ಮಾಮಿಗೆ ಜೋತ ಮಾಡು, ಒಳ್ಳೆ ಬುದ್ಧಿ ಕೊಡು ಅಂತ ಕೇಳು ಎಂಬುದು ಅಮ್ಮ ಹೇಳಿಕೊಟ್ಟ ಮೊದಲ ಮಾತುಗಳು ಇರಬಹುದು. ತೊದಲು ನುಡಿಯಲ್ಲಿ ಅಮ್ಮ ಹೇಳಿಕೊಟ್ಟ ಪದಗಳನ್ನು ಮುದ್ದು ಮುದ್ದಾಗಿ ನಾನು ಹೇಳಿದಾಗ ಎಲ್ಲರೂ ಸಂತೋಷ ಪಟ್ಟಿರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಬಹುಷಃ ನನ್ನ ಮತ್ತು ದೇವರ ಮಾತುಕತೆ ಇಲ್ಲಿಂದ ಪ್ರಾರಂಭವಾಗಿರುತ್ತದೆ.
ನನಗೆ ಜ್ಞಾಪಕವಿರುವ ಹಾಗೆ ಶಾಲೆಯಲ್ಲಿ ನಾನು ಮನೆ ಪಾಠವನ್ನು ಬರೆದುಕೊಂಡು ಹೋಗದಿರುವ ಸಂದರ್ಭದಲ್ಲಿ ಅಥವಾ ಪರೀಕ್ಷೆಗೆ ತಯಾರಿ ಮಾಡದೆ ಇದ್ದ ಸಂದರ್ಭಗಳಲ್ಲಿ ದೇವರೇ ಟೀಚರ್ ಶಾಲೆಗೆ ಬರದಂತೆ ಏನಾದರೂ ಮಾಡು ಎಂದು ಕೇಳಿಕೊಂಡದ್ದು ಈಗಲೂ ಜ್ಞಾಪಕವಿದೆ. ಒಮ್ಮೆ ಹೀಗೆ ಕೇಳಿಕೊಂಡಾಗ ಟೀಚರ್ ಯಾವುದೋ ಗಾಡಿಗೆ ಸಿಕ್ಕಿ ಆಕ್ಸಿಡೆಂಟ್ ಆಗಿ ಎರಡು ತಿಂಗಳು ಶಾಲೆಗೆ ಬರದೇ ಇರುವಂತೆ ಆಗಿದ್ದು ಅಚ್ಚರಿ ಉಂಟುಮಾಡಿತ್ತು. ಅದಾದ ಮೇಲೆ ಈ ರೀತಿಯ ಮನವಿಗಳನ್ನು ದೇವರಲ್ಲಿ ಮಾಡುವುದನ್ನು ಬಿಟ್ಟೆ.
