ಸಿದ್ದಮ್ಮ ಕೇಳುದ್ಲು, ನೀವ್ ಹೇಳ್ತಾಯಿರೋ ಹಾರ್ಟ್ ಆಪರೇಶನ್ ಮಾಡಿಸ್‍ಕ್ಕೊಳೋಕೆ ಅಂದಾಜು ಎಷ್ಟು ಆಗ್ಬೋದು ಡಾಕಟ್ರೆ, ಸುಮಾರು 3 ಲಕ್ಷದಿಂದ 5 ಲಕ್ಷ ಆಗಬಹುದು ಅಂದ್ರು ಡಾಕ್ಟರ್
ಹಂಗೆ ಬಿಟ್ ಬುಟ್ರೆ ಏನಾಗತೈತೆ ಡಾಕಟ್ರೆ ಅಂತ ಸಿದ್ದಮ್ಮ ಕೇಳಿದ್ದಕ್ಕೆ , ಹೆಚ್ಚೆಂದರೆ ಆರು ತಿಂಗಳು ಬದುಕಬಹುದು ತಾಯಿ ಎಂದರು ಡಾಕ್ಟರ್.
ಸರಿ ಬಿಡಿ ಅಂಗೇ ಬಿಟ್ಬಿಡೋಣ, ಎಲ್ಲಾ ಜವಾಬ್ಧಾರಿ ಮುಗಿದೈತಿ. ನನ್ ಎರಡ್ ಗಂಡ್ ಮಕ್ಳೀಗೂ ಮದ್ವೆ ಮಾಡಿ ಆಗೈತಿ, ಮೊಮ್ಮಕ್ಕಳನ್ನು ನೋಡಿದ್ದು ಆಯಿತು, ಇನ್ನೇನು ಸಾಧಿಸಬೇಕು ಹೇಳಿ ಮತ್ತೆ ಎಂದಳು ಸಿದ್ದಮ್ಮ. ನಿನ್ ಇಷ್ಟ ತಾಯಿ ಅಂದರು ಡಾಕ್ಟರ್.
ಈ ವಯಸ್ಸಿನಾಗ ನನ್ನ ಮಕ್ಕಳ ಕೈಯಾಗೆ ಸಾಲ ಸೋಲ ಮಾಡ್ಸಿ ನಾನೇನ್ ಘನಂಧಾರಿ ಕೆಲಸ ಮಾಡ್ಬೇಕು, ಹೋಗಿ ಬರುತ್ತೇನೆ ಡಾಕಟ್ರೆ ಅಂತ ಆಸ್ಪತ್ರೆಯಿಂದ ಆಚೆ ಬಂದಳು ಸಿದ್ದಮ್ಮ
ಓ ಮರೆತಿದ್ದೆ, ಈ ಸಿದ್ದಮ್ಮ ಯಾರು ಅನ್ನೋದನ್ನೇ ನಿಮಗೆ ತಿಳಿಸ್ಲಿಲ್ಲ ಅಲ್ವಾ?
