ನನ್ನ ಗೆಳೆಯನ ಒಂದು ಫೆಲೋಶಿಪ್‌ಗಾಗಿ ಕರ್ನಾಟಕದಲ್ಲಿರುವ ಎಲ್ಲಾ ಕಾಡುಗಳ ಒಳಗೆ ಇರುವ ದೇವಸ್ಥಾನಗಳ ನೋಡುವ ಒಂದು ಭಾಗ್ಯ ನನ್ನದಾಗಿದೆ. ಕಾಡುಗಳಿಗೆ ಹೋಗಿ ಅಲ್ಲಿದ್ದ ದೇವಸ್ಥಾನಗಳ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಅಲ್ಲಿ ಸಿಗುವ ಹಿರಿಯರಿಂದ, ಕೆಲವೊಮ್ಮೆ ದೇವಸ್ಥಾನದ ಅರ್ಚಕರಿಂದ ಸ್ಥಳಪುರಾಣ ವಿಚಾರಿಸಿಕೊಂಡು ಬರುವುದು ಈ ಫೆಲೋಶಿಪ್‌ಗೆ ಬೇಕಾದ ಮೂಲ ವಸ್ತು.
ಕೋವಿಡ್ ಸಮಯವಾಗಿದ್ದರಿಂದ ಈಗ ನಮ್ಮ ಪ್ರವಾಸವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿದ್ದೇವೆ. ಮುಂಜಾನೆ ಬೆಂಗಳೂರಿನಿಂದ ಹೊರಟು ರಾತ್ರಿ 12ರ ಒಳಗೆ ಬೆಂಗಳೂರು ತಲುಪುತ್ತಿದ್ದೇವೆ. ಹೀಗೆ ಹಲವಾರು ದೇವಸ್ಥಾನಗಳನ್ನು ವೀಕ್ಷಿಸಿರುವ ನಾವು, ಡಿಸೆಂಬರ್ 2020ರ ಮೊದಲನೇ ವಾರದಲ್ಲಿ ಹೋಗಿದ್ದು ಬ್ರಹ್ಮಗಿರಿ ಅರಣ್ಯ ಪ್ರದೇಶದಲ್ಲಿರುವ ತಲಕಾವೇರಿಗೆ. ತಲಕಾವೇರಿ ಬೆಂಗಳೂರಿನಿಂದ 280 ಕಿಲೋಮೀಟರ್ ದೂರದಲ್ಲಿದ್ದು, ಕಾರ್‌ನಲ್ಲಿ ಪ್ರಯಾಣ ಮಾಡಿದರೆ ಸುಮಾರು 6 ಗಂಟೆಗಳು ಬೇಕಾಗುತ್ತದೆ.
ಮೊದಲೇ ಕೂರ್ಗ್ ಪ್ರದೇಶ, ಸಸ್ಯಹಾರಿಗಳಿಗಂತು ಅದೋ ಮರಳುಗಾಡು ಇದ್ದಂತೆ ಎಂದು ನಾನು ಕೇಳಿದ್ದೆ. ಶುದ್ದ ಸಸ್ಸಯಾಹಾ ಒದಗಿಸುವ ಉಪಹಾರ ಗೃಹಗಳು ಅಲ್ಲಿ ಮರೀಚಿಕೆ ಇದ್ದಂತೆ ಎಂದು ಗೊತ್ತಿತ್ತು. ಹಾಗಾಗಿ ಹಿಂದಿನ ದಿನವೇ ಇಬ್ಬರಿಗೂ ಸಾಕಾಗುವಷ್ಟು ಚಾಕ್ಲೆಟ್, ಬಿಸ್ಕೆಟ್, ಬನ್, ಬ್ರೆಡ್ ಖರೀದಿಸಿದೆವು. ಬೆಳಿಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಹೊರಟು ಮಂಡ್ಯದಲ್ಲಿ ಕಾರ್ ಬಳಿಯೇ ತಿಂಡಿ ತಂದುಕೊಡುವ ಸೇವೆ ಇರುವ ಒಂದು ಹೋಟಲ್ ಹತ್ತಿರ ಹೋಗಿ ಇಡ್ಲಿ ತಿಂದು ಪಯಣ ಮುಂದುವರೆಸಿದೆವು.
ಅಲ್ಲಿಂದ ಮುಂದೆ ತಲುಪಿದ್ದು ತಲಕಾವೇರಿಗೆ 10 ಕಿಲೋಮೀಟರ್ ಮುಂಚೆ ಸಿಗುವ ಭಾಗಮಂಡಲ ದೇವಸ್ಥಾನ. ಇಲ್ಲಿ ಈಶ್ವರನ ದೇವಸ್ಥಾನವಿದ್ದು ಅಲ್ಲಿದ ಪುರೋಹಿತರ ಬಳಿ ದೇವಸ್ಥಾನದ ಬಗ್ಗೆ ಮಾತನಾಡುತ್ತಿದ್ದಾಗ ತಿಳಿದದ್ದು ದೇವಸ್ತಾನದಲ್ಲೇ ಮದ್ಯಾಹ್ನ 1ರಿಂದ 2.30ರವರೆಗೆ ಊಟದ ವ್ಯವಸ್ಥೆ ಇದೆ ಎಂದು. ಸಮಯ ಇನ್ನು 12ಗಂಟೆಯಾಗಿತ್ತು. ನಾವು ನೇರ ತಲಕಾವೇರಿಗೆ ಹೋದೆವು. ಬಿಸಿಲು ಜೋರಾಗಿತ್ತು, ಮೋಡದ ಸುಳಿವೇ ಇಲ್ಲ. ಈ ವಾತಾವರಣ ಛಾಯಾಗ್ರಾಹಕರಿಗೆ ಔತಣವಿದ್ದಂತೆ. ಇಂತಹ ಬೆಳಕಿನಲ್ಲಿ ಬರುವ ಫೋಟೋಗಳು ಅದ್ಭುತವಾಗಿರುತ್ತದೆ.
ಸಾಮಾನ್ಯವಾಗಿ, ತಲಕಾವೇರಿಗೆ ದಿನಕ್ಕೆ 500 ಜನ ಬರುತ್ತಿದ್ದರಂತೆ, ಆದರೆ ಕೋವಿಡ್‌ನಿಂದಾಗಿ, ಈಗೀಗ ಕೇವಲ 50ರಿಂದ ೧೦೦ ಜನ ಬರುತ್ತಿದ್ದಾರೆ. ಹಾಗಾಗಿ ಕಾವೇರಿ ನದಿಯ ಉಗಮ ಸ್ಥಾನ ವೀಕ್ಷಿಸಲು ಸಾಕಷ್ಟು ಸಮಯ ಸಿಕ್ಕಿತು. ಇಲ್ಲಿ ನಾನು ನನ್ನ ಐಫೋನಿನಲ್ಲಿ ತೆಗೆದ ಕೆಲವು ಫೋಟೋಗಳನ್ನು ಈ ಲೇಖನದೊಂದಿಗೆ ಹಾಕುತ್ತಿದ್ದೇನೆ. ತಲಕಾವೇರಿಗೆ ಇದು ನನ್ನ ಮೊದಲನೇ ಭೇಟಿ. ಈಗಾಗಲೇ ಗಂಗಾ ನದಿ ಹಾಗೂ ಗೋದಾವರಿ ನದಿಗಳು ಉಗಮ ಸ್ಥಾನಗಳನ್ನು ನೋಡಿದ್ದೆ. ಈಗ ಕಾವೇರಿ ನದಿಯ ಉಗಮ ಸ್ಥಾನವನ್ನು ನೋಡುವ ಭಾಗ್ಯ ನನ್ನದಾಯಿತು.
ತಲಕಾವೇರಿ ವೀಕ್ಷಣೆಯ ನಂತರ ಭಾಗಮಂಡಲದ ದೇವಸ್ಥಾನಕ್ಕೆ ಬಂದು ಊಟ ಮುಗಿಸಿ, ಕಾವೇರಿ ನದಿಯಲ್ಲಿ 10 ನಿಮಿಷ ಕಳೆದು, ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆವು.
