ಗುರುರಾಜ
ಶಾಸ್ತ್ರಿ
ಯೋಗ ತರಗತಿಯ ಕನಸು
25-12-2024
ನಿನ್ನೆ ಸಂಜೆ ಮೊಬೈಲಿಗ ಸುಶೀಲಕ್ಕ ಅವರಿಂದ ಒಂದು ಸಂದೇಶ. *"ಅಣ್ಣ ನಾಳೆ ನೀವು ಬೆಳಿಗ್ಗೆ 5 ಗಂಟೆಯ ಭೃಗು ತಂಡಕ್ಕೆ ಹಾಗೂ ಸಂಜೆಯ ಗೌತಮ ತಂಡಕ್ಕೆ ತರಗತಿ ತೆಗೆದುಕೊಳ್ಳಿ ಎಂದು"*. ಆಹಾ ಎಷ್ಟು ಸಂತೋಷ, ಶಿಕ್ಷಕನಾಗಿ ತಿಂಗಳಿಗೆ ಒಂದು ತರಗತಿ ತಗೆದುಕೊಳ್ಳುವ ನನಗೆ ಈಗ ಒಂದೇ ದಿನದಲ್ಲಿ ಎರಡು ತರಗತಿ, ಮನಸ್ಸಿನಲ್ಲೇ ಹಿಗ್ಗಿದೆ. ಆದರೆ ಇತ್ತೀಚೆಗಷ್ಟೇ ಶಿಕ್ಷಕನಾಗಿರುವ ನನಗೆ ಸ್ವಲ್ಪ ಭಯ ಮತ್ತು ಜಾಸ್ತಿ ಹೆದರಿಕೆಯೂ ಇತ್ತು. ಶೀರ್ಷಿಕೆಯಲ್ಲಿ ಕನಸು ಅಂದಿದ್ದೀರಿ, ಅದರ ಬಗ್ಗೆ ಹೇಳಿ ಶಾಸ್ತ್ರಿಗಳೆ, ಬರೀ ಕಥೇ ಹೇಳ್ತಾ ಇದ್ದೀರಾ ಅಂತೀರಾ. ಸರಿ ಆರಂಭಿಸುತ್ತೇನೆ. ರಾತ್ರಿ ಮಲಗುವಾಗ ಅಣ್ಣನ ಮಗ ಸೌತೇಕಾಯಿಗೆ ಖಾರ ಹಾಕಿ ಕೊಟ್ಟದು ಗಂಟಲಲ್ಲಿ ರಾತ್ರಿಯೆಲ್ಲಾ ಕಿರಿ ಕಿರಿಯಾಗುತ್ತಿತ್ತು. ಅದರ ಯೋಚನೆಯಲ್ಲೇ ಮಲಗಿದ್ದು ಕೂಡಾ. ಬೆಳಿಗ್ಗೆ 4 ಗಂಟೆಗೆ ಹೊಡೆಯ ಬೇಕಿದ್ದ ಮೊಬೈಲಿನಲ್ಲಿನ ಅಲಾರಾಂ, 4.25ಕ್ಕೆ ಹೊಡೆಯಿತು. ಎದ್ದವನೇ ಪ್ರಾತಃ ಕರ್ಮಗಳನ್ನು ಮುಗಿಸಿ, ಸ್ನಾನವನ್ನೂ ಮುಗಿಸಿ ಹೊರಟಿದ್ದೆ. ಅದ್ಯಾಕೋ ಇಂದು ಸೈಕಲ್ಲಿನಲ್ಲಿ ಹೋಗುವ ಆಸೆಯಾಯಿತು. ಮನೆಯಿಂದ ಯೋಗಶ್ರೀಗೆ ಸೈಕಲ್ಲಿನಲ್ಲಿ ಐದು ನಿಮಿಷವಷ್ಟೇ. ಅಲ್ಲಿ ಹೋಗಿ ನೋಡುತ್ತೇನೆ, ಬಾಗಿಲು ತೆರೆದಿದೆ ಆದರೆ ಯಾರೂ ಯೋಗ ಮಾಡುವವರೇ ಇಲ್ಲ. ಮೊದಲನೇ ಮಹಡಿಗೆ ತಕ್ಷಣ ಹೋದೆ ಅಲ್ಲೂ ಯಾರೂ ಇಲ್ಲ. ಸಮಯ ನೋಡಿದೆ 5.30. ಎರಡನೇ ಮಹಡಿಯ ನಕ್ಷೆಯಂತೂ ಪೂರ್ತಿಯಾಗಿ ಬದಲಾಗಿದೆ. ಯಾರ ಯಾರದ್ದೋ ಹೊಸ ಭಾವಚಿತ್ರಗಳು ಗೋಡೆಗೆ ತಗುಲಿಹಾಕಿದ್ದಾರೆ. ಅದೇಕೋ ಅನುಮಾನ ಬಂದು ಆ ಕಟ್ಟದಿಂದಲೇ ಹೊರಗೆ ಬಂದು ರಸ್ತೆಯಲ್ಲಿ ನಿಂತು ಕಟ್ಟಡ ನೋಡಿದರೆ ಅದು ಯೋಗಶ್ರೀಯೇ ಅಲ್ಲ. ಅಯ್ಯೋ ಏಳು ವರ್ಷದಿಂದ ಇಲ್ಲಿಗೆ ಬರುತ್ತಿರುವ ನಾನು ಇಂದೇಕೆ ಮಾರ್ಗವನ್ನೇ ಮರೆತೆ ಎಂಬ ಯೋಚನೆ ಮತ್ತು ತರಗತಿಗೆ ತಡವಾಗುತ್ತಿದೆ ಎಂಬ ಆತಂಕ. ತಕ್ಷಣ ನನ್ನ ಸೈಕಲ್‌ ಏರಿದೆ, ಪಕ್ಕದ ರಸ್ತೆಗೆ ಬಂದಿದ್ದೇನೆಂದು ತಿಳಿಯಿತು. ಸೈಕಲ್‌ ವೇಗವಾಗಿ ಓಡಿಸಲು ಪ್ರಯತ್ನಿಸಿದೆ, ಸೈಕಲ್ಲಿನ ಹಿಂದಿನ ಚಕ್ರ ಜಾಮ್‌ ಆಯಿತು. ಹಿಂದಿನ ಚಕ್ರ ತಿರುಗುತ್ತಲೇ ಇಲ್ಲ. ಸೈಕಲ್ಲನ್ನು ಭುಜದ ಮೇಲೆ ಹೊತ್ತುಕೊಂಡು ಯೋಗಶ್ರೀಯ ಕಡೆ ಓಡಿದೆ. ಅಲ್ಲಿ ಯೋಗಶ್ರೀಯ ಮುಂದೆ ನಿಂತಿದ್ದ ಸುಶೀಲಕ್ಕ ಕೋಪದಿಂದ ನೋಡುತ್ತಾ,*"ಬರುವುದು ತಡವಾಗುವುದಾದರೆ ತರಗತಿ ತೆಗೆದುಕೊಳ್ಳಲಾಗುವುದಿಲ್ಲ ಎಂದು ಮುಂಚಿತವಾಗಿ ತಿಳಿಸಿಬೇಕಿತ್ತು, ಈಗ ನೋಡಿ ನಾಗೇಂದ್ರಣ್ಣನಿಗೆ ಫೋನ್‌ ಮಾಡಿ ತರಗತಿ ತೆಗೆದುಕೊಳ್ಳಲು ಕರೆಸಿಕೊಳ್ಳಬೇಕಾಯಿತು"* ಎಂದರು. ನಾನು ಕೈಗಡಿಯಾರದಲ್ಲಿ ಸಮಯ ನೋಡಿದೆ, . ಸಮಯ 5.55, ತರಗತಿ ಇನ್ನು ಐದು ನಿಮಿಷ ಉಳಿದಿತ್ತಷ್ಟೇ. ಬೇಜಾರಾಗಿ ಅಲ್ಲಿಯೇ ಕಟ್ಟೆಯ ಮೇಲೆ ಕುಳಿತೆ, ತಕ್ಷಣ ಏನೋ ಜೋರಾದ ಸದ್ದು. ಗಾಬರಿಯಿಂದ ಎದ್ದೆ, ನನ್ನ ಮೊಬೈಲಿನ ಅಲಾರಮ್‌ ಹೊಡೆಯುತ್ತಿತ್ತು. ನಾನು ಹಾಸಿಗೆಯ ಮೇಲಿದ್ದೆ. ʼಬದುಕಿದೆಯಾ ಬಡಪಾಯಿ" ಎಂದು ಬೇಗ ತಯಾರಾಗಿ ತರಗತಿಗೆ 15 ನಿಮಿಷ ಮುನ್ನವೇ ಯೋಗಶ್ರೀ ತಲುಪಿದೆ. ಇಂದಿನ ತರಗತಿ ಚೆನ್ನಾಗಾಯಿತು ಎಂದು ಎಲ್ಲರೂ ಹೇಳಿದಾಗ, ಕನಸು ನನಸಾಗಲಿಲ್ಲ ಎಂಬ ಸಂತೋಷ. ಆದರೆ ನಾಗೇಂದ್ರಣ್ಣ ಮತ್ತು ಸುಶೀಲಕ್ಕೆ ತರಗತಿಯಲ್ಲಿ ಈಗಲೂ ಕಾಣಿಸಿದ್ದು ಆಶ್ಚರ್ಯವೇ ಸರಿ. *ಇದು ಕಲ್ಪನೆಯಲ್ಲ ಸಂಪೂರ್ಣ ಸತ್ಯ.*
ಅನಿಸಿಕೆಗಳು