ಈಗಾಗಲೇ 18 ದೇಶಗಳನ್ನು ನೋಡಿದ್ದೆ. ನೋಡಲೇಬೇಕೆಂದು ನನ್ನ ಪಟ್ಟಿಯಲ್ಲಿ ಹೆಸರಿಸಿದ್ದ ದೇಶಗಳಲ್ಲಿ ಇನ್ನೂ ಐದು ದೇಶಗಳ ಜೊತೆಗೆ ಅಮೆರಿಕಾವು ಉಳಿದುಕೊಂಡಿತ್ತು. ಆದರೆ ಅಮೆರಿಕಾಗೆ ಹೋಗುವುದು ಬೇರೆ ದೇಶದಷ್ಟು ಸುಲಭವಲ್ಲ. ಇದರ ಮೊದಲ ಘಟ್ಟವೇ ಅಂದರೆ ವೀಸಾ ಅರ್ಜಿ ಹಾಕಬೇಕು ಮತ್ತು ಅದರ ನಂತರ ನಡೆಯುವ ವೀಸಾ ಸಂದರ್ಶನ ಬಹಳ ಕಠಿಣವಾಗಿರುತ್ತದೆ. ಬೇರೆ ಬೇರೆ ದೇಶಗಳಿಂದ ಬಹಳ ಜನರು ಪ್ರವಾಸಿಗರಾಗಿ ಅಮೆರಿಕಾಗಿ ಹೋಗಿ, ಅಲ್ಲಿ ಅಕ್ರಮ ವಲಸಿಗರಾಗಿ ನೆಲಸುತ್ತಿರುವುದರಿಂದ ಅಮೆರಿಕಾ ಈ ವೀಸಾ ನೀಡುವುದನ್ನು ಸ್ವಲ್ಪ ಬಿಗಿಮಾಡಿದೆ. ಪ್ರವಾಸಿಗರ ವೀಸಾಕ್ಕಂತೂ ಅರ್ಜಿ ಹಾಕಿದ ಮೇಲೆ ಸುಮಾರು ಹದಿನೈದರಿಂದ ಹದಿನೆಂಟು ತಿಂಗಳು ಕಾಯಬೇಕಾಗುತ್ತದೆ. ಸದ್ಯಕ್ಕೆ ಅಮೆರಿಕಾ ಪ್ರವಾಸದ ಆಸೆ ಮುಂದಕ್ಕೆ ಹಾಕಿ ನನ್ನ ಪಟ್ಟಿಯಲ್ಲಿದ್ದ ಬೇರೆ ದೇಶಗಳನ್ನು ನೋಡುವುದೆಂದು ನಿಶ್ಚಯಿಸಿದ್ದೆ.
2022ರ ಡಿಸೆಂಬರ್‌ನಲ್ಲಿ ನನ್ನ ಅಕ್ಕನ ಮಗ ಇಂಜಿನಿಯರಿಂಗ್ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ಹೊರಟ. “ನನ್ನ ಓದು 2024 ಡಿಸೆಂಬರ್‌ಗೆ ಮುಗಿಯುತ್ತದೆ ಮಾವ, ನೀವು ಮತ್ತು ಅಪ್ಪ ಅಮ್ಮ ಮೇ 2025ರಲ್ಲಿ ನಡೆಯುವ ನನ್ನ ಗ್ರಾಜುಯೇಶನ್ ದಿನಕ್ಕೆ ಅಮೆರಿಕಾಗೆ ಬರಬಹುದು” ಎಂದು ಹೇಳಿ ಬತ್ತಿಹೋಗಿದ್ದ ನನ್ನ ಅಮೆರಿಕಾ ಪ್ರವಾಸದ ಆಸೆಗೆ ತುಂತುರು ನೀರು ಸುರಿಸಿದ. ಕೆಲವೊಮ್ಮೆ ಗ್ರಾಜುಯೇಶನ್ ದಿನಕ್ಕೆ ಅಮೆರಿಕಾಗೆ ಹೋಗಲಿಚ್ಚಿಸುತ್ತೇವೆ ಎಂದು ನಾವು ತಿಳಿಸಿದರೆ ವೀಸಾ ನೀಡಲು ಹೆಚ್ಚು ತಕರಾರು ಮಾಡುವುದಿಲ್ಲ ಎಂದು ಗೆಳೆಯರು ಹೇಳಿದ್ದರು. ನವೆಂಬರ್ 2023ರಲ್ಲಿ ವೀಸಾಗೆ ಅರ್ಜಿ ಹಾಕಿದೆ. ನನಗೆ ಬಯೋಮೆಟ್ರಿಕ್ ಮತ್ತು ಸಂದರ್ಶನಕ್ಕೆ ಅವರು ಸಮಯ ಕೊಟ್ಟದ್ದು ಜನವರಿ 2025ಕ್ಕೆ.
