ಶೀರ್ಷಿಕೆ ನೋಡಿ, ಯಾವುದೋ ಪುರಾಣದ ಕಥೆ ಶಾಸ್ತ್ರಿಗಳು ಹೇಳಲು ಹೊರಟಿದ್ದಾರೆ ಅಂದುಕೊಳ್ಳಬೇಡಿ. ಇದು ಕಥೆಯಲ್ಲ, ನನ್ನ ಸ್ವಂತ ಅನುಭವವಷ್ಟೆ.
ಕರ್ನಾಟಕದ ಕಬಿನಿಯ ಕಾಡುಪ್ರದೇಶದಲ್ಲಿರುವ ಹುಲಿ ಎಂದರೆ ಪ್ರಪಂಚದ ಮೂಲೆಮೂಲೆಯಲ್ಲಿರುವ ವನ್ಯಜೀವಿ ಪ್ರೇಮಿಗಳಿಗೂ ಅದೇನೋ ಆಕರ್ಷಣೆ. ಇದಕ್ಕೆ ಎರಡು ಕಾರಣ, ಒಂದು ಇಲ್ಲಿಯ ಹುಲಿಯ ಮೇಲಿರುವ ಪಟ್ಟೆಗಳು, ಬಣ್ಣ ಹಾಗೂ ಮೈಕಟ್ಟು ಮತ್ತೊಂದು ಆ ಹುಲಿಯ ಹಿಂದಿರುವ ಕಬಿನಿಯ ಕಾಡಿನ ಚೆಂದದ ಹಿನ್ನಲೆ.
ಬರಿಯ ಹೊಗಳಿಕೆಯ ಮಾತೇ ಇದ್ದಾಗ, ಶೀರ್ಷಿಕೆಯಲ್ಲಿ "ಶಾಪ" ಪದ ಯಾಕೆ ಬಂತು ಅಂತ ಕೇಳ್ತಿದ್ದೀರಾ?. ಅದಕ್ಕೆ ಕಾರಣ ಇದೆ. ಸುಮಾರು 6 ವರ್ಷದಿಂದ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು ಕಬಿನಿ ಕಾಡಿಗೆ ಹೋಗುತ್ತಿದ್ದೆ. ಆದರೆ 8 ರಿಂದ 10 ಸಫಾರಿಯಲ್ಲಿ ಒಮ್ಮೆಯೂ ಹುಲಿ ಕಂಡಿರಲಿಲ್ಲ. ನನ್ನ ಕಥೆ ಹೀಗಿದ್ದರೆ, ನನ್ನ ಗೆಳೆಯರದು ಸುಮಾರು 15 ವರ್ಷದಿಂದ ಈ ಭೇಟೆ ಅಲ್ಲ ಭೇಟಿ. ಕಡೆಗೂ ಇನ್ನೆಂದಿಗೂ ಕಬಿನಿಗೆ ಹೋಗಬಾರದೆಂದು ನಿರ್ಧರಿಸೇಬಿಟ್ಟೆವು. ಆದರೆ ಕೋವಿಡ್ ಪಿಡುಗು ಪ್ರಪಂಚದಾದ್ಯಂತ ಬಂದ ಮೇಲೆ ನಮ್ಮ ಪ್ರವಾಸದ ಯೋಜನೆಗಳು ಪೂರ್ಣ ಸ್ಥಗಿತಗೊಂಡಿತು. ಕಳೆದ ಎರಡು ವರ್ಷದಲ್ಲಿ ಕೇವಲ ಗೋಪೀನಾಥಂ ಎಂಬ ಕಾಡಿಗೆ ಹೋಗಿದ್ದು ಅಷ್ಟೇ. ಈಗ ಕೋವಿಡ್ ಸಮಸ್ಯೆ ಕಮ್ಮಿ ಆಗಿರುವುದು ತಿಳಿದು ಮತ್ತೆ ಹೊಸದಾಗಿ ಪ್ರವಾಸ ಆರಂಭಮಾಡಲು ನಿರ್ಧರಿಸಿದೆವು. ಎಲ್ಲರ ಮನಸ್ಸಿನಲ್ಲೂ ಒಂದೇ ಆಸೆ, ಇದೊಂದು ಸಲ ಕಬಿನಿಗೆ ಹೋಗೋಣ, ಹುಲಿ ಸಿಗದಿದ್ದರೆ ಇದೇ ಕಬಿನಿಗೆ ನಮ್ಮ ಕಡೇ ಭೇಟಿ ಎಂದು ನಿರ್ಧರಿಸಿದೆವು.
