋಣೆಯ ಒಳಗಿನಿಂದಲೇ ಪಾವತಿಸಿ-ಉಪಯೋಗಿಸಿ ಶೌಚಾಲಯಕ್ಕೆ ನೇರ ದಾರಿ ಇತ್ತು. ಬೆಡ್‍ಶೀಟ್ ಹಾಸಿದ್ದಷ್ಟೇ ನನಗೆ ಜ್ಞಾಪಕ, ಎಚ್ಚರವಾಗಿದ್ದು ಬೆಳಗ್ಗೆ 4 ಗಂಟೆಗೆ ಮೊಬೈಲಿನಲ್ಲಿ ಅಲಾರ್ಮ್ ಹೊಡೆದಾಗ. ಆಶ್ಚರ್ಯವೆಂದರೆ ರೈಲು ತಪ್ಪಿಹೋಗಿದ್ದ ಶ್ರೀಧರ್ ಬಸ್‍ನಲ್ಲಿ ಬಂದು ನಮ್ಮನ್ನು ಸೇರಿಕೊಂಡದ್ದು ನಮಗೆಲ್ಲಾ ಸಂತೋಷ ತಂದಿತ್ತು.
ಅಂದು ಫೆಬ್ರವರಿ 10 ನೇ ತಾರೀಖು, ಭಾನುವಾರ. ನಮ್ಮ ಪ್ರವಾಸದ ಮೂಲ ಉದ್ದೇಶ ಈ ದಿನವೆಂಬುದು ನಮಗೆಲ್ಲಾ ತಿಳಿದಿತ್ತು. ಎಲ್ಲರೂ ಪಾವತಿಸಿ-ಉಪಯೋಗಿಸಿ ಶೌಚಾಲಯ ಉಪಯೋಗಿಸಿ ನದಿಗೆ ಸಾಬೂನು ಹಾಕಿ ಕೊಳಕು ಮಾಡಬಾರದೆಂಬ ಉದ್ದೇಶದಿಂದ ಸ್ನಾನವನ್ನು ಅಲ್ಲೇ ಮುಗಿಸಿ, ಮಾಘ ಸ್ನಾನಕ್ಕಾಗಿ ದೇವಾಲಯದ ಪಕ್ಕದಲ್ಲಿ ಹರಿಯುತ್ತಿದ್ದ ಪೂರ್ಣಾ ನದಿಗೆ ತೆರಳಿದೆವು. ಆಳವೇ ಇಲ್ಲದೆ ಶಾಂತವಾಗಿ ಹರಿಯುತ್ತಿದ್ದ ನೀರು ಹಾಗೂ ಪ್ರಶಾಂತ ವಾತಾವರಣದಿಂದಾಗಿ, ನೀರಿನಿಂದ ಹೊರಗೆ ಬರಲು ಬಹಳಷ್ಟು ಜನಕ್ಕೆ ಮನಸ್ಸೇ ಬರಲಿಲ್ಲ. ಪುರಾಣದ ಪ್ರಕಾರ ತನ್ನ ತಾಯಿಗೆ ಸಹಾಯ ಮಾಡಲು ಶಂಕರರು ಈ ನದಿಯ ಪಥವನ್ನೇ ಬದಲಾಯಿಸಿದ್ದರಂತೆ.
