ನೀವು ಕಾಶ್ಮೀರಕ್ಕೆ ಎಂದಾದರೂ ಭೇಟಿಕೊಟ್ಟಿದ್ದರೆ ನೀವು ಪಶ್ಮೀನಾ ಶಾಲ್ ಬಗ್ಗೆ ಕೇಳಿರುವುದರಲ್ಲಿ ಹಾಗೂ ನೋಡಿರುವುದರಲ್ಲಿ ಅನುಮಾನವೇ ಇಲ್ಲ. ನಿಮ್ಮ ಟ್ರಾವೆಲ್ ಏಜೆಂಟ್ ಕೇಸರಿ, ಅಕ್ರೂಟ್ ದೊರೆಯುವ ದಿನಸಿ ಅಂಗಡಿಗೂ ಹಾಗೂ ಪಶ್ಮೀನಾ ಶಾಲ್ ದೊರೆಯುವ ಬಟ್ಟೆ ಅಂಗಡಿಗೆ ನಿಮ್ಮನ್ನು ಕರೆದುಕೊಂಡು ಹೋಗಿರುತ್ತಾನೆ. ಹೌದು ಈ ಮೂರು ಅಂದರೆ ಕೇಸರಿ,ಅಕ್ರೂಟ್ ಹಾಗೂ ಪಶ್ಮೀನಾ ಶಾಲು ಕಾಶ್ಮೀರದಲ್ಲೇ ಹೆಚ್ಚು ದೊರೆಯುವುದು.
ನಿಮ್ಮ ಬಳಿ ಇರುವ ಉಂಗುರವನ್ನು ಕೇಳಿ ಆ ಉಂಗುರದ ಒಂದು ಬದಿಯಲ್ಲಿ ಶಾಲನ್ನು ತೂರಿಸಿ ಮತ್ತೊಂದು ಕಡೆಯಿಂದ ಎಳೆದು ತೋರಿಸಿ ಆ ಶಾಲುವಿನ ಮೃದುತ್ವವನ್ನು ನಿಮಗೆ ಪ್ರಮಾಣಿಕರಿಸುತ್ತಾನೆ ಅಂಗಡಿಯವ. ಆಹಾ ಎಷ್ಟು ಮೃದುವಾಗಿದೆ ಎಂದು ಸಂತೋಷಪಟ್ಟು ನಂತರ ಅಂಗಡಿಯವ ಹೇಳಿದ ಅದರ ಬೆಲೆಯನ್ನು ಕೇಳಿ, ತುಂಬಾ ತೆಳ್ಳಗಿದೆ, ಬೆಂಗಳೂರಿನ ಛಳಿ ಇದು ತಡೆಯುವುದಿಲ್ಲವೆಂದೋ ಅಥವಾ ಬೆಲೆ ಜಾಸ್ತಿಯಾಯಿತು ಎಂದು ನೇರವಾಗಿ ಹೇಳಿ ಬಹಳಷ್ಟು ಜನ ಜಾಗ ಖಾಲಿ ಮಾಡಿರುತ್ತಾರೆ. ಆದರೆ ಎಷ್ಟೋ ದೇಶಗಳ ಸರ್ಕಾರಗಳು ಈ ಪಶ್ಮೀನಾ ಶಾಲು ಮಾರುವುದನ್ನು ನಷೇಧಿಸಿದೆ. ಕಾರಣ ತಿಳಿಸುತ್ತೇನೆ ಕೇಳಿ.