ಸಂದರ್ಶನದಲ್ಲಿ ಅವರು ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರ ಕೊಡಲು ತಯಾರು ನಡೆಸಲು ಆರಂಭಿಸಿದ್ದು ಡಿಸೆಂಬರ್ 2024ರಿಂದ. ಯೂಟ್ಯೂಬಿನಲ್ಲಿ ಈ ಸಂದರ್ಶನದ ಬಗ್ಗೆ ಇದ್ದ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದೆ. ಈ ನಿಟ್ಟಿನಲ್ಲಿ ನಾನು ಮೊದಲು ನೋಡಿದ ವೀಡಿಯೋದ ಕುತೂಹಲಕಾರಿ ಆರಂಭ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು.
ಆ ವೀಡಿಯೋ ಆರಂಭವಾಗಿದ್ದು ಹೀಗೆ. “ನೀವು ಅಮೆರಿಕಾ ಪ್ರವಾಸಿ ವೀಸಾ ಸಂದರ್ಶನಕ್ಕೆ ಹೋಗುತ್ತಿದ್ದೀರಾ, ನೀವೇನೂ ಹೆದರಬೇಕಿಲ್ಲ. ಹೆಚ್ಚಾಗಿ ಮಧ್ಯವಯಸ್ಸಿನ, ಮದುವೆಯಾಗದ, ಭಾರತದಲ್ಲಿ ಏನೂ ಉದ್ಯೋಗವಿಲ್ಲದ ವ್ಯಕ್ತಿಗಳಿಗೆ ಮಾತ್ರ ಪ್ರವಾಸಿ ವೀಸಾ ನಿರಾಕರಿಸುತ್ತಾರೆ” ಎಂದು. ಅಲ್ಲಿಗೆ ಅವ ನನ್ನ ಬಗ್ಗೆಯೇ ಮಾತನಾಡುತ್ತಿದ್ದಾನೆಂಬುದು ಖಚಿತವಾಯಿತು.
ಈ ಎಲ್ಲಾ ವೀಡಿಯೋಗಳಿಂದ ನಾನು ಕಲಿತಿದ್ದೇನೆಂದರೆ ಮುಖ್ಯವಾಗಿ ಅವರು ಕೇಳುವುದು ಮೂರರಿಂದ ಆರು ಪ್ರಶ್ನೆ ಮಾತ್ರ:
1. ಪ್ರವಾಸಕ್ಕೆ ಹೋಗುವ ಕಾರಣ ಏನು?
2. ಭಾರತದಲ್ಲಿ ನಿಮ್ಮ ಉದ್ಯೋಗ ಏನು?
3. ನಿಮ್ಮ ಗೆಳೆಯರು ಅಥವಾ ಬಂಧುಗಳು ಅಮೆರಿಕಾದಲ್ಲಿ ನೆಲೆಸಿದ್ದಾರೆಯೇ?
4. ನಿಮ್ಮ ಪ್ರವಾಸದ ಖರ್ಚಿಗೆ ಹಣ ನೀಡುತ್ತಿರುವವರು ಯಾರು?
5. ಪ್ರವಾಸಕ್ಕೆ ಹೋದಾಗ ಅಮೆರಿಕಾದಲ್ಲಿ ಎಲ್ಲಿ ಉಳಿದುಕೊಳ್ಳುತ್ತೀರಿ?
6. ಯಾವ ಸಮಯದಲ್ಲಿ ಮತ್ತು ಎಷ್ಟು ದಿನ ಪ್ರವಾಸ ಮಾಡಲಿದ್ದೀರಿ?
