ಇಸವಿ 1978, ನನ್ನ ಅಪ್ಪನ ಸಂಬಳ ತಿಂಗಳಿಗೆ 300 ರೂಪಾಯಿಗಳು ಇರಬಹುದು. ಆಗ ನನ್ನ ತಂದೆ ಮನೆಗೆ ಒಂದು ಟೇಪ್‌ರೆಕಾರ್ಡರ್ ತರುತ್ತಾರೆ. ಅದೇನೆನಿಸಿತ್ತೋ ಗೊತ್ತಿಲ್ಲ, ಅವರ ಸಂಪರ್ಕದಲ್ಲಿದ ಎಲ್ಲರಿಂದಲೂ ಮತ್ತು ಮನೆಗೆ ಯಾರೇ ಬರಲಿ, ಅವರಿಂದ ಹಾಡು ಇಲ್ಲವೆ ಕವನ ಅಥವಾ ಸೀಸ ಪದ್ಯ ಅಥವಾ ಮಂತ್ರ, ಶ್ಲೋಕಗಳನ್ನು ಹೇಳಿಸಿ ರೆಕಾರ್ಡ್ ಮಾಡಿ ಇಡುವುದು ಅವರ ಹವ್ಯಾಸ. ಆಗಿನ ಕಾಲಕ್ಕೆ ಅವರಿಗೆ ಬರುತ್ತಿದ್ದ ಆ ಸಂಬಳಕ್ಕೆ ಇದು ಒಂದು ಶೋಕಿ ಎಂದರೆ ತಪ್ಪಾಗದು. ಹೀಗೆ ಅವರು ಒಟ್ಟು ರೆಕಾರ್ಡ್ ಮಾಡಿದ್ದು ಒಂದೊಂದು ಗಂಟೆ ಅವಧಿಯ ಆರು ಕ್ಯಾಸೆಟ್‌ಗಳು.
ಇಸವಿ ೨೦೦3 ನನ್ನ ಅಮ್ಮನ ಮರಣದ ನಂತರ ಅಪ್ಪ ಏಕಾಂತದಲ್ಲಿ ಆ ಹಾಡುಗಳನ್ನು ತಮ್ಮ ಹಳೆಯ ಟೇಪ್‌ರೆಕಾರ್ಡರ್‌ನಲ್ಲಿ ಕೇಳಿಸಿಕೊಳ್ಳುತ್ತಿದ್ದರು. ಕ್ಯಾಸೆಟ್ ಹಳೆಯದಾದ್ದರಿಂದ ಧ್ವನಿ ಮುದ್ರಣದ ಗುಣಮಟ್ಟ ಅಷ್ಟೇನೂ ಚೆನ್ನಾಗಿರಲಿಲ್ಲ., ನಾನು ಆ ಧ್ವನಿಮುದ್ರಣಗಳನ್ನು mp3 ಗೆ ಬದಲಾಯಿಸಿ ಅವರಿಗೆ ಒಂದು mp3 ಪ್ಲೇಯರ್ ತಂದು ಕೊಟ್ಟು ಅದರಲ್ಲಿ ಎಲ್ಲಾ ಧ್ವನಿಮುದ್ರಣವನ್ನು ಹಾಕಿಕೊಟ್ಟಿದ್ದೆ. ನನ್ನ ತಂದೆ ಅದನ್ನು ಆಲಿಸುತ್ತಾ ಅವರದೇ ಯಾವುದೋ ಒಂದು ಸುಂದರ ಲೋಕದಲ್ಲಿ ವಿಹರಿಸುತ್ತಿದ್ದರು. ನಾನು ಆಗ ಲಭ್ಯವಿದ್ದ ಕೆಲವು ತಂತ್ರಾಂಶಗಳನ್ನು ಬಳಸಿ ಧ್ವನಿಮುದ್ರಣದ ಗುಣಮಟ್ಟವನ್ನು ಹೆಚ್ಚಿಸಿದ್ದೆ.
ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ನನ್ನ ಕಂಪ್ಯೂಟರ್‌ನಲ್ಲಿ ಇರುವ ಎಲ್ಲಾ ಫೈಲ್ಗಳನ್ನು ನೋಡಲು ಸಮಯ ಸಿಕ್ಕತು. ಆಗ ಮತ್ತೆ ನೋಡಿದ್ದು ನನ್ನ ತಂದೆಯು ಸೃಷ್ಟಿಸಿದ್ದ ಈ ಅಮೂಲ್ಯವಾದ ಆಸ್ತಿ. ಇದರಲ್ಲಿರುವ ಶೇಕಡ 70ರಷ್ಟು ಧ್ವನಿಗಳು ಈಗಾಗಲೇ ಶಿವನ ಪಾದ ಸೇರಿಯಾಗಿದೆ. ನಾನು ಹೇಳಿರುವ ಪದ್ಯ "ನಮ್ಮ ಮನೆಯಲೊಂದು ಸಣ್ನ ಪುಟ್ಟ ಪಾಪವಿರುವುದು", ಅಕ್ಕ ಸಂಗೀತ ಕಲಿಯುತ್ತಿದ್ದಾಗ ಹೇಳುತ್ತಿದ್ದ ಹಾಡುಗಳು, ತಾತಂದಿರ ಮಂತ್ರಗಳು, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅಜ್ಜಿಯರು ಹಾಡಿರುವ ಹಾಡುಗಳು, ಅಪ್ಪನ ಗೆಳೆಯರು ಹೇಳಿರುವ ಭಕ್ತಿಗೀತೆಗಳು, ದೊಡ್ಡಪ್ಪನ ತೆಲುಗು ಸೀಸ ಪದ್ಯ ಇನ್ನೂ ಏನೇನೋ.
ಈ ಹಾಡುಗಳಲ್ಲಿ, ನನ್ನ ತಂದೆಯ ತಾಯಿ ಹೇಳಿರುವ ಒಂದು ತೆಲುಗು ಹಾಡು ಜಯಮಂಗಳ ಶುಭಮಂಗಳ ಎಂದು. ಇದರಲ್ಲಿ ಮನೆಯಲ್ಲಿರುವ ಪ್ರತಿಯೊಬ್ಬರ ಗುಣಗಳ ಬಗ್ಗೆ ಮೂರು ಸಾಲು ಹಾಡಿ ಕಡೆಗೆ ಅವರ ಹೆಸರನ್ನು ಹೇಳಿ ಜಯಮಂಗಳ ಶುಭಮಂಗಳ ಎಂದು ಹಾಡುತ್ತಾರೆ. ಹೀಗ ಹಾಡುವಾಗ ನಮ್ಮ ತಾತನ ಹೆಸರಿನ ಸರದಿ ಬಂದಿದೆ. ಗಂಡನ ಬಗ್ಗೆ ಅಜ್ಜಿಯು ಮೂರು ಸಾಲುಗಳನ್ನು ಹೇಳಿ, ಗಂಡನ ಹೆಸರು ಹೇಳಲು ನಾಚಿಕೆ ಪಟ್ಟುಕೊಳ್ಳುತ್ತಿರುವಾಗ ನಮ್ಮ ತಾತ ಸುಬ್ಬರಾಯ ಶಾಸ್ತ್ರಿ ಅಂತ ಹೇಳು ಎಂದು ಜೋರಾಗಿ ಕೂಗಿರುವುದು ಧ್ವನಿಮುದ್ರಣವಾಗಿದೆ. ಸುಮಾರು ಆರು ಗಂಟೆಗಳ ಈ ಧ್ವನಿಮುದ್ರಣವನ್ನು ಇತ್ತೀಚೆಗೆ ಮನೆಯವರೆಲ್ಲಾ ಸಾಕಷ್ಟು ಕೇಳುತ್ತಿದ್ದೇವೆ.
ಹಾ, ಈ ನನ್ನ ತಂದೆಯ ಹವ್ಯಾಸ ನನ್ನ ಮೇಲೂ ಸ್ವಲ್ಪ ಪರಿಣಾಮ ಭೀರಿ ನನ್ನ ತಾಯಿಯ ತಾಯಿ ಅಂದರೆ ಅಜ್ಜಿಯ ಸುಮಾರು 15 ಹಾಡುಗಳು, ಹಾಗೂ ನನ್ನ ತಾಯಿಯ ತಂಗಿಯ ಸುಮಾರು 30 ಹಾಡುಗಳನ್ನು ನಾನು ಅವರು ಬದುಕಿದ್ದಾಗ ರೆಕಾರ್ಡ್ ಮಾಡಿದ್ದೇನೆ. ಬ್ಯಾಂಕಿನ ಮೊದಲ ಸಂಬಳದಲ್ಲೇ ನಾನು ಒಂದು ಕ್ಯಾಮೆರಾ ಖರೀದಿಮಾಡಿದ್ದೆ. ನಮ್ಮ ಮನೆಗೆ ಯಾವುದೇ ಗಂಡ ಹೆಂಡಿರ ಜೋಡಿ ಬಂದರೆ ಅವರ ಒಂದು ಫೋಟೋ ತೆಗೆಯುವುದು ನನ್ನ ಹವ್ಯಾಸವಾಗಿತ್ತು. ಹಾಗಾಗಿ ಈಗ ನನ್ನ ಮನೆಯಲ್ಲಿ ಸುಮಾರು 60 ಜೋಡಿಗಳ ಫೋಟೋಗಳು ಸುರಕ್ಷಿತವಾಗಿದೆ.
ಸುಮಾರು ಹಾಡುಗಳನ್ನು / ಧ್ವನಿಗಳನ್ನು ಈಗ ವಿಂಗಡಿಸಿ ಹಾಡಿದವರ ಮಕ್ಕಳು ಮೊಮ್ಮಕ್ಕಳಿಗೆ ಕಳಿಸಿದೆ. ಅವರೆಲ್ಲಾ ಬಹಳ ಸಂತೋಷಪಟ್ಟರು. ಹಾಗೇ ಫೋಟೋಗಳನ್ನು ಸ್ಕ್ಯಾನ್ ಮಾಡಿ ಕಳಿಸುತ್ತಿದ್ದೇನೆ.
ಈಗ ಹೇಳಿ, ನಾವು ನಮಗೆ ಇಷ್ಟವಾದ ವಿಷಯಗಳ ಬಗ್ಗೆ ಮಾತನಾಡಿ ವೀಡಿಯೋಗಳನ್ನು ಏಕೆ ಮಾಡಿಡಬಾರದು. ಮುಂದೆ ನಮ್ಮ ಮಕ್ಕಳು ಮೊಮ್ಮಕ್ಕಳು ಇದನ್ನು ವೀಕ್ಷಿಸುತ್ತಾ ಸಂತೋಷಪಡುವುದರಲ್ಲಿ ಅನುಮಾನವಿಲ್ಲ. ಸಾಹಿತ್ಯ ದಾಸೋಹಿಗಳಿಗೇನೂ ತೊಂದರೆ ಇಲ್ಲ. ಈಗಂತೂ ನಾವು ದಾಸೋಹದಲ್ಲಿ ಪ್ರಸ್ತುತಿಪಡಿಸುವ ವೀಡಿಯೋಗಳು ಯೂಟ್ಯೂಬ್‌ಸೇರಿ ಖಾಯಂ ಆಗಿ ಉಳಿಯುತ್ತಿದೆ. ಆದರೆ ದಾಸೋಹ ಅಷ್ಟೇ ಅಲ್ಲ ಇನ್ನೂ ಯಾವುದಾದರೂ ವಿಷಯಗಳ ಬಗ್ಗೆ ಮಾತನಾಡಿ ವೀಡಿಯೋ ಮಾಡಿ ಭದ್ರವಾಗಿಡಿ. ನಿಮ್ಮದಷ್ಟೇ ಅಲ್ಲ ನಿಮ್ಮ ಮನೆಯವರಿಗೆಲ್ಲಾ ಹೀಗೆ ಮಾಡಲು ಹೇಳಿ. ಮುಂದೊಂದು ದಿನ ಈ ವೀಡಿಯೋಗಳು ಇನ್ಯಾರಿಗೋ ಅಮೂಲ್ಯವಾದ ಆಸ್ತಿಯಾಗಿ ಕಂಡರೆ ಆಶ್ಚರ್ಯವಿಲ್ಲ.
ವೀಡಿಯೋಗಳನ್ನು ಮಾಡುವಾಗ ದಾಸೋಹದಲ್ಲಿ ಓದುವಂತೆ ಓದಬೇಡಿ. ತಲೆ ತಗ್ಗಿಸಿ ಓದುವ ವೀಡಿಯೋ ನೋಡಲು ಮಜವೇನೂ ಇರುವುದಿಲ್ಲ. ಬಿಚ್ಚುಮನಸ್ಸಿನಿಂದ, ವಿಶಾಲ ಹೃದಯದಿಂದ ನಿಮ್ಮ ಇಷ್ಟವಾದ ವಿಷಯಗಳ ಬಗ್ಗೆ ಮಾತನಾಡಿ, ನೀವು ಬರೆದ ಕಥೆಗಳನ್ನು, ಲೇಖನಗಳನ್ನು ಓದುವುದಕ್ಕಿಂತ ನೇರವಾಗಿ ಅದರ ವಿಷಯಗಳನ್ನು ಹಂಚಿಕೊಳ್ಳಿ.
ಈ ನಿಟ್ಟಿನಲ್ಲಿ ವೀಡಿಯೋ ಮುದ್ರಿಸಲು, ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲು ತಾಂತ್ರಿಕ ಸಹಾಯ ನೀಡಲು ನಾವು ಯಾವಾಗಲೂ ಸಿದ್ದ.
ಬನ್ನಿ, ಹಳೆಯ ನೆನಪುಗಳನ್ನು ಉಳಿಸೋಣ ಹಾಗೆಯೇ ಹೊಸ ನೆನಪುಗಳ ಸೃಷ್ಠಿಮಾಡೋಣ.