ಇಂದಿನ ವಿಶೇಷ ತರಗತಿಯು ನಮ್ಮನ್ನು ನೇರ ಬೃಂದಾವನಕ್ಕೆ ಕರೆದುಕೊಂಡು ಹೋಗಿತ್ತು.
ಚಪ್ಪಾಳೆಯೊಂದಿಗೆ ಆರಂಭವಾಗಿ ನೃತ್ಯ ಮಾಡಲು ಆರಂಭಿಸಿದಾಗ ನಾನ ರಾಧೆಯಾಗಿದ್ದೆ, ನಾನು ಕಣ್ಗಳನ್ನು ಮುಚ್ಚಿರಲು ಆ ಗೋಪೀವಲ್ಲಭನೂ ನನ್ನೊಂದಿಗೆ ನರ್ತಿಸುತ್ತಿರುವದಂತೂ ಖಾತ್ರಿಯಾಯಿತು. ಚಪ್ಪಾಳೆ ಅಭ್ಯಾಸದ ಮೊದಲ ಹಾಡು ಮುಗಿದಾಗ, ಆ ಚಕ್ರಧಾರಿ ನನ್ನ ಕೈ ತೋರುಬೆರಳನ್ನು ಹಿಡಿದು ನನ್ನನು ಇನ್ನೂ ನೆಲದ ಮೇಲೆ ತಿರುಗಿಸುತ್ತಿದ್ದಾನೇ ಎಂಬಂತಿತ್ತು. ಎರಡನೇ ಚಪ್ಪಾಳೆಯ ಹಾಡು ಮುಗಿಸಿ ಕುಣಿದು ಕುಣಿದು ಸುಸ್ತಾಗಿದ್ದಾಗ ಆ ಶಕ್ತಿಭಂಡಾರ ನನ್ನ ಎರಡೂ ಹಸ್ತಗಳ ಮೇಲೆ ತನ್ನ ಹಸ್ತವನ್ನಿಟ್ಟು ಅವನಲ್ಲಿರುವ ಶಕ್ತಿ ನನಗೆ ವರ್ಗಾಯಸುತ್ತಿದ್ದಾನೆ ಎಂಬ ಹಾಗಿತ್ತು.
ಶಿಥಲೀಕರಣದಲ್ಲಿ ಮುಖ್ಯವಾಗಿ ಬಸ್ಕಿ ಹೊಡೆಯುವಾಗ ಅ ಕೊಳಲುಧಾರಿ ನಮ್ಮ ಶಾಲೆಯ ಮಾಸ್ತರಿನಂತೆ ಕೈಲಿ ಕೋಲು ಹಿಡಿದು ನಗುತ್ತಾ ಶಿಕ್ಷೆ ಕೊಡುತ್ತಿದ್ದಾನೆ ಅನಿಸಿತು.
ಚಂದ್ರನಮಸ್ಕಾರ ಹಾಗೂ ಗುರುನಮಸ್ಕಾರದಲ್ಲಿ ಅ ರಾಧಾಪ್ರಿಯನು ಪಕ್ಕದಲ್ಲೇ ನಿಂತು ನಮ್ಮೊಂದಿಗೆ ಯೋಗಸಾಸನ ಮಾಡುತ್ತಿರುವಂತಿತ್ತು.
ಶವಾಸನದಲ್ಲಿ ಸೇರಿಸಿರುವ ಹಾಡಂತೂ ಆ ಸರ್ವಾಂತರ್ಯಾಮಿಗೆ ಭೂಮಿ, ಮರ, ಗಿಡ ಮೊದಲಾಗಿ ಎಲ್ಲವೂ ಕೃಷ್ಣ ನಿನಗೆ ಶರಣಾಗಿದ್ದೇವೆ ಎಂದು ಹೇಳುವಾಗ ಏಲ್ಲೋ ಒಂದು ಕಡೆ ಶವಾಸನದಲ್ಲಿ ಕಣ್ಣು ಬಿಟ್ಟು ಅವ ಈಗ ಏನು ಮಾಡುತ್ತಿರಬಹುದೆಂದು ನೋಡೋಣ ಅಂದುಕೊಂಡರೆ ಮೆತ್ತಿಗೆನ ಒಂದು ಹಸ್ತ ನನ್ನ ಕಣ್ಮೇಲೆ ಕಣ್ಣು ಬಿಡದಂತೆ ತಡೆಯುವಂತಿತ್ತು.