7. ನಿಮ್ಮ ಜೊತೆಗೆ ಮತ್ತಿನ್ಯಾರಾದರೂ ಪ್ರವಾಸ ಮಾಡುತ್ತಿದ್ದಾರೆಯೇ?
ಈ ಪ್ರತಿಯೊಂದು ಪ್ರಶ್ನೆಗೂ ಉತ್ತರ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ತೋರಿಸಬೇಕು. ಮುಖ್ಯವಾಗಿ ಅವರಿಗೆ ನಾನು ಭಾರತಕ್ಕೆ ವಾಪಸ್ ಬರಲೇಬೇಕು ಎನ್ನುವುದಕ್ಕೆ ಇರುವಂತಹ ಕಾರಣಗಳನ್ನು ವಿವರಿಸಿ ಹೇಳಿ ಅವರಿಗೆ ಅದರಲ್ಲಿ ನಂಬಿಕೆ ತರಿಸಬೇಕು.
ಈಗ ಇದರಲ್ಲಿ ಒಂದೊಂದೇ ಪ್ರಶ್ನೆ ನೋಡೋಣ.
*1. ಪ್ರವಾಸಕ್ಕೆ ಹೋಗುವ ಕಾರಣಕ್ಕೆ ನಾವು ಕೊಡಬಹುದಾದ ಉತ್ತರಗಳು.*
• ನನ್ನ ಬಂಧು ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಾನೆ, ಅವನ ಗ್ರಾಜುಯೇಶನ್ ದಿನಕ್ಕೆ ಹೋಗಿ, ಹಾಗೇ ಒಂದೆರೆಡು ವಾರ ಪ್ರವಾಸ ಮಾಡೋಣ ಅಂದುಕೊಂಡಿದ್ದೇನೆ. ನನ್ನ ಬಂಧುವಿನಿಂದ ಬಂದಿರುವ ಆಹ್ವಾನ ಪತ್ರ ಮತ್ತು ಅವನ ವೀಸಾ ವಿವರ ಇಲ್ಲಿದೆ ನೋಡಿ ಎಂದು ದಾಖಲೆ ನೀಡಬೇಕು.
• ನನಗೆ ಪ್ರವಾಸವೆಂದರೆ ತುಂಬಾ ಇಷ್ಟ, ನನ್ನ ಹಳೆಯ ಅಂತರಾಷ್ಟ್ರೀಯ ಪ್ರವಾಸಗಳ ಬಗ್ಗೆ ನನ್ನ ಪಾಸಪೋರ್ಟಿನಲ್ಲಿ ವಿವರ ಇದೆ, ನೋಡಿ.
• ನನಗೆ ಮೊಮ್ಮಗಳು / ಮೊಮ್ಮಗ ಹುಟ್ಟಿದ್ದಾರೆ, ಅವರೊಡನೆ ಕೆಲವು ತಿಂಗಳುಗಳು ಸಂತೋಷದಿಂದ ಇದ್ದು ಬರುವ ಆಸೆಯಾಗಿದೆ. ನನ್ನ ಮಗಳಿಗೆ ಅಥವಾ ಸೊಸೆಗೆ ಮಗು ಹುಟ್ಟಲಿದೆ, ಅವಳಿಗೆ ಸಹಾಯ ಮಾಡಲು ಹೋಗುತ್ತಿದ್ದೇನೆಂದು ದಯವಿಟ್ಟು ಹೇಳಬೇಡಿ. ಅವರ ಪ್ರಕಾರ ಮಗುವಿನ ಜನನ ತಾಯಿಗೆ ಒಂದು ಸಾಮನ್ಯ ಕೆಲಸವಷ್ಟೇ, ಮತ್ತು ಎಳೆಯ ಮಕ್ಕಳನ್ನು ನೋಡಿಕೊಳ್ಳಲು ಅವರಲ್ಲಿಯೇ ಕೆಲಸಕ್ಕೆ ದಾದಿಗಳು ಸಿಗುತ್ತಾರೆ. ಆ ದಾದಿಗಳ ಕೆಲಸವನ್ನು ನೀವು ಕಿತ್ತುಕೊಳ್ಳುತ್ತೀರೆಂದು ಅವರ ನಂಬಿಕೆ. ಹೀಗಾಗಿ ವೀಸಾ ನಿರಾಕರಿಸುವ ಸಾದ್ಯತೆ ಇರುತ್ತದೆ.
