ಪ್ರತಿ ವರ್ಷ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಒಂದು ಅಂಗವಾದ ಇಕೋ ಟೂರಿಸಮ್ ಸಂಸ್ಥೆ , ರಾಜ್ಯ ಸರ್ಕಾರದ ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜಸ್ ಸಂಸ್ಥೆ ಒಂದಾಗಿ ಸೇರಿ ಕರ್ನಾಟಕ ಹಕ್ಕಿ ಹಬ್ಬ ಆಚರಿಸುತ್ತಾರೆ. ಇದು ಸಾಮಾನ್ಯವಾಗಿ ಜನವರಿ ಆಥವಾ ಫೆಬ್ರವರಿಯಲ್ಲಿ ನಡೆಯುತ್ತದೆ. ದೇಶದ ಮೂಲೆ ಮೂಲೆಗಳಿಂದ ಆಸಕ್ತರು ಈ ಹಬ್ಬಕ್ಕೆ ರೂಪಾಯಿ 750ರಿಂದ 1000ದ ವರೆಗೆ ಶುಲ್ಕ ನೀಡಿ ನೊಂದಣಿ ಮಾಡಿಕೊಳ್ಳುತ್ತಾರೆ.
ಈ ಹಕ್ಕಿ ಹಬ್ಬ ಮೊದಲು ಪ್ರಾರಂಭವಾದದ್ದು ಕರ್ನಾಟಕದಲ್ಲೇ. ಈಗ ಬೇರೆ ಬೇರೆ ರಾಜ್ಯ ಸರ್ಕಾರಗಳು ಇದರಿಂದ ಸಿಗುವ ಪ್ರಚಾರವನ್ನು ನೋಡಿ, ತಮ್ಮ ರಾಜ್ಯಗಳಲ್ಲೂ ಹಕ್ಕಿ ಹಬ್ಬ ಪ್ರಾರಂಭಿಸಿದ್ದಾರೆ. ಕರ್ನಾಟಕ ರಾಜ್ಯವು ಕಳೆದ 7 ವರ್ಷಗಳಿಂದ ಸತತವಾಗಿ ಹಕ್ಕಿ ಹಬ್ಬ ಆಚರಿಸುತ್ತಾ ಬಂದಿದೆ. ನಮ್ಮ ರಾಜ್ಯದಲ್ಲಿರುವ ಕಾಡುಗಳ ಬಗ್ಗೆ ಮಾಹಿತಿ ನೀಡಲು, ತಜ್ಞರಿಂದ ಪಕ್ಷಿಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಗಳ ಬಗ್ಗೆ ಉಪನ್ಯಾಸ, ಪಕ್ಷಿಗಳಿಗೆ ಅನುಕೂಲವಾಗುವಂತೆ ವಾತಾವರಣ ಸೃಷ್ಠಿ ಮಾಡುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಹಾಗೂ ಆ ಸ್ಥಳಗಳಲ್ಲಿ ವೀಕ್ಷಿಸಬಹುದಾದ ಪಕ್ಷಿಗಳ ವಿವರವನ್ನು ಪ್ರತಿನಿಧಿಗಳಿಂದ ಕಲೆ ಹಾಕುವುದೇ ಈ ಹಕ್ಕಿ ಹಬ್ಬದ ಮೂಲ ಉದ್ದೇಶ.
