ನನಗೆ ಚೆನ್ನೈಗೆ ವರ್ಗಾವಣೆಯಾಗಿ ಒಂದು ವರ್ಷವಾಗಿತ್ತು. ಒಂದು ಭಾನುವಾರ ಚೆನ್ನೈ ಕನ್ನಡ ಸಂಘದಲ್ಲಿ ಶ್ರೀ ವಿದ್ಯಾಭೂಷಣರ ಸಂಗೀತ ಸಂಜೆ. ನನ್ನ ಯಮಾಹಾ ಗಾಡಿ ಹತ್ತಿ ಟಿ.ನಗರ್‌ನಲ್ಲಿದ್ದ ಕನ್ನಡ ಸಂಘಕ್ಕೆ ಹೊರಟೇಬಿಟ್ಟೆ.
ಅಲ್ಲಿ ಸಂಘದ ಆವರಣದೊಳಗೆ ಗಾಡಿ ನಿಲ್ಲಿಸುತ್ತಿದ್ದಾಗ, ಪಕ್ಕದಲ್ಲಿ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿ "ಇಲ್ಲಿ ಗಾಡಿ ನಿಲ್ಲಿಸಬಹುದಾ" ಅಂತ ಕನ್ನಡದಲ್ಲಿ ಕೇಳಿದ. "ಓ ಅದಕ್ಕೇನಂತೆ, ನಿಲ್ಲಿಸಿ, ತೊಂದರೆ ಇಲ್ಲ" ಎಂದು ನನ್ನ ಉತ್ತರ. ನನಗಿಂತ ವಯಸ್ಸಿನಲ್ಲಿ ಸುಮಾರು 10 ವರ್ಷ ಚಿಕ್ಕವನಿರಬಹುದು ಈ ವ್ಯಕ್ತಿ. "ನಾನು ವಿಜಯ ಕುಮಾರ್, ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದೀನಿ" ಎಂದು ಅವನು ಹೇಳಿದಾಗ ನಾನು ನನ್ನ ಪರಿಚಯ ಮಾಡಿಕೊಂಡೆ.
ಕಾರ್ಯಕ್ರಮ ಆರಂಭವಾಗಲು ಇನ್ನೂ ಅರ್ಧ ಗಂಟೆ ಸಮಯವಿತ್ತು. ಅಷ್ಟರಲ್ಲೆ ನಮ್ಮಿಬ್ಬರ ಮಾತುಕತೆ ಸಾಕಷ್ಟಾಗಿ, ವಿಜಯ್ ಕೂಡಾ ನನ್ನ ಹಾಗೇ ಬೆಂಗಳೂರಿನಿಂದ ಕೆಲಸಕ್ಕಾಗಿ ಚೆನ್ನೈಗೆ ಬಂದಿರುವುದೆಂದು ಮತ್ತು ಅವನ ಅಪ್ಪ ಅಮ್ಮನ ಬಗ್ಗೆ, ಅವನ ಕೆಲಸದ ಬಗ್ಗೆ, ಅವನು ಚೆನ್ನೈನಲ್ಲಿ ಉಳಿದುಕೊಂಡಿರುವ ರೂಮಿನ ಬಗ್ಗೆ ಎಲ್ಲಾ ತಿಳಿದುಹೋಯಿತು. "ನಮ್ಮ ರೂಮಿನಲ್ಲಿ ಅಡುಗೆ ಮಾಡಿಕೊಳ್ಳುವ ಹಾಗಿಲ್ಲ, ನಮಗೆ ದಿನಾ ಹೊರಗಡೆಯದೇ ಊಟ" ಎಂದು ಅವನು ಹೇಳಿದಾಗ ಪಾಪ ಅನಿಸಿತು.
