ಗುರುರಾಜ
ಶಾಸ್ತ್ರಿ
ಪಕ್ಷಿ ವೀಕ್ಷಕರ ಸ್ವರ್ಗ – ಅರುಣಾಚಲ ಪ್ರದೇಶದ ಈಗಲ್‍ನೆಷ್ಟ
10-04-2019
ಭಾರತದಲ್ಲಿ ಸುಮಾರು 1250 ವಿವಿಧ ಬಗೆಯ ಪಕ್ಷಿಗಳು ಇವೆ ಎಂಬ ಮಾಹಿತಿ ಲಭ್ಯವಿದೆ. ಪಕ್ಷಿ ವೀಕ್ಷಕರು ತಾವು ಈ 1250 ಬಗೆಗಳಲ್ಲಿ ಎಷ್ಟು ಬಗೆಯ ಪಕ್ಷಿಗಳನ್ನು ವೀಕ್ಷಸಿದ್ದಾರೆ ಎಂಬುವುದರ ಮೇಲೆ ಅವರಿಗೆ ಸಿಗುವ ಗೌರವ ಅವಲಂಬಿತವಾಗಿರುತ್ತದೆ. ಹೀಗೆ ತಾವು ನೋಡಿರುವ ವಿವಿಧ ಬಗೆಯ ಪಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಭಾರತದ ಉದ್ದಗಲಕ್ಕೂ ಪಕ್ಷಿವೀಕ್ಷಕರು ಪ್ರಯಾಣಿಸುವುದುಂಟು. ಅರುಣಾಚಲ ಪ್ರದೇಶದಲ್ಲಿರುವ ಈಗಲ್‍ನೆಷ್ಟ್ ಸುಮಾರು 400 ಬಗೆಯ ಪಕ್ಷಿಗಳನ್ನು ತನ್ನೊಳಗೆ ಇರಿಸಿಕೊಂಡಿದೆ. ಹಾಗಾಗಿ ಈ ಈಗಲ್ ನೆಷ್ಟ್ ಪಕ್ಷಿವೀಕ್ಷಕರ ಸ್ವರ್ಗ ಎಂದರೆ ಉತ್ಪ್ರೇಕ್ಷೆಯೇನಲ್ಲ. ಒಮ್ಮೆ ಈಗಲ್‍ನೆಷ್ಟ್‍ಗೆ ಭೇಟಿಕೊಟ್ಟರೆ ಕನಿಷ್ಠವೆಂದರೂ 200 ಬಗೆಗಳ ಪಕ್ಷಿಗಳ ನೋಡಬಹುದು. ಗಾತ್ರದಲ್ಲಿ ಚಿಟ್ಟೆಗಳಿಗಿಂತ ಸ್ವಲ್ಪ ದೊಡ್ಡದಾಗಿರುವ ಪಕ್ಷಿಗಳೇ ಹೆಚ್ಚು. ಹಾಗಾಗಿ ಇಲ್ಲಿನ ಕಾಡಿನ ದೊಡ್ಡ ದೊಡ್ಡ ಮರಗಳಲ್ಲಿ ಪಕ್ಷಿಗಳನ್ನು ಹುಡುಕುವುದು ಹಾಗೂ ಅದರ ಗುರುತನ್ನು ಕಂಡುಹಿಡಿಯುವುದು ಸುಲಭ ಕಾರ್ಯವೇನಲ್ಲ. ಈ ಕೆಲಸಕ್ಕೆ ನಮ್ಮ ಜೊತೆ ಬರುವ ಗೈಡ್, ನಮ್ಮಲ್ಲಿರುವ ಬೈನಾಕ್ಯುಲರ್ ಹಾಗೂ ಕ್ಯಾಮೆರಾಗಳು ಸಹಾಯ ಮಾಡುತ್ತವೆ. ಈ ಈಗಲ್ ನೆಷ್ಟ್ ಕ್ಯಾಂಪಿಗೆ ಹೋಗುವ ವಿಚಾರ ನಮ್ಮ ಗೆಳೆಯರಲ್ಲಿ ಪ್ರಸ್ತಾಪವಾಗಿದ್ದು ಜನವರಿ 2019ರಲ್ಲಿ. ಈ ಪ್ರವಾಸಕ್ಕಾಗಿ ನಾವು ಬೆಂಗಳೂರಿನಲ್ಲಿರುವ ಐ.ಟಿ.ನೇಚರ್ ಕ್ಲಬ್ ಎಂಬ ಸಂಸ್ಥೆಯನ್ನು ವಿಚಾರಿಸದೆವು. ಪ್ರವಾಸವು ಮಹೀಂದ್ರ ಜೈಲೋದಲ್ಲಿ ಗುವಾಹಾಟಿಯಿಂದ ಪ್ರಾರಂಭವಾಗಿ ಈಗಲ್ ನೆಷ್ಟ್ ನಲ್ಲಿ 4 ದಿನ ತಂಗಿ ನಂತರ ಶೇರ್ ಗಾವ್ ಎಂಬ ಹಳ್ಳಿಯಲ್ಲಿ 3 ದಿನ ಇದ್ದು ಗುವಾಹಾಟಿಗೆ ಮರಳುವುದು ಎಂದು ಅವರು ತಿಳಿಸಿದರು. ಇದಕ್ಕಾಗಿ ಒಬ್ಬ ಪ್ರಯಾಣಿಕರಿಗೆ ಮೂವತ್ತು ಸಾವಿರ ರೂಪಾಯಿಗಳು ಆಗುತ್ತದೆಂದು ತಿಳಿಸಿದರು. ನಮ್ಮ ಪಕ್ಷಿ ವೀಕ್ಷಣಾ ಗೆಳೆಯರ ಗುಂಪಿನಲ್ಲಿ 9 ಜನರಿದ್ದು ಅದರಲ್ಲಿ ನಾನೂ, ಗೌರೀ ಶಂಕರ, ಸಂತೋಷ್ ಹಾಗೂ ರಾಮಚಂದ್ರ ಪ್ರವಾಸಕ್ಕೆ ಒಪ್ಪಿದೆವು. ತಕ್ಷಣ ಬೆಂಗಳೂರಿನಿಂದ ಗುವಾಹಾಟಿಗೆ ಹಾಗೂ ವಾಪಸ್ ಬೆಂಗಳೂರಿಗೆ ಬರಲು ವಿಮಾನ ಟಿಕೇಟ್ ಕಾಯ್ದಿರಿಸಿದೆವು. ನಾವು ಗುವಾಹಾಟಿಗೆ ಒಂದು ದಿನ ಮುಂಚಿತವಾಗಿ ಅಂದರೆ 30ನೇ ಮಾರ್ಚರಂದು ಹೊರಟು ಗುವಾಹಾಟಿಯಲ್ಲಿ ಪಕ್ಷಿ ವೀಕ್ಷಕರು ನೋಡಬೇಕಾದ ಕೆಲವು ಸ್ಥಳಗಳಿಗೆ ಭೇಟಿ ನೀಡಿ, ನಂತರ ಮಾರನೇ ದಿನ ಅಂದರೆ ಮಾರ್ಚ 31 ರಂದು ಈಗಲ್ ನೆಷ್ಟ್ ಪ್ರವಾಸ ಕೈಗೊಳ್ಳುವುದಾಗಿ ಐ.ಟಿ. ನೇಚರ್ ಕ್ಲಬ್‍ಗೆ ತಿಳಿಸಿದೆವು. ಕರ್ನಾಟಕದ ಹೊರಗೆ ಪಕ್ಷಿ ವೀಕ್ಷಣೆಗೆ ಹೋಗುತ್ತಿರುವುದು ನಾನು ಇದೇ ಮೊದಲು. ಮಿಕ್ಕ ಮೂವರು ಸಾಕಷ್ಟು ವರ್ಷಗಳಿಂದ ಈ ಹವ್ಯಾಸದಲ್ಲಿದ್ದು ಒಳ್ಳೇ ಪರಿಣತಿ ಹೊಂದಿದ್ದರು. ಪೂರ್ವಭಾವಿಯಾಗಿ ನನ್ನ ಗೆಳೆಯರು ಈಗಲ್ ನೆಷ್ಟ್‍ನಲ್ಲಿ ನಮಗೆ ಸಿಗಬಹುದಾದ ಪಕ್ಷಿಗಳಿರುವ "Birds of Indian Subcontinent" ಎಂಬ ಪುಸ್ತಕದ ಪಿಡಿಎಫ್ ಮುದ್ರಣವನ್ನು ಮೊಬೈಲ್‍ಗೆ ಕಳಿಸಿ ಇದನ್ನು ಓದಿಕೊಂಡು ತಯಾರಿ ನಡೆಸಬೇಕೆಂದು ತಿಳಿಸಿದರು. ಎಲ್ಳಾ ಪಕ್ಷಿವೀಕ್ಷಕರು ಈ ರೀತಿ ತಯಾರಿ ನಡೆಸುವುದು ಸಹಜ. ಇದರಿಂದ ಎದುರಿಗೆ ಪಕ್ಷಿಯನ್ನು ನೋಡಿದಾಗ ಅದರ ಗುರುತು ಹಿಡಿಯುವುದು ಸುಲಭವಾಗುತ್ತದೆ. ನನಗೆ ಪಕ್ಷಿ ವೀಕ್ಷಣೆಗಿಂತ ಮೊದಲ ಬಾರಿಗೆ ಉತ್ತರ ಪೂರ್ವ ಭಾರತಕ್ಕೆ ಹೋಗುತ್ತಿದ್ದೇನೆ, ಆ ಊರುಗಳನ್ನು ನೋಡಬೇಕು ಮತ್ತು ಅಲ್ಲಿನ ಜನ ಜೀವನದ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಹಂಬಲ ಜಾಸ್ತಿ ಇತ್ತು. ಹಾಗಾಗಿ ಆ ಪಕ್ಷಿಗಳ ಪುಸ್ತಕವನ್ನು ನಾನು ಓದಿದ್ದು ಅಷ್ಟಕ್ಕಷ್ಟೆ. ನಂತರ ನಾವು ತೆಗೆದುಕೊಂಡು ಹೋಗುವ ಕ್ಯಾಮೆರಾ, ಬೈನಾಕ್ಯುಲರ್ ಮತ್ತು ಇತರ ವಿಷಯಗಳ ಬಗ್ಗೆ ಚರ್ಚಿಸಲು ಒಂದೆರಡು ಸಲ ಭೇಟಿಯಾದೆವು. ಮಾರ್ಚ 30 ರಂದು ಬೆಳಗ್ಗೆ ಏಳು ಗಂಟೆಗೆ ನಮ್ಮ ವಿಮಾನ. 5 ಗಂಟೆಗೆ ವಿಮಾನ ನಿಲ್ದಾಣ ತಲುಪಿ, ಆ ದಿನ ವಿಶ್ವ ಇಡ್ಲಿ ದಿನವಾದ್ದರಿಂದ ಅಲ್ಲೇ ಎರಡು ಪ್ಲೇಟ್ ಬಟನ್ ಇಡ್ಲಿ ಖರೀದಿಸಿ 4 ಜನ ಹಂಚಿಕೊಂಡು ತಿಂದೆವು. ನಾವು ಗುವಾಹಾಟಿಗೆ ತಲುಪಿದಾಗ ಸುಮಾರು ಬೆಳಗ್ಗೆ 9.30. ಅಲ್ಲಿ ವಿಮಾನ ನಿಲ್ದಾಣದಲ್ಲಿ ಓಲಾ ಕಂಪನಿಯ 8 ಗಂಟೆ ಹಾಗೂ 80 ಕಿಲೋಮೀಟರ್ ಮಿತಿಯ ರೀತಿಯಲ್ಲಿ ಕ್ಯಾಬ್ ಬುಕ್ ಮಾಡಿದೆವು. ಆದರೆ ಕ್ಯಾಬ್ ಬರಲಿಲ್ಲ. ಚಾಲಕನಿಗೆ ಫೋನ್ ಮಾಡಿದೆ. ನೀವು ಕ್ಯಾಷ್ ಕೊಡುವುದಾದರೆ ಬರುತ್ತೇನೆ, ಓಲಾ ಮನಿ ಹಾಕಿದ್ದರೆ ಬರುವುದಿಲ್ಲ ಎಂದ. ಓಲಾ ಮನಿ ನಾವು ಮುಂಗಡವಾಗಿಯೇ ಒಲಾ ಕಂಪನಿಯ ನಮ್ಮ ಖಾತೆಯಲ್ಲಿ ಹಣವಿಟ್ಟು ನಂತರ ನಗದು ಇಲ್ಲದೆ ಕ್ಯಾಬ್ ಉಪಯೋಗಿಸುವ ಒಂದು ಸೌಲಭ್ಯ. ಸಾಮಾನ್ಯವಾಗಿ ಚಾಲಕರಿಗೆ ವಾರಕ್ಕೊಮ್ಮೆ ಈ ಓಲಾ ಮನಿ ಹಣ ಬರುತ್ತದೆ, ಹಾಗಾಗಿ ಚಾಲಕರು ಈ ರೀತಿ ಬುಕ್ ಮಾಡಿದ್ದನ್ನು ಒಪ್ಪುವುದಿಲ್ಲ. ಸರಿ, ನಾನು ಕ್ಯಾಬ್ ಕ್ಯಾನಸಲ್ ಮಾಡಿದೆ. ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಿರುವಾಗ, ಅದೇ ಚಾಲಕನು ನನಗೆ ಫೋನ್ ಮಾಡಿ ನೀವು ಬೆಂಗಳೂರಿನವರ ಎಂದು ಕೇಳಿದೆ. ನಾನು ಹೌದು ಎಂದೆ. ಹಾಗಿದ್ದರೆ ನೀವು ಅಲ್ಲೇ ವಿಮಾನ ನಿಲ್ದಾಣದ ಮುಂದೆ ಇರುವ ಯಾಕ್ಸಿಸ್ ಬ್ಯಾಂಕ್ ಎ.ಟಿ.ಎಮ್ ಮುಂದೆ ಇರಲು ತಿಳಿಸಿದ. 5 ನಿಮಷದಲ್ಲಿ ನಮ್ಮ ಮುಂದೆ ಬಂದು ನಿಂತ. ಬಂದವನೇ ಕನ್ನಡದಲ್ಲಿ ನಮ್ಮೊಡನೆ ಮಾತನಾಡಲು ಪ್ರಾರಂಬಿಸಿದ. ಅವನಿಗೆ ಟ್ರೂ ಕಾಲರ್ ನಿಂದ ನಾವು ಬೆಂಗಳೂರಿನವರೆಂದು ತಿಳಿಯಿತಂತೆ. ಅವನು ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ 10 ವರ್ಷ ಕೆಲಸ ಮಾಡಿದ್ದರಿಂದ ಕನ್ನಡ ಕಲಿತನಂತೆ. ಅವನ ಹೆಸರು ಭೋಗಾರಾಮ್. ಸರಿ ಅಸ್ಸಾಮಿನವನಾದ ಕನ್ನಡದ ದತ್ತು ಪುತ್ರ ಭೋಗಾರಮ್ ಜೊತೆ ಪ್ರಾರಂಭವಾಯಿತು ನಮ್ಮ ಗುವಾಹಾಟಿ ಪ್ರವಾಸ. ನಮ್ಮ ಮೊದಲನೇ ಭೇಟಿ ಗುವಾಹಾಟಿಯ ಕಸವನ್ನಲ್ಲಾ ಸುಮಾರು ಇಪ್ಪತ್ತು ಎಕರೆ ಜಾಗದಲ್ಲಿ ಪರ್ವತಗಳಂತೆ ತುಂಬಿರುವ ಡಂಪ್ ಯಾರ್ಡ. ಇಲ್ಲಿ ಗ್ರೇಟರ್ ಅಡ್ಜುಟೆಂಟ್ ಎಂಬ ಪಕ್ಷಿಯನ್ನು ನಾವು ಸುಲಭವಾಗಿ ಕಾಣಬಹುದು. ಈ ಪಕ್ಷಿ ಸುಮಾರು 4 ಅಡಿ ಉದ್ದವಿದ್ದು, ದೇಶ ವಿದೇಶಗಳಿಂದ ಪಕ್ಷಿ ವೀಕ್ಷಕರು ಇದನ್ನು ನೋಡಲು ಇಲ್ಲಿಗೆ ಬರುತ್ತಾರೆ. ಒಮ್ಮೆಗೇ ಸುಮಾರು 200ರಿಂದ 300 ಪಕ್ಷಿಗಳು ಒಟ್ಟಗೇ ಇರುತ್ತವೆ. ಅಲ್ಲಿಂದ ನೇರ ಹೋಟಲ್‍ಗೆ ಹೋಗಿ ಊಟ ಮುಗಿಸಿ, ಉಮಾನಾತ್ ಎಂಬ ಬ್ರಹ್ಮಪುತ್ರ ನದಿಯ ಒಂದು ದ್ವೀಪಕ್ಕೆ ದೊಡ್ಡ ದೋಣಿಯಲ್ಲಿ ಹೋದೆವು. ಇಲ್ಲಿ ಗೋಲ್ಡನ್ ಲಂಗೂರ್ ಎಂಬ ಮಂಗಗಳ ಜಾತಿಯ ಒಂದು ವಿಶೇಷ ಮಂಗವಿದೆ. ಆದರೆ ಅಲ್ಲಿಗೆ ಹೋದ ಮೇಲೆ ನಮಗೆ ತಿಳಿದದ್ದು ಆ ಮಂಗವು ಸಾಕಷ್ಟು ದಿನದಿಂದ ಕಾಣಿಸುತ್ತಿಲ್ಲವೆಂದು. ಸರಿ ಅಲ್ಲಿದ್ದ ಈಶ್ವರನ ದೇವಸ್ಥಾನವನ್ನು ನೋಡಿ ನಾವು ಬುಕ್ ಮಾಡಿದ್ದ ಅತಿಥಿ ಗೃಹಕ್ಕೆ ಹೋದೆವು. ಸಂಜೆ ಅಲ್ಲೇ ಗುವಾಹಾಟಿಯಲ್ಲಿ ಮುಖ್ಯ ಬೀದಿಗಳಲ್ಲಿ ಸುತ್ತಾಡಿ ರಾತ್ರಿ ನಮ್ಮ ಅತಿಥಿ ಗೃಹದ ಎದುರಿಗೇ ಇದ್ದ ಶ್ರೀ ಕೃಷ್ಣ ಹೋಟಲ್‍ನಲ್ಲಿ ಊಟ ಮಾಡಿ ಬಂದೆವು. ಈ ಹೋಟಲ್‍ನ ವಿಶೇಷವೆಂದರೆ ಇಲ್ಲಿ ಈರುಳ್ಳಿ ಬೆಳ್ಳುಳ್ಳಿ ಉಪಯೋಗಿಸುವುದಿಲ್ಲ. ನಾನು ಬೆಳ್ಳುಳ್ಳಿ ತಿನ್ನುವುದಿಲ್ಲ. ಮಾರನೇ ದಿನ ಬೆಳಗ್ಗೆ ಆರು ಗಂಟೆಗೆ ನಮಗೆ ಈಗಲ್ ನಸ್ಟ್ ಗೆ ಹೋಗಲು ಜೈಲೋ ಗಾಡಿ ಬಂದಿತು. ಗುವಾಹಾತಿಯಿಂದ ಈಗಲ್ ನೆಸ್ಟ ಸುಮಾರು 7 ಗಂಟೆಗಳ ಪ್ರಯಾಣ. ಆದರೆ ದಾರಿ ಉದ್ದಕ್ಕೂ ಧಾರಾಕಾರ ಮಳೆ, ಭೂ ಕುಸಿತದಿಂದಾಗಿ ರಸ್ತೆ ತಡೆ ಹಾಗೂ ಅಲ್ಲಲ್ಲಿ ಬೆಟ್ಟಗಳಿಂದ ಕಲ್ಲುಗಳು ರಸ್ತೆಯ ಮೇಲೆ ಬೀಳುತಿತದ್ದವು. ಹೀಗಾಗಿ ನಮಗೆ ಈಗಲ್ ನೆಸ್ಟ್ ತಲುಪಲು ಸುಮಾರು 9 ಗಂಟೆ ಬೇಕಾಯಿತು. ಮದ್ಯಾಹ್ನ 4 ಗಂಟೆಗೆ ಈಗಲ್ ನೆಸ್ಟ್ ನ ಲಾಮಾ ಕ್ಯಾಂಪ್ ತಲುಪಿದೆವು. 1950 ನೇ ಇಸವಿಯಲ್ಲಿ ಭಾರತೀಯ ಸೇನೆ ಗಡಿಭಾಗಗಳನ್ನು ಕಾಯಲು ಈ ಈಗಲ್ ನೆಸ್ಟ್ ಜಾಗದಲ್ಲಿ ನೆಲಿಸಿತ್ತಂತೆ. ಕ್ರಮೇಣ ಗಡಿ ಭಾಗದ ಹತ್ತಿರಕ್ಕೆ ಸೇನೆ ಹೋಗಿ, ಈ ಈಗಲ್ ನೆಸ್ಟ್ ಕೇವಲ ಭುಗನ್ ಜನಾಂಗದ ವಾಸಸ್ಥಳವಾಗಿತ್ತು. ಈ ಲಾಮಾ ಕ್ಯಾಂಪ್ ಉಸ್ತುವಾರಿಯನ್ನು ಭುಗನ್ ಎಂಬ ಬುಡಕಟ್ಟು ಜನಾಂಗ ನೋಡಿಕೊಳ್ಳುತ್ತಿದ್ದಾರೆ. ಹಿಂದೆ ಈ ಭುಗನ್ ಜನರು ಕಾಡು ಪ್ರಾಣಿಗಳನ್ನು ಹಾಗೂ ಪಕ್ಷಿಗಳನ್ನು ಬೇಟೆಯಾಡುತ್ತಿದ್ದರಂತೆ. ಕಾಡು ಹಾಗೂ ಅದರಲ್ಲಿನ ಪ್ರಾಣಿ ಪಕ್ಷಿಗಳನ್ನು ಈ ಜನರಿಂದ ಕಾಪಾಡುವುದು ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿತ್ತು. ಹೀಗಿದ್ದಾಗ ಒಬ್ಬ ಅರಣ್ಯಾಧಿಕಾರಿ ಈ ಜನರಿಗೆ ಈ ಕಾಡು ಪ್ರಾಣಿಗಳನ್ನು ಮತ್ತು ಪಕ್ಷಿಗಳನ್ನು ಕೊಲ್ಲಬೇಡಿ. ಇವುಗಳನ್ನು ನಾವು ಉಳಿಸಿಕೊಂಡರೆ ನಾವು ದೇಶ ವಿದೇಶಗಳಿಂದ ಪಕ್ಷಿ ವೀಕ್ಷಕರನ್ನು ಆಕರ್ಶಿಸಬಹುದು. ಹಾಗಾಗಿ ನಿಮಗೂ ಈ ಪ್ರವಾಸೋದ್ಯಮದಿಂದ ಹಣ ಬರುವ ಹಾಗೆ ಮತ್ತು ಉದ್ಯೋಗ ಸಿಗುವ ಹಾಗೆ ಮಾಡುತ್ತೇವೆ ಎಂದರಂತೆ. ಅರಣ್ಯ ಇಲಾಖೆಯವರು ಈ ಭುಗನ್ ಜನಾಂಗದ ಕೆಲವರಿಗೆ ಪಕ್ಷಿಗಳ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಿ ಅವರುಗಳನ್ನು ಗೈಡ್‍ಗಳಾಗಿ ಮಾಡಿದರು ಮತ್ತು ಲಾಮಾ ಮತ್ತು ಭೋಂಪು ಎಂಬ ಎರಡು ಪ್ರವಾಸಿಗರು ಉಳಿದುಕೊಳ್ಳುವ ಕ್ಯಾಂಪ್ಗಳನ್ನು ಮಾಡಿದರು. ಈ ಪ್ರದೇಶದಲ್ಲಿ ಮಾತ್ರ ಸಿಗುವ ಒಂದು ಸುಂದರ ಪಕ್ಷಿಗೆ ಈ ಜನಾಂಗದ ಹೆಸರು ಭುಗನ್ ಎಂದು ಕರೆಯುತ್ತಾರೆ. ಟೇಂಗಾ ಎಂಬ ಹಳ್ಳಿಯ ಪಕ್ಕದಲ್ಲಿ ಭಾರತೀಯ ಸೇನೆಯ ದೊಡ್ಡ ತುಕಡಿ ನೆಲೆಮಾಡಿದೆ. ಸಾವಿರಾರು ಸಿಪಾಯಿಗಳು ಉಳಿದುಕೊಳ್ಳಬಹುದಾದ ಗಡಿಯ ಹತ್ತಿರದ ಒಂದು ದೊಡ್ಡ ಕಣಿವೆ ಇದು. ಇಲ್ಲಿಂದ ಸುಮಾರು 25 ಕಿಲೋಮಿಟರ್ ಗುಡ್ಡಗಾಡಿನಲ್ಲಿ ಹೋದರೆ ನಮಗೆ ಸಿಗುವುದು ದಟ್ಟವಾದು ಕಾಡು ಹಾಗು ಬೆಟ್ಟಗಳಲ್ಲಿರುವ ಈಗಲ್ ನೆಷ್ಟಿನ ಲಾಮಾ ಕ್ಯಾಂಪ್. ಮಧ್ಯದಲ್ಲಿ ಯಾವುದೇ ಹಳ್ಳಿಗಳಿಲ್ಲ. ನಮ್ಮನ್ನು ಈ ಕ್ಯಾಂಪಿಗೆ ಮೊದಲು ಸ್ವಾಗತಿಸಿದ್ದು ಭುಗನ್ ಬುಡಕಟ್ಟು ಜನಾಂಗದ ಒಂದು ಕಛೇರಿ. ಅಲ್ಲಿ ನಾವು ಒಬ್ಬ ಪ್ರವಾಸಿಗೆ ನೂರು ರುಪಾಯಿಯಂತೆ ಈ ಭುಗನ್ ಜನಾಂಗದ ಸಹಕಾರಿ ನಿಧಿಗೆ ದೇಣಿಗೆ ನೀಡಬೇಕು. ಇದಕ್ಕೆ ರಸೀದಿ ಕೂಡ ಕೊಡುತ್ತಾರೆ. ಇದಾದ ಮೇಲೆ ಅರಣ್ಯ ಇಲಾಖೆಗೆ ಪ್ರವೇಶ ಶುಲ್ಕ ಒಬ್ಬರಿಗೆ 500 ರೂಪಾಯಿಗಳು ಕೊಡಬೇಕು. ಅಲ್ಲಿ ನಮ್ಮ ಗೈಡ್ ಫುರ್‍ಪಾ ಬಂದಿದ್ದ. ತನಗೆ ಬರುವ ಹಿಂದಿ ಭಾಷೆ ಹಾಗೂ ಸ್ವಲ್ಪ ಆಂಗ್ಲ ಭಾಷೆಯನ್ನು ಮಿಶ್ರಣಮಾಡಿ ಮಾತನಾಡುತ್ತಿದ್ದ. ಲಾಮಾ ಕ್ಯಾಂಪಿನಲ್ಲಿ ನಮಗೆ ಎರಡು ಟೆಂಟ್‍ಗಳನ್ನು ನೀಡಿದರು. ಸಾಧಾರಣ ಟೆಂಟ್‍ಗಳಾದರೂ ಒಳಗೆ ಮಲಗಲು ಮಂಚ, ಹಾಸಿಗೆ ಮತ್ತು ಬೆಡ್‍ಶೀಟ್‍ಗಳು ಹೊಸದಾಗಿತ್ತು. ಈ ಕ್ಯಾಂಪಿನಲ್ಲಿ ಒಟ್ಟು ಇಪ್ಪತ್ತು ಟೆಂಟ್ಗಳಿದ್ದವು ಹಾಗೂ ಪ್ರತಿ 5 ಟೆಂಟ್‍ಗೆ ಒಂದು ಶೌಚಾಲಯ ಹಾಗೂ ಸ್ನಾನಗೃಹವಿತ್ತು. ಮೊದಲನೆ ದಿನ ನಾವು ತಲುಪಿದಾಗ, ಕ್ಯಾಂಪ್ ಪೂರ್ತಿ ಮೋಡ ತುಂಬಿಕೊಂಡಿದ್ದು ಉಷ್ಣಾಂಶ 8 ಡಿಗ್ರಿ ಇತ್ತು ಹಾಗೂ ಮಳೆಯೂ ಆಗಾಗ ಜೋರಾಗಿ ಬರುತ್ತಿತ್ತು. ಸಂಜೆ 5 ಗಂಟೆಗೆ ಕತ್ತಲಾಗಿದ್ದರಿಂದ ಮೊದಲನೇ ದಿನ ನಾವು ಪಕ್ಷಿಗಳನ್ನು ಹುಡುಕಿಕೊಂಡು ಹೋಗಲಿಲ್ಲ. ರಾತ್ತಿ ಊಟಕ್ಕೆಂದು ನಾವು ಡೈನಿಂಗ್ ಹಾಲ್‍ಗೆ ಹೋದಾಗ ಸುಮಾರು 30 ಜನ ವಿದೇಶಿ ಪಕ್ಷಿ ವೀಕ್ಷಕರನ್ನು ಭೇಟಿ ಮಾಡಿದೆವು. ಸಾಮಾನ್ಯವಾಗಿ ಈ ಪ್ರದೇಶಕ್ಕೆ ಪಕ್ಷಿ ವೀಕ್ಷಿಸಲು ಹೆಚ್ಚಾಗಿ ಬರುವವರು ವಿದೇಶಿಯರೇ. ಈ ಕ್ಯಾಂಪ್‍ಗಳ ವಿಶೇಷವೇನೆಂದರೆ ಇಲ್ಲಿ ಕಡ್ಡಾಯವಾಗಿ ಕೇವಲ ಸಸ್ಯಹಾರಿ ಅಡುಗೆ ಮಾತ್ರ ಮಾಡುತ್ತಾರೆ. ಹಾಗಾಗಿ ಯಾವುದೇ ದೇಶದವರು ಬಂದರು ಅವರು ಇಲ್ಲಿನ ಸಸ್ಯಹಾರಿ ಊಟವನ್ನೇ ಸೇವಿಸಬೇಕು. ಊಟದ ನಂತರ ನಮ್ಮ ಗೈಡ್ ನಮಗೆ ಮಾರನೇ ದಿನ ಬೆಳಗ್ಗೆ 4 ಗಂಟೆಗೆ ಎದ್ದು ತಯಾರಾಗಿ 4.30ಕ್ಕೆ ಪಕ್ಷಿ ವಿಕ್ಷಣೆಗೆ ಹೊರಡಬೇಕೆಂದು ತಿಳಿಸಿದ. ಬೆಳಗ್ಗೆ 4 ಗಂಟೆಗೇ ಸೂರ್ಯೋದಯವಾಗುತ್ತಿತ್ತು. 4.30ಕ್ಕೆ ನಮ್ಮ ಗಾಡಿಯಲ್ಲೇ ಸುಮಾರು 3 ಕಿಲೋಮೇಟರ್ ಹೋಗಿ ಒಂದು ಕಾಲು ದಾರಿ ಇರುವ ಜಾಗದಲ್ಲಿ ಇಳಿದೆವು. ಇಲ್ಲಿಂದ ಪ್ರಾರಂಭವಾಯಿತು ನಮ್ಮ ಪಕ್ಷಿ ವೀಕ್ಷಣೆ. ಫುರ್ಪ ಪಕ್ಷಿಗಳು ಮಾಡುವ ಶಬ್ದದಿಂದಲೇ ಅದರ ಗುರುತನ್ನು ಕಂಡು ಹಿಡಿಯುತ್ತಿದ್ದ ಹಾಗೂ ಆ ಶಬ್ದ ಬರುತ್ತಿದ್ದ ಜಾಗಕ್ಕೆ ನಮ್ಮನ್ನು ನಿಧಾನವಾಗಿ ಬರಲು ಹೇಳುತ್ತಿದ್ದ. ನಾವು ಅಲ್ಲಿಗೆ ಹೋದ ನಂತರ ಪಕ್ಷಿ ಎಲ್ಲಿದೆ ಎಂದು ತೋರಿಸಿ ಕ್ಯಾಮೆರಾದಲ್ಲಿ ಫೋಟೋ ತೆಗೆಯಲು ಹೇಳುತ್ತಿದ್ದ. ನನ್ದದು ಸಾಧಾರಣ ಕ್ಯಾಮೆರ. ಆದರೆ ಇನ್ನು ಮೂವರದ್ದು ದೊಡ್ಡ ಕ್ಯಾಮೆರಾ ಇದ್ದು ಅವರ ಕ್ಯಾಮೆರಾದಲ್ಲಿ ಫೋಟೋಗಳು ಉತ್ತಮವಾಗಿ ಬರುತ್ತಿತ್ತು. ನಾನು ಪಕ್ಷಿಯ ಒಂದೆರಡು ಫೋಟೋ ಕ್ಲಿಕ್ಕಿಸಿ ನಂತರ ನನ್ನ ಬೈನಾಕ್ಯುಲರ್‍ನಿಂದ ಪಕ್ಷಿಯನ್ನು ವೀಕ್ಷಿಸುತ್ತಿದ್ದೆ. ಸಾಮಾನ್ಯವಾಗೆ ಪಕ್ಷಿ ವೀಕ್ಷಣೆಯಲ್ಲಿ ಸಾಕಷ್ಟು ವರ್ಷಗಳು ತೊಡಗಿಸಿಕೊಂಡವರು ಒಂದು ಹಂತದ ನಂತರ ಕೇವಲ ಬೈನಾಕ್ಯುಲರ್ ಬಳಸಿ ಪಕ್ಷಿಗಳನ್ನು ನೋಡಿ ಆನಂದಿಸುತ್ತಾರೆ. ಆದರೆ ನನಗೆ ಅದು ಅನಿವಾರ್ಯವಾಗಿತ್ತಷ್ಟೆ. ಹಲವು ಬಾರಿ ನಾವುಗಳೇ ನೇರವಾಗಿ ಪಕ್ಷಿಗಳನ್ನು ನೋಡಿ ನಂತರ ಗೈಡ್‍ನ್ನು ಕರೆದು ತೋರಿಸುತ್ತಿದ್ದೆವು. ಬೆಳಗ್ಗೆ 4 ರಿಂದ 8 ಗಂಟೆ, 10 ಗಂಟೆಯಿಂದ 2 ಗಂಟೆ ಹಾಗೂ ಮದ್ಯಾಹ್ನ 3 ಗಂಟೆಯಿಂದ 5 ಗಂಟೆವರೆಗೆ ಈ ರೀತಿಯ ಪಕ್ಷಿವೀಕ್ಷಣೆ 2 ದಿನಗಳ ಕಾಲ ನಡೆಯಿತು. ಸಂಜೆ ಆರರ ನಂತರ ನಾವು ನೋಡಿದ ಪಕ್ಷಿಗಳ ಹೆಸರನ್ನು ಪುಸ್ತಕದಲ್ಲಿ ಬರೆಯುವ ಕೆಲಸ ನನ್ನದು. ಪಕ್ಷಗಳ ಹೆಸರನ್ನು ನನ್ನ ಮೂರು ಗೆಳೆಯರು ಹಾಗೂ ಗೈಡ್ ಹೇಳುತ್ತಿದ್ದರು. ಮೂರನೇ ದಿನ ನಾವು ಈ ಲಾಮಾ ಕ್ಯಾಂಪಿನಿಂದ ಭೋಂಪು ಕ್ಯಾಂಪಿಗೆ ಹೋದೆವು. 