ಸ್ನಾನದ ನಂತರ ಸ್ತ್ರೀಯರು ನದಿ ನೀರಿಗೆ ಅರಿಶಿಣ ಕುಂಕುಮ ಪೂಜೆ ಮಾಡಿದರೆ, ಪುರುಷರು ಹಾಗೂ ಮಕ್ಕಳು ನದಿಯ ನೀರಿನಿಂದ ಸೂರ್ಯನಿಗೆ ಅಘ್ರ್ಯವನ್ನು ಕೊಟ್ಟರು. ನಂತರ ಸ್ತ್ರೀಯರು ಅಡುಗೆಗೆ ಸಹಾಯ ಮಾಡಲು ಹೊರಟರೆ, ಪುರುಷರೆಲ್ಲಾ ಸಂಧ್ಯಾವಂದನೆಯ ಒಂದು ಮುಖ್ಯ ಭಾಗವಾದ ಗಾಯತ್ರೀ ಜಪಕ್ಕಾಗಿ ಅಲ್ಲೇ ನದಿ ತೀರದಲ್ಲಿ ಇದ್ದ ಒಂದು ಮಂಟಪದಲ್ಲಿ ಕುಳಿತು ಗುರುಗಳ ಮಾರ್ಗದರ್ಶನದಲ್ಲಿ ಗಾಯತ್ರಿ ಜಪ ಮಾಡಿ ಮುಗಿಸಿದೆವು. ಅಲ್ಲಿಗೆ ಸಮಯ ಬೆಳಗ್ಗೆ ಸುಮಾರು 7.30 ಆಗಿತ್ತು. ಅಲ್ಲಿಂದ ಕೃಷ್ಣನ ದೇವಸ್ಥಾನಕ್ಕೆ ತೆರಳಿ ಕೃಷ್ಣನ ದರ್ಶನ ಪಡೆದೆವು. 8 ಗಂಟೆಗೆ ಸರಿಯಾಗಿ ಬೆಳಗಿನ ತಿಂಡಿಯ ಕಾರ್ಯಕ್ರಮವನ್ನು ಉಪ್ಪಿಟ್ಟಿನ ರೂಪದಲ್ಲಿ ಮುಗಿಸಿದೆವು.
ಶಂಕರಾಚಾರ್ಯರ ದೇವಸ್ಥಾನಕ್ಕೆ ತೆರಳಿ ಅಲ್ಲೇ ದೇವರ ಮುಂದೆ ಎಲ್ಲರೂ ಮಂತ್ರ ಹೇಳಲು ಕುಳಿತೆವು. ಆದರೆ ಅಲ್ಲೇ ಗುಡಿಯಲ್ಲಿ ಒಂದು ಉಪನಯನ ಕಾರ್ಯಕ್ರಮ ನಡೆಯುತ್ತಿದ್ದರಿಂದ ವಟುವಿನ ಗಾಯತ್ರಿ ಉಪದೇಶಕ್ಕೆ ತೊಂದರೆಯಾಗಬಾರದೆಂದು ದೇವಸ್ಥಾನದ ಪುರೋಹಿತರು, ಸ್ವಲ್ಪ ದೂರದಲ್ಲಿದ್ದ ಬ್ರಹ್ಮೀ ದೇವಿ ದೇವಸ್ಥಾನಕ್ಕೆ ಹೋಗಲು ನಮಗೆ ಸೂಚಿಸಿದರು. ನಾವೆಲ್ಲಾ ದೇವಿ ದೇವಸ್ಥಾನಕ್ಕೆ ಹೋಗಿ ನಮಗೆ ಗುರುಗಳು ಕಲಿಸಿದ್ದ ದೇವೀ ಸೂಕ್ತ, ನೀಳಾ ಸೂಕ್ತ, ನಾರಯಣೋಪನಿಷತ್, ಪುರುಷಸೂಕ್ತ, ಗಣೇಶ ಆಥರ್ವಶೀರ್ಷವನ್ನು ಹೇಳಿ ಮುಗಿಸಿದೆವು. ಸಮಯ 10.30 ಆಗಿತ್ತು. ಪುರೋಹಿತರು ಶಂಕರರ ಗುಡಿಯಲ್ಲಿದ್ದ ಶಿವ ಲಿಂಗಕ್ಕೆ ಅಭಿಷೇಕವಿದೆ ಎಂದು ತಿಳಿಸಿದರು. ನಾವೆಲ್ಲಾ ಅಲ್ಲಿಗೆ ಹೋಗಿ ಪುರೋಹಿತರು ಮಾಡುತ್ತಿದ್ದ ಅಭಿಶೇಕದ ಜೊತೆಜೊತೆಗೆ ರುದ್ರ ಪಠಣ ಮಾಡಿದೆವು. ಮಂಗಳಾರತಿ, ತೀರ್ಥ, ಪ್ರಸಾದ ವಿನಿಯೋಗ 11 ಗಂಟೆಗೆ ಮುಗಿಯಿತು. ಅಂದು ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಪ್ರವಾಸಿ ಬಾಲಕ ಶ್ರೇಯಸ್‍ಗೆ ಮಂಗಳಾರತಿ ತಟ್ಟೆಯನ್ನು ಎಲ್ಲರಲ್ಲಿಗೆ ತೆಗೆದುಕೊಂಡುಹೋಗುವ ಅವಕಾಶ ದೊರೆಯಿತು.
