ಇದೇನಿದು, ಪ್ರವಾಸ ಕಥನ ಎಂದು ಹೇಳಿ ಶಾಸ್ತ್ರಿಗಳು ಶೀರ್ಷಿಕೆ ನಕ್ಸಲರ ಬಗ್ಗೆ ಕೊಟ್ಟಿದ್ದಾರೆಲ್ಲಾ, ತಪ್ಪಾಯಿತೇ ಎಂದು ನೀವು ಯೋಚಿಸುತ್ತಿರುವುದು ನನಗೆ ಗೊತ್ತಾಯಿತು.. ತಪ್ಪೇನಿಲ್ಲಾ ಓದುತ್ತಾ ಹೋದರೇ ನಿಮಗೆ ತಿಳಿಯುತ್ತೆ.
ಇಸವಿ 2002, ನಾನು, ನನ್ನ ಅಣ್ಣ ಶ್ರೀನಾಥ ಮತ್ತು ನಮ್ಮ ಎದುರು ಮನೆಯ ಹುಡುಗ ವೆಂಕಟೇಶ ಆಗುಂಬೆ ಪ್ರವಾಸಕ್ಕೆ ಹೊರಟೆವು.
ಈಗಿನ ಆಗುಂಬೆ ಪ್ರವಾಸವೇ ಬೇರೆ ತರಹ ಬಿಡಿ ; ಒಂದೆರೆಡು ದಿನ ಹೋಮ್ ಸ್ಟೇಯಲ್ಲಿ ಇರುವುದು, ಅಲ್ಲಿ ಸಮಯ ಸಮಯಕ್ಕೆ ಅವರು ಮಾಡಿಕೊಡುವ ಮಲೆನಾಡಿನ ಊಟವನ್ನು ಸವಿಯುತ್ತಾ ಆಗುಂಬೆಯ ಮಳೆಯನ್ನು ತೊಟ್ಟಿಯ ಮನೆಯಿಂದ ವೀಕ್ಷಿಸುವುದು, ಸೂರ್ಯಾಸ್ತ ಕಾಣುವ ಜಾಗಕ್ಕೆ ಹೋಗಿ ಮೋಡಗಳ ಅಡ್ಡಗೋಡೆಯಿಂದ ಸೂರ್ಯನ ದರ್ಶನವಾಗದಿದ್ದರೂ ಅಲ್ಲಿ ಮಾರುವ ಬೇಲ್ಪುರಿ, ಸೌತೇಕಾಯಿ ತಿನ್ನುವುದು, ನಂತರ ಬೆಂಗಳೂರಿಗೆ ಹಿಂದಿರುಗುವುದು.
ಆದರೆ ಆಗಿನ ನಮ್ಮ ಪ್ರವಾಸವೇ ಬೇರೆ ತರಹ. ಚಿಕ್ಕದೊಂದು ಬರ್ನರ್ ಸಹಿತ ಗ್ಯಾಸ ಸಿಲಿಂಡರ್ ಜೊತೆ ನಾವು ಚಾರಣಕ್ಕೆ ಹೋಗುತ್ತಿದ್ದೆವು. ಬಸ್‌ನಲ್ಲಿ ಸಿಲಿಂಡರ್ ತೆಗೆದುಕೊಂಡು ಹೋಗುವುದಕ್ಕೆ ಕಂಡಕ್ಟರ್ ಹಾಗೂ ಬಸ್ ಡ್ರೈವರ್‌ಗೆ ವಿನಂತಿಸಿಕೊಂಡರೆ ಸಾಕಾಗುತ್ತಿತ್ತು. ಅಕ್ಕಿ, ಬೇಳೆ, ತರಕಾರಿ, ಬ್ರೂ ಕಾಫಿ ಪುಡಿ, ಹಾಲಿನ ಪುಡಿ, ಗೊಜ್ಜವಲಕ್ಕಿ ಇನ್ನೂ ಏನೇನೋ ಆಹಾರ ಸಾಮಗ್ರಿಗಳನ್ನು ನಾವೇ ಕೊಂಡೊಯ್ಯುತ್ತಿದ್ದೆವು. ಜಿಮ್‌ಗೆ ಹೋಗುತ್ತಿದ್ದ ನಾನಂತೂ ಹಿಮಾಲಯದ ಶರ್ಪಾಗಳಂತೆಯೇ ಮೈಕಟ್ಟು ಬೆಳೆಸಿದ್ದೆ ಆಗ. ಹಾಗಾಗಿ ಹೆಚ್ಚು ತೂಕ ನನ್ನ ಬ್ಯಾಗಿನದೇ. ಇನ್ನು ರಾತ್ರಿಯ ಹೊತ್ತು ತಂಗುವುದು ನಮ್ಮದೇ ಟೆಂಟಿನಲ್ಲಿ. ಅಣ್ಣನ ಗೆಳೆಯನ ಟೆಂಟ್ ಅದು. ನಾಲ್ಕು ಜನ ಅದರಲ್ಲಿ ಮಲಗಲು ಸಾಧ್ಯವಿತ್ತು. ಮತ್ತು ಮಳೆಯ ಛತ್ರಿಯಂತಿದ್ದ ಟೆಂಟ್ ಜೋಡಿಸಲು ಸುಮಾರು 30 ನಿಮಿಷ ಬೇಕಾಗುತ್ತಿತ್ತು.
