ಗುರುರಾಜ
ಶಾಸ್ತ್ರಿ
ಶ್ರಾದ್ಧ
24-07-2021
ಸತ್ತ ಪಿತೃಗಳಿಗೆ ವರ್ಷಕ್ಕೊಮ್ಮೆ ಆಹಾರವನ್ನು ನೀಡುವ ವ್ರತಕ್ಕೆ ಶ್ರಾದ್ಧ ಅಥವ ರೂಡಿ ಮಾತಿನಲ್ಲಿ ತಿಥಿ ಎನ್ನುತ್ತಾರೆ. ಕಾಲಕ್ಕೆ ತಕ್ಕಂತೆ ಹಾಗೂ ಅನುಕೂಲಕ್ಕೆ ಅನುಗುಣವಾಗಿ ಶ್ರಾದ್ಧದ ಆಚರಣೆ ಬದಲಾಗುತ್ತಾ ಬಂದಿದೆ. ನನ್ನ ಅಮ್ಮ ಸತ್ತು 17 ವರ್ಷಗಳಾದವು. ಈ 17 ವರ್ಷಗಳಲ್ಲಿ ನಾ ಕಂಡ ತಿಥಿಯ ಆಚರಣೆಯಲ್ಲಿನ ಬದಲಾವಣೆಗಳ ಒಂದು ತುಣುಕು ಈ ಅಂಕಣದಲ್ಲಿ. ಹಿಂದಿನ ದಿವಸ ರಾತ್ರಿಗೆ ಮಡಿಯಲ್ಲಿ ಮಾಡಿದ ಉಪ್ಪಿಟ್ಟು ತಿನ್ನುತ್ತಿದ್ದೆವು. ಹೀಗೆ ತಿನ್ನುವಾಗ ಕೂಡ ನಾವು ನೀರಿನಲ್ಲಿ ನೆನೆಸಿದ ಪಂಚೆಯನ್ನೋ ಅಥವ ಟವಲ್ಲನ್ನೋ ಉಡಬೇಕಿತ್ತು. ಇದು ಮಡಿಯಲ್ಲೇ ತಿನ್ನುವ ಅತಿವಾಸದ ಒಂದು ಪದ್ಧತಿ. ಅಂದು ರಾತ್ರಿ ಮನೆಯಲ್ಲಿ ಸಂಭಂಧಿಕರ ಆಗಮನ. ಅಕ್ಕ, ಸೋದರತ್ತೆ, ಚಿಕ್ಕಮ್ಮಂದಿರು, ಅವರ ಮಕ್ಕಳು ಹೀಗೆ ಸಂತಸ ಕೊಡುತ್ತಿದ್ದ ಸಂಭಂದಿಕರ ಪಟ್ಟಿ. ಎಲ್ಲರೂ ಅಮ್ಮನ ಜೊತೆಯಲ್ಲಿ ತಾವು ಬೆಳದುಬಂದ ನೆನಪುಗಳ ಮೆಲಕು ಹಾಕುತ್ತಿದ್ದರು. ನಮಗಂತು ಈ ಬಂಧುಗಳ ಜೊತೆಗಳಲ್ಲಿ ಸಮಯ ಕಳೆಯುವುದೇ ಒಂದು ಸಂಭ್ರಮ. ನನ್ನಪ್ಪ ಒಟ್ಟಾರೆ ಎಷ್ಟು ಜನರ ಊಟ ಎಂದು ಎಣಿಕೆ ಹಾಕಿ, ಒಂದು ಅಂದಾಜಿನಲ್ಲಿ ತಿಥಿಗೆ ಬೇಕಾದ ತರಕಾರಿ, ಹಣ್ಣು, ದಿನಸಿ, ಬಾಳೆ ಎಲೆ ಎಲ್ಲಾ ತರುತ್ತಿದ್ದರು. ಸಾಮಾನ್ಯವಾಗಿ ಅಮ್ಮನಿಗೆ ಇಷ್ಟವಾಗಿದ್ದ ತರಕಾರಿಗಳು