500 ಮತ್ತು 1000 ರೂಪಾಯಿಗಳ ನೋಟುಗಳು ನಿಷೇಧವಾಗಿತ್ತು. ಒಬ್ಬ ವ್ಯಕ್ತಿಗೆ ಒಂದು ಸಲ ಮಾತ್ರ 4000 ರೂಪಾಯಿಗಳ ವರೆಗೆ ಹಳೇ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಬಂದವರೇ ಬಂದು ಹಣ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ಭಾರತ ಸರ್ಕಾರ ಹಣ ವಿನಿಮಯ ಮಾಡುವವರ ಬೆರಳಿಗೆ ಚುನಾವಣೆಗೆ ಉಪಯೋಗಿಸುವ ಇಂಕನ್ನು ಹಾಕಲು ನಿರ್ಧರಿಸಿತು. ಆದರೆ ಈ ಇಂಕು ನಮ್ಮ ಮೈಸೂರಿನಲ್ಲಿ ಮಾತ್ರ ತಯಾರಾಗುವುದು. ಹಾಗಾಗಿ ಈ ಇಂಕನ್ನು ದೇಶದ ವಿವಿಧ ರಾಜ್ಯಗಳ ಬ್ಯಾಂಕಿನ ಪ್ರಧಾನ ಕಛೇರಿಗೆ ತಲುಪಿಸುವ ಜವಾಬ್ಧಾರಿ ನಮ್ಮ ಬೆಂಗಳೂರು ಪ್ರಧಾನ ಕಛೇರಿಯದ್ದಾಯಿತು.
ಎಲ್ಲಾ ಹಿರಿಯ ಅಧಿಕಾರಿಗಳ ಮೀಟಿಂಗ್ ನಡೆದಿತ್ತು. ದೇಶದ ಪ್ರಮುಖ 12 ಊರುಗಳಿಗೆ ಯಾರ್ಯಾರನ್ನು ಇಂಕಿನ ಜೊತೆ ಕಳಿಸಬೇಕೆಂದು ಮಾತುಕತೆ ನಡೆದಿತ್ತು. ತಕ್ಷಣ ಪ್ರಧಾನ ಮಂತ್ರಿ ಕಛೇರಿಯಿಂದ ತುರ್ತಾಗಿ, ಇರುವ ಎಲ್ಲಾ ಇಂಕನ್ನು ನವದೆಹಲಿ ಮತ್ತು ಕಲ್ಕತ್ತಾಗೆ ಕಳಿಸಿ ಎಂಬ ಸಂದೇಶ ಬಂತು. ಹೆಚ್ಚು ಜವಾಬ್ಧಾರಿ ಇರುವ ಬ್ಯಾಂಕ್ ಆಫೀಸರ್ ಮೂಲಕ ಕಳಿಸಬೇಕೆಂದು ನಿಶ್ಚಯವಾಯಿತು. ಬೆಂಗಳೂರು ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಆಫೀಸರ್ ಕಲ್ಕತ್ತಾಗೆ ಹೋಗಲು ಒಪ್ಪಿದನು. ಇನ್ನು ನವದೆಹಲಿಗೆ ಹೋಗಲು ಮುಖ್ಯ ಪ್ರಧಾನ ವ್ಯವಸ್ಥಾಪಕರು ನನ್ನ ಹೆಸರು ಸೂಚಿಸಿದರಂತೆ. ನಾನು ಪ್ರಧಾನ ವ್ಯವಸ್ಥಾಪಕರ ಆಪ್ತ ಕಾರ್ಯದರ್ಶಿಯಾಗಿದ್ದೆ. ನನ್ನ ಬಾಸ್ ಗೆ ಮುಖ್ಯ ಪ್ರಧಾನ ವ್ಯವಸ್ಥಾಪಕರು ನನ್ನ ಹೆಸರು ಸೂಚಿಸಿದ್ದು ನೋಡಿ ಆಶ್ಚರ್ಯವಾಯಿತು. ಏಕೆಂದರೆ ಅವರು ಹುಡುಕುತ್ತಿದ್ದದ್ದು