ನಿತ್ಯದಂತೆ ಇಂದು ಮುಂಜಾನೆ ಐದು ಗಂಟೆಗೆ ಎದ್ದು ೬ ಗಂಟೆಗೆ ನಡೆಯುವ ಆನಲೈನ್ ಯೋಗ ತರಗತಿಗೆ ಸಿದ್ದವಾದರೆ, ಎಷ್ಟುಹೊತ್ತಾದರೂ ತರಗತಿಯ ಕೊಂಡಿ ಬರಲೇ ಇಲ್ಲ. ಏಕೋ ಅನುಮಾನ ಬಂದು ಯೋಗಶಾಲೆಯ ವಾಟ್ಸಾಪಿನ ಗುಂಪು ನೋಡಿದ. ಅಲ್ಲಿ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಇಂದು ಆನ್‌ಲೈನ್ ತರಗತಿ ಇಲ್ಲವೆಂಬ ಸಂದೇಶ. ಜನ್ಮಾಷ್ಠಮಿಗೂ ಆನಲೈನಿಗೂ ಏನು ಸಂಬಂಧ ಗೊತ್ತಿಲ್ಲ. ನಿತ್ಯ ಯೋಗ ಮುಗಿಸಿ ಎಂಟು ಗಂಟೆಗೆ ಹೊರಡುತ್ತಿದ್ದ ಸೈಕಲ್ ಸವಾರಿ ಇಂದು ಆರೂ ಮೂವತ್ತಕ್ಕೆ ಪ್ರಾರಂಭಿಸಿದೆ.
ಸೈಕಲ್ ಸವಾರಿ ಆರಂಭಿಸುವ ಮುನ್ನ ಹೃದಯದೊಳಗಿರುವ ಯಾರನ್ನಾದರು ಹೊರಗೆ ಕರೆದು ಸವಾರಿಯ ಪೂರ್ತಿ ಸಮಯ ಜೊತೆ ಇರಲು ಪ್ರಾರ್ಥಿಸುತ್ತೇನೆ . ಇಂದು ಜನ್ಮಾಷ್ಠಮಿಯಾದ್ದರಿಂದ ಹೃದಯದ ಒಳಗೆ ಅಡಗಿದ್ದ ಕೃಷ್ಣನನ್ನು ಹೊರಗೆ ಬರಲು ಪ್ರಾರ್ಥಿಸಿದೆ. ಹೊರಗೆ ಬಂದ ಕೃಷ್ಣ ಸೈಕಲ್ ಸವಾರಿಗೆ ನನ್ನ ಜೊತೆಗೆ ಬರಲು ಕಾತುರನಾಗಿದ್ದ. ಸರಿ, ನನಗೂ ಜೊತೆಯಾಯಿತು ಎಂದು ಮುಂದೆ ಸೈಕಲ್ ಬಾರ್ ಮೇಲೆ ಪುಟ್ಟ ಕೃಷ್ಣನನ್ನು ಕೂಡಿಸಿಕೊಂಡು ಸೈಕಲ್ ಸವಾರಿ ಆರಂಭಿಸಿದೆ. ಅಲ್ಲಿಂದ ನನ್ನ ಅವನ ಮಾತು ಕಥೆ ಆರಂಭ.
ಕೃಷ್ಣ - ಇವತ್ತು ಎಷ್ಟು ದೂರ ಕರೆದುಕೊಂಡು ಹೋಗುತ್ತೀಯಾ
ನಾನು - ನೋಡೋಣ, ಎಷ್ಟು ಸಾದ್ಯವೋ ಅಷ್ಟು ದೂರ.