ಈ ಪಶ್ಮೀನಾ ಶಾಲು ಮಾಡಲು ಬೇಕಾಗಿರುವ ಉಣ್ಣೆ ದೊರೆಯುವುದು ಎತ್ತರದ ಕಾಶ್ಮೀರ ಹಾಗೂ ಟಿಬೇಟ್ ಪರ್ವತಗಳಲ್ಲಿ ನೆಲೆಸಿರುವ ಮೇಕೆಗಳಿಂದ. ಸದಾ ಹಿಮಾವೃತವಾದ ಪರ್ವತಗಳಲ್ಲಿ ನೆಲೆಸಿರುವ ಈ ಮೇಕೆಗಳ ಉಣ್ಣೆ ಬಲು ಮೃದು. ಆದರೆ ಇದನ್ನು ಹಿಡಿಯುವುದು ಎಷ್ಟು ಕಷ್ಟವೋ ಹಾಗೆಯೇ ಇದಕ್ಕೆ ನೋವಾಗದಂತೆ ಉಣ್ಣೆ ತೆಗೆಯುವುದು ಅಷ್ಟೇ ಕಷ್ಟ. ಮನುಷ್ಯನ ದುರಾಸೆ ಎಷ್ಟೆಂದರೆ ಮೇಕೆಯ ಮಾಂಸ ಸ್ವಲ್ಪ ಕೂದಲಿನ ಜೊತೆಗೆ ಬಂದರೂ ತೊಂದರೆಯಿಲ್ಲ ಆದರೆ ಅದರ ಕೂದಲು ಮಾತ್ರ ಸ್ವಲ್ಪವೂ ಮೇಕೆಯ ಮೇಲೆ ಉಳಿಯಬಾರದು ಹಾಗೆ ಬಾಚಿಕೊಂಡುಬಿಡುತ್ತಾನೆ.
ಇದನ್ನು ಹಿಡಿಯುವ ರೀತಿ ನಾನು ನಿಮಗೆ ತಿಳಿಸಲೇ ಬೇಕು. ಸ್ವಲ್ಪ ಛಳಿ ಕಡಿಮೆಯಿದ್ದಾಗೆ ಈ ವರ್ತಕರು ಹಿಮ ಪರ್ವತಗಳ ಬುಡಕ್ಕೆ ಹೋಗಿ ನೆಲದಲ್ಲಿ ಗಟ್ಟಿಯಾದ ಕ್ಲಿಪ್ ಗಳನ್ನು ಇಟ್ಟು ಬರುತ್ತಾರೆ. ಅವರಿಗೆ ಸಾಮನ್ಯವಾಗಿ ಈ ಮೇಕೆಗಳು ಓಡಾಡುವ ಹಾದಿಯ ಅಂದಾಜು ಇರುತ್ತದೆ. ನಂತರ ಮೂರು ತಿಂಗಳು ಅವರು ಆ ಕಡೆ ಹೋಗುವುದೇ ಇಲ್ಲ. ಈ ಮಧ್ಯದಲ್ಲಿ ಅಲ್ಲಿ ಮೇಕೆಗಳು ಆ ಕ್ಲಿಪ್‌ಗಳಿಗೆ ಸಿಕ್ಕಿಹಾಕಿಕೊಳ್ಳುತ್ತವೇ. ಗಟ್ಟಿಯಾದ ಕ್ಲಿಪ್‌ಗಳಿಗೆ ಕಾಲು ಸಿಕ್ಕಿಹಾಕಿಕೊಂಡಿದ್ದರಿಂದ ಜೋರಾಗಿ ಕಿರುಚುತ್ತಾ ಅಲುಗಾಡಲಾಗದೇ ಆ ತಂಡಿಯಲ್ಲಿ ಊಟವಿಲ್ಲದೆ ಮೂರ್ನಾಲ್ಕು ದಿನಗಳ ನಂತರ ಸಾಯುತ್ತದೆ.
