ಇದು ಇತ್ತೀಚೆಗೆ ಆದ ಅನುಭವಗಳಿಂದ ನನ್ನ ಮನದಲ್ಲಿ ಹುಟ್ಟಿದ ಗಾದೆ. ನಮ್ಮ ಹತ್ತಿರದ ಬಳಗದಲ್ಲಿ ಕಳೆದ ಒಂದು ತಿಂಗಳಲ್ಲಿ ಎರಡು ಸಾವು ಸಂಭವಿಸಿತು. ಸಾಮಾನ್ಯವಾಗಿ ಅಂತ್ಯಕ್ರಿಯೆಯ ದಿನ ನಾವು ಹೋದರೆ, ಮತ್ತೆ ನಾಲ್ಕೈದು ದಿನದ ನಂತರ ಸುಮ್ಮನೆ ಹಾಗೇ ವಿಚಾರಿಸಿಕೊಂಡು ಬರುವುದು ಹತ್ತಿರದ ಬಂಧುಗಳ ಕರ್ತವ್ಯವಾಗಿರುತ್ತದೆ. ಹೀಗೆ ನಾನು ಭೇಟಿ ಕೊಟ್ಟಾಗ, ಇಬ್ಬರ ಮನೆಯಲ್ಲೂ ನಾನು ಕಂಡ ಸಮಾನ ಪ್ರತಿಕ್ರಿಯೆಯಂದರೆ, "ಅದೇನೋ ಗೊತ್ತಿಲ್ಲ, ಮೂರು ದಿನದಿಂದ ಒಂದು ಕಾಗೆ ಮನೆಯ ಮುಂದಿರುವ ಮರದಲ್ಲಿ ಬಂದು ಒಂದೇ ಸಮನೆ ಕೂಗುತ್ತಿದೆ" ಎಂದು.
ಕಾಗೆ ಪ್ರತಿಯೊಬ್ಬರ ಮನೆಯ ಮುಂದೆ ದಿನಾ ಕೂಗುವುದು ಸಾಮಾನ್ಯ. ಆದರೆ ಮನೆಯಲ್ಲಿ ಸಾವು ಸಂಭವಿಸಿದ್ದಾಗ ಮಾತ್ರ ಅದರ ಕಡೆ ಹೆಚ್ಚು ಗಮನ ಕೊಡುತ್ತಾರೆ ಎಂಬುದು ನನ್ನ ಅಭಿಪ್ರಾಯ. ಸತ್ತವರನ್ನು ಎಷ್ಟು ಬೇಗನೆ ಕಾಗೆಯಾಗಿ ನೋಡುತ್ತೇವೆ ಅಲ್ಲವೇ.
ಇದು ಹೋಗಲಿ ಎಂದರೆ, ನನ್ನ ಗೆಳೆಯನ ಮನೆಯಲ್ಲಿ ಅವನ ತಾಯಿಗೆ ಹುಷಾರಿರಲಿಲ್ಲ. ನೋಡಿ ಬರೋಣ ಎಂದು ಹೋದರೆ ಅವರ ಮನೆಯ ಮುಂದೆ ಮರದ ಮೇಲೆ ಎರಡು ಕಾಗೆ ಕೂಗುತ್ತಿತ್ತು. ಅದನ್ನು ನೋಡಿದ ನನ್ನ ಗೆಳೆಯನ ಹೆಂಡತಿ "ನೋಡಿ ಅತ್ತೆಯವರನ್ನು ಕರೆದುಕೊಂಡು ಹೋಗಲು ಅವರ ಅಪ್ಪ ಅಮ್ಮ ಬಂದಿದ್ದಾರೆ ಅನಿಸುತ್ತೆ" ಎನ್ನುವುದೇ.