ಜವಾಬ್ಧಾರಿಯುತ ಆಫೀಸರನ್ನು. ನನ್ನನ್ನು ಆ ಹಿರಿಯ ಅಧಿಕಾರಿಗಳ ಮೀಟಿಂಗ್‌ಗೆ ಕರೆಸಿದರು. ವಿಷಯ ತಿಳಿಸಿದರು. ನನಗೆ ಎಲ್ಲಿಲ್ಲದ ಸಂತೋಷ. ಆದರೆ ನಾನು ಇಂಕನ್ನು ತೆಗೆದುಕೊಂಡು ಹೋಗುತ್ತಿರುವುದು ಯಾರಿಗೂ ತಿಳಿಯಬಾರದೆಂದು ತಿಳಿಸಿದರು. ಮಾರನೆ ದಿನ ಬೆಳಗ್ಗೆ 6 ಗಂಟೆಗೆ ವಿಮಾನದಲ್ಲಿ ನನಗೆ ಸೀಟ್ ಬುಕ್ ಮಾಡಲಾಯಿತು. ಆದರೆ ವಿಮಾನ ನಿಲ್ದಾಣದಲ್ಲಿ ಸ್ಕ್ಯಾನ್ ಮಾಡುವಾಗ ನನ್ನನ್ನು ಡಬ್ಬದಲ್ಲಿ ಏನಿದೆ ಎಂದು ವಿಚಾರಿಸುವುದಿಲ್ಲವೇ ಎಂದೆ. ನೀವು ಇದನ್ನು ಕಾರ್ಗೋ ಆಫೀಸಿನಲ್ಲಿ ಕೊಟ್ಟು, ಪ್ರಧಾನ ಮಂತ್ರಿ ಕಛೇರಿಯ ಪತ್ರ ಹಾಗೂ ನಮ್ಮ ಕಛೇರಿಯ ಪತ್ರ ತೋರಿಸಿ. ಅವರೇ ನೀವು ಹೋಗುತ್ತಿರುವ ವಿಮಾನದಲ್ಲಿ ಲೋಡ್ ಮಾಡ್ತಾರೆ ಎಂದರು. ಹಾಗೂ ಏನಾದರು ತೊಂದರೆಯಾದರೆ ಇಂಡಿಯನ್ ಏರಲೈನ್ಸ್‌ನ ಆಫೀಸರ್ ನಾಗರಾಜ್‌ಗೆ ಫೋನ್ ಮಾಡಿ, ಎಂದು ಅವರ ನಂಬರ್ ಕೊಟ್ಟರು.
ಸರಿ, ಕೊಟ್ಟ ಇಂಕಿನ ಬಾಟಲುಗಳ ಡಬ್ವವನ್ನು ನನ್ನ ಟೇಬಲ್ ಮೇಲೆ ಇಟ್ಟು ನಮ್ಮ ಬ್ಯಾಂಕಿನ ಡ್ರೈವರ್‌ಗೆ ರಾತ್ರಿ ೨ ಗಂಟೆಗೆ ಬಂದು ಈ ಡಬ್ಬವನ್ನು ತೆಗೆದುಕೊಂಡು ನಮ್ಮ ಮನೆಗೆ ಬಾ, ಅಲ್ಲಿಂದ ಏರ್ಪೋರ್ಟಗೆ ಹೋಗೋಣ ಎಂದೆ. ಅವನಿಗೆ ಡಬ್ಬದಲ್ಲಿ ಏನಿದೆ ಎಂದು ಹೇಳಲಿಲ್ಲ. ರಾತ್ರಿ ಮನೆಗೆ ಬಂದೆ. ಸುಮಾರು 8 ಗಂಟೆಯಾಗಿತ್ತು. ಮನೆಯ ಹಿರಿಯನಾದ ಅಣ್ಣನಿಗೆ ಮಾತ್ರ ವಿಷಯ ತಿಳಿಸುವುದು ತಪ್ಪಿಲ್ಲವೆನಿಸತು, ತಿಳಿಸಿದೆ. ಮತ್ಯಾರಿಗೂ ತಿಳಿಸಲಿಲ್ಲ. ಜವಾಬ್ಧಾರಿ ಕೆಲಸ ಮುಂದೆ ಇದ್ದದ್ದರಿಂದ ರಾತ್ರಿ ನಿದ್ದೆಯೇ ಇಲ್ಲ. ೨ ಗಂಟೆಗೇ ಡ್ರೈವರ್ ಬಂದ. ಬಾಕ್ಸ್ ಕಾರಿನಲ್ಲಿ ಇರುವುದು ಖಾತ್ರಿ ಮಾಡಿಕೊಂಡು ವಿಮಾನ ನಿಲ್ದಾಣಕ್ಕೆ ಹೊರಟೆ.
