ಎಂತಹ ಕಾಲಬಂದಿತು ನೋಡಿ ಪ್ರಾಣಿ ಪಕ್ಷಿಗಳೆಲ್ಲ ಆರಾಮವಾಗಿ ಓಡಾಡುತ್ತಾ ಹಾರಿಕೊಂಡಿದ್ದರೆ, ಎಲ್ಲರಿಗಿಂತ ಮಿಗಿಲು ಎಂದು ಮೆರೆದಾಡುತ್ತಿದ್ದ ನಾವು ಹೊರಗಿನ ಪ್ರಪಂಚಕ್ಕೆ ಮರೆಯಾಗಿ ಮನೆಯಲ್ಲಿ ಕುಳಿತಿದ್ದೇವೆ. ಪಕ್ಕದ ಮನೆಯಲ್ಲಿ ಏನದರೂ ಆದರೆ ನನಗೇನು, ನಾನು ಸುಮ್ಮನಿದ್ದರೆ ನನಗೆ ಯಾವ ತೊಂದರೆಯೂ ಆಗುವುದಿಲ್ಲ ಎಂಬುದು ಈಗ ದೊಡ್ಡ ಅಪನಂಬಿಕೆ ಎಂಬುದು ಗೊತ್ತಾಗಿದೆ. ಕೇವಲ ನಾನಷ್ಟೇ ಅಲ್ಲ, ನನ್ನ ಜೊತೆಗಿರುವ ಪ್ರತಿಯೊಬ್ಬರೂ ಆರೋಗ್ಯವಾಗಿದ್ದರೆ ಮಾತ್ರ ನನಗೆ ಸುಖ ಎಂಬುದು ಅರಿತುಕೊಂಡಿದ್ದೇವೆ. ನಮ್ಮನ್ನು ನಾವು ನೋಡಿಕೊಳ್ಳುವುದಷ್ಟೇ ಅಲ್ಲ ನನ್ನ ಜವಾಬ್ಧಾರಿ, ಸಮಾಜವೂ ಸುಖವಾಗಿರಲೂ ನಾನು ಪ್ರಯತ್ನಿಸಬೇಕು ಎಂಬುದರ ಅರಿವಾಗಿದೆ.
ಸಂಜೆ ಕಛೇರಿಯಿಂದ ಬಂದ ಮಗ ಅಥವಾ ಮಗಳನ್ನು ತಂದೆ ತಾಯಿ ಏನಾದರು ಕೇಳಲು ಹೋದರೆ , “ಅಷ್ಟು ಗೊತ್ತಾಗಲ್ವೇ ನಿಮಗೆ, ನಾನು ಕಷ್ಟಪಟ್ಟು ಕಛೇರಿಯಿಂದ ಬಂದರೆ, ಇಲ್ಲಿ ನಿಮ್ಮ ಗೋಳು ಪ್ರಾರಂಭ, ನೀವೇನು ಮನೆಯಲ್ಲೇ ಬೆಳಗ್ಗೆಯಿಂದ ಸಂಜೆವರೆವಿಗೂ ಆರಾಮವಾಗಿ ಇರುತ್ತೀರಿ” ಎಂದು ಉತ್ತರ ಬರುತ್ತಿತ್ತು. ಆದರೆ ಈಗ ಆ ಮಕ್ಕಳಿಗೆ ಮನೆಯಲ್ಲಿ ಅಲ್ಲ ಮನೆಯಲ್ಲೇ ಇರುವುದು ಎಷ್ಟು ಕಷ್ಟ ಎಂಬ ಅರಿವಾಗಿದೆ.
ಬೇರೆ ದೇಶಕ್ಕೆ ಹೋಗಿದ್ದ ಕೆಲವು ಸ್ನೇಹಿತರು, ಅಲ್ಲಿ ಮಕ್ಕಳ ಮನೆಯಲ್ಲಿ ತಿಂಗಳು ಗಟ್ಟಲೆ ಬಂದನದಲ್ಲಿರುವಂತೆ ಇದ್ದು ಸಾಕಪ್ಪ ಸಾಕು ಎಂದು ಭಾರತಕ್ಕೆ ಹಿಂದಿರುಗಿದ್ದರು. ಆಗ ನಾನು ಯೋಚಿಸುತ್ತದ್ದೆ, ಅಷ್ಟು ಕಷ್ಟವೇ ಮನೆಯಲ್ಲೇ ಇರುವುದು ಎಂದು. ಈಗ ಅವರುಗಳು ಪಟ್ಟ ಕಷ್ಟ ಹೇಗಿತ್ತೆಂಬುದು ನನಗೆ ಅನುಭವವಾಗಿದೆ.
