ಅದು ಅಕ್ಟೋಬರ್ 2007. ವಿವಿಧ ಕಾರಣಗಳಿಂದಾಗಿ ಕರ್ನಾಟಕದಿಂದ ಚೆನ್ನೈಗೆ ವರ್ಗಾವಣೆ ಮಾಡಿಸಿಕೊಂಡೆ. ಪೂರ್ಣ ದಕ್ಷಿಣ ಭಾರತಕ್ಕೆ ನಾನಿದ್ದ ಕಛೇರಿ ಸೇವೆ ನೀಡುತ್ತಿತ್ತು. ಹಾಗಾಗಿ ಕರ್ನಾಟಕದಿಂದ ಅಲ್ಲಿಗೆ ಹೋದವರು ನಾವೊಂದು ಹದಿನೈದು ಆಫೀಸರ್‌ಗಳು. ನಾವು ನಾಲ್ಕು ಜನರು ಸೇರಿ ಒಂದು ದೊಡ್ಡ ಮನೆ ಬಾಡಿಗೆಗೆ ತೆಗೆದುಕೊಂಡೆವು. ಅದಕ್ಕೆ ಒಂದೆರೆಡು ದೊಡ್ಡ ಬಾಲ್ಕನಿ ಬೇರೆ. ಕರ್ನಾಟಕದ ಅಕ್ಟೋಬರ್‌ನ ಛಳಿ ತಪ್ಪಿಸಿಕೊಂಡು ಚೆನ್ನೈನ್ ರಣ ಬಿಸಿಲಿಗೆ ನಮ್ಮ ಇಚ್ಚೆಯಮೇಲೆ ಹೋದದ್ದಾಯಿತು. ಆಗಲೇ ನಮಗೆ ತಿಳಿದದ್ದು, ಚೆನ್ನೈನಲ್ಲಿ ಕೇವಲ ಎರಡು ಕಾಲಗಳು ಮಾತ್ರ ಇವೆ, *ಒಂದು ಬೇಸಿಗೆ ಮತ್ತೊಂದು ಅತಿಬೇಸಿಗೆ* ಎಂದು.
ಅದು 2008ರ ಸಂಕ್ರಾಂತಿಯ ಹಿಂದಿನ ದಿನದ ಮುಂಜಾನೆ. ರಾತ್ರಿ ಎಲ್ಲಾ ಶೆಕೆಯಲ್ಲಿ ನಿದ್ದೆ ಬಾರದೆ ಕಿಟಕಿ ಬಾಗಿಲುಗಳನ್ನು ತೆಗೆದು ಮಲಗಿದ್ದೆವು. ಇದ್ದಕ್ಕಿದ್ದಂತ ಬೆಳಗಿನ ಜಾವ ಟಮಟೆಗಳ ಸದ್ದು. ನಮ್ಮ ಊರಿನಲ್ಲಿ ಬುಡುಬುಡುಕೆಯವರು ಬೆಳಗಿನ ಜಾವ ಬರುವುದನ್ನು ನೋಡಿದ್ದೆವು, ಆದರೆ ಚೆನ್ನೈನಲ್ಲಿ ಈ ಬುಡುಬುಡುಕೆಯವರು ಟಮಟೆ ತರುತ್ತಾರೆಯೇ ಎಂಬುದು ನಮ್ಮ ಅನುಮಾನ. ಉಟ್ಟಿದ್ದ ಬಿಳಿ ಪಂಚೆ, ಮೇಲೆ ತೊಟ್ಟಿದ್ದ ಅರ್ಧ ಬನಿಯನ್‌ನಲ್ಲೇ ಎಲ್ಲರೂ ಬಾಲ್ಕನಿಗೆ ಹೋದೆವು. ರಸ್ತೆಯಲ್ಲೆಲ್ಲಾ ಬೆಂಕಿ ಹಾಕಿದ್ದಾರೆ. ಸುತ್ತಲೂ ಜನರು ಕುಳಿತು ಟಮಟೆ ಬಾರಿಸುತ್ತಿದ್ದಾರೆ. ಪೊಂಗಲೋ ಪೊಂಗಲು ಎಂದು ಜೋರಾಗಿ ಕಿರುಚಿತ್ತಿದ್ದಾರೆ. ಬೆಂಕಿಯ ಮುಂದೆ ಕುಳಿತಿದ್ದ ಒಬ್ಬೊಬ್ಬರದೂ ಒಂದೊಂದು ವಿಚಿತ್ರ ಉಡುಪು. ಕೋಲಾರದ ಕರಿ ಕಂಬಳಿ ಹೊದ್ದಿಕೊಂಡವರು, ತಲೆಗೆ ಉಣ್ಣೆಯ ಮಫ್ಲರ್ ಸುತ್ತಿಕೊಂಡವರು, ದಪ್ಪನೆಯ ಸ್ವೆಟರ್ ಹಾಕಿಕೊಂಡವರು. ಛಳಿಯೊಂದು ಬಿಟ್ಟು ಛಳಿಗಾಲದ ಎಲ್ಲಾ ದೃಶ್ಯಗಳನ್ನು ನಾವು ನೋಡಿದೆವು. ನಾವು ಲೈಟ್ ಹಾಕಿ ಬಾಲ್ಕನಿಗೆ ಬಂದದ್ದು ನೋಡಿ ರಸ್ತೆಯಲ್ಲಿದ್ದ ಎಲ್ಲರ ಕಣ್ಣು ನಮ್ಮ ಮೇಲೆ. ನಮ್ಮದೋ ಪೂರ್ಣ ಬೇಸಿಗೆಯ ಉಡುಪು, ಅವರಿಗೆಲ್ಲರಿಗೂ ಆಶ್ಚರ್ಯ, ಇವರೇನೂ ಮನುಷ್ಯರೋ ಅಲ್ಲವೋ ಎಂದು. ಅವರು ನಡುಗುತ್ತಿದ್ದಾರೆ, ನಾವು ಬೆವರುತ್ತಿದ್ದೇವೆ.