*2. ಭಾರತದಲ್ಲಿ ನಿಮ್ಮ ಉದ್ಯೋಗ ಏನು?*
• ಈ ಪ್ರಶ್ನೆಗೆ ಭಾರತದಲ್ಲಿರುವ ನಿಮ್ಮ ಸ್ಥಿರಾಸ್ತಿ, ನಿಮ್ಮ ಸಂಸಾರದಲ್ಲಿರುವ ಇತರರ ವಿವರ ಮತ್ತು ಉದ್ಯೋಗ ಎಲ್ಲವನ್ನೂ ಸೇರಿಸಿ ಉತ್ತರಕೊಡುವುದು ಒಳ್ಳೆಯದು. ಇದರಿಂದ ನೀವು ಭಾರತಕ್ಕೆ ವಾಪಸ್ ಬಂದೇಬರುತ್ತೀರೆಂದು ಅವರಿಗೆ ಖಾತ್ರಿಪಡಿಸಬಹುದು.
• ಉದ್ಯೋಗದಲ್ಲಿದ್ದರೆ ನಿಮ್ಮ ಕಂಪನಿಯ ಐಡಿ ಕಾರ್ಡ್ ಮತ್ತು ಸಾಧ್ಯವಾದರೆ ವೀಸಾಗಾಗಿ ಕಂಪನಿಯಿಂದ ಪಡೆದ ಒಂದು ಪತ್ರ ತೋರಿಸಬೇಕು.
• ನಿವೃತ್ತರಾಗಿದ್ದರೆ, ನೀವು ನಿವೃತ್ತರಾದಾಗ ನಿಮ್ಮ ಕಂಪನಿ ಕೊಟ್ಟ ಪತ್ರವನ್ನು ತೋರಿಸಬಹುದು.
• ಏನೂ ಕೆಲಸವಿಲ್ಲದಿದ್ದರೆ, ಅದನ್ನೂ ಹಾಗೇ ಹೇಳಬಹುದು. ಆದರೆ ಆಗ ಮತ್ತಷ್ಟು ಪ್ರಶ್ನೆಗಳು ಅವರಿಂದ ಬರಬಹುದು, ಅವಕ್ಕೆಲ್ಲಾ ಉತ್ತರ ನೀಡಲು ತಯಾರಿರಬೇಕು.
*3. ನಿಮ್ಮ ಗೆಳೆಯರು ಅಥವಾ ಬಂಧುಗಳು ಅಮೆರಿಕಾದಲ್ಲಿ ನೆಲೆಸಿದ್ದಾರೆಯೇ?*
ನಿಮ್ಮ ಗೆಳೆಯರ ಅಥವಾ ಬಂಧುಗಳ ಸಂಪೂರ್ಣ ವಿಳಾಸ, ವೀಸಾ ವಿವರ ಇದ್ದರೆ ಮಾತ್ರ ಈ ಪ್ರಶ್ನೆಗೆ “ಹೌದು” ಎಂದು ಉತ್ತರ ನೀಡಿ. ಇಲ್ಲವಾದರೆ ಸುಮ್ಮನಿರುವುದು ವಾಸಿ ಅಥವಾ ಶಾಲಾ ಕಾಲೇಜಿನ ಗೆಳೆಯರಿದ್ದಾರೆ, ಆದರೆ ಅವರ ಸಂಪರ್ಕ ಇತ್ತೀಚೆಗೆ ಇಲ್ಲ ಎನ್ನಬಹುದು.