ಮೊದಲು ವಿಮಾನ ನಿಲ್ದಾಣದಲ್ಲೇ ಇರುವ ಕಾರ್ಗೋ ಆಫೀಸಿಗೆ ಹೋದೆ. ಅಲ್ಲಿ ತೂಕಡಿಸುತ್ತಾ ಕುಳಿತಿದ್ದ ವ್ಯಕ್ತಿಗೆ ವಿಷಯ ತಿಳಿಸಿದೆ. ಅವನು ಈ ಬಾಕ್ಸಿನಲ್ಲಿ ಇಂಕಿದೆ. ಇದು ಕೆಮಿಕಲ್. ನಾನು ವಿಮಾನದಲ್ಲಿ ಇದನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದ. ಏನ್ ಆಟ ಆಡ್ತೀರಾ. ಅಷ್ಟೋಂದು ಪ್ರಯಾಣಿಕರು ಇರುತ್ತಾರೆ, ಅವರ ಜೀವಕ್ಕೆ ಅಪಾಯ ಎಂದು ಬಾಯಿಗೆ ಬಂದ ಹಾಗೆ ಬೈದ. ನಾನು ಪ್ರಧಾನ ಮಂತ್ರಿ ಕಛೇರಿಯ ಪತ್ರ ತೋರಿಸಿದೆ. ಪ್ರಧಾನ ಮಂತ್ರಿ ಅಲ್ಲ, ಅವರ ಅಪ್ಪ ಹೇಳುದ್ರೂ ನಾನು ಇದನ್ನು ವಿಮಾನದ ಒಳಗೆ ಬಿಡೋಲ್ಲ ಅಂದ. ಏನು ಮಾಡಬೇಕೋ ತಿಳಿಯಲಿಲ್ಲ. ಬಹುಷಃ ನೋಟ್ ಬ್ಯಾನ್ ನಿಂದ ಈತನೂ ಸಾಕಷ್ಟು ಕಪ್ಪು ಹಣ ಕಳೆದುಕೊಂಡಿರಬೇಕು ಅನಿಸಿತು. ಹೊರಗೆ ಬಂದು ಬ್ಯಾಂಕಿನಲ್ಲಿ ತೊಂದರೆಯಾದರೆ ಕರೆ ಮಾಡಲು ಕೊಟ್ಟಿದ್ದ ನಾಗರಾಜ್‌ರವರ ಫೋನಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದೆ. ಫೋನಿನಲ್ಲಿ ಎರೆಡೆರಡು ಧ್ವನಿ ಕೇಳಿಸಲು ಪ್ರಾರಂಭವಾಯಿತು. ಏನೆಂದು ನೋಡಿದರೆ, ನಾನು ಕಾರ್ಗೋ ಆಫೀಸಿನಲ್ಲಿ ಒಂದು ನಿಮಿಷಕ್ಕೆ ಮುಂಚೆ ಮಾತಿನಾಡಿದ ವ್ಯಕ್ತಿಯೇ ನಾಗರಾಜ. ಮತ್ತೆ ಇನ್ನೊಮ್ಮೆ ಬೈಗುಳ. ಬೆಳಗ್ಗೆ ಏಳುವಾಗ ಎಡ ಮಗ್ಗಲಲ್ಲಿ ಎದ್ದೆನೇನೋ ಎಂದು ಕೊಂಡರೆ ನಾನು ಎದ್ದಿದ್ದು ಮಧ್ಯರಾತ್ರಿ ೧ ಗಂಟೆಗೆ. ಸರಿ ಏನು ಮಾಡಬೇಕೆಂದು ತಿಳಿಯಲಿಲ್ಲ.