ಈಗ ಅಂದರೆ ಜನವರಿ 5, 2021ರಿಂದ ಜನವರಿ ೭, 2021ರವರೆಗೆ ನಾನು ಮುಗಿಸಿ ಬಂದದ್ದು ನಮ್ಮ ರಾಜ್ಯದ ೭ನೇ ಹಕ್ಕಿ ಹಬ್ಬ. ನಮ್ಮ ರಾಜ್ಯದಲ್ಲಿ ಕಾಡಿಗೇನು ಕೊರತೆ ಇಲ್ಲ, ಹಾಗೆಯೇ ಕಾಡಿನ ಉತ್ತಮ ನಿರ್ವಹಣೆಯಲ್ಲಿ ಕರ್ನಾಟಕದ ಅರಣ್ಯ ಇಲಾಖೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಸಾಮಾನ್ಯವಾಗಿ , ಕಾಡು ಹತ್ತಿರದಲ್ಲೇ ಇರುವ ಊರುಗಳನ್ನು ಹಕ್ಕಿ ಹಬ್ಬಕ್ಕೆ ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ ಕಾಡಿಲ್ಲದಿದ್ದರೂ, ಆ ಊರಿನಲ್ಲಿ ವಿಧವಿಧವಾದ ಹಕ್ಕಿಗಳ ವೀಕ್ಷಣೆ ಇರುವ ಮಾಹಿತಿ ಮೇಲೆಯೂ ಜಾಗಗಳನ್ನು ಆರಿಸಲಾಗುತ್ತದೆ.
ಈ ವರ್ಷ ಹಕ್ಕಿ ಹಬ್ಬ ನಡೆದದ್ದು ಬಿಳಿಗಿರಿರಂಗನ ಬೆಟ್ಟದಲ್ಲಿ. ಡಿಸೆಂಬರ್ 2ನೇ ವಾರದಲ್ಲಿ ಆಸಕ್ತರಿಗೆ ಪ್ರತಿನಿಧಿಗಳಾಗಿ ನೊಂದಾಯಿಸಿಕೊಳ್ಳಲು ಕರೆ ನೀಡಲಾಯಿತು. ಹಿಂದೆಲ್ಲಾ ಸುಮಾರು ನೂರರಿಂದ ನೂರೈವತ್ತು ಪ್ರತಿನಿಧಿಗಳಿಗೆ ಅವಕಾಶ ಸಿಗುತ್ತಿತ್ತು. ಆದರೆ ಕೋವಿಡ್‌ನಿಂದಾಗಿ ಈ ವರ್ಷ ಕೇವಲ 50 ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿತ್ತು. ಎರಡೇ ದಿನದಲ್ಲಿ ನೊಂದಣಿ ಮುಗಿದುಹೋಗಿತ್ತು. ನೊಂದಣಿ ಶುಲ್ಕ 750 ರೂಪಾಯಿಗಳು, ಇದರಲ್ಲಿ ವಸತಿ ಹಾಗೂ ಬೆಂಗಳೂರಿನಿಂದ ನಾವು ಹೋಗಿ ಬರುವ ಖರ್ಚು ಸೇರುವುದಿಲ್ಲ.
ಪ್ರತಿನಿಧಿಗಳು ಹಾಗೂ ಅಯೋಜಕರನ್ನು ಸೇರಿಸಿ ಒಂದು ವಾಟ್ಸಾಪ್ ಗುಂಪು ಮಾಡಲಾಯಿತು. ಇದರಲ್ಲಿ ನಮಗೆ ಯಾವ ಸಮಯಕ್ಕೆ ಎಲ್ಲಿಗೆ ಬರಬೇಕು ಎಂಬ ಮಾಹಿತಿ ಹಾಗೂ ಮೂರು ದಿನದ ಪೂರ್ಣ ಕಾರ್ಯಕ್ರಮಗಳ ವಿವರಣೆ ನೀಡಲಾಯಿತು. ನಾವು ಉಳಿದುಕೊಳ್ಳಲು ಮುಂಗಡವಾಗಿ ಕೋಣೆಗಳನ್ನು ಕಾಯ್ದಿರಿಸಲು ಅಲ್ಲೇ ಸಮೀಪದಲ್ಲಿ ಇರುವ ಹೋಟೆಲ್‌ಗಳ ಹೆಸರು ಹಾಗೂ ಅದರ ಫೋನ್ ನಂಬರ್ ವಾಟ್ಸಾಪಿನಲ್ಲಿ ನೀಡಿದರು. ನಾವು ಗಿರಿದರ್ಶಿನಿ ಎಂಬ ಹೋಟಲ್ಲಿನಲ್ಲಿ ರೂಮ್ ಕಾಯ್ದಿರಿಸಿದೆವು.
