ಗುರುರಾಜ
ಶಾಸ್ತ್ರಿ
ಒಂದು ಕೋಣೆಯ ಕಥೆ
30-12-2021
ಇಂದು ಪಕ್ಕದ ಬೀದಿಯಲ್ಲಿದ್ದ ದೊಡ್ಡ ಮನೆಯೊಂದನ್ನು ಕೆಡವಿ ನೆಲಸಮ ಮಾಡಿದ್ದಾರೆ, ದೊಡ್ಡದೊಂದು ಅಪಾರ್ಟ್‌ಮೆಂಟ್ ಅಲ್ಲಿ ಮೇಲೇಳುವುದರ ಎಲ್ಲಾ ಸೂಚನೆಗಳು ಅಲ್ಲಿ ಕಾಣುತ್ತಿದೆ. ಅಲ್ಲಿ ಅಡಗಿದ್ದ ಹಳೆಯ ಮನೆಯ ನೆನಪು ಇಂದು ನನ್ನ ಕಾಡ ತೊಡಗಿದೆ. ಅದರಲ್ಲೂ ಆ ಮನೆಯ ಮುಂದೆ ಇದ್ದ ಒಂದು 4 ಅಡಿ ಅಗಲ ಹಾಗೂ 5 ಅಡಿ ಉದ್ದದ ಕೋಣೆಯೇ ಈ ನನ್ನ ಲೇಖನದ ಮುಖ್ಯವಸ್ತು. ಇಸವಿ 1984, ಆಗ ನಾನು 5ನೇ ತರಗತಿಯಲ್ಲಿ ಓದುತ್ತಿದ್ದೆ. ನನ್ನ ತರಗತಿಯಲ್ಲಿ ಇದ್ದದ್ದು 45 ವಿದ್ಯಾರ್ಥಿಗಳು. ನನ್ನದು ಅಂಕಗಳಲ್ಲಿ ಕಡಿಮೆ ಹಾಗೂ ಶ್ರೇಣಿಯಲ್ಲಿ (Rank) ಹೆಚ್ಚಿದ್ದ ಸಮಯವದು. ಅಂದರೆ ನನಗಿಂತ ಸುಮಾರು 40 ಬುದ್ದಿವಂತರು ನನ್ನ ತರಗತಿಯಲ್ಲಿದ್ದರು ಎಂದು ಹೇಳಿಕೊಳ್ಳುವುದಕ್ಕೆ ನನಗೇನು ಅವಮಾನವಾಗುವುದಿಲ್ಲ. ಗೊತ್ತು ಗುರಿ ಇಲ್ಲದೆ ಸುಮ್ಮನೆ ನಾನೊಬ್ಬನೇ ಬುದ್ಧಿವಂತನೆಂದು ಊಹಿಸಿಕೊಳ್ಳುತ್ತಾ ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದ ದಿನಗಳವು. ಅದೆಲ್ಲಾ ಸರಿ, ಕೋಣೆ ವಿಷಯ ಬಿಟ್ಟು ಜಾಣ ಕೋಣರ ವಿಷಯ ಯಾಕೆ ಅಂತ ಯೋಚಿಸುತ್ತಾ ಇದ್ದೀರಾ ಅಲ್ಲವೇ. ಸರಿ ಹಾಗಾದರೆ ಆ ಹಳೆಯ ಮನೆಯ ಕೋಣೆಯ ವಿಷಯಕ್ಕೆ ಬರುತ್ತೇನೆ. ಒಂದು ದಿನ ಶಾಲೆಯಿಂದ ಮನೆಗೆ ನಡೆದುಕೊಂಡು ಬರುತ್ತಿದ್ದಾಗ ಈ ಹಳೆಯ (ಆಗ ಹೊಸದೇ) ಮನೆಯ ಮುಂದೆ ಸ್ಕೂಟರ್‌ ಮೇಲೆ ಕುಳಿತು ನನ್ನ ತರಗತಿಯ ಸಹಪಾಠಿ ವೆಂಕಟೇಶ ಆಟವಾಡುತ್ತಿದ್ದ. "ಏನೋ ಗುರು ಇಲ್ಲಿ" ಎಂದು ಅವನು