12 ಗಂಟೆಗೆ ಎಲ್ಲರೂ ಬಸ್ ಏರಿ, ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದ್ದ ಗೋಪುರದ ಮನೆಗೆ ತೆರಳಿದೆವು. ಆ ಗೋಪುರವು 7 ಅಂತಸ್ತಿನದಾಗಿದ್ದು, ಶಂಕರರ ಹುಟ್ಟಿನಿಂದ ಸಾವಿನ ವರೆಗೂ ನಡೆದ ಘಟಣಾವಳಿಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಪ್ರವೇಶ ಶುಲ್ಕ ಕೇವಲ 5ರೂ ಒಬ್ಬ ವ್ಯಕ್ತಿಗೆ. ಪೂರ್ತಿಯಾಗಿ ನೋಡಲು ಸುಮಾರು ಒಂದು ಗಂಟೆ ಬೇಕಾಯಿತು. ನಂತರ ಎಲ್ಲರೂ ಬಸ್ ಏರಿ, ಊಟಕ್ಕೆ ಹಾಜರಾದೆವು. ಊಟ ಬಡಿಸಿ ನಂತರ ನಾವುಗಳೂ ಊಟ ಮಾಡಿದೆವು.ರಾತ್ರಿಯ ಊಟಕ್ಕಾಗಿ ಪುಳಿಯೋಗರೆ ಮಾಡಿಸಿಕೊಂಡು ಅದನ್ನು ನಾವು ಚಪಾತಿ ಹಾಗೂ ಸಾಗೂ ತಂದಿದ್ದ ಡಬ್ಬಿಗಳಲ್ಲಿ ತುಂಬಿಸಿದೆವು.
6 ಗಂಟೆಗೆ ತ್ರಿಸ್ಸೂರಿನಿಂದ ಬೆಂಗಳೂರಿಗೆ ತೆರಳುವ ರೈಲಿಗಾಗಿ ನಾವು 3 ಗಂಟೆಗೆ ಕಾಲಡಿಯಿಂದ ಬಸ್ಸಿನಲ್ಲಿ ಹೊರಟೆವು. ನಾವು ತ್ರಿಸ್ಸೂರಿಗೆ ಬಂದಾಗ ಸಮಯ ಸಂಜೆ 5 ಗಂಟೆ. ಭಾರದ ಊಟದ ಬ್ಯಾಗನ್ನು ಒಯ್ಯವ ಜವಾಬ್ದಾರಿ ನಾನು, ಗಿರೀಶ್ ಹಾಗೂ ಶ್ರೀಧರ್ ವಹಿಸಿಕೊಂಡೆವು. 2ನೆ ಪ್ಲಾಟಫಾರ್ಮಗೆ ಈ ಭಾರದ ಪುಳಿಯೋಗರೇ ಬ್ಯಾಗನ್ನು ಹೊತ್ತುಕೊಂಡು ಹೋಗುವಷ್ಟರಲ್ಲಿ ನಮ್ಮ ಶಕ್ತಿಯೆಲ್ಲಾ ನಶಿಸಿಹೋಗಿತ್ತು. ಸಮಯಕ್ಕೆ ಸರಿಯಾಗಿ ರೈಲು ಬಂತು. ನಾವೆಲ್ಲಾ ರೈಲು ಹತ್ತಿದೆವು, ರೈಲು ಹೊರಟಿತು.
