ಕೋರ್ ಬರ್ಡರ್ಸ್ ಎಂದು ಸ್ವಯಂ ಕರೆದುಕೊಳ್ಳುವ ನಮ್ಮ ಗುಂಪಿನ ಬಗ್ಗೆ ಒಂದೆರೆಡು ಮಾತು. ನಮ್ಮದೋ ೧೩ ಜನ ಸಮಾನ ವಯಸ್ಕರ ಹಾಗೂ ಸಮಾನ ಮನಸ್ಕರ ಒಂದು ಗುಂಪು. ವಾರದ ಕೊನೆಯಲ್ಲಿ ಬೆಂಗಳೂರು ಹಾಗೂ ಅದರ ಸುತ್ತಮುತ್ತ ಪಕ್ಷಿವೀಕ್ಷಣೆಗೆ ಹೋಗುವುದು ನಮ್ಮ ಹವ್ಯಾಸ. ಬೆಂಗಳೂರು ಮತ್ತು ಆಸುಪಾಸಿನಲ್ಲಿ ನಾವು ನೋಡದ ಕೆರೆಗಳಿಲ್ಲ ಹಾಗೂ ಉಧ್ಯಾನವನಗಳಿಲ್ಲ. ಈ ಗುಂಪಿನಲ್ಲಿ ಕೆಲವರು ರಾಜ್ಯ ಹಾಗೂ ದೇಶದಿಂದ ಹೊರಕ್ಕೂ ಪಕ್ಷಿವೀಕ್ಷಣೆಗೆ ಹೋದವರಿದ್ದಾರೆ. ನಾವು ೧೩ ಜನರೂ ಒಟ್ಟಿಗೇ ಎಲ್ಲಿಗೂ ಹೋಗಿಲ್ಲ, ಸಾಮನ್ಯವಾಗಿ ವಾರಕ್ಕೆ ನಾಲ್ಕು ಅಥವಾ ಐದು ಜನರು ಸೇರುತ್ತೇವೆ ಅಷ್ಟೆ.
ಫೆಬ್ರುವರಿ 2021ರ ಕಡೆಯವಾರದಲ್ಲಿ ನಾವೆಲ್ಲ ೧೩ ಜನರೂ ಏಕೆ ಒಂದು ದೂರದ ಪಕ್ಷಿವೀಕ್ಷಣಾ ತಾಣಕ್ಕೆ ಹೋಗಬಾರದು ಎಂದು ಯೋಚಿಸಿದಾಗ ನಮ್ಮ ಅರಿವಿಗೆ ಬಂದದ್ದು ಇತ್ತೀಚೆಗೆ ಜನವರಿಯಲ್ಲಿ ಪ್ರಾರಂಭವಾದ ಗೋಪೀನಾಥಂ ಹಳ್ಳಿಯಲ್ಲಿರುವ ಜಂಗಲ್ ಲಾಡ್ಜಸ್. ಗೋಪೀನಾಥಂ ಎಂದೊಡನೆ ನಮಗೆ ಜ್ಞಾಪಕ ಬರುವುದು ದಂತಚೋರ ವೀರಪ್ಪನ್. ಇದು ಇವನ ತವರೂರು. ಗೋಪೀನಾಥಂ ಊರಿಗೆ ಈ ವ್ಯಕ್ತಿ ಹುಣ್ಣಿಮೆಯ ಚಂದಿರನಲ್ಲಿರುವ ಒಂದು ಕಪ್ಪು ಚುಕ್ಕೆಯಂತೆ. ಇವನ ಬಗ್ಗೆ ಹೇಳುವುದು ಈ ಲೇಖನದ ಉದ್ದೇಶವಲ್ಲ ಹಾಗಾಗಿ ಆ ವಿಷಯ ಇಲ್ಲೇ ಬಿಟ್ಟುಬಿಡೋಣ.