ಸುಮಾರು ೨ ಗಂಟೆಗಳ ಕಾಲ ವಿದ್ಯಾಭೂಷಣರ ಕಛೇರಿ ನಡೆಯಿತು. ನಂತರ ನಾನು ಮನೆಗೆ ಹೊರಡಲು ತಯಾರಾದೆ. ಅಂದು ರಾತ್ರಿಗೆ ಟೊಮೆಟೋ ಸಾರು ಮಾಡಬೇಕೆಂದು ನಿರ್ಧರಿಸಿದ್ದೆ. ಹಾಗಾಗಿ ವಿಜಯ್‌ಗೆ ನನ್ನ ಮನೆಗೆ ಬರಲು ಆಹ್ವಾನ ಕೊಟ್ಟೆ. ಆಹ್ವಾನ ಒಪ್ಪಿದ ವಿಜಯ್, ಆದರೆ ಅದಕ್ಕೆ ಮುಂಚೆ ಇಲ್ಲಿ ವೇದಿಕೆಯ ಮೇಲೆ ಸ್ವಲ್ಪ ಕೆಲಸವಿದೆ ಬನ್ನಿ ಎಂದು ನನ್ನನ್ನು ಕರೆದುಕೊಂಡು ಹೋದ. ಅಲ್ಲಿ ವೇದಿಕಯ ಪರದೆಯ ಹಿಂದೆ ವಿದ್ಯಾಭೂಷಣರು ಎರಡು ಗಂಟೆಗಳು ಕಛೇರಿಯ ನಂತರ ಸುಸ್ತಾಗಿ ಕುಳಿತಿದ್ದರು. "ನಾನು ಬೆಂಗಳೂರಿನವನೇ ಸಾರ್, ನಿಮ್ಮ ಅಭಿಮಾನಿ, ನಿಮ್ಮ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು" ಎಂದು ವಿದ್ಯಾಭೂಷಣರನ್ನು ಮನವಿ ಮಾಡಿದೆ. ಅವರು ಒಲ್ಲದ ಮನಸ್ಸಿನಿಂದ ಏದುಸಿರು ಬಿಡುತ್ತಾ ಮೇಲೆದ್ದು ನಿಂತರು. ಈ ಕಡೆ ಬನ್ನಿ ಸಾರ್, ಅಲ್ಲಿ ಬೆಳಕಿಲ್ಲ, ಈ ಫೋಟೋ ಸರಿಯಾಗಿ ಬಂದಿಲ್ಲ, ಇನ್ನೊಂದು ಫೋಟೋ ಬೇಕು ಹೀಗೆ ಮಾತನಾಡುತ್ತಾ ಐದಾರು ಫೋಟೋಗಳನ್ನು ವಿಜಯ್ ತನ್ನ ಮೊಬೈಲಿನಿಂದ ನನ್ನ ಕೈಲಿ ತೆಗೆಸಿದ. ವಿದ್ಯಾಭೂಷಣರು ವಾಪಸ್ ಕುಳಿತುಕೊಳ್ಳಲು ಯೋಚಿಸುತ್ತಿದ್ದಾರೆ ಆದರೆ ಇವ ಅವರನ್ನು ಬಿಡುತ್ತಲೇ ಇಲ್ಲ. ಕಡೆಗೂ ಅವರ ಮೇಲೆ ದಯೆ ಬಂದು ನಾನೇ ವಿಜಯ್‌ನನ್ನು ಬಲವಂತವಾಗಿ ಆಚೆಗೆ ಹೊರಡಿಸಿಕೊಂಡು ಬಂದೆ. ಅಂದು ನಮ್ಮ ಮನೆಗೆ ಹೋಗಿ ಅನ್ನ, ಸಾರು ಮಾಡಿ ಬಿಸಿಬಿಸಿಯಾಗಿರುವಾಗಲೇ ಇಬ್ಬರೂ ತಿಂದು ಮುಗಿಸಿ ವಿಜಯ್ ತನ್ನ ರೂಮಿಗೆ ಹೊರಟಾಗ ರಾತ್ರಿ 11 ಗಂಟೆ.