5ನೇ ತಾರೀಖು ಬೆಳಗ್ಗೆ 6 ಗಂಟೆಗೆ ನಾವು 10 ಜನ ಗೆಳೆಯರು ಬೆಂಗಳೂರಿನಿಂದ ಹೊರಟು 10.30ಕ್ಕೆ ಬಿಳಿಗಿರಿ ರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಲುಪಿದೆವು. ಪ್ರತಿ ಪ್ರತಿನಿಧಿಗೆ ಒಂದು ಟೀಶರ್ಟ್, ಮಾಸ್ಕ್, ಒಂದು ಟೋಪಿ ಹಾಗೂ ಒಂದು ಬಟ್ಟೆಯ ಬ್ಯಾಗ್ ನೀಡಲಾಯಿತು. ಮದ್ಯಾಹ್ನ 2 ಗಂಟೆಯವರೆಗೆ ಉದ್ಘಾಟನೆ, ಸ್ಥಳೀಯ ಸಚಿವರುಗಳಿಂದ ಹಾಗೂ ಹಿರಿಯ ಅರಣ್ಯ ಅಧಿಕಾರಿಗಳಿಂದ ಭಾಷಣಗಳು ನಂತರ ಊಟ. 3 ಗಂಟೆಗೆ ಆ ದಿನದ ಉಪನ್ಯಾಸಗಳು ಪ್ರಾರಂಭವಾದವು. ಈ ಉಪನ್ಯಾಸಗಳಲ್ಲಿ ನನಗೆ ತುಂಬಾ ಇಷ್ಟವಾದದ್ದು ಉತ್ತರ ಭಾರತದಿಂದ ಬಂದು ಬಿಳಿಗಿರಿ ರಂಗನ ಬೆಟ್ಟದಲ್ಲಿ ನೆಲೆಸಿ ಪಕ್ಷಿಗಳ ಅಧ್ಯಯನ ಹಾಗೂ ಅಲ್ಲೇ ಕಾಡಿನಲ್ಲಿ ನೆಲೆಸಿರುವ ಸೋಲಿಗರು ಹಾಗೂ ಪಕ್ಷಿಗಳ ಜೊತೆಗಿನ ಅವರ ಸಂಬಂಧದ ಅಧ್ಯಯನ ಮಾಡಿದ ಡಾ ಸಮೀರಾ ಅಗ್ನಿಹೋತ್ರಿಯವರದು. ಕನ್ನಡವನ್ನಷ್ಟೇ ಅಲ್ಲದೇ ಸೋಲಿಗರ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಿದ್ದು ಅವರ ಉಪನ್ಯಾಸಕ್ಕೆ ಇನ್ನೂ ಹೆಚ್ಚು ಮೆರಗು ನೀಡಿತು. 6 ಗಂಟೆಗೆ ಎಲ್ಲಾ ಉಪನ್ಯಾಸಗಳು ಮುಗಿದವು, ೬ ಜನ ಪ್ರತಿನಿಧಿಗಳನ್ನು ಹೊಂದುವ 8 ಗುಂಪುಗಳನ್ನು ಆಯೋಜಕರು ಮಾಡಿದರು. ನನ್ನ ಮತ್ತು ನನ್ನ ಗೆಳೆಯರದು ಒಂದನೇ ಗುಂಪು. ರಾತ್ರಿ 8.30ಕ್ಕೆ ಮಯೂರ ಹೋಟಲ್ಲಿನಲ್ಲಿ ಊಟ ನಂತರ ಎಲ್ಲರೂ ನಮ್ಮ ನಮ್ಮ ಹೋಟಲ್‌ಗೆ ತೆರಳಿದೆವು.