ಗೋಪೀನಾಥಂ ಮಲೈಮಹದೇಶ್ವರ ಬೆಟ್ಟದಿಂದ ಸುಮಾರು 40 ಕಿಲೋಮೀಟರ್ ದೂರದ ಕರ್ನಾಟಕ ತಮಿಳುನಾಡಿನ ಗಡಿಯಲ್ಲಿದೆ. ದಟ್ಟ ಕಾಡನ್ನು ಹೊಂದಿರುವ ಬೆಟ್ಟಗುಡ್ಡಗಳ ಕಣಿವೆಯಲ್ಲಿದೆ ಗೋಪೀನಾಥಂ. ಸುತ್ತ ಬೆಟ್ಟಗಳ ಮೇಲೆ ಬಿದ್ದ ಮಳೆನೀರು ಇಲ್ಲಿರುವ ಒಂದು ಕರೆಗೆ ತುಂಬಿಕೊಳ್ಳುತ್ತದೆ. ಹೆಚ್ಚು ಒಳಹರಿವು ಬಂದಾಗ ಕೆರೆ ತುಂಬಿ ಉಕ್ಕಿದ ನೀರು ಕಾವೇರಿ ನದಿಗೆ ಸೇರುತ್ತದೆ. ಸದ್ಯಕ್ಕೆ ಈ ಕೆರೆ ವರ್ಷಪೂರ್ತಿ ತುಂಬಿರುತ್ತದೆ ಎಂದು ಅಂದುಕೊಳ್ಳೋಣ. (ನಿಖರವಾಗಿ ತಿಳಿಯಬೇಕಾದರೆ ಒಂದು ವರ್ಷ ಬೇಕು) ಕೆರೆಯ ಮುಂದೆ ನಿಂತಲ್ಲೇ ಒಂದು ಪ್ರದಕ್ಷಿಣೆ ಹಾಕಿದರೆ, ಸುತ್ತಲೂ ಇರುವ ಬೆಟ್ಟಗಳನ್ನು ನಾವು ಕುತ್ತಿಗೆ ನೋವು ಬರುವಷ್ಟು ಎತ್ತರಕ್ಕೆ ತಲೆ ಎತ್ತಿ ನೋಡಬೇಕು. ಬೆಟ್ಟ, ಗುಡ್ಡ, ಕೆರೆ, ನದಿ, ಕಾಡು, ಪಕ್ಷಿ, ವನ್ಯಜೀವಿಗಳು ಎಲ್ಲವೂ ಒಂದೆಡೆಯೇ ಸಿಗುವ ಈ ಜಾಗವನ್ನು ಭುವಿಯ ಸ್ವರ್ಗ ಎಂದರೆ ಅತಿಶಯೋಕ್ತಿಯೇನಿಲ್ಲ. ಹಾ, ಒಂದು ವಿಷಯ ಹೇಳೋದು ಮರೆತೆ. ಇಲ್ಲಿನ ಪ್ರಕೃತಿ ಎಷ್ಟು ರಮಣೀಯವಾಗಿದೆಯೋ ಹಾಗೇ ಇಲ್ಲಿನ ಬಿಸಿಲು ಅಷ್ಟೇ ಪ್ರಭಲವಾಗಿದೆ. ನನ್ನ ಪ್ರಕಾರ ಪ್ರತಿವರ್ಷ ಆಗಸ್ಟಿನಿಂದ ಜನವರಿ ವರೆಗೆ ಮಾತ್ರ ಇಲ್ಲಿ ನಾವು ಅಂದರೆ ಹೊರಗಿನವರು ಹೋಗಬಹುದಷ್ಟೆ, ಬೇರೆ ಸಮಯದಲ್ಲಿ ಈ ಬಿಸಿಲಿನ ತಾಪ ತಡೆದುಕೊಳ್ಳುವ ಶಕ್ತಿ ನಮಗೆ ಖಂಡಿತಾ ಇಲ್ಲ.
ಈಗ ನಮ್ಮ ಪಯಣದ ಬಗ್ಗೆ ಹಾಗೂ ಅನುಭವಗಳ ಬಗ್ಗೆ ಕೆಲವು ಮಾತುಗಳು. ಬೆಂಗಳೂರಿನಿಂದ ಸುಮಾರು 270 ಕಿಲೋಮೀಟರ್ ದೂರದಲ್ಲಿರುವ ಈ ಗೋಪೀನಾಥಂಗೆ ಹೋಗಲು ನಮ್ಮ ಗುಂಪಿನಲ್ಲಿ ಹತ್ತು ಜನ ಒಪ್ಪಿಕೊಂಡರು. ಮಿಕ್ಕ ಮೂವರಿಗೆ ಬೇರೆ ಕೆಲಸಗಳಿತ್ತು. ಹತ್ತು ಜನರು ಹೋಗಲು ನಾವು ಟೆಂಪೋ ಟ್ರಾವಲರ್ ಮಾಡಿದೆವು. ಇದೇ ಮೊದಲ ಸಲ ನಾವು ನಮ್ಮ ಕಾರುಗಳನ್ನು ಬಳಸದೇ ಇರಲು ನಿಶ್ಚಯಿಸಿದ್ದು. ಇದಕ್ಕೆ ಸೂಕ್ತ ಕಾರಣವೂ ಇದೆ. ಮುಂದೆ ತಿಳಿಸುತ್ತೇನೆ.
