ಗುರುಗಳೇ ನನಗೇಕೆ ಸಂನ್ಯಾಸ ದೀಕ್ಷೆ ನೀವಿನ್ನು ನೀಡಿಲ್ಲ. ಇಪ್ಪತ್ತು ವರ್ಷದಿಂದ ಬ್ರಹ್ಮಚಾರಿಯಾಗೇ ಉಳಿದಿದ್ದೇನೆ. ಸಂನ್ಯಾಸ ದೀಕ್ಷೆಗೆ ನಾನು ಯೋಗ್ಯನಲ್ಲ ಎಂದಾದರೆ, ಹೇಳಿಬಿಡಿ, ನಾನು ನಿಮ್ಮನ್ನು ಕೇಳುವುದನ್ನೇ ಬಿಟ್ಟುಬಿಡುತ್ತೇನೆ. ಅದೇಕೋ ಗೊತ್ತಿಲ್ಲ, ಇಂದು ರಾಜೀವನು ಗುರುಗಳಿಂದ ನಿಜ ತಿಳಿಯುವವರೆವಿಗೂ ಆ ಜಾಗದಿಂದ ಎದ್ದೇಳಬಾರದು ಎಂದು ನಿರ್ಧರಿಸಿದ. ಹಿಂದೆಲ್ಲಾ ಹೀಗೆ ಪ್ರಶ್ನೆ ಕೇಳಿದಾಗ ಗುರುಗಳು ನಕ್ಕು ಬಿಡುತ್ತಿದ್ದರು, ರಾಜೀವನೂ ಏನೋ ಅರ್ಥವಾದಂತೆ ಹೊರಟುಬಿಡುತ್ತಿದ್ದ. ಏನೂ ಅರ್ಥವಾಗಲಿಲ್ಲ ಎಂಬುದು ಆಮೇಲೆ ತಿಳಿಯುತ್ತಿತ್ತು.
ನಾನೇಕೆ ನಿನಗೆ ಸಂನ್ಯಾಸ ದೀಕ್ಷೆ ಕೊಡಬೇಕು ಎಂಬುದನ್ನು ನೀನು ಒಂದು ಪುಸ್ತಕದಲ್ಲಿ ಬರೆದು ತೆಗೆದುಕೊಂಡು ಬಾ. ಅದು ಹೊಸ ನೋಟ್ ಪುಸ್ತಕವಾಗಿರಲಿ. ಇನ್ನು ಮುಂದೆ ಆಗಾಗ ಆ ಪುಸ್ತಕ ನಿನಗೆ ಬೇಕಾಗಿರುತ್ತದೆ, ಎಂದರು ಗುರುಗಳು.
ಸರಿ ತನ್ನ ಪ್ರಶ್ನೆಗೆ ಕೇವಲ ನಗು ಬಿಟ್ಟು ವಾಕ್ಯಗಳ ರೂಪದಲ್ಲಿ ಬೇರೊಂದು ಉತ್ತರ ಬಂತೆಲ್ಲಾ ಎಂಬುದೆ ರಾಜೀವನಿಗೆ ಸಮಾಧಾನ. ನೋಟ್ ಪುಸ್ತಕ ತೆಗೆದುಕೊಂಡು, ಬರೆಯಲು ಪ್ರಾರಂಭಿಸಿದ, ರಾಜೀವ.
ಪುಸ್ತಕದಲ್ಲಿ ಮೊದಲ ಸಾಲು
ಗುರುಗಳು ಹೇಳಿದರೆಂದು ನಾನು ಇದನ್ನೆಲ್ಲಾ ಬರೆಯುತ್ತಿದ್ದೇನೆ ಹೊರತು, ನನ್ನ ನಾನು ಹೊಗಳಿಕೊಳ್ಳುವುದಕ್ಕಲ್ಲ
೧. ಧ್ಯಾನ. : ನನಗಷ್ಟೇ ಅಲ್ಲ, ಇಲ್ಲಿ ಆಶ್ರಮದಲ್ಲಿ ಎಲ್ಲರಿಗೂ ಗೊತ್ತು ನಾನು ಧ್ಯಾನದಲ್ಲಿ ಯಾವ ಮಟ್ಟ ತಲುಪಿದ್ದೇನೆಂದು. ಆಶ್ರಮದ ಧ್ಯಾನ ಮಂಟಪದಲ್ಲಿ ನಾನು ಧ್ಯಾನಕ್ಕೆ ಕುಳಿತುಕೊಂಡರೆ, ಕೆಲವೊಮ್ಮೆ ಗುರುಗಳೇ ಕಿವಿಯಲ್ಲಿ ಓಂಕಾರ ಹೇಳಿ ನನ್ನನ್ನು ಧ್ಯಾನದಿಂದ ಎಬ್ಬಿಸಿ, ಸಮಾಧಿ ಸ್ಥಿತಿಯಲ್ಲಿ ತುಂಬಾ ಹೊತ್ತು ಇರಬೇಡ, ಬೇಕಿದ್ದರೆ ಗಡಿಯಾರದಲ್ಲಿ ಅಲಾರಾಂ ಇಟ್ಟುಕೋ. ತೊಂಬಾ ಹೊತ್ತು ಸಮಾಧಿಗೆ ಹೋದರೆ, ವಾಪಸ್ ಬರುವುದು ಕಷ್ಟ ಎಂದಿದ್ದರು.