ಸ್ವಲ್ಪ ದಿನಗಳ ನಂತರ ವರ್ತಕರು ಆ ಜಾಗಕ್ಕೆ ಹೋಗಿ ಸತ್ತ ಈ ಮೇಕೆಗಳನ್ನು ತಂದು ಅದರ ಉಣ್ಣೆಯನ್ನು ತೆಗೆದು ನಂತರ ಅದರ ಮಾಂಸವನ್ನು ತಿಂದು ಮುಗಿಸುತ್ತಾರೆ. ಇವರುಗಳ ಈ ಕ್ರೌರ್ಯವನ್ನು ಗಮನಿಸಿದ ಪ್ರಾಣಿದಯಾ ಸಂಘಗಳು ಹಾಗೂ ಇನ್ನೂ ಅನೇಕ ಅಂತರ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳು ಈ ಪಶ್ಮೀನ ಶಾಲಿನ ನಿಷೇಧಕ್ಕೆ ಆಗ್ರಹಿಸಿದರು. ಆದರೆ ವರ್ತಕರು ತಾವೂ ಯಾವುದೇ ಕ್ರೌರ್ಯ ಮಾಡಿಲ್ಲ ನಾವು ಕೇವಲ ಉಣ್ಣೆಯನ್ನು ಮಾತ್ರ ತೆಗೆದು ಮೇಕೆಯನ್ನು ಹಾಗೆ ಬಿಟ್ಟುಬಂದಿದ್ದೇವೆ ಎಂದು ವಾದಿಸುತ್ತಿದ್ದಾರೆ. ಆದರೆ ಕ್ಲಿಪ್‌ಗಳಿಗೆ ಸಿಕ್ಕಿಹಾಕಿಕೊಂಡು ನರಳಾಡಿ ಸತ್ತಿರುವ ಮೇಕೆಗಳು ಹಾಗೂ ಮಾಂಸವೂ ಕಿತ್ತು ಬರುವಂತೆ ತೀರಾ ಆಳಕ್ಕೆ ಉಣ್ಣೆಯನ್ನು ತೆಗೆದು ಆ ಮೇಕೆಗಳು ಗಾಯಗಳಿಂದ ನರಳಾಡುತ್ತಿರುವ ಫೋಟೋಗಳು ಮತ್ತು ವೀಡಿಯೋಗಳು ಲಭ್ಯವಾದ ಹಿನ್ನಲೆಯಲ್ಲಿ ಸರ್ಕಾರಗಳು ನಿಷೇಧ ಹೇರಿರುವುದು ನಿಜವೇ; ಆದರೆ ಅದರ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಗೊತ್ತಿಲ್ಲ. ನಿಷೇಧದ ಬಗ್ಗೆ ಹೊರಬಂದಿರುವ ಸುತ್ತೋಲೆಯಲ್ಲಿರುವ ಗೊಂದಲಗಳನ್ನು ತಮಗೆ ಬೇಕಾದ ರೀತಿ ಅರ್ಥೈಸಿಕೊಂಡು ಈಗಲೂ ವರ್ತಕರು ಪಶ್ಮೀನಾ ಶಾಲುಗಳನ್ನು ಮಾಡುತ್ತಲೇ ಇದ್ದಾರೆ ಹಾಗೂ ಮಾರುತ್ತಲೇ ಇದ್ದಾರೆ.
ನಾನು ಅಮರನಾಥ ಯಾತ್ರೆಗೆ ಹೋಗಿದ್ದಾಗ ಹಾಗೆ ಕಾಶ್ಮೀರದ ಶ್ರೀನಗರಕ್ಕೆ ಭೇಟಿಮಾಡಿದ್ದೆ. ಅಲ್ಲಿ ಪಶ್ಮೀನಾ ಶಾಲು ನೋಡಿ ನಾನು ಮನಸೋತಿದ್ದೆ. ಆಗ ನಮ್ಮ ಜೊತೆ ಬಂದಿದ್ದ ಒಬ್ಬ ಯಾತ್ರಿ ಈ ಪಶ್ಮೀನಾ ಶಾಲುವಿನ ಕಥೆಯನ್ನು ಹೇಳಿದ್ದರು. ನಂತರ ಅಂತರ್ಜಾಲದಲ್ಲಿ ಇದರ ಬಗ್ಗೆ ಸ್ವಲ್ಪ ಮಾಹಿತಿ ಪಡೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮುಂದೆ ಯಾರಾದರೂ ಪಶ್ಮೀನಾ ಶಾಲು ಮಾರಲು ಬಂದರೆ ಖರೀದಿಸುವಿರಾ!