ನನ್ನ ಸಹೋದ್ಯೋಗಿಯಾಗಿ ಬ್ಯಾಂಕಿನಲ್ಲಿ ಉನ್ನತ ಹುದ್ದೆ ಏರಿ ಕೆಲವು ವರ್ಷಗಳ ಹಿಂದ ಸೇವೆಯಿಂದ ನಿವೃತ್ತಿ ಹೊಂದಿದ ಶ್ರೀ ಚಿದಾನಂದರವರು ಪ್ರತಿ ತಿಂಗಳ ಆರಂಭದಲ್ಲಿ ಅವರ ಫೇಸ್‌ಬುಕ್ ಪುಟದಲ್ಲಿ ತಾವು ಹಿಂದಿನ ತಿಂಗಳು ಟ.ವಿಯಲ್ಲಿ ನೋಡಿದ ಚಿತ್ರಗಳ ಸಂಕ್ಷಿಪ್ತ ವಿವರ ನೀಡುತ್ತಾರೆ. ಈ ವಿವರಗಳು ನಮಗೂ ಚಿತ್ರ ವೀಕ್ಷಿಸಲು ಪ್ರೇರಣೆ ನೀಡುತ್ತದೆ. ಕಳೆದ ತಿಂಗಳು ಈ ಪಟ್ಟಿಯಲ್ಲಿ ಬಂದದ್ದು 2019ರಲ್ಲಿ ಬಿಡುಗಡೆಯಾದ ಭೂತಾನ್ ದೇಶದ ಒಂದು ಚಲನ ಚಿತ್ರ ಲುನಾನ.
ಈ ಚಿತ್ರದ ಪೂರ್ಣ ಹೆಸರು ಲುನಾನ – ಎ ಯಾಕ್ ಇನ್ ದ ಕ್ಲಾಸ್‌ರೂಮ್
ಅಂದರೆ, ಲುನಾನ – ಶಾಲಾ ತರಗತಿಯ ಕೊಠಡಿಯಲ್ಲಿ ಒಂದು ಗುಡ್ಡಗಾಡಿನ ಹಸು ಎಂದರ್ಥ. ಇದು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಮೂಲ ಚಿತ್ರ ಭುತಾನದ ದೇಶದ ಜೋ಼ನ್‌ಕಾ ಭಾಷೆಯಲ್ಲಿದ್ದು ಹಿಂದಿ ಭಾಷೆಗೆ ಡಬ್ಬಿಂಗ್ ಮಾಡಲಾಗಿದೆ. ಹಿಂದಿ ಅರ್ಥವಾಗದವರಿದ್ದರೆ ಅವರಿಗೆ ಆಂಗ್ಲಭಾಷೆಯ ಅನುವಾದದ ವಾಕ್ಯಗಳು (ಸಬ್ ಟೈಟಲ್‌ಸ್) ಕೂಡಾ ಚಿತ್ರದಲ್ಲಿ ಲಭ್ಯವಿದೆ.
ಈ ಚಿತ್ರದ ನಾಯಕ ಕೆಳ ಮಧ್ಯಮ ವರ್ಗದ ಒಬ್ಬ ಸರ್ಕಾರಿ ಶಾಲೆಯ ಯುವ ಶಿಕ್ಷಕ. ಪಾಠ ಹೇಳಿಕೊಡುವುದರಲ್ಲಿ ಯಾವುದೇ ಆಸಕ್ತಿ ಇಲ್ಲದಿದ್ದರೂ, ಸರ್ಕಾರದ ನಿಯಮದಂತೆ ಐದು ವರ್ಷ ಖಡ್ಡಾಯವಾಗಿ ಕೆಲಸ ಮಾಡಲು ಒಪ್ಪಿದ್ದರಿಂದ ವೃತ್ತಿ ಮುಂದುವರೆಸುತ್ತಿರುತ್ತಾನೆ. ಒಳ್ಳೆಯ ಗಾಯಕನೂ ಆಗಿದ್ದ ಅವನಿಗೆ ದೂರದ ಆಸ್ಟ್ರೇಲಿಯಾ ದೇಶಕ್ಕೆ ಹೋಗಿ ಅಲ್ಲಿ ಗಾಯನ ವೃತ್ತಿ ಆರಂಭಿಸುವ ಹಂಬಲ. ಅವನ ಶಿಕ್ಷಕ ವೃತ್ತಿ ನಾಲ್ಕು ವರ್ಷ ಮುಗಿದಿದ್ದು ಇನ್ನು ಕಡೆಯ ಒಂದು ವರ್ಷಕ್ಕೆ ಅವನಿಗೆ ಬೆಟ್ಟ ಗುಡ್ಡಗಳ ನಡುವೆ ಇರುವ ಲುನಾನ ಎಂಬ ದೂರದ ಹಳ್ಳಿಗೆ ವರ್ಗಾವಣೆ ಮಾಡುತ್ತಾರೆ.