ಸುಮಾರು 45 ವರ್ಷಕ್ಕೆ ಮುಂಚೆ ಬಡ ದಂಪತಿಗಳು ಸಿದ್ದಮ್ಮ ಹಾಗೂ ಆಕೆಯ ಗಂಡ ಬೆಂಗಳೂರಿನ ಶ್ರೀನಗರಕ್ಕೆ ಹಳ್ಳಿಯಿಂದ ಬರುತ್ತಾರೆ. ನಮ್ಮ ತಂದೆಯವರು ಶ್ರೀನಗರದಲ್ಲಿ ಮನೆ ಕಟ್ಟಿದ್ದು ಸುಮಾರು ಅದೇ ಸಮಯದಲ್ಲಿ. ನಮ್ಮ ತಾಯಿಗೆ ಸಿದ್ದಮ್ಮನ ಪರಿಚಯ ಆಗುತ್ತೆ. ಆಗಾಗ ಮನೆಯ ಕೆಲಸಕ್ಕ ಸಿದ್ದಮ್ಮ ನನ್ನ ತಾಯಿಗೆ ಸಹಾಯ ಮಾಡುತ್ತಿರುತ್ತಾರೆ. ಈ ಸಹಾಯಕ್ಕೆ ಹಣ ನೀಡಲು ನಮ್ಮ ತಾಯಿಯ ಹತ್ತಿರವೂ ಹಣ ಇರಲಿಲ್ಲ. ಆದರೆ ಮನೆಯಲ್ಲಿ ಮಾಡಿದ್ದ ಹೆಚ್ಚಿನ ಅಡುಗೆ, ಕಾಫಿ, ಬಡತನ ಮರೆಯಲು ಸ್ವಲ್ಪ ಸಾಂತ್ವನದ ಮಾತುಗಳು ಇವೇ ಆ ಸಿದ್ದಮ್ಮನಿಗೆ ನಮ್ಮ ಮನೆಯಿಂದ ದೊರೆಯುತ್ತಿದ್ದದ್ದು.
ಹೀಗಿರುವಾಗ ನನ್ನ ಜನನ. ನಮ್ಮ ತಂದೆಯವರ ದೊಡ್ಡಮ್ಮ ಮನೆಯಲ್ಲಿ ಇದ್ದಾಗೆ ನಮ್ಮ ತಾಯಿಗೆ ಹೆರಿಗೆ ನೋವು ಬಂದು, ದೊಡ್ಡಮ್ಮ ಮನೆಯಲ್ಲೇ ಹೆರಿಗೆ ಮಾಡಿದರು. ಹಾಗಾಗಿ ನನ್ನ ಜನ್ಮ ಭೂಮಿ ಹಾಗೂ ಕರ್ಮ ಭೂಮಿ ಎರಡೂ ಒಂದೆ. ಸಧ್ಯಕ್ಕ ಸಾಹಿತ್ಯ ಕೃಷಿಯೂ ಆ ಜನ್ಮ ಭೂಮಿಯಲ್ಲೇ ನಡೆಯುತ್ತಿರುವುದು.
ಹುಟ್ಟಿದ ಮಗುವಿಗೆ ಮೊದಲು 4 ತಿಂಗಳು ಪ್ರತಿದಿನ ಎಣ್ಣೆ ಹಚ್ಚಿ ಬಿಸಿ ನೀರು ಕಾಯಿಸಿ ಸ್ನಾನ ಮಾಡಿಸಬೇಕು. ಈ ಕೆಲಸಕ್ಕ ಒಪ್ಪಿಕೊಂಡಳು ಸಿದ್ದಮ್ಮ. ಸಿದ್ದಮ್ಮನಿಗೂ ಇದು ಹೊಸ ಕೆಲಸವೇ. ಹಾಗಾಗಿ ಸಿದ್ದಮ್ಮನ ಕೈಯಲ್ಲಿ ಎಣ್ಣೆ ನೀರು ಹಾಕಿಸಿಕೊಂಡ ಮೊದಲ ನವಜಾತ ಶಿಶು ನಾನೇ, ಗುರುರಾಜ ಶಾಸ್ತ್ರಿ. ಬಹಳ ಅಚ್ಚುಕಟ್ಟಾಗಿ ತಾನು ವಹಿಸಿಕೊಂಡಿದ್ದ ಕೆಲಸವನ್ನು ನಿಭಾಯಿಸಿದಳು ಸಿದ್ದಮ್ಮ. ಇಲ್ಲಿಂದ ಪ್ರಾರಂಭವಾಯಿತು ನವಜಾತ ಶಿಶುಗಳಿಗೆ ಎಣ್ಣೆ ನೀರು ಹಾಕುವ ಸಿದ್ದಮ್ಮನ ಉದ್ಯೋಗ.