ದಿನಗಳು ಉರುಳುತ್ತಿದ್ದಂತೆ ತನ್ನ ಪ್ರೀತಿಯ ಹಾಗೂ ಆದರ್ಶದ ಮಾತುಗಳಿಂದ ತುಂಬಾ ಹತ್ತಿರವಾದ ವಿಜಯ್. ಪ್ರತಿ ಶನಿವಾರ ಮಧ್ಯಾಹ್ನ ನನ್ನ ಮನೆಗೆ ಬಂದರೆ, ಮತ್ತೆ ಅವನು ಅವನ ರೂಮಿಗೆ ಹೊರಡುತ್ತಿದ್ದದ್ದು ಭಾನುವಾರ ರಾತ್ರಿಯೇ. ಬ್ಯಾಂಕ್ ಕೊಟ್ಟಿದ್ದ ದೊಡ್ಡ ಮನೆಯಲ್ಲಿ ಒಬ್ಬನೇ ಇದ್ದ ನನಗೆ ವಾರದ ಕೊನೆಯಲ್ಲಿ ಜೊತೆಗಿರಲು ಒಬ್ಬ ಒಳ್ಳೆಯ ಗೆಳೆಯ ದೊರೆತಂತಾಯಿತು. ವಿಜಯ್‌ಗ ಟಿ.ವಿಯಲ್ಲಿ ಸಿನಿಮಾ ನೋಡೋದು ಅಂದರೆ ತುಂಬಾ ಖುಷಿ. ನನ್ನ ಮನೆಯ ಟಿವಿ ಅವನು ಬಳಸಿದಷ್ಟು ನಾನೂ ಉಪಯೋಗಿಸಿರಲಿಲ್ಲ. ಅಷ್ಟೇ ಅಲ್ಲ, ಶನಿವಾರ ಮತ್ತು ಭಾನುವಾರ ನನ್ನ ಮನೆಯ ಅಡುಗೆ ಮತ್ತು ಸ್ವಚ್ಛತೆ ಕೆಲಸಗಳಿಗೂ ನನ್ನೊಂದಿಗೆ ಕೈ ಜೋಡಿಸುತ್ತಿದ್ದ. ಭಾನುವಾರಗಳಂದು ಮಧ್ಯಾಹ್ನ ಒಳ್ಳೆ ಊಟ ಮಾಡಿ, ಒಂದು ಸುತ್ತು ಮಲಗಿ, ಸಂಜೆಗೆ ಸುಮಾರು 5 ಕಿಲೋಮೀಟರ್ ವಾಕಿಂಗ್ ಹೋಗಿ ಹಾಗೆ ಅಲ್ಲಿದ್ದ ಅಡ್ಯಾರ್ ಆನಂದ ಭವನದಲ್ಲಿ ಕಾಫಿ ಕುಡಿದು ಮನೆಗೆ ಬರುತ್ತಿದ್ದದ್ದೂ ಇನ್ನೂ ಮರೆತಿಲ್ಲ.
ಹೀಗಿರುವಾಗ ಒಮ್ಮೆ ಚೆನ್ನೈಗೆ ನನ್ನ ಅಣ್ಣ ಅಮೇರಿಕಾ ವೀಸಾ ಕೆಲಸಕ್ಕೆ ಬಂದಿದ್ದು ವುಡ್ ಲ್ಯಾಂಡ್ಸ್ ಹೋಟಲ್ಲಿನಲ್ಲಿ ಉಳಿದುಕೊಂಡಿದ್ದ. ನಾನು ಮತ್ತು ವಿಜಯ್ ಅವನನ್ನು ಭೇಟಿ ಮಾಡಲು ಹೋಗಿ ಅಲ್ಲೆ ಹೋಟಲ್ಲಿನಲ್ಲೆ ಊಟಕ್ಕೆ ಕುಳಿತೆವು. ಅಲ್ಲಿ ಸೋಫಾ ಮೇಲೆ ಏನ್ನನ್ನೋ ಯೋಚನೆ ಮಾಡುತ್ತಾ ಡಾ.ಪಿ.ಬಿ.ಶ್ರೀನಿವಾಸ್ ಅವರು ಕುಳಿತಿದ್ದರು. ತಾನು ಬೇಗನೆ ಊಟ ಮಾಡಿ, ನನಗೂ ಬೇಗನೇ ಊಟ ಮಾಡಲು ಹೇಳಿ ಪಿ.ಬಿ.ಶ್ರೀನಿವಾಸ್ ಅವರ ಪಕ್ಕದಲ್ಲಿ ನಿಂತೇ ಬಿಟ್ಟ ವಿಜಯ್. ಬನ್ನಿ ಗುರು ಒಂದು ಫೋಟೋ ತೆಗೀರೀ ಎಂದು. "ಸಾರ್ ಸ್ವಲ್ಪ ಎದ್ದು ನಿಲ್ತೀರಾ" ಅಂತ ಪಿಬಿಎಸ್ ಅವರಿಗೂ ಹೇಳಿದ. ಪಾಪ ಅವರದೇ ಲೋಕದಲ್ಲಿ ಮುಳುಗಿದ್ದ ಅವರು ಅಲ್ಲಿ ಏನಾಗುತ್ತಿದೆ ಎಂದು ಅರಿಯುವ ಮುನ್ನ ಅವರೊಡನೆ ಇವನ ಫೋಟೋ ಕ್ಲಿಕ್ಕಾಗಿತ್ತು.
ಚಿತ್ರರಂಗ, ಸಂಗೀತ ಹೀಗೆ ಯಾವುದೇ ಕಲಾವಿದರನ್ನು ಕಂಡರೆ, ಇವನಿಗೇನೋ ಗೌರವ, ಆದರೆ ದಯೆ ಇರಲಿಲ್ಲ. ಅವರು ಎಷ್ಟೇ ಬಳಲಿದ್ದರೂ ಇವನು ಫೋಟೋಗೆ ಕರೆದಾಗ ಅವರು ಬರಲೇಬೇಕು. ಆಗ ನನಗೆ ಈ ಫೋಟೋಗಳ ಹುಚ್ಚು ಅಷ್ಟಿರಲಿಲ್ಲ. ಈಗೀಗ ಒಮ್ಮೊಮ್ಮೆ ನಾನು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ನನ್ನ ಗೆಳೆಯರು ಬೈದರೆ, ನನಗೆ ವಿಜಯ್ ನೆನಪಾಗುತ್ತಾನೆ.
ಚೆನ್ನೈನಲ್ಲೇ ಇದ್ದರೂ, ಅವನು ಬೆಂಗಳೂರಿನಲ್ಲಿರುವ ತನ್ನ ತಂದೆ ತಾಯಿ ತಂಗಿ ಇವರ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದ ಮತ್ತು ಮಾತನಾಡುತ್ತಿದ್ದ. ಬೆಂಗಳೂರಿಗೆ ಹೋಗಿ ಅವರಿಗೆ ಸಹಾಯ ಮಾಡಲು ಆಗುತ್ತಿಲ್ಲವೆಲ್ಲ ಎಂಬ ಕೊರಗು ಅವನಿಗೆ ಯಾವಾಗಲೂ ಇತ್ತು. ಹೀಗಿರುವಾಗ ಒಮ್ಮೆ ಅವನಿಗೆ ಬೆಂಗಳೂರಿನಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಬಹುಶಃ ಈ ಸಂತೋಷದ ಸುದ್ದಿಯನ್ನು ಅವನು ಮೊದಲು ಹಂಚಿಕೊಂಡಿದ್ದು ನನ್ನಲ್ಲೇ, ಏಕೆಂದರೆ ಅಷ್ಟು ಜೀವನಕ್ಕೆ ಹತ್ತಿರವಾಗಿದ್ದ ವಿಜಯ್. ಅವನು ಮತ್ತೆ ತನ್ನ ತಂದೆ ತಾಯಿಯೊಂದಿಗೆ ಇರುತ್ತಾನೆ ಎಂಬುದು ಕೇಳಿ ನನಗಂತೂ ತುಂಬಾ ಸಂತೋಷವಾಯಿತು. ನೀವು ಬೆಂಗಳೂರಿಗೆ ಹೋಗಿ, ಸದ್ಯದಲ್ಲೇ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿದೆ. ಆದರೆ ಕರ್ನಾಟಕಕ್ಕೆ ವಾಪಸ್ ಆಗುವುದು ನನಗೆ ಅಸಾಧ್ಯ ಎಂದು ಗೊತ್ತಿತ್ತು.
ಒಂದು ದಿನ ವಿಜಯ್ ಫೋನ್ ಮಾಡಿ ತನಗೆ ಮದುವೆ ನಿಶ್ಚಯವಾಗಿದೆ, ಮತ್ತು ನಮ್ಮ ಅತ್ತೆ ಮಾವ ಚೆನ್ನೈಗೆ ರೇಷ್ಮೆ ಸೀರೆಗಳನ್ನು ಖರೀದಿಸಲು ಬರುತ್ತಿದ್ದಾರೆ ಎಂದು ಹೇಳಿದ. ನನ್ನ ಮನೆ ದೊಡ್ಡದಾಗಿದೆ, ಅವರು ಬೇಕಾದರೆ ನನ್ನ ಮನೆಯಲ್ಲೇ ಉಳಿದುಕೊಳ್ಳಬಹುದು ಎಂದು ನಾನು ಹೇಳಿದೆ. ಆಗ ಅವನು “ಇಲ್ಲ ಅವರು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಮನೆಗೆ ಹೋಗುತ್ತಾರೆ” ಅಂದ. ಅವನು ಹೇಳಿದ್ದು ತಮಾಶೆ ಎಂದು ತಿಳಿದು ನಾನು ನಕ್ಕು ಫೋನ್ ಕಟ್ ಮಾಡಿದೆ.
ಅವನ ಮದುವೆ ದಿನ ಬಂದೇ ಬಿಡ್ತು. ನಾನು ಕೆಲಸಕ್ಕೆ ರಜೆ ಹಾಕಿ, ಬೆಂಗಳೂರಿಗೆ ಬಂದೆ. ಶಂಕರಪುರಂನಲ್ಲಿ ಇದ್ದ ದೊಡ್ಡ ಛತ್ರದಲ್ಲಿ ಇವನ ಮದುವೆ. ನನ್ನ ಅಣ್ಣನ ಮಗನನ್ನೂ ಮದುವೆಗೆ ಕರೆದುಕೊಂಡು ಹೋದೆ. ಮದುವೆ ಹಾಲ್ ತುಂಬಾ ಜನ, ಎಲ್ಲಿ ನೋಡಿದರೂ ಬರೇ ಚಿತ್ರರಂಗ ಹಾಗೂ ಕಿರುತೆರೆ ಧಾರವಾಹಿಯವರೇ. ಅಣ್ಣನ ಮಗನಂತೂ "ಅಲ್ಲಿ ನೋಡು ಟಿ.ಎನ್.ಸೀತಾರಾಮ್, ಇಲ್ಲಿ ನೋಡು ಸಿಹಿ ಕಹಿ ಚಂದ್ರು" ಎಂದು ಹೇಳುತ್ತಾ ರವಿಚಂದ್ರನ್, ಎಸ್.ಪಿ.ಬಿ, ನಾಗಾಭರಣ ಇನ್ನೂ ಹಲವರನ್ನು ಮದುವೆಯ ಮಂಟಪದ ಮೇಲೆ ನೋಡುತ್ತಾ ಕುಳಿತೆವು.