ತನಗೆ ಅಲ್ಲಿಗೆ ಹೋಗಲು ಇಷ್ಟವಿಲ್ಲದಿದ್ದರೂ ತನ್ನನ್ನು ಸಾಕಿದ ಅಜ್ಜಿಯ ಬಲವಂತಕ್ಕೆ ಲುನಾನ ಹಳ್ಳಿಗೆ ಹೋಗಲು ನಿರ್ಧರಿಸುತ್ತಾನೆ. ಮೊದಲು ತಾಲೂಕು ಕೇಂದ್ರದಂತ ಒಂದು ಹಳ್ಳಿಗೆ ಬಸ್ಸಿನಲ್ಲಿ ಹೋಗಿ ತಲುಪುತ್ತಾನೆ. ಲುನಾನದಿಂದ ಬಂದ ಇಬ್ಬರು ಯುವಕರು ಇವನನ್ನು ಸ್ವಾಗತಿಸಿ ಅಂದು ರಾತ್ರಿ ಅಲ್ಲೇ ತಂಗಿ ಬೆಳಿಗ್ಗೆ ಲುನಾನಾಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣ ಆರಂಭಿಸೋಣ ಎಂದು ತಿಳಿಸುತ್ತಾರೆ. ಸದಾ ತನ್ನ ಮೊಬೈಲಿನಲ್ಲಿದ್ದ ಹಾಡುಗಳನ್ನು ಕಿವಿಗೆ ಹಾಕಿಕೊಂಡಿದ್ದ ಇಯರ್ ಫೋನಿನಲ್ಲಿ ಕೇಳುತ್ತಾ ತನ್ನದೇ ಲೋಕದಲ್ಲಿ ಕುಳಿತಿರುವ ಈ ವ್ಯಕ್ತಿ ನಿಜವಾಗಲು ಪಾಠ ಮಾಡುತ್ತಾನೆಯೇ ಎಂಬ ಅನುಮಾನ ಬಂದರೆ ತಪ್ಪೇನಿಲ್ಲ.
ಮಾರನೇ ದಿನದಿಂದ ಬೆಟ್ಟ ಗುಡ್ಡಗಳಲ್ಲಿ ಒಟ್ಟು 7 ದಿನ ಕಾಲ್ನಡಿಗೆ. ಲುನಾನದ ಯುವಕರು ಇವನನ್ನು ಎಷ್ಟೇ ಮಾತನಾಡಿಸಲು ಪ್ರಯತ್ನಿಸಿದರೂ ಇವನು ಮೊಬೈಲಿನಲ್ಲಿ ಹಾಡು ಕೇಳುತ್ತಲೇ ಇರುತ್ತಾನೆ. ಮೊದ ಮೊದಲಿಗೆ ಸ್ವಲ್ಪ ಸುಸ್ತಾದಾಗ ಇನ್ನೂ ಎಷ್ಟು ಬೆಟ್ಟ ಹತ್ತಬೇಕು ಎಂದು ಕೇಳುತ್ತಾನೆ. ಮೊದಲ ದಿನ ಬೆಟ್ಟ ಹತ್ತಿದರೆ ಆಯಿತು, ಆಮೇಲೆ ರಸ್ತೆ ಸಮತಟ್ಟಾಗಿರುತ್ತದೆ ಎಂದು ಅವರು ತಿಳಿಸುತ್ತಾರೆ. ಆದರೆ ಎರಡು ಮೂರು ದಿನವಾದರೂ ಬೆಟ್ಟಗಳನ್ನೇ ಹತ್ತುತಿರುವುದು ನೋಡಿ ನಾಯಕ ಕೋಪಗೊಂಡಾಗ, ಏಳು ದಿನವೂ ಇದೇ ರೀತಿ ರಸ್ತ ಇದೆ ಎಂದು ನಾವು ನಿಮಗೆ ತಿಳಿಸಿದ್ದರೆ ನೀವು ನಮ್ಮೊಂದಿಗೆ ಕಾಲ್ನಡಿಗೆ ಆರಂಭಿಸುತ್ತಲೇ ಇರಲಿಲ್ಲ ಎಂದು ತಿಳಿಸುತ್ತಾರೆ. ಎರಡನೇ ದಿನಕ್ಕೆ ಮೊಬೈಲ್ ಬ್ಯಾಟರಿ ಮುಗಿದಾಗಲೇ ನಾಯಕನಿಗೆ ತಾನು ನಡೆಯುತ್ತಿರುವ ದಾರಿಯಲ್ಲಿ ಎಷ್ಟು ಚೆಂದದ ಪಕ್ಷಿಗಳ ಕೂಗು, ನದಿಯ ಜರಿಗಳ ಸದ್ದು ಕೇಳಿಸುತ್ತಿರುವುದು ತಿಳಿಯುತ್ತದೆ. ಅತ್ಯಂತ ಸುಂದರವಾದ ಪ್ರಕೃತಿಯಲ್ಲಿ ನಡೆದು ಬರುತ್ತಿದ್ದಾಗ ಅವನ ಮನಸ್ಸು ಪರಿವರ್ತನೆಯಾಯಿತೇ, ಇದನ್ನು ನಾನು ತಿಳಿಸುವುದಿಲ್ಲ.
ಏಳು ದಿನದ ನಂತರ, ಲುನಾನ ತಲುಪಿ ಅಲ್ಲಿ ಪಾಳು ಬಿದ್ದ ಶಾಲೆ ಮತ್ತು ತನಗೆ ಉಳಿದುಕೊಳ್ಳಲು ನೀಡಿದ ಕೊಠಡಿಯಲ್ಲಿದ್ದ ಸೌಲಭ್ಯಗಳನ್ನು ನೋಡಿ, ಮಾರನೆ ದಿನ ಊರ ಮುಖಂಡನಿಗೆ “ನನಗೆ ಈ ಹಳ್ಳಿಯಲ್ಲಿರಲು ಇಷ್ಟವಿಲ್ಲ, ಕೂಡಲೇ ನನಗೆ ಹಿಂದಿರುಗಲು ವ್ಯವಸ್ಥೆ ಮಾಡಿ “ ಎಂದು ಹೇಳುತ್ತಾನೆ. ಆದರೆ ಊರಿನ ಯುವಕರು ಸಾಕಷ್ಟು ನಡೆದು ಸುಸ್ತಾಗಿದ್ದರಿಂದ ಸದ್ಯ ಒಂದು ವಾರದ ನಂತರ ಹಿಂದಿರುಗಲು ವ್ಯವಸ್ಥೆ ಮಾಡುವುದಾಗಿ ತಿಳಿಸುತ್ತಾರೆ.
ಆ ಒಂದು ವಾರದಲ್ಲಿ ಅಲ್ಲಿ ನಡೆದ ಘಟನೆಗಳು ಮತ್ತು ಇದು ಚಿತ್ರದ ಕಥೆಯನ್ನು ಹೇಗೆ ಮುಂದುವರೆಸುತ್ತದೆ ಎಂದು ಈಗಲೇ ಹೇಳಿ ನಾನು ಚಿತ್ರ ವೀಕ್ಷಿಸುವ ನಿಮ್ಮ ಕುತೂಹಲವನ್ನು ಕಿತ್ತುಕೊಳ್ಳುವುದಿಲ್ಲ.
ಇದೆಲ್ಲಾ ಸಾಮಾನ್ಯ ಕಥೆಯೇ ಅಲ್ಲವೇ, ಎಷ್ಟೋ ಭಾಷೆಗಳಲ್ಲಿ ಈ ರೀತಿ ಚಿತ್ರಗಳು ಬಂದಿರುವುದು ನಾವು ನೋಡಿದ್ದೇವೆ , ಈ ಚಿತ್ರದಲ್ಲಿ ಅಂತಹ ವಿಶೇಷತೆ ಏನು ಎಂದು ನೀವು ಕೇಳಬಹುದು.
ಭೂತಾನ್ ದೇಶ ಅತಿ ಸುಂದರವಾದ ಹಿಮಾಲಯದೊಳಗಿನ ಪ್ರಕೃತಿಯಲ್ಲಿ ಇರುವ ದೇಶ. ಆದರೆ ನಾವೇನಾದರು ಅಲ್ಲಿಗೆ ಪ್ರವಾಸಕ್ಕೆ ಹೋದರೆ ಮುಖ್ಯ ನಗರಗಳನ್ನು ನೋಡಿ ಬರುತ್ತೇವೆ ಅಷ್ಟೇ. ಆದರೆ ನಿಜವಾದ ಭೂತಾನ್ ಪ್ರಕೃತಿ ನೋಡಲು ಕಷ್ಟಸಾಧ್ಯ. ಈ ಚಿತ್ರದ ಮೂಲಕ ಆ ಮೂಲ ಭೂತಾನ್ ದೇಶ ನೋಡುಲು ಸಾಧ್ಯ ಮತ್ತು ಆ ಪ್ರಕೃತಿಯನ್ನು ಕಣ್ತುಂಬಿಕೊಳ್ಳುವ ಅವಕಾಶವಿದೆ.
