ಗೆಳೆಯ ಗಿರಿಧರ ಸಿಂಗಾಪುರದಿಂದ ಬಂದರೆ ಸಾಕು, ಒಂದು ದಿನದ ಯಾವುದಾದರೂ ದೊಡ್ಡ ಪ್ರವಾಸ ಇದ್ದೇ ಇರುತ್ತದೆ. ಕಾರ್ ಓಡಿಸುವ ಅತಿಯಾದ ಬಯಕೆ ಈ ನನ್ನ ಗೆಳೆಯನದು. ಬೆಂಗಳೂರಿಗೆ ಬಂದೊಡನೆ ಕಾರ್ ಬಾಡಿಗೆಗೆ ತೆಗೆದುಕೊಂಡು ಇಲ್ಲಿ ಇರುವಷ್ಟು ದಿನದಲ್ಲಿ ಒಂದಷ್ಟು ಸಾವಿರ ಕಿಲೋಮೀಟರ್ ಕಾರ್ ಓಡಿಸಿಬಿಟ್ಟರೆ ಮನಸ್ಸಿಗೆ ಏನೋ ಸಮಾಧಾನ. ರಜೆ ಹಾಕಿ ಬಂದದ್ದು ಸಾರ್ಥಕವಾಯಿತೆಂಬ ಮನೋಭಾವ.
ಅವರಿಗೆ ಕಾರ್ ಓಡಿಸಲು ಅವಕಾಶ ಕೊಡಲು ಹಾಗೂ ನಾವೂ ತೀರ್ಥಯಾತ್ರೆ ಮಾಡುವುದಕ್ಕೋಸ್ಕರ ಈ ಸಲ ನಾವು ಯೋಜನೆ ಹಾಕಿದ್ದು ಏಪ್ರಿಲ್ 18 ೨೦೨೨ರಂದು ಬೆಂಗಳೂರಿನಿಂದ ಮುಂಜಾನೆಯೇ ಹೊರಟು, ಕುಕ್ಕೆ ಸುಬ್ರಹ್ಮಣ್ಯಕ್ಕೆ, ಸೌತಡ್ಕ ಗಣೇಶ ಹಾಗೂ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದು ಅದೇ ದಿನ ಬೆಂಗಳೂರಿಗೆ ಹಿಂದಿರುಗುವುದು. ಒಟ್ಟಾರೆ 600 ಕಿಲೋಮೀಟರ್ ಕಾರ್ ಪ್ರಯಾಣ.
ಬೆಳಿಗ್ಗೆ 4 ಗಂಟೆಗೆ ಬೆಂಗಳೂರಿನಿಂದ ಹೊರಟೆವು. ಕುಣಿಗಲ್ ಆದ ಮೇಲೆ ಸಿಗುವ ಸ್ವಾತಿ ಡೆಲಿಕೆಸಿ ಹೋಟಲ್ ಸದಾ ನಾವು ತಿಂಡಿ ತಿನ್ನಲು ಕಾರ್ ನಿಲ್ಲಿಸುವ ಜಾಗ. ಆದರೆ ಬೆಳಿಗ್ಗೆ 5 ಗಂಟೆಗೆ ಯಾರು ತಾನೇ ಹೋಟಲ್ ತೆಗೆದಿರುತ್ತಾರೆ ಹೇಳಿ. ಸುಮಾರು 8 ಗಂಟೆಗೆ ಅರಕಲಗೋಡಿನ ಲಕ್ಷ್ಮಿ ಡೆಲಿಕೆಸಿ ಎಂಬ ಹೋಟಲ್‌ಗೆ ಹೋದೆವು. ನಾವು ಊಹಿಸದಕ್ಕಿಂತ ಹತ್ತು ಪಟ್ಟು ತಿಂಡಿ ರುಚಿಯಾಗಿತ್ತು.
ಅಲ್ಲಿಂದ ಶನಿವಾರಪೇಟೆಗೆ ಹೋಗಿ ಬಿಸಲೆ ಘಾಟ್ ಪ್ರವೇಶಿಸಿದೆವು. ರಸ್ತೆಯ ಉದ್ದಕ್ಕೂ ಹಸಿರಿನ ಚಪ್ಪರ ಹಾಕಿ ನಮ್ಮನ್ನು ಔತಣಕ್ಕೆ ಆಹ್ವಾನಿಸುತ್ತಿದ್ದಾರೇನೋ ಎಂಬಂತಿತ್ತು. ಕೆಲವೊಂದು ಕಡೆ ಬೆಳಕು, ದಟ್ಟವಾದ ಮರಗಳಿದ್ದ ಕೆಲವೆಡೆ ಕತ್ತಲೆ, ಅಲ್ಲಲ್ಲಿ ನೀರಿನ ಜರಿಗಳು ಮತ್ತು "ಇದು ಆನೆಗಳು ಓಡಾಡುವ ಜಾಗ ಎಚ್ಚರದಿಂದಿರಿ" ಎಂಬ ಫಲಕಗಳು. ಒಂದೆರೆಡು ನೀರಿನ ಜರಿಯಲ್ಲಿ ಕಾಲಿಯಾಗಿದ್ದ ನಮ್ಮ ನೀರಿನ ಬಾಟಲ್ ತುಂಬಿಸಿಕೊಂಡೆವು. ಬಹುಶಃ ಇದಕ್ಕಿಂತ ಶುದ್ಧವಾದ ಔಷಧೀಯ ಗುಣದ ನೀರು ಮತ್ತೆಲ್ಲೂ ಸಿಗುವುದಿಲ್ಲ ಅನಿಸುತ್ತೆ. ದೊಡ್ಡರಂಗೇಗೌಡರು ಹೇಳುವಂತೆ ಈ ಬೆಟ್ಟ ಗುಡ್ಡಗಳ ಮೌನದ ಹಾಡನ್ನು ನಾವು ಕೇಳಿಸಿಕೊಳ್ಳಬೇಕು. ಹೆಚ್ಚು ಪ್ರವಾಸಿಗರು ಇರುವ ಜಾಗದಲ್ಲಿ ಇದು ಸಾಧ್ಯವಿಲ್ಲ. ಒಂದೆಡೆ ರಸ್ತೆ ಬದಿಯಲ್ಲೇ ನಿಂತು ಪ್ರಕೃತಿಯ ರಮಣೀಯ ದೃಶ್ಯವನ್ನು ನೋಡುವ ಅವಕಾಶ ಸಿಕ್ಕಿತು. ಸುಮಾರು 10 ನಿಮಿಷ ಅಲ್ಲಿ ಕಳೆದೆವು. ಬಿಸಲೆ ಘಾಟ್ ಮುಗಿಯುತ್ತಿದ್ದಂತೆ ನಮಗೆ ಕುಕ್ಕೆ ಸುಬ್ರಹ್ಮಣ್ಯ ಸಿಗುತ್ತದೆ. ಹುತ್ತದ ರೂಪದಲ್ಲಿರುವ ಆದಿಸುಬ್ರಹಣ್ಯರ ದರ್ಶನ ಪಡೆದು ನಂತರ ಮುಖ್ಯ ದೇವಸ್ಥಾನಕ್ಕೆ ಹೋದೆವು. ಅಲ್ಲಿ ಭಕ್ತಾದಿಗಳು ಹೆಚ್ಚಿದ್ದರೂ ಸುಮಾರು 20 ನಿಮಿಷಗಳಲ್ಲಿ ನಮಗೆ ದೇವರ ದರ್ಶನವಾಯಿತು. ಇಲ್ಲಿ ನಮಗೆ ಪರಿಚಯದವರು ಇದ್ದರೂ ಅವರುಗಳ ಸಹಾಯ ಪಡೆಯಬಾರದೆಂಬುದು ಗೆಳೆಯರ ವಾದ. ಅವಶ್ಯಕತೆ ಇಲ್ಲದಿದ್ದಾಗ ಅನುಕೂಲಗಳನ್ನು ಬಳಸಿಕೊಳ್ಳುವುದರಲ್ಲಿ ಅರ್ಥವಿಲ್ಲ ಅಲ್ಲವೇ.