ಕೃಷ್ಣ - ರಸ್ತೆ ಎತ್ತರಕ್ಕೆ ಇದೆ, ನಾನು ಸೈಕಲ್ ಹೊಡೆಯಲು ಸಹಾಯ ಮಾಡಲೇ
ನಾನು - ಬೇಡ ಸದ್ಯಕ್ಕೆ ನೀನು ಕೊಟ್ಟಿರುವ ಶಕ್ತಿ ಇನ್ನೂ ನನ್ನಲ್ಲಿದೆ
ಕೃಷ್ಣ - ಇದೇನಿದು ಇಷ್ಟು ದೊಡ್ಡ ಉದ್ಯಾನ ವನ
ನಾನು - ಇದೇ ಲಾಲ್‌ಬಾಗ್, ಇದನ್ನು ಸೈಕಲ್ಲಿನಲ್ಲಿ ಒಂದೆರೆಡು ಸುತ್ತು ಸುತ್ತೋಣ
ಕೃಷ್ಣ - ನಾನು ಒಳಗೆ ಹೋಗಬೇಕು
ನಾನು - ಸೈಕಲ್ ಒಳಗೆ ಬಿಡುವುದಿಲ್ಲ ಕೃಷ್ಣ, ನಡೆಯುವವರಿಗೆ ಮಾತ್ರ ಒಳಗೆ ಪ್ರವೇಶ
ಕೃಷ್ಣ - ಸರಿ ಸೈಕಲ್ ಇಲ್ಲೇ ನಿಲ್ಲಿಸು, ನಾವೂ ಒಳಗೆ ಹೋಗಿ ನಡೆಯೋಣ
ನಾನು - ಸೈಕಲ್ ಕಳ್ಳರಿದ್ದಾರೆ, ನಿಲ್ಲಿಸಲಾಗುವುದಿಲ್ಲ. ಮತ್ತೊಂದು ದಿನ ನಿನ್ನನ್ನು ಒಳಗೆ ಕರೆದುಕೊಂಡು ಹೋಗುವೆ.
ಕೃಷ್ಣ - ಇದೇನಿದು ಸಿಂಹದ ಮರಿಗಳ ಕೆತ್ತನೆ ರಸ್ತೆ ಮಧ್ಯದಲ್ಲಿ ಇಟ್ಟಿದ್ದಾರೆ
ನಾನು - ಇದೇ ಅಶೋಕಸ್ಥಂಭ
ಕೃಷ್ಣ - ಇಲ್ಲಿ ರಸ್ತೆ ಸರಿ ಇಲ್ಲ, ತುಂಬಾ ಎತ್ತ್ಹಾಕ್ತಾ ಇದೆ, ನಾನು ನಿನ್ ಭುಜದ ಮೇಲೆ ಕೂತ್ಕೊಳ್ಳುತ್ತೇನೆ
ನಾನು - ಸರಿ, ಎಲ್ಲಿ ರಸ್ತೆ ಸರಿ ಇರಲ್ವೋ ಅಲ್ಲೆಲ್ಲಾ ನನ್ನ ಭುಜದ ಮೇಲೆ ಕುಳಿತುಕೋ
ಕೃಷ್ಣ - ಈಗಾಗಲೇ ಲಾಲ್‌ಬಾಗ್ ಸುತ್ತ ಮೂರು ಪ್ರದಕ್ಷಿಣೆ ಮಾಡಿದ್ದಾಯಿತು, ನನಗೆ ಬೇಸರವಾಗುತ್ತಿದೆ, ಬೇರೆ ದಾರಿ ಕಡೆ ನಡಿ.
ನಾನು - ಸರಿ ಇಲ್ಲಿಂದ ಜಯನಗರದ ಕಡೆ ಹೋಗೋಣ
ಕೃಷ್ಣ - ಓ ಮಾಧವನ ಪಾರ್ಕ್, ನನ್ನ ಪಾರ್ಕ. ಆದರೆ ನಾನು ಇಲ್ಲೇನೂ ಜಾಗ ಕೊಂಡುಕೊಂಡಿಲ್ಲವಲ್ಲ
ನಾನು - ಅದು ಮಾಧವನ್ ಪಾರ್ಕ್. ಉದ್ಯಾನವನಕ್ಕೆ ಮಾಧವನ್ ಅನ್ನೋರ ಹೆಸರು ಇಟ್ಟಿದ್ದಾರೆ
ಕೃಷ್ಣ - ಈಗ ನಾವು ಎಲ್ಲಿದ್ದೇವೆ
ನಾನು - ಇದು ಜಯನಗರ ೪ನೇ ಬ್ಲಾಕ್
ಕಷ್ಣ - ದೊಡ್ಡ ದೊಡ್ಡ ಅಂಗಡಿಗಳು, ಆದರೆ ಯಾಕೆಲ್ಲಾ ಮುಚ್ಚಿದೆ
ನಾನು - ಈಗ ಸಮಯ ೮ ಗಂಟೆ. ಅವಲ್ಲಾ ೧೦ ಗಂಟೆಗೆ ತೆಗೆಯುತ್ತಾರೆ.