*4. ನಿಮ್ಮ ಪ್ರವಾಸದ ಖರ್ಚಿಗೆ ಹಣ ನೀಡುತ್ತಿರುವವರು ಯಾರು?*
• ಸಾಮಾನ್ಯವಾಗಿ ನಿಮ್ಮ ಬಂಧುಗಳಿಂದ ಆಹ್ವಾನ ಪತ್ರ ಬಂದಿದ್ದಲ್ಲಿ ಇದರ ಬಗ್ಗೆ ಆ ಪತ್ರದಲ್ಲಿ ತಿಳಿಸಿರುತ್ತಾರೆ. ನಿಮ್ಮ ಬಂಧುಗಳೇ ನಿಮ್ಮ ಖರ್ಚನ್ನು ನಿಭಾಯಿಸುವುದಾದರೆ ಅವರ ಆದಾಯದ ವಿವರಗಳನ್ನು ಅವರು ನಿಮಗೆ ಕಳಿಸಿರುತ್ತಾರೆ.
• ಸ್ವಂತ ಖರ್ಚಿನಲ್ಲಿ ನೀವು ಹೋಗುತ್ತಿರುವುದು ಎಂದು ಹೇಳಿದರೆ ನಿಮ್ಮ ಮೂರು ವರ್ಷದ ಆದಾಯ ತೆರಿಗೆ ವಿವರ, ನಿಮ್ಮ ಸಂಬಳ ಅಥವಾ ಪೆನ್ಶನ್ ಚೀಟಿ, ನಿಮ್ಮ ಬ್ಯಾಂಕ್ ಖಾತೆಗಳ ವಿವರ, ಎಲ್ಲವನ್ನೂ ತೆಗೆದುಕೊಂಡು ಹೋಗಿರಬೇಕು, ಅವರು ಅವುಗಳನ್ನು ಕೇಳಿದರೆ ತೋರಿಸಬೇಕಾಗುತ್ತದೆ. ಬ್ಯಾಂಕ್ ವಿವರಕ್ಕೆ ಬ್ಯಾಂಕ್ ಮ್ಯಾನೇಜರ್ ಮುದ್ರೆ ಮತ್ತು ಸಹಿ ಅವಶ್ಯಕ.
*5. ಪ್ರವಾಸಕ್ಕೆ ಹೋದಾಗ ಅಮೆರಿಕಾದಲ್ಲಿ ಎಲ್ಲಿ ಉಳಿದುಕೊಳ್ಳುತ್ತೀರಿ?*
*6. ಯಾವ ಸಮಯದಲ್ಲಿ ಮತ್ತು ಎಷ್ಟು ದಿನ ಪ್ರವಾಸ ಮಾಡಲಿದ್ದೀರಿ?*
*7. ನಿಮ್ಮ ಜೊತೆಗೆ ಮತ್ತಿನ್ಯಾರಾದರೂ ಪ್ರವಾಸ ಮಾಡುತ್ತಿದ್ದಾರೆಯೇ?*
ಈ ಮೂರು ಪ್ರಶ್ನೆಗಳಿಗೆ ನಿಮ್ಮ ಬಂಧುಗಳು ನೀಡಿದ ಆಹ್ವಾನ ಪತ್ರದಲ್ಲಿ ವಿವರ ಇರುತ್ತದೆ. ಆದರೂ ನೀವೂ ನಿಮ್ಮ ಸ್ಮರಣಶಕ್ತಿಯಿಂದ ಉತ್ತರ ನೀಡಲೇಬೇಕು. ಪ್ರವಾಸಕ್ಕೆ ನಿಮ್ಮ ಜೊತೆಗೆ ಬರುತ್ತಿರುವವರಿಗೆ ಈಗಾಗಲೇ ವೀಸಾ ಇದೆ ಎಂಬುದರ ದಾಖಲೆ ನೀಡಬೇಕಾಗುತ್ತದೆ.
ವೀಡಿಯೋಗಳಿಂದ ಮತ್ತೊಂದು ಕಲಿತಿದ್ದೇನೆಂದರೆ, ಯಾವುದೇ ಕಾರಣಕ್ಕೂ ಸಂದರ್ಶನ ಮಾಡುವವರನ್ನು ಸಾರ್, ಮೇಡಮ್ ಎಂದು ಸಂಬೋಧಿಸಬಾರದು. ಅವರನ್ನು ನಮ್ಮ ಗೆಳೆಯರಂತೆ ಪರಿಗಣಿಸಿ ಮಾತನಾಡಬೇಕು. ಇದು ಅವರಿಗೆ ಇಷ್ಟವಾಗುತ್ತದೆ.