2. ಪ್ರವಚನ - ಇಪ್ಪತ್ತು ವರ್ಷದಿಂದ ಗುರುಗಳ ಪ್ರವಚನವನ್ನು ಕೇಳಿಸಿಕೊಳ್ಳುತ್ತಿರುವ ನಾನು, ಈಗ ಪ್ರವಚನ ಮಾಡಿದರೆ, ಕೆಲವೊಮ್ಮೆ ಆಶ್ರಮದ ಭಕ್ತರು, ಗುರುಗಳ ಪ್ರವಚನವನ್ನೇ ಕೇಳಿದ ಹಾಗಾಯಿತು ಎಂದು ಗುರುಗಳಿಗೇ ಹೇಳಿದ್ದರಂತೆ. ಇದನ್ನು ಗುರುಗಳು ನನ್ನೊಂದಿಗೆ ಹಂಚಿಕೊಂಡಿದ್ದರು. ಜನರ ಚಿತ್ರ ವಿಚಿತ್ರ ರೂಪಗಳು, ಸೌಂದರ್ಯ, ಭಾವಗಳು, ಪ್ರವಚನದ ಮಧ್ಯದಲ್ಲಿ ಆಗಾಗ ಓಡಾಡುತ್ತಿರುವ ಆಶ್ರಮದ ಭಕ್ತರು, ಪ್ರವಚನ ಮುಗಿಯುವ ತನಕ ಇರದೆ ಎದ್ದು ಹೋಗುವವರು, ಇವೆಲ್ಲಾ ಪ್ರಚನದ ಸುಗಮ ಹರಿಯುವಿಕೆಗೆ ತೊಂದರೆಯಾಗುತ್ತೆಂದು ನಾನು ತಿಳಿದುಕೊಂಡಿದ್ದೇನೆ. ಹಾಗಾಗಿ ನಾನು ಕಣ್ಣು ಮುಚ್ಚಿ ಪ್ರವಚನ ಮಾಡುತ್ತೇನೆ. ಜನಗಳನ್ನು ಸೇರಿಸುವಲ್ಲಿ ಹಿಡಿದಿಟ್ಟುಕೊಳ್ಳುವುದರಲ್ಲಿ ನಿನ್ನ ಸಾಧನೆ ಅದ್ಭುತ ಎಂದು ನನ್ನ ಸಹಪಾಠಗಳು ಹೇಳುತ್ತಿರುತ್ತಾರೆ.
3. ಗಾಯನ - ನಮ್ಮ ಆಶ್ರಮದಿಂದ ಹೊರಬಂದಿರುವ ಭಕ್ತಿಗೀತೆಗಳ ಕ್ಯಾಸೆಟ್‌ಗಳಲ್ಲಿ ನಾನು ಹಾಡಿರುವ ಕ್ಯಾಸೆಟ್‌ಗಳೇ ಹೆಚ್ಚು ವ್ಯಾಪಾರವಾಗಿರುವುದು. ಒಮ್ಮೆ ಹೊರಗಡೆ ಯಾವುದೋ ಭಕ್ತಿ ಗೀತೆಯ ಆಲ್ಬಮ್ ಮಾಡುತ್ತಿದ್ದಾರೆ, ನೀನು ಒಂದು ಹಾಡು ಹಾಡಬೇಕಂತೆ ಎಂದು ಗುರುಗಳು ಹೇಳಿದಾಗ, ನಾನು ನಿರಾಕರಿಸಿದ್ದೆ. ನನ್ನದೇನಿದ್ದರು ಆಶ್ರಮ ಮತ್ತು ಗುರುಗಳ ಸನ್ನಿಧಿಯಲ್ಲಿ ಮಾತ್ರ ಎಂದಿದ್ದೆ.