ಹೆಚ್ಚಾಗಿರುತ್ತಿತ್ತು. ಅಮ್ಮನಿಗೆ ಸಂಪಿಗೆ ಹೂವು ಇಷ್ಟವೆಂದು ಚಿಕ್ಕಮ್ಮಂದಿರು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗದ ಸಂಪಿಗೆಯನ್ನು ಹುಡುಕಿ ತರುತ್ತಿದ್ದರು. ಇನ್ನೂ ಸೋದರತ್ತೆ ಹತ್ತಿರದಲ್ಲೇ ಪರಿಚಯವಿದ್ದ ಹಸು ಕಟ್ಟಿರುವವರ ಮನೆಗೆ ಹೋಗಿ ಸಗಣಿ ತರುತ್ತಿದ್ದರು. ಈ ಸಗಣಿ ತಿಥಿಗೆ ಅವಶ್ಯಕ, ಅಡುಗೆಗೆ ಅಲ್ಲ. ನಂತರ ತರಕಾರಿಯನ್ನು ಪಲ್ಯಕ್ಕೆ ಹಾಗೂ ಹುಳಿಗೆ (ಸಾಂಭಾರಿಗೆ ನಾವು ಮನೆಯಲ್ಲಿ ಬಳಸುವ ಪದ)ಬೇರೆ ಬೇರೆ ಗಾತ್ರದಲ್ಲಿ ಹೆಚ್ಚುವುದು ಹೆಂಗಸರ ಕೆಲಸ. ಪಾಪ, ಕಷ್ಟಪಟ್ಟು ಸಗಣಿ ತರುತ್ತಿದ್ದ ಸೋದರತ್ತೆಗೆ ಕೈ ಸಗಣಿ ವಾಸನೆ ಇರುತ್ತೆ ಎಂದು ಹೇಳಿ ತರಕಾರಿ ಹೆಚ್ಚಕೂಡದೆಂದು ಬಹಿಷ್ಕಾರ ಹಾಕುತ್ತಿದ್ದರು. ಇವೆಲ್ಲಾ ಒಂದು ತಮಾಷೆಗೆ ಅಷ್ಟೆ. ಆಂದು ರಾತ್ರಿ ಕೆಲವರ ಹಾಡುಗಳು, ನಗೆ ಹನಿಗಳು, ಅಮ್ಮನೊಂದಿಗಿನ ಅನುಭವಗಳು ಹಾಗೇ ಮುಂದುವರೆಯುತ್ತಾ ಎಲ್ಲರೂ ಮಲಗುವ ಹೊತ್ತಿಗೆ ರಾತ್ರಿ ಹನ್ನರಡಾಗುತ್ತಿತ್ತು. ದೊಡ್ಡ ಹಾಲ್ ಮತ್ತು ಒಂದು ಚಿಕ್ಕ ಕೋಣೆಯಲ್ಲಿ ಅಷ್ಟು ಜನರು ಯಾವುದೆ ತೊಂದರೆ ಇಲ್ಲದೆ ಮಲಗುತ್ತಿದ್ದೆವು. ಆದರೆ ಶ್ರಾದ್ದ ಕರ್ಮವನ್ನು ಬೇರೆಡೆ ಅಂದರೆ ಮುಕ್ತಿಧಾಮ, ಮೋಕ್ಷಧಾಮ ಆರ್ಯವರ್ಥ ಹೀಗೆ ಹಲವಾರು ಕಡೆಗಳಲ್ಲಿ ಮಾಡುವ ಅವಕಾಶವೂ ಆಗಲೂ ಇತ್ತು. ಆದರೆ ಧಾಮಗಳಲ್ಲಿ ಮಡಿಗೆ ಹೆಚ್ಚು ಪ್ರಾಮುಖ್ಯತೆ ಇಲ್ಲ. ಏನೋ ತಿಥಿ ಮಾಡಿ ಮುಗಿಸಬೇಕು