40 ವರ್ಷಗಳಲ್ಲಿ ಸುಮಾರು ಅದೆÀಷ್ಟು ನೂರು ಮಕ್ಕಳಿಗೆ ಎಣ್ಣೆ ನೀರು ಹಾಕದ್ದಾರೋ, ಸಿದ್ದಮ್ಮ ಕೂಡ ಲೆಕ್ಕ ಇಟ್ಟಿಲ್ಲ. ಶ್ರೀನಗರ, ಹನುಮಂತನಗರ, ಗಿರಿನಗರ, ಬ್ಯಾಂಕ್ ಕಾಲೋನಿ ಇವು ಸಿದ್ದಮ್ಮ ಉದ್ಯೋಗ ಮಾಡಿದ ಬೆಂಗಳೂರಿನ ಕೆಲವು ಏರಿಯಾಗಳು. ಸದಾ ಸಕಾರಾತ್ಮಕವಾಗಿ ನಗುತ್ತಾ ಬೀದಿಯವರನ್ನೆಲ್ಲಾ ಮಾತನಾಡಿಸುತ್ತಾ ಸಾಕಷ್ಟು ಜನರ ಜೀವನದಲ್ಲಿ ಒಂದು ಪಾತ್ರವಾಗಿದ್ದಾರೆ ಸಿದ್ದಮ್ಮ. ಒಮ್ಮ ಹೀಗೆ ಅವರ ತಲೆ ಕೂದಲಲ್ಲಿ ಗಂಟುಗಳು ಬಿದ್ದು, ಡಾಕ್ಟರ್ ಸಿದ್ದಮ್ಮನ ಜಡೆಯನ್ನು ಕತ್ತರಿಸಿ ಬಾಬ್ ಕಟ್ ಮಾಡಿಸಿದ್ದರು. ಸಿದ್ದಮ್ಮ ನಮ್ಮ ಮನೆ ಹತ್ತಿರ ಬಂದಾಗ ನಾವು ಸಾಂತ್ವನದ ಮಾತುಗಳನ್ನು ಹೇಳೋಣ ಎಂದು ಕೊಂಡರೆ. ಸಿದ್ದಮ್ಮ ಜೋರಾಗಿ ನಗುತ್ತಾ, ಮಗ ನಾನು ಈಗಿನ ಕಾಲದ ಹುಡುಗಿಯರ ಹಾಗೆ ಸ್ಟೈಲ್ ಮಾಡಿಸಿಕೊಂಡಿದ್ದೇನೆ ನೋಡು ಅಂತ ನಕ್ಕಾಗ, ಜೀವನದ ಕಷ್ಟ ಸುಖಗಳನ್ನು ಎಷ್ಟು ಸೊಗಸಾಗಿ ತೆಗೆದುಕೊಳ್ಳಬಹುದು ಎಂಬುದನ್ನು ನಮಗೆ ಸಿದ್ದಮ್ಮ ಪಾಠಮಾಡಿದಂತಿತ್ತು.