ಕಲ್ಕತ್ತಾಗೆ ಇಂಕ್ ತೆಗೆದುಕೊಂಡು ಹೋಗುತ್ತಿದ್ದ ಆಫಿಸರ್‌ಗೆ ಫೋನ್ ಮಾಡಿದೆ. ಅವರ ವಿಮಾನ 9 ಗಂಟಗೆ ಇತ್ತು. ಅದಲ್ಲದೆ ಅವರು ಬ್ಯಾಂಕಿನ ಲೈಯಸನ್ ಆಫೀಸರ್ ಬೇರೆ. ವಿಮಾನ ನಿಲ್ದಾಣದಲ್ಲಿ ಅವರಿಗೆ ಸಾಕಷ್ಟು ಜನ ಗೊತ್ತಿರುತ್ತಾರೆ. ಅವರು ೫ ನಿಮಿಷ ಕಾಯಲು ಹೇಳಿದರು. ಪ್ರಧಾನ ಮಂತ್ರಿಯ ಕಛೇರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ನಂತರ ನನಗೆ ಫೋನ್ ಮಾಡಿ ನೇರ ವಿಮಾನ ನಿಲ್ದಾಣದ ವಿ.ಐ.ಪಿ ಗೇಟ್ ಮುಂದೆ ಹೋಗಲು ಹೇಳಿದರು. ಕಾರ್ಗೋ ಆಫೀಸರ್ ನಾಗರಾಜ್‌ಗೆ ನಮಸ್ಕಾರ ಹೇಳಿ ವಿ ಐ ಪಿ ಗೇಟ್ ಮುಂದೆ ಬಂದೆ. ಒಳಗಿನಿಂದ ಒಬ್ಬ ವಾಯುಸೇನೆ ಅಧಿಕಾರಿಯೊಬ್ಬರು ಮತ್ತು ನಮ್ಮ ಬ್ಯಾಂಕಿನ ವಿಮಾನ ನಿಲ್ದಾಣ ಶಾಖೆಯ ಮ್ಯಾನೇಜರ್ ಬಂದರು. ಆ ವಾಯುಸೇನೆಯ ಆಫೀಸರ್ ನನ್ನ ಬಾಕ್ಸ್ ತೆಗೆದುಕೊಂಡು ಇನ್ನು ಇದು ನಮ್ಮ ಜವಾಬ್ಧಾರಿ, ನೀವು ದೆಹಲಿಯಲ್ಲಿ ಇಳಿದಾಗ ನಮ್ಮ ಅಲ್ಲಿನ ಆಫೀಸರ್ ನಿಮಗೆ ಇದನ್ನು ನೀಡುತ್ತಾರೆ ಎಂದರು. ತುಂಬಾ ಮುಖ್ಯವಾದ ಸರ್ಕಾರದ ಕೆಲಸ ಮಾಡುತ್ತಿದ್ದೀರಾ, ಹಾಗಾಗಿ ನಿಮ್ಮೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ಅವರ ಮೊಬೈಲ್ನಲ್ಲಿ ನನ್ನ ಜೊತೆ ಒಂದು ಸೆಲ್ಫಿ ತೆಗೆದುಕೊಂಡರು. ಅತಿ ಕಡಿಮೆ ಸಕ್ಯೂರಿಟಿ ಚೆಕ್ ಮಾಡಿಸಿಕೊಂಡು ವಿಮಾನ ಹತ್ತಿದ್ದು ಒಂದು ಅದ್ಭುತ ಅನುಭವವೇ.