ನಂತರ ಹೊಸ ರೀತಿಯ ಮೂಖಧೌತಿ ಮಾಡುವಾಗ, ಆ ವಿಶ್ವರೂಪನು ದರ್ಶನ ನೀಡಿದ್ದಾನೆ ಆ ಖುಷಿಯಲ್ಲಿ ಎರಡು ಕೈ ಎತ್ತಿ ನಮಸ್ಕರಿಸುತ್ತಿದ್ದೇವೆ ಎಂಬಂತಿತ್ತು.
ಅನುನಾಸಿಕ ಧೌತಿ ಮಾಡುವಾಗ , ಮುಂದೆ ಮೂಗಿನಿಂದ ಸುರಿಯುವ ಗೊಣ್ಣೆ ಹಾರುವುದನ್ನು ತಪ್ಪಿಸಿಕೊಳ್ಳಲ್ಲು ಆ ಬೆಣ್ಣೆಯ ಚೋರ ನನ್ನ ಬೆನ್ನ ಹಿಂದೆ ಅಡಗಿಕೊಂಡಿದ್ದ ಅನಿಸುತ್ತೆ. ಹಾಗಾಗಿ ಕಾಣಿಸುತ್ತಿರಲಿಲ್ಲ.
ಕಪಾಲಭಾತಿಯಲ್ಲಂತೂ ಮುಂದೆ ಕುಳಿತು ನನ್ನ ಪ್ರತಿಯೊಂದು ರೇಚಕಕ್ಕೂ ಒಂದು ಎರಡು ಮೂರು ಎಂದು ಅಂಕಿಗಳನ್ನು ಹೇಳುತ್ತಿದ್ದ ಆ ವಿಶ್ವಲೆಕ್ಕಿಗ.
ಧ್ಯಾನದಲ್ಲಿ ಆ ಯೋಗಿ ತಾನೂ ಕೂಡಾ ನನ್ನ ಮುಂದೆ ಕಣ್ಮುಚ್ಚಿ ಕುಳಿತು ಧ್ಯಾನವೆಂದರೆ ಹೇಗಿರಬೇಕೆಂಬುದನ್ನು ನಿದರ್ಶನ ನೀಡುವಂತಿತ್ತು.
ಒಟ್ಟಾರೆ ಇವತ್ತಿನ ಕೃಷ್ಣಾಷ್ಠಮಿಯ ಪೂಜೆ ಸಂಪೂರ್ಣವಾಗಿ ಯೋಗಶ್ರೀಯಲ್ಲೇ ಕೃಷ್ಣ ಆರಾಧನೆಯ ಮೂಲಕ ಮುಗಿಯಿತು. ಮನೆಯಲ್ಲಿ ಕೇವಲ ಪ್ರಸಾದ ಸೇವನೆ ಅಷ್ಟೆ.
(ಎಷ್ಟೇ ಪ್ರಯತ್ನಿಸಿದರೂ ಬಾಲಕ ಕೃಷ್ಣನೇ ಕಣ್ಣ ಮುಂದೆ ಬರುತ್ತಿದ್ದು, ಲೇಖನದಲ್ಲಿ ಅವನು ಇವನು ಎಂದು ಆ ಪರಮಾತ್ಮನನ್ನು ಕರೆದಿರುತ್ತೇನೆ, ಕ್ಷಮೆ ಇರಲಿ)
26/08/2024