ಮುಂಜಾನೆ ಅಮ್ಮನನ್ನು ಎಬ್ಬಿಸಿ
ನನಗೆ ಎಣ್ಣೆ ನೀರು ಹಾಕಲು ಒಪ್ಪಿಸಿ
ರಸ್ತೆಯಲ್ಲಿ ಮೊದಲು ಪಟಾಕಿ ಸಿಡಿಸುವ ಆಸೆ
ಉದ್ದದ್ದೊಂದು ಆನೆಪಟಾಕಿ ಸರ ತಂದು
ಬಿಡಿಬಿಡಿಯಾಗಿ ಬಿಡಿಸಿ ಒಂದೊಂದು
ಬೆಳಗಿಂದ ಸಂಜೆ ಪಟಾಕಿ ಹೊಡೆಯುವ ಆಸೆ
ದಾರವ ಹೆಣೆದು ಮಾಡಿ ಗಟ್ಟಿ
ಕಂಬದಿಂದ ಕಂಬಕ್ಕೆ ಅದನು ಕಟ್ಟಿ
ಬತ್ತಿ ಹಚ್ಚಿಸಿ ರೈಲು ಬಿಡುವ ಆಸೆ
ಗಾಜಿನ ಬಾಟಲಿ ಎಲ್ಲಿಂದಲೋ ತರಿಸಿ
ಮಹಡಿಯಲಿ ಅದನು ನೇರವಾಗಿ ಇರಿಸಿ
ಗಗನಕೆ ರಾಕೆಟ್ ಬಿಡುವ ಆಸೆ
ಪರಂಗಿ ಕಡ್ಡಿ ಸಿಕ್ಕಿತೆಂದರೆ
ಸುರುಸುರುಬತ್ತಿ ಸುಡಲು ಇಲ್ಲ ತೊಂದರೆ
ಉರಿಯುವ ಬತ್ತಿಯಲಿ ಚಕ್ರ ಮಾಡುವ ಆಸೆ
ಎಷ್ಟು ಬದಲಾಗಿದೆ ಜೀವನ
ಪಟಾಕಿ ಸುಡುವುದಿಲ್ಲವೆಂದು ಮಕ್ಕಳ ಪ್ರಮಾಣ
ಹೊಸ ಬಟ್ಟೆಗೆ ಹಬ್ಬವೇ ಆಗಬೇಕಿಲ್ಲ ಕಾರಣ
ಕಣ್ಣಿಗೆ ಕಿಡಿ ಹಾರ ಬಹುದೆಂಬ ಅರಿವಾಗಿದೆ
ಬೆಂಕಿಗೆ ಕೃ ಸುಡಬಹುದೆಂಬ ಭಯವಾಗಿದೆ
ಅರಿವು ಮೂಡಿರಲು ಸಂತೋಷ ಮಾಯವಾಗಿದೆ
ಮತ್ತೆ ಬರುವುದೇ ಆ ಚಿಕ್ಕ ವಯಸ್ಸು
ದೊಡ್ಡದಾವುದು ಇರಲಿಲ್ಲ ಆಗ ಕನಸ್ಸು
ಹೊಸ ಚಡ್ಡಿ ಶರ್ಟಿಗೆ ತೃಪ್ತಿಯಾಗಿತ್ತು ಮನಸ್ಸು
ಮತ್ತೊಂದು ಜನ್ಮ ಬೇಕೇಬೇಕು
ಅದು ಭಾರತದಲ್ಲೇ ಹಿಂದೂವಾಗಿ ಹುಟ್ಟಬೇಕು
ಭಯದ ಅರಿವಿಲ್ಲದೆಯೇ ದೀಪಾವಳಿ ಆಚರಿಸಬೇಕು