ಗುರುರಾಜ
ಶಾಸ್ತ್ರಿ
ಪ್ರವಾಸ ಕಥನ ಹೇಗಿರಬೇಕು
24-07-2021
ಹಿಂದೆ ನಾನು ಪ್ರವಾಸಕ್ಕೆ ಹೋದರೆ ಅದರ ಫೋಟೋಗಳನ್ನು ಫೇಸ್‌ಬುಕ್‌ ಮತ್ತು ವಾಟ್ಸ್ಯಾಪ್‌ನಲ್ಲಿ ಗೆಳೆಯರಿಗೆಲ್ಲ ಕಳಿಸುತ್ತಿದ್ದೆ. ಸಮನ್ವಯ ಸಮಿತಿ ವಾಟ್ಸಾಪ್ ಗುಂಪಿಗೆ ಸೇರಿದ ಮೇಲೆ ಕೆಲವರು ಬರೆಯುತ್ತಿದ್ದ ಪ್ರವಾಸ ಲೇಖನಗಳನ್ನು ನೋಡಿ ನನಗೂ ಪ್ರವಾಸದ ಅನುಭವ ಬರೆದು ಹಂಚಿಕೊಳ್ಳುವ ಆಸೆಯಾಯಿತು. ಈ ಗುಂಪಿನ ಸದಸ್ಯರು ಹಾಗೂ ನನ್ನ ಗೆಳೆಯರೂ ಆದ ಒಬ್ಬರಿಗೆ ಈ ವಿಷಯ ತಿಳಿಸಿದಾಗ ಅವರು, ಅವರು ಬರೆದಿರುವ ನಾಲ್ಕು ಪ್ರವಾಸ ಲೇಖನಗಳನ್ನು ಕಳಿಸಿದರು. ಅದರಲ್ಲಿ ಪ್ರವಾಸದ ಮೊದಲ ಪ್ರಸ್ತಾಪ, ವಿಮಾನ ಟಿಕೇಟ್‌ ಕಾಯ್ದಿರಿಸಿದ್ದು, ಪ್ರವಾಸಕ್ಕೆ ಮುನ್ನ ಎಲ್ಲ ಪ್ರವಾಸಿಗರು ಎರಡು ಮೂರು ಸಲ ಭೇಟಿ ಮಾಡಿದ್ದು, ಪ್ರವಾಸದಲ್ಲಿ ಅವರು ಭೇಟಿ ಮಾಡಿದ ವ್ಯಕ್ತಿಗಳು, ಅಲ್ಲಿನ ಊಟ ಉಪಚಾರ ಹೀಗೆ ಹಲವಾರು ವಿಷಯಗಳಿದ್ದವು. ಆ ಪ್ರವಾಸ ಕಥನಗಳು ನನ್ನ ಬರೆಯುವ ಆಸೆಗೆ ಒಳ್ಳೆಯ ಪ್ರೇರಣೆ ನೀಡಿತು. ಸರಿ ನಾನು ಆಗತಾನೆ ಗುರುವಾಯೂರ್‌ ಗೆ ಹೋಗಿ ಬಂದಿದ್ದೆ. ಇನ್ನೇಕೆ ತಡ, ಪ್ರವಾಸ ಕಥನ ಬರೆಯಲು ಪ್ರಾರಂಭಿಸಿದೆ. ನಮ್ಮ ವೇದ ಗುರುಗಳಿಂದ ಹಿಡಿದು ನನ್ನ ಜೊತೆ ಪ್ರವಾಸ ಮಾಡಿದ 38 ಪ್ರವಾಸಿಗರೆಲ್ಲರ ಹೆಸರು ಯಾವುದಾದರು ಒಂದು ವಿಷಯದಲ್ಲಿ ಬರುವಂತೆ ನೋಡಿಕೊಂಡೆ. ಈ ಪ್ರವಾಸದ ತಯಾರಿಯಲ್ಲಿ ಮೊದಲನೇ ದಿನದಿಂದಲೂ ವೇದಪಾಠದ ಗುರುಗಳೊಂದಿಗೆ ನಾನು ತೊಡಗಿಸಿಕೊಂಡಿದ್ದರಿಂದ ವಿವರಣೆ ಅಚ್ಚುಕಟ್ಟಾಗಿ ನೀಡಲು ಸಾಧ್ಯವಾಯಿತು. ಇದನ್ನು ನನ್ನ ವೇದಪಾಠದ ಗೆಳೆಯರೊಂದಿಗೆ ವಾಟ್ಸ್ಯಾಪ್‌ನಲ್ಲಿ ಹಂಚಿಕೊಂಡು ಒಳ್ಳೆಯ ಹೆಸರನ್ನು