ಗುರುರಾಜ
ಶಾಸ್ತ್ರಿ
ಪಕ್ಷಿ ವೀಕ್ಷಣೆ - ಒಂದು ಪಕ್ಷಿ ನೋಟ
24-07-2021
ಬಣ್ಣ ಬಣ್ಣದ ರೆಕ್ಕೆಗಳು, ವಿವಿಧ ಆಕಾರದ ಪುಕ್ಕಗಳು, ತಲೆ ಮೇಲೆ ಕಿರೀಟದಂತಿರುವ ಕೊಂಬು, ಬೆಂಡಾಗಿರುವ ಕೊಕ್ಕು, ಆಕರ್ಷಣೀಯ ಕಣ್ಣು, ಕಂಠದಿಂದ ಮಧುರವಾದ ಕೂಗು, ವೈವಿಧ್ಯಮಯ ಕೂರುವ ಭಂಗಿ. ಯಾರಿಗೆ ಬೇಡ ಹೇಳಿ ಇಂತಹ ಅನುಭವ. ಹೌದು ಸಾಕಷ್ಟು ಪಕ್ಷಿ ವೀಕ್ಷಕರ ಹವ್ಯಾಸ ಪ್ರಾರಂಭವಾಗಿದ್ದು ಈ ಮೋಹಕ ಆಕರ್ಷಣೆಗಳಿಂದಲೇ. ನಾನು ಇದಕ್ಕೆ ಹೊರತಾಗಿಲ್ಲ. ಆದರೆ ನನ್ನನ್ನು ಈ ಪಕ್ಷಿಗಳ ವಿಸ್ಮಯ ಲೋಕಕ್ಕೆ ಅಕರ್ಶಿಸಿದ್ದು ಕಾಗೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದೇನೋ ಗೊತ್ತಿಲ್ಲ, ನನಗೆ ಈಗಲೂ ಕಾಗೆ ಎಂದರೆ ಬಲು ಇಷ್ಟ. ಅದು ಒಂದು ಸುಂದರವಾಗಿರುವ ಪಕ್ಷಿ, ಆದರೆ ಅದು ಎಲ್ಲೆಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರುವುದರಿಂದ ಅದರ ಬಗ್ಗೆ ಅಸಡ್ಡೆ ಅಷ್ಟೇ ಎಂಬುದು ನನ್ನ ಅನಿಸಿಕೆ. ಪ್ರತಿ ಭಾನುವಾರ ಬೆಳಿಗ್ಗೆ 6 ಗಂಟೆಗೆ ಪಕ್ಷಿವೀಕ್ಷಣೆಗೆ ಹೊರಡುತ್ತಿದ್ದರು ನನ್ನ ಗೆಳೆಯರು. ಅವರು ಕ್ಲಿಕ್ಕಿಸಿದ ಪಕ್ಷಿಗಳ ಚಿತ್ರಗಳನ್ನು ಫೇಸ್ ಬುಕ್‌ ನಲ್ಲಿ ಹಾಕುತ್ತಿದ್ದಾಗ, ನನಗೆ ಗೊತ್ತಾಗಿದ್ದು ಕಾಗೆ, ಗುಬ್ಬಚ್ಚಿ, ಪಾರಿವಾಳ, ಗಿಳಿಗಳಂತೆ ಇನ್ನೂ ಹಲವು ಪಕ್ಷಿಗಳಿವೆ ಎಂದು. ನಾನು ಒಂದು ಉತ್ತಮವಾದ ಹೆಚ್ಚಿನ ಬೆಲೆಯ ಕ್ಯಾಮೆರಾ ಕೊಂಡೇ ಮತ್ತು ಅವರಡೊನೆ ಸೇರಿಕೊಂಡೆ. ಇಲ್ಲಿಂದ ಪ್ರಾರಂಭವಾಯಿತು ಪಕ್ಷಿ ಪ್ರಪಂಚದ ಪರ್ಯಟನೆ. ನನ್ನ ಮೊದಲ ಪಕ್ಷಿವೀಕ್ಷಣೆ ಭೇಟಿ ಬೆಂಗಳೂರಿನ ಹಸರಘಟ್ಟ ಕೆರೆಯ ಹತ್ತಿರ. ನನ್ನ ಗೆಳೆಯರು ಅಲ್ಲಿ ನೋಡು ಸುಂದರವಾದ ಪಕ್ಷಿ ಎಂದಾಗ ನಾನು ಆಕಾಶದಲ್ಲಿ ಹುಡುಕುತ್ತಿದ್ದೆ, ಆದರೆ ಅವರು ತೋರಿಸುತ್ತಿದ್ದ ಪಕ್ಷಿ ನಮ್ಮ ಕಣ್ಣ ಮುಂದೆಯೇ ನೆಲದ ಮೇಲೆ ಇತ್ತು. ಆಗಲೇ ಗೊತ್ತಾಗಿದ್ದು ಪಕ್ಷಿಗಳನ್ನು ನೆಲದ ಮೇಲೂ ಹುಡುಕಬೇಕೂ ಎಂದು. ಇದು ನನಗೆ ಮೊದಲನೇ ಪಾಠ. ಆ ಮೊದಲ ದಿನ ಕಾಜಾಣ ಅಂದರೆ ಡ್ರಾಂಗೋ ಪಕ್ಷಿಯ ಸುಮಾರು ನೂರಕ್ಕೂ ಹೆಚ್ಚು ಫೋಟೋ ಕ್ಲಿಕ್ಕಿಸಿದ್ದೆ. ಸರಿ, ಗೆಳೆಯರು ಅಲ್ಲಿ ಕಾಣುತ್ತಿದ್ದ ಪಕ್ಷಿಗಳ ಹೆಸರುಗಳನ್ನು ಹೇಳಲು ಪ್ರಾರಂಭಿಸಿದರು. ಅವರ ಜ್ಞಾಪಕ ಶಕ್ತಿ ನಿಜವಾಗಲೂ ಶ್ಲಾಘನೀಯ. ನನಗೋ, ಗೆಳೆಯರು, ಬಂಧುಬಳಗದವರನ್ನೇ ನೋಡಿ ತಿಂಗಳಾದರೆ, ಅವರ ಹೆಸರು ಮರೆತುಹೋಗುತ್ತದೆ. ಆದರೆ ಇವರುಗಳು ಅದಕ್ಕೆ ತದ್ವಿರುದ್ದ. ಹೆಸರಲ್ಲೇನಿದೆ ಬಿಡಿ, ಮೊದಲು ಪಕ್ಷಿಗಳ ಫೋಟೋ ಎಂದು ಮನಸ್ಸಿನಲ್ಲಿ ಅಂದುಕೊಂಡು ನನ್ನ ಕೆಲಸ ನಾನು ಮುಂದುವರೆಸಿದೆ. ಬೆಳಿಗ್ಗೆ ಸ್ನಾನವಿಲ್ಲದೆಯೇ ಹೊರಟಿದ್ದು, ನಾನು ಪಾಲಿಸಿಕೊಂಡು ಬಂದಿದ್ದ ಆಚರಣೆಗೆ ವಿರುದ್ದವಾಗಿ ಸ್ನಾನಕ್ಕೆ ಮುಂಚೆ ತಿಂಡಿ ತಿಂದದ್ದು ಎಲ್ಲವೂ ಒಂದು ರೀತಿ ಹೊಸ ಅನುಭವ. ಅಂದು ಸಂಧ್ಯಾವಂದನೆ ಹಾಗೂ ದೇವರ ಪೂಜೆಗೆ ವಾರದ ರಜೆ. ಮನೆಗೆ ಬಂದೊಡನೆ, ಎಲ್ಲಾ ಫೋಟೋಗಳನ್ನು ಕಂಪ್ಯೂಟರ್ಗೆ ವರ್ಗಾಯಿಸಿ ಫೇಸ್‌ ಬುಕ್‌ ನಲ್ಲಿ ಹಾಕಿದೆ. ಸುಮಾರು 100 ಫೋಟೋಗಳು ಮತ್ತು ಅದರಲ್ಲಿ ಸುಮಾರು 80 ಕಾಜಾಣ ಪಕ್ಷಿಯದು. ನನ್ನ ಫೋಟೋಗಳನ್ನು ನೋಡಿ ಫೇಸ್ಬುಕ್‌ ಗೆಳೆಯರನ್ನು ಈ ಪಕ್ಷಿ ಪ್ರಪಂಚಕ್ಕೆ ಆಕರ್ಷಿಸುವುದೊಂದೇ ನನ್ನ ಉದ್ದೇಶವಾಗಿತ್ತು. ಗೆಳೆಯರಾರು ಅವರು ತೆಗೆದ ಫೋಟೋಗಳನ್ನು ಫೇಸಬುಕ್‌ ನಲ್ಲಿ ಹಾಕಲೇ ಇಲ್ಲ. ನನಗೆ ಫೋನ್‌ ಮಾಡಿ, ನೀನು ಹಾಗೆ ತಕ್ಷಣ ಫೋಟೋ ಹಾಕಬಾರದು, ಅದನ್ನು ಸಂಸ್ಕರಣ ಮಾಡಿ ಹಾಕಬೇಕು ಎಂದರು. ನಾವು ಫೋಟೋ ತೆಗೆದಾಗ ಸಾಕಷ್ಟ್ತು ಬೇಡವಾದದ್ದು ಬಂದಿರುತ್ತದೆ, ಅದನ್ನೆಲ್ಲಾ ಎಡಿಟ್‌ ಮಾಡಬೇಕು ಎಂದರು. ಹೀಗೆ ಎಡಿಟ್‌ ಮಾಡುವುದು ತಪ್ಪು ಎನಿಸಿತು, ಆದರೆ ನಾವು ಬರಿಗಣ್ಣಿನಲ್ಲಿ ನೋಡಿದ ಪಕ್ಷಿಗೂ ಮತ್ತು ಅದನ್ನು ಕ್ಯಾಮೆರಾ ಸೆರೆಹಿಡಿದ ರೀತಿಗೂ ವ್ಯತ್ಯಾಸವಿರುತ್ತದೆ. ಇದನ್ನು ಸರಿಪಡಿಸಿ, ನಾವು ಬರಿಗಣ್ಣಿನಲ್ಲಿ ಕಂಡ ಪಕ್ಷಿಯ ಹಾಗೇ ಫೋಟೋವನ್ನು ಬದಲಾಯಿಸುವುದೇ ಎಡಿಟಿಂಗ್. ಸರಿ ಹಾಗೆ ಎಡಿಟ್‌ ಮಾಡಿದಾಗಲೇ ಗೊತ್ತಾಗಿದ್ದು, ಪಕ್ಷಿ ಫೋಟೋಗ್ರಫಿಯಲ್ಲಿ ಫೋಟೋ ತೆಗೆಯುವುದು ಶೇಕಡ 40 ಭಾಗವಾದರೆ, ಎಡಿಟಿಂಗ್‌ ಶೇಕಡ 60ರಷ್ಟು ಇರುತ್ತದೆ ಎಂದು. ಪಕ್ಷಿಗಳ ಎದೆ, ಬೆನ್ನು, ಬಾಲ, ರೆಕ್ಕೆ, ತಲೆ ಇವುಗಳ ಮೇಲೆ ಇರುವ ಬಣ್ಣ ಆಧರಿಸಿ ಕೆಲವೊಮ್ಮೆ ಆ ಪಕ್ಷಿಗೆ ಹೆಸರು ಕೊಟ್ಟರೆ, ಮತ್ತೆ ಕೆಲವೊಮ್ಮೆ ಅದರ ಕೂಗು, ಕಣ್ಣು ಹುಬ್ಬು, ಅದು ವಾಸಿಸುವ ಸ್ಥಳದ ಆದಾರದಲ್ಲೂ ಪಕ್ಷಿಗಳು ಹೆಸರು ಪಡೆದುಕೊಳ್ಳುತ್ತವೆ.   