ನಾನು ಚೆನ್ನೈನಲ್ಲಿದ್ದಾಗ ಗೆಳೆಯರೊಬ್ಬರು ಹೇಳಿದ ಕಥೆ, ಆದರೆ ನಿಜವಾಗಿ ನಡೆದದ್ದು.
ಕಾಮರಾಜ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಸಮಯವದು. ನಮ್ಮ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ತಮಿಳುನಾಡಿನ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರಾಗಿದ್ದರು .
ಒಮ್ಮೆ ವೆಂಕಟರಾಮನ್ ಕಾಮರಾಜರ ಹುಟ್ಟೂರಿಗೆ ಭೇಟಿ ನೀಡುತ್ತಾರೆ. ಅಲ್ಲಿ ಕಾಮರಾಜರ ತಾಯಿ ಶಿವಗಾಮಿ ಅಮ್ಮಾಳ್ ಬೇಸಿಗೆಯ ಬಿಸಿಲಿನ ತಾಪದಿಂದಾಗಿ ಬೀಸಣಿಗೆಯಲ್ಲಿ ಗಾಳಿ ಬೀಸಿಕೊಳ್ಳುತ್ತಾ ತಮ್ಮ ಹಳ್ಳಿಯ ಮನೆಯ ಮುಂದೆ ಕುಳಿತಿರುತ್ತಾರೆ. ಒಬ್ಬ ಮುಖ್ಯಮಂತ್ರಿಯ ತಾಯಿಯಾಗಿ ಇಷ್ಟು ಕಷ್ಟಪಡಬೇಕೆ ಎಂದು ವೆಂಕಟರಾಮನ್ ಯೋಚಿಸಿ ಅವರಿಗೊಂದು ಟೇಬಲ್ ಫ್ಯಾನ್ ತಂದುಕೊಡುತ್ತಾರೆ.
ಕೆಲವು ದಿನಗಳ ನಂತರ ಕಾಮರಾಜ್ ತಮ್ಮ ತಾಯಿಯನ್ನು ನೋಡಲು ಹಳ್ಳಿಗೆ ಬರುತ್ತಾರೆ. ಮನೆಯಲ್ಲಿದ್ದ ಫ್ಯಾನ್ ನೋಡಿ ಅವರಿಗೆ ಆಶ್ಚರ್ಯ. ತಾಯಿಯನ್ನು ವಿಚಾರಿಸದಾಗ ಎಲ್ಲಾ ವಿಷಯ ತಿಳಿಯುತ್ತದೆ. ಕೂಡಲೇ ವೆಂಕಟರಾಮನ್‌ಗೆ ಬರಲು ಹೇಳಿಕಳಿಸುತ್ತಾರೆ.
ತಾಯಿ ಶಿವಗಾಮಿ ಅಮ್ಮಾಳ್‌ಗೆ ಆತಂಕ ಮತ್ತು ಹೆದರಿಕೆಯಾಗಿ ಅವರಿಂದ ಹೊರಬಂದ ಪ್ರಶ್ನೆಗಳು ಹೀಗಿವೆ:
*ಯಾಕೆ ಮಗು ನನ್ನಿಂದೇನಾದರು ತಪ್ಪು ಆಯಿತೆ?*
*ಸಾರ್ವಜನಿಕರಿಗಾಗಿ ಮೀಸಲಿಟ್ಟ ಹಣವನ್ನು ಇದಕ್ಕೇನಾದರೂ ಉಪಯೋಗಿಸಿದರೇ?*
*ಹೀಗೆ ಫ್ಯಾನ್ ಸ್ವೀಕರಿಸದ್ದರಿಂದ ಮುಖ್ಯಮಂತ್ರಿಯಾಗಿ ನಿನಗೆ ಅವಮಾನವಾಗುತ್ತದೆಯೇ?*
ನೊಂದು ಹೆದರಿದ ತಾಯಿಗೆ ಸಾಂತ್ವನ ಹೇಳುತ್ತಿದ್ದಾಗ, ವೆಂಕಟರಾಮನ್ ಬರುತ್ತಾರೆ.
"ಫ್ಯಾನ್ ಯಾಕೆ ಅಮ್ಮನಿಗೆ ತಂದುಕೊಟ್ಟದ್ದು?" ಕಾಮರಾಜರ ಮೊದಲ ಪ್ರಶ್ನೆ.
"ಮುಖ್ಯಮಂತ್ರಿಯ ತಾಯಿಯಾಗಿ ಮನೆಯ ಮುಂದೆ ಬೀಸಣಿಗೆಯಲ್ಲಿ ಗಾಳಿ ಬೀಸಿಕೊಳ್ಳುತ್ತಿದ್ದದ್ದು ಸರಿ ಕಾಣಲಿಲ್ಲ, ಹಾಗಾಗಿ ನೀಡಿದೆ".
"ಸರ್ಕಾರದ ಹಣದಲ್ಲಿ ಫ್ಯಾನ್ ತಂದಿದ್ದೇ?" ಮರು ಪ್ರಶ್ನೆ
"ಇಲ್ಲ, ಕಾಂಗ್ರೆಸ್ ಪಕ್ಷದ ಹಣ, ಪಕ್ಷದ ಅಧ್ಯಕ್ಷನಾದ ನನಗೆ ಈ ಖರ್ಚು ಮಾಡಲು ಅರ್ಹತೆ ಇದೆ".
"ಸರಿ, ಒಂದು ಕೆಲಸ ಮಾಡು, ಈ ಹಳ್ಳಿಯಲ್ಲಿರುವ ಹೆಂಗಸರೆಲ್ಲಾ ನನ್ನ ತಾಯಂದಿರೇ. ಪಕ್ಷದ ಹಣದಿಂದ ಅವರೆಲ್ಲರಿಗೂ ಒಂದೊಂದು ಫ್ಯಾನ್ ಕೊಡಿಸಿಬಿಡು", ಕಾಮರಾಜರ ಆದೇಶ.
"ಅದು ಸಾಧ್ಯವಿಲ್ಲ, ಅಷ್ಟು ಹಣ ಪಕ್ಷದಲ್ಲಿಲ್ಲ" ಎಂದರು ವೆಂಕಟರಾಮನ್.
"ಅದು ಸಾಧ್ಯವಿಲ್ಲವೆಂದರೆ, ಈ ಫ್ಯಾನ್ ಕೂಡಾ ವಾಪಸ್ ತೆಗೆದುಕೊಂಡುಹೋಗು ಅಥವಾ ನಿನ್ನ ಸಂಬಳದಿಂದ ಪಕ್ಷಕ್ಕೆ ಇದರ ಹಣ ಪಾವತಿಸು" ಎಂದು ವೆಂಕಟರಾಮನ್‌ಗೆ ಆದೇಶ ನೀಡಿದರು ಕಾಮರಾಜ್.
ಮೂಲೆಯಲ್ಲಿ ಅತಿ ದುಃಖದಲ್ಲಿ ಕುಳಿತಿದ್ದ ತಾಯಿಗೆ ಅವರದೇನು ತಪ್ಪಿಲ್ಲ ಎಲ್ಲಾ ತಪ್ಪು ಆ ವೆಂಕಟನದೇ ಎಂದು ಕಾಮರಾಜ ಹೇಳಿದಾಗ ತಾಯಿಗೆ ಸ್ವಲ್ಪ ಸಮಾಧಾನ.
*ಈ ಘಟನೆ ಒಂದು ಫ್ಯಾನಿಗಾಗಿ ನಡೆದದ್ದೇ ಅಥವಾ ಹ್ಯಾಂಡ್ ಪಂಪಿಗಾಗಿ ನಡೆದದ್ದೆ ಎಂಬುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ ಎಂದು ಹೇಳಿ ನನ್ನ ಗೆಳೆಯ ಕಥೆ ಮುಗಿಸಿದರು.*
ಬೆಂಗಳೂರಿನಲ್ಲಿ ಈ ವರ್ಷದ ಬೇಸಿಗೆಯ ಬಿಸಿಲಿನ ಬೇಗೆ ಹೆಚ್ಚಾಗಿ ಕರೆಂಟ್ ಹೋದ ಸಮಯದಲ್ಲಿ ಬೀಸಣಿಗೆ ಹುಡುಕುತ್ತಿದ್ದಾಗ ಈ ಕಥೆ ಜ್ಞಾಪಕಕ್ಕೆ ಬಂತು