25 ಕಿಲೋಮೀಟರ್ ದೂರವಿದ್ದ ಭೋಂಪು ಕ್ಯಾಂಪ್ ತಲುಪಲು ನಮಗೆ ಸುಮಾರು 3 ಗಂಟೆಗಳು ಬೇಕಾಯಿತು. ದಾರಿಯ ಪಕ್ಕದಲ್ಲೇ ಸಾಕಷ್ಟು ಚಿಕ್ಕ ಜಲಪಾತಗಳು ಹಾಗೂ ಆ ಜಲಪಾತಗಳ ನೀರು ರಸ್ತೆಯ ಮೇಲೆ ಹರಿದು ಕೆಳಗೆ ಪ್ರಪಾತಕ್ಕೆ ಬೀಳುತ್ತಿದ್ದವು. ಎರಡು ದಿನಗಳ ಮುಂಚೆ ವಿದೇಶಿಯರು ಈ ಭೋಂಪು ಕ್ಯಾಂಪ್‍ಗೆ ಹೋಗುತ್ತಿರುವಾಗ ಭಯಂಕರವಾಗಿ ಸುರಿದ ಮಳೆಯಿಂದಾಗಿ ಈ ಜಲಪಾತಗಳು ಉಕ್ಕಿ ಹರಿದು ಅವರು ರಸ್ತೆ ದಾಟಲು ಆಗದೇ ಲಾಮಾ ಕ್ಯಾಂಪ್ ಹಿಂದಿರುಗಿದ್ದರಂತೆ. ನಮಗೆ ಅಂತಹ ತೊಂದರೆಯೇನೂ ಆಗಲಿಲ್ಲ. ದಾರಿಯಲ್ಲಿ ಕೆಲವು ಸ್ಥಳಗಳಲ್ಲಿ ನಮಗೆ Fire tail Sun Bird ಅಂದರೆ ಬೆಂಕಿಯಂತೆ ಬಾಲವಿರುವ ಸೂರಕ್ಕಿ ನಮ್ಮ ಕಣ್ಣಿಗೆ ಹಾಗೂ ಕ್ಯಾಮರಾಕ್ಕೆ ಸಿಕ್ಕಿತು. ಭೋಂಪು ಕ್ಯಾಂಪಿನ ಸುತ್ತ ದಟ್ಟವಾದ ಕಾಡು. ಲಾಮಾ ಕ್ಯಾಂಪಿಗಿಂತ ಸ್ವಲ್ಪ ಕೆಳಗಡೆ ಇದ್ದರೂ ಎರಡು ಪಟ್ಟು ಹೆಚ್ಚು ಹಸುರಿತ್ತು ಹಾಗೂ ಕಾಡು ಹೆಚ್ಚು ದಟ್ಟವಾಗಿತ್ತು ಕೂಡ. ಇಲ್ಲೂ ಅದೇ ದಿನಚರಿ. ದಿನಕ್ಕೆ 3 ಸಲ ಪಕ್ಷಿ ವೀಕ್ಷಣೆ. ಸುಮಾರು 50 ಬಗೆಗಿನ ಪಕ್ಷಿಗಳು ಇಲ್ಲಿ ನಮ್ಮ ಕ್ಯಾಮೆರಾದಲ್ಲಿ ಸೆರೆಯಾಯಿತು. ಒಂದು ರೀತಿ ಧ್ಯಾನ ಮಾಡುವವರಿಗೆ ಒಂದು ಉತ್ತಮವಾದ ಸ್ಥಳವಾಗಿತ್ತು ಈ ಭೋಂಪು ಕ್ಯಾಂಪ್. ಇಲ್ಲಿ ಒಂದು ದಿನ ತಂಗಿ ಮಾರನೆಯ ದಿನ ಮತ್ತೆ ಲಾಮಾ ಕ್ಯಾಂಪಿಗೆ ವಾಪಸ್ಸಾದೆವು. ಅಲ್ಲಿ ಮತ್ತೆ ಎರಡು ದಿನ ಪಕ್ಷಿ ವೀಕ್ಷಣೆ. ಒಟ್ಟಾರೆ ಸುಮಾರು 200 ಹೊಸ ಬಗೆಗಿನ ನಾವು ಹಿಂದೆ ಕಂಡಿಲ್ಲದ ಪಕ್ಷಿಗಳನ್ನು ಕಂಡೆವು, ಫೋಟೋ ತೆಗೆದೆವು ಹಾಗೂ ಪುಸ್ತಕದಲ್ಲಿ ಅದರ ಹೆಸರುಗಳನ್ನು ದಾಖಲಿಸಿದೆವು. ಅಲ್ಲಿಗೆ ನಮ್ಮ ಈಗಲ್ ನೆಸ್ಟ್ ಪ್ರವಾಸ ಮುಗಿದು ಮಾರನೇ ದಿನ ಶೇರ್‍ಗಾವ್ ಎಂಬ ಹಳ್ಳಿಗೆ ಹೋದೆವು. ಈ ಶೇರ್‍ಗಾವ್ ಲಾಮಾ ಕ್ಯಾಂಪಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಸುಮಾರು 200 ಮನೆಗಳಿರುವ ಒಂದು ಹಳ್ಳಿ. ಇಲ್ಲಿನ ಅರಣ್ಯ ಅಧಿಕಾರಿ ಈ ಹಳ್ಳಿಯನ್ನು ಈಗಲ್ ನೆಸ್ಟ್‍ನಂತೆಯೇ ಅಭಿವೃದ್ದಿ ಪಡಿಸಬೇಕೆಂದು ದುಡಿಯುತ್ತಿದ್ದಾರೆ. ಇಲ್ಲಿ ಸಿಗುವ ಪಕ್ಷಿಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಇತರರಿಗೆ ತಿಳಿಯಪಡಿಸುವ ಸಲುವಾಗಿ ನಮಗೆ ಅತಿ ಕಡಿಮೆ ಬೆಲೆಯಲ್ಲಿ ಇಲ್ಲಿ ನಮಗೆ ಉತ್ತಮವಾದ ಅನೋಸ್ ಹೋಮ್ ಸ್ಟೇ ಬುಕ್ ಮಾಡಿದ್ದರು. ಈ ಹೋಮ್ ಸ್ಟೇ ಪಕ್ಕದಲ್ಲೇ ಡೊಪ್ಲೋಕೊ ಎಂಬ ನದಿ ಹರಿಯುತ್ತಿತ್ತು. ನಾವು ಈ ಹಳ್ಳಿಯ ಸುತ್ತ ಮುತ್ತ ತಿರುಗಿ ಸುಮಾರು 50 ಬಗೆಗಿನ ಪಕ್ಷಿಗಳನ್ನು ನೋಡಿದೆವು ಹಾಗೂ ದಾಖಲಿಸಿದೆವು. ಹೋಮ್ ಸ್ಟೇಯಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಊಟ ದೊರೆಯುತ್ತಿತ್ತು. ಹೋಮ್ ಸ್ಟೇ ಒಡತಿಯ ಹೆಸರು ಅನು, ಹಾಗೂ ಅವರೇ ಇಲ್ಲಿ ಅಡುಗೆ ಕೆಲಸದಿಂದ ಹಿಡಿದು, ಮನೆ ಗುಡಿಸುವ, ಪಾತ್ರೆ ತೊಳೆಯುವ ಕೆಲಸಗಳನ್ನು ಮಾಡುತ್ತಾರೆ. ಅವರ ಅತಥಿ ಸತ್ಕಾರ ಅತ್ಯುತ್ತಮ. ಮೂರು ದಿನ ಇಲ್ಲಿದ್ದ ಬುದ್ದನ ದೇವಾಲಯ, ಮೀನು ಸಾಕಾಣಿಕೆ ಕೇಂದ್ರ, ವಿವೇಕಾನಂದ ಕೇಂದ್ರೀಯ ವಿದ್ಯಾಲಯ ಹೀಗೆ ಹಲವಾರು ಸ್ಥಳಗಳನ್ನು ಪಕ್ಷಿವೀಕ್ಷಣೆಯ ಜೊತೆಯಲ್ಲೇ ನೋಡಿದೆವು. ಹೋಮ್ ಸ್ಟೇಯಲ್ಲಿ ನಮ್ಮನ್ನು ಬೌದ್ದ ಸಂಪ್ರದಾಯದಂತೆ ಒಂದು ಬಿಳಿ ರೇಷ್ಮೆ ಬಟ್ಟೆಯನ್ನು ಶಾಲುವಿನಂತೆ ಹೊದ್ದಿಸಿ ಬೀಳ್ಕೊಟ್ಟರು. ನಂತರ ಅಲ್ಲಿಂದ ಗುವಾಹಾಟಿಗೆ ನಮ್ಮ ಪ್ರಯಾಣ. ದಾರಿ ಉದ್ದಕ್ಕೂ ಸಿಡಿಲು, ಗುಡುಗು ಸಹಿತ ಧಾರಾಕಾರ ಮಳೆ. ಸೇನಾ ತುಕಡಿಗಳ ಗಾಡಿಗಳನ್ನು ಹಿಂದಿಕ್ಕಿ ಸಾಗಿತು ನಮ್ಮ ಪ್ರಯಾಣ ಗುವಾಹಾಟಿಗೆ. ಸುಮಾರು 3 ಗಂಟೆಗೆ ಗುವಾಹಾಟಿ ತಲುಪಿದೆವು. ನನ್ನ ಗೆಳೆಯರು ಆ ದಿನವೇ ಬೆಂಗಳೂರಿಗೆ ವಾಪಸ್ ಆದರು. ನಾನು ಒಂದು ದಿನ ಗುವಾಹಾಟಿಯಲ್ಲಿ ತಂಗಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ ಚಾಪಿ ರಾಯ್ ಹಾಗೂ ಸಂಜೀಬ್ ಸೇನ್ ರನ್ನು ಭೇಟಿ ಮಾಡಿದೆ. ಸುಮಾರು 15 ವರ್ಷದ ನಂತರ ಅವರನ್ನು ಭೇಟಿ ಮಾಡಿದ್ದು. ನಾನು ಸ್ವಯಂ ನಿವೃತ್ತಿ ತೆಗೆದುಕೊಂಡು ಹೀಗೆ ಪಕ್ಷಿ ವೀಕ್ಷಣೆಗೆ ಉತ್ತರ ಪೂರ್ವ ಭಾರತಕ್ಕೆ ಬಂದ ನನ್ನನ್ನು ಶ್ಲಾಘಿಸಿದರು. ಮಾರನೇ ದಿನ ಕನ್ನಡದ ದತ್ತು ಪುತ್ರ ಭೋಗಾರಾಮ್‍ನ ಗಾಡಿಯಲ್ಲಿ ಗುವಾಹಾಟಿ ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ಏರಿ ಬೆಂಗಳೂರು ತಲುಪಿದೆ.
ಅನಿಸಿಕೆಗಳು