ಬೆಂಗಳೂರಿನಿಂದ ರಾತ್ರಿಯ ಬಸ್ ಹತ್ತಿ ಬೆಳಿಗ್ಗೆ ನಾವು ಆಗುಂಬೆ ತಲುಪಿದಾಗ ಸುಮಾರು 8 ಗಂಟೆ. ಬಸ್ಸಿನಿಂದ ನಾವು ಇಳಿಯುತ್ತಿದ್ದಾಗಲೇ ನಮ್ಮನು ಪ್ರವಾಸಿಗರೆಂದು ಗುರುತಿಸಿದ ನಾಯಿಯೊಂದು ಪ್ರವಾಸದ ಕೊನೆಯವರೆವಿಗೂ ನಮ್ಮೊಂದಿಗಿತ್ತು. ಬಸ್ಟಾಂಡಿನ ಒಂದು ಹೋಟಲ್ಲಿನಲ್ಲಿ ಮಂಗಳೂರು ಬನ್ಸ್ ತಿಂದು, ಕಶಾಯ ಕುಡಿದು ನಮ್ಮ ಚಾರಣ ಶುರು. ಎತ್ತ ಕಡೆ ಎಂದು ಕೇಳುತ್ತೀರಾ. ಕಾಡಿನ ಮಧ್ಯೆ ಬರ್ಕಣ ಎಂಬ ಒಂದು ಸೀಮೆಂಟ್ ಕಟ್ಟೆ ಇರುವ ಜಾಗಕ್ಕೆ. ಇದು ಬ್ರಿಟೀಶರು ಆಗಿನ ಕಾಲದಲ್ಲಿ ಕಟ್ಟಿದ ಸೀಮೆಂಟ್ ಕಟ್ಟೆಯಂತೆ. ನಿಖರವಾಗಿ ಆ ಜಾಗ ಬಸ್ ತಂಗುದಾಣದಿಂದ ಎಷ್ಟು ದೂರ ಜ್ಞಾಪಕ ಇಲ್ಲ, ಆದರೆ ನನ್ನ ಪ್ರಕಾರ ಊರಿನಲ್ಲಿ ಒಂದೆರೆಡು ಕಿಲೋಮೀಟರ್ ನಡೆದು ನಂತರ ಕಾಡಿನಲ್ಲಿ ಮೂರ್ನಾಲ್ಕು ಕಿಲೋಮೀಟರ್ ನಡೆದರೆ ಸಾಕು ಅನಿಸುತ್ತೆ.
ಈ ಬರ್ಕಣಕ್ಕೆ ಹೋಗುವ ದಾರಿಯಲ್ಲಿ ಜೋಗಗುಂಡಿ ಎಂಬ ಒಂದು ಚಿಕ್ಕ ನೀರಿನ ಜರಿ ಹರಿಯುತ್ತೆ. ನೀರಿನ ಮಧ್ಯೇಯೇ ದೊಡ್ಡ ದೊಡ್ಡ ಬಂಡೆಗಳಿದ್ದು ಸ್ನಾನ ಮಾಡಲು ಅನುಕೂಲವಾಗುವಂತಿದೆ. ಸ್ನಾನ ಮತ್ತು ಇತರ ಪ್ರಾತಃಕರ್ಮಗಳನ್ನೆಲ್ಲಾ ಮುಗಿಸಿ ಅಲ್ಲಿಂದ ಬರ್ಕಣದ ಕಡೆಗೆ ಹೆಜ್ಜೆ ಹಾಕಿದೆವು.
