ಗುರುರಾಜ
ಶಾಸ್ತ್ರಿ
ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ
17-12-2019
ಸುಮಾರು ಇಪ್ಪತ್ತು ವರ್ಷಕ್ಕೆ ಮುಂಚೆ ನಾನು ಮೊದಲನೇಸಲ ತಿರುವಣ್ಣಾಮಲೈ ಗಿರಿ ಪ್ರದಕ್ಷಿಣೆ ಎಂದು ಹೋಗಿದ್ದೆ. ಆಗ ನನ್ನ ಗುರಿ ಕೇವಲ ಗಿರಿ ಪ್ರದಕ್ಷಿಣೆ ಮಾಡುವುದು ಮತ್ತು ಅದನ್ನೂ ಅತಿ ಕಡಿಮೆ ಸಮಯದಲ್ಲಿ ಮಾಡುವುದು ಆಗಿತ್ತು. ಸುಮಾರು ಎರಡೂವರೆ ಘಂಟೆಗಳ ಕಾಲದಲ್ಲಿ 14 ಕಿಲೋಮೀಟರ್ ಗಿರಿ ಪ್ರದಕ್ಷಿಣೆ ಬರಿಗಾಲಿನಲ್ಲಿ ಮಾಡಿದ್ದೆ. ಹತ್ತು ವರ್ಷಕ್ಕೆ ಮುಂಚೆ ಎರಡನೇ ಬಾರಿ ಇದೇ ಕಿರಿ ಪ್ರದಕ್ಷಿಣೆಗೆ ಹೋಗಿದ್ದೆ . ಆಗ ಸುಮಾರು ಎರಡು ಗಂಟೆಗಳಲ್ಲಿ ಗಿರಿ ಪ್ರದಕ್ಷಿಣೆ ಮುಗಿಸಿದೆ. ಆದರೆ ಬರಿಗಾಲಲ್ಲಿ ನಡೆಯಲಿಲ್ಲ . ಏಕೆಂದರೆ ಹಿಂದಿನ ಸಲ ಬರಿಗಾಲಲ್ಲಿ ನಡೆದು ಕಾಲಿನಲ್ಲಿ ಆದ ಬೊಬ್ಬೆಗಳನ್ನು ಸರಿಪಡಿಸಿಕೊಳ್ಳಲು ಸುಮಾರು ಒಂದು ವಾರವೇ ಆಯಿತು. ಈಸಲ ಸಪ್ಟೆಂಬರ್ ತಿಂಗಳಿನಲ್ಲಿ ಗುರುಪ್ರಸಾದ್ ರವರ ಜೊತೆ ಗಿರಿ ಪ್ರದಕ್ಷಿಣೆ ಗೆ ಹೊರಟೆ. ಗುರುಪ್ರಸಾದ್ ಅವರ ಜೊತೆ ಪ್ರವಾಸ ಮಾಡುವುದೆಂದರೆ ಒಂದು ಜ್ಞಾನ ಕೋಶವನ್ನು ನಮ್ಮೊಂದಿಗೆ ಇಟ್ಟುಕೊಂಡು ಪ್ರವಾಸ ಮಾಡಿದಂತೆ. ಹೋಟೆಲ್ಲು ಬಸ್ಸು ವೀಕ್ಷಿಸಬೇಕಾದ ಸ್ಥಳಗಳು ಇವೆಲ್ಲದರ ವಿಷಯ ಹೊರಡುವ ಮುಂಚೆಯೇ ಗುರುಪ್ರಸಾದ್ ರವರ ಮೂಲಕ ವಾಟ್ಸಪ್ನಲ್ಲಿ ನಮ್ಮ ಮೊಬೈಲ್ ತಲುಪುತ್ತದೆ . ಹಾಗಾಗಿ ಪ್ರಯಾಣದ ವಿಷಯದಲ್ಲಿ ಮನಸ್ಸಿನಲ್ಲಿ ಯಾವುದೇ ಗೊಂದಲವು ಇರುವುದಿಲ್ಲ. ಬೆಂಗಳೂರಿನಿಂದ 12ಗಂಟೆಯ ಬಸ್ಸಿನಲ್ಲಿ ನಾವು ಹೊರಟು ಆರು ಗಂಟೆಗೆ ತಿರುವಣ್ಣಾಮಲೈ ತಲುಪಿದೆವು. ಗುರುಪ್ರಸಾದ್ ರವರ ಶಾಲಾದಿನಗಳ ಸ್ನೇಹಿತರಾದ ರವೀಂದ್ರರು ನಮ್ಮೊಂದಿಗಿದ್ದರು. ತಿರುವಣ್ಣಾಮಲೈ ತಲುಪಿದ್ದು ಸ್ವಲ್ಪ ನಿಧಾನವಾದ್ದರಿಂದ ಅರುಣಾಚಲೇಶ್ವರನ ದರ್ಶನವನ್ನು ಮುಂದಿನ ದಿನಕ್ಕೆ ಹಾಕಿ ಗಿರಿ ಪ್ರದಕ್ಷಿಣೆ ತಕ್ಷಣ ಪ್ರಾರಂಭಿಸಿದೆವು. ರವೀಂದ್ರ ರವರು ಬಹಳ ವೇಗವಾಗಿ ನಡೆಯುತ್ತಾರೆ, ಹಾಗಾಗಿ ಅವರು ಮುನ್ನಡೆದು ಹೋಗುತ್ತಿದ್ದರು. ನಾನು, ಗುರುಪ್ರಸಾದ್ ಗಿರಿ ಪ್ರದಕ್ಷಿಣೆ ಪ್ರಾರಂಭಿಸಿದ ಕ್ಷಣ ಆಧ್ಯಾತ್ಮಿಕ ಚರ್ಚೆ ಪ್ರಾರಂಭವಾಯಿತು . ಗಿರಿ ಪ್ರದಕ್ಷಿಣೆ ಯ ದಾರಿಯಲ್ಲಿ ಸಿಗುವ 9 ಲಿಂಗಗಳ ವಿಶೇಷತೆಗಳು, ರಮಣ ಮಹರ್ಷಿ ಯವರ ಜೀವನ ಕಥೆ, ಗಣಪತಿ ಮುನಿಯವರ ತಿರುವಣ್ಣಾಮಲೈನಲ್ಲಿ ನಡೆದ ವಿಶೇಷ ಪ್ರಸಂಗಗಳು ಹೀಗೆ ಹಲವಾರು ವಿಷಯಗಳನ್ನು ಚರ್ಚಿಸಿದೆವು. ಗಣಪತಿ ಮುನಿಗಳ ಬಗ್ಗೆ ಗುರುಪ್ರಸಾದ್ ಅವರು ಮಾಡಿರುವಂತಹ ವಿಶೇಷ ಅಧ್ಯಯನ ಹಾಗೂ ಅದನ್ನು ಹಂಚಿಕೊಳ್ಳಬೇಕೆಂಬ ಅವರ ಆಸಕ್ತಿ ನನ್ನ ಪಾಲಿಗೆ ಅದೃಷ್ಟ ವಾಗಿತ್ತು. ಹೀಗೆ ಆಧ್ಯಾತ್ಮಿಕ ಚರ್ಚೆಯಲ್ಲಿ ಮುಳುಗಿ ಮಧ್ಯ ಮಧ್ಯದಲ್ಲಿ ಸಿಕ್ಕಂತಹ ಈಶ್ವರ ಲಿಂಗಕ್ಕೆ ನಮಸ್ಕರಿಸುತ್ತಾ, ರುದ್ರ ಪ್ರಶ್ನೆಯ ನಮಸ್ಸೋಮಾಯ ಚ ಅನುವಾಕವನ್ನು ಹೇಳುತ್ತಾ ಹೊರಟೆ. ಸುಮಾರು ಮೂರುವರೆ ಗಂಟೆಗಳ ಕಾಲ 14 ಕಿಲೋಮೀಟರ್ ನಾವು ಕ್ರಮಿಸಿದ್ದು ಈ ಆಧ್ಯಾತ್ಮ ಚರ್ಚೆಯಲ್ಲಿ ಗೊತ್ತಾಗಲಿಲ್ಲ. ರಾತ್ರಿಯ ಊಟ ಮುಗಿಸಿ ಸುಮಾರು 10.30 ಗಂಟೆಗೆ ಹೋಟೆಲ್ಗೆ ಹೋಗಿ ಮಲಗಿದೆವು. ಹವಾನಿಯಂತ್ರಿತ ಕೋಣೆಯಾದ್ದರಿಂದ ಮತ್ತು ಸಾಕಷ್ಟು ನಡೆದು ದಣಿದಿದ್ದರಿಂದ ಒಳ್ಳೆಯ ನಿದ್ದೆಯೂ ಬಂದಿತು. ಮಾರನೆಯ ದಿನ ಬೆಳಗ್ಗೆ ಏಳು ಮೂವತ್ತಕ್ಕೆ ಎಲ್ಲರೂ ತಯಾರಾಗಿ ಅರುಣಾಚಲೇಶ್ವರನ ದೇವಸ್ಥಾನಕ್ಕೆ ಹೋದೆವು. ಆ ದೇವಸ್ಥಾನದಲ್ಲಿ ಇರುವಂತಹ ಶಿವಲಿಂಗ, ಪಾತಾಳ ಲಿಂಗ, ಕಾಲಭೈರವ ಹೀಗೆ ಬೇರೆಬೇರೆ ದೇವರುಗಳ ವಿಶೇಷತೆಗಳನ್ನು ಗುರುಪ್ರಸಾದ್ ರವರಿಂದ ಕೇಳುತ್ತಾ ಹೊರಟೆ. ಎಲ್ಲಾ ದೇವರುಗಳ ಹೆಸರು ತಮಿಳು ಭಾಷೆಯಲ್ಲಿ ಹಾಕಿದ್ದರಿಂದ ತಮಿಳು ಓದಲು-ಬರೆಯಲು ಕಲಿತಿರುವ ನನಗೆ ಅದನ್ನು ಓದಲು ಗುರುಪ್ರಸಾದ್ ಹೇಳುತ್ತಿದ್ದರು. ದೇವಸ್ಥಾನದ ಆವರಣದಲ್ಲಿಯೇ ಒಂದು ಮೂಲೆಯಲ್ಲಿ ಕುಳಿತು ನಾನು ಮತ್ತು ರವೀಂದ್ರ ರುದ್ರ ಪಠಿಸಲು ಪ್ರಾರಂಭಿಸಿದೆವು. ಈ ರುದ್ರ ಪಠಿಸುವ ಆದೇಶ ಗುರುಪ್ರಸಾದ್ ಅವರದಾಗಿತ್ತು. ನಂತರ ನಾವು ಬೆಟ್ಟದ ಮೇಲಿರುವ ವಿರೂಪಾಕ್ಷ ಗುಹೆಗೆ ಹೊರಟೆವು. ಮಾರ್ಗಮಧ್ಯದಲ್ಲಿ ಗಣಪತಿ ಮುನಿಗಳು ಮತ್ತು ಅವರ ಸಂಸಾರ ಉಳಿದುಕೊಂಡಿದ್ದ ಮಾವಿನ ಗಿಡದ ಗುಹೆ ನೋಡಿದೆವು. ಈ ಜಾಗದಲ್ಲಿ ಗಣಪತಿ ಮುನಿಗಳು ಇಂದ್ರ ಸ್ತೋತ್ರವನ್ನು ಉಪಯೋಗಿಸಿಕೊಂಡು ಒಂದು ಚಿಕ್ಕ ಕಲ್ಲಿನಿಂದ ದೊಡ್ಡ ಬೀಗವನ್ನು ಒಡೆದ ವಿಶೇಷತೆಯನ್ನು ಗುರುಪ್ರಸಾದ್ ತಿಳಿಸಿದರು. ವಿರೂಪಾಕ್ಷ ಗುಹೆ ರಮಣ ಮಹರ್ಷಿಗಳು ಸುಮಾರು ಹದಿನಾರು ವರ್ಷ ಉಳಿದುಕೊಂಡಿದ್ದ ಜಾಗ. ಧ್ಯಾನಕ್ಕೆ ಸಾಕಷ್ಟು ಜನ ಆ ಗುಹೆಯಲ್ಲಿ ದೇಶವಿದೇಶಗಳಿಂದ ಬಂದು ಕುಳಿತುಕೊಳ್ಳುತ್ತಾರೆ. ವಾಣಿಜ್ಯ ಪ್ರಪಂಚದಿಂದ ಸ್ವಲ್ಪ ದೂರವಿರುವ ಈ ಗುಹೆ ನನಗಂತೂ ಬಹಳ ಇಷ್ಟವಾಯಿತು . ಎಷ್ಟು ಹೊತ್ತು ಧ್ಯಾನಮಾಡಿದೆನೋ ಗೊತ್ತಿಲ್ಲ. ಗುರುಪ್ರಸಾದ್ ಅವರು ಎಬ್ಬಿಸಿದಾಗ ನಡೆದು ಹೊರಟೆ. ನಂತರದ ಸುಮಾರು ಹತ್ತು ನಿಮಿಷ ನಾನು ಯಾವುದೋ ಬೇರೆ ಪ್ರಪಂಚದಲ್ಲೇ ಇದ್ದಂತೆ ಆಯಿತು. ಬೆಟ್ಟದಿಂದ ಕೆಳಗಿಳಿದು ತಿಂಡಿ ತಿಂದು ಹೋಟೆಲ್ ನಲ್ಲಿ ಒಂದು ಗಂಟೆಗಳ ಕಾಲ ವಿಶ್ರಾಂತಿ ಪಡೆದು ಹವಾನಿಯಂತ್ರಿತ ಬಸ್ಸಿನಲ್ಲಿ ಬೆಂಗಳೂರಿಗೆ ಹಿಂದುರುಗಿದೆವು. ಯಾವುದೇ ಒಂದು ತೀರ್ಥಯಾತ್ರೆ ಮಾಡಬೇಕೆಂದರೆ ನಾವು ಹೋಗುತ್ತಿರುವ ಜಾಗದ ವಿಷಯ ಅಧ್ಯಯನ ಮಾಡಿ ನಂತರ ಆ ಸ್ಥಳಗಳನ್ನು ನೋಡಿದಾಗ ನಾವು ಪಡೆಯುವ ಅನುಭವವೇ ವಿಭಿನ್ನವಾಗಿರುತ್ತದೆ ಎಂಬುದು ಈ ತಿರುವಣ್ಣಾಮಲೈ ಪ್ರವಾಸದಿಂದ ನನಗೆ ತಿಳಿಯಿತು.
ಅನಿಸಿಕೆಗಳು




ರಾ
27-08-2021
ನಿಮ್ಮಿಂದ ನಾನು ಸ್ಥಳದ ವಿವರ ತಿಳಿದುಕೊಳ್ಳಬೇಕು ಧನ್ಯವಾದಗಳು
ಮಂಗಲಾ ಜಯಂತ
18-11-2021
ಕುಳಿತೆಡೆ ಪ್ರದಕ್ಷಿಣೆ ಯ ಪುಣ್ಯ