4. ಆಹಾರ - ನಾನು ಸಾತ್ವಿಕ ಆಹಾರವನ್ನೇ ತೆಗೆದುಕೊಳ್ಳುವುದು. ನಮ್ಮ ಆಶ್ರಮ ಮೂಲತಃ ಉತ್ತರ ಕರ್ನಾಟಕದ್ದಾಗಿದ್ದು, ಆಹಾರದಲ್ಲಿ ಈರುಳ್ಳಿ, ಬೆಳ್ಳುಳ್ಳಿ ಉಪಯೋಗಿಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಕಾಮ, ಕ್ರೋಧ ಪ್ರಚೋದಿಸುವ ಈ ತರಕಾರಿಗಳನ್ನು ನಾನು ಇಪ್ಪತ್ತು ವರ್ಷದಿಂದ ತಿಂದಿಲ್ಲ, ನನಗಾಗಿ ದಿನಾ ಸಾಧಾರಣವಾದ ಹುಳಿಯೋ, ಸಾರೋ ತಯಾರಾಗುತ್ತದೆ. ಅದು ಅಡುಗೆ ಮಾಡುವವರಿಗೆ ಕಷ್ಟವಾದರೆ, ನಾನು ಆ ಹೊತ್ತು ಸ್ವಲ್ಪ ಹಣ್ಣು ತಿಂದು ಮಲಗಿಬಿಡುತ್ತೇನೆ.
5. ಬ್ರಹ್ಮಚರ್ಯ - ಇಪ್ಪತ್ತು ವರ್ಷಕ್ಕೆ ಮುಂಚೆ ಇಲ್ಲೇ ಗುರುಗಳ ಸನ್ನಿಧಿಯಲ್ಲೇ ನನ್ನ ಉಪನಯನವಾಗಿದ್ದು. ಅಂದೇ ನನ್ನ ಜಾತಕ ನೋಡಿ ಗುರುಗಳು ಇವನು ನಮ್ಮ ಆಶ್ರಮದಲ್ಲೇ ಬ್ರಹ್ಮಚಾರಿಯಾಗಿ ಪಾಠಗಳನ್ನು ಕಲಿಯಲಿ ಅಂದರಂತೆ. ೬ ಜನ ಮಕ್ಕಳನ್ನು ಸಾಕುವುದು ಕಷ್ಟ ಎಂದು ತಿಳಿದಿದ್ದ ನನ್ನ ಅಪ್ಪ ಅಮ್ಮ ನನ್ನನ್ನು ಆಶ್ರಮದಲ್ಲೇ ಬಿಟ್ಟಿರು. ಹಾಗೇನಾದರು ನನಗೆ ಸಂನ್ಯಾಸಿ ಯೋಗವಿಲ್ಲದಿದ್ದರೆ ಗುರುಗಳು ಅಂದೇ ನನ್ನನ್ನು ಸೇರಿಸಿಕೊಳ್ಳುತ್ತಿರಲಿಲ್ಲ..
ಹತ್ತೇ ನಿಮಿಷದಲ್ಲಿ ಇದನ್ನೆಲ್ಲಾ ಬರೆದು ನೋಟ್ ಪುಸ್ತಕ ತೆಗೆದುಕೊಂಡು ಗುರುಗಳ ಬಳಿಗೆ ಹೋದ, ರಾಜೀವ. ಬರೆದಿದ್ದನ್ನು ಓದಲು ಪ್ರಾರಂಭಿಸಿದ. ಪುಸ್ತಕ ನನಗೆ ಕೊಡು, ನಾನೇ ಓದುತ್ತೇನೆ ಎಂದರು ಗುರುಗಳು. ಸುಮಾರು ಒಂದು ಗಂಟೆಗೆಳ ಕಾಲ ಪುಸ್ತಕವನ್ನು ನೋಡುತ್ತಾ ತಮ್ಮ ಮನಸ್ಸಿನಲ್ಲೇ ನಿಧಾನವಾಗಿ ಓದಿ ಮುಗಿಸಿದರು. ನಾಳೆ ಬೆಳಗ್ಗೆ ಈ ವಿಷಯವಾಗಿ ಚರ್ಚಿಸೋಣ ಅಂದು ಹೇಳಿ ನೋಟ್ ಪುಸ್ತಕ ಅವರ ಬಳಿಯೇ ಉಳಿಸಿಕೊಂಡರು. ಮತ್ತೆ ಗುರುಗಳಿಗೆ ನಮಸ್ಕಾರ ಮಾಡಿದ ರಾಜೀವ, ನಾನೇನು ತಪ್ಪು ಮಾಡಿಲ್ಲ ತಾನೆ ಎಂದು ಕೇಳಿದೆ, ಗುರುಗಳು ನಾನು ಎಷ್ಟೋ ವರ್ಷದಿಂದ ಕಾದು ಕುಳಿತಿದ್ದ ಸಮಯ ಈಗ ಬಂದಿದೆ. ಈ ದಿನದ ಪ್ರಸಂಗ ನನಗೆ ಸಂತೋಷವನ್ನೇ ತಂದಿದೆ. ನೀನು ವಿನಾ ಕಾರಣ ದುಃಖ ಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು.