ಅಷ್ಟೇ ಅನ್ನುವವರಿಗೆ ಅನುಕೂಲವಾಗಿರುತ್ತದೆ. ಆದರೆ ಹತ್ತಾರು ತಿಥಿಗಳಿಗೆ ಬಂದ ನೂರಾರು ಜನರಿಗೆ ಒಮ್ಮೆಲೇ ಅಡುಗೆ ಮಾಡುವ ಪರಿ ತಿನ್ನುವ ಆಹಾರದ ಗುಣಮಟ್ಟವನ್ನು ಕಾಪಾಡುವುದು ಕಷ್ಟಸಾಧ್ಯ. ಒಮ್ಮೆ ನಮ್ಮ ಮನೆಗೆ ಬರುವ ಪುರೋಹಿತರು ತಮ್ಮ ಮನೆಯಲ್ಲೇ ತಿಥಿ ಮಾಡಲು ಅಣುವು ಮಾಡಿಕೊಟ್ಟು ಊಟ ಬಡಿಸುತ್ತೇವೆ ಎಂದು ಹೇಳಿದ್ದರು. ಅದು ಸುಲಭವೆಂದುಕೊಂಡು ನಾವು ಒಪ್ಪಿದ್ದೆವು. ಆಂದು ಅವರ ಮನೆಯಲ್ಲಿ ಅವರು ಶ್ರಾದ್ಧಮಾಡಲು ನೀಡಿದ ಕಿಲುಬು ಹಿಡಿದ ತಾಮ್ರದ ಪಾತ್ರೆಗಳನ್ನು ಹಾಗೂ ಚಿಕ್ಕ ಕೋಣೆಯಲ್ಲಿ ಸ್ವಚ್ಛವೂ ಮಾಡದೇ ಬಾಳೆ ಎಲೆ ಹಾಕಿ ಊಟ ಬಡಿಸಿದ್ದನ್ನು ನೋಡಿ, ಎಂದಿಗಾದರೂ ನಾವು ನಮ್ಮ ಮನೆಯಲ್ಲೇ ಶ್ರಾದ್ಧಕರ್ಮ ಮಾಡಬೇಕೆಂದು ನಿರ್ಧರಿಸಿದೆವು. ಶ್ರಾದ್ಧದ ದಿನ ಬೆಳಿಗ್ಗೆ ಬೇಗನೆ ಏಳಬೇಕಾದ ಅವಶ್ಯಕತೆ ಇಲ್ಲ. ಶ್ರಾದ್ಧ ಕರ್ಮ ಪ್ರಾರಂಭಿಸುವುದೇ ಅಪರಾಹ್ನದಲ್ಲಿ. ಅಂದರೆ ಮಧ್ಯಾಹ್ನ ಹನ್ನೆರಡರ ನಂತರ. ಬೆಳಗ್ಗೆ ಎದ್ದ ಕೂಡಲೇ ನನ್ನ ಮುಖ್ಯ ಕೆಲಸವೆಂದರೆ ಮನೆಯಲ್ಲಿರುವ ಚಿಕ್ಕ ಮಕ್ಕಳಿಗೆ ಹೋಟಲ್ಲಿಗೆ ಕರೆದುಕೊಂಡು ಹೋಗೆ ತಿಂಡಿ ಕೊಡಿಸುವುದು. ಅಂದು ನನಗೆ ಎಲ್ಲ ಆಹಾರವೂ ಮಡಿಯಲ್ಲೇ ತಯಾರಾಗಬೇಕು. ಹಾಗಾಗಿ ಹೋಟಲಿನಲ್ಲಿ, ತಿಂಡಿ ಕೊಡಿಸುವ ಹಕ್ಕು ಇತ್ತೇ ಹೊರತು, ನಾನು ಒಂದು ಲೋಟ ಕಾಫಿಯೂ ಕುಡಿಯೋ ಹಾಗಿಲ್ಲ. ಕೆಲವೊಮ್ಮೆ ಮನೆಯಲ್ಲಿರುವ ಹಿರಿಯರಿಗೂ ತಿಂಡಿ ಕಟ್ಟಿಸಿಕೊಂಡು