ಏನು ಕೆಲಸವಿಲ್ಲ ಎಂಬುದು ಒಂದು ವಿಷಯವಾದರೆ, ನೋಡಿದ್ದೇ ಜನರನ್ನು ದಿನಾ ನೋಡಬೇಕು ಮಾತನಾಡಿದವರನ್ನೇ ಮತ್ತೇ ಮಾತನಾಡಿಸಬೇಕು ಇದು ಬಹಳ ಕಷ್ಟದ ಕೆಲಸ. ಎಲ್ಲಕ್ಕಿಂತ ನಾವು ಅಭ್ಯಾಸ ಮಾಡಿಕೊಂಡಿದ್ದ ಶೇಕಡ 90ರಷ್ಟು ಚಟುವಟಿಕೆಗಳನ್ನು ಮಾಡದೆಯೇ ನಾವು ಜೀವಿಸಬಹುದು ಎಂಬ ಅರಿವಾಗಿದೆ.
ಇನ್ನು ಹಣ ಸಂಪಾದನೆಯ ವಿಚಾರ ಮಾಡುವುದಾದರೆ, ನಾವು ಈಗ ಜೀವಿಸುತ್ತಿರುವಂತೆಯೇ ಮುಂದೆಯೂ ಜೀವನ ಮಾಡುವುದಾದರೆ ನಮ್ಮಲ್ಲಿರುವ ಹಣ, ನಮ್ಮ ಅವಶ್ಯಕತೆಗಿಂತ ಎಷ್ಟೋ ಪಟ್ಟು ಜಾಸ್ತಿ ಇದ್ದಂತಿದೆ. ಸರಳ ಜೀವನದ ಸಾರ ಈಗ ನಾವು ಅರಿತುಕೊಂಡಿದ್ದೇವೆ.
ಸಾವಿರಾರು ರೂಪಾಯಿಗಳು ಕೊಟ್ಟು ಖರೀದಿಸಿದ್ದ ಶರ್ಟ್, ಪ್ಯಾಂಟ್, ಸೀರೆಗಳು ಕಬೋರ್ಡಿನಿಂದ ಹೊರಗೇ ಬಂದಿಲ್ಲ. ಅದ್ಧೂರಿ ವಸ್ತ್ರಗಳು, ಆಭರಣಗಳು ಕೇವಲ ಹೊರಗಿನವರಲ್ಲಿ ತೋರಿಸಿಕೊಳ್ಳಲು ಎಂಬ ಅರಿವಾಗಿದೆ. ಇಲ್ಲವಾದರೆ ಮನೆಯಲ್ಲೇ ಈಗಲೂ ಅವೆಲ್ಲವನ್ನೂ ಧರಿಸಬಹುದಿತ್ತೆಲ್ಲಾ.
ಯಾವ ಚಿತ್ರ ನಟರನ್ನು, ರಾಜಕೀಯ ದುರೀಣರನ್ನು ನಾವು ದೊಡ್ಡ ಮನುಷ್ಯರೆಂದು ತಿಳಿಯುತ್ತಿದ್ದೆವೋ ಅವರೆಲ್ಲರಿಗಿಂತ ವೈದ್ಯಕೀಯ ಕ್ಷೇತ್ರದಲ್ಲಿರುವವರು ನಮಗೆ ದೇವರಂತೆ ಕಾಣಿಸುತ್ತಿದ್ದಾರೆ. ಜಲಂದರ್ ನಗರದಲ್ಲಿ 250 ಕಿಲೋಮೀಟರ್ ದೂರದಲ್ಲಿದ್ದ ಹಿಮಾಲಯ ಬೆಟ್ಟ ಶುದ್ದ ವಾತಾವರಣದಿಂದಾಗಿ ಈಗ ಬರಿ ಕಣ್ಣಿಗೆ ಕಾಣಿಸುತ್ತಿದೆ. ಕಣ್ಮರೆಯಾಗಿದ್ದ ತಿಮಿಂಗಲಗಳು ಮುಂಬೈನ ಸಮುದ್ರ ತೀರದಲ್ಲಿ ಕಾಣಿಸುತ್ತಿದೆ. ಯಾವುದೇ ಹಣ ವ್ಯಯವಾಗದೆ ಗಂಗಾ ನದಿ ಸ್ವಚ್ಛವಾಗಿದೆ. ದಾರಿಗಳಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳ ಅಬ್ಬರವಿಲ್ಲ. ಪ್ರಾರ್ಥನಾ ಮಂದಿರಗಳ ಲೌಡ್ ಸ್ಪೀಕರ್ ಶಬ್ಧ ಮಾಯವಾಗಿದೆ.
ವಾರ್ತಾ ಪತ್ರಿಕೆಗಳಲ್ಲಿ ತುಂಬಿ ತುಳುಕುತ್ತಿದ್ದ ವಿಷಯಗಳಾದ ಕಳ್ಳತನ, ದರೋಡೆ, ರೆಸಾರ್ಟ್ ರಾಜಕೀಯ ಇವಲ್ಲಾ ಮಾಯವಾಗಿದೆ.
ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ನಾವು ಮನುಜರು ಈ ಭೂಮಿಗೆ ತಪ್ಪಾಗಿ ಬಂದೆವೇನೋ ಎಂಬ ಭಾಸವಾಗುತ್ತಿದೆ.