ಪ್ರಪಂಚದಲ್ಲಿ ಒಟ್ಟಾರೆ 10 ಸಾವಿರಕ್ಕಿಂತ ಹೆಚ್ಚು ಜಾತಿಯ ಪಕ್ಷಿಗಳಿವೆ ಹಾಗೂ ಅದರಲ್ಲಿ ಭಾರತದಲ್ಲಿ 2019ನೇ ಇಸವಿಗೆ ಲೆಕ್ಕ ಸಿಕ್ಕಿರುವುದು 1344 ಜಾತಿಯ ಪಕ್ಷಿಗಳು. ಈ ಸಂಖ್ಯೆ ನಮಗೇಕೆ, ಎಂದು ಯೋಚಿಸುತ್ತಿರಬಹುದು. ಆದರೆ ಪಕ್ಷಿವೀಕ್ಷಕರು ಒಬ್ಬರನ್ನೊಬ್ಬರು ಪರಿಚಯ ಮಾಡಿಕೊಡಲು ಪ್ರಾರಂಭ ಮಾಡುವುದು ಈ ಸಂಖ್ಯೆಯಿಂದಲೇ. ಉದಾಹರಣೆಗೆ : ಇವರು ಗುರುರಾಜ ಶಾಸ್ತ್ರಿ, ಸುಮಾರು 250 ಪಕ್ಷಿಗಳನ್ನು ನೋಡಿದ್ದಾರೆ. ನೀವು ಎಷ್ಟು ವರ್ಷದಿಂದ ಬರ್ಡಿಂಗ್‌ ಮಾಡುತ್ತಿದ್ದೀರಿ, ನಿಮ್ಮ ಪಕ್ಷಿ ವೀಕ್ಷಣೆ ಸಂಖ್ಯೆ ಎಷ್ಟು, ಹೀಗೆ. ಮೊದಮೊದಲಿಗೆ ವಾರಾಂತ್ಯಕ್ಕೆ ಸುಮ್ಮನೆ ಹಾಗೆ ಮನರಂಜನೆಗಾಗಿ ಹೋಗುವ ಪಕ್ಷಿವೀಕ್ಷಣೆ, ನಂತರ ನಮ್ಮ ಜೀವನಕ್ಕೆ ಒಂದು ಹೊಸ ಗುರಿಯನ್ನು ಕೊಡಲು ಪ್ರಾರಂಭಿಸುತ್ತದೆ. ಅದರಲ್ಲೂ, ನಿಮಗೆ ಮೊದಮೊದಲು ಸಿಗುವ ಗೆಳೆಯರು ಈ ಪಕ್ಷಿ ವೀಕ್ಷಣೆಯ ಸಂಖ್ಯೆ ಆಟದಲ್ಲಿ ತೊಡಗಿದ್ದರೆ, ನೀವೂ ಇದರಲ್ಲಿ ಮುಳುಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾವುದೇ ಒಂದು ಹೊಸ ಜಾಗಕ್ಕೆ ಪಕ್ಷಿವೀಕ್ಷಣೆಗೆ ಹೋಗುವುದಾದರೆ, ಅದಕ್ಕೆ ತಗಲುವ ಖರ್ಚು ಹಾಗೂ ನಮಗೆ ಸಿಗುವ ಹೊಸ ಪಕ್ಷಿಗಳ ಸಂಖ್ಯೆಯೊಂದಿಗೆ ತಾಳೆ ಮಾಡುತ್ತೇವೆ. ನಾವು ನೋಡಿರುವ ಪಕ್ಷಿಗಳ ಲೆಕ್ಕವನ್ನಾದರೂ ಇಡುವುದು ಹೇಗೆ, ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ, ಮೊಬೈಲ್‌ ನಲ್ಲಿ ಇ-ಬರ್ಡ ಎಂಬ ಆಪ್‌ ಇದೆ. ನಾವು ಹೋಗಿದ ಜಾಗ ಮತ್ತು ಅಲ್ಲಿ ನಾವು ಕಂಡ ಪಕ್ಷಿಗಳನ್ನು ಇದರಲ್ಲಿ ನಮ್ಮ ಲಾಗಿನ್ನಲ್ಲಿ ಹಾಕಿದರೆ, ಯಾವಾಗ ಬೇಕಾದರೂ ಈ ಸಂಖ್ಯೆ ನಮಗೆ ಲಭ್ಯ. ಈ ಇ-ಬರ್ಡ್‌ ಉಪಯೋಗಿಸುವವರು ಲಕ್ಷಾಂತರ ಜನ. ಹಾಗಾಗಿ, ನಾವು ಹಾಕಿದ ಪಕ್ಷಿಯ ಹೆಸರು ಆ ಜಾಗದಲ್ಲಿ ಹಿಂದೆ ಯಾರಿಗೂ ಸಿಗದಿದ್ದಲ್ಲಿ, ನಮಗೆ ಆಪ್‌ನಿಂದ ಆ ಪಕ್ಷಿಯ ಫೋಟೋ ಕಳಿಸಲು ತಿಳಿಸಲಾಗುತ್ತದೆ. ಹೀಗಾಗಿ, ಸುಮ್ಮನೆ ಯಾವುದೋ ಪಕ್ಷಿಗಳನ್ನು ಹಾಕಲು ಅವಕಾಶವಿಲ್ಲ. ಅದಲ್ಲದೆ, ಈ ಪಕ್ಷಿ ವೀಕ್ಷಕರು, ನಾನು ಕಂಡ ಹಾಗೆ ಈ ಪಕ್ಷಿ ವೀಕ್ಷಣೆಯ ಸಂಖ್ಯೆಯಲ್ಲಿ ಅಥವಾ ನೋಡಿರುವ ಪಕ್ಷಿಗಳ ಬಗ್ಗೆ ಎಂದಿಗೂ ಸುಳ್ಳನ್ನು ಹೇಳುವುದಿಲ್ಲ. ಅದಕ್ಕೆ ಇವರ ಆತ್ಮಸಾಕ್ಷಿ ಒಪ್ಪುವುದಿಲ್ಲ ಎಂಬುದು ನನ್ನ ಸ್ವಅನುಭವ.. ವಿದೇಶಗಳಲ್ಲಿ ಬಿಗ್‌ ಇಯರ್‌ ಎಂದು ಒಂದು ವರ್ಷ ಪೂರ್ತಿ ಪಕ್ಷಿ ವೀಕ್ಷಣೆಯ ವರ್ಷವಾಗಿ ಸ್ಪರ್ಧೆ ಏರ್ಪಡಿಸಿ ಆ ವರ್ಷದಲ್ಲಿ ಯಾರು ಹೆಚ್ಚು ಪಕ್ಷಿಗಳನ್ನು ನೋಡುತ್ತಾರೋ ಅವರನ್ನು ಗುರುತಿಸಿ ಬಹುಮಾನ ನೀಡುತ್ತಾರೆ. (Big Year ಎಂಬ ಆಂಗ್ಲ ಭಾಷೆಯ ಚಲನಚಿತ್ರವೂ ಬಂದಿದೆ) ಈ ಪಕ್ಷಿ ವೀಕ್ಷಣೆಯ ಸಂಖ್ಯೆ ಬಂದಾಗ, ನಾವು ಮರೆಯಲಾಗದ ವ್ಯಕ್ತಿ ಎಂದರೆ ಫ್ನೋಬೆ ಸ್ನೆಟ್‌ಸಿಂಗರ್. 