ಫೆಬ್ರವರಿ ೨೭ರಂದು ಬೆಳಗ್ಗೆ ೫ ಗಂಟೆಗೆ ಪ್ರಯಾಣ ಪ್ರಾರಂಭ. ಕನಕಪುರದ ವಾಸು ಹೋಟಲ್‌ನಲ್ಲಿ ನಮ್ಮ ಬೆಳಗಿನ ತಿಂಡಿ. ವಾಸು ಹೋಟಲ್ ಮಸಾಲೆ ದೋಸೆಗೆ ತುಂಬಾ ಪ್ರಸಿದ್ಧ. ಆದರೆ ನಾವು ಹೋಟಲ್ ತಲುಪಿದ್ದು 6.30ಕ್ಕೆ ಹಾಗೂ ಮಸಾಲೆದೋಸೆ ಅವರು ಮಾಡಲು ಶುರುಮಾಡುವುದು 7.30ಕ್ಕೆ. ಹಾಗಾಗಿ ಬೇರೆ ದಾರಿ ಇಲ್ಲದೆ ನಾವು ಇಡ್ಲಿ ವಡೆ ಉಪ್ಪಿಟ್ಟಿಗೆ ಮೊರೆಹೋದೆವು. ತಿಂಡಿ ತಿಂದು ಸುಮಾರು ೨ ಗಂಟೆ ಪ್ರಯಾಣಿಸದ ಮೇಲೆ ನಮಗೆ ಸಿಕ್ಕ ಊರು ಹಲಗೂರು. ಸ್ವಲ್ಪದೂರದಲ್ಲೇ ನಮಗೆ ಊರು ಕಾಣಿಸುತ್ತಿತ್ತು ಆದರೆ ನಮ್ಮ ಟೆಂಪೋ ಟ್ರಾವಲರ್ ಮುಂದೇ ಓಡಲೇ ಇಲ್ಲ. ಕಾರಣ, ವಾಹನದ ಕ್ಲಚ್ ಪ್ಲೇಟ್ ಕೈಕೊಟ್ಟಿತ್ತು. ಅಲ್ಲೇ ಊರಿನಲ್ಲಿದ್ದ ಮ್ಯೆಕಾನಿಕ್ ಬಳಿ ನಮ್ಮ ಡ್ರೈವರ್ ವಿಚಾರಿಸಿಕೊಂಡು ಬಂದಾಗ ನಮಗೆ ಗೊತ್ತಾಗಿದ್ದು ಇದನ್ನು ಸರಿಮಾಡಲು ಸುಮಾರು 4 ಗಂಟೆಗಳ ಅವಶ್ಯಕತೆ ಇದೆ ಎಂದು. ಕೇವಲ ಒಂದು ದಿನಕ್ಕೆ ನಾವು ಜಂಗಲ್ ಲಾಡ್ಜಸ್ ಕಾಯ್ದಿರಿಸಿದ್ದವು. ಅಂದರೆ ಶನಿವಾರ ಬೆಳಗ್ಗೆ 12.30ರಿಂದ ಭಾನುವಾರ ಬೆಳಗ್ಗೆ 11ರವರೆಗೆ ಮಾತ್ರ. ಹೀಗಿರುವಾಗ ನಾಲ್ಕು ಗಂಟೆ ವಾಹನ ರಿಪೇರಿಯಲ್ಲಿ ಕಳೆಯುವುದರಲ್ಲಿ ಅರ್ಥವಿರಲಿಲ್ಲ. ಅಲ್ಲಿಂದ ಕರ್ನಾಟಕ ಸಾರಿಗೆ ಬಸ್ ಹಿಡಿದು ಮಲೈಮಹದೇಶ್ವರ ಬೆಟ್ಟಕ್ಕೆ ಹೋಗಿ ಅಲ್ಲಿಂದ ಇನ್ನೊಂದು ದೊಡ್ಡ ವಾಹನದಲ್ಲಿ ಎಲ್ಲರೂ ಗೋಪೀನಾಥಂಗೆ ತಲುಪಿದಾಗ ಸಮಯ 