ಚೆನ್ನೈನ ಸಹೋದ್ಯೋಗಿಯೊಬ್ಬರು ಹೇಳಿದ ಪ್ರಸಂಗ.
ಖ್ಯಾತ ಕೊಳಲುವಾದಕ ಟಿ.ಆರ್.ಮಹಾಲಿಂಗಮ್ ಅವರು ತಮ್ಮ ಕ್ಷೇತ್ರದಲ್ಲಿ ಪ್ರಸಿದ್ದರಾಗಿ ಉತ್ತುಂಗಕ್ಕೇರಿದ್ದ ಕಾಲವದು. ಅದ್ಯಾಕೋ ಈ ಹೊಗಳಿಕೆಗಳಿಂದ ವೈರಾಗ್ಯ ಹೊಂದಿ ಕೊಳಲುವಾದನವನ್ನೇ ನಿಲ್ಲಿಸಿಬಿಟ್ಟಿದ್ದರು. ಅವರ ಮನೆಯ ಹತ್ತಿರವೇ ಇದ್ದ ಒಂದು ಕ್ರಿಕೇಟ್ ಕ್ಲಬ್‌ಗೆ ಸೇರಿದರು, ಹಗಲು ಸಂಜೆ ಕ್ರಿಕೇಟ್ ಆಡುವುದು ಇವರ ದಿನಚರಿಯಾಯಿತು. *ಕೊಳಲು ಅಟ್ಟ ಸೇರಿತು.*
ಕ್ರಿಕೇಟ್‌ಗಾಗಿ ಬಿಳಿ ಪ್ಯಾಂಟ್, ಬಿಳಿ ಟಿ.ಶರ್ಟ್, ಬಿಳಿ ಶೂ ಹೀಗೆ ಇನ್ನೂ ಅನೇಕ ಕ್ರಿಕೇಟ್ ಸಂಬಂಧಿ ಖರೀದಿಗಳೂ ಆದವು.
ಸಂಗೀತ ಪ್ರಿಯರಿಂದ ದೂರಸರಿದು , ಕ್ರಿಕೇಟ್ ಆಡೋ ಹುಡುಗರ ಜೊತೆಗೇ ಯುವಕರ ಹಾಗೇ ಇವರ ದೋಸ್ತಿ, ದಿನವೆಲ್ಲಾ ಕಾಡು ಹರಟೆ.
ಇವರ ಕೊಳಲುವಾದನಕ್ಕೆ ಮನಸೋತಿದ್ದ ಚೆನ್ನೈನ ಸಂಗೀತ ಪ್ರಿಯರಿಗೆ ಬೆಸರವೋ ಬೇಸರ. ಮಹಾಲಿಂಗಮ್ ಅವರನ್ನು ಪುನಃ ಸಂಗೀತ ಕ್ಷೇತ್ರಕ್ಕೆ ವಾಪಸ್ ತರಲು ಹಿರಿಯ ಕಲಾವಿದರುಗಳಿಗೆ, ಸಂಗೀತ ಅಕಾಡೆಮಿಗಳಿಗೆ ಅವರೆಲ್ಲಾ ಒತ್ತಡ ಹಾಕಲು ಆರಂಭಿಸಿದರು. ಜನರ ಒತ್ತಡಕ್ಕೆ ಮಣಿಯದಿರಲು ಸಾಧ್ಯವೇ. ಮಹಾಲಿಂಗಮ್ ಅವರ ಆಪ್ತಗೆಳೆಯರೊಬ್ಬರನ್ನು (ನಾನು ಹೆಸರು ಮರೆತಿದ್ದೇನೆ) ಈ ಕೆಲಸಕ್ಕೆ ನೇಮಿಸಲಾಯಿತು. ಈ ಆಪ್ತಗೆಳೆಯ ಮಹಾಲಿಂಗಮ್ ಅವರ ಬಳಿ ಸುಮಾರು ಇಪ್ಪತ್ತು ದಿನ ಹಗಲು ರಾತ್ರಿ ಹೋಗಿ ಒತ್ತಡ ಹಾಕಿದ್ದಕ್ಕೆ ಇವರ ಕಾಟ ತಾಳಲಾರದೆ "ಸರಿ ಬರುವ ಭಾನುವಾರ ಸಂಜೆ ಕಾರ್ಯಕ್ರಮ ಆಯೋಜಿಸಿ, ಬಂದು ಕೊಳಲು ನುಡಿಸುತ್ತೇನೆ" ಎಂದರು ಮಹಾಲಿಂಗಮ್.
ಈ ಭಾನುವಾರ ಮಹಾಲಿಂಗಮ್ ಮರಳಿ ಸಂಗೀತ ಕ್ಷೇತ್ರಕ್ಕೆ ಅಂತ ಊರಲ್ಲೆಲ್ಲಾ ಪ್ರಚಾರವಾಯಿತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಜನರು ಟಿಕೇಟ್ ಖರೀದಿಸಿದ್ದರು. ಅಷ್ಟೇ ಅಲ್ಲದೇ ಸಬಾಂಗಣ ಸಾಲದೇ ಬರಬಹುದು ಎಂದು ಅರಿತಿದ್ದ ಆಯೋಜಕರು ಸಭಾಂಗಣದ ಹೊರಗೆ ಮತ್ತು ಹತ್ತಿರದ ಬೀದಿಗಳಲಿ ಕೂಡ ದೊಡ್ಡ ದೊಡ್ಡ ಸ್ಪೀಕರ್‌ಗಳನ್ನು ಇಟ್ಟು ಕಾರ್ಯಕ್ರಮ ಪ್ರಸಾರ ಮಾಡುವ ವ್ಯವಸ್ಥೆ ಮಾಡಿದ್ದರು.
ಕಾರ್ಯಕ್ರಮದ ಆ ಭಾನುವಾರ ಬಂತು. ಮಹಾಲಿಂಗಮ್ ಬಗ್ಗೆ ಹೆಚ್ಚು ಅರಿತುಕೊಂಡಿದ್ದ ಆಪ್ತಗೆಳೆಯ ಅಂದು ಬೆಳಿಗ್ಗೆಯೇ ಮಹಾಲಿಂಗಮ್ ಅವರ ಮನೆಯ ಮುಂದೆ ಕಾಯುತ್ತಾ ನಿಂತಿದ್ದರು.
"ಸಂಜೆ ಕಾರ್ಯಕ್ರಮ ಇರೋದು, ಈಗಲೇ ಯಾಕೆ ಬಂದದ್ದು?" ಎಂದು ಮಹಾಲಿಂಗಮ್ ಕೇಳಿದ್ದಕ್ಕೆ,
"ನನಗೆ ಬೇರೆ ಏನೂ ಕೆಲಸವಿರಲಿಲ್ಲ, ಅದಕ್ಕೆ ಇಲ್ಲೇ ಕಾಯೋಣ ಅಂತ ಬಂದೆ" ಎಂಬುದು ಮಿತ್ರನ ಉತ್ತರ.
"ನನಗ ಹೊರಗೆ ತುಂಬಾ ಕೆಲಸವಿದೆ, ಸಾಯಂಕಾಲ ಖಂಡಿತಾ ಕಾರ್ಯಕ್ರಮಕ್ಕೆ ಬರುತ್ತೇನೆ, ಈಗ ನನಗೆ ಹೊರಗೆ ಹೋಗಲು ಬಿಡು" ಎಂದು ಮಹಾಲಿಂಗಮ್ ಕೇಳಿಕೊಂಡರೂ ಆಪ್ತಮಿತ್ರ ಅವರಿಗೆ ಮನೆಯಿಂದ ಹೊರಗಡೆ ಹೋಗಲು ಬಿಡಲೇ ಇಲ್ಲ. ಮಿತ್ರನಿಗೆ ಚೆನ್ನಾಗಿ ಗೊತ್ತಿತ್ತು, ಈ ಮಹಾಲಿಂಗಮ್ ಕೈಕೊಟ್ಟು ತಪ್ಪಿಸಿಕೊಂಡು ಹೋಗುವುದರಲ್ಲಿ ನಿಸ್ಸೀಮರೆಂದ. ಸಂಜೆ ಆರು ಗಂಟೆಗೆ ಕಾರ್ಯಕ್ರಮ, ಆದರೆ ನಾಲ್ಕು ಗಂಟೆಯ ಹೊತ್ತಿಗೆ ಮಹಾಲಿಂಗಮ್ ಕ್ರಿಕೇಟ್ ಸಮವಸ್ತ್ರ ಧರಿಸಿ, ಸ್ಪೋರ್ಟ್ಸ್ ಶೂ ಹಾಕ್ಕೊಂಡು ಮನೆಯಿಂದ ಹೊರಗೆ ಬಂದರು.
"ಏನಿದು ಎಲ್ಲಿಗೆ ಹೋಗುತ್ತಿದ್ದೀಯಾ" ಎಂದು ಮಿತ್ರ ಸ್ವಲ್ಪ ಜೋರಾಗಿ ಕೇಳಿದರು (ಆಪ್ತಮಿತ್ರನಾದ್ದರಿಂದ ಈ ಹಕ್ಕು ಇತ್ತು).
"ನನಗೆ ಇವತ್ತು ಮುಖ್ಯವಾದ ಕ್ರಿಕೇಟ್ ಮ್ಯಾಚ್ ಇದೆ, ಕಾರ್ಯಕ್ರಮಕ್ಕೆ ಒಪ್ಪುವಾಗ ಅದು ಮರೆತುಹೋಗಿತ್ತು, ಈಗ ಬಿಟ್ಟು ಬಿಡು" ಎಂದರು ಮಹಾಲಿಂಗಮ್. ಆಪ್ತಮಿತ್ರ ಗಲಾಟೆ ಮಾಡಿ ಹಟ ಹಿಡಿದು ಮಹಾಲಿಂಗಮ್ ಅವರನ್ನು ಒಪ್ಪಿಸಿ, ಅವರು ತೊಟ್ಟಿದ್ದ ವಸ್ತ್ರವನ್ನು ಬದಲಾಯಿಸಿದ ಮೇಲೆ, ಕಾರಿನಲ್ಲಿ ಹತ್ತಿಸಿದರು.