ಮಾರನೇ ದಿನ ಅಂದರೆ ಜನವರಿ ೬ ಬೆಳಗ್ಗೆ ಆರು ಗಂಟೆಗೆ ಎಲ್ಲಾ ಮಯೂರ ಹೋಟೆಲ್ ಬಳಿ ಸೇರಿದೆವು. ನಮಗಾಗಿ ತಿಂಡಿಯ ಅಂದರೆ ಚಿತ್ರಾನ್ನದ ಪಾರ್ಸೆಲ್ ಗಳು ತಯಾರಿಯಾಗಿತ್ತು. ಜೊತೆಗೆ ಒಂದು ಬಾಳೆ ಹಣ್ಣು ಹಾಗೂ ಒಂದು ಸೇಬು. ಆ ದಿನ ನಮ್ಮ ಗುಂಪು ಪುರಾನಿ ಗೇಟ್ ಎಂಬ ಜಾಗಕ್ಕೆ ಹಾಗಬೇಕಾಯಿತು. ಗೇಟ್ ಹತ್ತಿರದ ವರೆಗೆ ನಮಗೆ ಅರಣ್ಯ ಇಲಾಖೆಯ ಜೀಪಿನಲ್ಲಿ ಡ್ರಾಪ್ ಕೊಟ್ಟರು. ಅಲ್ಲಿಂದ ನಮ್ಮ ಜೊತೆ 2 ಗನಮ್ಯಾನಗಳು (ಗನ್ ಸಹಿತ) ಹಾಗೂ ಇಬ್ಬರು ಫಾರೆಸ್ಟ್ ಗಾರ್ಡ್‌ಗಳು ಸೇರಿಕೊಂಡರು. ಕಾಡಿನಲ್ಲಿ ಸುಮಾರು 4 ಕಿಲೋಮೀಟರ್ ಪಕ್ಷಿ ವೀಕ್ಷಣೆ ಮಾಡುತ್ತಾ ನಡಿಗೆ. ಮತ್ತೆ, ಬಂದ ದಾರಿಯಲ್ಲೇ ವಾಪಸ್ ಗೇಟಿನ ಬಳಿಗೆ. ಬಿಳಿಗಿರಿ ರಂಗನ ಬೆಟ್ಟ ಮುಖ್ಯವಾಗಿ ಆನೆ, ಕರಡಿಗಳು ಹಾಗೂ ಹುಲಿಗಳು ವಾಸ ಮಾಡುವ ಕಾಡು. ಹಾಗಾಗಿ ಗನಮ್ಯಾನ್ ಜೊತೆಯಲ್ಲೇ ನಾವು ನಡೆಯಬೇಕು. ಹಾಗೇನಾದರು ಯಾವುದಾದರು ಪ್ರಾಣಿ ಬಂದರೆ ಅವರು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ ಆಗ ಪ್ರಾಣಿಗಳು ದೂರ ಓಡುತ್ತದೆ. ಆದರೆ ಅದೃಷ್ಟವಶಾತ್ ಆ ಸನ್ನಿವೇಶ ಯಾವ ಗುಂಪಿಗೂ ಈ ವರ್ಷ ಬರಲಿಲ್ಲ.
ಮಧ್ಯಾಹ್ನ 1 ಗಂಟೆಗೆ ಮಯೂರ ಹೋಟಲ್ಗೆ ವಾಪಸ ಬಂದು ಊಟ ಮುಗಿಸಿ ನಾವು ನೋಡಿದ ಪಕ್ಷಿಗಳ ಹೆಸರನ್ನು ಬಿಳಿ ಹಾಳೆಯಲ್ಲಿ ಬರೆದು ಅರಣ್ಯ ಅಧಿಕಾರಿಗಳಿಗೆ ನೀಡಿದೆವು. ಸಾಮಾನ್ಯವಾಗಿ ಎಲ್ಲಾ ಪ್ರತಿನಿಧಿಗಳು ಪಕ್ಷಿ ವೀಕ್ಷಣೆಯಲ್ಲಿ ಪರಿಣಿತಿ ಹೊಂದಿರುತ್ತಾರೆ ಹಾಗಾಗಿ ಪಕ್ಷಿಗಳ ಹೆಸರು ನೀಡುವುದು ಕಷ್ಟವಾಗುವುದಿಲ್ಲ. ಅಷ್ಟೇ ಅಲ್ಲದೆ ಆ ಪೂರ್ತಿ ಅರಣ್ಯ ಪ್ರದೇಶದಲ್ಲಿ ಸಿಗಬಹುದಾದ ಸುಮಾರು 200 ಪಕ್ಷಿಗಳ ಹೆಸರು ನಮ್ಮ ಬಳಿ ಇರುತ್ತದೆ. ಮದ್ಯಾಹ್ನ ಒಂದು ಗಂಟೆಗಳ ಕಾಲ ವಿಶ್ರಾಂತಿ ತೆಗೆದುಕೊಂಡೆವು.
2.30ಕ್ಕೆ ಮತ್ತೆ ಪಕ್ಷಿ ವೀಕ್ಷಣೆ ಪ್ರಾರಂಭ. ಈ ಭಾರಿ ಬೇರೆ ಕಡೆ ಅಂದರೆ ಕೃಷ್ಣಯ್ಯನ ಕಟ್ಟೆ ಡ್ಯಾಮ್ ಬಳಿ ನಮ್ಮ ಗುಂಪಿಗೆ ಹೋಗಲು ಹೇಳಿದರು. ಜೀಪಿನಲ್ಲಿ ಸುಮಾರು 15 ಕಿಲೋ ಮೀಟರ ಪ್ರಯಾಣ, ನಂತರೆ ಡ್ಯಾಮಿನ ನೀರಿನ ಸುತ್ತ ನಮ್ಮ ಪಕ್ಷಿ ವೀಕ್ಷಣೆ. ಒಟ್ಟಾರೆ ಸುಮಾರು 8 ಕಿಲೋ ಮೀಟರ್ ನಡಿಗೆ, ಜಲ ಪಕ್ಷಿಗಳ ಸಮೇತ ಇನ್ನೂ ಹಲವಾರು ಪಕ್ಷಿಗಳನ್ನು ವೀಕ್ಷಿಸಿದೆವು ಹಾಗೂ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದೆವು.
೬ ಗಂಟೆಗೆ ಕತ್ತಲಾಗುತ್ತಾ ಬಂತು, ಜೀಪ್ ಹತ್ತಿ ಮಯೂರ ಹೋಟಲ್ ಕಡೆ ನಮ್ಮ ಪ್ರಯಾಣ. ಜೀಪ್ ಹತ್ತಿದ 5 ನಿಮಿಷದಲ್ಲಿ ಮಳೆ ಪ್ರಾರಂಭವಾಯಿತು. ಕಾಡಿನಲ್ಲಿ ಮಳೆ ಎಂದರೆ ನಮ್ಮ ಬೆಂಗಳೂರಿನ ಮಳೆಗೆ ಐದು ಪಟ್ಟು ರಭಸ ಹೆಚ್ಚು. ಅದೃಷ್ಟವೆಂದರೆ ಮಳೆ ಪ್ರಾರಂಭವಾಗುವ ಹೊತ್ತಿಗೆ ನಾವು ಜೀಪಿನಲ್ಲಿ ಕುಳಿತಾಗಿತ್ತು. ಬೇರೆ ಜಾಗಗಳಿಗೆ ಹೋಗಿದ್ದ ಸಾಕಷ್ಟು ಪ್ರತಿನಿಧಿಗಳು ಮಳೆಯಲ್ಲಿ ನೆಂದು ತೊಪ್ಪೆಯಾದರು. ರಾತ್ರಿ 8.30ಕ್ಕೆ ಊಟ ಮುಗಿಸಿ ಮತ್ತೆ ನಮ್ಮ ಹೋಟಲ್‌ಗೆ ವಾಪಸ್.