ಅಂದು ಕೇಳಿದ್ದು ನಿನ್ನೆ ಮೊನ್ನೆ ನಾನು ಕೇಳಿಸಿಕೊಂಡಂತಿದೆ. ಪಕ್ಕದ ಬೀದಿಯಲ್ಲೇ ನನ್ನ ಮನೆ ಎಂದೇ. ವೆಂಕಟೇಶನ ಮನೆಯವರೆಲ್ಲಾ ಅಂದೇ ಅಲ್ಲಿ ಬಾಡಿಗೆ ಮನೆಗೆ ಬಂದಿದ್ದರು. ನನ್ನನ್ನು ಮನೆಯೊಳಗೆ ಕರೆದು ತನ್ನ ತಂದೆ ತಾಯಿಗೆ ಪರಿಚಯಮಾಡಿಕೊಟ್ಟ. ನನಗೋ ಭಯ, ಏಕೆಂದರೆ ವೆಂಕಟೇಶ ತರಗತಿಯಲ್ಲೇ ಅತಿ ಬುದ್ಧಿವಂತ ಹುಡುಗ ಹಾಗೂ ಪ್ರಥಮ ಸ್ಥಾನವನ್ನು ಕಳೆದ 5 ವರ್ಷಗಳಲ್ಲಿ ಯಾರಿಗೂ ಬಿಟ್ಟುಕೊಟ್ಟಿರಲಿಲ್ಲ. ಅವನೆಲ್ಲಿ, ನಾನೆಲ್ಲಿ ಎಂಬ ಅಳುಕು ಮನಸ್ಸಿನಲ್ಲಿ. ಅವರು ಬಂದಿದ್ದ ಬಾಡಿಗೆ ಮನೆ ಒಂದು ವಠಾರದ ಹಾಗಿತ್ತು. ಆ ಮನೆಯ ಮುಂದೆ ನೇರ ರಸ್ತೆಯಿಂದ ಮಾತ್ರ ಪ್ರವೇಶ ಪಡೆಯುತ್ತಿದ್ದ ಒಂದು ಕೋಣೆಯ ಬಗ್ಗೆಯೇ ನಾನು ತಿಳಿಸಲು ಹೊರಟಿರುವುದು. ವೆಂಕಟೇಶನ ಮನೆಯವರೆಲ್ಲರ ಪರಿಚಯವಾಯ್ತು ಮತ್ತು ನನ್ನ ಅವನ ಸ್ನೇಹವೂ ದಿನೇದಿನೇ ಹತ್ತಿರವಾಗುತ್ತಾ ಬಂತು. ಪ್ರತಿದಿನ ಅವನ ಜೊತೆಯಲ್ಲೇ ಶಾಲೆಗೆ ಹೋಗುವುದು ಬರುವುದು. ಹೀಗಿದ್ದಾಗ ತರಗತಿಯ ತಿಂಗಳ ಪರೀಕ್ಷೆ ಬಂತು. ವೆಂಕಟೇಶನ ತಂದೆ ತಾಯಿ ಮನೆಯ ಮಾಲೀಕರಿಗೆ ಮಾತನಾಡಿ ಮನೆಯ ಮುಂದಿದ್ದ ಕೋಣೆಯನ್ನು ವೆಂಟೇಶನಿಗೆ ಓದಲು ತೆಗೆದುಕೊಂಡಿದ್ದರು. "ಈ ಕೋಣೆಯಲ್ಲಿ ನಾನು ಒಬ್ಬನೇ ಓದುವುದು, ನೀನು ನನ್ನ ಜೊತೆ ಓದಲು ಬಾ, ಒಟ್ಟಿಗೇ ಓದೋಣ" ಎಂದು ವೆಂಕಟೇಶ ಹೇಳಿದಾಗ ನನಗೆ ಅಯ್ಯಪ್ಪ ಓದುವುದರಲ್ಲಿ ಅಗ್ರಶ್ರೇಣಿಯಲ್ಲಿದ್ದವ ಅವನೆಲ್ಲಿ ತರಗತಿಗೆ ಕೊನೆಯವನಾದವ ನಾನೆಲ್ಲಿ ಎಂಬ ಅರಿವಿದ್ದ ನನಗೆ ಈ ಜಂಟಿ ಓದು (combined study) ಸರಿಹೊಂದುವುದಿಲ್ಲ ಎನಿಸಿತು, ಹಾಗಾಗಿ ಬೇಡವೆಂದೆ. ಆದರೆ ಅವನು ಬಿಟ್ಟಾನೆ, ಅವನ ಬಲವಂತಕ್ಕೆ ನಮ್ಮ ಜಂಟಿ ಓದು ಆ ಕೋಣೆಯಲ್ಲಿ ಪ್ರಾರಂಭವಾಗಿಯೇಬಿಟ್ಟಿತು. ಯಾರಾದರೂ ನಿಮ್ಮ ಜೀವನದಲ್ಲಿ ಆದ ಕುತೂಹಲಕರವಾದ ಮತ್ತು ಅತಿ ಮುಖ್ಯವಾದ ತಿರುವು ಯಾವುದೆಂದು ನನ್ನನ್ನು ಕೇಳಿದರೆ, ಬಹುಶಃ ಆ ಕೋಣೆಯಲ್ಲಿ ಆರಂಭವಾದ ನನ್ನ ಮತ್ತು ವೆಂಕಟೇಶನ ಜಂಟಿ ಓದು ಎಂದು ನಾನು ಹೇಳುವುದರಲ್ಲಿ ಅನುಮಾನವೇ ಇಲ್ಲ. ಸಂಜೆ 6ರಿಂದ 8ರ ವರೆಗೆ ಆಟ, ಆಮೇಲೆ ಮನೆಗೆ ಬಂದು ಊಟ ಮತ್ತೆ ವೆಂಟೇಶನ ಮನೆಗೆ ಓದಲು ಹೋಗುವುದು. ದಿನಕ್ಕೆ ಸುಮಾರು ಒಂದರಿಂದ ಒಂದೂವರೆ ಗಂಟೆ ಓದು. ರಾತ್ರಿ ಹತ್ತಕ್ಕೆ ವೆಂಕಟೇಶನ ಅಮ್ಮ ಬೂಸ್ಟ್‌ ತಂದುಕೊಡುತ್ತಿದ್ದದ್ದು ಇನ್ನೂ ನೆನಪಿದೆ, ಅದನ್ನು ಕುಡಿದು ಮನೆಗೆ ವಾಪಸ್‌ ಬರುತ್ತಿದೆ. ಆಗಾಗ ರಾತ್ರಿ ಅಲ್ಲೇ ಕೋಣೆಯಲ್ಲೇ ಮಲಗುತ್ತಿದ್ದೆವೇನೋ, ಸರಿಯಾಗಿ ನೆನಪಿಲ್ಲ. ಆ ತಿಂಗಳ ಪರೀಕ್ಷೆಯಲ್ಲಿ ನನ್ನದು ತರಗತಿಗೆ ಆರನೇ ಸ್ಥಾನ. ಅಧ್ಯಾಪಕರಿಗೆ ಮತ್ತು ನನ್ನ ಸಹಪಾಠಿಗಳಿಗೆ ಅನುಮಾನ ಬಂದಿದ್ದು ಆಶ್ಚರ್ಯವೇನಿಲ್ಲ ಆದರೆ ನನಗೂ ನನ್ನ ತಂದೆ ತಾಯಿಗೂ ಓದಿನ ನನ್ನ ಈ ಬೆಳವಣಿಗೆ ನಂಬಲು ಸಾಧ್ಯವಾಗಲಿಲ್ಲ. ಅಧ್ಯಾಪಕರು ಮತ್ತೊಮ್ಮೆ ನನ್ನ ಉತ್ತರ ಪತ್ರಿಕೆ ಪರಿಶೀಲಿಸಿ ಸರಿಯಾದ ಅಂಕ ಕೊಟ್ಟಿರುವುದನ್ನು ಖಾತ್ರಿಪಡಿಸಿಕೊಂಡರು. ಅಪ್ಪನ ಬೈಗುಳಕ್ಕೆ ಹೆದರಿ ಯಾವಾಗಲೂ ಅಮ್ಮನ ಹತ್ತಿರ ಮಾರ್ಕ್ಸ್‌ಕಾರ್ಡಿಗೆ ಸಹಿ ಮಾಡಿಸಿಕೊಂಡು ಹೋಗುತ್ತಿದ್ದ ನಾನು ಆ ತಿಂಗಳು ಅಪ್ಪನಿಗೇ ಮಾ‌ರ್ಕ್ಸ್‌ಕಾರ್ಡ್‌ ತೋರಿಸುವ ಧೈರ್ಯ ತಂದುಕೊಂಡಿದ್ದೆ. ಈ ಹೆಚ್ಚಿನ ಅಂಕ ನನಗೆ ಬರುತ್ತಿದ್ದ ಹಾಗೆಯೇ ಕಡೆಯ ಶ್ರೇಣಿಯ ನನ್ನ ತರಗತಿಯ ಗೆಳೆಯರೆಲ್ಲಾ ನನ್ನಿಂದ ದೂರವಾಗುತ್ತಾ ಬಂದರು. ಆ ದಿನಗಳು ಹಾಗೆ, ಪ್ರತಿಯೊಂದು ಶ್ರೇಣಿಯರದು ಒಂದೊಂದು ಗುಂಪು. ಹೆಚ್ಚು ಅರಿವಿಲ್ಲದ ದಿನಗಳೆಂದು ಈಗನಿಸುತ್ತದೆ. ಮುಂದೆ ನಾನು ವೆಂಕಟೇಶ ಇಬ್ಬರೂ ಹೈಸ್ಕೂಲಿಗೆ ಒಂದೇ ಶಾಲೆಗೆ ಸೇರಿದರೂ ಅವನದೇ ಬೇರೆ ವಿಭಾಗ (section) ನನ್ನದೇ ಬೇರೆಯಾಗಿತ್ತು. ಕಾಲೇಜು ಸೇರಿದ ಮೇಲೆ ಅವರು ಮನೆ ಬದಲಾಯಿಸಿದರು ಹಾಗೂ ನಾವು ಭೇಟಿಮಾಡುತ್ತಿದ್ದದ್ದು ತುಂಬಾ ಕಡಿಮೆ. ಆ ಕೋಣೆಯಲ್ಲಿ ಆರಂಭವಾದ ನನ್ನ ಓದಿನ ಬದಲಾವಣೆ ಇಂದು ಈ ಮಟ್ಟಕ್ಕೆ ನನ್ನನ್ನು ತಂದಿರಿಸಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಗೆಳೆಯ ವೆಂಕಟೇಶ ಮುಂದೆ ಇಂಜಿನಿಯರಿಂಗ್‌ ಮಾಡಿ ಸದ್ಯ ಒಂದು ದೊಡ್ಡ ಕಂಪನಿಯಲ್ಲಿದ್ದಾನೆ. ಬೇರೆ ಗೆಳೆಯರಂತೆ ಯಾವಾಗ ಬೇಕಾದರೂ ಭೇಟಿ ಮಾಡಬಹುದು ಎಂಬಂತಿಲ್ಲ ಅವನ ಕೆಲಸವೆಂಬುದು ನನ್ನ ಊಹೆ . ವರ್ಷಕ್ಕೊಮ್ಮೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿದಾಗ ನನ್ನ ಅವನ ಭೇಟಿ ಅಥವಾ ಮಾತುಕತೆ. ಇಂದು ಆ ಹಳೆಯ ದಿನಗಳು ಬಹಳ ನೆನಪಿಗೆ ಬರುತ್ತಿದ್ದು ವೆಂಕಟೇಶನ ಮನೆಗೆ ಒಮ್ಮೆ ಹೋಗಿಬರಲು ನಿಶ್ಚಯಿಸಿದ್ದೇನೆ. ಪಕ್ಕದ ಬೀದಿಗೆ ಹೋದಾಗಲೆಲ್ಲಾ ಆ ಕೋಣೆಯನ್ನು ನೋಡಿ, ಹಳೆಯ ದಿನಗಳನ್ನು ನೆನಸಿಕೊಳ್ಳುತ್ತಿದ್ದ ನನಗೆ ಈಗ ಆ ಕೋಣೆ ಒಂದು ನೆನಪು ಮಾತ್ರ.
ಅನಿಸಿಕೆಗಳು




Anurdadha
21-05-2022
super...