12.30. ನಾವು ಗಾಡಿಯಿಂದ ಇಳಿಯುತ್ತಿದ್ದಂತೆ ನಮಗೆ ಸ್ವಾಗತವನ್ನು ಕೋರಿದ್ದು ಅಲ್ಲೇ ಮರದ ಮೇಲೆ ಇದ್ದೆ 2 ಗೂಭೆಗಳು. ಇದು ಪಕ್ಷಿವೀಕ್ಷಕರಿಗೆ ಒಂದು ಶುಭಾರಂಭವೇ ಸರಿ. ಬೇರೆ ಜನರು ಇದನ್ನು ಅಪಶಕುನ ಅಂದುಕೊಳ್ಳುತ್ತಾರೆ. ಅದು ಅವರ ಯೋಚನೆಗೆ ಬಿಟ್ಟಿದ್ದು. ನಮಗೆ ಆ ವಿಷಯ ಬೇಡ ಬಿಡಿ. ಗಾಡಿ ರಿಪೇರಿ ಮಾಡಿಸಿಕೊಂಡು ನಮ್ಮ ಡ್ರೈವರ್ ಗೋಪೀನಾಥಂ ತಲುಪಿದ್ದು ಸಂಜೆ 5ಕ್ಕೆ.
ಜಂಗಲ್ ಲಾಡ್ಜಸ್ನ ಗುಡಿಸಿಲಂತಿರುವ ಅರ್ಧ ಕಾಂಕ್ರೀಟ್ ಗೋಡೆಯನ್ನು ಹೊಂದಿರುವ ಪುಟ್ಟ ಕೊಠಡಿಗಳಲ್ಲಿ ನಮ್ಮ ವಾಸ. ಒಂದು ಕೊಠಡಿಯಲ್ಲಿ ಇಬ್ಬರಿಗೆ ಇರಲು ಅವಕಾಶ. ಹಾಗೂ ಪ್ರತಿಯಂದು ಕೊಠಡಿಗೆ ಒಳಗೇ ಹೊಂದಿಕೊಂಡಂತೆ ಸ್ನಾನಗೃಹ ಹಾಗೂ ಶೌಚಾಲಯ. ಸ್ವಚ್ಚತೆಯಲ್ಲಿ ಯಾವ ಪಂಚತಾರ ಹೋಟಲ್‌ಗೇನು ಕಡಿಮೆ ಇರಲಿಲ್ಲ. ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 1947ರೂಪಾಯಿ ತಗಲುತ್ತದೆ. ವಸತಿ, ಎರಡು ಊಟ, ಸಂಜೆಯ ಬಜ್ಜಿ ಬೋಂಡಾ, ಬೆಳಗಿನ ತಿಂಡಿ, ಕಾಫಿ, ಟೀ, ಅವರದೇ ವಾಹನದಲ್ಲಿ ಒಂದು ಸಫಾರಿ ಹಾಗೂ ಬೆಳಗ್ಗೆ ಕಾಡಿನ ಒಳಗೆ 4 ಕಿಲೋಮೀಟರ್‌ನ ಒಂದು ಚಾರಣ ಇಷ್ಟೂ ಈ 1947ರೂಪಾಯಿಗೆ ದೊರೆಯುತ್ತದೆ.. ನಾವು ಮದ್ಯಾಹ್ನ ಊಟ ಮುಗಿಸಿದ ಮೇಲೆ ಬಿಸಿಲಿನ ಧಗೆ ತಾಳಲಾರದೆ ಎಲ್ಲರೂ ನಮ್ಮ ನಮ್ಮ ಕೊಠಡಿಗಳಿಗೆ ಹೋಗಿ ಅಲ್ಲಿದ್ದ ಫ್ಯಾನ್ ಹಾಕಿಕೊಂಡು ವಿಶ್ರಮಿಸಿದೆವು.