ಮಾರನೇ ದಿನ ಅಂದರೆ ಜನವರಿ 7ರಂದು ಮತ್ತೆ ಮಯೂರ ಹೋಟಲ್ ಬಳಿ ಸೇರಿದೆವು. ತಿಂಡಿ ಪಾರ್ಸಲ್ ತಯಾರಿತ್ತು. ಅದನ್ನು ತೆಗೆದುಕೊಂಡು ನಾವು ಸುಮಾರು 25 ಕಿಲೋಮಿಟರ್ ದೂರವಿರುವ ಬೆಲ್ತಾ ಎಂಬ ಕಾಡು ಪ್ರದೇಶಕ್ಕೆ ಹೋದೆವು. ಈ ದಿನ ನಮಗೆ ಕೇವಲ ಟಾರ್ ರಸ್ತೆಯ ಮೇಲೆ ನಡಗೆ. ಆದರೆ ಪಕ್ಷಿಗಳ ಸದ್ದು ಬಿಟು ಇನ್ನೇನು ಕೇಳಿಸುತ್ತಿರಲಿಲ್ಲ. ತುಂತುರು ಮಳೆ ಬರುತ್ತಿದ್ದಿದ್ದರಿಂದ ನಾವು ಸಾಕಷ್ಟು ಹೊತ್ತು ನಮ್ಮ ಕ್ಯಾಮೆರವನ್ನು ಹೊರಗೆ ತೆಗೆಯಲೇ ಇಲ್ಲ. ಕೇವಲ ಬೈನಾಕ್ಯುಲರ್ ಇಂದ ಪಕ್ಷಿ ವೀಕ್ಷಣೆ ಮಾಡುತ್ತಾ ಹೋದೆವು. ನಿಧಾನವಾಗಿ ಪಕ್ಷಿ ವೀಕ್ಷಣೆ ಮಾಡುತ್ತಾ 6 ಕಿಲೋ ಮೀಟರ್ ನಡೆಯಲು ಸುಮಾರು 3 ಗಂಟೆಗಳು ಬೇಕಾಯಿತು. ಅಂದು ಹನ್ನೊಂದು ಗಂಟೆಗೆ ನಮ್ಮ ಪಕ್ಷಿವೀಕ್ಷಣೆ ಮುಗಿಯಿತು.
ಮಯೂರ ಹೋಟಲ್‌ಗೆ ಹಿಂದಿರುಗಿ ನಾವು ನೋಡಿದ ಪಕ್ಷಿಗಳ ಹೆಸರನ್ನು ಬರೆದುಕೊಟ್ಟಲ್ಲಿಗೆ ಈ ವರ್ಷದ ಹಕ್ಕಿ ಹಬ್ಬ ಮುಗಿಯಿತು. ಎಲ್ಲರಿಗೂ ಧನ್ಯವಾದಗಳನ್ನು ಹೇಳಿ ನಾವು ತಂಗಿದ್ದ ಹೋಟಲಿನಲ್ಲಿ ನಮ್ಮ ಖರ್ಚಿನಲ್ಲಿ ಊಟ ಮಾಡಿ ಬೆಂಗಳೂರಿಗೆ ಹಿಂದಿರುಗಿದೆವು.
ಈ ಹಕ್ಕಿ ಹಬ್ಬದಲ್ಲಿ ನಾವು ನಡೆದ ಹಾದಿಗಳಲ್ಲಿ ಅರಣ್ಯ ಇಲಾಖೆಯವರಿಗೆ ಬಿಟ್ಟು ಸಾಮಾನ್ಯ ಜನರಿಗೆ ನಡೆಯಲು ಅವಕಾಶವಿರುವುದಿಲ್ಲ. ಆದರೆ ಹಕ್ಕಿ ಹಬ್ಬ ಇಂತಹ ಜಾಗಗಳನ್ನು ನೋಡಲು ಅವಕಾಶ ಕಲ್ಪಿಸಿಕೊಡುತ್ತದೆ. ಹಕ್ಕಿ ಹಬ್ಬ ಮುಗಿಸಿ ಮತ್ತೆ ಮುಂದಿನ ಹಕ್ಕಿ ಹಬ್ಬ ಎಲ್ಲಿ ಮಾಡುತ್ತಾರೆಂದು ಯೋಚಿಸುತ್ತಾ ನಮ್ಮ ಪಯಣ ಮುಂದೆ ಸಾಗುತ್ತದೆ.