ಮಾರನೇ ದಿನ ಬೆಳಗ್ಗೆ ಸ್ನಾನ ಸಂಧ್ಯಾವಂದನೆ ಮುಗಿಸಿ ಗುರುಗಳ ಕೊಠಡಿಗೆ ಹೋದ, ರಾಜೀವ. ಗುರುಗಳು ಅವನನ್ನು ಕುಳಿತುಕೊಳ್ಳಲು ಹೇಳಿ ಪುಸ್ತಕವನ್ನು ಅವನ ಕೈಗೆ ಕೊಟ್ಟು ಈಗ ನೀನು ಬರೆದಿರುವುದನ್ನು ಓದು ಎಂದರು. ಮೊದಲನೆಯದು ಧ್ಯಾನದ ಬಗ್ಗೆ ಓದಿದೆ.
ಆಗ ಗುರುಗಳ ಮಾತು. ಧ್ಯಾನದ ವಿಷಯ ಹೇಳುವುದಾದರೆ, ನೀನು ನನ್ನನ್ನು ಮೀರಿಸಿದ್ದೀಯ. ವಾತಾವರಣ ನಿಶ್ಯಬ್ಧದಿಂದ ಕೂಡಿದ್ದು ಆ ಸ್ಥಳ ಹಲವು ಜನರ ಧ್ಯಾನದಿಂದ ಪವಿತ್ರವಾಗಿದ್ದರೆ, ಒಬ್ಬ ಕಳ್ಳ ಕೂಡ ಆ ಜಾಗದಲ್ಲಿ ಕುಳಿತು ಧ್ಯಾನ ಮಾಡಬಹುದು. ನಿಜವಾದ ಸಾಧನೆ ಎಂದರೆ, ಜನನಿಬಿಡ ಪ್ರದೇಶದಲ್ಲಿ ಕುಳಿತು ಧ್ಯಾನ ಮಾಡುವುದು. ಇದು ನಿನಗೆ ಸಾಧ್ಯವೇ ಎಂದು ಗುರುಗಳು ಕೇಳಿದಾಗ, ರಾಜೀವ ಯೋಚಿಸುತ್ತಾ ಕುಳಿತೆ. ಸರಿ ಮುಂದಿನದು ಓದಲು ಹೇಳಿದರು. ಅದು, ಪ್ರವಚನದ ಬಗ್ಗೆ;
ಆಶ್ರಮಕ್ಕೆ ಬರುವ ಭಕ್ತರನ್ನು ನೀನು ಸಾಮಾನ್ಯ ಮನುಷ್ಯರಂತೆ ನೋಡುತ್ತಿದ್ದೀಯ. ಭಕ್ತರ ಒಳಗಿರುವ ದೇವರನ್ನು ನೀನು ಕಾಣುವುದಾದರೆ, ಕಣ್ಣು ಮುಚ್ಚಿ ಪ್ರವಚನ ಮಾಡುವ ಅವಶ್ಯಕತೆ ಇಲ್ಲ. ನಿನ್ನ ಮುಂದೆ ಓಡಾಡುತ್ತಿರುವ ಜನ, ಪ್ರವಚನದ ಅರ್ಧದಲ್ಲಿ ಎದ್ದು ಹೋಗುವವರು ಯಾರೂ ನಿನಗೆ ಕಾಣಿಸುವುದೇ ಇಲ್ಲ. ಭಗವಂತನ ಬಿಂಬ ನಿನ್ನ ಮುಂದೆ ಬಂದು ನಿನ್ನ ಪ್ರವಚನ ಕೇಳಿಸಿಕೊಳ್ಳುತ್ತಿರುವಂತೆ ಇರುತ್ತದೆ. ನೀನು ಬರೆದಿರುವ ಮುಂದಿನದು ಯಾವುದರ ಬಗ್ಗೆ, ಅದೇ ಗುರುಗಳೇ ಗಾಯನ ಎಂದು ಹೇಳಿದ ರಾಜೀವ.