ಬಂದದ್ದು ಉಂಟು. ಹೀಗೆ ಮನೆಗೆ ಬಂದಾಗ, ನಾನು ತಿಂಡಿ ತಿಂದಿರಬಹುದೆಂದು ಪರೀಕ್ಷಿಸಲು, ಚಿಕ್ಕಮ್ಮಂದಿರು "ಸಾಂಬಾರ್ ರುಚಿಯಾಗಿತ್ತಾ " ಎಂದು ಪ್ರಶ್ನಸುತ್ತಿದ್ದರು. "ನಾನು ಸಾಂಬಾರ್ ಪರವಾಗಿಲ್ಲ ಆದರೆ ಚಟ್ನಿಗೆ ಪೂರ್ತಿ ಬೆಳ್ಳುಳ್ಳಿ ಹಾಕಿದ್ದ" ಎಂದು ಕೊಂಕು ಉತ್ತರ ನೀಡುತ್ತಿದ್ದೆ. ಅಡುಗೆಯವರು ಅಷ್ಟು ಹೊತ್ತಿಗಾಗಲೇ ಬಂದು ಮಡಿಯಲ್ಲಿ ಅಡುಗೆ ತಯಾರಿಯಲ್ಲಿ ನಿರತರಾಗುತ್ತಿದ್ದರು. ವಿನಂತಿಸಿಕೊಂಡರೆ, ಒಂದು ಲೋಟ ಕಾಫಿ ಸಿಗುತ್ತಿತ್ತು. ಅದೇ ಸಂಜೆಯವರೆಗೆ ನಮಗೆ ಹಸಿವು ಬಾರದ ಹಾಗೆ ನೋಡಿಕೊಳ್ಳುವ ಅಮೃತ ಪ್ರಾಶನ. ಸುಮಾರು 10 ಗಂಟೆಗೆ ಸ್ನಾನ ಮಾಡಿ ಸಂಧ್ಯಾವಂದನೆ ಮುಗಿಸಿ ಪುರೋಹಿತರು ಹಾಗೂ ಬ್ರಾಹ್ಮಣರಿಗೆ ಎದುರು ನೋಡುತ್ತಿದ್ದೆವು. ಯಾರೂ ಹನ್ನೆರಡಕ್ಕೆ ಕಮ್ಮಿ ಬರುತ್ತಿರಲಿಲ್ಲ. ಬಂದ ನಂತರ ಅವರ ಸ್ನಾನ, ಮಡಿ ಬಟ್ಟೆಗಳನ್ನು ಧರಿಸುವುದು, ಶ್ರಾದ್ದಕ್ಕೆ ಬೇಕಾದ ದೊನ್ನೆಗಳನ್ನು ಬಾಳೆ ಎಲೆ ಹಾಗೂ ಪೊರಕೆ ಕಡ್ಡಿಯನ್ನು ಬಳಸಿ ತಯಾರಿಸಿಕೊಳ್ಳವುದು, ಆಮೇಲೆ ಸುಮಾರು ಒಂದು ಗಂಟೆ ಹೊತ್ತಿಗೆ ತಿಥಿ ಪ್ರಾರಂಭ. ನಾನು, ಚಿಕ್ಕ ಮಗನಾಗಿದ್ದು ಮತ್ತು ಬ್ರಹ್ಮಚಾರಿಯಾಗಿದ್ದರಿಂದ ಶೇಕಡ 95ರಷ್ಟು ಶ್ರಾದ್ಧ ಕರ್ಮಗಳ ಕೆಲಸ ನನ್ನ ಅಣ್ಣನದೇ. ಹೀಗಾಗಿ ನನಗೆ ಹೆಚ್ಚು ಆಯಾಸವಾಗುತ್ತಿರಲಿಲ್ಲ. ತಿಥಿ ಮುಗಿದೊಡನೇ ಕೋಣೆಯಲ್ಲೆಲ್ಲಾ ಬರೀ ಕರಿ ಎಳ್ಳು. ಕಾಲು ಕಾಲಿಗೆ ಸಿಕ್ಕಿ ಕೊಳ್ಳುತ್ತಿತ್ತು. ಅದನ್ನು ಸ್ವಚ್ಚ ಗೊಳಿಸಿ, ಕೋಣೆಯ ನೆಲವನ್ನು ಚೆನ್ನಾಗಿ ಒರೆಸಿ ಎಲೆ ಹಾಕುವ ಹೊತ್ತಿಗೆ ಗಂಟೆ 4ರಿಂದ 4 ವರೆ ಆಗುತ್ತಿತ್ತು. ಅಡುಗೆಯವರು ತಾವೇ ಬಡಿಸುತ್ತೇವೆ ಎಂದರೆ ಒಳ್ಳೆಯದು, ಇಲ್ಲವಾದರೆ ನನ್ನ ಮತ್ತು ನನ್ನ ಅಣ್ಣನದು, ಎರಡನೇ ಪಂಕ್ತಿಯಲ್ಲಿ ಊಟ. ಎಲ್ಲರದೂ ಊಟಗಳಾದ ಮೇಲೆ ಮನೆಯ ಹೆಂಗಸರು ಹಾಗೂ ಸಂಭಂದಿಕರು ಕೂಡಿ ಅಡುಗೆ ಪಾತ್ರೆ ಹಾಗು ಅಡುಗೆ ಮನೆಯ ಸ್ವಚ್ಛ ಮಾಡುವುದರಲ್ಲಿ ತಲ್ಲೀಣರಾಗುತ್ತಿದ್ದರು. ನಾನು ಒಂದು ಸುತ್ತು ನಿದ್ದೆಗೆ ಶರಣಾಗುತ್ತಿದ್ದೆ. ಇನ್ನೂ ರಾತ್ರಿ ಊಟವಿಲ್ಲ, ಒಂದು ಲೋಟ ಕಾಫಿ ಹಾಗೂ ಒಂದೆರಡು ಬಾಳೆ ಹಣ್ಣು. ಇತ್ತೀಚೆಗೆ ಅಮ್ಮನ 17ನೇ ವರ್ಷದ ಶ್ರಾದ್ಧ ಮಾಡಿದೆವು. ಅತ್ತಿಗೆ ದಿನಸಿ ಅಂಗಡಿಗೆ ಬೇಕಾದ ವಸ್ತುಗಳ ಚೀಟಿ ಕೊಟ್ಟಿರುತ್ತಾರೆ, ಅವರು ಮನೆಗೆ ದಿನಸಿ ತಂದು ಕೊಡುತ್ತಾರೆ. ಅಮ್ಮನಿಗೆ ಯಾವ ಖಾದ್ಯ ಇಷ್ಟ, ಯಾವ ತರಕಾರಿ ಇಷ್ಡವಿತ್ತು ಈಗ ನಮಗೆ ಮರೆತು ಹೋಗಿದೆ. ನಮಗೆ ಇಷ್ಟವಾದ ತರಕಾರಿಗಳನ್ನು ತಂದು ನಮಗೆ ಇಷ್ಟವಾದ ಖಾದ್ಯಗಳನ್ನು ಮಾಡಿಸುತ್ತೇವೆ. ಹಿಂದಿನ ದಿನದ ರಾತ್ರಿ ಊಟ ಈಗಲೂ ಉಪ್ಪಿಟ್ಟೇ, ಆದರೇ ಮಡಿ ಅಂತಾ ಏನೂ ಇಲ್ಲ, ಆದರೆ ಉಪ್ಪಿಟ್ಟ್ಟು ಕಾಯಿ, ತರಕಾರಿಗಳಿಂದ ಕೂಡಿದ್ದು, ಊಟಕ್ಕಿಂತ ಹೆಚ್ಚೇ ತಿಂದಿರುತ್ತೇವೆ. ಹಿಂದಿನ ದಿನ ಬರುತ್ತಿದ್ದ ಬಂಧುಗಳಲ್ಲಿ ಕೆಲವರು ಖಾಯಂ ಆಗಿ ಮಾಯವಾಗಿದ್ದರೆ, ಇನ್ನು ಕೆಲವರು ಶ್ರಾದ್ಧದ ದಿನ ಬಂದರೆ ನಮ್ಮ ಅದೃಷ್ಟ. ಬೆಳಗ್ಗೆ ಎದ್ದು ಬಾಳೆ ಎಲೆ ಹಾಗೂ ಹಣ್ಣುಗಳನ್ನು ತರುವುದು ನನ್ನ ಅಥವಾ ಅಣ್ಣನ ಕೆಲಸ. ಇಬ್ಬರು ಅಡುಗೆಯವರು ಬೆಳಗ್ಗೆ 7 ಗಂಟೆಗೇ ಬಂದು ತರಕಾರಿ ಹೆಚ್ಚುವುದರಿಂದ ಹಿಡಿದು ಎಲ್ಲಾ ಕೆಲಸ ಅವರೇ ನೋಡಿಕೊಳ್ಳುತ್ತಾರೆ. ಬ್ರಾಹ್ಮಣರು ಬೆಳಗ್ಗೆ 11 ಗಂಟೆಗೆ ಹಾಜರ್, ಸ್ಟೇಪ್ಲರ್, ಪಿನ್ ಹಾಗೂ ಬಾಳೆ ಎಲೆ ಕೊಟ್ಟರೇ ಹತ್ತೇ ನಿಮಿಷದಲ್ಲಿ ದೊನ್ನೆ ತಯಾರಿ. ಅಷ್ಟರಲ್ಲಿ ನಾವು ಸ್ನಾನ ಹಾಗೂ ಸಂಧ್ಯಾವಂದನೆ ಮುಗಿಸಿರಬೇಕು. ದೇವರ ಪೂಜೆ ಹಾಗೂ ಶ್ರಾದ್ದದ ಅಣುವು ಮಾಡಿಕೊಡಲು, ನಮ್ಮ ತಂದೆ ಹೆಚ್ಚು ಪ್ರೀತಿಸುತ್ತಿದ್ದ ತಮ್ಮ ತಮ್ಮನ ಮಗ ನಮಗೆ ಬಲಗೈ ಭಂಟ. ತಾನೇ ಪೌರೋಹಿತ್ಯ ವೃತ್ತಿಯಲ್ಲಿ ಇದ್ದು ನಮಗೆ ಸ್ವಂತ ತಮ್ಮನ ಹಾಗಿರುವ ಇವನು ಅಪ್ಪನ ಅನುಪಸ್ತಿತಿಯನ್ನು ಮರೆಸುತ್ತಾನೆ. ಹನ್ನೊಂದು ಮೂವತ್ತಕ್ಕೆ ಸರಿಯಾಗಿ ಶ್ರಾದ್ಧ ಪೂರ್ವ ದೇವರ ಪೂಜೆ ಪ್ರಾರಂಭ. ಹನ್ನೆರಡಕ್ಕೆ ಶ್ರಾದ್ದ ಕರ್ಮ. ಅಷ್ಟುಹೊತ್ತಿಗೆ ಇಬ್ಬರು ಚಿಕ್ಕಮ್ಮಂದಿರು, ಸೋದರತ್ತೆ ಮತ್ತು ಅವರ ಸೊಸೆ ಹಾಗೂ ಅಕ್ಕನ ಆಗಮನ. ಶ್ರಾದ್ಧ ಕರ್ಮದ ಮದ್ಯದಲ್ಲೇ ಆಗಾಗ ಪುರೋಹಿತರು ಹಾಗೂ ಬ್ರಾಹ್ಮಣರು ನೆಲ ಸ್ವಚ್ಛ ಮಾಡುತ್ತಿರುತ್ತಾರೆ. ಕಾರ್ಯಗಳಲ್ಲಿ ದೊಡ್ಡ ಪಾತ್ರೆಗಳನ್ನು ಉಪಯೋಗಿಸುವುದರಿಂದ ಕೋಣೆ ಹೆಚ್ಚಾಗಿ ಗಲೀಜಾಗುವುದಿಲ್ಲ. ಶ್ರಾದ್ಧ ಮುಗಿದೊಡನೆ ಶೇಕಡ 90 ರಷ್ಟು ಕೋಣೆ ಸ್ವಚ್ಛವಾಗಿರುತ್ತದೆ. 