ಕಲುಶಿತಗೊಂಡಿದೆ ನನ್ನೊಳಗಿನ ಕನ್ನಡ ಭಾಷೆ
ಆದರೂ ಕನ್ನಡದಲ್ಲೇ ಕವನ ಬರೆಯಬೇಕೆಂಬುದು ನನ್ನಾಸೆ.
ಪದಗಳೆ ಸಿಗದೆ ಕವನ ಆಗಿದೆ ಕಗ್ಗಂಟು
ಏಕೆಂದರೆ ಮೆದುಳಲ್ಲೆಲ್ಲ ಆಂಗ್ಲ ಪದಗಳದೇ ನಿಘಂಟು.
ನಾಟಕ ಸಾಹಿತ್ಯ ಸಂಸಕೃತಿಯಲ್ಲಿ ನೀನಾಗಿದ್ದೀಯೇ ಅದ್ವಿತೀಯ
ಮುಂದಿನ ಪೀಳಿಗೆಗೆ ಅದು ಆಗುತ್ತಿದೆಯೇ ಮಾಯಾ
ಕವನ ಬರೆಯುವುದರಲ್ಲಿ ನಾನಾಗದೆ ಇರಬಹುದು ಕವಿರತ್ನ
ಆದರೆ ನನ್ನೊಳಗಿನ ಕನ್ನಡ ಭಾಷೆ ಉಳಿಸಲು ಇದೊಂದು ಪ್ರಯತ್ನ
ಗಣಿಗಳ ಕೊರೆಯಿತು, ಗಡಿಗಳು ದಾಟಿತು,
ಏನು ನಿನ್ನ ವಿಸ್ತಾರದ ಮಾಯೆ
ಸಾವಿರದ ಒಂಬೈನೂರು ಐವತ್ತಾರರಲಿ
ನೀ ಕೊಟ್ಟ ಭೂಮಿಯೇ ನಮಗೆ ಸಾಕು ತಾಯೇ
ಬೆಂಗಳೂರು ಈಗ ಕನ್ನಡಿಗರದ್ದೇ ಅಲ್ಲವಂತೆ
ಇದು ಹೊರಗಿನಿಂದ ಬಂದವರು ಹೇಳುವ ಪುರಾಣ ಕಂತೆ
ನಿನ್ನ ಜಲ, ನೆಲ, ಹಣ್ಣು, ಹೆಣ್ಣು ಎಲ್ಲಾ ಇವರಿಗೆ ಬೇಕು,
ಕನ್ನಡ ಭಾಷೆ ಕಲಿಯಲು ಇವರಿಗೇನು ತೊಡಕು
ಕನ್ನಡಿಗರೇ ಇಲ್ಲದ ಬೆಂಗಳೂರಿನಲಿ ರಾಜ್ಯೋತ್ಸವ
ಏಕೆಂಬುದು ಹಲವರ ಚಿಂತನೆ
ಒಮ್ಮೊಮ್ಮೆ ಮನದಲ್ಲಿ ಬರುವುದು ಯೋಚನೆ,
ಯಾಕೆ ಹೀಗೆ ಹೇಳುವವರ ನಾನು ಮಾಡಬಾರದು ವಿಮೋಚನೆ.
ನೀ ನನಗೆ ಆಶೀರ್ವಾದ ಮಾಡಿದ ಗಳಿಗೆ
ತುಂಬಿಹೋಗಿದೆ ನನ್ನ ಸಂತೋಷದ ಮಳಿಗೆ
ಇಷ್ಟೋಂದು ಪಡೆದೆ ನಿನ್ನಿಂದ
ಏನ ಅರ್ಪಿಸಲಿ ನಿನಗೆ ನನ್ನಿಂದ
ಪ್ರತಿಯೊಂದು ಒಳಬರುವ ದೂರವಾಣಿ ಕರೆಗೂ
ಕನ್ನಡ ಭಾಷೆಯ "ನಮಸ್ಕಾರ" ಸ್ವಾಗತ
ಸ್ಟೇಟ್ ಬ್ಯಾಂಕನಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿ
ನಾ ಬರೆದ ಜಾಲತಾಣ ನಿನಗೆ ಅರ್ಪಿತ
ಮತ್ತೆ ಬರುವೆ, ಮತ್ತೆ ಬರೆವೆ
ನನಗಿರಲಿ ನಿನ್ನ ಛಾಯೆ
ಪಸರಿಸುವೆ ನಿನ್ನ ಸಾಹಿತ್ಯ ಸುಗಂಧವ
ಗಡಿ ಗಡಿಯು ದಾಟಿ ತಾಯೇ.
ಈ ಜನ್ಮದಲಿ ಮೋಕ್ಷ ಪಡೆದರೆ
ಮುಂದಿನ ಜನ್ಮವೇ ಇಲ್ಲವಂತೆ
ಮೋಕ್ಷವೇ ಬೇಡ ನನ್ನ ಮುಂದಿನ ಜನ್ಮ ನೀ ಮಾಡು
ಈ ನಿನ್ನ ಮಡಿಲಿನಲಿ ಜನಿಸುವಂತೆ.
ಇದೇ ನನ್ನ ಮೊದಲ ಕವನ - ನನ್ನ ಕನ್ನಡ ತಾಯಿಗೆ ನಮನ