ನನ್ನ ಕೊಠಡಿಯಲ್ಲೂ ಯಾವಗಲೂ ನೀನು ಹಾಡಿದ ಭಕ್ತಿಗೀತೆಗಳನ್ನು ನಾನು ಕೇಳುತ್ತಾ ಇರುತ್ತೇನೆ. ಬಹಳ ಶೃತಿಬದ್ಧವಾಗಿ ಭಕ್ತಿಯಿಂದ ನೀನು ಹಾಡುವೆ. ಆದರೆ ಹಾಡುವಾಗ ಶೃತಿಯ ಮೇಲೆ ನಿನ್ನ ಗಮನ ಹೆಚ್ಚಿದ್ದು ಎಲ್ಲೋ ಒಂದು ಕಡೆ ನೀನು ಭಗವಂತನನ್ನು ಹಾಡಿ ಹೊಗಳುವುದರಲ್ಲಿ ಬರುವ ಸಂತೋಷವನ್ನು ಕಾಣುತ್ತಿಲ್ಲ ಅನಿಸುತ್ತೆ ನನಗೆ. ಬೇರೆಯವರಿಗೆ ನೀನು ಉತ್ತಮ ಹಾಡುಗಾರ, ಆದರೆ ನೀನು ಅದರಿಂದ ನಿಜವಾಗಿಯೂ ಪರಮಾತ್ಮನ ಸಾಕ್ಷಾತ್ಕಾರ ಪಡೆಯಲು ಪ್ರಯತ್ನಿಸುತ್ತಿದ್ದೀಯಾ ಒಮ್ಮೆ ಯೋಚಿಸು. ಮುಂದಿನದು ನಿನ್ನ ಆಹಾರದ ಬಗ್ಗೆ.
ಸಂನ್ಯಾಸಿಯಾಗುವವನು ಅರಿಷಡ್ವರ್ಗಗಳನ್ನು ಗೆಲ್ಲಬೇಕು ನಿಜ. ಹಾಗೆಯೇ ಸೋಲನ್ನೆಂದು ಒಪ್ಪಿಕೊಳ್ಳುವ ಹಾಗಿಲ್ಲ. ಜೀವವೆ ಇಲ್ಲದ ಈರುಳ್ಳೀ ಬೆಳ್ಳುಳ್ಳಿ ನಿನ್ನ ಮನಸ್ಸನ್ನು ಹಾಳು ಮಾಡಬಹುದು ಎಂಬ ಭಯ ನಿನಗಿದ್ದರೆ ನಾಳೆ ಈ ಪ್ರಪಂಚವನ್ನು ಯಾವ ಧೈರ್ಯದಿಂದ ಎದುರಿಸಲು ಸಾಧ್ಯ. ಆಧ್ಯಾತ್ಮದಲ್ಲಿ ಪಳಗಿದ ಮೇಲೆ, ಹೊರಗಿನ ಯಾವುದೇ ಶಕ್ತಿ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರದು ಎಂಬುದನ್ನು ನಾವು ಅರಿತುಕೊಳ್ಳಬೇಕು. ಹಾಗಂತ ಇಷ್ಟವಿಲ್ಲದ್ದನ್ನು ತಿನ್ನು ಎಂದು ನಾನು ಹೇಳುತ್ತಿಲ್ಲ, ಆದರೆ ಭಯದಿಂದ ಆಹಾರವನ್ನು ಬಿಡುವುದು ಬೇಡ ಎಂದೆನಷ್ಟೆ. ಮುಂದಿನದು ಬ್ರಹ್ಮಚರ್ಯ.