ದೆಹಲಿಯಲ್ಲಿ ವಿಮಾನ ಇಳಿದೊಡನೆ, ನನ್ನ ಬಳಿ ಒಬ್ಬ ಆಫೀಸರ್ ಬಂದು ನನ್ನ ಬ್ಯಾಂಕ್ ಐಡಿ ಕಾರ್ಡ್ ಪರಿಶೀಲಿಸಿ ಬಾಕ್ಸ್ ಕೊಟ್ಟರು. ನೀವು ನನ್ನ ಬಳಿಯೇ ಹೇಗೆ ನೇರವಾಗಿ ಬಂದಿರಿ ಎಂದು ಕೇಳಿದೆ. ಬೆಂಗಳೂರಿನ ಆಫೀಸರ್ ಸೆಲ್ಫಿ ಫೋಟೋ ಅವರಿಗೆ ವಾಟ್ಸ್ಯಾಪ್ ಮಾಡಿದ್ದು ತಿಳಿಸಿದರು.
ದೆಹಲಿ ವಿಮಾನ ನಿಲ್ದಾಣಕ್ಕೆ ಬ್ಯಾಂಕಿನ ಕಾರ್ ಬಂದಿತ್ತು. ಕಾರ್ ಹತ್ತಿದೊಡನೆ, ಕಾರ್ ಡ್ರೈವರ್ ಮುನ್ನಾ ಈ ದಿನ ಪೂರ್ತಿ ನನ್ನೊಂದಿಗೆ ಇರುವುದಾಗಿ ತಿಳಿಸಿದ. ನನಗೆ ಸಂಜೆ ೪ ಗಂಟೆಗೆ ಬೆಂಗಳೂರಿಗೆ ವಿಮಾನ ಬುಕ್ ಆಗಿತ್ತು. ದಾರಿಯಲ್ಲಿ ಹೋಗುವಾಗ ನೋಟ್ ಬ್ಯಾನ್ ವಿಷಯ ಮಾತನಾಡುತ್ತಾ ಮುನ್ನ, ಅಲ್ಲ ಸಾರ್ ನೀವು ತಂದ ಬಾಕ್ಸಿನಲ್ಲಿ ಏನಿದೆ ಅಷ್ಟೋಂದು ಭಾರ ಎಂದ. ನಾನು ನೋಟ್ ನಿಷೇದದ ಬೆಂಗಳೂರು ರಿಪೋರ್ಟ್ ಇದೆ ಎಂದೆ. ಅದು ಸರಿ, ನಿಮ್ಮ ಬ್ಯಾಂಕಿನವರು ಇನ್ನು ಮುಂದೆ ಹಳೆ ನೋಟು ವಿನಿಮಯ ಮಾಡಿಕೊಳ್ಳಲು ಬರುವವರಿಗೆ ಇಂಕ್ ಹಾಕುತ್ತಾರಂತೆ. ಬೇಗನೆ ಶುರುಮಾಡಬೇಕು, ಇಲ್ಲವಾದರೆ ಎಲ್ಲಾ ಕಪ್ಪು ಹಣ ಬಿಳಿಯಾಗಿಬಿಡುತ್ತದೆ ಎಂದ. ಹೌದು ಬೇಗ ಪ್ರಾರಂಭಿಸಬೇಕು ಎಂದೆ.