1981ನೇ ಇಸವಿಯಲ್ಲಿ ಈಕೆಗೆ ಕ್ಯಾನ್ಸರ್‌ ಇರುವುದು ತಿಳಿಯುತ್ತದೆ. ವೈದ್ಯರು ಇನ್ನು ಆರು ತಿಂಗಳು ಮಾತ್ರ ಬದುಕಬಹುದು ಎಂದು ಹೇಳುತ್ತಾರೆ. ನನಗೆ ಔಷದಕ್ಕಿಂತ ಈ ಉಳಿದಿರುವ ಒಂದು ವರ್ಷದಲ್ಲಿ ನನಗೆ ಇಷ್ಟವಾಗುವು ಪಕ್ಷಿವೀಕ್ಷಣೆ ಮಾಡುತ್ತೇನೆ ಎನ್ನುತ್ತಾಳೆ ಸ್ನಟ್‌ಸಿಂಗರ್ರ್. ಈ ನಿರ್ಧಾರದಿಂದ ಅವಳು ಪ್ರಪಂಚದಾದ್ಯಂತ ಸುತ್ತಾಡಿ ಸುಮಾರು 8400 ಜಾತಿಯ ಪಕ್ಷಿಗಳನ್ನು ವೀಕ್ಷಿಸಿ ಪ್ರಪಂಚದಲ್ಲೇ ಆ ಸಮಯಕ್ಕೆ ಹೆಚ್ಚು ಪಕ್ಷಿಗಳನ್ನು ನೋಡಿದ ವ್ಯಕ್ತಿಯಾಗುತ್ತಾಳೆ. ನಿಮಗೆ ಆಶ್ಚರ್ಯವಾಗಬಹುದು, ಅವಳು ಮರಣಹೊಂದಿದ್ದು 1999ನೇ ಇಸವಿಯಲ್ಲಿ. ವೈದ್ಯರು ಹೇಳಿದ್ದು ಅವಳ ಬದುಕು ಕೇವಲ 6 ತಿಂಗಳು ಮಾತ್ರವೆಂದು ಆದರೆ ಅವಳು ಬದುಕಿದ್ದು ಇನ್ನೂ 18 ವರ್ಷ. Birding on borrowed time (ಎರವಲು ಪಡೆದ ಸಮಯದಲ್ಲಿ ಪಕ್ಷಿ ವೀಕ್ಷಣೆ) ಎಂಬ ಅವಳ ಜೀವನ ಚರಿತ್ರೆಯನ್ನು ಅಮೇರಿಕಾ ಸರ್ಕಾರ ಅವಳ ಮರಣಾ ನಂತರ ಪ್ರಕಟಿಸುತ್ತದೆ. ಪಕ್ಷಿಗಳ ಹೆಸರು, ಪಕ್ಷಿಗಳ ಬದಲಾಗುವ ಬಣ್ಣಗಳು, ಭಾರತದಲ್ಲಿ ಅತಿ ಹೆಚ್ಚು ಜಾತಿಯ ಪಕ್ಷಿಗಳನ್ನು ನೋಡಬಹುದಾದ ಸ್ಥಳಗಳು ಇನ್ನೂ ಹೆಚ್ಚು ವಿಷಯ ಮುಂದಿನ ಕಂತುಗಳಲ್ಲಿ.
ಅನಿಸಿಕೆಗಳು




ಮಹಾಂತೇಶ್
16-12-2021
ಗುರುಗಳೇ, ಅನುಭವವನ್ನು ಬರಹದಲ್ಲಿ ಚೆನ್ನಾಗಿ ಮೂಡಿಸಿದ್ದಿರಿ