ನಿನಗೊಂದು ವಿಷಯ ನಾನು ಹೇಳಬೇಕು, ಇಪ್ಪತ್ತು ವರ್ಷಗಳ ಮುಂಚೆ ನಿನ್ನನ್ನು ಬ್ರಹ್ಮಚಾರಿಯಾಗಿ ಇಲ್ಲಿ ಕರೆತಂದದ್ದು ಕೇವಲ ಸಂನ್ಯಾಸಿ ಮಾಡಲು ಅಲ್ಲ, ನೀನು ಈ ಆಶ್ರಮಕ್ಕೆ ಉತ್ತರಾಧಿಕಾರಿಯಾಗಬೇಕೆಂದು. ಆದರೆ ಈ ಆಶ್ರಮ ಮತ್ತು ಗುರುಗಳ ಬಗ್ಗೆ ನಿನ್ನ ನಿಷ್ಟೆ ಎಷ್ಟಿದೆ ಎಂದರೆ ಆಶ್ರಮದ ಬೇರೆ ವ್ಯವಹಾರಗಳ ಬಗ್ಗೆ ನಿನಗೆ ಆಸಕ್ತಿಯೇ ಇಲ್ಲ. ಇಲ್ಲಿನ ಆಡಳಿತ ಮಂಡಳಿಯವರೊಂದಿಗೆ ನೀನು ಮಾತನಾಡಬೇಕಾದ ರೀತಿ, ತೂಕವಿರುವಂತ ಮೌಲ್ಯಾಧಾರಿತವಾದ ಮಾತನ್ನು ವೇದವಾಕ್ಯ ಎಂಬಂತೆ ಅವರು ಸ್ವೀಕರಿಸುವಷ್ಟು ಯೋಗ್ಯತೆಯನ್ನು ನೀನು ಪಡೆದುಕೊಳ್ಳಬೇಕು.
ಎಲ್ಲವನ್ನೂ ಬಿಟ್ಟು ಜೀವನ ನಡೆಸುವುದು ಸಂನ್ಯಾಸವಲ್ಲ, ಎಲ್ಲದದರೊಂದಿಗೆ ಇದ್ದು, ಅವುಗಳಲ್ಲಿ ಇರದಂತೆ ಇರುವುದೇ ಸಂನ್ಯಾಸ.
ಇದೆಲ್ಲಾ ನನಗೆ ಹಿಂದೆಯೇ ಏಕೆ ಹೇಳಲಿಲ್ಲ ಎಂದು ರಾಜೀವ ಕೇಳಿದ. ನೀನು ಹಿಂದೆಂದೂ ಈ ರೀತಿ ಉತ್ತರಕ್ಕಾಗಿ ಪಟ್ಟು ಹಿಡಿದು ಕೂರಲಿಲ್ಲ ಎಂದರು ಗುರುಗಳು. ನಾನು ನಿನಗೆ ಏನು ಹೇಳಿದೆನೋ ಅದನ್ನೆಲ್ಲಾ ನಿನ್ನ ಪುಸ್ತಕದ ಕೊನೆಯಲ್ಲಿ ಬರೆದಿದ್ದೇನೆ. ನಿಧಾನವಾಗಿ ಓದು. ಸಧ್ಯದಲ್ಲೆ ನಿನಗೆ ಸಂನ್ಯಾಸ ದೀಕ್ಷೆ ಕೊಡಲು ಯೋಚಿಸುತ್ತಿದ್ದೇನೆ ಎಂದು ಹೇಳುತ್ತಾ ಗುರುಗಳು ತಮ್ಮ ಬ್ಯಾಗಿನಲ್ಲಿದ್ದ ಇನ್ನೊಂದು ನೋಟ್ ಪುಸ್ತಕ ತೆಗೆದು ಓದಲು ಪ್ರಾರಂಭಿಸಿದಾಗ ಅದು ಯಾವ ಪುಸ್ತಕ ಎಂದು ರಾಜೀವ ಕೇಳಿದ. ನನ್ನ ಸಂನ್ಯಾಸಕ್ಕೆ ಮುಂಚೆ ನನ್ನ ಗುರುಗಳು ನನ್ನ ಕೈಲಿ ಬರೆಸಿದ ನೋಟ್ ಪುಸ್ತಕ ಎಂದಾಗ, ತನ್ನ ಕೈಲಿರುವ ಪುಸ್ತಕ ತಾನು ಹುಷಾರಾಗಿ ಕಾಪಾಡಿಕೊಳ್ಳಬೇಕೆಂಬುದು ರಾಜೀವನಿಗೆ ಅರಿವಾಯಿತು.