ಗಳಿಸಿದೆ. ಇದೇ ಲೇಖನವನ್ನು ನಮ್ಮ ಸಮನ್ವಯ ಸಮಿತಿ ಗುಂಪಿಗೆ ಕಳಿಸಿದೆ. ಯಾರ ಅಭಿಪ್ರಾಯವೂ ಬರಲಿಲ್ಲ. ಮುಂದಿನ ದಾಸೋಹದಲ್ಲಿ ನಮ್ಮ ಸದಸ್ಯರಲ್ಲೊಬ್ಬರು ನನ್ನೊಂದಿಗೆ ಮಾತನಾಡುತ್ತಾ "ಕಳೆದ ವಾರ ಗುಂಪಿನಲ್ಲಿ ಬಂದ ಆ ಪ್ರವಾಸ ಲೇಖನ ಓದಿದಿರ. ಗುರುವಾಯೂರ್‌, ಕಾಲಡಿ ವಿಷಯ ಏನೂ ಇಲ್ಲ, ಅಲ್ಲ ಇವರಿಗೆ ಯಾರು ಊಟ ಬಡಿಸಿದರು, ಯಾರು ಎಲೆ ಹಾಕಿದರು ಇವೆಲ್ಲ ನಮಗೆ ಯಾಕೆ " "ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಗಳ ಹೆಸರು ನಮಗೆ ಯಾಕೆ ಬೇಕಲ್ವಾ" ಎಂದರು. ಅವರಿಗೆ ಆ ಲೇಖನ ಕಳಿಸಿದ್ದು ನಾನೇ ಅಥವಾ ನನ್ನ ಹೆಸರು ಗುರುರಾಜ ಶಾಸ್ತ್ರಿ ಎಂದು ಗೊತ್ತಿರಲಿಲ್ಲ. ಆದರೆ ನಾನು ಮಾಡಿದ ತಪ್ಪು ನನಗೆ ಅರಿವಾಯಿತು. ಸರಿ ಮುಂದೆ ನಾನು ಪ್ರಯಾಣ ಮಾಡಿದ್ದು ಅರಸೀಕೆರೆಯ ಮಾಲೇಕಲ್‌ ತಿರುಪತಿ. ಈ ಪ್ರವಾಸದ ಬಗ್ಗೆ ಲೇಖನ ಪ್ರಾರಂಭಿಸಿದೆ. ಮಾಲೇಕಲ್‌ ತಿರುಪತಿಯ ವೈಶಿಷ್ಟ್ಯ, ಅಲ್ಲಿಯ ದೇವರ ಮೂರ್ತಿಯ ವರ್ಣನೆ, ಆ ಜಾಗ ನೋಡಲು ಹೇಗಿದೆ ಎಲ್ಲವನ್ನೂ ಸೇರಿಸಿ ಲೇಖನ ಬರೆದೆ. ಮತ್ತದೇ ಕಥೆ, ಗೆಳೆಯರೆಲ್ಲಾ ಹೊಗಳಿದರು. ನನಗೆ ಸಮಿತಿಯ ಸದಸ್ಯರಿಂದ ಭೇಷ್‌ ಎನ್ನಿಸಿಕೊಳ್ಳಬೇಕೆಂಬ ಹಂಬಲ. ನಮ್ಮ ಸದಸ್ಯರೊಬ್ಬರು "ಶಾಸ್ತ್ರಿಯವರೇ , ನೀವು ಯಾರ್ಯಾರು ಹೋದಿರಿ, ಹೇಗೆ ಹೋದಿರಿ, ನಿಮಗೆಲ್ಲಾದರು ತೊಂದರೆಯಾದದ್ದು, ಊಟ ಎಲ್ಲಿ ಸಿಗುತ್ತದೆ, ಇವೆಲ್ಲಾ ಏನೂ ಇಲ್ಲದಿರುವುದರಿಂದ ನೀವು ಬರೆದಿರುವುದು ಪ್ರವಾಸ ಕಥನವಲ್ಲ, ಅದೊಂದು ಸ್ಥಳ ಪುರಾಣ ಅಷ್ಟೇ" ಎಂದರು. ನಿಮ್ಮ ಈ ಸ್ಥಳ ಪುರಾಣ ಗೂಗಲ್‌ನಲ್ಲಿ ಹುಡುಕಿದರೂ ಸಿಗುತ್ತದೆ. ನಿಮ್ಮ ಅನುಭವ ಮತ್ತು