ಇಸವಿ 2014, ಗೆಳೆಯ ಮಹೇಶ ನಾನು ಪಂಚತಂತ್ರದ ಚಕ್ರಧರ ನಾಟಕ ಮಾಡಬೇಕೆಂದಿದ್ದೇನೆ. ನಾಟಕದವರು ನನಗೆ ಬಹಳಷ್ಟು ಜನ ಗೊತ್ತಿದ್ದಾರೆ, ಅವರಿಗೇ ಹೇಳಬಹುದು. ಆದರೆ ನೀನು ಒಮ್ಮ ನಾಟಕ ಬರೆಯಲು ಪ್ರಯತ್ನಿಸುವೆಯಾ ಎಂದ. ಚಕ್ರಧರದ ಕಥೆಯನ್ನು ೨ ನಿಮಿಷದಲ್ಲಿ ಹೇಳಿ ಮುಗಿಸಿದ.
೨ ದಿನದಲ್ಲಿ ನಾಟಕ ಬರೆದು ಅದಕ್ಕೆ ಮೂರು ಹಾಡುಗಳನ್ನು ಬರೆದು ಟ್ಯೂನ್ ಕೂಡ ಹಾಕಿದೆ. ನಾಟಕ ರಂಗದಲ್ಲಿ ಮಹೇಶನಿಗೆ ತುಂಬಾ ಅನುಭವವಿತ್ತು. ಈಗಲೂ ಸಹ ಸಾಕಷ್ಟು ರಂಗಕರ್ಮಿಗಳ ಮನೆಗಳಲ್ಲಿ ಮಹೇಶ ತೆಗೆದಿರುವಂತಹ ಅವರ ನಾಟಕಗಳ ಫೋಟೋಗಳೇ ಇರುವುದು. ಇಷ್ಟು ಅನುಭವವಿರುವ ಅವನು ನನ್ನ ರಚನೆ ಒಪ್ಪಲು ಸಾಧ್ಯವೇ ಎಂಬುವ ಅನುಮಾನವಿತ್ತು.
ನಂತರ ಮಹೇಶನನ್ನು ಮನೆಗೆ ಕರೆದು ಅಣ್ನನ ಮಗನಿಗೆ ನಾನು ರಚಿಸಿದ ನಾಟಕವನ್ನು ಓದಲು ಹೇಳಿದೆ, ಅಣ್ಣನ ಮಗ ಪ್ರಣವ ನಾಟಕವನ್ನು ಓದುವುದಲ್ಲದೆ ಹಾಡುಗಳನ್ನು ನಾನು ಹಾಕಿದ ಟ್ಯೂನ್ ನಲ್ಲಿ ಹಾಡಿದ. ಒಂದೇ ಭೇಟಿಗೆ ಮಹೇಶ ನನ್ನ ರಚನೆಯನ್ನು ಒಪ್ಪಿದ್ದ. ನಂತರ ರಂಗಪರಂಪರೆ ಗುಂಪಿಗೆ ಈ ನಾಟಕವನ್ನು ತೋರಿಸಿದೆವು. ಅವರು ನಾಟಕ ನಟಿಸಲು ಒಪ್ಪಿದರು. ೧ ತಿಂಗಳಲ್ಲಿ ನಾಟಕ ತಯಾರಿಯಾಯಿತು. ನಾಟಕದ ಹಾಡುಗಳಿಗೆ ಟ್ಯೂನ್ ಹಾಕಿದ್ದು ರಂಗ ಪರಂಪರೆಯ ಗೋವಿಂದೇಗೌಡರು (ಕಾಮೆಡಿ ಕಿಲಾಡಿಗಳು ಖ್ಯಾತಿಯ ಹಾಗೂ ಕೆ.ಜಿಎಫ್ ಚಲನ ಚಿತ್ರದಲ್ಲಿ ನಟಿಸಿದ್ದಾರೆ).