ಕೃಷ್ಣ - ಇದೇನಿದು ಇಲ್ಲಿ ಇಷ್ಟೋಂದು ಜನ
ನಾನು - ಇದು ರಾಯರ ಮಠ
ಕೃಷ್ಣ - ಹೋದವಾರಾನೆ ರಾಯರ ಆರಾಧನೆ ಆಯ್ತಲ್ಲಾ. ಇವತ್ತು ಗುರುವಾರಾನೂ ಅಲ್ಲ. ಯಾಕಿಷ್ಟೋಂದು ಜನ
ನಾನು - ಇವತ್ತು ಜನ್ಮಾಷ್ಠಮಿ, ಎಲ್ಲಾ ಜನ ಮಠದಲ್ಲಿರೋ ಕೃಷ್ಣನನ್ನ ನೋಡಲು ಬಂದಿದ್ದಾರೆ
ಕೃಷ್ಣ - (ನನ್ನ ಮುಖವನ್ನು ನೋಡುತ್ತಾ ನಕ್ಕು) ಓ ಹಾಗಾ, ಮತ್ತೇ ನಾವು ಒಳಗೆ ಹೋಗೋಣ
ನಾನು - ಇಲ್ಲ ನಾನಿನ್ನು ಸ್ನಾನ ಮಾಡಿಲ್ಲ
ಕೃಷ್ಣ - ಓ ದೇಹ ಶುಭ್ರವಾಗಿದ್ದರೇನಾ ಕೃಷ್ಣ ಕಾಣಿಸೋದು
ನಾನು - (ಅವನ ಮುಖವನ್ನೇ ನೋಡಿ ನಕ್ಕು) ಸರಿ, ಇದು ನೋಡು ಇದು ಇನ್ನರ್ ರಿಂಗ್ ರಸ್ತೆ
ಕೃಷ್ಣ - ಇದೇನಿದು ನಮ್ಮ ತಲೆ ಮೇಲೂ ಒಂದು ರಸ್ತೆ ಇದೆ
ನಾನು - ಅದು ರಸ್ತೆ ಅಲ್ಲ, ಅದರ ಮೇಲೆ ಮೆಟ್ರೋ ರೈಲು ಓಡಾಡುತ್ತೆ
ಕೃಷ್ಣ - ಅಬ್ಬಬ್ಬಾ, ಇಲ್ಲೆಲ್ಲಾ ಎಷ್ಟೆಷ್ಟು ದೊಡ್ಡ ಮನೆಗಳು, ಒಂದೊಂದು ಮನೆಯಲ್ಲಿ ಎಷ್ಟು ಜನ ಇರ್ತಾರೆ
ನಾನು - ತುಂಬಾ ಮನೆಗಳಲ್ಲಿ ವಯಸ್ಸಾದ ಗಂಡ ಹೆಂಡತಿ ಮತ್ತು ಸಾಕಿದ್ದರೆ ಒಂದೋ ಎರಡೋ ನಾಯಿಗಳು
ಕೃಷ್ಣ - ಮತ್ತೆ ಅವರ ಮಕ್ಕಳು
ನಾನು - ಅವರೆಲ್ಲಾ ಚೆನ್ನಾಗಿ ಓದಿಕೊಂಡು ವಿದೇಶಕ್ಕೆ ಕೆಲಸ ಮಾಡಲು ಹೋಗಿದ್ದಾರೆ
ಕೃಷ್ಣ - ಪಾಪ
ನಾನು - ಯಾರಿಗೆ ಪಾಪ ಎಂದೆ
ಕೃಷ್ಣ - ನಿನಗೆ ಅರ್ಥವಾಗಲ್ಲ ಬಿಡು
ನಾನು - ಇದೇ ನೋಡು ಮಿನಿ ಫಾರೆಸ್ಟ್ , ಸಣ್ಣ ಕಾಡು