ಕಾರ್ ಇನ್ನೂ ಎರಡು ಅಡಿ ಮುಂದೆ ಹೋಗಿಲ್ಲ ಆಗಲೇ "ಅಯ್ಯೋ ಒಂದು ನಿಮಿಷ, ಕಾರ್ ನಿಲ್ಲಿಸಲು ಹೇಳು" ಎಂದು ಕಿರುಚಿದರು ಮಹಾಲಿಂಗಮ್. "ಈಗೇನು" ಎಂದು ಮಿತ್ರ ಕೇಳಿದಾಗ "ನನ್ನ ಪೀಪಿ (ಕೊಳಲು) ಮನೆಯಲ್ಲೇ ಇದೆ, ಕಾರ್ಯಕ್ರಮಕ್ಕೆ ಅದು ಬೇಕೆಲ್ಲ" ಎಂದರು ಮಹಾಲಿಂಗಮ್.
ಮಹಾಲಿಂಗಮ್ ಕಾರಿನಿಂದ ಈಚೆಗೆ ಬಂದು ತನ್ನ ಮನೆಯಾಳನ್ನು ಕೂಗಿ ಮೊದಲನೇ ಮಹಡಿಯ ಅಟ್ಟದ ಮೇಲಿದ್ದ ಕೊಳಲನ್ನು ಕೆಳಗಿಳಿಸಿ ಕ್ಯಾಚ್ ಹಾಕಲು ಹೇಳಿದರು. ಎಷ್ಟೇ ಆಗಲಿ ಕ್ರಿಕೇಟ್ ಹುಚ್ಚು ಅಲ್ಲವೇ. ಮೇಲಿಂದ ಕ್ಯಾಚ್ ಹಾಕುವಾಗ ಕೊಳಲೇನಾದರೂ ಒಡೆದುಹೋದರೆ ಎಂದು ಅಂಜಿದ ಆಪ್ತಮಿತ್ರ ಬೇಗನೇ ಮೊದಲನೇ ಮಹಡಿಗೆ ತಾವೇ ಓಡಿ ಹೋಗಿ ಕೊಳಲನ್ನು ತೆಗೆದುಕೊಂಡು ಬಂದರು.
ರಾತ್ರಿ ಒಂಬತ್ತಕ್ಕೆ ಮುಗಿಯಬೇಕಿದ್ದ ಕಾರ್ಯಕ್ರಮ ಮುಗಿದದ್ದು ಹತ್ತು ಮೂವತ್ತಕ್ಕೆ. ಪೂರ್ಣ ನಾಲ್ಕೂವರೆ ಗಂಟೆಗೆಳ ಕಾಲ ಸಭಾಂಗಣದಲ್ಲಿ ಚಪ್ಪಾಳೆಗಳ ಸುರಿಮಳೆ. ಹತ್ತಿರದ ಬೀದಿಗಳಲ್ಲಿ ಸ್ಪೀಕರ್ ಹಾಕಿ ಪ್ರಸಾರ ಮಾಡಿದ್ದರಿಂದ ಬೀದಿ ಬೀದಿಗಳ ಬದಿಗಳಲ್ಲಿ ವಾಹನಗಳು ನಿಂತು ಅದರ ಸವಾರರು "ವಾಹ್ ವಾಹ್" ಎನ್ನುವುದನ್ನು ಬಿಟ್ಟು ಇನ್ನೇನು ಮಾತನಾಡಿಲ್ಲ.
ನನಗೆ ಈ ಕಥೆಯನ್ನು ಹೇಳಿದ ಸಹೋದ್ಯೋಗಿಯೂ ಆ ದಿನ ಈ ಸಭಾಂಗಣದಲ್ಲಿಇದ್ದರಂತೆ. ಮಹಾಲಿಂಗಮ್ ಅವರ ಆಪ್ತಗೆಳೆಯ ಇವರಿಗೂ ಪರಿಚಯ. ಅಂತಹ ಅದ್ಭುತವಾದ ಕೊಳಲುವಾದನ ನನ್ನ ಜೀವಮಾನದಲ್ಲಿ ಮತ್ತೆಂದೂ ಕೇಳಲೇ ಇಲ್ಲ ಎನ್ನುತ್ತಾರೆ ನನ್ನ ಸಹೋದ್ಯೋಗಿ.
ಈ ಕಥೆ ನಾನು ಕೇಳಿ ಸುಮಾರು 16 ವರ್ಷವೇ ಆಗಿದ್ದರೂ ಮನಸ್ಸಿನಲ್ಲಿ ಅಚ್ಚಾಗಿ ಉಳಿದಿದೆ. ಇದರ ಬಗ್ಗೆ ನನ್ನ ನೆನಪಿಗೆ ಮೀರಿದ್ದೇನಾದರೂ ಇದ್ದರೆ ಬರೆಯೋಣವೆಂದು ಅಂತರ್ಜಾಲದಲ್ಲಿ ಹುಡುಕಿದೆ, ಮಾಹಿತಿ ಅಲಭ್ಯ.