ಇಲ್ಲಿಗೇ ಈ ಲೇಖನ ಮುಗಿಸಬಹುದಿತ್ತು, ಹಾಗಾಗಿದ್ದಲ್ಲಿ ಕುತೂಹಲಕಾರಿ ವಿಷಯ ಹೇಳುವುದನ್ನೇ ಬಿಟ್ಟಂತಾಗುತ್ತದೆ ಅಲ್ಲವೇ. ಹೌದು, ತಲಕಾವೇರಿಯಿಂದ ವಿರಾಜಪೇಟೆ ಮಾರ್ಗ ಮಧ್ಯದಲ್ಲಿ ಇಗುತಪ್ಪ ಎಂಬುವ ದೇವರ ದೇವಸ್ಥಾನ ಕಾಣಿಸಿತು. ದೇವಸ್ಥಾನವು ಮುಖ್ಯರಸ್ತೆಯಿಂದ ಸುಮಾರು 3 ಕಿಲೋಮೀಟರ್ ದೂರ ಇದ್ದು, ನಾವು ಅಲ್ಲಿಗೆ ಹೋಗುವುದು ಬೇಡವೆಂದು ನಿರ್ಧರಿಸಿದೆವು. ಹಾಗೆ ಮುಂದೆ ಬಂದಾಗ, ಮತ್ತೊಂದು ಇಗುತಪ್ಪ ದೇವಸ್ಥಾನ ಕಾಣಿಸಿತು, ಇದು ಮುಖ್ಯರಸ್ತೆಯಿಂದ ಸ್ವಲ್ಪ ದೂರವಿದ್ದರೂ ರಸ್ತೆ ಚೆನ್ನಾಗಿದ್ದಿದ್ದರಿಂದ ಅಲ್ಲಿಗೆ ಹೋಗಲು ನಿರ್ಧರಿಸಿದೆವು. ಕೂರ್ಗಿನ ಜನರ ಗ್ರಾಮದೇವತೆ ಇದಿರಬಹುದೆಂದು ನಮಗನಿಸಿತು. ದೇವಸ್ಥಾನದ ಆವರಣದ ಒಳಗೆ ಹೋದಮೇಲೆ ನಮಗೆ ತಿಳಿದದ್ದು ಇದು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಎಂದು. ದೇವಸ್ಥಾನ ಮುಚ್ಚಿತ್ತು, ಆದರೆ ಆವರಣದಲ್ಲಿ ನಾವು ಸುತ್ತಾಡುತ್ತಿದ್ದನ್ನು ಗಮನಿಸಿದ ಅಲ್ಲಿನ ಅರ್ಚಕರು ನಮ್ಮ ಬಳಿ ಮಾತನಾಡಿಸಲು ಬಂದರು. ಅವರು ದೇವಸ್ಥಾನದ ಸ್ಥಳಪುರಾಣ ಹೇಳಿದ್ದು ಹೀಗೆ :
ದೇವಸ್ಥಾನದ ಹಿಂದೆ ಇರುವ ಎತ್ತರದ ಗುಡ್ಡದಲ್ಲಿ ಶಿವ ನೆಲೆಸಿದ್ದನಂತೆ, ಅಲ್ಲಿಂದ ಅವನು ತನಗೆ ಗುಡ್ಡದ ಕೆಳಗೆ ಮೂರು ಜಾಗ ಬೇಕೆಂದು ಗುಡ್ಡದ ಮೇಲಿಂದ ಮೂರು ಬಾಣಗಳನ್ನು ಬಿಟ್ಟನಂತೆ. ಈ ಮೂರು ಬಾಣಗಳು ಬಿದ್ದ ಜಾಗವೇ ಈಗಿರುವ ಮೂರು ಇಗುತಪ್ಪ ದೇವಸ್ಥಾನಗಳ ಜಾಗ. ಗುಡ್ಡದ ತಪ್ಪಲಿನಿಂದ ಅಳಿದರೆ, ಈ ಎಲ್ಲಾ ದೇವಸ್ಥಾನಗಳು ಸರಿಯಾಗಿ ಮೂರುವರೆ ಕಿಲೋಮಿಟರ್ ದೂರದಲ್ಲಿದೆ. ಆದರೆ ಒಂದು ದೇವಸ್ಥಾನದಿಂದ ಇನ್ನೊಂದು ದೇವಸ್ಥಾನಕ್ಕೆ ರಸ್ತೆಯಲ್ಲಿ ಹೋಗಲು ಕನಿಷ್ಠ ೫ ಕಿಲೋಮೀಟರ್ ಆಗುತ್ತದೆ. ಅರ್ಚಕರು ದಕ್ಷಿಣ ಕನ್ನಡಕ್ಕೆ ಸೇರಿದವರಾಗಿದ್ದು ಅವರ ತಾತನ ಕಾಲದಲ್ಲೇ ಅಂದರೆ ಸುಮಾರು 100 ವರ್ಷಗಳಿಗೆ ಮುಂಚೆಯೇ ಇಲ್ಲಿಗೆ ವಲಸೆ ಬಂದಿದ್ದಾರೆ.