ಶನಿವಾರದ ಬೆಳಗಿನ ತರಗತಿಯನ್ನು ಮುಗಿಸಿಕೊಂಡು ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಆರನೇ ತರಗತಿ ಹುಡುಗ ಸತೀಶ (ಹೆಸರು ಸರಿಯಾಗಿ ಜ್ಞಾಪಕವಿಲ್ಲ). ಸ್ಪಷ್ಟವಾದ ಕನ್ನಡದಲ್ಲಿ ಮಾತನಾಡುತ್ತಾ ನಮ್ಮೊಂದಿಗೆ ಅವನೂ ಬರ್ಕಣದ ಕಡೆಗೆ ಹೆಜ್ಜೆ ಹಾಕಿದ. ದಾರಿಯಲ್ಲಿ ಅವನ ಹಳ್ಳಿಯ ಒಬ್ಬ ಆಸಾಮಿ ಸೈಕಲ್ ಮೇಲೆ ಬರುತ್ತಿದ್ದ. ಈ ಸತೀಶ ಅವನಿಗೆ "ನಾನು ಈ ಪ್ರವಾಸಿಗರಿಗೆ ಬರ್ಕಣಕ್ಕೆ ದಾರಿ ತೋರಿಸಲು ಹೋಗುತ್ತಿದ್ದೇನೆ" ಎಂದು ಹೇಳಿದ. ನಮಗೆ ದಾರಿ ಗೊತ್ತಿದೆ ನೀನು ಮನೆಗೆ ಹೋಗು ಎಂದರೂ ಸತೀಶ ನಮ್ಮ ಮಾತು ಕೇಳಲಿಲ್ಲ. "ಇರಲಿ ನಮ್ಮ ಹಳ್ಳಿಯ ಆಸಾಮಿ ನಮ್ಮ ಮನೆಯವರಿಗೆ ತಿಳಿಸಿರುತ್ತಾನೆ, ಅವರೇನು ಹೆದರುವುದಿಲ್ಲ ಬಿಡಿ" ಎಂದು ಹೇಳಿ ರಾತ್ರಿ ನಮ್ಮ ಜೊತೆಯೇ ಇರುವುದಾಗಿ ನಿಶ್ಚಯಿಸಿದ. ಮಧ್ಯಾಹ್ನಕ್ಕೆ ಟೊಮೇಟೋ ಸೂಪ್, ತರಕಾರಿ ಹುಳಿ ಎಲ್ಲಾ ನೀರಿನ ಜರಿಯ ಹತ್ತಿರವೇ ತಯಾರಿ ಮಾಡಿದ್ದೆವು.
ಬರ್ಕಣಕ್ಕೆ ಬಂದಾಗ ಸುಮಾರು 1 ಗಂಟೆ ಇರಬಹುದು. ಬರ್ಕಣದ ಸೀಮೆಂಟ್ ಸ್ಲಾಬ್ ಮೇಲೆ ನಿಂತರೆ ಪೂರ್ತಿ ಆಗುಂಬೆಯ ದಟ್ಟ ಹಸಿರಾದ ಕಾಡನ್ನು ವೀಕ್ಷಿಸಬಹುದು. ನೇರಕ್ಕೆ ಸುಮಾರು ಎಷ್ಟೋ ಕಿಲೋಮೀಟರ್ ದೂರದಲ್ಲಿ ಸೀತಾ ನದಿಯ ಜಲಪಾತ ಕೂಡ ನೋಡಬಹುದು. ಸೀಮೆಂಟ್ ಸ್ಲಾಬಿನಿಂದ ಸ್ವಲ್ಪ ಮುಂದೆ ಹೋದರೆ ಸಾವಿರಾರು ಅಡಿಗಳ ಪ್ರಪಾತ. ಈ ಸೀಮೆಂಟ್ ಸ್ಲಾಬ್ ಮೇಲೆ ನಮ್ಮ ಟೆಂಟ್ ಕಟ್ಟಿದೆವು. ಮಾಡಿಟ್ಟಿದ್ದ ಅಡುಗೆಯನ್ನು ಮತ್ತೆ ಬಿಸಿ ಮಾಡಿ ಆ ಕೊರೆಯುವ ಛಳಿಯಲ್ಲಿ ಬಿಸಿಯಾದ ಟೊಮೆಟೋ ಸೂಪ್ ಕುಡಿದು ಊಟ ಮಾಡಿದ್ದು ಜ್ಞಾಪಿಸಿಕೊಂಡರೆ ಈಗಲೂ ಬಾಯಲ್ಲಿ ನೀರು ತರಿಸುತ್ತದೆ.