ಶಾಲೆಯಲ್ಲಿ ಗೆಳೆಯರ ಜೊತೆ ಆಟವಾಡುತ್ತಿದ್ದಾಗ ಒಮ್ಮೊಮ್ಮೆ ದೇವರಾಣೆ ತಾಯಿ ಆಣೆ ಹೀಗೆ ನಿಜ ನಾನು ಹೇಳುತ್ತಿದ್ದೇನೆ ಎಂದು ಖಾತ್ರಿ ಪಡಿಸುವುದಕ್ಕಾಗಿ ಆಣೆಗಳನ್ನು ಇಟ್ಟಿದ್ದು ಉಂಟು. ಕೆಲವೊಮ್ಮೆ ಸುಳ್ಳನ್ನು ಹೇಳಿ ಅಮ್ಮನ ಮೇಲೆ ಆಣೆ ಮಾಡಿದ್ದ ಸಂದರ್ಭಗಳೂ ಇದೆ. ತಪ್ಪಾಗಿ ಆಣೆ ಮಾಡಿದ ಸಂದರ್ಭದಲ್ಲಿ ದೇವರೊಂದಿಗೆ ಮಾತನಾಡುತ್ತ ನನ್ನಮ್ಮನಿಗೆ ಏನೂ ಮಾಡಬೇಡ ಇನ್ನು ಮುಂದೆ ಯಾವತ್ತೂ ಅಮ್ಮನ ಮೇಲೆ ಆಣೆ ಇಟ್ಟು ಸುಳ್ಳನ್ನು ಹೇಳುವುದಿಲ್ಲ ಎಂದು ಮನವಿ ಮಾಡಿದ್ದೆ
ಹೈಸ್ಕೂಲಿಗೆ ಬರುವ ಹೊತ್ತಿಗೆ ಉಪನಯನವಾಗಿತ್ತು. ಅರ್ಥವೇ ಗೊತ್ತಿಲ್ಲದ ಸಂಸ್ಕೃತ ಮಂತ್ರಗಳನ್ನು ಬಾಯಿಪಾಠ ಮಾಡಿದ್ದೆ. ದಿನಾ ಬೆಳಗ್ಗೆ ಸಂಧ್ಯಾವಂದನೆಯಲ್ಲಿ ದೇವರಲ್ಲಿ ಏನು ಕೇಳಿಕೊಳ್ಳುತ್ತಿದ್ದೇನೆ ಎಂದೇ ಗೊತ್ತಿರಲಿಲ್ಲ ಆದರೆ ಉಪನಯನವಾದ ಮೇಲೆ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದು ಎಷ್ಟೋ ಜನ ಹೇಳಿದ್ದು ಕೇಳಿ ಸಂಧ್ಯಾವಂದನೆಯ ಕೊನೆಯಲ್ಲಿ ನನ್ನನ್ನು ಬುದ್ಧಿವಂತನಾಗಿ ಮಾಡು ಎಂದು ದೇವರನ್ನು ಕೇಳಿದ್ದು ಉಂಟು. 45 ಜನರಿದ್ದ ಕ್ಲಾಸಿನಲ್ಲಿ 45ರಿಂದ 43ನೇ ರಾಂಕ್‌ಗೆ ಇಳಿದೆ. ಯಾವ ಬುದ್ಧಿವಂತಿಕೆಯಿಂದ ಅಲ್ಲ . ಆದರೆ ದೇವರು ಕ್ಲಾಸಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋಗುವಂತೆ ಮಾಡಿದ್ದ ಹಾಗಾಗಿ ಇದ್ದದ್ದೆ 43 ಜನ ಹಾಗೂ ನನ್ನದು 43ನೇ ರಾಂಕ್.
ಕಾಲೇಜಿಗೆ ಬರುವ ಹೊತ್ತಿಗೆ ಸಾಕಷ್ಟು ಬುದ್ಧಿ ಬಂದಿತ್ತು . ಪರೀಕ್ಷೆ ಬರೆಯುವಾಗ ದೇವರೇ ನನ್ನ ಪ್ರಯತ್ನ ನಾನು ಮಾಡಿದ್ದೇನೆ ಒಳ್ಳೆಯ ಅಧ್ಯಾಪಕರ ಕೈಯಲ್ಲಿ ನನ್ನ ಉತ್ತರಪತ್ರಿಕೆ ಹೋಗಲಿ . ಅವರಿಗೆ ನನಗೆ ಒಳ್ಳೆಯ ಅಂಕಗಳನ್ನು ಕೊಡುವ ಮನಸ್ಸನ್ನು ಕೊಡು ಎಂದು ಬೇಡಿಕೊಳ್ಳುತ್ತಿದ್ದೆ. . ಅದೇ ರೀತಿ ಕೆಲವೊಮ್ಮೆ ಯಾವುದಾದರೂ ಒಂದು ಪಾಠವನ್ನು ಓದದಿದ್ದರೆ ಪರೀಕ್ಷೆಗೆ ಮುನ್ನ ದೇವರೇ ಈ ಪಾಠದಿಂದ ಯಾವುದೇ ಪ್ರಶ್ನೆ ಬರದಂತೆ ನೋಡಿಕೋ ಎಂದು ಮನವಿ ಮಾಡಿದ್ದು ಉಂಟು.
ಕಾಲೇಜಿನಲ್ಲಿ ಕೆಲವು ಹುಡುಗರು ಸುಂದರವಾದ ಹುಡುಗಿಯರನ್ನು ನೋಡಿ ಅವರು ದೇವಸ್ಥಾನಕ್ಕೆ ಹೋದಾಗ ಇವರೂ ಹೋಗಿ ದೇವರೇ ಇಂತಹ ಹುಡುಗಿಯನ್ನು ನನಗೆ ಮದುವೆ ಮಾಡಿಕೊಳ್ಳುವಂತೆ ಮಾಡು ಎಂದು ದೇವರಲ್ಲಿ ಕೇಳಿಕೊಳ್ಳುವುದು ನಮ್ಮ ಕಾಲದಲ್ಲಿ ಸರ್ವೇಸಾಮಾನ್ಯ. ಆದರೆ ಸಣ್ಣ ವಯಸ್ಸಿನಲ್ಲೇ ದೇಶ ಸೇವೆ ಮಾಡಬೇಕೆಂಬ ಹಂಬಲದಿಂದ ಬೆಳೆದ ನನಗೆ ಈ ವ್ಯಾವಹಾರಿಕ ಹೆಣ್ಣು ಪ್ರೀತಿ ಪ್ರೇಮ ಇದ್ಯಾವುದರ ಕಡೆಗೂ ಮನಸ್ಸು ಹೋಗಲೇ ಇಲ್ಲ. ಈ ವಿಷಯದಲ್ಲಿ ನಾನು, ದೇವರೇ ನನಗೆ ಪ್ರೀತಿ, ಪ್ರೇಮ,ಹೆಣ್ಣು ಹೊನ್ನು ಮಣ್ಣಿನಿಂದ ದೂರವಿಡು ಎಂದು ಮನವಿ ಮಾಡಿದ್ದುಂಟು.
ಜ್ವರ ಬಂದಾಗ ಆರೋಗ್ಯ ಹಾಳಾಗಿದ್ದಾಗ ದೇವರೊಂದಿಗೆ ಮಾತನಾಡಿದ್ದು ಉಂಟು. ದೇವರೇ ಇನ್ನು ಮೇಲೆ ನಾನು ಐಸ್ಕ್ರೀಮ್ ತಿನ್ನುವುದಿಲ್ಲ ಪಾನಿಪುರಿ ಮಸಾಲಾಪುರಿ ತಿನ್ನುವುದಿಲ್ಲ. ಸೀಬೆಹಣ್ಣು ಬಾಳೆಹಣ್ಣು ತಿನ್ನುವುದಿಲ್ಲ ಎಂದು ದೇವರಲ್ಲಿ ಪ್ರಮಾಣ ಮಾಡುತ್ತಿದ್ದೆ. ಮನೆಯಲ್ಲೇ ಊಟ ಮಾಡುತ್ತಾ ನನ್ನ ಆರೋಗ್ಯವನ್ನು ನಾನು ಚೆನ್ನಾಗಿ ನೋಡಿಕೊಳ್ಳುವೆ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದುಂಟು. ಆರೋಗ್ಯ ಸರಿಯಾದ ಮೇಲೆ ಪ್ರಮಾಣ ಮತ್ತು ಪ್ರಾರ್ಥನೆಯ ನೆನಪೇ ಇರುತ್ತಿರಲಿಲ್ಲ.
ಇನ್ನು ಬ್ಯಾಂಕಿಗೆ ಸೇರಿದ ಮೇಲೆ ನಾನು ದೇವರನ್ನು ಹೆಚ್ಚಾಗಿ ಜ್ಞಾಪಿಸಿಕೊಂಡು ಅವನೊಂದಿಗೆ ಮಾತನಾಡುತ್ತಿದ್ದದ್ದು ಕೇವಲ ನಮ್ಮ ವರ್ಗಾವಣೆಗಳ ಸಮಯದಲ್ಲಿ ಮಾತ್ರ. ದೇವರೇ ಒಳ್ಳೆಯ ಶಾಖೆಗೆ ವರ್ಗಾವಣೆ ಮಾಡಿಸು ಎಂದು ಕೇಳುವಂತಹ ಸಂದರ್ಭ ಎರಡು ಮೂರು ಸಾರಿ ಬಂದಿರಬೇಕು. ದೇವರು ನಾನು ಕೇಳಿದ ಶಾಖೆಗಳನ್ನು ಕೊಡಿಸದಿದ್ದರೂ ನನಗೆ ಅನುಕೂಲವಾಗುವಂತಹ ಶಾಖೆಗಳನ್ನು ಕೊಡಿಸಿದ್ದ ಎಂದು ಹೇಳಬಯಸುತ್ತೇನೆ.
ದೊಡ್ಡ ಕಾಯಿಲೆಗೆ ತುತ್ತಾಗಿ ತನ್ನ ದಿನಗಳನ್ನು ಎಣಿಸುತ್ತಿದ್ದ ಅಮ್ಮನ ನರಳಾಟ ನೋಡಲಾಗದೆ ಒಂದು ದಿನ ಬೆಳಗ್ಗೆ ನಾನು ಮತ್ತು ನನ್ನ ತಂದೆ ದೇವರೇ ಈ ನರಳಾಟ ಅವಳು ಸಹಿಸಲಾಗುತ್ತಿಲ್ಲ, ನಮಗೆ ನೋಡಲಾಗುತ್ತಿಲ್ಲ ಬೇಗ ನಿನ್ನಲ್ಲಿಗೆ ಕರೆದುಕೊಂಡು ಬಿಡಬಾರದೆ ಎಂದು ಪ್ರಾರ್ಥಿಸಿದ್ದೆವು . ನಮ್ಮ ಮನವಿಯನ್ನು ಕೇವಲ ಮೂರು ಗಂಟೆಗಳಲ್ಲಿ ದೇವರು ಪೂರೈಸಿದ್ದ.
ಬ್ಯಾಂಕಿನಿಂದ ನಿವೃತ್ತಿಯಾದ ಮೇಲೆ ಹಲವು ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದೆ. ಆ ಹೊತ್ತಿಗೆ ನನ್ನ ಮನವಿಯ ಸಾಲುಗಳು ಅಥವಾ ದೇವರೊಂದಿಗೆ ಮಾತನಾಡುವ ಸಾಲುಗಳು ಬದಲಾಗಿತ್ತು. ದೇವರೇ ನನಗೆ ಜೀವನಕ್ಕೆ ಎಷ್ಟು ಬೇಕು ಅಷ್ಟು ಹಣವನ್ನು ಕೊಟ್ಟಿದ್ದೀಯಾ ಆರೋಗ್ಯವನ್ನು ಕೊಟ್ಟಿದ್ದೀಯ, ಒಳ್ಳೆಯ ಗೆಳೆಯರನ್ನು ಕೊಟ್ಟಿದ್ದೀಯಾ ಒಬ್ಬ ಮನುಷ್ಯನಿಗೆ ಏನು ಬೇಕು ಎಲ್ಲವನ್ನು ಕೊಟ್ಟಿದ್ದೀಯಾ, ಆದರೆ ಇವೆಲ್ಲದರೊಂದಿಗೆ ಬೇಕೋ ಬೇಡವೋ ನೀನು ಕೊಡುವ ಅಹಂಕಾರವನ್ನು ಮಾತ್ರ ವಾಪಸ್ ತೆಗೆದುಕೊಂಡು ಬಿಡು ಎಂದು ಬೇಡುತ್ತಿದ್ದೆ. ದೇವರ ಮುಂದೆ ಭಕ್ತಿಯಿಂದ ನಿಲ್ಲುತ್ತಿದ್ದ ಇತರ ಭಕ್ತರಿಗಾಗಿ, ದೇವರೆ ಅವರ ಯಾವುದೇ ಧರ್ಮದಿಂದ ಕೂಡಿದ ಇಷ್ಟಾರ್ತಗಳನ್ನು ಪೂರೈಸು ಎಂದು ಮನವಿ ಮಾಡಿದ್ದು ಉಂಟು.
ಇತ್ತೀಚಿನ ದಿನಗಳಲ್ಲಿ ವಿಷ್ಣು ಪುರಾಣವನ್ನು ಓದುತ್ತಿದ್ದಾಗ ಒಂದು ಶ್ಲೋಕದಲ್ಲಿ ಹೀಗೆ ಬರೆಯುತ್ತಾರೆ. ನನಗೆ ಅಧಿಕಾರ, ಯಶಸ್ಸು, ವಿದ್ವತ್ತು, ಸುಖ ಆನಂದ ಮೋಕ್ಷ ಇವು ಯಾವುದೂ ಬೇಡ. ಮುಂದಿನ ಜನ್ಮ ಎಂಬುದು ಇದ್ದರೆ ನಾನು ಮಾನವನಾಗಿಯಾಗಲಿ, ಪ್ರಾಣಿಯಾಗಾಗಲಿ, ಕ್ರಿಮಿಯಾಗಿಯಾಗಲಿ ಇಲ್ಲವೇ ಕಲ್ಲು ಬಂಡೆಯಾಗಿ ಭಾರತದಲ್ಲೇ ಹುಟ್ಟುವಂತೆ ಮಾಡು ಎಂಬುದು ಆ ಶ್ಲೋಕದ ಅರ್ಥ.
ಸದ್ಯಕ್ಕೆ ದೇವಸ್ಥಾನಕ್ಕೆ ಹೋದರೆ ಅಥವಾ ಎಲ್ಲಾದರೂ ದೇವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಾಗ ನಾನು ಈ ವಿಷ್ಣುಪುರಾಣದ ಶ್ಲೋಕವನ್ನು ಜ್ಞಾಪಿಸಿಕೊಂಡು ಅದರ ಕನ್ನಡ ಅರ್ಥವನ್ನು ಹೇಳುತ್ತಾ ದೇವರೊಂದಿಗೆ ಮಾತನಾಡುತ್ತೇನೆ.
ನಂಬಿಕೆ ದೇವರಲ್ಲಿ ಇರಬೇಕೋ ಬೇಡವೋ ಅದನ್ನು ಹೇಳುವಷ್ಟು ದೊಡ್ಡವನು ನಾನಲ್ಲ. ಆದರೆ ಜೀವನದಲ್ಲಿ ಸಂಕಟ ಬಂದಾಗ, ಪೆಟ್ಟು ಬಿದ್ದಾಗ, ಯಾವುದೇ ಷರತ್ತುಗಳಿಲ್ಲದೆ, ಪೂರ್ವಗ್ರಹಿಕೆ ಇಲ್ಲದೇ ಮನವಿಗಳನ್ನು ಕೇಳಿಸಿಕೊಳ್ಳುವ ವ್ಯಕ್ತಿಯೆಂದರೆ ದೇವರು ಒಬ್ಬನೇ. ನಮ್ಮ ಸಂಸ್ಕಾರ ಒಳ್ಳೆಯದಾಗಿದ್ದು ನಮ್ಮ ಮನವಿ ಧರ್ಮದಿಂದ ಇದ್ದರೆ ಮನವಿಯನ್ನು ಪೂರೈಸಲು ದೇವರು ಹಿಂಜರಿಯುವುದಿಲ್ಲ ಎಂಬುದು ನನ್ನ ನಂಬಿಕೆ.