ಇಗು ಎಂದರೆ ಅನ್ನ ಎಂದಾದರೆ ತಪ್ಪ ಎಂದರೆ ಕೊಡುವವನು ಎಂದರ್ಥ. ಹಾಗಾಗಿ ಇಗುತಪ್ಪ ಎಂದರೆ ಅನ್ನ ಕೊಡುವವನು ಎಂದಾಗುತ್ತದೆ. ಕೂರ್ಗಿನ ಜನರಿಗೆ ಇಗುತಪ್ಪ ಹಾಗೂ ಕಾವೇರಮ್ಮ ಇವರೆಡೇ ಮುಖ್ಯ ದೇವರುಗಳು. ಈ ಇಗುತಪ್ಪ ದೇವಸ್ಥಾನ ಆಡಳಿತವನ್ನು ಊರಿನ ಜನರೇ ನೋಡಿಕೊಳ್ಳುತ್ತಿದ್ದಾರೆ. ಹೆಚ್ಚು ಜನರು ಬರುತ್ತಿದ್ದ ಒಂದು ದೇವಸ್ಥಾನವನ್ನು ಮುಜರಾಯಿ ಇಲಾಖೆ ಸ್ವಾಧೀನ ಪಡಿಸಿಕೊಂಡಿದೆ. ಈ ಸುಬ್ರಹ್ಮಣ್ಯ ಸ್ವಾಮಿಗೆ ಬೇಕಾಗಿರುವ ಶುಭ್ರತೆ ಹಾಗೆ ಶುದ್ದತೆಯ ಅರಿವು ಊರಿನ ಜನರಿಗಿದ್ದು, ಈ ದೇವಸ್ಥಾನದ ಒಳಕ್ಕೆ ದೇವಸ್ಥಾನದ ಅರ್ಚಕರು ಬಿಟ್ಟು ಬೇರೆ ಯಾರಿಗೂ ಪ್ರವೇಶವಿಲ್ಲ ಎಂದು ಊರಿನವರೇ ನಿರ್ಧರಿಸಿದ್ದಾರೆ. ಹಾಗಾಗಿ ಯಾವ ಜಾತಿ ಭೇದವಿಲ್ಲದೆ ಎಲ್ಲರೂ ದೇವರನ್ನು ಸುಮಾರು 30 ಅಡಿಗಳ ದೂರದಲ್ಲಿರುವ ದೇವಸ್ಥಾನದ ಮುಖ್ಯದ್ವಾರದಿಂದಲೇ ವೀಕ್ಷಿಸಬೇಕು.
ಮುಜರಾಯಿ ಇಲಾಖೆ ಸ್ವಾಧೀನದಲ್ಲಿರುವ ದಾವಸ್ಥಾನವನ್ನು ಭಕ್ತಾದಿಗಳು ಬರುವುದನ್ನು ನೋಡಿಕೊಂಡು ಯಾವಾಗ ಬೇಕಾದರೂ ತೆಗೆಯುತ್ತಾರೆ, ಆದರೆ ಇನ್ನೆರಡು ದೇವಸ್ಥಾನದ ಸಮಯ ಬೆಳಿಗ್ಗೆ 5ರಿಂದ ಮದ್ಯಾಹ್ನ 12ರ ವರೆಗೆ ಮಾತ್ರ. ಆ ನಂತರ ದೇವಸ್ಥಾನ ತೆಗೆದರೆ, ಪ್ರತಿಸಲವೂ ಮತ್ತೆ ದೇವರಿಗೆ ಪೂರ್ತಿ ಅಭಿಷೇಕ ಪೂಜೆ ಮಾಡಬೇಕಾಗುತ್ತದೆ ಎಂಬುದು ಅರ್ಚಕರ ಹಾಗೂ ಭಕ್ತಾದಿಗಳ ನಂಬಿಕೆ. ಹೀಗಾಗಿ 12ರ ನಂತರ ದೇವಸ್ಥಾನವನ್ನು ತೆಗೆಯುವುದಿಲ್ಲ.