ಸತೀಶನ ಕೈಯಲ್ಲಿ ಚಂದಮಾಮ ಕತೆಗಳನ್ನು ಮತ್ತು ಅವನ ತರಗತಿಯ ಪಠ್ಯವನ್ನು ಓದಿಸಿದೆವು. ನಾನು ಮಂಕುತಿಮ್ಮನ ಕಗ್ಗವನ್ನು ಓದಿ ಅದರ ಬಗ್ಗೆ ಎಲ್ಲರೂ ಸ್ವಲ್ಪ ಹೊತ್ತು ಚರ್ಚೆ ಮಾಡಿದೆವು. ಕತ್ತಲಾಗುವ ಮುನ್ನ ರಾತ್ರಿಯ ಅಡುಗೆ ತಯಾರಾಗಬೇಕಿತ್ತು. ಅದಕ್ಕಾಗಿ ನನ್ನೊಬ್ಬನನ್ನು ಬಿಟ್ಟು ಮಿಕ್ಕ ಮೂವರು ಮತ್ತೆ ಜೋಗಗುಂಡಿಗೆ ಹೊರಟರು. ಬರ್ಕಣದಲ್ಲಿ ಒಬ್ಬನೇ ಪಕ್ಷಿಗಳ ಗಾನವನ್ನು ಕೇಳಿಸಿಕೊಳ್ಳುತ್ತಾ ಇದ್ದದ್ದೇನೋ ನಿಜ, ಆದರೆ ಕಾಡು ಪ್ರಾಣಿ ಯಾವುದಾದರೂ ಬರಬಹುದೆಂಬ ಹೆದರಿಕೆ ಈ ನಿಸರ್ಗದ ವಿಸ್ಮಯವನ್ನು ಅನುಭವಿಸಲು ಬಿಡಲಿಲ್ಲ. ಗಾಳಿಗೆ ಯಾವುದಾದರು ಪ್ಲಾಸ್ಟಿಕ್ ಕವರ್ ಸದ್ದಾದರೆ ಆ ಕಡೆ ನೋಡುವುದು, ಯಾವುದಾದರೂ ಪ್ರಾಣಿ ಬಂತೆ ಎಂಬ ಶಂಕೆ. ಮನದಲ್ಲೇ ಒಬ್ಬನೇ ಅದೆಷ್ಟು ದೇವರ ಸ್ತೋತ್ರಗಳನ್ನು ಹೇಳಿಕೊಂಡೆನೋ ಜ್ಞಾಪಕವಿಲ್ಲ.
ಈ ಮೂವರು ಬಂದ ಕೂಡಲೇ ಮನದಲ್ಲೇನೋ ಧೈರ್ಯ. ಕತ್ತಲಾಗುವು ಮುನ್ನ ಊಟ ಮುಗಿಸಿ, ರಾತ್ರಿ ಕ್ಯಾಂಪ್‌ಫೈರ್‌ಗಾಗಿ ಒಣಗಿದ ಕಟ್ಟಿಗೆಗಳನ್ನು ಹುಡುಕಿತಂದು ಸೀಮೆಂಟ್ ಸ್ಲಾಬ್ ಮೇಲೆ ಜೋಡಿಸಿಟ್ಟೆವು. ರಾತ್ರಿ ಬೆಂಕಿ ಕಾಯಿಸಿಕೊಳ್ಳುತ್ತಾ ನಮಗೆ ಗೊತ್ತಿದ್ದ ಚಿತ್ರಗೀತೆಗಳು, ಭಾವಗೀತೆಗಳನ್ನು ಹಾಡುತ್ತಾ ಸುಸ್ತಾಗಿ ಟೆಂಟ್ ಒಳಗೆ ನಿದ್ದೆಗೆ ಶರಣಾದೆವು.. ಕಾಡಿನಲ್ಲಿ ನಡೆದು ಹೆಚ್ಚು ದಣಿದಿದ್ದರಿಂದ ನಿದ್ದೇ ಜೋರಾಗಿಯೇ ಹತ್ತಿತ್ತು.