ಕೃಷ್ಣಪ್ರಸಾದ್ 50 ಜನಕ್ಕೆ 2 ದಿನಕ್ಕೆ ಆಗುವಷ್ಟು ಕುರುಕಲು ತಿಂಡಿಗಳನ್ನು ತಂದಿದ್ದರು. ಇದರಲ್ಲಿ ಶೇಕಡ 90ರಷ್ಟು ಉಳಿದಿದ್ದು ಅದನ್ನು ರೈಲಿನಲ್ಲಿ ಹಂಚಲು ನಾನು ಪ್ರಾರಂಭಿಸಿದೆ. ಇತರ ಪ್ರವಾಸಿಗರು ತಮ್ಮ ತಮ್ಮ ಬ್ಯಾಗುಗಳಿಂದ ಕುರುಕಲು ತಿಂಡಿಗಳನ್ನು ತೆಗೆದರು. ಎಲ್ಲಾ ಹಂಚಲು ಸಾಧ್ಯವಾಗಲಿಲ್ಲ. ಕಡೆಗೆ ಪ್ಯಾಕೆಟ್, ಪ್ಯಾಕೆಟ್ ಗಳನ್ನೇ ಯಾರದರು ಇಷ್ಟ ಪಟ್ಟರೆ ಮನೆಗೆ ತೆಗೆದುಕೊಂಡುಹೋಗಲು ಹೇಳಿದೆವು. ಈ ಕುರುಕಲು ತಿಂಡಿಯ ಸಹವಾಸದಿಂದ ನಾವು ತಂದಿದ್ದ ಪುಳಿಯೋಗರೆ ಖರ್ಚಾಗಿದ್ದು ಶೇಕಡ 50 ಮಾತ್ರ. ಮಿಕ್ಕ ಪುಳಿಯೋಗರೆಯನ್ನು ರೈಲಿನಲ್ಲಿ ಬಂದ ಬಿಕ್ಷುಕಿಗೆ ಕೊಟ್ಟು ಡಬ್ಬಿಗಳನ್ನು ಖಾಲಿ ಮಾಡಿದೆವು. ನಮಗೆ ಯಾವುದೇ ಕೆಳಗಿನ ಬರ್ತಗಳು ಸಿಕ್ಕದಿದ್ದರಿಂದ ಸಹ ಪ್ರಯಾಣಿಕರನ್ನು ಹಾಗೂ ಟಿಕೇಟ್ ನಿರ್ವಾಹಕರನ್ನು ವಿನಂತಿಸಿ ಕೆಲವು ಹಿರಿಯ ನಾಗರೀಕರಿಗೆ ಕೆಳಗಿನ ಬರ್ತನ್ನು ಕೊಡಿಸಿದೆವು.
ಸುಖಪ್ರಯಾಣದಲ್ಲಿ ನಿದ್ರಿಸಿ ಬೆಂಗಳೂರಿನ ಭಾಣಸವಾಡಿಗೆ ರೈಲು ಬಂದಾಗ ಮುಂಜಾನೆ 3.10. ನಮಗಾಗಿ ಗುರುಗಳು ಒಂದು ಮಿನಿ ಬಸ್ ಹಾಗೂ ಒಂದು ಟೆಂಪೋ ಟ್ರಾವಲರ್ ತರಿಸಿದ್ದರು. ನಾವೆಲ್ಲಾ ಅದರಲ್ಲಿ ಕುಳಿತುಕೊಂಡು ನಮ್ಮ ನಮ್ಮ ಮನೆ ಸುಮಾರು 5 ಗಂಟೆಗೆ ತಲುಪಿದೆವು. ಕೇವಲ ಪರಿಚಯಮಾತ್ರ ಇದ್ದ ಹಲವರು ಈ ಪ್ರವಾಸದಿಂದ ನನಗೆ ಸ್ನೇಹಿತರಾದರು.
ಗುರುಪಾದಾರವಿಂದಯೋಃ ಸಮರ್ಪಯಾಮಿ