ಕೃಷ್ಣ - ಈ ಕಾಡು ಸುತ್ತೋಣ, ರಸ್ತೆ ಸಮವಾಗಿದೆ ಮತ್ತೆ ಎಲ್ಲಲ್ಲೂ ಹಸಿರು ಗಿಡಗಳು
ನಾನು - ಮುಂದೆ ರಸ್ತೆ ನೋಡು, ಹಸಿರು ಛಾವಣಿ ಹಾಕಿದ ಹಾಗಿದೆ
ಕೃಷ್ಣ - ಈ ಮನೆ ಮುಂದೆ ಯಾಕೆ ಪೋಲೀಸರು ನಿಂತಿದ್ದಾರೆ
ನಾನು - ಇದು ನಮ್ಮ ಮುಖ್ಯಮಂತ್ರಿಯವರ ಮನೆ
ಕೃಷ್ಣ - ಮಿನಿ ಫಾರೆಸ್ಟ್ ಮೂರು ಸುತ್ತು ಹಾಕಿದ್ವಿ ಸಾಕು, ಮನೆ ಕಡೆ ಹೋಗೋಣ, ಸಾಕಾಯಿತು ಸೈಕಲ್ ಸವಾರಿ.
ನಾನು - ಇಲ್ಲೇ ಶಂಕರನಾರಾಯಣ ಇಡ್ಲಿ ಹೋಟಲ್ ಇದೆ, ಇಡ್ಲಿ ತಿಂದು ಹೋಗೋಣ್ವಾ
ಕೃಷ್ಣ - ಇಲ್ಲ ಇವತ್ತು ಜನ್ಮಾಷ್ಠಮಿ, ನಾನು ಉಪವಾಸ, ನಾಳೆ ಎಷ್ಟೋಂದು ಮನೆಯಲ್ಲಿ ಊಟ ಮಾಡಬೇಕಿದೆ.
ನಾನು - ಸರಿ ಈಗ ಮನೆ ಕಡೆಗೆ ಹೊರಡುತ್ತಿದ್ದೇನೆ.
ಕೃಷ್ಣ - ನನಗೆ ನಿದ್ದೆ ಬಂದಿದೆ, ನಿನ್ನ ಬೆನ್ನ ಮೇಲೆ ಮಲಗಿರುತ್ತೇನೆ, ಮನೆ ತಲುಪಿದಾಗ ತಿಳಿಸು
ನಾನು - ಕೃಷ್ಣ ಮನೆ ಬಂತು (ನೋಡಿದರೆ ಕೃಷ್ಣ ಬೆನ್ನ ಮೇಲೆ ಇಲ್ಲವೇ ಇಲ್ಲ, ಆಗಲೇ ಹೃದಯದೊಳಗೆ ವಾಪಸ್ ಹೋಗಿದ್ದಾನೆ)
ಪಾಪ ಸುಸ್ತಾಗಿರಬೇಕು, ಮತ್ತೆ ಸಂಜೆ ನಾನು ಪಠಿಸುವ ವೇದ ಪಾಠ ಕೇಳಲು ಹೊರಬರಬೇಕಿದೆ. ಈಗ ವಿಶ್ರಮಿಸಲಿ.
ಅಲ್ಲಿಗೆ ಇಂದಿನ ೪೪ ಕಿಲೋಮೀಟರ್ ಸೈಕಲ್ ಸವಾರಿ ಮುಗಿದಿತ್ತು. ಚಕ್ರಧಾರಿಯನ್ನು ಎರಡು ಚಕ್ರಗಳ ನನ್ನ ಸೈಕಲ್ ಮೇಲೆ ಸವಾರಿ ಮಾಡಿಸಿ ನನ್ನ ಜನ್ಮಾಷ್ಠಮಿ ಉಪವಾಸ (ಹತ್ತಿರ ಇರುವುದು) ಮುಗಿಸಿದ್ದೆ.