ಸಂಜೆ ೪ಕ್ಕೆ ಕಾಫಿ ಸೇವನೆಯ ನಂತರ ಅವರದೇ ಜೀಪಿನಲ್ಲಿ ನಮ್ಮ ಸಫಾರಿ ಪ್ರಾರಂಭ. ಸುಮಾರು 7 ಕಿಲೋಮೀಟರ್ ಕಾಡಿನೊಳಗೆ ಪ್ರಕೃತಿ ಸೌಂದರ್ಯವನ್ನು ಅನುಭವಿಸುತ್ತಾ, ಅಲ್ಲಲ್ಲಿ ಸಿಗುತ್ತಿದ್ದ ಪಕ್ಷಿಗಳ ಫೋಟೋ ತೆಗೆಯುತ್ತಾ ಸಾಗಿತು ನಮ್ಮ ಸಫಾರಿ. ಸುಮಾರು 7 ಕಿಲೋಮೀಟರ್ ಪ್ರಯಾಣಿಸಿದ ಮೇಲೆ ನಮ್ಮ ಭಾರತೀಯ ಅರಣ್ಯ ಸೇವೆಯ ಆಫೀಸರ್ ಶ್ರೀ ಶ್ರೀನಿವಾಸ್ ದುರ್ಮರಣ ಹೊಂದಿದ ಸ್ಥಳ ತಲುಪಿದೆವು. ಅಲ್ಲಿ ಅವರ ಸಮಾಧಿ ಹಾಗೂ ಅದರ ಸುತ್ತ ಒಂದು ಚಿಕ್ಕ ಉಧ್ಯಾನವನವನ್ನು ಅರಣ್ಯ ಇಲಾಖೆಯವರು ಸ್ಥಾಪಿಸಿದ್ದಾರೆ. ಶ್ರೀನಿವಾಸರಂತಹ ಮಹಾನ್ ವ್ಯಕ್ತಿಗಳ ಪರಿಶ್ರಮ ಹಾಗೂ ತ್ಯಾಗದಿಂದ ಇಂದು ನಾವು ಗೋಪೀನಾಥಂ ಕಾಡಿನ ಸೌಂದರ್ಯವನ್ನು ಅನುಭವಿಸಲು ಸಾಧ್ಯವಾಗುತ್ತಿದೆ. ಸಫಾರಿಯಲ್ಲಿ ನಾವು ಕಂಡದ್ದು ಸುಮಾರು 52 ಜಾತಿಯ ಪಕ್ಷಿಗಳು. ಸಫಾರಿ ಮುಗಿದದ್ದು ಸುಮಾರು 6 ಗಂಟೆಗೆ. ಆಗ ತಾನೆ ಒಳ್ಳೆಯ ಸೂರ್ಯಾಸ್ತವನ್ನು ನೋಡಿದೆವು. ಬಿಸಿಲಿನ ಧಗೆ ಸ್ವಲ್ಪ ಕಡಿಮೆಯಾಯಿತು. ಜಂಗಲ್ ಲಾಡ್ಜಸ್‌ಗೆ ಅಂಟಿಕೊಂಡಿರುವ ಕೆರೆಯ ಮುಂದೆ ನಾವೆಲ್ಲಾ ಕುಳಿತು ನಮ್ಮ ಕಾಡುಹರಟೆ ಪ್ರಾರಂಭಿಸಿದೆವು. ಜೊತೆಗೆ ಬೆಂಗಳೂರಿನಿಂದ ತಂದಿದ್ದ ಕಾಂಗ್ರೆಸ್ ಕಡ್ಲೆಕಾಯಿ ಬೀಜ, ನಿಪ್ಪಟ್ಟು, ಕೋಡುಬಳೆ, ಚಕ್ಕುಲಿ ಹರಟೆಯ ಮಧ್ಯೆ ನಮಗೆ ಅರಿವಿಲ್ಲದೆಯೇ ನಮ್ಮ ಹೊಟ್ಟೆ ಸೇರಿತು. ಬೆಳಗ್ಗೆಯಿಂದ ಸಾಕಷ್ಟು ಬಳಲಿದ್ದ ನಮಗೆ ರಾತ್ರಿ ಊಟ ಮಾಡಿ ಮಲಗಿದಾಗ ಎಚ್ಚರವಾಗಿದ್ದು ಬೆಳಗ್ಗೆ 6 ಗಂಟೆಗೆ ಮೊಬೈಲಿನಲ್ಲಿ ಅಲಾರಂ ಹೊಡೆದಾಗ.
ಅಂದು ಬೆಟ್ಟಗಳ ಹಿಂದಿನಿಂದ ಹೊರಬರುವ ಸೂರ್ಯೋದಯವನ್ನು ನೋಡಿ, ಬೆಳಗ್ಗೆ 7 ಗಂಟೆಗೆ ಕಾಫಿ ಕುಡಿದು ಕಾಡಿನಲ್ಲಿ ಚಾರಣ ಆರಂಭ. ಬೆಟ್ಟ ಗುಡ್ಗಳನ್ನೇರಿ, ಮುಳ್ಳು ಬೇಲಿಗಳಿಂದ ತಪ್ಪಿಸಿಕೊಳ್ಳುತ್ತಾ, ತಂಪಾದ ಕಾಡಿನ ಗಾಳಿಯನ್ನು ಸೇವಿಸುತ್ತಾ ಮುನ್ನಡೆದೆವು. ನಮ್ಮೊಂದಿಗೆ ಜಂಗಲ್ ಲಾಡ್ಜಸ್‌ನ ಇಬ್ಬರು ನ್ಯಾಚುರಲಿಸ್ಟ್‌ಗಳು ಬಂದಿದ್ದರು. ಇವರ ಕೆಲಸ ನಮಗೆ ಕಾಡಿನ ಬಗ್ಗೆ ಮಾಹಿತಿ ಮತ್ತು ಅಲ್ಲಿ ಕಾಣಸಿಗುವ ಪಕ್ಷಿ, ಪ್ರಾಣಿಗಳನ್ನು ತೋರಿಸುವುದು. ಆದರೆ ನಮ್ಮ ಗುಂಪಿನ ಸುಮಾರು 8 ಜನರ ಅನುಭವ ಈ ನ್ಯಾಚುರಲಿಸ್ಟಗಳಿಗಿಂತ ಹೆಚ್ಚೇ ಇತ್ತು. ಚಿರತೆ ಹಾಗೂ ಆನೆಗಳನ್ನು ಹಿಂದಿನ ದಿನದ ಅತಿಥಿಗಳು ನೋಡಿದ್ದರಂತೆ, ಆದರೆ ನಮಗೇನೂ ಅದರ ಸುಳಿವು ಸಿಗಲಿಲ್ಲ. ಪಕ್ಷಿಗಳ ಕೂಗು, ಬರ್ರನೆ ಬೀಸುವ ತಂಪಾದ ಗಾಳಿಯ ಸೂಕ್ಷ್ಮ ಶಬ್ಧ, ಹರಿಯುವ ನೀರಿನ ಝರಿಗಳು, ಕೆರೆ, ಎತ್ತರೆತ್ತರ ಕಾಣಿಸುವ ಬೆಟ್ಟಗಳು, ಹಸಿರುಟ್ಟ ಮರಗಳು ಎಲ್ಲವೂ ನಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದುಕೊಂಡುಹೋಗಿತ್ತು. ಚಾರಣ ಹಾಗೂ ಪಕ್ಷಿವೀಕ್ಷಣೆಯ ಮೂಲ ಉದ್ದೇಶವು ಇದೇ ಅಲ್ಲವೇ.
"ನಾನೇ ಎಲ್ಲ" ಎಂಬ ಅಹಂಕಾರದಿಂದ "ಈ ಪ್ರಕೃತಿಯ ಮುಂದೆ ನಾನೇನಿಲ್ಲ" ಎಂಬ ಅರಿವಿನೆಡೆಗೆ ಕರೆದೊಯ್ಯುವ ಪಯಣವೇ ಈ ಚಾರಣ.