ಯಾವುದೇ ಪ್ರಶ್ನೆಗೆ ಒಂದೇ ಪದದ ಉತ್ತರ ನೀಡಬಾರದು. ಉದಾಹರಣೆಗೆ “ನೀವು ನಿವೃತ್ತರೇ?” ಎಂದು ಅವರು ಕೇಳಿದರೆ, “ಹೌದು, ನಾನು ಈ ಕಂಪನಿಯಲ್ಲಿ ಇಷ್ಟು ವರ್ಷ ದುಡಿದು, ಈಗ ನಿವೃತ್ತನಾಗಿದ್ದೇನೆ” ಎಂದು ಉತ್ತರ ಕೊಡಬೇಕು.
ಇವೆಲ್ಲವನ್ನೂ ಯೂಟ್ಯೂಬ್ ವೀಡಿಯೋಗಳಿಂದ ತಿಳಿದುಕೊಂಡು ನನ್ನ ಸಂದರ್ಶನಕ್ಕೆ ತಯಾರಾಗಿದ್ದಾಗ, ಗೆಳೆಯನೊಬ್ಬ “ಏ, ನೀನೋ ಬ್ರಹ್ಮಚಾರಿ, ನಿರುದ್ಯೋಗಿ, ನಿನ್ನದೇ ಅಂತ ಯಾವುದೇ ಸ್ಥಿರಾಸ್ತಿ ಇಲ್ಲ, ಅಮೆರಿಕಾಗೆ ಹೋಗಿ ನಿನ್ನ ಅಕ್ಕನ ಮಗನಿಗೆ ಅಡುಗೆ ಮಾಡಿಕೊಂಡು ಅಕ್ರಮ ವಲಸಿಗನಾಗಿ ಉಳಿದುಬಿಡುತ್ತಿ ಎಂದು ಅನುಮಾನಿಸುತ್ತಾರೆ. ನಿನಗೆಲ್ಲಿ ವೀಸಾ ಕೊಡುತ್ತಾರೆ, ಅದು ಕನಸಷ್ಟೇ” ಎಂದಾಗ ನಾನು ನನ್ನ ಇತರ ಗೆಳೆಯರಲ್ಲಿ ಈ ವಿಷಯ ವಿಚಾರಿಸಿದೆ. ಅವರುಗಳು ಅದು ಸತ್ಯ ಎಂದರು. ಅಲ್ಲಿಗೆ ವೀಸಾ ಸಿಗುವುದೇ ಇಲ್ಲ ಎಂದು ಖಾತ್ರಿಯಾಯಿತು.
“ತಾತ್ಕಾಲಿಕವಾಗಿ ನೀನು ಒಂದು ಮದುವೆಯಾಗಿಬಿಡು. ಭಾರತದಲ್ಲಿ ಹೆಂಡತಿ ಇದ್ದಾಳೆ ಹಾಗಾಗಿ ವಾಪಸ್ ಬಂದೇ ಬರುತ್ತೇನೆ ಎಂದು ಸಂದರ್ಶನದಲ್ಲಿ ಹೇಳಬಹುದು” ಎಂದು ಕೂಡಾ ಒಂದು ಸಲಹೆ ಬಂದಿತ್ತು. ಅಮೇರಿಕಾ ಪ್ರವಾಸಕ್ಕಾಗಿ ಈ ವಯಸ್ಸಿನಲ್ಲಿ ನನ್ನ ಜೀವನವನ್ನು ಪ್ರಯಾಸ ಮಾಡಿಕೊಳ್ಳುವುದು ನನಗಿಷ್ಟವಿರಲಿಲ್ಲ.
ವೀಸಾ ಸಂದರ್ಶನದ ಹಿಂದಿನ ದಿನ ಈ ವಿಷಯ ಹಾಸ್ಯ ಲೇಖಕರಾದ ಎಮ್.ಎಸ್.ನರಸಿಂಹಮೂರ್ತಿಯವರೊಂದಿಗೆ ಚರ್ಚಿಸಿದಾಗ, “ನಾನೊಬ್ಬ ಲೇಖಕ ಅಂತ ಹೇಳು, ವೀಸಾ ಕೊಟ್ಟರೂ ಕೊಡಬಹುದು” ಎಂದು ಉಪಾಯ ತಿಳಿಸಿದರು. ಹಾಗಾಗಿ ನಾನು ಬರೆದ ಎರಡು ಪುಸ್ತಕಗಳನ್ನೂ ತೆಗೆದುಕೊಂಡು ಹೋಗಲು ನಿರ್ಧರಿಸಿದೆ.
ವೀಸಾ ಸಂದರ್ಶನದ ಹಿಂದಿನ ದಿನ ಚೆನ್ನೈಗೆ ಹೋದಾಗ, ತಮಿಳು ಭಾಷೆ ತಾನೇ ತಾನಾಗಿ ಬಾಯಿಂದ ಹೊರಬರಲು ಆರಂಭಿಸಿತು. ಹಿಂದೆ ಬ್ಯಾಂಕಿನಲ್ಲಿದ್ದಾಗ 5 ವರ್ಷ ಚೆನ್ನೈನಲ್ಲಿ ಕೆಲಸ ಮಾಡಿದ್ದಾಗ ತಮಿಳು ಮಾತನಾಡುವುದು, ಬರೆಯುವುದು ಮತ್ತು ಓದುವುದು ಕಲಿತಿದ್ದೆ. ಆಟೋದವನು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ತಮಿಳೀನಲ್ಲೇ ಉತ್ತರ ಕೊಟ್ಟೆ. ಕಡೆಗೆ “ಸಾರ್, ಉಬರ್‌ನಲ್ಲಿ ತೋರಿಸುತ್ತಿರುವುದಕ್ಕಿಂತ 50 ರೂಪಾಯಿ ಜಾಸ್ತಿ ಕೊಡಿ” ಎಂದು ಅವನು ಹೇಳಿದಾಗ, “ನನಗೆ ತಮಿಳು ಬರೋಲ್ಲ, ನೀನು ಏನು ಹೇಳುತ್ತಿದ್ದೀಯೋ ಅರ್ಥವಾಗುತ್ತಿಲ್ಲ” ಎಂದು ತಮಿಳೀನಲ್ಲೇ ಉತ್ತರಿಸಿದೆ. “ಅಲ್ಲಾ ಸಾರ್, ನಾನು ಬೇರೆ ಮಾತಾಡಿದ್ದೆಲ್ಲ ನಿಮಗೆ ಅರ್ಥ ಆಗುತ್ತೆ, ಹೆಚ್ಚು ಹಣ ಕೇಳಿದ್ದು ಮಾತ್ರ ನಿಮಗೆ ಅರ್ಥ ಆಗೋಲ್ಲ ಅಲ್ವಾ” ಎಂದು ಅವನು ಹೇಳಿದಾಗ, ಹಾಗೇ ನಕ್ಕು “ಸರಿ ಹಾಗೇ ಆಗಲಿ ಬಾ ಹೋಗೋಣ” ಎಂದು ಚೆನ್ನೈನ ಗೆಳೆಯನ ಮನೆಗೆ ಆಟೋದಲ್ಲಿ ಹೋದೆ.
ಮಾರನೇ ದಿನ ಬೆಳಗ್ಗೆಯೇ ವೀಸಾ ಸಂದರ್ಶನಕ್ಕೆ ಹೋದೆ. ಬೆಳಿಗ್ಗೆ 8.30ಕ್ಕೆ ಇದ್ದ ನನ್ನ ಸಂದರ್ಶನಕ್ಕೆ 7.45ಕ್ಕೆ ಒಳಗೆ ಬಿಟ್ಟರು. ನನ್ನ ಸರದಿ ಬಂತು. ಸಂದರ್ಶನಗಾರ್ತಿ ಅಮೇರಿಕಾದ ಒಂದು ಬಿಳಿ ಮಹಿಳೆ. ಆಕೆ ತನ್ನ ಕಂಪ್ಯೂಟರ್ ನೋಡುತ್ತಾ ;
“ಶುಭ ಮುಂಜಾನೆ, ನಿಮ್ಮ ಪಾಸ್‌ಪೋರ್ಟ್ ಕೊಡಿ?”
“ಓ ನಿಮಗೂ ಶುಭಮುಂಜಾನೆ, ನನ್ನ ಪಾಸ್‌ಪೋರ್ಟ್‌ನ್ನು ನನ್ನ ದಾಖಲೆಗಳ ಮೇಲೆಯೇ ಇಟ್ಟುಕೊಂಡಿದ್ದೇನೆ, ತೆಗೆದುಕೊಳ್ಳಿ”
“ನಿಮ್ಮ ಅಮೆರಿಕಾ ಪ್ರವಾಸದ ಕಾರಣ?”
“ನನ್ನ ಅಕ್ಕನ ಮಗ ಅಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಾನೆ, ಅವನ ಗ್ರಾಜುಯೇಶನ್ ದಿನ ಸಂಭ್ರಮಿಸಲು ಹೋಗುತ್ತಿದ್ದೇನೆ. ಇಲ್ಲಿದೆ ನೋಡಿ ಅವನ ಆಹ್ವಾನ ಪತ್ರ ಮತ್ತು ಅವನ ವೀಸಾ ವಿವರ.”
ಸಂತೋಷ ಎಂದು ಹೇಳುತ್ತಿರುವಂತೆ ಆಕೆ ನೋಡುತ್ತಿದ್ದ ಕಂಪ್ಯೂಟರ್ ಆಫ್ ಆಯಿತು.
ಓ ಏನಿದು, ನನ್ನ ಕಂಪ್ಯೂಟರ್ ಆಫ್ ಆಯಿತು, ನೀವು ಒಂದರೆಡು ನಿಮಿಷ ಕಾಯಬೇಕಷ್ಟೆ ಎಂದು ನನ್ನ ಕಡೆ ನೋಡಿದಳು. ನನ್ನ ಕೈಲಿದ್ದ ಎರಡು ಪುಸ್ತಕಗಳನ್ನು ನೋಡಿ, “ಏನೂ, ಇಲ್ಲಿ ಎಂಬೆಸಿಯಲ್ಲಿ ನೀವು ಓದಲು ಪುಸ್ತಕಗಳನ್ನು ತಂದಿದ್ದೀರಾ?” ಅವಳ ಪ್ರಶ್ನೆ.
“ಇಲ್ಲ, ಇವು ನಾನು ಈವರೆಗೆ ಪ್ರವಾಸ ಮಾಡಿರುವ ದೇಶಗಳ ಬಗ್ಗೆ ನಾನೇ ಬರೆದಿರುವ ಪ್ರವಾಸ ಕಥನಗಳು, ಅದೂ ನನ್ನ ಮಾತೃಭಾಷೆ ಕನ್ನಡದಲ್ಲಿ” ಎಂದೆ.
ಓ ನೀವು ಲೇಖಕರೇ, ನಮ್ಮ ಅಮೆರಿಕಾದ ಬಗ್ಗೆಯೂ ನಿಮ್ಮ ಭಾಷೆಯಲ್ಲಿ ಬರೆಯುತ್ತೀರೇನೂ?
“ಖಂಡಿತವಾಗಿಯೂ ಬರೆಯುತ್ತೇನೆ, ಅದು ಕೂಡ ನನ್ನ ಪ್ರವಾಸದ ಒಂದು ಉದ್ದೇಶವೇ” ಎಂದೆ.
“ಸರಿ ನಿಮಗೆ ನಾವು ವೀಸಾ ನೀಡುತ್ತೇವೆ, ನೀವಿನ್ನು ಹೊರಡಬಹುದು” ಎಂದಳು ನಗುತ್ತಾ ಆ ಅಮೆರಿಕಾ ಮಹಿಳೆ.
“ತುಂಬಾ ಸಂತೋಷವಾಯಿತು, ಧನ್ಯವಾದಗಳು” ಎಂದು ಹೇಳಿ ಒಂದು ತಿಂಗಳಿನಿಂದ ತಯಾರಿ ನಡೆಸಿದ್ದ ಸಂದರ್ಶನವನ್ನು ತೊಂಬತ್ತೇ ಸೆಕೆಂಡ್‌ಗಳಲ್ಲಿ ಮುಗಿಸಿ ಹೊರಬಂದೆ.