ನೀಡುವ ಕೈಗಳಿಂದ ಬೇಡುವ ಕೈ ವರೆಗೆ
ಇದು ಸುಮಾರು 22 ವರ್ಷಗಳ ಹಳೆಯ ಮಾತು. ಆ ಸಂಜೆ ಭಾರತೀಯ ಸ್ಟೇಟ್ ಬ್ಯಾಂಕಿನ ಧಾರವಾಡ ಶಾಖೆಯಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕೆ ಮನರಂಜನಾ ಕಾರ್ಯಕ್ರಮ ಏರ್ಪಡಿಸಿದ್ದರು. ನಂತರ ರಾತ್ರಿಯ ಭೋಜನದ ವ್ಯವಸ್ಥೆಯೂ ಇತ್ತು.
ದಿನದ ಕೊನೆಯಲ್ಲಿ ಸುಮಾರು ಐವತ್ತು ಜನಕ್ಕೆ ಸಾಕಾಗುವಷ್ಟು ಭೋಜನ ಮಿಕ್ಕಿತ್ತು. ಇದನ್ನು ಯಾವುದಾದರೂ ಅನಾಥಾಶ್ರಮಕ್ಕೆ ಕೊಡೋಣವೆಂದು ಯೋಚಿಸಿದರು. ಆದರೆ ಸಮಯ ರಾತ್ರಿ ಹತ್ತು ಗಂಟೆಯಾಗಿತ್ತು, ಅಷ್ಟರಲ್ಲಿ ಎಲ್ಲಾ ಊಟ ಮಾಡಿ ಮುಗಿಸಿರುತ್ತಾರೆ.
ಆದ್ದರಿಂದ ರಾತ್ರಿ 8 ಗಂಟೆಗೆ ತಯಾರಿಸಿದ ಭೋಜನವನ್ನು ಬೆಳಗ್ಗೆ ಹತ್ತಿರದ ಅನಾಥಾಶ್ರಮದ ಮಕ್ಕಳಿಗೆ ತಿಂಡಿಯಂತೆ ಕೊಡುವುದಾಗಿ ನಿಶ್ಚಯಿಸಲಾಯಿತು. ಇದು ರಮೇಶ ಎಂಬ ಒಬ್ಬರು ಸಿಬ್ಬಂದಿಯ ಸಲಹೆಯಾಗಿತ್ತು. ಹಾಗೆ ಹಂಚುವ ಕಾರ್ಯಕ್ರಮದ ಜವಾಬ್ದಾರಿಯನ್ನು ರಮೇಶ್ ರವರೇ ತೆಗೆದುಕೊಂಡರು.
ಮಾರನೇ ದಿನ ಅನಾಥಾಶ್ರಮಕ್ಕೆ ಹೋಗುವ ಮುನ್ನ ಇನ್ನೂ ಐದು ಜನ ಸಹೋದ್ಯೋಗಿಗಳೊಂದಿಗೆ ಅನಾಥಾಶ್ರಮಕ್ಕೆ ಹೋಗಿ ಭೋಜನವನ್ನು ಮಕ್ಕಳಿಗೆ ಉಣಬಡಿಸಿದರು. ಮಕ್ಕಳ ಮುಖದಲ್ಲಿ ಏನೋ ಸಂತೋಷ ಹಾಗೂ ಧನ್ಯತಾಭಾವ.
ಇದನ್ನು ಗಮನಿಸಿದ ಈ 6 ಸಿಬ್ಬಂದಿಗೆ ಈ ಸಂತೋಷವನ್ನು ನಾವು ಮುಂದುವರಿಸಬೇಕು ಎಂಬ ಯೋಚನೆ ಬಂತು. ಮಾರನೇ ದಿನ ಬ್ಯಾಂಕಿಗೆ ಬಂದ ಈ ಸಿಬ್ಬಂದಿ ಒಂದು ಜಂಟಿ ಖಾತೆಯನ್ನು ಪ್ರಾರಂಭಿಸಿದರು. ಆರು ಜನ ಸಿಬ್ಬಂದಿಯು ತಿಂಗಳಿಗೆ ಪ್ರತಿಯೊಬ್ಬರೂ 20 ರೂಗಳಂತೆ ಖಾತೆಗೆ ಹಣ ತುಂಬಲು ಪ್ರಾರಂಭಿಸಿದರು. ಇದನ್ನು ಗಮನಿಸಿದ ಇತರ ಸಿಬ್ಬಂದಿ ವರ್ಗ ಈ ಆರು ಜನ ಏನೋ ಬಿಸಿನೆಸ್ ಮಾಡಲು ಹೊರಟಿರಬೇಕು ಎಂದು ಯೋಚಿಸಿದರು.