ಈ ಚಲನ ಚಿತ್ರದಲ್ಲಿ ಪ್ರಕೃತಿ ಪ್ರಿಯರಿಗೆ ಕಾಡು ಮೇಡಿನ ಅದ್ಭುತ ದೃಶ್ಯಗಳು ಇದ್ದರೆ, ಸಂಗೀತ ಪ್ರಿಯರಿಗೆ ಸುಮಧುರ ಗುಡ್ಡಗಾಡು ಸಂಗೀತದ ಹಾಡುಗಳಿವೆ. ಹಾಡುಗಳನ್ನು ಮೂಲ ಭಾಷೆಯಲ್ಲೇ ಉಳಿಸಿಕೊಂಡಿರುವುದು ಒಂದು ಒಳ್ಳೆಯ ಸಂಗತಿ.
ಇನ್ನು ಕಥೆ ಬರೆಯುವವರಿಗೆ, ಚಿತ್ರ ಸಂಭಾಷಣೆಯನ್ನು ಹೆಚ್ಚು ಆಲಿಸುವ ಕಡೆಯೇ ಆಸಕ್ತಿ ಇರುವುದು ಸಹಜ. ಕೆಲವೊಂದು ಸಂಭಾಷಣೆಯಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಉದಾಹರಣೆಗೆ ನಾಯಕ, ತಾನು ಈ ದೇಶದಲ್ಲಿ ಸಂತೋಷವಾಗಿಲ್ಲ, ನಾನು ಆಸ್ಟ್ರೇಲಿಯಾಗೆ ಹೋಗುತ್ತೇನೆಂದಾಗ, ಮತ್ತೆ “ನಮ್ಮ ದೇಶವನ್ನು ಅತಿ ಸಂತೋಷದ ದೇಶ ಎಂದು ಏಕೆ ಕರೆಯುತ್ತಾರೆ” ಎಂಬ ಹಳ್ಳಿ ಪ್ರಮುಖನ ಪ್ರಶ್ನೆಗೆ ನಾಯಕನಲ್ಲಿ ಉತ್ತರವೇ ಇರುವುದಿಲ್ಲ.
ಹ್ಯಾಪಿನೆಸ್ ಇನಡೆಕ್ಸ್ ಎಂಬ ಮಾಪನದಲ್ಲಿ ಭೂತಾನ್ ಮೊದಲನೇ ಸ್ಥಾನದಲ್ಲಿರುವುದನ್ನು ನಾಉ ಸ್ಮರಿಸಿಕೊಳ್ಳಬೇಕು.
ನಾಯಕನು, ಚಿತ್ರದಲ್ಲಿನ ಒಂದು ಪಾತ್ರಧಾರಿಗೆ “ನೀನೇಕೆ ಯಾವಗಲೂ ಹಾಡುತಾ ಇರುತ್ತೀಯೆಲ್ಲಾ” ಎಂದಾಗ, “ಅದು ನಾನು ಪ್ರಕೃತಿಗೆ ಧನ್ಯವಾಗಳನ್ನು ಹೇಳುವ ಪರಿ” ಎಂಬ ಉತ್ತರ. ಹೀಗೆ ಒಂದೊಂದು ಸಂಭಾಷಣೆಯೂ ತೂಕ ಮಾಡಿ ಬಳಸಲಾಗಿದೆ ಪೂರ್ತಿ ಚಿತ್ರದಲ್ಲಿ.
ಮಕ್ಕಳ ಪಾತ್ರಗಳಿಂದ ಹಿಡಿದು ವಯಸ್ಸಾದ ಹಳ್ಳಿಯ ಪ್ರಮುಖನ ಪಾತ್ರದ ವರೆಗೂ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ.
ಚಿತ್ರದಲ್ಲಿನ ಕತೆಯ ಅಂತ್ಯದ ಬಗ್ಗೆ ಬಹಳಷ್ಟು ಮಿಶ್ರ ಪ್ರತಿಕ್ರಿಯೆ ಅಂತರ್ಜಾಲದಲ್ಲಿ ಬಂದಿದ್ದು ಇದು ನೋಡುವವರ ಆಲೋಚನೆಯ ಮೇಲೆ ಅವಲಂಬಿತವಾಗಿರುತ್ತದೆಂಬುದು ನಮಗೆಲ್ಲಾ ತಿಳಿದೇ ಇದೆ.
ಒಮ್ಮೆ ನೀವೆಲ್ಲರೂ ಈ ಚಿತ್ರವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಎಂಬ ಉದ್ದೇಶದಿಂದ ಬರೆದ ಈ ಲೇಖನ ಇಲ್ಲಿಗೆ ಮುಗಿಸುತ್ತಿದ್ದೇನೆ.
ನಮಸ್ಕಾರ