ಸುಬ್ರಹ್ಮಣ್ಯದಿಂದ ಗುಂಡ್ಯದ ಕಡೆ ಹೊರಟು ಸೌತಡ್ಕಾ ಕ್ಷೇತ್ರಕ್ಕೆ ಹೊರಟೆವು. ಇಲ್ಲಿಯ ದೇವರು ಗಣೇಶ. ಹಿಂದೆ ಗೋಪಾಲಕರಿಗೆ ಬಯಲಿನಲ್ಲಿ ಒಂದು ಗಣೇಶ ವಿಗ್ರಹ ಸಿಕ್ಕಿತು. ಅದನ್ನು ಒಂದು ಕಟ್ಟೆಯ ಮೇಲೆ ಕೂಡಿಸಿ ಸೌತೇಕಾಯಿಯನ್ನು ನೈವೇದ್ಯವಾಗಿ ನೀಡಿದರಂತೆ. ಆದ್ದರಿಂದಲೇ ಇದರ ಹೆಸರು ಸೌತಡ್ಕ ಎಂದು ಬಂದಿದೆ. ತನಗೆ ದೇವಸ್ಥಾನ, ಗೋಪುರಗಳು ಕಟ್ಟಬಾರದೆಂದು ಗಣೇಶನು ಗೋಪಾಲಕರಿಗೆ ಕನಸಲ್ಲಿ ಬಂದು ತಿಳಿಸಿದ್ದರಿಂದ ಮುಕ್ತವಾಗಿ ಎಲ್ಲಿಂದಲಾದರೂ ಗಣೇಶನನ್ನು ನೋಡುವ ಅವಕಾಶ ಇಲ್ಲಿದೆ. ಭಕ್ತಾದಿಗಳು ಬಹಳ ನಂಬಿಕೆ ಇಟ್ಟಿರುವ ಗಣೇಶ ಇದು. ಭಕ್ತಿಯಿಂದ ತಮ್ಮ ಧಾರ್ಮಿಕವಾದ ಬೇಡಿಕೆಗಳನ್ನು ಗಣೀಶನಿಗೆ ತಿಳಿಸಿದರೆ ಆದಷ್ಟು ಬೇಗನೆ ಆ ಬಯಕೆಗಳು ಈಡೇರುತ್ತಂತೆ. ಬಯಕೆಗಳು ಈಡೇರಿದ ನಂತರ ಇಲ್ಲಿಗೆ ಮತ್ತೆ ಬಂದು ಅಲ್ಲಿರುವ ನಿಗದಿತ ಸ್ಥಳದಲ್ಲಿ ಒಂದು ಗಂಟೆಯನ್ನು ಕಟ್ಟಿ ಹರಕೆ ತೀರಿಸುತ್ತಾರೆ. ಇಲ್ಲಿ ನೀವು ಬೇರೆ ಬೇರೆ ಘಾತ್ರದ ಗಂಟೆಗಳನ್ನು ನೋಡಬಹುದು. ಇಲ್ಲಿ ಮಧ್ಯಾಹ್ನ 12.30ರಿಂದ 2.30ರವರೆಗೆ ಊಟದ ವ್ಯವಸ್ಥೆಯೂ ಇದೆ. ನಾವು ಇಲ್ಲೇ ದೇವಸ್ಥಾನದಲ್ಲಿ ಊಟ ಮಾಡಿದೆವು. ಅನ್ನ, ಸಾರು, ಹುಳಿ, ಪಾಯಸ ಹಾಗೂ ಮಜ್ಜಿಗೆಯನ್ನೊಳಗೊಂಡ ಬಾಳೆಲೆಯ ಊಟ ಅಮೃತವೇ ಸರಿ. ಇಲ್ಲಿದ್ದ ಜನಸಾಗರ ನಮಗೆ ಧರ್ಮಸ್ಥಳದಲ್ಲಿ ಇರಬಹುದಾದ ಭಕ್ತಾದಿಗಳ ಸಂಖ್ಯೆಯ ಅಂದಾಜು ನೀಡಿತ್ತು.