ಬಹುಷಃ ಚೆನ್ನೈಗೆ ನೆಲೆಸಲು ಹೋದ ಪ್ರತಿಯೊಬ್ಬರಿಗೂ ಮೊದಲನೇ ವರ್ಷ ಆಗುವ ಅನುಭವ ಇದಾಗಿರುತ್ತದೆ. ಆದರೆ ಆ ಚೆನ್ನೈನ ವಾತಾವರಣಕ್ಕೆ ನಾವು ಬೇಗ ಹೊಂದಿಕೊಂಡಿದ್ದಕ್ಕೆ ಪುರಾವೆ ಎಂದರೆ ಮುಂದಿನ ವರ್ಷದ ಸಂಕ್ರಾಂತಿಯಲ್ಲಿ ನಾವೂ ಸ್ವೆಟರ್ ಹಾಕಿಕೊಂಡು ಬೆಚ್ಚಗೆ ಆ ರಸ್ತೆಯ ಸಂಕ್ರಾಂತಿಯ ವಿಶೇಷ ಆಚರಣೆಯನ್ನು ನೋಡಿದ್ದು. ಈ ರೀತಿ ಬೆಂಕಿ ಏಕೆ ಹಾಕುತ್ತಾರೆ? ಅದಕ್ಕೆ ಹಳೆಯ ಬಟ್ಟೆಗಳನ್ನು ಏಕೆ ಆಹುತಿ ನೀಡುತ್ತಾರೆ? ಅದರ ಹಿಂದಿನ ಉದ್ದೇಶವಾದರೂ ಏನೂ? ಇವೆಲ್ಲಾ ವಿವರಿಸುತ್ತಾ ಹೋದರೆ ನನ್ನ ಲೇಖನದ ಉದ್ದೇಶ ದಾರಿ ತಪ್ಪುವುದಂತೂ ನಿಜ, ಹಾಗಾಗಿ ಇಲ್ಲಿಗೆ ಆ ವಿಷಯ ಬಿಟ್ಟುಬಿಡೋಣ.
ಸಂಕ್ರಾಂತಿಯನ್ನು *ಪೊಂಗಲ್* ಎಂಬ ಹೆಸರಿನಲ್ಲೇ ಆಚರಿಸುವುದು ಈ ತಮಿಳುನಾಡಿನವರು. ಕೆಲವರು ಇದನ್ನು ಅವರ ಹೊಸ ವರ್ಷವೆಂದೂ ಹೇಳುತ್ತಾರೆ. ಮೂರು ದಿನ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕಛೇರಿಗಳಿಗೆ ರಜೆ. ನಮ್ಮಲ್ಲಿ ಸಂಕ್ರಾಂತಿಯಂದು ಹಬ್ಬದ ಊಟಕ್ಕೆ ಹೆಚ್ಚು ಪ್ರಾಮುಖ್ಯತೆ ಹೇಗೆ ಕೊಡುತ್ತೇವೋ, ಅಲ್ಲಿ ಹೊಸ ಬಟ್ಟೆ, ಚಿನ್ನದ ಒಡವೆಗಳ ಖರೀದಿಗೆ ಜನ ಮುಗಿಬೀಳುತ್ತಾರೆ. ಚೆನ್ನೈನ ಮುಖ್ಯ ಮಾರುಕಟ್ಟೆ ಟಿ.ನಗರ್‌ನಲ್ಲಿ ಅಂಗಡಿಗಳ ಒಳಗೆ ಹೋಗಲು ಸಾವಿರಾರು ಮಂದಿ ಸಾಲಿನಲ್ಲಿ ನಿಂತಿರುವುದನ್ನು ನಾನು ಕಂಡಿದ್ದೇನೆ. ಅಂದೇ ಹೊಸದೇನಾದರನ್ನು ಖರೀದಿಸಬೇಕೆಂಬುದು ಅವರ ನಂಬಿಕೆ. ಹಾಗಂತ ಮಾರಾಟಗಾರರೇನೂ ಬೇಡಿಕೆ ಹೆಚ್ಚಾಯಿತೆಂದು ಬೆಲೆಯನ್ನು ಹೆಚ್ಚಿಸುವುದಿಲ್ಲ. ಬದಲಾಗಿ ಹೆಚ್ಚು ರಿಯಾಯಿತಿಗಳನ್ನು ಮತ್ತು ಅದೃಷ್ಟದ ಬಹುಮಾನಗಳನ್ನು ಘೋಷಿಸುತ್ತಾರೆ. ಪ್ರತಿಯೊಂದು ಮನೆಯಿಂದ ಪೊಂಗಲ್ ಪರಿಮಳ ಬರುತ್ತಿರುತ್ತದೆ. ಹೊಸಬಟ್ಟೆಗಳನ್ನು ಧರಿಸಿ ಮನೆಯಿಂದ ಆಚೆ ಬಂದು ರಸ್ತೆಗಳಲ್ಲಿ ಓಡಾಡುವುದೇ ಒಂದು ಸಂಭ್ರಮ.