ಯಾವ ವ್ಯಕ್ತಿ ಆ ದಿನ ಚೆನ್ನೈನಲ್ಲಿ ಸಾರ್ ಫೋಟೋ, ಸಾರ್ ಫೋಟೋ ಎಂದು ವಿದ್ಯಾಭೂಷಣರನ್ನೂ, ಪಿಬಿ.ಶ್ರೀನಿವಾಸರನ್ನೂ ಬೇಡಿಕೊಳ್ಳುತ್ತಿದ್ದನೋ, ಅಂತಹ ವ್ಯಕ್ತಿಗೆ ತನ್ನ ಮದುವೆಯಲ್ಲಿ ಇಡೀ ಚಿತ್ರರಂಗವೇ ಹಾಜರಾಗಿರುತ್ತದೆಂಬ ಕಲ್ಪನೆಯೂ ಇರಲಾರದು. ಇವನು ಮದುವೆ ಮಾಡಿಕೊಂಡ ಹುಡುಗಿ ಶೃತಿ ರಂಗಭೂಮಿ ಹಾಗೂ ಕಿರುತೆರೆಯ ಖ್ಯಾತ ಕಲಾವಿದೆ ಶ್ರೀಮತಿ ಸುಂದರಶ್ರೀ ಹಾಗೂ ಈ ಟಿವಿ ಮುಖ್ಯ ನಿರ್ವಾಹಕರಾಗಿದ್ದ ಶ್ರೀ ಸುರೇಂದ್ರನಾಥರ ಏಕೈಕ ಪುತ್ರಿ.
ಈಗಲೂ ತನ್ನ ಹೆಂಡತಿ ಉಪ್ಪಿಟ್ಟು ಮಾಡಿದರೆ, "ಏನೇ ಹೇಳು, ಗುರು ಚೆನ್ನೈನಲ್ಲಿ ಉಪ್ಪಿಟು ಮಾಡಿದ ಹಾಗಿಲ್ಲ" ಎಂದು ಹೇಳುತ್ತಾರೆ ಎಂದು ಅವನ ಪತ್ನಿ ಒಮ್ಮೆ ಹೇಳಿದ್ದರು. ದೂರದ ಚೆನ್ನೈನಲ್ಲಿ ಇದ್ದಾಗ ಪ್ರತಿ ವಾರ ಭೇಟಿ ಮಾಡುತ್ತಿದ್ದ ನಾನು ಹಾಗೂ ವಿಜಯ್ ಈಗ ನಮ್ಮದೇ ಬೆಂಗಳೂರಿನಲ್ಲಿ ವರ್ಷಕ್ಕೊಮ್ಮೆ ಭೇಟಿಯಾಗಲೂ ಸಾಧ್ಯವಾಗುತ್ತಿಲ್ಲ. ಕಶ್ವಿ ಹಾಗೂ ಶವಿಕ್ ಎಂಬ ಹೆಸರಿನ ಎರಡು ಮಕ್ಕಳೊಂದಿಗೆ ಅವನ ಸಂಸಾರದ ಜವಾಬ್ದಾರಿಯೂ ಹೆಚ್ಚಾಗಿದೆ.
ಮೊನ್ನೆ ಎಮ್ ಎಸ್ ನರಸಿಂಹಮೂರ್ತಿಯವರ ಮನೆಗೆ ಹೋಗಿದ್ದಾಗ ಅವರೊಂದಿಗೆ ಫೋಟೋ ತೆಗೆಸಿಕೊಂಡ ಸಮಯದಲ್ಲಿ ನೆನಪಾಯಿತು ನನ್ನ ಮತ್ತು ವಿಜಯ ಕುಮಾರ್‌ನ ಚೆನ್ನೈ ದಿನಗಳು. ಆ ನೆನಪುಗಳ ಮೆಲುಕುಹಾಕುತ್ತಾ ಹೊರಬಂದದ್ದೇ ಈ ಲೇಖನ.