ಅವರ ಉದ್ಯೋಗದ ಮೊದಲ ಫಲಾನುಭವಿ ನಾನಾಗಿದ್ದು, ನನ್ನನ್ನು ಕಂಡರೆ ಸಿದ್ದಮ್ಮನಿಗೆ ಎಲ್ಲಿಲ್ಲದ ಪ್ರೀತಿ. ನನಗೆ ಬ್ಯಾಂಕ್ ಕೆಲಸ ಸಿಕ್ಕಾಗ ಸಿದ್ದಮ್ಮ ಪಟ್ಟ ಸಂತೋಷ ನನ್ನ ಅಮ್ಮನ ಸಂತೋಷವನ್ನು ಮೀರಿತ್ತು. ಮೊದಲ ಸಂಬಳದಲ್ಲಿ ಅಮ್ಮನಿಗೆ ಸೀರೆ ಜೊತೆಗೆ ಸಿದ್ದಮ್ಮನಿಗೂ ಒಂದು ಸೀರೆ ತಂದದ್ದು ಅಮ್ಮನ ಕಣ್ಣಲ್ಲಿ ಆನಂದಬಾಷ್ಪ ತಂದಿತ್ತು, ಸಿದ್ದಮ್ಮ ಮನತುಂಬಿ "ಚೆನ್ನಾಗಿರು ಮಗಾ" ಎಂದು ಹರಿಸಿದ್ದು ಈಗಷ್ಟೇ ನಡೆಯಿತೇನೋ ಎಂಬಂತಿದೆ. ನನಗೆ ನೆನಪಿರುವ ಹಾಗೆ ಸುಮಾರು ನನಗೆ 30 ವರ್ಷ ವಯಸ್ಸು ಆಗಿದ್ದಾಗಲು, ಹಾಗೇ ಮನೆ ಮುಂದೆ ಹೋಗುವಾಗ ಸಿದ್ದಮ್ಮ, ನಾನು ಎಣ್ಣೆ ನೀರು ಹಾಕಿಕೊಳ್ಳಲು ತಲೆಗೆ ಎಣ್ಣೆ ಹಚ್ಚಿಕೊಳ್ಳುವುದನ್ನು ಗಮನಿಸಿದರೆ, ಮಗಾ ಬಾ ವಸೀ ನಾನೆ ತಲೆಗೆ ಎಣ್ಣೆ ಹಚ್ತೀನಿ, ನೀನ್ ಎಷ್ಟ ದೊಡ್ಡವನಾದ್ರೂ ನನ್ ಮಗನೇ ಅಂತ ಅಕ್ಕಪಕ್ಕದವರಿಗೆಲ್ಲಾ ಕೇಳುವ ಹಾಗೆ ಜೋರಾಗಿ ಕೂಗಿ, ತಲೆಗೆ ಎಣ್ಣೆ ಹಚ್ಚಿ ಹೋಗುತ್ತಿದ್ದರೂ ಸಿದ್ದಮ್ಮ.
ಸುಮಾರು 12 ವರ್ಷಕ್ಕೆ ಮುಂಚೆ ನನ್ನ ಅಣ್ಣನ ಮಗಳಿಗೆ 4 ತಿಂಗಳು ಎಣ್ಣೆ ನೀರು ಹಾಕಿದ್ದು ಸಿದ್ದಮ್ಮ ನಮ್ಮ ಮನೆಯಲ್ಲಿ ಮಾಡಿದ ಕಡೇ ಉದ್ಯೋಗ.
ವಯಸ್ಸಾದ ಮೇಲೆ ಕೈಲಾಗಲ್ಲ ಎಂದು ಮತ್ತು ಮಕ್ಕಳೂ ಹಣ ಸಂಪಾದಿಸಲು ಪ್ರಾರಂಭಿಸಿದ್ದರಿಂದ ಸಿದ್ದಮ್ಮ ಸ್ವಯಂ ನಿವೃತ್ತಿ ಪಡೆದಳು. ನನ್ನ ಅಮ್ಮ ಮೃತಪಟ್ಟಾಗ, ಗೋಳಾಡುತ್ತಾ ಇದ್ದ ಹಲವರಲ್ಲಿ ಸಿದ್ದಮನೇ ಅಗ್ರಗಣ್ಯಳು. ನಮ್ಮ ಬಂಧು ಬಳಗಕ್ಕೆಲ್ಲ ಸಿದ್ದಮ್ಮನ ಪರಿಚಯವಿತ್ತು. ಅಯ್ಯೋ ನಮ್ಮ ಏರಿಯಾದಲ್ಲಿ ಸಿದ್ದಮ್ಮನ ಹಾಗೆ ಒಬ್ಬರಿಲ್ಲವೆ ಎಂದು ಅವರು ಅಂದುಕೊಡಿದ್ದರೆ ಅದೇನೂ ಉತ್ಪ್ರೇಕ್ಷೆಯಲ್ಲ.