ಹೇಗಿದ್ದರೂ ಮೂರು ದಿನ ರಜೆ ಇದೆಯೆಲ್ಲಾ ಎಂದು ನಾನು ಮಧ್ಯದ ಒಂದು ದಿನ ಮಹಾಬಲಿಪುರಂ, ಕಂಚಿ ಪ್ರವಾಸಕ್ಕೆ ತಮಿಳುನಾಡು ಪ್ರವಾಸೋಧ್ಯಮ ಆಯೋಚಿತ ಪ್ರವಾಸಕ್ಕೆ ಹೊರಟೆ. ಆ ಪ್ರವಾಸದಲ್ಲಿ ತಿಂಡಿ ಊಟ ನಾವೇ ಖರೀದಿಸಬೇಕು. ಆ ದಿನ ನೀವು ಹೋಟೆಲ್‌ನಲ್ಲಿ ಏನೇ ಕೊಂಡರೂ ಜೊತೆಗೆ ಪೊಂಗಲ್ ಉಚಿತ. ಸಂಜೆಯಾಗುವಷ್ಟರಲ್ಲಿ ತಟ್ಟೆಯಲ್ಲಿ ಏನೇ ತಿನಿಸು ಇದ್ದರೂ ಪೊಂಗಲ್ ಹಾಗೆಯೇ ಕಾಣಿಸುತ್ತಿತ್ತು ನನಗೆ.
ಹಬ್ಬ ಮುಗಿದ ಮಾರನೇ ದಿನ ಕಛೇರಿಗೆ ಹೋದರೆ ನಮ್ಮ ಸ್ಥಳೀಯ ಸಹೋದ್ಯೋಗಿಗಳು ತಾವು ಖರೀದಿಸಿದ್ದ ಬಣ್ಣದ ಬಟ್ಟೆಗಳನ್ನು ಧರಿಸಿ, *ಇದರ ಬೆಲೆ ಎಷ್ಟು? ಅದರ ಬೆಲೆ ಎಷ್ಟು?* ಅನ್ನುವುದರಲ್ಲೇ ಅರ್ಧ ದಿನ ಕಳೆದುಹೋಯಿತು. ಅಂದೇ ಅವರು ತಯಾರು ಮಾಡಿದ್ದ ಪೊಂಗಲ್ ತಂದು ನಮಗೆಲ್ಲಾ ಹಂಚಿದರು. ಮಳೆ ನಿಂತರೂ ಮಳೆಯ ಹನಿ ನಿಲ್ಲಲಿಲ್ಲ ಎಂಬಂತೆ ಕಛೇರಿಯಲ್ಲೆಲ್ಲಾ ಮೂರು ದಿನ ಒತ್ತರಿಸಿಕೊಂಡು ನಾಲ್ಕನೇ ದಿನದ ಪೊಂಗಲ್ ಹಬ್ಬದ ಆಚರಣೆಯಾಗಿತ್ತು.
ಸಂಕ್ರಾಂತಿಯ ಈ ಸಂದರ್ಭದಲ್ಲಿ ಚೆನ್ನೈನ ಆ ಸಂಕ್ರಾಂತಿ ನೆನಪಿಗೆ ಬಂತು. ಬಹುಷಃ *ನನ್ನ ಜೀವನದ ಸಂಭ್ರಮದ ಸತತ ನಾಲ್ಕೈದು ವರ್ಷಗಳು ಯಾವುದು* ಎಂದು ಪಟ್ಟಿ ಮಾಡಿದರೆ ಆ ಪಟ್ಟಿಯಲ್ಲಿ ಚೆನ್ನೈನಲ್ಲಿ ನಾನು ಕಳೆದ ವರ್ಷಗಳು ಅಗ್ರ ಕ್ರಮಾಂಕದಲ್ಲಿ ಬರುತ್ತದೆ.
*ಎಲ್ಲರಿಗೂ 2026ರ ಸಂಕ್ರಾಂತಿ ಹಬ್ಬದ ಶುಭಾಶಯಗಳು.*