ಗುರುರಾಜ
ಶಾಸ್ತ್ರಿ
ವಿಶ್ವ ಬೈಸೈಕಲ್‌ ದಿನ ಹಾಗೂ ನನ್ನ ಸೈಕಲ್‌ ಸವಾರಿ
24-06-2022
ಪ್ರತಿ ವರ್ಷ ಜೂನ್‌ 3ನೇ ತಾರೀಖು ವಿಶ್ವ ಬೈಸೈಕಲ್‌ ದಿನ ಎಂದು ವಿಶ್ವದ ಎಲ್ಲೆಡೆ ಆಚರಿಸುತ್ತಾರೆ. ಸೈಕಲ್‌ ಹೊಂದಿರುವ ಯಾರಾದರೂ ಸರಿಯೇ, ಮನೆಯ ಮುಂದಿನ ರಸ್ತೆಯಲ್ಲಾದರೂ ಒಂದೆರೆಡು ಸುತ್ತು ಸೈಕಲ್‌ ಹೊಡೆದು ಫೋಟೋ ತೆಗೆಸಿಕೊಂಡು ಅದನ್ನು ವಾಟ್ಸಾಪ್‌ ಫೇಸ್‌ಬುಕ್‌ನಲ್ಲಿ ಹಾಕಿದರೇ ಒಂದು ಸಾಧನೆ ಮಾಡಿದಂತೆ. ಈ ವಿಶ್ವ ಬೈಸೈಕಲ್‌ ದಿನ ಆರಂಭವಾದದ್ದು 2018ರಲ್ಲಿ. ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಅಂದರೆ ಯುನೈಟೆಡ್‌ ನೇಶನ್ಸ್ ಜೂನ್‌ 3 2018ರಲ್ಲಿ, ಸೈಕಲ್‌ ಕೂಡಾ ಜನರನ್ನು ಚುರುಕಾಗಿಡಿಸಲು ಒಂದು ಅತ್ಯುತ್ತಮ ಸಾಧನ ಮತ್ತು ಸದಸ್ಯ ರಾಷ್ಟ್ರಗಳು ಸೈಕಲ್‌ ಚಾಲನೆಯನ್ನು ಪ್ರೋತ್ಸಾಹಿಸಬೇಕು ಎಂಬುವ ಪ್ರಸ್ತಾವವನ್ನು ಅನುಮೋದಿಸಿತು. ಅಂದಿನಿಂದ, ಅಂದರೆ ಇದು ಸೈಕಲ್‌ ದಿನದ ನಾಲ್ಕನೇ ವರ್ಷದ ಆಚರಣೆ. ಕಳೆದ ಒಂದು ವರ್ಷದಿಂದ ನಾನೂ ಸೈಕಲ್‌ ಓಡಿಸುತ್ತಿರುವುದು ನಿಮಗೆಲ್ಲಾ ತಿಳಿದೇ ಇದೆ. ಅದಕ್ಕೆ ಎರಡು ವರ್ಷ ಮುಂಚೆ ನನ್ನ ಅಣ್ಣನ ಮಗ 26 ಸಾವಿರ ರೂಪಾಯಿಯ ಸೈಕಲ್‌ ಖರೀದಿಸಿ ಐದೋ ಆರೋ ಸಲ ಸೈಕಲ್‌ ಹೊಡೆದಿದ್ದ ಅಷ್ಟೇ. ನಂತರ ನನ್ನ ಗೆಳೆಯರು ಆರಂಭಿಸಿದರೆಂದು ನಾನೂ ಸೈಕಲ್‌ ಓಡಿಸಲು ಆರಂಭಿಸಿದ್ದು. ನನ್ನ ವಾಟ್ಸಾಪಿನಲ್ಲಿ, ಫೇಸ್ಬುಕ್ಕಿನಲ್ಲಿ ಸಾಕಷ್ಟು ಫೋಟೋಗಳನ್ನೂ ನೀವಲ್ಲಾ ನೋಡಿರುತ್ತೀರಿ. ಈ ವರೆಗೆ ಸುಮಾರು 3300 ಕಿಲೋಮೀಟರ್‌ ಸೈಕಲ್‌ ಚಲಾಯಿಸಿದ್ದೇನೆ ಎಂದು ನಾನು ಹೇಳಿದರೆ ತಕ್ಷಣ ನಿಮ್ಮ ಪ್ರಶ್ನೆ ಅದನ್ನು ಲೆಕ್ಕವಾದರೂ ಹೇಗೆ ಇಡಲು ಸಾಧ್ಯ ಎಂಬುದು. ಇದಕ್ಕೆ ಉತ್ತರ ಸ್ಟ್ರಾವಾ ಎಂಬ ಮೊಬೈಲಿನ ಒಂದು ತಂತ್ರಾಂಶ. ನಾನು ಸೈಕಲ್‌ ಚಲನೆ ಮಾಡಿದಾಗ ಈ ತಂತ್ರಾಂಶ ಮೊಬೈಲಿನಲ್ಲಿ ಆರಂಭಿಸಬೇಕು. ಸೈಕಲ್‌ ಹೊಡೆಯುವುದು ನಿಲ್ಲಿಸಿದ ಮೇಲೆ, ಈ ತಂತ್ರಾಂಶ ಓಡುತ್ತಿರುವುದನ್ನು ನಿಲ್ಲಿಸಬೇಕು. ಕಡೆಗೆ ನಾನು ಎಷ್ಟು ದೂರ ಸೈಕಲ್‌ ಚಲಾಯಿಸಿದೆ, ತೆಗೆದುಕೊಂಡ ಸಮಯ ಎಷ್ಟು, ಮಾರ್ಗದ ನಕ್ಷೆ, ಸರಾಸರಿ ಎಷ್ಟು ವೇಗದಲ್ಲಿ ಸೈಕಲ್‌ ಚಲಾಯಿಸಿದೆ, ಅತಿ ಹೆಚ್ಚು ವೇಗ ಎಷ್ಟಾಗಿತ್ತು ಹೀಗೆ ಆ ದಿನದ ಚಾಲನೆಗೆ ಸಂಬಂಧಪಟ್ಟಂತೆ ಹಲವಾರು ವಿಷಯಗಳನ್ನು ತಂತ್ರಾಂಶ ನೀಡುತ್ತದೆ. ಅಷ್ಟೇ ಅಲ್ಲದೆ ಈ ವರೆವಿಗೂ ಅಂದರೆ ತಂತ್ರಾಂಶ ಬಳಸಲು ಆರಂಭಿಸಿದ ಮೇಲೆ ನನ್ನ ಚಾಲನೆಯ ಮಾಹಿತಿಯನ್ನು ಇದು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಈ ಸ್ಟ್ರಾವಾ ತಂತ್ರಾಂಶ ಒಂದು ರೀತಿ ವ್ಯಾಯಾಮ ಮಾಡುವವರಿಗೆ, ಓಡುವವರಿಗೆ, ಸೈಕಲ್‌ ಹೊಡೆಯುವರಿಗೆ ಫೇಸ್‌ಬುಕ್‌ ಇದ್ದಂತೆ. ಈ ವರ್ಷ ಜೂನ್‌ 3 2022 ಶುಕ್ರವಾರವಾಗಿತ್ತು. ಹಾಗಾಗಿ ಸಾಕಷ್ಟು ಸೈಕಲ್‌ ಹೊಡೆಯುವವರ ಗುಂಪುಗಳು ತಮ್ಮ ವಿಶೇಷ ಸೈಕಲ್‌ ಚಾಲನೆಯನ್ನು ಶನಿವಾರಕ್ಕೆ ಮುಂದೂಡಿತ್ತು. ನನ್ನ ಗೆಳೆಯರ ಗುಂಪು ಹಾಗೆಯೇ. ಜೂನ್‌ ೪ ಶನಿವಾರದಂದು ಕನಕಪುರ ರಸ್ತೆ ಕಗ್ಗಲೀಪುರದ ಬಳಿ ಇರುವ ಶ್ಯೂರ್‌ ಶಾಟ್‌ ಅಕಾಡೆಮಿ ಎಂಬಲ್ಲಿಗೆ ಸೈಕಲ್ಲಿನಲ್ಲಿ ಹೋಗಲು ನಿರ್ಧರಿಸಿದೆವು. ಹೋಗಿ ಬರುವುದೆಲ್ಲ ಸೇರಿ ಸುಮಾರು 70 ಕಿಲೋಮೀಟರ್‌ ಆಗುತ್ತದೆ ಎಂದು ನನಗೆ ಗೊತ್ತಿತ್ತು. ಮತ್ತು ಇದು ಒಂದೇ ದಿನದಲ್ಲಿ ಅತಿ ಹೆಚ್ಚು ಸೈಕಲ್‌ ಹೊಡೆದ ನನ್ನ ವೈಯಕ್ತಿಕ ದಾಖಲೆ ಕೂಡ ‌ ಇದೇ ಆಗುತ್ತದೆಂದು ಗೊತ್ತಿತ್ತು. ಅಂದು ಬೆಳಿಗ್ಗೆ 6.15ಕ್ಕೆ ಎಲ್ಲರೂ ವಿಧಾನ ಸೌಧದ ಬಳಿ ಸೇರಿದೆವು. ಸುಮಾರು 50 ಜನ ಗುಂಪಿನಲ್ಲಿದ್ದರು. 6.30ಕ್ಕೆ ಅಲ್ಲಿಂದ ಹೊರಟು, ಸಿಟಿ ಮಾರ್ಕೆಟ್‌ ಮಾರ್ಗವಾಗಿ ಕನಕಪುರ ರಸ್ತೆಯ ಮೂಲಕ ಕಗ್ಗಲಿಪುರದ ಶ್ಯೂರ್‌ ಶಾಟ್‌ ಅಕಾಡೆಮಿ ತಲುಪಿದ್ದು ಸುಮಾರು 8.15ಕ್ಕೆ. ಶ್ಯೂರ್‌ ಶಾಟ್‌ ಅಕಾಡೆಮಿ ೩೦ ಎಕೆರೆಯಲ್ಲಿರುವ ಒಂದು ತರಬೇತಿ ಕೇಂದ್ರ. ಇಲ್ಲಿ ಭಾರತೀಯ ಸೈನ್ಯ ಹಾಗೂ ವಾಯುಪಡೆಗೆ ಸೇರಲಿಚ್ಚಿಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಇದನ್ನು ಆರಂಭಿಸಿದವರು ಜನರಲ್‌ ಭಕುನಿಯವರು. ಇಲ್ಲಿ ತರಬೇತಿ ಪಡೆದ ಸಾಕಷ್ಟು ಅಭ್ಯರ್ಥಿಗಳು ಸೈನ್ಯಕ್ಕೆ ಸೇರಿದ್ದಾರೆ. ನಮಗೆ ಈ ಅಭ್ಯರ್ಥಿಗಳ ಜೊತೆಯೇ ಬೆಳಗಿನ ತಿಂಡಿಯನ್ನು ತಿನ್ನುವ ಅವಕಾಶ ಸಿಕ್ಕಿತು ಮತ್ತು ಜನರಲ್‌ ಭಕುನಿಯವರ ಮೌಲ್ಯಾಧಾರಿತ ಮಾತುಗಳನ್ನು ಕೇಳಿಸಿಕೊಳ್ಳುವಂತಾಯಿತು. ಜೈ ಹೋ ಭಾರತ್‌ ಎಂಬ ಅಭಿಯಾನವನ್ನು ಇವರು ಆರಂಭಿಸಲಿದ್ದು ಇದೇ ಆಗಸ್ಟ್‌ 15ರಂದು ಮಧ್ಯಾಹ್ನ 12 ಗಂಟೆಗೆ ದೇಶದ ಎಲ್ಲಾ ಜನರು ರಾಷ್ಟ್ರಗೀತೆ ಹಾಡಬೇಕೆಂಬುದು ಇದರ ಉದ್ದೇಶವಾಗಿದೆ. ಈ 30 ಎಕರೆ ಜಾಗದಲ್ಲಿ ಅಭ್ಯರ್ಥಿಗಳಿಗೆ ಎಲ್ಲಾ ಸಾಹಸ ಚಟುವಟಿಕೆಗಳಿಗೆ ಬೇಕಾಗುವ ಅನುಕೂಲಗಳು ಇವೆ. ನಾವು ಹೆಚ್ಚು ಹೊತ್ತು ಇಲ್ಲಿ ಇರಲು ಸಾಧ್ಯವಾಗಲಿಲ್ಲ. ರಾಷ್ಟ್ರಧ್ವಜ ಹಾರಿಸಿದ ನಂತರ ಅಲ್ಲಿಂದ ಸಿ.ಆರ್.ಪಿ.ಎಫ್‌ ನವರು ನಡೆಸುತ್ತಿರುವ ಶ್ವಾನ ತರಬೇತಿ ಕೇಂದ್ರಕ್ಕೆ ಭೇಟಿಕೊಟ್ಟೆವು. ಸುಮಾರು 10 ತಿಂಗಳು ಒಂದು ನಾಯಿ ಮತ್ತು ಅದರ ಜೊತೆ ಇಬ್ಬರು ಯೋಧರನ್ನು ಒಂದು ಗುಂಪಿನಂತೆ ತರಬೇತಿ ನೀಡುತ್ತಾರೆ. ಈ ರೀತಿ ಕಳೆದ 10 ತಿಂಗಳಲ್ಲಿ ತರಬೇತಿ ಪಡೆದು ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ 7 ನಾಯಿ ಮತ್ತು 14 ಯೋಧರಿಗೆ ಸರ್ಟಿಫಿಕೇಟ್‌ ನೀಡುವ ದಿನ ಅದಾಗಿತ್ತು. ನಮ್ಮ ಸೈಕಲ್‌ ಸವಾರರಲ್ಲೇ ಒಬ್ಬರಾದ ಬ್ರಿಗೇಡಿಯರ್‌ ರವಿ ಮುನುಸ್ವಾಮಿಯವರು ಆ ದಿನದ ಮುಖ್ಯ ಅತಿಥಿ. ಶ್ವಾನಗಳ ಸಾಹಸಗಳ ಕೆಲವು ಪ್ರದರ್ಶನವೂ ಇತ್ತು. ಮಾದಕ ವಸ್ತುಗಳ ವ್ಯಾಪಾರಿಯನ್ನು ಹಿಡಿಯುವ ಶ್ವಾನ ಒಂದಾದರೆ, ಬಾಂಬ್‌ ಹುಡುಕುವ ಶ್ವಾನ ಮತ್ತೊಂದು. ಕೈಯಲ್ಲಿ ಬಂದೂಕು ಹಿಡಿದ ಭಯೋತ್ಪಾದಕನ ಮೇಲೆ ಯಾವ ಹೆದರಿಕೆಯೂ ಇಲ್ಲದೆ ಚೆಂಗನೆ ಹಾರುವ ಶ್ವಾನವಂತೂ ಆಕರ್ಶಕ ಪ್ರದರ್ಶನ ನೀಡಿತು. ತರಬೇತಿ ಪಡೆದ ಒಂದು ನಾಯಿ ಮತ್ತು ಎರಡು ಯೋಧರು ನಾಯಿಗೆ ಹತ್ತು ವರ್ಷವಾಗುವ ವರೆಗೆ ಅಥವಾ ವೀರಮರಣ ಹೊಂದುವವರೆಗೆ ಜೊತೆಯಲ್ಲಿಯೇ ಇರುತ್ತಾರೆ. ಸಾಮಾನ್ಯವಾಗಿ ಈ ಮೂವರ ಗುಂಪನ್ನು ನಕ್ಸಲೈಟ್‌ ಪ್ರದೇಶಗಳಲ್ಲಿ ಹೆಚ್ಚು ಬಳಸುತ್ತಿದ್ದಾರೆ. ಈ ನಾಯಿಗಳು ಅಷ್ಟೇ, ತಮ್ಮ ಜೊತೆಯಲ್ಲಿ ಇರುವ ಇಬ್ಬರು ಯೋಧರನ್ನು ಬಿಟ್ಟು ಬೇರೆ ಯಾರ ಮಾತನ್ನು ಕೇಳುವುದಿಲ್ಲ ಮತ್ತು ಬೇರೆ ಯಾರೇ ಏನೇ ಊಟ, ಬಿಸ್ಕತ್ತು ಹಾಕಿದರೂ ತಿನ್ನುವುದಿಲ್ಲ. ಸಾಮನ್ಯ ಜನರಿಗೆ ಪ್ರವೇಶವಿಲ್ಲದ ಈ ತರಬೇತಿ ಕೇಂದ್ರಕ್ಕೆ ನಾವು ವಿಶೇಷ ಅತಿಥಿಗಳಾಗಿ ಹೋಗಿದ್ದು ತುಂಬಾ ಸಂತೋಷ ತಂದಿತು. ಬೆಂಗಳೂರಿನಿಂದ ಈಗಾಗಲೇ ಸುಮಾರು 45 ಕಿಲೋಮೀಟರ್‌ ಸೈಕಲ್‌ ಹೊಡೆದು ಆಗಿತ್ತು. ಅದು ಬರೀ ಕೆಳಗಿಳಿಯುವ ರಸ್ತೆಯೇ. ಈಗ ಶ್ವಾನ ತರಬೇತಿ ಕೇಂದ್ರದಿಂದ ನನ್ನ ಮನೆ ಸುಮಾರು 25 ಕಿಲೋಮೀಟರ್‌, ಅದೂ ಬೆಟ್ಟ ಹತ್ತುವಂತೆ ಎತ್ತರಕ್ಕಿರುವ ರಸ್ತೆ. ರಸ್ತೆಯ ಉಬ್ಬು, ಸುಡುತ್ತಿದ್ದ ಬಿಸಿಲು ಹಾಗೂ ಕನಕಪುರ ರಸ್ತೆಯಲ್ಲಿನ ಭಾಯಂಕರ ವಾಹನ ದಟ್ಟಣೆ ಮನೆಗೆ ಯಾವಾಗ ಸೇರುತ್ತೇವಪ್ಪಾ ಎನ್ನುವಂತಾಗಿತ್ತು. ಮಾರ್ಗ ಮಧ್ಯದಲ್ಲಿ ಒಂದೆರೆಡು ಲೋಟ ಕಬ್ಬಿನ ಹಾಲು ಕುಡಿದು ಮನೆಗೆ ಬಂದಾಗ 3 ಗಂಟೆ. ಊಟ ಮಾಡಿ ಮಲಗಿದರೆ ಎಚ್ಚರಿಕೆಯಾದದ್ದು ರಾತ್ರಿ 10 ಗಂಟೆಗೆ. ಮತ್ತೆ ರಾತ್ರಿ ಊಟ ಮುಗಿಸಿ ಮಲಗಿಕೊಂಡು ಮಾರನೆಯ ದಿನ ಅಂದರೆ ಜೂನ್‌ 5ರಂದು ವಿಶ್ವ ಪರಿಸರದ ದಿನವಾದ್ದರಿಂದ ಅದಕ್ಕಾಗಿ 15 ಕಿಲೋಮೀಟರ್‌ ಸೈಕಲ್‌ ಸವಾರಿಗೆ ಬೆಳಿಗ್ಗೆ 6 ಗಂಟೆಗೆ ಹೊರಟಿದ್ದಾಯಿತು.
ಅನಿಸಿಕೆಗಳು