ಕನ್ನಡದಲ್ಲಿ ಕಾಜಾಣ ಪಕ್ಷಿ ಎಂದು ಕರೆಯಲ್ಪಡುವ ಡ್ರಾಂಗೋ ಪಕ್ಷಿಗೆ ಸುಳ್ಳು ಪಕ್ಷಿ, ಮೋಸದ ಪಕ್ಷಿ ಎಂಬ ಹೆಸರುಗಳೂ ಇವೆ. ಕಾಗೆಯಂತೆ ಕಪ್ಪು ಬಣ್ಣ ಹೊಂದಿದ್ದು ಅಥವಾ ಕೆಲವೊಮ್ಮೆ ಕಂದು ಬಣ್ಣದಲ್ಲಿದ್ದು, ಇದರ ಬಾಲ ಆಂಗ್ಲ ವರ್ಣಮಾಲೆಯ ಡಬಲ್ಯು (W ) ರೀತಿ ಇರುತ್ತದೆ. ಬೆಂಗಳೂರಿನ ಒಳಗೆ ಹಾಗೂ ಸುತ್ತ ಇರುವ ದೊಡ್ಡ ದೊಡ್ಡ ಉಧ್ಯಾನವನಗಳಲ್ಲಿ, ಕೆರೆಗಳ ಬದಿಯಲ್ಲಿ ಇದು ಒಂದಾದರೂ ಕಂಡಿಲ್ಲವೆಂದರೆ ಆಶ್ಚರ್ಯವೇ ಸರಿ. ಕಪ್ಪು ಅಥವಾ ಕಂದು ಬಣ್ಣವಾದರು, ನೋಡಲು ಸುಂದರವಾಗಿರುವ ಪಕ್ಷಿ ಇದು.
ಇದನ್ನು ಮೋಸದ ಪಕ್ಷಿ ಎನ್ನಲು ಕಾರಣವೇನು ಎಂಬುದಕ್ಕೆ ಹಲವು ಪಕ್ಷಿ ಪ್ರಿಯರು ಭಾರತದ ಹಾಗೂ ಹೊರಗಿನ ದೇಶಗಳಲ್ಲಿ ಇದರ ಬಗ್ಗೆ ಮಾಡಿರುವ ಸಂಶೋಧನೆಗಳೇ ಉತ್ತರ ನೀಡುತ್ತವೆ. ಇಲ್ಲಿಯವರೆಗೆ ಸಂಶೋಧನೆಯಿಂದ ತಿಳಿದುಬಂದಿರುವುದು, ಈ ಕಾಜಾಣ ಪಕ್ಷಿಗಳು ಸುಮಾರು 80 ಬೇರೆ ಬೇರೆ ಪಕ್ಷಿಯ ಕರೆಗಳನ್ನು ಅನುಕರಣೆ ಮಾಡಬಲ್ಲದು ಎಂಬುದು. ರಾಕೆಟ್ ಟೈಲ್ಡ್ ಡ್ರಾಂಗೋ ಅಂದರೆ ಕನ್ನಡದಲ್ಲಿ ಭೀಮರಾಜ ಎಂದು ಕರೆಸಿಕೊಳ್ಳುವ ಈ ಕಾಜಾಣದ ಜಾತಿಯ ಹಕ್ಕಿಯ ಬಾಲವು ಹಂಚಿನ ಕಡ್ಡಿಯಂತೆ ಉದ್ದವಾಗಿರುತ್ತದೆ. ಬೇರೆ ಪಕ್ಷಿಗಳ ಕರೆಗಳ ಅನುಕರಣೆಯಲ್ಲಿ ಈ ಭೀಮರಾಜ ಅದ್ವಿತೀಯನೇ ಹೌದು. ಒಂದು ಕಾಜಾಣ ಪಕ್ಷಿ ಎಷ್ಟು ಪಕ್ಷಿಗಳ ಕರೆಗಳನ್ನು ಅನುಕರಣೆ ಮಾಡುತ್ತದೆ ಎಂಬುದು ನಿಖರವಾಗಿ ಹೇಳಲಾಗುವುದಿಲ್ಲ ಆದರೆ 9 ರಿಂದ 32 ಪಕ್ಷಿಗಳ ಕರೆಗಳನ್ನು ಅನುಕರಣೆ ಮಾಡುತ್ತವೆ ಎಂದು ಸಂಶೋಧನೆ ತಿಳಿಸುತ್ತದೆ. . ಈ ವಿಚಿತ್ರ ಗುಣವನ್ನು ಕಾಜಾಣ ಪಕ್ಷಿ, ಸುಲಭವಾಗಿ ಊಟ ಸಂಪಾದಿಸಿಕೊಳ್ಳಲು ಹಾಗೂ ಬೇಟೆಯಾಡುವಾಗ ಬೇರೆ ಪಕ್ಷಿಗಳನ್ನು ಸ್ಪರ್ಧೆಯಿಂದ ಹೊರದಬ್ಬಲು ಉಪಯೋಗಿಸುತ್ತದೆ.
ಯಾವುದೇ ವೈರಿ ಪಕ್ಷಿಯು ಬರುತ್ತಿರುವ ಸೂಚನೆ ಕಂಡರೆ, ಪಕ್ಷಿಗಳು ತಮ್ಮ ತಮ್ಮ ಜಾತಿಯ ಪಕ್ಷಿಗಳಿಗೆ ಸಾಮಾನ್ಯಕ್ಕಿಂತ ಬೇರೆ ರೀತಿಯಲ್ಲಿ ಕರೆ ನೀಡಿ ಎಚ್ಚರಿಕೆ ನೀಡುತ್ತದೆ. ಆಗ ಪಕ್ಷಿಗಳು, ವೈರಿ ಪಕ್ಷಿಗಳ ಕೊಕ್ಕಿಗೆ ತಾವು ಸಿಗದಂತೆ ಜಾಗ ಕಾಲಿ ಮಾಡುತ್ತದೆ.
ಈ ಕಾಜಾಣ, ಮೊದಲು ಬೇರೆ ಪಕ್ಷಿಗಳ ಜೊತೆಗೆ ಸ್ನೇಹ ಮಾಡುತ್ತದೆ ಮತ್ತು ಅವು ಎಚ್ಚರಿಕ ಕೊಡುವ ಕರೆಯನ್ನು ಕಲಿತುಕೊಳ್ಳುತ್ತದೆ. ವೈರಿ ಪಕ್ಷಿ ಬಂದ ಸಂದರ್ಭದಲ್ಲಿ ಈ ಕಾಜಾಣವೂ ಎಚ್ಚರಿಕೆ ಕರೆ ನೀಡಿ ಅವುಗಳ ಪ್ರಾಣ ಉಳಿಸುತ್ತದೆ, ಹಾಗೆ ಆ ಪಕ್ಷಿಗಳಿಗೆ ತನ್ನ ಮೇಲೆ ನಂಬಿಕೆ ತರಿಸುತ್ತದೆ. ಒಮ್ಮೆ ತಾನು ಎಚ್ಚರಿಕೆ ಕರೆಯನ್ನು ಸರಿಯಾಗಿ ಕಲಿತಿದ್ದೇನೆ ಎಂದು ಖಾತ್ರಿಯಾದೊಡನೆ, ಇದರ ಮೋಸದ ಆಟ ಶುರು.
ಉದಾಹರಣೆಗೆ, ಯಾವುದೋ ಒಂದು ಸತ್ತ ಪ್ರಾಣಿಯ ಮಾಂಸ, ಅದನ್ನು ಬ್ಯಾಬ್ಲರ್ ಪಕ್ಷಿಗಳು ತಿನ್ನುತ್ತಿದ್ದರೆ, ಈ ಕಾಜಾಣ ಪಕ್ಷಿ, ಬ್ಯಾಬ್ಲರ್ ವೈರಿ ಪಕ್ಷಿಯಾದ ಶಿಖರ ಪಕ್ಷಿ ಬಂದಾಗ, ಬ್ಯಾಬ್ಲರ್‌ಗಳು ಕೊಡುವ ಎಚ್ಚರಿಕೆ ಕರೆಯನ್ನು ಅನುಕರಿಸುತ್ತದೆ. ಶಿಖರ ಪಕ್ಷಿ ಬಂದಿದೆ ಎಂದು ನಂಬಿ ಬ್ಯಾಬ್ಲರ್‌ಗಳು ಓಡಿಹೋಗುತ್ತವೆ. ಈಗ ಪೂರ್ತಿ ಬೀಗರೂಟ ಕಾಜಾಣದ್ದೆ.
ಆದರೆ, ಬೇಟೆಯಾಡುವಾಗ, ಸಾಮಾನ್ಯವಾಗಿ ಬೇರೆ ಬೇರೆ ಜಾತಿಯ ಪಕ್ಷಿಗಳು ಬಂದಿರುತ್ತವೆ. ಅಂತಹ ಸಂದರ್ಭಗಳಲ್ಲಿ ಈ ಕಾಜಾಣ, ದೊಡ್ಡ ಹದ್ದೋ ಅಥವಾ ಗರುಡದ ಕರೆಯನ್ನು ಜೋರಾಗಿ ಅನುಕರಿಸುತ್ತದೆ. ಎಲ್ಲ ಪಕ್ಷಿಗಳು ಒಂದೇ ಕೂಗಿಗೆ ಎಲ್ಲಂದರಲ್ಲಿ ಚೆಲ್ಲಾಪಿಲ್ಲಿ. ಮತ್ತೆ ಪೂರ್ತಿ ಬೇಟೆ ಕಾಜಾಣದ್ದೆ. ತನ್ನ ಜಾತಿಯ ಇತರ ಕಾಜಾಣಗಳನ್ನು ಸ್ಪರ್ಧೆಯಿಂದ ಹೊರಗೆ ಓಡಿಸಲು ಅನುಕರಣೆ ಮಾಡುವುದೂ ಉಂಟೆಂದು ಸಂಶೋದಕರು ಹೇಳುತ್ತಾರೆ.
ಕೆಲವು ಪಕ್ಷಿಗಳು ಈ ಕಾಜಾಣದ ಮೋಸದ ಬುದ್ದಿಯನ್ನು ಅರಿತಿದ್ದರೂ, ಕಾಜಾಣದ ಮೋಸದ ಅನುಕರಣೆಯ ಕೂಗಿನ ಗುಣಮಟ್ಟ ಹಾಗೂ ಸಾಮ್ಯತೆಗೆ ಸೋಲುತ್ತಲೇ ಇರುತ್ತವೆ.
ಪಕ್ಷಿ ಪ್ರಿಯರಿಗೆ ಈ ಕಾಜಾಣ ಪಕ್ಷಿಯ ಹೊಸ ಹೊಸ ನಡವಳಿಕೆಯ ಅರ್ಥಮಾಡಿಕೊಳ್ಳುವುದು ಹೆಚ್ಚು ಸಂಶೋಧನೆಗೆ ಅಣುವುಮಾಡಿಕೊಟ್ಟಿದೆ.