8ರಿಂದ 10 ಜನರ ಊಟ. ಈ ಭಾರಿ 15 ಜನರೂ ಬಂದಿದ್ದರು. 3 ಗಂಟೆಗೆ ಎಲ್ಲರ ಊಟ ಮುಗಿದಿರುತ್ತದೆ. ಕೆಲಸದವರು ಬಂದು ಅಡುಗೆ ಪಾತ್ರೆಯಲ್ಲಾ ತೊಳೆದು ಕೊಡುತ್ತಾರೆ. ಇನ್ನೂ ಅಡುಗೆಯವರು ಸ್ವಚ್ಛವಾಗಿ ಅಡುಗೆ ಮಾಡುವುದರಲ್ಲಿ ಪರಿಣಿತರಾಗಿದ್ದು ಅಡುಗೆ ಕಟ್ಟೆ ಹಾಗೂ ಅಡುಗೆ ಮನೆ ಸ್ವಚ್ಛತೆ ಕೆಲಸ ಹೆಚ್ಚು ಶ್ರಮವೇನಿಲ್ಲ. ಇತ್ತೀಚಿನ ದಿನಗಳಲ್ಲಿ ತಿಥಿ ಅಡುಗೆ ರುಚಿಯು ಹೆಚ್ಚಾಗಿದ್ದು, ನಾವು ಮಾಡುವ ಊಟದ ಅಳತೆಯೂ ಹೆಚ್ಚಾಗಿದೆ. ಹೀಗಾಗಿ ರಾತ್ರಿ ಮತ್ತೆ ಕಾಫಿ ಹಾಗು ಒಂದೆರಡು ಬಾಳೇ ಹಣ್ಣು ಸಾಕೆನಿಸುತ್ತದೆ. ಸಂಜೆ 6 ರ ವೇಳೆಗೆ ಮತ್ತೇ ಮನೆಯಲ್ಲಿ ನಾನು, ನನ್ನ ಅಣ್ಣ, ಅತ್ತಿಗೆ, ಹಾಗೂ ಅವರ ಮಕ್ಕಳಷ್ಟೆ. ನನ್ನ ಚಿಕ್ಕಪ್ಪನ ಮಗ ಹೇಳುವಂತೆ ಇತ್ತೀಚಗೆ ಹೊರಗುತ್ತಿಗೆ ಹೆಚ್ಚಾಗಿದ್ದು ಇದು ಶ್ರಾದ್ಧ ಕರ್ಮಗಳಲ್ಲೂ ತನ್ನ ಕಾಲನ್ನಿಟಿದೆಯಂತೆ. ಬೆಳಗ್ಗೆ ಕಛೇರಿಗೆ ಹೋಗುವ ಮೊದಲು, ಪುರೋಹಿತರ ಮನೆಗೆ ಹೋಗಿ ಅವರಿಗೆ ನಮಸ್ಕಾರ ಮಾಡಿ ಹಣ ಕೊಟ್ಟು ಶ್ರಾದ್ಧದ ಅಧಿಕಾರ ನೀಡಿದರೆ ಅವರೇ ಶ್ರಾದ್ಧ ಮುಗಿಸಿ ಸಂಜೆಗೆ ಮನೆಗೆ ಪ್ರಸಾದವನ್ನು ತಲುಪಿಸುತ್ತಾರಂತೆ. ಆಯಾಸವಿಲ್ಲದ ಶ್ರಾದ್ಧ ಕರ್ಮ ಸುಲಭವಾಗಿದೆ ನಿಜ, ಆದರೆ ಸಂಬಂಧಿಕರೊಂದಿಗೆ ಕಳೆಯುತ್ತಿದ್ದ ಆ ಸಮಯ, ವಿನಿಮಯವಾಗುತ್ತಿದ್ದಂತಹ ಆ ಅಮ್ಮನ ವಿಷಯಗಳು ಈಗ ಒಂದು ನೆನಪಷ್ಟೆ.
ಅನಿಸಿಕೆಗಳು