ಈ ಮೂರು ದೇವಸ್ಥಾನಗಳಲ್ಲಿ ಧರ್ಮಸ್ಥಳದಲ್ಲಿ ನೀಡುವ ರೀತಿಯ ಊಟದ ವ್ಯವಸ್ಥೆ ಇದೆ. ಮುಜರಾಯಿಗೆ ಒಳಪಡದ ದೇವಸ್ಥಾನದಲ್ಲಿ ಬೆಳಗಿನ ಕಾಫಿ ತಿಂಡಿ ವ್ಯವಸ್ಥೆ ಕೂಡ ಮಾಡುತ್ತಾರೆ. ಆದರೆ ಅದಕ್ಕೆ ಮುಂಚಿತವಾಗಿಯೇ ಅರ್ಚಕರಿಗೆ ಫೋನ್ ಮಾಡಿ ತಿಳಿಸಬೇಕು. ಇದು ಯಾವುದಕ್ಕೂ ಹಣ ನೀಡುವ ಅವಶ್ಯಕತೆ ಇಲ್ಲ, ಆದರೆ ನಿತ್ಯ ಅನ್ನ ದಾನಕ್ಕೆಂದು ದೇಣಿಗೆ ನೀಡಿದರೆ ಒಳಿತು ಎಂಬುದು ನನ್ನ ಭಾವನೆ. ಈ ಯಾವ ದೇವಸ್ಥಾನದಲ್ಲೂ ರಾತಿ ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ನಮಗಂತೂ ಊಟ ಆಗಿದೆ ಎಂದರೂ, ಪವಿತ್ರ ಕ್ಷೇತ್ರಕ್ಕೆ ಬಂದಿದ್ದೀರಿ, ಊಟ ಮಾಡಲೇಬೇಕೆಂದು ಅರ್ಚಕರು ಬಲವಂತ ಮಾಡಿದ್ದರಿಂದ ಅವರಿಗೆ ಬೇಜಾರು ಪಡಿಸಬಾರದೆಂದು ನಾವು ಸ್ವಲ್ಪ ಪಾಯಸ ಹಾಗೂ ಅನ್ನ ಸೌತೇಕಾಯಿ ಹುಳಿ ತಿಂದೆವು.
ಇನ್ನು ದೇವಸ್ಥಾನದ ಆವರಣ ನೋಡಿದರೆ, ಸುತ್ತಲೂ ಕಾಡಿನ ಪ್ರದೇಶ, ಹಸಿರು ಬಿಟ್ಟು ಬೇರೆ ಯಾವ ಬಣ್ಣವೂ ನಿಮಗೆ ಕಾಣಿಸುವುದಿಲ್ಲ. ಭಕ್ತಾದಿಗಳು ದೇವಸ್ಥಾನಕ್ಕೆ ಬರುವ ದಿನ ಮಾಂಸಾಹಾರವನ್ನು ತಿಂದರಬಾರದು ಹಾಗೂ ಮಧ್ಯಪಾನ ಮಾಡಿರಬಾರದೆಂದು ಊರಿನ ಜನರೇ ಬೋರ್ಡ್ ಹಾಕಿಸಿದ್ದಾರೆ. ಈ ನಿಯಮವನ್ನು ಊರಿನ ಜನರೂ ಪಾಲಿಸಿಕೊಂಡು ಬಂದಿದ್ದಾರೆ ಹಾಗೆಯೇ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತಾದಿಗಳು ಪಾಲಿಸಬೇಕೆಂಬುದು ಅವರ ಬಯಕೆ.
ಈ ಲೇಖನ ಬರೆಯುತ್ತಿರುವ ಉದ್ದೇಶ, ನನ್ನ ಹಾಗೇ ಕೂರ್ಗ್ ಪ್ರದೇಶಕ್ಕ ಸಸ್ಯಹಾರಿಗಳಿಗೆ ಹೋಗಲು ಹೆದರಿರಬಹುದುದಾದ ಜನರಿಗೆ, ಇಗುತಪ್ಪ ದೇವಸ್ಥಾನ ಆ ಭಯವನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲದೆ ಬಹಳ ಜನ ಭಕ್ತಾದಿಗಳು ನಂಬಿಕೆ ಇಟ್ಟಿರುವ ದೇವರಿದು. ಇಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡುವ ಸರ್ಪ ಸಂಬಂಧಿತ ಪೂಜೆಗಳನ್ನೆಲ್ಲಾ ಮಾಡುತ್ತಾರೆ. ಪೂಜೆ ಮಾಡಿಸಬೇಕೆಂದೇ ಇಲ್ಲ, ಆದರೆ ಕರ್ನಾಟಕದಲ್ಲೇ ಇಷ್ಟು ವರ್ಷಗಳ ಕಾಲ ಇದ್ದು, ನಾವು ಹತ್ತಿರದಲ್ಲೇ ಇರುವ ಈ ದೇವಸ್ಥಾನಗಳನ್ನು ನೋಡಿಲ್ಲವೆಂದರೆ ಸರಿಯಲ್ಲವಲ್ಲವೇ.
ನೀವು ಅಲ್ಲಿಗೆ ಹೋಗಲು ನಿರ್ಧರಿಸಿದರೆ ಆ ಸಮಯದಲ್ಲಿ ಅರ್ಚಕರ ಮೊಬೈಲ್ ಸಂಖ್ಯೆ ಬೇಕಿದ್ದಲ್ಲಿ, ನನಗೆ ಕರೆ ಮಾಡಿ.
ಮತ್ತೊಂದು ಪಯಣದ ವಿಚಾರ ತಿಳಿಸಲು ಮತ್ತೆ ಭೇಟಿಯಾಗೋಣ