ಊಟ ಮುಗಿಸಿ ಧರ್ಮಸ್ಥಳಕ್ಕೆ ಹೋದೆವು. ಅಲ್ಲಿ ಜನಸಾಗರವೋ ಸಾಗರ. ಕಾರಣ ಅಲ್ಲಿ ನಡೆಯುತ್ತಿರುವ ಒಂದು ವಾರದ ರಥೋತ್ಸವ. ಇಲ್ಲಿ ಮಂಜುನಾಥನ ದರ್ಶನ ತಕ್ಷಣ ಆಗುವ ಯಾವ ನಂಬಿಕೆಯೂ ನನಗೆ ಇರಲಿಲ್ಲ. ಗೆಳೆಯರೊಬ್ಬರು ಅನ್ನದಾನಕ್ಕೆ ದೇಣಿಗೆ ನೀಡಿ ನಂತರ ಸರ್ವಸನ್ನಿದಿಗಳ ಪೂಜೆಗೆ 1400 ರೂಪಾಯಿ ನೀಡಿದರು. ಈ ವಿಶೇಷ ಸೇವೆಯಿಂದಾಗಿ ನಮಗೆ ದೇವಸ್ಥಾನ ನೇರವಾಗಿ ಪ್ರವೇಶಿಸಲು ಸಾಧ್ಯವಾಯಿತು. ಹತ್ತು ನಿಮಿಷದಲ್ಲಿ ಅಂದರೆ ಸುಮಾರು ಮಧ್ಯಾಹ್ನ 2.30ಕ್ಕೆ ಮಂಜುನಾಥನ ದರ್ಶನವಾಯಿತು. ಪಕ್ಕದಲ್ಲಿದ್ದ ಮತ್ತೊಬ್ಬರು ಬೆಳಿಗ್ಗೆ 9 ಗಂಟೆಗೆ ದರ್ಶನಕ್ಕೆ ನಿಂತಿದ್ದು ಎಂದು ಹೇಳಿದಾಗ ಮಂಜುನಾಥನಿಗೆ ಮತ್ತೊಂದು ಧನ್ಯವಾದಗಳನ್ನು ತಿಳಿಸಬೇಕೆನ್ನಿಸಿತು.
ಈಗ ನಮ್ಮ ಪಯಣ ಮನೆಯ ಕಡೆಗೆ. 36 ಡಿಗ್ರಿ ಬಿಸಿಲಿದ್ದ ಧರ್ಮಸ್ಥಳದಿಂದ ಹೊರಟು ಚಾರ್ಮಡಿ ಘಾಟ್‌ಗೆ ಬಂದಾಗ 23 ಡಿಗ್ರಿ ಉಷ್ಣಾಂಶ. ತೀಕ್ಷ್ಣವಾದ ರಸ್ತೆಯ ತಿರುವುಗಳು, ಬಕೆಟ್‌ನಲ್ಲಿ ನೀರು ತೆಗೆದುಕೊಂಡು ನಮ್ಮ ಮೇಲೆ ಸುರಿಯುತ್ತಿದ್ದಾರೇನೋ ಎಂಬಂತಿದ್ದ ಮಳೆ, ರಸ್ತೆ ಅಗಲೀಕರಣ, ಮೇಲ್ಸೇತುವೆಗಳ ನಿರ್ಮಾಣ ಇವೆಲ್ಲವೂ ಸಾಕಷ್ಟು ಕಡೆ ಕಾರ್ ವೇಗವನ್ನು ಕಡಿಮೆ ಮಾಡಿತು. ಸ್ವಾತಿ ಡೆಲಿಕೆಸಿಯಲ್ಲಿ ರಾತ್ರಿಯ ಊಟ ಮುಗಿಸಿ ಮನೆಗೆ ತಲುಪಿದಾಗ 10 ಗಂಟೆ.