ಬಸವನಗುಡಿಯ ವರ್ಲ್ಡ್ ಕಲ್ಚರ್‌ನಲ್ಲಿ ನಡೆದದ್ದು ನರಸಿಂಹರಾಜು ಆವರ jಜನ್ಮಶತಮಾನೋತ್ಸವದ ಆಚರಣೆ. ವಾಡಿಯಾ ಸಭಾಂಗಣ ಕಿಕ್ಕಿರಿದು ತುಂಬಿತ್ತು. ಹದಿನೈದು ನಿಮಿಷ ಮುಂಚೆಯೇ ಹೋಗಿದ್ದಕ್ಕೆ ನನಗಂತೂ ಮಧ್ಯದಲ್ಲಿ ಒಂದು ತುದಿಯ ಕುರ್ಚಿ ಸಿಕ್ಕಿತು. ನನ್ನ ಪಕ್ಕದಲ್ಲಿ ಒಬ್ಬರು ವಯೋವೃದ್ದರು ಕುಳಿತಿದ್ದು, ಅವರು ತಂದ ಊರುಗೋಲು ಎಲ್ಲೂ ಇಡಲಾಗದೆ ತಮ್ಮ ತೊಡೆಯಮೇಲೆ ಇಟ್ಟುಕೊಂಡಿದ್ದರು. ಒಳ್ಳೆಯ ಊರುಗೋಲು, ಅಲೂಮಿನಿಯಮ್‌ನಿಂದ ಮಾಡಿದ್ದು. ಆದರ ತಳಕ್ಕೆ ಕಮಲದ ಹೂವಿನಂತೆ ಮೂರು ಕಾಲುಗಳು ಬೇರೆ. ಹೊಸದಾಗಿ ಫಲಫಳ ಹೊಳೆಯುತ್ತಿತ್ತು.
ಪಾಪ ಕಷ್ಟ ಪಟ್ಟು ತಮ್ಮ ತೊಡೆಯ ಮೇಲೆ ಅದನ್ನು ಇಟ್ಟುಕೊಂಡಿದ್ದನ್ನು ನೋಡಿದ ನನಗೆ ಕರುಳು ಚುರಕ್ ಎನಿಸಿತು. ನಾನು ಒಂದು ತುದಿಯಲ್ಲಿ ಕುಳಿತಿದ್ದರಿಂದ, ನನ್ನ ಮುಂದೆ ಕಾಲು ಚಾಚಿ ಕುಳಿತುಕೊಳ್ಳಲು ಸ್ವಲ್ಪ ಜಾಸ್ತಿಯೇ ಜಾಗವಿದ್ದಿತು. ನಾನು ಅವರಿಗೆ ಆ ಊರುಗೋಲನ್ನು ಕೇಳಿ, ನನ್ನ ಮುಂದಿನ ಸೀಟಿಗೆ ತಗಲುಹಾಕುವಂತೆ ಇಟ್ಟೆ.
ನರಸಿಂಹರಾಜು ಅವರ ಬಗ್ಗೆ ಕಾರ್ಯಕ್ರಮ ಎಂದರೆ ಕೇಳಬೇಕೇ. ಅದರಲ್ಲೂ ಶ್ರೀಮತಿ ಸುಧಾ ನರಸಿಂಹರಾಜು ಅವರ ಭಾಷಣ ಮತ್ತು ಶ್ರೀ ಶ್ರೀಧರಮೂರ್ತಿಯವರ ಉಪನ್ಯಾಸದ ಜೊತೆಗೆ. ಹಾಗಾಗಿಯೇ ಜನ ಕಿಕ್ಕಿರಿದು ತುಂಬಿದ್ದರು. ಎಲ್ಲಾ ಕುರ್ಚಿಗಳು ಭರ್ತಿಯಾಗತೊಡಗಿತು. ನಾನಂತು ಗೋಡೆಯ ಕಡೆಗೆ ಹೋಗುತ್ತಿದ್ದವರಿಗೆಲ್ಲ ಎದ್ದು ಎದ್ದು ಜಾಗ ಕೊಡುತ್ತಿದ್ದೆ. ಜೊತೆಗೆ ಆಗಾಗ ಆ ಊರುಗೋಲನ್ನು ತೆಗೆಯುತ್ತಿರಬೇಕು ಬೇರೆ.
ಹೀಗೆ ಒಂದು ಹದಿನೈದು ನಿಮಿಷ ಆಗುವಷ್ಟೊತ್ತಿಗೆ ಸಭಾಂಗಣ ಪೂರ್ತಿ ತುಂಬಿತು. ಅಲ್ಲಿನ ಸಿಬ್ಬಂದಿ ಪ್ಲಾಸ್ಟಿಕ್ ಕುರ್ಚಿಗಳನ್ನು ಮಧ್ಯದಲ್ಲಿ ಓಡಾಡುವ ಜಾಗದಲ್ಲಿ ಹಾಕಲು ಪ್ರಾರಂಭಿಸಿದರು. ಅಂದರೆ ನಾಲ್ಕು ಜನ ಓಡಾಡುವ ಜಾಗದಲ್ಲಿ ಈಗ ಎರಡು ಕಡೆ ಪ್ಲಾಸ್ಟಿಕ್ ಕುರ್ಚಿ ಇದ್ದು ಇಬ್ಬರು ಮಾತ್ರ ಓಡಾಡುವಂತೆ ಆಗಿತ್ತು.
ಇದೇನಿದು, ಊರುಗೋಲು ಮಹಾತ್ಮೆ ಅಂತ ಶೀರ್ಷಿಕೆ ಕೊಟ್ಟು, ಯಾವುದೋ ಕಾರ್ಯಕ್ರಮದ ವೀಕ್ಷಕ ವಿವರಣೆ ಕೊಡ್ತಾ ಇದ್ದಾರೆ ಶಾಸ್ತ್ರಿಗಳು ಅಂದುಕೊಂಡ್ರೇನೂ. ಯೋಚಿಸಬೇಡಿ, ವಿಷಯಕ್ಕೆ ಬರುತ್ತೇನೆ, ಆಗ ನಿಮಗೇ ತಿಳಿಯುತ್ತೆ ನಾನು ಇಷ್ಟು ಹೊತ್ತು ಹೇಳಿದ್ದು ಅವಶ್ಯಕತೆ ಇತ್ತೋ ಇಲ್ಲವೋ ಎಂದು.
ನನ್ನ ಪಕ್ಕದಲ್ಲಿ ಹಾಕಿದೆ ಕುರ್ಚಿಗೆ ಒಂದು ಸುಂದರ ಹುಡುಗಿ ಬಂದು ಕುಳಿತರು. “ಹುಡುಗಿ ಅಂತೀರಾ ಶಾಸ್ತ್ರಿಗಳೇ, ಆದರೆ ಕುಳಿತರು ಅಂತು ಮರ್ಯಾದೆಯಿಂದ ಹೇಳುತ್ತೀರಿ ಅಂತ ಕೇಳುತ್ತಿದ್ದೀರಾ?”. ಹಾಗೇನಿಲ್ಲ ಪಕ್ಕದಲ್ಲಿ ಇದ್ದವರು ಹುಡುಗಿಯೋ, ಯುವತಿಯೋ ಅಥವಾ ಯಾರದೋ ಶ್ರೀಮತಿಯೋ ಗೊತ್ತಿಲ್ಲ, ಆದರೆ ಸುಂದರವಾಗಿದ್ದದ್ದಂತೂ ನಿಜ. ನೋಡುವ ಕಣ್ಣಲ್ಲಿದೆ ಮಾಯೆ ಬಿಡಿ, ನಮಗ್ಯಾಕೆ ಆ ವಿಷಯ.
"ನರಸಿಂಹರಾಜು ಅವರ ಚಲನಚಿತ್ರದ ಕೆಲವು ತುಣುಕುಗಳನ್ನು ಹಾಕುತ್ತಾರೆ ಅಂದಿದ್ದರು, ಅದು ಮುಗಿದುಹೋಯಿತೇ" ಎಂದು ಅವರ ಪ್ರಶ್ನೆ.
" ಇನ್ನೂ ಇಲ್ಲ, ಈಗ ಶ್ರೀಧರಮೂರ್ತಿಯವರು ನರಸಿಂಹರಾಜು ಅವರ ಬಗ್ಗೆ ಉಪನ್ಯಾಸ ನೀಡುತ್ತಾರೆ, ಆಮೇಲೆ ಕಾರ್ಯಕ್ರಮದ ಕೊನೆಗೆ ಆ ವೀಡಿಯೋ ತುಣುಕುಗಳನ್ನು ಹಾಕುತ್ತಾರೆ" ಎಂದೆ.
ಹೀಗೆ ಹಲವು ವಿಷಯಗಳು ನಮ್ಮಿಬ್ಬರೊಡನೆ ಚರ್ಚೆಯಾಯಿತು. ತುಂಬಾ ಕನಿಕರದಿಂದ ಮಾತನಾಡುತ್ತಿದ್ದರು ಅವರು. ನನ್ನ ಉದ್ಯೋಗದ ವಿಷಯವೂ ಕೇಳಿದರು. ಅದು ನಾನು ಚಾರಣಿಗ, ಛಾಯಾಗ್ರಾಹಕ ಮತ್ತು ಸಾಹಿತಿ ಎಂದಾಗ ಅವರಿಗೇನೋ ಸಂತೋಷ, "ಪರವಾಗಿಲ್ಲ ನೀವು ಹೀಗಿದ್ದು, ಇಷ್ಟೆಲ್ಲಾ ಚಟುವಟಿಕೆಗಳು ಮಾಡಿದ್ದೀರಾ ಎಂದರೆ ಆಶ್ಚರ್ಯ" ಎಂದರು ಅವರು.
ಅವರೇಕೆ ಹಾಗೆಂದರು, ನಿಮಗೆ ಅರ್ಥವಾಗಲಿಲ್ಲವೇ, ನನಗೂ ಅರ್ಥವಾಗಲಿಲ್ಲ. ಏನೋ ತಪ್ಪು ಕೇಳಿಸಿಕೊಂಡೆ ಎಂದುಕೊಂಡೆ. ಇನ್ನು ಯಾರನ್ನಾದರೂ ಬಹಳವಾಗಿ ಆಕರ್ಷಿಸಿ ಅವರನ್ನು ನನ್ನೆಡೆಗೆ ಬರುವಂತೆ ಮಾಡಿ ಅವರೇ ಮಾತನಾಡಿಸುವಷ್ಟು ಸುರದ್ರೂಪಿಯಂತು ನಾನಲ್ಲ, ಅದು ನಿಮಗೆಲ್ಲಾ ನನಗಿಂತಾ ಚೆನ್ನಾಗಿಯೇ ಗೊತ್ತಿದೆ. ಆದರೂ ಇಂದು ಅವರು ಮಾತನಾಡಿಸುತ್ತಿದ್ದ ರೀತಿಯಂತು ನನಗೆ ಬಹಳ ಸಂತೋಷ ತಂದಿತ್ತು.
ಕಾರ್ಯಕ್ರಮವೆಲ್ಲಾ ಮುಗಿದ ಮೇಲೆ ಎಲ್ಲರೂ ಬಾಗಿಲ ಕಡೆಗೆ ಧಾವಿಸುತ್ತಿದ್ದರು. ಏಕೆಂದರೆ ಮೃಷ್ಠಾನ್ನ ಭೋಜನ ನಮಗಾಗಿ ಹೊರಗಡೆ ಕಾದಿತ್ತು. ಕಾರ್ಯಕ್ರಮಕ್ಕೆ ಬಂದಿರುವವರ ಸಂಖ್ಯೆ ಬಹಳ ಹೆಚ್ಚಾಗಿದ್ದರಿಂದ ತಡವಾಗಿ ಹೋದರೆ ಬಹಳ ಹೊತ್ತು ಕಾಯಬೇಕಾಗುತ್ತದೆ ಮತ್ತು ಕೆಲವೊಂದು ಸಲ ಊಟದ ಮುಖ್ಯ ಐಟಮ್‌ಗಳು ಆಗಿಹೋಗಿ ಸಿಗದೇ ಇರಬಹುದು. ಇದು ಆಗಾಗ ಇಲ್ಲಿಯ ಕಾರ್ಯಕ್ರಮಗಳಿಗೆ ಬರುವ ನನ್ನಂತಹವರಿಗೆ ಚೆನ್ನಾಗಿಯೇ ಗೊತ್ತು.
ಸರಿ ನಾನು ಕುರ್ಚಿಯಿಂದ ಎದ್ದೆ. ಪಕ್ಕದಲ್ಲಿದ್ದ ಆ ಯುವತಿ "ಬನ್ನಿ ನನ್ನ ಕೈ ಹಿಡಿದುಕೊಳ್ಳಿ, ನಾನು ನಿಮ್ಮನ್ನು ಮುಂದಿನ ಬಾಗಿಲಿನಿಂದ ಬೇಗ ಕರೆದುಕೊಂಡು ಹೋಗುತ್ತೇನೆ" ಎಂದು ಹೇಳಿ ನನ್ನ ಮುಂದೆ ಇದ್ದ ಊರುಗೋಲನ್ನು ಅವರ ಕೈಗೆ ತೆಗೆದುಕೊಂಡರು.
"ಕೈ ಹಿಡಿದುಕೊಂಡು ನನ್ನನ್ನು ಕರೆದುಕೊಂಡು ಹೋಗಿ ತೊಂದರೆ ಇಲ್ಲ, ಆದರೆ ಆ ಊರುಗೋಲು ಇಲ್ಲಿ ನನ್ನ ಪಕ್ಕಕ್ಕೆ ಕುಳಿತಿರುವ ವೃದ್ದರದು, ದಯವಿಟ್ಟು ಅವರಿಗೆ ಕೊಟ್ಟುಬಿಡಿ" ಎಂದೆ.
ಪಾಪ ಏನನ್ನಿಸಿತೋ ಏನೋ, ಆಕೆ ಅಲ್ಲಿಂದ ಓಡಿಹೋದವರು ಊಟದ ಸರದಿಯಲ್ಲೂ ಎಲ್ಲೂ ಕಾಣಲಿಲ್ಲ. ಇರಲಿ ಬಿಡಿ ಊರುಗೋಲು ಮುಂದಿದ್ದ ಕಾರಣ ನನಗೂ ಒಂದು ಸ್ವಲ್ಪ ಹೊತ್ತು ಆ “ಅವರ” ಜೊತೆ ಮಾತನಾಡಿದ ಹಾಗಾಯಿತು.
ನಾನು ಹೇಳಿದ ಊರುಗೋಲು ಮಹಾತ್ಮೆ ಹೀಗೆಂದು ತಿಳಿದು, ನೀವೂ ಮುಂದಿನ ಕಾರ್ಯಕ್ರಮಕ್ಕೆ ಊರುಗೋಲು ತೆಗೆದುಕೊಂಡು ಹೋಗಲು ಯೋಚಿಸುತ್ತಿದ್ದೀರಾ. ಪರೀಕ್ಷೆ ಮಾಡಿ, ನಿಮ್ಮ ಅದೃಷ್ಟವನ್ನೂ ಕಂಡುಕೊಳ್ಳಬಹುದು.