ಸುಮಾರು ಐದು ತಿಂಗಳು ಆದ ಮೇಲೆ ಖಾತೆಯಲ್ಲಿ 500 ರೂಪಾಯಿ ಸೇರಿದ್ದು, ಆಗ ಈ ಆರು ಜನ, ಇತರ ಸಿಬ್ಬಂದಿಗಳನ್ನು ಕರೆದು ಅವರನ್ನು ಅನಾಥಾಶ್ರಮಕ್ಕೆ ಕರೆದೊಯ್ದು 500 ರೂ ಗಳಿಗೆ ಅಲ್ಲಿದ್ದ ಅನಾಥ ಮಕ್ಕಳಿಗೆ ಊಟ ವಸ್ತ್ರ ಇನ್ನಿತರ ವಸ್ತುಗಳನ್ನು ನೀಡಿದರು. ಇದನ್ನು ಕಂಡ ಇತರ ಸಿಬ್ಬಂದಿ ವರ್ಗ ದಿಗ್ಬ್ರಮೆ ಯಾದರೂ. ಈ ಕೆಲಸದಲ್ಲಿ ನಮ್ಮನ್ನೇಕೆ ತೊಡಗಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಇಂತಹ ಉತ್ತಮ ಕಾರ್ಯಕ್ರಮಗಳನ್ನು ಮೊದಲು ನಾವು ಮಾಡಿ ನಂತರ ಇತರರನ್ನು ಸೆಳೆದಾಗ ಅದಕ್ಕೆ ಹೆಚ್ಚು ಪ್ರಾಮುಖ್ಯತೆ ಬರುತ್ತದೆ ಎಂಬುದು ರಮೇಶ್ ರವರ ಅನಿಸಿಕೆ.
ಮಾರನೆಯ ದಿನ ಈ ಖಾತೆ ಸ್ಟೇಟ್ ಬ್ಯಾಂಕ್ ಗೆಳೆಯರ ಬಳಗ ಎಂದು ಹೊಸ ಹೆಸರು ಪಡೆದುಕೊಂಡಿತು. ಆರು ಜನ ಮೊದಲ ಸದಸ್ಯರೊಂದಿಗೆ ಈಗ ಇನ್ನೂ ನಲವತ್ತು ಜನ ತೊಡಗಿಸಿಕೊಂಡರು. ದಿನೇ ದಿನೇ ಇದರ ಸಮಾಜಸೇವೆಯ ಕಾರ್ಯಚಟುವಟಿಕೆ ಕೇವಲ ಅನಾಥಾಶ್ರಮಕ್ಕೆ ಅಲ್ಲದೆ ಸ್ಲಂಗಳಲ್ಲಿ ನೆಲೆಸುತ್ತಿದ್ದ ಜನರಿಗಾಗಿ, ಬಿಕ್ಷುಕರಿಗಾಗಿ ಹಾಗೂ ಶಾಲೆಯಲ್ಲಿ ಓದುತ್ತಿದ್ದ ಬಡ ಮಕ್ಕಳಿಗೆ ವಿಸ್ತರಿಸಲಾಯಿತು.
ಈಗ 22ರ ವಸಂತದಲ್ಲಿ ಇರುವಂತಹ ಈ ಗೆಳೆಯರ ಬಳಗ ಸುಮಾರು ನೂರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಮೂಲ ಉದ್ದೇಶವಾದ ಸಮಾಜ ಸೇವೆ ಒಂದೇ ಗುರಿಯಾಗಿದ್ದು ನೀಡುವ ಕೈಗಳಿಂದ ಬೇಡುವ ಕೈ ವರೆಗೆ ಸಹಾಯವನ್ನು ವರ್ಗಾಯಿಸುತ್ತಾ ಎತ್ತರಕ್ಕೆ ನಿಂತಿದೆ. ಅಷ್ಟೇ ಅಲ್ಲದೆ ವರ್ಷಕ್ಕೊಮ್ಮೆ ಸದಸ್ಯರುಗಳು ಭೇಟಿ ಮಾಡಿ ಯಾವ ರೀತಿಯಲ್ಲಿ ಈ ಚಟುವಟಿಕೆಗಳನ್ನು ವಿಸ್ತರಿಸಬಹುದು ಎಂದು ಸಮಾಲೋಚಿಸುತ್ತದೆ.
ಇಂತಹ ಅದ್ಭುತ ಕಾರ್ಯವನ್ನು ನಡೆಸಿಕೊಂಡು ಬಂದಿರುವ ಸ್ಟೇಟ್ ಬ್ಯಾಂಕ್ ಗೆಳೆಯರ ಬಳಗದ 2018ರ ವಾರ್ಷಿಕ ಮಿಲನ ದಿನದಲ್ಲಿ ಪಾಲ್ಗೊಂಡಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ.