ಗುರುರಾಜ
ಶಾಸ್ತ್ರಿ
ನನ್ನ ಬಗ್ಗೆ
ಪ್ರವಾಸ
ಅನುಭವ
ಅಂಕಣ
ಕಥೆ
ಕವನ
ಎಲ್ಲ
ನನ್ನ ಬಗ್ಗೆ
ಪ್ರವಾಸ
ಅನುಭವ
ಅಂಕಣ
ಕಥೆ
ಕವನ
ಎಲ್ಲ
ಕ
en
ಪಿಂಚಣಿ ಸೆಲ್ ಚೆನ್ನೈ
24-07-2021
0
  
ಅನಿಸಿಕೆಗಳು
0
  
ಮೆಚ್ಚುಗೆ
ಬೆಂಗಳೂರಿನಿಂದ 18 ಆಫೀಸರ್ಗಳನ್ನು ಬ್ಯಾಂಕ್ ನಮ್ಮ ಸ್ವ ಇಚ್ಛೆ ಮೇರೆಗೆ ಚೆನ್ನೈನಲ್ಲಿ ಎಲ್.ಸಿ.ಪಿ.ಸಿ ಎಂಬ ವಿಭಾಗಕ್ಕೆ ವರ್ಗಾವಣೆ ಮಾಡಿತ್ತು. ಆ ವಿಭಾಗಕ್ಕೆ ಹೋಗಿದ ತಕ್ಷಣ, ಬೇರೆ ವೃತ್ತಗಳಿಂದ ಬಂದಿದ್ದ ಸುಮಾರು 80 ಆಫೀಸರ್ಗಳಲ್ಲಿ ೪೦ ಜನರನ್ನು ಒಂದು ತಿಂಗಳ ಮಟ್ಟಿಗೆ ಹೊಸದಾಗಿ ಪ್ರಾರಂಭವಾಗಿದ್ದ ಪಿಂಚಣಿ ಸೆಲ್ ಗೆ ಹೋಗಲು ಹೇಳಿದರು. ಆ ಗುಂಪಿನಲ್ಲಿ ಬೆಂಗಳೂರು ವೃತ್ತದಿಂದ ನಾನೊಬ್ಬನೇ ಆಯ್ಕೆಯಾಗಿದ್ದೆ. ಮೊದಲೇ ಚೆನ್ನೈ ಹೊಸದು, ಅದರೆಲ್ಲಿ ಜೊತೆಗೆ ಬಂದಿದ್ದ ಗೆಳೆಯರನ್ನು ಬಿಟ್ಟು ಒಬ್ಬನೇ ಪಿಂಚಣಿ ಸೆಲ್ಗೆ ಹೋಗುವುದು ದುಃಖ ಮತ್ತು ಭಯ ತಂದಿತು. ಪಿಂಚಣಿ ಸೆಲ್ ನನ್ನ ಮನೆಯಿಂದ ಸುಮಾರು 17 ಕಿಲೋಮೀಟರ್ ದೂರದಲ್ಲಿದ್ದು ನನಗೆ ದಿನದ ಭತ್ಯೆಯಾಗಿ 560 ರೂಪಾಯಿ ಹಾಗೂ 200 ರೂ ಆಟೋ ಚಾರ್ಜ್ ನೀಡಲಾಗುವುದು ಎಂದು ಹೇಳಿದರು. ಈ ಮೊತ್ತ ಪಿಂಚಣಿ ಸೆಲ್ಗೆ ಆಯ್ಕೆಯಾಗಿದ್ದ ಸುಮಾರು 30 ಆಫೀಸರ್ಗಳಿಗೆ ಅನ್ವಯವಾಗುತ್ತಿತ್ತು. ಒಂದು ತಿಂಗಳಿಗಿಂತ ಹೆಚ್ಚು ಪಿಂಚಣಿ ಸೆಲ್ನಲ್ಲಿ ಕೆಲಸ ಮಾಡಿ ಎಲ್.ಸಿ.ಪಿ.ಸಿ ಗೆ ವಾಪಸ್ ಬಂದ ಮೇಲೆ ನಾವು ಮೂವತ್ತು ಜನ ಆಫೀಸರ್ಗಳು ದಿನಕ್ಕೆ ರೂಪಾಯಿ 760 ರಂತೆ ೩೫ ದಿನಕ್ಕೆ ಬಿಲ್ ತಯಾರಿ ಮಾಡಿ ವಲಯ ಕಛೇರಿಗೆ ಕಳುಹಿಸಿದೆವು. ಒಬ್ಬಬ್ಬೊರದೂ ಸುಮಾರು ೨೫ ಸಾವಿರಕ್ಕಿಂತ ಹೆಚ್ಚು ಆಗಿದ್ದ ಬಿಲ್ ಮೊತ್ತ ನೋಡಿ, ವಲಯ ಕಛೇರಿ ಆಡಳಿತ ವಿಭಾಗದ ಕೆಳದರ್ಜಿಯ ಅಧಿಕಾರಿಯೊಬ್ಬರು ಎಲ್.ಸಿ..ಪಿ.ಸಿ ಗೆ ಬಂದು ಕೇವಲ ಆಟೋ ಮೊತ್ತವನ್ನು ಮಾತ್ರ ಕೊಡುತ್ತೇವೆ, ದಿನದ ಭತ್ಯೆ ಕೊಡುವುದಿಲ್ಲ. ಈ ಕರಾರಿಗೆ ಒಪ್ಪುವುದಾದರೆ ನೀವು ಹೊಸ ಬಿಲ್ ಕೊಡಿ ಎಂದರು. ಏನೋ ಒಂದಷ್ಟು ದುಡ್ಡು ಬಂದರೆ ಸಾಕು ಎಂದು ೨೯ ಜನ ಕೇವಲ ಆಟೋ ಚಾರ್ಜ್ ತೆಗೆದುಕೊಳ್ಳಲು ಒಪ್ಪಿದರು. ನಾನು ಮಾತ್ರ ನನಗೆ ಆಟೋ ವೆಚ್ಚ ಕೂಡಾ ಬೇಡ ಆದರೆ ನನ್ನ ಬಿಲ್ ಮೇಲೆ ನಿಮ್ಮ ಹೊಸ ಕರಾರನ್ನು ಬರದು ಹಿಂದಿರುಗಿಸಿ ಎಂದೆ. ಎಲ್ಲರೂ ನನಗೆ ಬೈದರು. ಸುಮ್ಮನೆ 7 ಸಾವಿರ ರೂಪಾಯಿ ತೆಗೆದುಕೊಳ್ಳುವುದನ್ನು ಬಿಟ್ಟು ಬ್ಯಾಂಕಿಗಾಗಿ ಹಣವನ್ನು ತ್ಯಾಗಮಾಡಿಬಿಟ್ಟ ಎಂದರು. ನನ್ನ ವಾದ ಇಷ್ಟೆ. ನನ್ನ ಬಿಲ್ ಸರಿಯಾಗಿದೆ, ತಪ್ಪು ಬಿಲ್ ನಾನು ಕೊಡುವುದಿಲ್ಲ ಎಂದೆ. ಅವರೆಲ್ಲಾ 7 ಸಾವಿರ ರೂಪಾಯಿಗಳನ್ನು ತಗೆದುಕೊಂಡರು. ಕಾಲ ಕಳೆಯುತ್ತಿದ್ದಂತೆ ನಾನು ಈ ವಿಷಯವನ್ನು ಮರೆತುಬಿಟ್ಟೆ. ಇದಾದ ಸುಮಾರು ೪ ತಿಂಗಳ ನಂತರ ಒಂದು ದಿನ ವಲಯ ಕಛೇರಿಯಿಂದ ನಮ್ಮ ವಿಭಾಗಕ್ಕೆ ಫೋನ್ ಬಂತು. ಯಾರದರೂ ಕನ್ನಡ ಓದಲು ಮತ್ತು ಅದರ ಅರ್ಥವನ್ನು ಇಂಗ್ಲೀಷನಲ್ಲಿ ಹೇಳುವವರಿದ್ದರೆ ತುರ್ತಾಗಿ ವಲಯ ಕಛೇರಿಗೆ ಕಳಿಸಿ ಎಂದು ಬೇಡಿಕೆ (ಅಲ್ಲ) ಆದೇಶ ಇಟ್ಟಿದ್ದರು.. ನಮ್ಮ ಮ್ಯಾನೇಜರ್ ನನಗೆ ಹೋಗಲು ಹೇಳಿದರು. ನಾನು ನನ್ನ ಜೊತೆಗೆ ತಮಿಳು ಭಾಷೆ ಗೊತ್ತಿದ್ದ ಗೆಳೆಯ ಕಾರ್ತೀಕೇಯನ್ರನ್ನು ಕರೆದುಕೊಂಡು ಹೋದೆ. ಯಾವುದನ್ನು ಓದ ಬೇಕು, ಆ ಓದುವ ದಾಖಲೆ ಯಾವುದಕ್ಕೆ ಸಂಬಂಧಪಟ್ಟಿದ್ದು, ಯಾವುದೂ ತಿಳಿಯದಿದ್ದರಿಂದ ಗೊಂದಲದಲ್ಲೇ ವಲಯ ಕಛೇರಿಗೆ ಹೋದೆವು. ಅಲ್ಲಿ ಆಡಳಿತ ವಿಭಾಗದ ಮುಖ್ಯಸ್ತರಾದ ಮೂರ್ತಿಯವರ ಕ್ಯಾಬಿನ್ ಗೆ ಹೋಗಲು ಹೇಳಿದರು. ಮೂರ್ತಿಯವರು ನಮ್ಮನ್ನು ಕುಳಿತುಕೊಳ್ಳಲು ಹೇಳಿ, ತಮ್ಮ ಕೈಲಿದ್ದ ಒಂದು ಸ್ಟಾಂಪ್ ಪೇಪರ್ ನನಗೆ ಕೊಟ್ಟರು. ಅದು ಬೆಂಗಳೂರಿನ ಸೂರ್ಯ ಸಿಟಿಯಲ್ಲಿ ಅವರ ಅಳಿಯ ಕೊಂಡುಕೊಂಡಿದ್ದ ಒಂದು ಮನೆಯ ವ್ಯಾಪಾರದ ಕ್ರಯ ಪತ್ರ. ಸಂಪೂರ್ಣ ಕನ್ನಡದಲ್ಲಿತ್ತು. ಇದರ ಅರ್ಥವನ್ನು ಆಂಗ್ಲ ಭಾಷೆಯಲ್ಲಿ ಹೇಳುವಿರಾ ಎಂದರು. ನಾನು ಅರ್ಥ ಹೇಳುತ್ತಿದ್ದಾಗ ಮುಖ್ಯವಾದ ವಿಷಯಗಳನ್ನು ಅವರು ನೋಟ್ಬುಕ್ನಲ್ಲಿ ಬರೆದುಕೊಂಡರು. ಕೆಲಸ ಮುಗಿದ ಮೇಲೆ, ನಾನು ಹೊರಡುತ್ತೇನೆ ಎಂದೆ. ಕೆಲಸ ಮುಗಿಸುವ ಆತುರದಲ್ಲಿದ್ದ ನನಗಾಗಲಿ ಹಾಗೂ ತರ್ಜುಮೆ ತುರ್ತಾಗಿ ಆಗಬೇಕಿದ್ದ ಅವರಿಗಾಗಲಿ ನಾವು ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಂಡಿಲ್ಲವೆಂಬುದು ನೆನಪಿಗೆ ಬರಲಿಲ್ಲ. ನಾನು ಕ್ಯಾಬಿನ್ ನಿಂದ ಇನ್ನೇನು ಆಚೆಗೆ ಹೋಗಬೇಕು ಆಗ ಅವರು ನನ್ನ ಹೆಸರು ಕೇಳಿದರು. ನಾನು ಗುರುರಾಜ ಎಂದೆ. ಅವರು ಕಾಫಿ ತರಿಸುತ್ತೇನೆ ಕುಡಿದುಕೊಂಡು ಹೋಗಿರಿ ಎಂದರು. ಸರಿ ಎಂದೆವು. ಕಾಫಿಗಾಗಿ ಕಾಯುತ್ತಿದ್ದಾಗ ಅವರು, ಗುರುರಾಜ್, ನಿಮ್ಮ ಹೆಸರು ನನಗೆ ಏನೋ ತುಂಬಾ ಸಲ ಕೇಳಿದಂತಿದೆ. ಹಿಂದೆ ಯಾವಗಲಾದರು ನೀವು ವಲಯ ಕಛೇರಿಗೆ ಬಂದಿದ್ದಿರಾ ಎಂದು ಕೇಳಿದರು. ನಾನು ಇಲ್ಲ ಎಂದೆ. ಸರಿ ನಿಮ್ಮದು ಯಾವುದಾದರು ಮೆಡಿಕಲ್ ಬಿಲ್ ಬಾಕಿ ಇದೆಯಾ ಎಂದರು, ನಾನು ಇಲ್ಲ ಎಂದೆ. ಆದರೆ ನಿಮ್ಮ ಹೆಸರು ಎಲ್ಲೋ ಓದಿದ ನೆನಪು. ಯಾವುದಾದರು ಬೇರೆ ಬಿಲ್ ಪೆಂಡಿಂಗ್ ಇದೆಯೇ ಎಂದರು. ಆಗ ಕಾರ್ತಿಕೇಯನ್ ಪಿಂಚಣಿ ಸೆಲ್ ಗೆ ಹೋಗಿದ್ದ ಬಿಲ್ ಬಗ್ಗೆ ತಮಿಳಿನಲ್ಲಿ ತಿಳಿಸಿದರು. ನಾನು ಈಗ ಅದು ಮುಗಿದ ಹೋದ ಕತೆ ಎಂದೆ. ಅವರು ತಕ್ಷಣ ಅವರ ಟೇಬಲ್ ಡ್ರಾಯರ್ನಿಂದ ಬಾಕಿ ಇದ್ದ ಬಿಲ್ಗಳ ಫೋಲ್ಡರ್ನಿಂದ ನನ್ನ ಬಿಲ್ ತೆಗೆದು ಇದೇ ಅಲ್ಲವೇ ಆ ಬಿಲ್ ಎಂದರು. ಹೌದು ಎಂದೆ. ನಾನು ಹಣ ಬೇಡ ಎಂದ ಕೂಡಲೇ ಅವರು ಬಿಲ್ ಹರಿದು ಹಾಕಿರುತ್ತಾರೆ ಎಂದು ನಾನಂದುಕೊಂಡಿದ್ದೆ. ಆದರೆ ಬಿಲ್ ಅವರ ಬಳಿಯೇ ಸುರಕ್ಷಿತವಾಗಿದ್ದದ್ದು ಆಶ್ಚರ್ಯ ತಂದಿತ್ತು. ತಕ್ಷಣ ಅವರ ಅಸಿಸ್ಟೆಂಟ್ ಒಬ್ಬನನ್ನು ಕರೆಸಿ, ಬಿಲ್ನ ಪೂರ್ತಿ ಹಣವನ್ನು ನನ್ನ ಖಾತೆಗೆ ತಕ್ಷಣ ಹಾಕಲು ಹೇಳಿದರು. ಕಾಫಿ ಕುಡಿದು ಮುಗಿಸಿದ ಮೇಲೆ ನಮ್ಮ ನಮ್ಮ ಕೆಲಸಕ್ಕೆ ಇಬ್ಬರೂ ಧನ್ಯವಾದಗಳನ್ನು ವಿನಿಮಯ ಮಾಡಿಕೊಂಡೆವು. ನಾನು ಕ್ಯಾಬಿನ್ ಹೊರಗೆ ಕಾಲಿಟ್ಟೆ, ರೂಪಾಯಿ 26,600 ನನ್ನ ಖಾತೆಗೆ ಜಮಾ ಆಗಿರುವ ಸಂದೇಶ ಮೊಬೈಲ್ಗೆ ಬಂತು. ನಕ್ಕು ಮತ್ತೊಮ್ಮೆ ಅವರಿಗೆ ಧನ್ಯವಾದಗಳನ್ನು ಹೇಳಿ ಎಲ್.ಸಿ.ಪಿ.ಸಿ ಗೆ ವಾಪಸ್ ಆದೆವು. ಎಲ್.ಸಿ.ಪಿ.ಸಿ ಯಲ್ಲಿ ನಮ್ಮ ಬರುವಿಕೆಗಾಗಿಯೇ ಕಾಯುತ್ತಿದ್ದ ಗೆಳೆಯರು, ಯಾವ ದಾಖಲೆ, ಯಾವ ಪತ್ರ , ಯಾರಿಗಾಗಿ ತರ್ಜುಮೆ ಮಾಡಿದ್ದು ಮೇಲಿಂದ ಮೇಲೆ ಪ್ರಶ್ನೆಗಳ ಮಳೆ ಸುರಿಸಿದರು. ನಾನು ತರ್ಜುಮೆಯ ಎಲ್ಲಾ ವಿಷಯವನ್ನು ತಿಳಿಸಿದೆ. ಗೆಳೆಯ ಕಾರ್ತಿಕೇಯನ್ ನನ್ನ ಪಿಂಚಣಿ ಸೆಲ್ನ ಬಿಲ್ ಬಗ್ಗೆ ತಿಳಿಸಿದರು. ಬಿಲ್ನ ಮೊತ್ತ ಸಂಪೂರ್ಣವಾಗಿ ನನ್ನ ಖಾತೆಗೆ ಬಂದಿದ್ದು 29 ಜನರನ್ನು ಮಾತ್ರ ಬಿಟ್ಟು ಮಿಕ್ಕೆಲ್ಲರಿಗೂ ಸಂತಸ ತಂದಿತ್ತು. ಸಂಜೆ ಮನೆಗೆ ಹೋಗುವಾಗ 18000 ರೂಪಾಯಿಗೆ ಒಂದು ಸೆಕೆಂಡ್ ಹ್ಯಾಂಡ್ ಯಮಾಹಾ ಗಾಡಿ ಮನಗೆ ಕೊಂಡುಕೊಂಡು ಹೋದೆ. ಅಪ್ಪ ಅಮ್ಮನ ಕೃಪೆ, ಅಣ್ಣನ ಕೃಪೆ, ಹಿತ ಶತ್ರುಗಳ ಕೃಪೆ ಹೀಗೆ ಗಾಡಿಗಳ ಮೇಲೆ ಬರೆಸಿಕೊಳ್ಳುವವರನ್ನು ನೋಡಿದ್ದೇವೆ. ನಾನು ನನ್ನ ಗಾಡಿಯ ಮೇಲೆ ಕನ್ನಡಮ್ಮನ ಕೃಪೆ ಅಥವಾ ಪಿಂಚಣಿ ಸೆಲ್ ಕೃಪೆ ಯಾವುದನ್ನು ಬರೆಸಿಕೊಳ್ಳಲಿ ಎಂಬ ಗೊಂದಲದಲ್ಲಿ ಏನೂ ಬರೆಸದೆ ಹಾಗೇ ಕಾಲ ಕಳೆದೆ.
ಇದನ್ನು ಮೆಚ್ಚಿ
ಮತ್ತಷ್ಟು ಓದಿ
1.
ಭಾಷೆ ಮೇಲಿನ ಪ್ರೀತಿ - ಅಸೋಸಿಯೇಶನ್ ಹುದ್ದೆ
2.
ಒಂದು ಕೋಣೆಯ ಕಥೆ
3.
ಎಲ್ಲಿಯ ಬೆಂಗಳೂರು, ಎಲ್ಲಿಯ ರಾಯಪುರ, ಎಲ್ಲಿಯ ಮುಂಗೇಲಿ
4.
ಪಾರ್ಕಿಂಗ್ ಪ್ರಸಂಗ
5.
ಬಣ್ಣದ ಪಕ್ಷಿ ಹಾಗೂ ಚಿತ್ರಗುಪ್ತನ ಲೆಕ್ಕ
ಅನಿಸಿಕೆಗಳು
ಹೆಸರು
ಅನಿಸಿಕೆ
ಸಲ್ಲಿಸು