ಕಾಗೆಯೊಂದು ಮರದ ಮೇಲೆ
ಗೂಡು ಕಟ್ಟಿತು
ಗೂಡಿನೊಳಗೆ ತನ್ನ ನಾಲ್ಕು
ಮೊಟ್ಟೆ ಇಟ್ಟಿತು
ಕಾಗೆಗೆ ಏನು ಗೊತ್ತು
ನಾಲ್ಕು ಮೊಟ್ಟೆ ಲೆಕ್ಕ
ಕೋಗಿಲೆಯೊಂದು ತನ್ನ ಮೊಟ್ಟೆಯ
ಇಟ್ಟಿತು ನಾಲ್ಕರ ಪಕ್ಕ
ಲೆಕ್ಕ ತಿಳಿಯದ ಕಾಗೆ
ಪೋಷಿಸಿತು ಐದೂ ಮೊಟ್ಟೆ
ಕಾಪಾಡಿತು ಮೊಟ್ಟೆ ಸೇರದಂತೆ
ಹಾವು ಹದ್ದುಗಳ ಹೊಟ್ಟೆ
ಕೋಗಿಲೆಯ ಮರಿ
ತುಂಬಾ ಚುರುಕು
ವಾರ ಮುನ್ನವೇ ಹೊರಬಂತು
ಮೊಟ್ಟೆಯ ಮಾಡಿ ಬಿರುಕು
ಅಷ್ಟು ಬೇಗ ಬಂದ ಮರಿಯ
ನೋಡೆ ಕಾಗೆಗೆ ಅನುಮಾನ
ಮರಿಯ ಹಸಿವೆ ಕೂಗೆ ಚೆಂದ
ಕುರುಡು ಮಾಡಿತು ಪ್ರೀತಿಯ ತಾಯ್ತನ
ಕಾಗೆ ಹೊರಗೆ ಹೋಗೆ
ಊಟ ತರಲು ಮರಿಗೆ
ಮರಿಯು ಮಿಕ್ಕ ಮೊಟ್ಟೆಯ
ಬೀಳಿಸಿತು ಮರದಿಂದ ಕೆಳಗೆ
ಪಾಠವೇ ಇಲ್ಲದ ಕೋಗಿಲೆ ಮರಿಗೆ
ರಕ್ತದಲ್ಲೇ ಅಡಗಿದೆ ಕ್ರೌರ್ಯ
ಮೊಟ್ಟೆಯೊಳಗಿನ ಕಾಗೆ ಮರಿಗೆ
ತೋರಿಸಿತು ತನ್ನ ಶೌರ್ಯ
ಕಾಗೆ ಬಂದು ಗೂಡ ನೋಡೆ
ಮರಿಯು ಹಾರಿದೆ ತನ್ನವರ ಕಡೆ
ತಾಯಿತನದ ಕುರುಡು ಪಟ್ಟೆ
ನಾಶ ಮಾಡಿತ್ತು ನಾಲ್ಕು ಮೊಟ್ಟೆ