ದೆಹಲಿ ಪ್ರಧಾನ ಕಛೇರಿಯ ಮುಂದೆ ಕಾರ್ ನಿಂತಿತು. ಮುನ್ನ ಡಿಕ್ಕಿಯಿಂದ ಡಬ್ಬ ತೆಗೆಯುತ್ತಾ, ನೋಡಿ ಸಾರ್ ಇದು ನವದೆಹಲಿ ಮುಖ್ಯ ಶಾಖೆ, ಹಣ ವಿನಿಮಯ ಮಾಡಿಕೊಳ್ಳಲು ಒಂದು ಕಿಲೋಮೀಟರ್ ಕ್ಯೂ ಇದೆ ಎಂದ. ಕ್ಯೂ ಒಂದು ಕಿಲೋಮೀಟರ್‌ಗಿಂತ ಹೆಚ್ಚಿದ್ದರೂ ಆಶ್ಚರ್ಯವಿಲ್ಲ. ಬ್ಯಾಂಕಿನ ಪ್ರಧಾನ ಕಛೇರಿ ಒಳಗೆ ಹೋದರೆ ರಾಜ ಮರ್ಯಾದೆ. ಡ್ರೈವರ್ ಹೊರಗೆ ಕಾಯುವುದಾಗಿ ತಿಳಿಸಿದ. ದೆಹಲಿಯ ಪ್ರಧಾನ ವ್ಯವಸ್ಥಾಪಕರ ಆಪ್ತ ಕಾರ್ಯದರ್ಶಿ ಡಬ್ಬದಲ್ಲಿರುವ ಇಂಕ್ ಬಾಟಲ್ ಗಳನ್ನು ಏಣಿಸಿ ಪತ್ರದಲ್ಲಿ ಕೊಟ್ಟಿರುವಂತೆ ಸರಿಯಾಗಿದೆ ಎಂದು ತಿಳಿಸಿದ. ಸರಿ ನಾನು ಹೊರಡುತ್ತೇನೆಂದೆ. ಅಷ್ಟರಲ್ಲಿ ದೆಹಲಿ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕರ ಆಪ್ತ ಕಾರ್ಯದರ್ಶಿ ಫೋನ್ ಮಾಡಿ ಅವರ ವೀಭಾಗಕ್ಕೆ ಬರಲು ಹೇಳಿದರು. ನನ್ನ ಅವರ ಗೆಳೆತನ ಕೇವಲ ಫೋನಿನಲ್ಲಿ ಮಾತ್ರ ಸುಮಾರು ಒಂದು ವರ್ಷದಿಂದ ಇತ್ತು. ನಮ್ಮ ಪ್ರಧಾನ ವ್ಯವಸ್ಥಾಪಕರು ದೆಹಲಿಗೆ ಹೋದರೆ ಅಲ್ಲಿ ಗೆಸ್ಟ್ ಹೌಸ್ ಬುಕ್ ಮಾಡಲು, ಬ್ಯಾಂಕಿನ ಕ್ಯಾಬ್ ಬುಕ್ ಮಾಡಲು ಅವರಿಗೆ ಫೋನ್ ಮಾಡುತ್ತಿದ್ದೆ, ಹಾಗಾಗಿ ಅವರ ಪರಿಚಯ. ಅವರ ವಿಭಾಗದಲ್ಲಿ ಸಮೋಸಾ, ಟೀ ಕೊಟ್ಟರು. ಸಮೋಸ ತಿಂದ ನಂತರ ನಾನು ಹೊರಡುವುದಾಗಿ ತಿಳಿಸಿದೆ. ವಿಮಾನ ೪ ಗಂಟೆಗೆ ಇದೆ, ಈಗಿನ್ನೂ ೧೦ ಗಂಟೆ, ಇಲ್ಲೇ ಇರಿ ಎಂದರು. ಇಲ್ಲ ನಾನು ಇದ್ದರೆ ನಿಮ್ಮ ಕೆಲಸಗಳೇನೂ ಆಗುವುದಿಲ್ಲ, ಅದಲ್ಲದೆ ನನ್ನ ಕೆಲವು ದೆಹಲಿಯ ಗೆಳೆಯರನ್ನು ಭೇಟಿ ಮಾಡಿ ಹೋಗಬೇಕು ಎಂದೆ. ಬ್ಯಾಂಕ್ ಕಾರ್ ಈ ದಿನ ಪೂರ್ತಿ ನಿಮಗಾಗಿ ಮೀಸಲಿಟ್ಟಿದ್ದೇವೆ. ನೀವು ಅದನ್ನೇ ತೆಗೆದುಕೊಂಡು ಹೋಗಿ ಎಂದರು. ಸರಿ ಎಂದು ಪ್ರಧಾನ ಕಛೇರಿಯಿಂದ ಹೊರಬಂದೆ.