11 ಗಂಟೆಗೆ ಚಾರಣ ಮುಗಿಸಿಬಂದು ಸ್ನಾನ ಮಾಡಿ, ತಿಂಡಿ ತಿಂದು ವಾಪಸ್ ಬೆಂಗಳೂರಿನೆಡೆಗೆ ನಮ್ಮ ಪಯಣ. ನಮ್ಮ ಗುಂಪಿನ ಇಬ್ಬರಿಗೆ ವಾಹನದಿಂದಲೇ ಒಂಟಿ ಸಲಗದ ದರ್ಶನವೂ ಆಯಿತು. ಬಳಲಿ ಬೆಂಡಾಗಿದ್ದ ನಮಗೆಲ್ಲಾ ವಾಹನ ಏ.ಸಿ. ಆನ್ ಮಾಡಿಸಿ ಮಲಗಿದರೆ ಸ್ವರ್ಗ ಸುಖದಂತ ನಿದ್ದೆ. (ಈ ಕಾರಣಕ್ಕೆ ಈ ಪ್ರವಾಸಕ್ಕೆ ನಾವು ನಮ್ಮ ಕಾರ್ ಬಳಸಲಿಲ್ಲ.) ವಾಪಸ್ ಬರುವಾಗಿ ದಾರಿಯಲ್ಲಿ ಎರಡು ಕಡೆ ಗಾಡಿ ಟೈರ ಪಂಕ್ಚರ್ ಆಗಿದ್ದು, ಹಲಗೂರಿನಲ್ಲಿ ನಂದಿ ಹೋಟಲ್‌ನಲ್ಲಿ ಮೊಸರನ್ನ ತಿಂದು, ಕನಕಪುರಕ್ಕೆ ಬಂದು ವಾಸು ಹೋಟಲಿನಲ್ಲಿ ಮಸಾಲೆದೋಸೆ ತಿನ್ನುವ ಬಯಕೆಯನ್ನು ತೀರಿಸಿಕೊಂಡು ಬೆಂಗಳೂರಿಗೆ ತಲುಪಿದಾಗ ರಾತ್ರಿ 7 ಗಂಟೆ.
ಪ್ರತಿಯೊಂದು ಪ್ರವಾಸವು ನಮಗೆ ಹೊಸ ಹೊಸ ಪಾಠಗಳನ್ನು ಕಲಿಸುವುದರಲ್ಲಿ ಅನುಮಾನವೇ ಇಲ್ಲ. ಪ್ರವಾಸದಲ್ಲಿ ತೊಂದರೆಯಾದ ಕ್ಷಣದಲ್ಲಿ ಶಾಂತವಾಗಿರಬೇಕು, ಪರಿಹಾರ ಹುಡುಕಬೇಕು, ಮತ್ತು ಎಲರೂ ಅಂತಹ ಪರಿಹಾರಕ್ಕೆ ಒಮ್ಮತ ಸೂಚಿಸಬೇಕು. ಗುಂಪಿನಲ್ಲಿ ಅನುಭವವಿರುವವರು ಇರುವಾಗ ಅವರಿಗೆ ಯೋಚನೆ ಮಾಡಲು ಅವಕಾಶ ನೀಡಬೇಕು ಹಾಗು ನಮ್ಮದೇನೋ ಅನಿಸಿಕೆಗಳನ್ನು ಹೇಳಲು ಹೋಗಿ ಗೊಂದಲವನ್ನು ಹೆಚ್ಚು ಮಾಡಬಾರದು ಎಂಬದನ್ನು ಪಾಲಿಸಿದ್ದು ಗುಂಪಿನ ಹಲವರ ವೈಷಿಷ್ಟ್ಯವಾಗಿತ್ತು.
ಈ ವರ್ಷದ ಆಗಸ್ಟ್ ನಂತರ ದಯವಿಟ್ಟು ಒಮ್ಮೆ ಗೋಪೀನಾಥಂಗೆ ಹೋಗಿ ಬನ್ನಿ. ಚಾರಣ ಮಾಡಲು, ಸಫಾರಿಗೆ ಹೋಗಲು ಸಾಧ್ಯವಿಲ್ಲದಿದ್ದರೂ ತೊಂದರೆಯಿಲ್ಲ, ಆದರೆ ಆ ಜಾಗದಲ್ಲಿ ಉಳಿದುಕೊಂಡೇ ಪ್ರಕೃತಿ ವೀಕ್ಷಣೆ ಮಾಡುವುದಕ್ಕೂ ಅದೃಷ್ಟವಿರಬೇಕು.