ನಾಟಕ ದಿನದಂದು ಕೆ.ಹೆಚ್ ಕಲಾಸೌಧಕ್ಕೆ ನಾನು ಕೆಲಸ ಮಾಡುತ್ತಿದ್ದ ಎಸ.ಬಿ.ಐ ಎಲ.ಸಿ.ಪಿ.ಸಿ ಯಿಂದ ಸುಮಾರು 80 ಜನ ಸಹೋದ್ಯೋಗಿಗಳು ಬಂದಿದ್ದರು. ಇನ್ನು ನನ್ನ ಬಳಗದವರು ಸುಮಾರು ೪೦ ಜನ, ಗೆಳೆಯರು ಎಲ್ಲಾ ಸೇರಿ ಸುಮಾರು 200 ಜನರಿದ್ದರು ಎನ್ನಬಹುದು. ೧ ಗಂಟೆಯ ನಾಟಕ ನನಗೆ ಈ ಕ್ಷೇತ್ರದಲ್ಲಿ ಒಂದು ಹೊಸ ತಿರುವು ಕೊಟ್ಟಿತು ಹಾಗೂ ನನ್ನ ಬರವಣಿಗೆಯ ಮೇಲೆ ಹೆಚ್ಚು ವಿಶ್ವಾಸ ತಂದಿತ್ತು. ನಾಟಕದ ಹಾಡುಗಳನ್ನು ನಾಟಕ ನೋಡಿದವರೆಲ್ಲಾ ಸಾಕಷ್ಟು ವರ್ಷ ನೆನಪಿನಲ್ಲಿಟ್ಟುಕೊಂಡಿದ್ದರು. ನಮ್ಮ ಬಳಗದ ಮಕ್ಕಳಂತೂ ಈಗಲೂ ಹಾಡುತ್ತಾರೆ. ಈ ಚಕ್ರಧರ ನಾಟಕ ಈ ವರೆಗೆ ಸುಮಾರು 50ಕ್ಕಿಂತ ಹೆಚ್ಚು ಪ್ರಧರ್ಶನಗಳಾಗಿವೆ. ಮಹೇಶ ನನ್ನಲ್ಲಿ ಇಟ್ಟ ನಂಬಿಕೆ ಉಳಿಸಿಕೊಂಡಿದ್ದೆ.
ಇಲ್ಲಿಂದ ಪ್ರಾರಂಭವಾಯಿತು ನನ್ನ ಬರವಣಿಗೆ. ನಿಜ ಹೇಳಬೇಕೆಂದರೆ ನನ್ನ ಬರವಣಿಗೆಗೆ ಹೆಚ್ಚು ಸಹಾಯ ಮಾಡಿದ್ದು ಫೇಸ್ ಬುಕ್. ನಾನು ನನಗೆ ಅನಿಸಿದ್ದನ್ನು, ನನ್ನ ಅನುಭವಗಳನ್ನು, ಕವಿತೆಗಳನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದೆ. ಗೆಳೆಯರಿಂದ ಒಳ್ಳೇ ಪ್ರತಿಕ್ರಿಯೆಗಳು ಬಂತು ಮತ್ತು ಇನ್ನೂ ಹೆಚ್ಚು ಬರೆಯಲು ಪ್ರೇರಣೆ ನೀಡಿತು.
೨ವರ್ಷದ ನಂತರ ನನ್ನ ಎರಡನೇ ನಾಟಕ "ಪಡೆದದ್ದು ಕಳೆದದ್ದು" ಗೆಳೆಯ ಮಹೇಶನ ಸಹಾಯದಿಂದ ಪ್ರಧರ್ಶನಗೊಂಡಿತು. ಈ ನಾಟಕ ಸುಮಾರು ೨೦ ಪ್ರದರ್ಶನಗಳಾಗಿವೆ.
ಸಸಕಸ ವೇದಿಕೆ ಸೇರಿದ ಮೇಲೆ ನನ್ನ ಬರವಣಿಗೆಗೆ ಹೊಸ ಆಯಾಮ ಸಿಕ್ಕತು. ಇಲ್ಲಿ ಲೇಖನಗಳನ್ನು ಬರೆಯುವವರ ಕನ್ನಡ ಜ್ಞಾನದ ಮುಂದೆ ನನ್ನದೇನಿಲ್ಲವೆಂಬುದು ಸ್ಪಷ್ಟವಾಯಿತು. ಒಳ್ಳೆಯ ಬರಹ ಬರಬೇಕೆಂದರೆ ಬೇರೆಯವರು ಬರದಿರುವುದನ್ನು ಸಾಕಷ್ಟು ಓದಬೇಕು ಎಂದು ರವೀಂದ್ರ, ಮಹಾಬಲ, ಶ್ರವಣಕುಮಾರಿಯವರು ಹೇಳಿದ ಮಾತುಗಳು ಈಗಲೂ ನೆನಪಲ್ಲಿದೆ.
ನೀನೇನು ಪುಸ್ತಕ ಪ್ರಕಟಿಸುವುದಿಲ್ಲ, ಏಕೆ ಬರೆಯುತ್ತೀಯಾ ಅಂತ ಗೆಳೆಯರು ಕೇಳುತ್ತಾರೆ. ನನ್ನ ಪ್ರಕಾರ ಮನಸ್ಸಿನಲ್ಲಿ ಒಂದು ಸಲ ಯಾವುದಾದರೂ ವಿಷಯ ಬಂದರೆ ಅದನ್ನು ಬರವಣಿಗೆಯಲ್ಲಿ ಹಾಕಿಬಿಟ್ಟರೆ ಆ ವಿಷಯದಿಂದ ಮುಕ್ತಿ ಹಾಗೂ ಅದು ಮತ್ತೆಂದೂ ಕಾಡುವುದಿಲ್ಲ. ಹಾಗಾಗಿ ನಾನು ಯಾವುದೇ ವಿಷಯದಿಂದ ತೊಂದರೆ ತೆಗೆದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಬರೆದು ಮನಸ್ಸಿನಿಂದ ಹೊರಹಾಕಿಬಿಡುತ್ತೇನೆ. ಅದೃಷ್ಟವೆಂದರೆ ಹಾಗೆ ಹೊರಹಾಕಿದ ವಿಷಯಗಳು ಪ್ರಶಂಸೆಗಳು ತಂದುಕೊಡುತ್ತಿದೆ.
ಸದ್ಯ ನನ್ನ ಎಲ್ಲಾ ಬರವಣಿಗೆಗಳನ್ನು , ನಾನು ಕ್ಲಿಕ್ಕಿಸಿರುವ ಫೋಟೋಗಳನ್ನು ನನ್ನದೇ ಜಾಲತಾಣ (website) gururajhr.com ನಲ್ಲಿ ಹಾಕುತ್ತಿದ್ದೇನೆ. ಇನ್ನೊಂದು ವಾರದಲ್ಲಿ ಜಾಲತಾಣ ಸಿದ್ದವಾಗಲಿದೆ. ಕನ್ನಡದ ಮೇಲಿನ ಪ್ರೀತಿಯಿಂದಾಗಿ ಜಾಲತಾಣದಲ್ಲಿ ಸಾಕಷ್ಟು ಕಡೆ ಕನ್ನಡ ಉಪಯೋಗಿಸಲು ಪ್ರಯತ್ನಿಸುತ್ತಿದ್ದೇನೆ. ಇದರಿಂದ ಜಾಲತಾಣ ಬಿಡುಗಡೆ ಸ್ವಲ್ಪ ತಡವಾಗಿದೆ.
ಈ ಜಾಲತಾಣ ನನಗೆ ಇನ್ನಷ್ಟು ಲೇಖನಗಳನ್ನು ಬರೆಯಲು ಹಾಗೂ ಹಂಚಿಕೊಳ್ಳಲು ಒಳ್ಳೆಯ ವೇದಿಕೆಯಾಗುತ್ತದೆಂಬುವ ನಂಬಿಕೆ ನನಗಿದೆ.
ಪ್ರಶಂಸೆಗಾಗಿ ಬರೆಯದಿದ್ದರೂ, ಬರವಣಿಗೆ ಮುಂದುವರೆಸಲು ಉತ್ತೇಜನ ಕೊಡುವುದು ಪ್ರಶಂಸೆಯೇ ಎಂದರೆ ತಪ್ಪೇನಿಲ್ಲ.