ಡ್ರೈವರ್ ಮುನ್ನಾ ನನ್ನ ಬಳಿ ಬಂದು, ಸಾರ್, ಬ್ಯಾಂಕಿನ ಮುಂದೆ ಇಂದಿನಿಂದ ಹಣ ವಿನಿಮಯ ಮಾಡಿಕೊಳ್ಳುವವರ ಬೆರಳಿಗೆ ಇಂಕ್ ಹಾಕುತ್ತೇವೆ ಎಂದು ಬೋರ್ಡ್ ಅಂಟಿಸಿದರು, ಕ್ಯೂನಲ್ಲಿದ್ದವರಲ್ಲಾ ಓಟಕಿತ್ತರು ಸಾರ್. ಒಂದು ಕಿಲೋಮೀಟರ್ ಇದ್ದ ಕ್ಯೂ ಈಗ ನೋಡಿ ೫೦ ಜನರಿರಬಹುದು ಅಷ್ಟೆ ಅಂದ. ನಾನು ನಗುತ್ತಾ, ಹೌದು ಮುನ್ನಾ, ಇವೆಲ್ಲಾ ನಿನ್ನಿಂದಲೇ ಆಗಿದ್ದು. ನೀನು ಒಳಗೆ ತೆಗೆದುಕೊಂಡುಬಂದೆಯಲ್ಲ ಬಾಕ್ಸ್, ಆ ಬಾಕ್ಸಿನಲ್ಲಿ ಚುನಾವಣೆಗೆ ಬಳಸುವ ಇಂಕ್ ಇತ್ತು ಎಂದೆ. ಅಬ್ಬಾ, ಏನು ಸೀಕ್ರೇಟಾಗಿ ಕೆಲಸ ಮಾಡ್ತೀರಾ ಸಾರ್ ನೀವು ಎಂದು ಹೇಳಿ, ನಾನು ನನ್ನ ಗೆಳೆಯರು, ನನ್ನ ಬಂಧುಬಳಗದವರಿಗೆಲ್ಲಾ ಹೇಳಬಹುದು ಸಾರ್, ವಿಮಾನ ನಿಲ್ದಾಣದಿಂದ ಇಂಕ್ ತಂದಿದ್ದು ನಾನೇ ಅಂತ ಎಂದ. ನಕ್ಕು, ಸುಮ್ಮನಾದೆ. ಏಕೆಂದರೆ ನಾನು ನನ್ನ ಗೆಳೆಯರು ಮತ್ತು ಬಂಧು ಬಳಗದವರ ಹತ್ತಿರ ಈ ವಿಷಯ ಅಭಿಮಾನದಿಂದ ಹಂಚಿಕೊಳ್ಳುವುದಿತ್ತು.
ಅಲ್ಲಿಂದ ಕೆಲವರು ಗೆಳೆಯರನ್ನು ಭೇಟಿ ಮಾಡಿ, ದೆಹಲಿಯಲ್ಲಿ ನನಗೆ ಇಷ್ಟವಾದ ಬಿಕನೈರ್‌ವಾಲ ಹೋಟಲ್‌ಗೆ ಹೋಗಿ ಮುನ್ನಾ ಜೊತೆ ಊಟ ಮಾಡಿ ವಿಮಾನ ನಿಲ್ದಾಣಕ್ಕೆ ಬಂದೆ. ಮುನ್ನಾಗೆ ಸ್ವಲ್ಪ ಹಣ ಕೋಡೋಣವೆನಿಸಿತು, ಕೊಡಲು ಹೋದರೆ ಇಲ್ಲಾ ಸಾರ್ ಭಾರತ ಸರ್ಕಾರದ ಕೆಲಸ ಇಂದು ಮಾಡಿದ್ದೇನೆ ಎಂಬ ಹೆಮ್ಮೆ ನನಗಾಗಿದೆ. ಹಣ ದಯವಿಟ್ಟು ಬೇಡ ಎಂದ. ನನಗೂ ಭಾರತ ಸರ್ಕಾರಕ್ಕೆ ಕೆಲಸ ಮಾಡಿದೆ ಎಂಬ ಹೆಮ್ಮ ಮತ್ತು ಅದು ತಂದ ಸಂತೋಷ ಅವಿಸ್ಮರಣೀಯ.