ಅರಣ್ಯ ಇಲಾಖೆಯು ಕಬಿನಿಯ ದಮ್ಮನಕಟ್ಟೆ ಎಂಬ ಜಾಗದಿಂದ ನಡೆಸುವ ಸಫಾರಿಗೆ ಫೆಬ್ರವರಿ 14 ಮತ್ತು 15ರಂದು ಮೂರು ಸಫಾರಿಗಳನ್ನು ಕಾದಿರಿಸಿದೆವು. ಈ ಸಲ ನಮ್ಮ ಅದೃಷ್ಟ ಚೆನ್ನಾಗಿತ್ತು. ಮೊದಲ ಮತ್ತು ಎರಡನೇ ಸಫಾರಿಯಲ್ಲಿ ಒಂದೊಂದು ಹುಲಿ ಮತ್ತು ಮೂರನೇ ಸಫಾರಿಯಲ್ಲಿ ನಾಲ್ಕು ಹುಲಿಗಳನ್ನು ನಾವು ನೋಡಿದೆವು. ಅಲ್ಲಿಗೆ ನಮಗೆ ಶಾಪ ವಿಮೋಚನೆಯಾಗಿರುವುದು ಖಾತ್ರಿಯಾಯಿತು.
ಇಷ್ಟೆಲ್ಲಾ ಹೇಳಿದ ಮೇಲೆ ನಿಮಗೆ ಸಫಾರಿಯ ಬಗ್ಗೆ ಮಾಹಿತಿ ನೀಡಲೇ ಬೇಕಲ್ಲವೇ. ಕಬಿನಿಯ ಸುತ್ತಮುತ್ತ ಸಾಕಷ್ಟು ಕಾಟೇಜ್‌ಗಳು ಇದ್ದು ಅಲ್ಲಿ ನೀವು ಉಳಿದುಕೊಳ್ಳಬಹುದು. ಎರಡು ದಿನಕ್ಕೆ ಸುಮಾರು 5 ರಿಂದ 6 ಸಾವಿರ ರೂಪಾಯಿಗಳು ಒಬ್ಬರಿಗೆ ತಗಲುತ್ತದೆ. ಇದರಲ್ಲಿ ಮೂರು ಸಫಾರಿಗಳಿಗೆ ಅವಕಾಶವಿದ್ದು ಪ್ರತಿ ಸಫಾರಿಗೆ ನೀಡಬೇಕಾಗಿರುವ 600 ರೂಪಾಯಿಗಳು ಸೇರಿಕೊಂಡಿರುತ್ತದೆ. ಬೆಳಿಗಿನ ಸಫಾರಿ 6.30ರಿಂದ 9 ಗಂಟೆ ವರೆಗೆ ಹಾಗೂ ಸಂಜೆಯ ಸಫಾರಿ 3.30ರಿಂದ 6 ಗಂಟೆ ವರೆಗೆ. ಸಫಾರಿ ಆರಂಭವಾಗುವುದಕ್ಕೆ 15 ನಿಮಿಷ ಮುಂಚೆ ದಮ್ಮನಕಟ್ಟೆ ಫಾರೆಸ್ಟ್ ಗೇಟ್ ಬಳಿ ನಾವಿರಬೇಕು. ಅರಣ್ಯ ಇಲಾಖೆ 4 ಬಸ್ಸುಗಳನ್ನು ಸಫಾರಿಗೆ ಉಪಯೋಗಿಸುತ್ತಾರೆ ಮತ್ತು ಪ್ರತಿಯೊಂದು ಬಸ್ಸಿನಲ್ಲೂ ಸುಮಾರು 20 ಸೀಟ್‌ಗಳಿರುತ್ತದೆ. ಆನಲೈನ್ ಮೂಲಕ ಸಫಾರಿ ಟಿಕೇಟ್ ಖರೀದಿಸುವಾಗ ಸೀಟ್ ಸಂಖ್ಯೆಗಳು ಕೂಡಾ ಕೊಟ್ಟಿರುತ್ತಾರೆ. ಕಿಟಕಿಯ ಸೀಟ್ ಸಿಕ್ಕರೆ ನಮ್ಮ ಅದೃಷ್ಟ, ಇಲ್ಲವಾದರೂ ಕಿಟಕಿಗಳು ದೊಡ್ಡದಾಗಿದ್ದು ಎಲ್ಲರಿಗೂ ಫೋಟೋ ತೆಗೆಯಲು ಅವಕಾಶವಿರುತ್ತದೆ. ನೀವು ಬಳಸುವ ಕ್ಯಾಮೆರಾದ ಗುಣಮಟ್ಟದ ಮೇಲೆ ನೀವು ಕ್ಯಾಮೆರಾ ಶುಲ್ಕ ಸುಮಾರು 200 ರೂಪಾಯಿಯಿಂದ 1500 ರೂಪಾಯಿಯ ವರೆಗೆ ಪ್ರತಿ ಸಫಾರಿಗೆ ನೀಡಬೇಕು. ನನ್ನ ಕಾಮೆರಾಗೆ ಪ್ರತ್ಯೇಕ ಶುಲ್ಕ ಮೂರು ಸಫಾರಿಯಿಂದ ಮೂರು ಸಾವಿರ ನೀಡಿದೆ.
ನಾಲ್ಕು ಬಸ್ಸುಗಳು ಕಾಡಿನೊಳಗೆ ನಾಲ್ಕು ಬೇರೆ ದಿಕ್ಕುಗಳ ಕಡೆ ಚಲಿಸುತ್ತವೆ. ಇವನ್ನು ವಲಯಗಳು ಎಂದು ಕೂಡ ಕರೆಯುತ್ತಾರೆ. ಈ ಬಸ್ ಚಾಲಕರ ಉದ್ದೇಶ ಒಂದೇ, ಬಂದ ಪ್ರವಾಸಿಗರಿಗೆ ಕಾಡಿನ ಮಧ್ಯೇ ಹುಲಿಯನ್ನು ತೋರಿಸುವುದು. ಚಾಲಕರ ಮಧ್ಯೇ ಯಾವುದೇ ಪೈಪೋಟಿ ಇರುವುದಿಲ್ಲ. ಒಂದು ಬಸ್ಸಿನವರಿಗೆ ಹುಲಿ ಸಿಕ್ಕರೆ ತಕ್ಷಣ ಅವನು ದಾರಿಯಲ್ಲಿ ಸಿಗುವ ಮಿಕ್ಕ ಚಾಲಕರಿಗೆ ತಿಳಿಸುತ್ತಾನೆ ಹಾಗೂ ಅವರೆಲ್ಲಾ ಅದೇ ವಲಯದ ಕಡೆ ಬಸ್ ತಿರುಗಿಸುತ್ತಾರೆ. ಚಾಲಕರ ಮಧ್ಯೆ ಇರುವ ಈ ಸಹಕಾರದಿಂದಾಗಿ ಇತ್ತೀಚಿನ ದಿನಗಳಲ್ಲಿ ಕಬಿನಿಯಲ್ಲಿ ಪ್ರತಿಯೊಬ್ಬ ಪ್ರವಾಸಿಗರು ಹುಲಿಯ ನೋಡುವ ಸಾಧ್ಯತೆಗಳು ಹೆಚ್ಚು.
ತಂಗಲು ಹೆಚ್ಚು ಅನುಕೂಲತೆಗಳು ಬಯಸುವವರು ದಿನಕ್ಕೆ ಸುಮಾರು 12000 ರೂಪಾಯಿಗಳು ಆಗುವ ಜಂಗಲ್ ಲಾಡ್ಜಸ್‌ನಲ್ಲಿ ಉಳಿದುಕೊಳ್ಳಬಹುದು. ಈ ಮೊತ್ತದಲ್ಲಿ ಅಲ್ಲಿ ಐಶಾರಾಮಿ ಕೊಠಡಿಗಳಲ್ಲಿ ತಂಗಲು, ಭರ್ಜರಿ ಊಟ ಮತ್ತು ಜೀಪಿನಲ್ಲಿ ಒಂದು ಸಫಾರಿ ಮತ್ತು ದೋಣಿಯಲ್ಲಿ ಒಂದು ಸಫಾರಿ ಸೇರಿಕೊಂಡಿರುತ್ತದೆ, ಕ್ಯಾಮೇರಾ ಶುಲ್ಕ ಪ್ರತ್ಯೇಕವಾಗಿ ನೀಡಬೇಕು.
ನಾವು natwin ಎಂಬ ಕಾಟೇಜ್‌ನಲ್ಲಿ ತಂಗಿದ್ದೆವು. ದಮ್ಮನಕಟ್ಟೆ ಗೇಟಿನಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿ ಇದು ಇದ್ದು ನಿಶ್ಯಬ್ದ ವಾತಾವರಣದಲ್ಲಿ ಒಂದು ರೂಮಿನಲ್ಲಿ ಮೂರು ಜನರು ಉಳಿದುಕೊಳ್ಳಬಹುದಾದ ನಾಲ್ಕು ರೂಮ್‌ಗಳು ಇಲ್ಲಿವೆ. ರುಚಿಕರವಾದ ಸಾಧಾರಣ ಊಟದ ವ್ಯವಸ್ಥೆ ಇದೆ.
ನೀವು ಹುಲಿಯನ್ನು ನೋಡಲು ಕಬಿನಿಗೆ ಹೋಗುವುದಾದರೆ NATWIN ಮುಖ್ಯಸ್ಥ ನವೀನ್ ಮೊಬೈಲ್ ಸಂಖ್ಯೆ 8892108882 ಗೆ ಕರೆ ಮಾಡಬಹುದು ಅಥವಾ ಜಂಗಲ್‌ಲಾಡ್ಜಸ್‌ನಲ್ಲಿ ತಂಗುವುದಾದರೆ ಜಾಲತಾಣ www.junglelodges.com ಗೆ ಭೇಟಿ ನೀಡಿ.
ಹುಲಿಯನ್ನು ನೋಡುವ ಆತುರದಲ್ಲಿ ಕಾಡಿನ ಭೂದೃಶ್ಯ (landscape) ಸೊಬಗನ್ನು ಅನುಭವಿಸುವುದನ್ನು ಮರೆಯಬೇಡಿ. ನಿಮ್ಮ ಪ್ರವಾಸ ಖಾತ್ರಿಯಾದಮೇಲೆ ಹೆಚ್ಚಿನ ಮಾಹಿತಿಗೆ ನೀವು ನನ್ನನ್ನು ಸಂಪರ್ಕಿಸಬಹುದು.