ನಿಮ್ಮ ಪ್ರವಾಸದಿಂದ ಬೇರೆಯವರಿಗೆ ಆ ಜಾಗಗಳನ್ನು ನೋಡುವ ಹಂಬಲ ಬರಬೇಕು. ಅಷ್ಟೇ ಅಲ್ಲದೆ ಅವರಿಗೆ ಆ ಜಾಗಕ್ಕೆ ಪ್ರಯಾಣ ಮಾಡಿಕೊಳ್ಳಲು ಹೇಗೆ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ತಿಳಿಯಬೇಕು ಎಂದರು. ಇದಾದ ನಂತರ ನಮ್ಮ ಸದಸ್ಯರ ಹತ್ತಿರ ಭೇಷ್‌ ಎನಿಸಿಕೊಳ್ಳಬೇಕಿದ್ದರೆ ಕನ್ನಡಕ್ಕೆ ಹತ್ತಿರವಾದ ವಿಷಯವನ್ನು ಲೇಖನದಲ್ಲಿ ಸೇರಿಸಬೇಕು ಎಂದು ಯೋಚಿಸಿದೆ. ಆಗ ನನಗೆ ನನ್ನ ಅರುಣಾಚಲ ಪ್ರದೇಶದ ಪ್ರವಾಸದಲ್ಲಿ ಸಿಕ್ಕದ್ದ ಅಸ್ಸಾಮಿನ ಭೋಗಾರಾಮ. ಈ ಪ್ರವಾಸ ಕಥನ ಒಳ್ಳೆಯ ಹೊಗಳಿಕೆ ತಂದಿತು, ಆದರೆ ಇದರಲ್ಲಿ ಪ್ರವಾಸದ ವಿಷಯವಾಗಲಿ ಅಥವಾ ಗುವಾಹಟಿ ಊರಿನ ವಿಷಯವಾಗಲಿ ಏನೂ ಬರೆದಿರಲಿಲ್ಲ. ಏನೂ ಠೀಕೆಗಳಿಲ್ಲದೆ ತೇರ್ಗಡೆಯಾದ ನನ್ನ ಮೊದಲ ಪ್ರವಾಸ ಕಥನ ಇದು. ಹೀಗೆ ಸಾಗಿತ್ತು ನನ್ನ ಪ್ರವಾಸ ಲೇಖನದ ಪ್ರಯಾಣ. ಮುಂದೆ ಇನ್ನೊಂದೆರೆಡು ಲೇಖನಗಳನ್ನು ಮತ್ತು ಅದರಿಂದ ಹೊರಬಂದ ಸದಸ್ಯರ ಅಭಿಪ್ರಾಯಗಳನ್ನು ಓದಿದಾಗ ನನಗೆ ತಿಳಿದದ್ದು, ಬರವಣಿಗೆ ಪ್ರತಿಯೊಬ್ಬರದು ಒಂದೊಂದು ವಿಭಿನ್ನ ಶೈಲಿಯಾದರೆ, ಓದುವವರು ಅವರವರ ಬರವಣಿಗೆಯ ಶೈಲಿಯಲ್ಲಿ ಬರಹಗಳು ಇರಬೇಕೆಂದು ಇಚ್ಛಿಸುತ್ತಾರೆ. ಇದಕ್ಕೆ ನಾನು ಹೊರತಲ್ಲ. ಕೆಲವೊಮ್ಮೆ ಸದಸ್ಯರ ಕಠುವಾದ ಠೀಕೆ, ನನ್ನ ಬರವಣಿಗೆಯನ್ನು ಇನ್ನೂ ಹೆಚ್ಚುಪ್ರಭಾವಶಾಲಿ ಮಾಡಲು ಮತ್ತು ನನಗೆ ತಿಳಿಯದೇ ಇರುವ ನನ್ನಲ್ಲಿರುವ ಉತ್ತಮವಾದ ಬರವಣಿಗೆಯನ್ನು ಹೊರತೆಗೆಯಲು ಅವರು ಮಾಡುತ್ತಿರುವ ಪ್ರಯತ್ನ ಎಂದು ಭಾವಿಸುತ್ತೇನೆ. ಹೀಗೆ ಠೀಕಿಸಿದವರಿಗೆ ಧನ್ಯವಾದಗಳನ್ನು ತಿಳಿಸಿ, ನನ್ನ ಮುಂದಿನ ಲೇಖನಗಳಲ್ಲಿ ಅವರು ತಿಳಿಸಿರುವ ವಿಷಯಗಳನ್ನು ಅಳವಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತೇನೆ. ಇಷ್ಟೆಲ್ಲಾ ಹೊಗಳಿಕೆ, ಪೆಟ್ಟುಗಳು ತಿಂದಾದ ಮೇಲೆ ಇತ್ತೀಚೆಗೆ ನನ್ನ ಆಗುಂಬೆ ಪ್ರವಾಸ ಲೇಖನ ಬರೆದಾಗ ಬಹಳ ಸದಸ್ಯರು ಮೆಚ್ಚಿದ್ದು ನನ್ನನ್ನು ಆಕಾಶದಲ್ಲಿ ತೇಲುವಂತೆ ಮಾಡಿತು. ಆದರೆ ಹಾಗಂತ ನಾನು ಪ್ರವಾಸ ಲೇಖನ ಬರೆಯವುದನ್ನು ಕಲಿತೆ ಅಂತಲ್ಲ. ಏಕೆಂದರೆ ಕಳೆದವಾರ ಗುಂಪಿನಲ್ಲಿ ಹಾಕಿದ ನನ್ನ ತಿರುವಣ್ಣಾಮಲೈ ಪ್ರವಾಸ ಲೇಖನ, ಗುರುವಾಯೂರ್‌ನ ನನ್ನ ಮೊದಲ ಪ್ರವಾಸ ಲೇಖನಕ್ಕಿಂತ ಹೆಚ್ಚು ಠೀಕೆಗಳಿಗೆ ತುತ್ತಾಯಿತು. ಯಾವುದು ಸರಿ ಯಾವುದು ತಪ್ಪು ಎಂದು ನನಗೆ ತಿಳಿಯದು. ಆದರೆ ತಮ್ಮದೆ ಆದ ವೈವಿಧ್ಯಮಯ ವಿಚಾರಗಳ ಧೃಷ್ಠಿಯಿಂದ ಲೇಖನಗಳನ್ನು ಓದುವ ಸದಸ್ಯರ ಅಭಿಪ್ರಾಯ ನನಗೆ ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಠೀಕೆಗಳೆಂಬ ಆಶೀರ್ವಾದ ಓದುಗರಿಂದ ಬರುತ್ತಿರಬೇಕು, ಆಗಲೇ ನನಗೆ ಕಲಿಯಲು ಹಾಗೂ ಬೆಳೆಯಲು ಸಾಧ್ಯ. ನಾನು, ಯಾವತ್ತು, ಪ್ರವಾಸ ಕಥನ ಬರೆಯಲು ಕಲಿತೆ ಎಂದು ಭಾವಿಸುತ್ತೇನೋ ಅಂದಿಗೆ ನನ್ನ ಜ್ಙಾನದ ಬೆಳವಣಿಗೆಗೆ ನಾನೇ ಅಡ್ಡಗೋಡೆ ಹಾಕಿಕೊಂಡಂತೆ. ಹಿಂದೆ ಪ್ರವಾಸಕ್ಕೆ ಹೋಗಿದ್ದರಿಂದ ಲೇಖನ ಬರೆಯುತ್ತಿದ್ದೆ. ಈ ಸಮನ್ವಯ ಸಮಿತಿ ವಾಟ್ಸಾಪ್‌ ಗುಂಪಿನ ಸಹವಾಸದಿಂದಾಗಿ ಈಗ ಲೇಖನ ಬರೆಯುವುದಕ್ಕಾಗಿ ಪ್ರವಾಸಗಳನ್ನು ಮಾಡುತ್ತಿದ್ದೇನೆ. ಧನ್ಯವಾದಗಳು
ಅನಿಸಿಕೆಗಳು




T S Shravana Kumari
30-07-2021
ಅಂತೂ ತೆಗಳುವವರಿದ್ದರೆ ಸಾಕಷ್ಟು ಕಲಿಯಬಹುದು ಎನ್ನುವುದನ್ನು ಅರ್ಥಮಾಡಿಕೊಂಡಿರಿ. ಭೇಷ್!
ಧನ್ಯವಾದಗಳು ಮೇಡಮ್