ಸುಮಾರು ಆರು ವರ್ಷಕ್ಕೆ ಮುಂಚೆ ಸಿದ್ದಮ್ಮನವರ ಸೊಸೆ ಬಂದು ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದ್ದೇವೆ, ಹಾರ್ಟ್ ಆಪರೇಷನ್ ಆಗಬೇಕಿದೆ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ತಿಳಿಸಿದಾಗ, ಕೈಲಾದಷ್ಟು ಹಣ ನೀಡುವ ಭರವಸೆಯನ್ನೂ ನಾವು ಕೊಟ್ಟದ್ದೆವು.
ಆದರೆ ಸಿದ್ದಮ್ಮನ ಯೋಚನೆಯೇ ಬೇರೆ ಆಗಿತ್ತು. ಯಾರಲ್ಲು ಕೈ ಚಾಚುವ ಗೋಜಿಗೆ ಹೋಗಲಿಲ್ಲ ಸಿದ್ದಮ್ಮ. ಆರು ತಿಂಗಳು ಬದುಕಬಹುದು ಅಷ್ಟೇ ಎಂದು ಡಾಕ್ಟರ್ ಹೇಳಿದರು, ಸರಿ ಹಾಗೇ ಆಗಲಿ ನನಗೆ ಔಷಧಿಯೂ ಬೇಡ ಆಪರೇಷನ್ನೂ ಬೇಡ ಎಂದು ಧೈರ್ಯವಾಗಿ ಆಸ್ಪತ್ರೆಯಿಂದ ಹೊರ ನಡೆದಿದ್ದಳೂ ಸಿದ್ದಮ್ಮ.
ಇತ್ತೀಚೆಗೆ ಸಿದ್ದಮ್ಮ ನಮ್ಮ ಮನೆಯ ಮುಂದೆ ಸಿಕ್ಕಾಗ ಆಡಿದ ಮಾತುಗಳು ಹೀಗಿವೆ -
ಮಗಾ ಅದೇನೋ ಆರೇ ತಿಂಗಳು ಬದುಕೋದು ಅಂತ ಡಾಕ್ಟರ್ ಹೇಳಿ ಆರು ವರ್ಷ ಆಯಿತು. ಇನ್ನು ಗಟ್ಟಿ ಮುಟ್ಯಾಗೆ ಇದ್ದೀನಿ. ಮೆಟ್ಲು ಮಾತ್ರ ಹತ್ತಕ್ಕಾಗಾಕ್ಕಿಲ್ಲ ನೋಡು, ಏದು ಉಬ್ಬಸ ಬರ್ತೈತಿ. ಅದೇನ್ ಡಾಕಟ್ರು ಸುಮ್ನೆ ಹೆದರಿಸಿಬುಟ್ರು ಅಂತ ಕಾಣ್ತೈತಿ
ಸಿದ್ದಮ್ಮ ವೈದ್ಯವೃತ್ತಿಗೆ ಒಂದು ಸವಾಲ್ ಆದರೆ, ಜೀವನದಲ್ಲಿ ಕಷ್ಟಗಳನ್ನು ಎದುರಿಸುವ ಬಗೆ ಹೇಗೆ ಎಂಬುದನ್ನು ನಮಗೆ ತೋರಿಸಿಕೊಟ್ಟ ಒಬ್ಬ ಆದರ್ಶ ವ್ಯಕ್ತಿಯಾಗಿದ್ದಾರೆ. ಹೀಗೆ ನಗುತ್ತಾ ನಗಿಸುತ್ತಾ ನೂರು ವರ್ಷ ಬಾಳಲಿ ಈ ಸಿದ್ದಮ್ಮ ಎಂದು ನೀವೆಲ್ಲಾ ಹಾರೈಸುತ್ತೀರಾ ತಾನೆ.
**************************
ಮೇಲಿನ ಲೇಖನ ಬರೆದದ್ದು 2019ರಲ್ಲಿ
ದಿನಾಂಕ 28/09/2021ರಂದು ಸಿದ್ದಮ್ಮ ಸಾವನ್ನಪ್ಪಿದರು.