ಸುಮಾರು ರಾತ್ರಿ 12 ಗಂಟೆ ಇರಬಹುದು. ಟೆಂಟ್‌ನ ಹೊರಗೆ ಜನರ ಮಾತುಗಳು ಕೇಳಿಸಲು ಪ್ರಾರಂಭವಾಯಿತು. ಏನಾಗುತ್ತಿದೆ ಎಂದು ನಾವು ನೋಡುವಷ್ಟರಲ್ಲಿ ಸುಮಾರು 50 ಜನ ಕೈಯಲ್ಲಿ ಬೆಂಕಿಯ ಪಂಜುಗಳನ್ನು ಹಿಡಿದು ನಮ್ಮ ಟೆಂಟ್ ಸುತ್ತ ನಿಂತಿದ್ದರು. ಕೆಲವರು ಟೆಂಟ್ ಒಳಗೇ ಏನೋ ಹುಡುಕುತ್ತಿದ್ದರೆ, ಮತ್ತೆ ಕೆಲವರೂ ಟೆಂಟ್ ಸುತ್ತ ಹುಡುಕಲಾರಂಭಿಸಿ ಏನೂ ಸಿಗಲಿಲ್ಲ ಎಂದು ಜೋರಾಗಿ ಹೇಳಿದರು. ಅವರು ಹುಡುಕುತ್ತಿದ್ದದ್ದು ತುಪಾಕಿ, ಮದ್ದು ಗುಂಡು ಎಂದು ಆಮೇಲೆ ನಮಗೆ ತಿಳಿಯಿತು. ಸತೀಶ ಆ ಗುಂಪಿನಲ್ಲಿದ್ದ ತನ್ನ ತಂದೆಯನ್ನು ಗುರುತಿಸಿದ. ಅವರು ಇವನಲ್ಲಿ ಬಂದು, "ಏನ್ ಹೇಳಿಕೊಟ್ಟರು, ಬೆಳಗ್ಗೆ ಇಂದ ಇವರ ಜೊತೆ ಏನ್ ಮಾಡ್ತಿದ್ದೆ" ಎಂದು ಜೋರಾಗಿ ಕೇಳಿದರು. ಅವನು ತಾನು ಓದಿದ ತರಗತಿಯ ಪಠ್ಯದ ಬಗ್ಗೆ ಚಂದಮಾಮದ ಕಥೆಗಳ ಬಗ್ಗೆ, ಕಗ್ಗದ ಚರ್ಚೆಯ ಬಗ್ಗೆ ಮತ್ತು ಹಾಡಿದ ಹಾಡುಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ. ಅಲ್ಲಿಯವರೆಗೆ ಆ ಜನರು ನಮ್ಮನು ಮಾತನಾಡಲು ಬಿಟ್ಟೇ ಇರಲಿಲ್ಲ.
"ನೀವು ನಕ್ಸಲರ" ಎಂಬುದು ನಮ್ಮಕಡೆಗೆ ಅವರ ಮೊದಲ ಪ್ರಶ್ನೆ. ನಾವು ನಮ್ಮ ಗುರುತಿನ ಚೀಟಿಯನ್ನು ತೋರಿಸಿ ನಾವು ಚಾರಣಕ್ಕಾಗಿ ಮಾತ್ರ ಬೆಂಗಳೂರಿನಿಂದ ಬಂದಿರುವುದೆಂದು ತಿಳಿಸಿದಾಗ ಅವರಿಗೆ ನಮ್ಮಲ್ಲಿ ನಂಬಿಕೆ ಬಂದಿತು. "ಅವರೆಲ್ಲಾ ಮನೆಗೆ ವಾಪಸ್ ಹೋಗು ಎಂದರು, ನಾನೇ ಹಟ ಮಾಡಿ ಇಲ್ಲಿರುತ್ತೇನೆ ಎಂದೆ" ಎಂದು ಸತೀಶ ಹೇಳಿದ. "ಅಲ್ಲಾ ಸಾರ್, ಅವನ ತಾಯಿ ಒಂದೇ ಸಮಾ ಅಳ್ತಾ ಇದ್ದಾಳೆ, ನೀವಾದರು ಸ್ವಲ್ಪ ಬುದ್ದೀ ಹೇಳೋದ ಅಲ್ವೇ" ಎಂದು ಸತೀಶನ ಅಪ್ಪ ನಮ್ಮನ್ನು ಕೇಳಿದಾಗ ನಮ್ಮ ಬಳಿ ಅವರಿಗೆ ಉತ್ತರಿಸಲು ಪದಗಳೇ ಇರಲಿಲ್ಲ. ಆ ರಾತ್ರಿಯ ಪಂಜುಗಳ ಬೆಳಕಲ್ಲೇ ನಮ್ಮೊಂದಿಗೆ ಫೋಟೋ ತೆಗೆಸಿಕೊಂಡರು. ನಂತರ ಹೊರಡುವಾಗ, "ಹುಡುಗನಿಗೆ ಒಳ್ಳೇ ಪಾಠಾನೇ ಹೇಳಿಕೊಟ್ಟಿದ್ದೀರಿ, ರಾತ್ರಿ ಇಲ್ಲೇ ಇರಲಿ ಬಿಡಿ, ಬೆಳಿಗ್ಗೆ ನೀವು ವಾಪಸ್ ಹೋಗುವಾಗ ಊರಿಗೆ ಬರಲಿ" ಎಂದು ಹೇಳಿ ಸತೀಶನನ್ನು ನಮ್ಮೊಂದಿಗೆ ಬಿಟ್ಟು ಹೋದರು. ಸಜೀವ ದಹನ ಎಂಬುದು ಏನೆಂಬುದನ್ನು ಪುಸ್ತಕದಲ್ಲಿ ಓದಿದ್ದೆ, ಆದರೆ ಆ ರಾತ್ರಿ ಅದರ ಅನುಭವವೂ ಆಗುತ್ತೇನೋ ಎಂಬುವ ತನಕ ನನ್ನ ಅಪನಂಬಿಕೆ ಹೋಗಿತ್ತು.
ಮಾರನೇ ದಿನ, ಸತೀಶನನ್ನು ಅವನ ಹಳ್ಳಿಗೆ ಹೋಗಲು ತಿಳಿಸಿ, ನಾವು ಸಂಜೆಯವರೆಗೂ ಅಲ್ಲೇ ಬರ್ಕಣದಲ್ಲಿ ಸಮಯ ಕಳೆದು ನಂತರ ಆಗುಂಬೆಗೆ ಬಂದು ರಾತ್ರಿಯ ಬಸ್ ಹತ್ತಿದೆವು. ಎಲ್ಲೋ ಕಳೆದು ಹೋದ ಮಗನ ಬಗ್ಗೆ ತಂದೆ ತಾಯಿಗೆ ಇರುವ ಆತಂಕ ನಾವು ಈ ಚಾರಣದಲ್ಲಿ ಅರಿತೆವು ಮತ್ತು ಇದು ನಮ್ಮ ಮುಂದಿನ ಎಲ್ಲಾ ಚಾರಣಕ್ಕೆ ಒಳ್ಳೇ ಪಾಠ ಕಲಿಸಿತು.
ನಕ್ಸಲ್ ಚಟುವಟಿಕೆ ಹೆಚ್ಚಾದ ನಂತರ ಬರ್ಕಣಕ್ಕೆ ಹೋಗಲೂ ಅರಣ್ಯ ಇಲಾಖೆ ಯಾರಿಗೂ ಅವಕಾಶ ಕೊಡುತ್ತಿಲ್ಲವಂತೆ. ಇನ್ನೂ ನೂರು ವರ್ಷವಾದರೂ ಆ ಬರ್ಕಣದ ಸಿಮೆಂಟ್ ಕಟ್ಟೆ ಹಾಗೆ ಇರುತ್ತದೆ ಎಂಬುವುದರಲ್ಲಿ ಅನುಮಾನವಿಲ್ಲ. ಮುಂದೆಂದಾದರೂ ಇಲಾಖೆ ಮತ್ತೆ ಮನಸ್ಸು ಮಾಡಿ ಚಾರಣಿಗರಿಗೆ ಈ ಬರ್ಕಣವನ್ನು ತೆರೆದಿಟ್ಟರೆ ನಮ್ಮ ಅದೃಷ್ಟವಷ್ಟೆ.
ಈ ಚಾರಣದ ಹಾಗೂ ಅನುಭವಗಳ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದೇನೆ.