ಮಳೆ ಬರಬೇಕು,
ಲಿಂಗನಮಕ್ಕಿ ತುಂಬಬೇಕು,
ಸೊಗಸಾಗಿ ಜಿಗಿಯುವ ಜೋಗವ
ನೋಡಬೇಕೆನ್ನುವರು ಪ್ರವಾಸಿಗರು…..
ಮಳೆ ಬೇಡ
ಲಿಂಗನಮಕ್ಕಿ ತುಂಬುವುದು ಬೇಡವೆನ್ನುವರು
ನೆರೆಯಿಂದ ನಿರಾಶ್ರಿತರಾಗುತ್ತಿರುವ
ಅಣೆಕಟ್ಟಿನ ಸುತ್ತಲಿರುವ ಹಳ್ಳಿಗರು…….
ತುಂಬಿ ಹರಿದರೆ ಜೋಗ
ತಮ್ಮ ವ್ಯಾಪರವೂ ಬೆಳೆವುದು ಬೇಗ
ಬಾ ಮಳೆಯೆ ಬಾ ಎಂದು ಕರೆವರು
ಟ್ಯಾಕ್ಸಿ ಚಾಲಕರು, ಹೋಟಲ್ ಮಾಲೀಕರು……
ಇನ್ನೆಲ್ಲಿಯ ನನ್ನ ಗದ್ದೆ, ತೋಟ
ಮುಳುಗಿಸಿದೆ ಜೀವನ ಮಳೆಯ ಆಟ
ಬೇಡ ದೇವರೆ ಈ ಮಳೆಯಬ್ಬರ
ಆಗಿದೆ ಜೀವನ ತತ್ತರವೆನ್ನುತಿಹರು ನಿರಾಶ್ರಿತರು…..
ಬಸ್ಸಿನಲ್ಲಿ ಲಿಂಗನಮಕ್ಕಿಗೆ ಮೂವರು ಪಯಣಿಗರು
ಒಬ್ಬ ಪ್ರಕೃತಿ ವೀಕ್ಷಿಸಲು, ಮತ್ತೊಬ್ಬ ನಿರಾಶ್ರಿತರನ್ನು ರಕ್ಷಿಸಲು
ಮಗದೊಬ್ಬನಿಗೆ ಯಾರ ಹಿಂಬಾಲಿಸುವುದೆಂಬ ಗೊಂದಲ
ಕಡೆಗೂ ಸೋತದ್ದು ಅವನ ಕಣ್ಣು, ಗೆದ್ದದ್ದು ಹೃದಯ……